ಸೋಮವಾರ, ಜೂನ್ 1, 2020
27 °C

ಕೊರೊನಾ ಕಲೆ

ರಶ್ಮಿ ಎಸ್. Updated:

ಅಕ್ಷರ ಗಾತ್ರ : | |

Prajavani

ಎಲ್ಲರ ಹೋರಾಟವೂ ಕೊರೊನಾ ವಿರುದ್ಧ. ಇವತ್ತು ಜಗತ್ತಿನಾದ್ಯಂತ ಎಲ್ಲರಿಗೂ ಒಂದೇ ಶತ್ರು– ಕೊರೊನಾ. ಪ್ರತಿಯೊಬ್ಬರೂ ಅವರವರ ವೃತ್ತಿ ಕ್ಷೇತ್ರದಲ್ಲಿ ಇದ್ದುಕೊಂಡೇ ಒಂದಲ್ಲ ಒಂದು ರೀತಿಯಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸುತ್ತಿದ್ದಾರೆ. ಇದರಲ್ಲಿ ಚಿತ್ರ ಕಲಾವಿದರೂ ಹಿಂದೆ ಬಿದ್ದಿಲ್ಲ.

ಕಲಬುರ್ಗಿಯ ಕಲಾವಿದ ಶಾಹಿದ್‌ ಪಾಶಾ ಚಿತ್ರಕಲೆಯಲ್ಲಿ ಸುವರ್ಣಪದಕ ವಿಜೇತರು. ಪಿಎಚ್‌.ಡಿ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಕಲೆಗಳಿಗೆ ಸಮಕಾಲೀನ ಸ್ಪರ್ಶ ನೀಡುವುದು ಇವರ ವಿಶೇಷವಾಗಿದೆ. ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು ಓದಿರುವ ಇವರಿಗೆ ಅಲ್ಲಿಯ ಪಾತ್ರಗಳೆಲ್ಲವೂ ಸಾಂಸ್ಕೃತಿಕ ರಾಯಭಾರಿಗಳಂತೆ ಕಾಣುತ್ತವೆ. ಅನೇಕ ಅಂತರರಾಷ್ಟ್ರೀಯ ಪ್ರದರ್ಶನ ಮತ್ತು ಕಲಾ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಶಾಹಿದ್‌, ಇದೀಗ ಲಾಕ್‌ಡೌನ್‌ಗೆ ಹೀಗೆ ಸ್ಪಂದಿಸಿದ್ದಾರೆ. ಅದನ್ನು ಅವರೇ ಇಲ್ಲಿ ಹೇಳಿದ್ದಾರೆ. ‘ರಾಮಾಯಣ, ಮಹಾಭಾರತ ಎಲ್ಲಿಲ್ಲ ಹೇಳಿ...?’ ಎನ್ನುವುದು ಅವರ ಪ್ರಶ್ನೆ.

‘ಈ ಎರಡೂ ಮಹಾಕಾವ್ಯಗಳ ಪಾತ್ರಗಳು ನಮ್ಮೆಲ್ಲರಲ್ಲಿಯೂ ಇವೆ. ಯಶೋದೆ, ಕೃಷ್ಣ, ಸೀತೆ, ರಾಮ, ಹನುಮ, ರಾವಣ ಹೀಗೆ ಯಾವುದೇ ಪಾತ್ರಗಳನ್ನು ತೆಗೆದುಕೊಳ್ಳಿ –ಅವು ನಮ್ಮ ರೋಲ್‌ ಮಾಡೆಲ್‌ಗಳಂತೆಯೇ ಕಾಣುತ್ತವೆ. ಈ ಪಾತ್ರಗಳು ಕೇವಲ ಮಹಾಕಾವ್ಯದ ಪಾತ್ರಗಳಲ್ಲ. ನಮ್ಮಲ್ಲಿ ಬೇರೂರಿರುವ ಮೂಲ ಮಾನವೀಯ ಗುಣಗಳು. ಇದೇ ಕಾರಣಕ್ಕೆ ಸಾಂಪ್ರದಾಯಿಕ ಕಲೆಯಾಗಿರುವ ಸುರಪುರ ಕಲೆಯಿಂದ ಪ್ರೇರಣೆ ಪಡೆದು, ಈ ಪಾತ್ರಗಳಿಗೆ ಸಮಕಾಲೀನ ಬದುಕಿನ ಸ್ಪರ್ಶ ನೀಡುತ್ತಲೇ ಹೊಸತೊಂದು ಮಾರ್ಗವನ್ನು ಕಂಡುಕೊಂಡೆ’ ಎನ್ನುತ್ತಾರೆ ಅವರು. 

‘ಪರಿಪೂರ್ಣವಾಗಿ ಸುರಪುರ ಕಲೆಯ ಮಾದರಿಯಲ್ಲಿಯೇ ಸೃಷ್ಟಿಸಬೇಕು ಎಂದುಕೊಂಡಿದ್ದೆ. ಸಮಯಾವಕಾಶ ಹೆಚ್ಚು ಬೇಕು. ಮತ್ತದು ವಾಟರ್‌ ಕಲರ್‌ಗೆ ಒಗ್ಗಿಸುವಂತಾಗಬೇಕು. ಕೂಡಲೇ ಜನರಿಗೆ ತಲುಪುವಂತಾಗಬೇಕು ಎಂದೆನಿಸಿದಾಗ ಈ ಮಧ್ಯಮ ಮಾರ್ಗವನ್ನು ಕಂಡುಕೊಂಡೆ. ಇದರಲ್ಲಿ ಸಾಂಪ್ರದಾಯಿಕ ಸುರಪುರ ಕಲೆಯ ಛಾಯೆ ಎದ್ದು ಕಾಣುತ್ತದೆ. ಜೊತೆಗೆ, ತಂಜಾವೂರು ಹಾಗೂ ಮೈಸೂರು ಶೈಲಿಯ ಗೆರೆಗಳನ್ನೂ ಕಾಣಬಹುದು. ಸಾಂಪ್ರದಾಯಿಕ ಕಲೆಯನ್ನು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮಾಡುವಾಗ ಹೊಸತೊಂದು ಹೊಳೆಯಿತು’ ಎನ್ನುತ್ತಾರೆ. ಕಿನ್ನರಿಗಳು, ಚೂಪು ಮೂಗಿನ ಗಿಡ್ಡ ಜನಗಳು, ಚೂಪು ಕಂಗಳು ಇವಕ್ಕೆಲ್ಲ ತಮ್ಮದೇ ಆದ ಗುಣಲಕ್ಷಣಗಳಿವೆ. ಇವೇ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಕಾರಣ, ಇವರೆಲ್ಲ ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ. ದೈವತ್ವದ ಮುಂದೆ ಕಣ್ಮುಚ್ಚಿನಿಂತಾಗ ಆ ಗುಣಗಳನ್ನು ಬೇಡಿಕೊಳ್ಳುತ್ತೇವೆ. ಅವರನ್ನು ಅನುಸರಿಸುವಂತಾಗಲಿ ಎಂದೇ ಈ ಪಾತ್ರಗಳನ್ನು ಅಳವಡಿಸಿಕೊಂಡೆ. ಯಶೋದೆ ಹಾಗೂ ಕೃಷ್ಣನ ಚಿತ್ರಗಳನ್ನು ಬರೆದೆ ಎನ್ನುವುದಕ್ಕಿಂತಲೂ ಅವು ಬರೆಯಿಸಿಕೊಂಡವು. ಚಿತ್ರದ ಶೈಲಿಯ ಬಗ್ಗೆ ಹೇಳುವುದಾದರೆ ಇದೊಂದು ಮಧ್ಯಮಮಾರ್ಗ. ಎಲ್ಲ ಸಾಂಪ್ರದಾಯಿಕ ಶೈಲಿಗಳ ಝಲಕೂ ಕಾಣಬಹುದು...’ ಎನ್ನುತ್ತಾರೆ.

ಸುರಪುರ ಶೈಲಿ

ಮೈಸೂರು ಹಾಗೂ ತಂಜಾವೂರು ಶೈಲಿಯ ಪ್ರತಿರೂಪದಂತಿರುವ ಸುರಪುರ ಶೈಲಿಗಳಲ್ಲಿ ಗಣಿತೀಯ ಅಂಶಗಳೇ ಹೆಚ್ಚು ಕಾಣಿಸುತ್ತವೆ. ಇಲ್ಲಿಯ ರೇಖೆಗಳಿಗೆಲ್ಲ ಜ್ಯಾಮಿತಿಯ ಗುಣಗಳಿರುತ್ತವೆ. ನಾಜೂಕಿನ ರೇಕುಗಳನ್ನು ಚಿನ್ನದ ಪುಡಿಯಿಂದ ಅಲಂಕರಿಸಲಾಗುತ್ತಿತ್ತು. ದೊಡ್ಡ ಕಲಾಕೃತಿಗಳು ಮಿನಿಯೇಚರ್‌ನಂತೆ ಕಾಣುತ್ತಿದ್ದವು. ಸುರಪುರದ ರಾಜಾ ವೆಂಕಟಪ್ಪ ನಾಯಕ ಅವರ ಕಾಲದಲ್ಲಿ ಈ ಕಲೆ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈಗಲೂ ಕೆಲವು ಕಲಾಕೃತಿಗಳು ಹೈದರಾಬಾದ್‌ನ ವಸ್ತುಸಂಗ್ರಹಾಲಯದಲ್ಲಿವೆ.

ಈ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕಲಾವಿದ ವಿಜಯ್‌ ಹಾಗರಗುಂಡಗಿ ಅವರ ಸಂಗ್ರಹದಲ್ಲಿಯೂ ಕೆಲವು ಕಲಾಕೃತಿಗಳಿವೆ. ಗರುಡಾದ್ರಿ ವಂಶದವರಿಂದ ಪ್ರವರ್ಧಮಾನಕ್ಕೆ ಬಂದ ಈ ಕಲೆಯನ್ನು ಮೊದಲು ಗರುಡಾದ್ರಿ ಕಲೆ ಎಂದೂ ಕರೆಯಲಾಗುತ್ತಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು