ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣಬೆಳಗೊಳದ ತಾಯಿ

Last Updated 8 ಡಿಸೆಂಬರ್ 2019, 8:33 IST
ಅಕ್ಷರ ಗಾತ್ರ

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಪಟ್ಟಕ್ಕೆ ಬಂದು ಇದೀಗ ಭರ್ತಿ 50 ವರ್ಷ. ನೊಂದವರ ಕಣ್ಣೀರು ಒರೆಸಲು ಚಾತುರ್ಮಾಸ್ಯ ವ್ರತವನ್ನು ಅರ್ಧಕ್ಕೆ ನಿಲ್ಲಿಸಿದ ಮಾತೃ ಹೃದಯಿಯಾದ ಅವರು ಕನ್ನಡಕ್ಕಾಗಿ ಸದಾ ಕೈಎತ್ತುವ ಸಂತ...

‘ಶ್ರವಣಬೆಳಗೊಳ ಎಲ್ಲ ಮುನಿಗಳಿಗೆ, ಮಾತೃಶ್ರೀಗಳಿಗೆ ತವರು ಮನೆ. ಇಲ್ಲಿ ಯಾರು ಬಂದರೂ ಬೇಡ ಎನ್ನುವುದಿಲ್ಲ. ಎಷ್ಟು ದಿನ ಬೇಕಾದರೂ ಅವರು ಉಳಿದುಕೊಳ್ಳಬಹುದು. ನಾವು ಅವರಿಗೆ ಹೋಗಿ ಎನ್ನುವುದಿಲ್ಲ. ನಮ್ಮಲ್ಲಿ ಇರುವುದು ಸ್ವಾಗತ ಮತ್ತು ಸುಸ್ವಾಗತ ಮಾತ್ರ. ಬೀಳ್ಕೊಡುಗೆ ಎಂಬುದು ಇಲ್ಲವೇ ಇಲ್ಲ’ ಎನ್ನುತ್ತಲೇ ಮಾತಿಗೆ ಶುರುವಿಟ್ಟುಕೊಂಡರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ.

ಸ್ವಾಮೀಜಿ ಅವರು ಪಟ್ಟಕ್ಕೆ ಬಂದು 50 ವರ್ಷಗಳಾಗಿವೆ. ಈ ಅವಧಿಯಲ್ಲಿ ಶ್ರವಣಬೆಳಗೊಳ ಸಾಕಷ್ಟು ಬೆಳೆದಿದೆ. ಇದಕ್ಕೆಲ್ಲಾ ಸ್ವಾಮೀಜಿ ಅವರ ಮಾತೃ ಹೃದಯವೇ ಕಾರಣ ಎಂದು ಶ್ರವಣಬೆಳಗೊಳದವರೂ ಹೇಳುತ್ತಾರೆ. ಹೊರಗಿನವರೂ ಹೇಳುತ್ತಾರೆ. ಅವರು ಥೇಟ್ ಅಮ್ಮನಂತೆ. ಅಮ್ಮ ದೇವರ ಪೂಜೆಯಲ್ಲಿದ್ದಾಗಲೂ ಮಗು ಅತ್ತರೆ ಬಂದು ಸಂತೈಸುವಂತೆ ಅವರ ಪರಿ.

ಅದಕ್ಕೆ ಅಪ್ಪಟ ಉದಾಹರಣೆ ಎಂದರೆ ಅವರು ಚಾತುರ್ಮಾಸ್ಯ ವ್ರತವನ್ನು ಅರ್ಧಕ್ಕೇ ಬಿಟ್ಟು ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದು. ‘ನಾನು 21 ವರ್ಷಗಳಿಂದ ಚಾತುರ್ಮಾಸ್ಯ ವ್ರತ ಆಚರಣೆ ಮಾಡುತ್ತಿದ್ದೆ. ಯಾವಾಗಲೂ ಭಂಗವಾಗಿರಲಿಲ್ಲ. ಈ ಬಾರಿ ಉತ್ತರ ಕರ್ನಾಟಕದಲ್ಲಿ ಭಾರೀ ಪ್ರವಾಹ ಬಂದು ಜನರ ಬದುಕು ದುಸ್ತರವಾಗಿತ್ತು. ಜನರು ಊರು ಬಿಟ್ಟು ತೆರಳಿದ್ದರು. ದೇವಾಲಯಗಳು ಮುಳುಗಿದ್ದವು. ಸ್ವಾಮೀಜಿಗಳನ್ನು ದೋಣಿಯಲ್ಲಿ ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದ್ದರು. ಕೆಲವು ಜನರು ಮರ ಹತ್ತಿ ಕುಳಿತಿದ್ದರು. ನಾವು ಚಾತುರ್ಮಾಸ್ಯದಲ್ಲಿ ಇದ್ದಾಗಲೇ ಇಂತಹ ಸಂದೇಶಗಳು ಬರುತ್ತಿದ್ದವು. ಜನರು ಸಂಕಷ್ಟದಲ್ಲಿ ಇರುವಾಗ ನಾವು ಇಲ್ಲಿ ಜಪ ಮಾಡುತ್ತಾ ಕುಳಿತುಕೊಳ್ಳುವುದರಲ್ಲಿ ಅರ್ಥವೇ ಇಲ್ಲ ಎಂದು ಎದ್ದುಬಿಟ್ಟೆ. ಈ ಪರಿಸ್ಥಿತಿಯಲ್ಲಿ ಪೂಜೆಯನ್ನು ದೇವರು ಬಯಸಲಾರ ಎನ್ನಿಸಿಬಿಟ್ಟಿತು. ನೇರ ಬೆಳಗಾವಿ, ಸೊಲ್ಲಾಪುರ, ಸಾಂಗ್ಲಿ ಮುಂತಾದ ಕಡೆಗೆ ಹೋದೆವು. ಸರ್ಕಾರ ಏನು ಸಹಾಯ ಮಾಡುತ್ತದೋ ಮಾಡಲಿ. ನಾವೂ ನಮ್ಮ ಕೈಯಿಂದ ಏನು ಸಾಧ್ಯವೋ ಅದನ್ನು ಮಾಡೋಣ ಎಂದು ಮುಂದಾದೆವು. ಹಾಸನ ಜಿಲ್ಲೆಯಲ್ಲಿಯೂ ಓಡಾಡಿದೆವು. ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳಿಗೆ ತಲಾ ₹ 10 ಲಕ್ಷ ನೀಡಿದೆವು. ಜೊತೆಗೆ ₹ 25 ಲಕ್ಷ ಮೌಲ್ಯದ ಸಾಮಗ್ರಿ ವಿತರಣೆ ಮಾಡಿದೆವು. ಚಾತುರ್ಮಾಸ್ಯದ ನೆಪದಲ್ಲಿ ದೇವರ ಪೂಜೆ ಮಾಡುವುದಕ್ಕಿಂತ ಕಷ್ಟದಲ್ಲಿ ಇರುವ ಜನರ ಕಣ್ಣೀರು ಒರೆಸುವುದೇ ಹೆಚ್ಚು ಸೂಕ್ತ ಅನ್ನಿಸಿತು. ಅದಕ್ಕೆ ಅದನ್ನೇ ಮಾಡಿದೆವು’ ಎಂಬ ಧನ್ಯಭಾವ ಅವರಲ್ಲಿ. ಚಾತುರ್ಮಾಸ್ಯ ವ್ರತವನ್ನು ಅರ್ಧಕ್ಕೇ ಬಿಟ್ಟಿದ್ದಕ್ಕೆ ವಿರೋಧ ವ್ಯಕ್ತವಾಗಲಿಲ್ಲವೇ ಎಂದು ಕೇಳಿದರೆ ‘ಒಂದಿಷ್ಟು ಪರ, ವಿರೋಧ ಚರ್ಚೆ ಆಯ್ತು. ಆದರೆ ಎಲ್ಲರೂ ನಮ್ಮನ್ನು ಬೆಂಬಲಿಸಿದರು’ ಎಂದರು.

ಹಿಡಿದ ಒಳ್ಳೆಯ ಕೆಲಸವನ್ನು ಬಿಡದೆ ಸಾಧಿಸುವುದು ಚಾರುಶ್ರೀ ಅವರ ಗುಣ. ಅದಕ್ಕೆ ಅಪ್ಪಟ ಉದಾಹರಣೆ ಅವರ ಕನ್ನಡದ ಕೆಲಸ. ‘ನಾನೊಬ್ಬ ಕನ್ನಡದ ಸೇವಕ’ ಎಂದೇ ಕರೆದುಕೊಳ್ಳುವ ಅವರು ಕನ್ನಡದ ಸೇವೆಗೆ ಕಠಿಣ ತಪಸ್ಸು ಮಾಡಿದ್ದಾರೆ. ಜೈನರ ಪೂಜ್ಯ ಗ್ರಂಥಗಳಾದ ಧವಳ, ಜಯ ಧವಳ ಮತ್ತು ಮಹಾಧವಳಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಪ್ರಾಕೃತ ಮತ್ತು ಸಂಸ್ಕೃತದಲ್ಲಿ ಇದ್ದ ಈ ಗ್ರಂಥಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಅವರು ಸುಮಾರು 15 ವರ್ಷ ತೆಗೆದುಕೊಂಡಿದ್ದಾರೆ.

ಭಾಷಾಂತರದ ಕಾಲದಲ್ಲಿ ಅವರು ಶ್ರವಣಬೆಳಗೊಳದಿಂದ ಹೊರಕ್ಕೆ ಕಾಲಿಡಲಿಲ್ಲ. ಕಾರು ಹತ್ತಲಿಲ್ಲ. ಫೋನ್ ಮುಟ್ಟಲಿಲ್ಲ. ನಿದ್ರೆಯನ್ನು ತಡೆಯುವುದಕ್ಕಾಗಿ ಅಲ್ಪಾಹಾರ ಅಭ್ಯಾಸ ಮಾಡಿಕೊಂಡರು. ಒಂದು ಚಪಾತಿ, ಒಂದು ಲೋಟ ಹಾಲು ಅವರ ಆಹಾರ. ನಿದ್ದೆಯನ್ನು ಗೆಲ್ಲುವುದಕ್ಕೆ ಇದಕ್ಕಿಂತ ಬೇರೆ ಉಪಾಯ ಇಲ್ಲ ಎನ್ನುತ್ತಾರೆ ಅವರು. ದಿನಕ್ಕೆ 4 ಗಂಟೆಯಷ್ಟೇ ನಿದ್ದೆ. ಉಳಿದಂತೆ ಭಾಷಾಂತರ. ಯಾವುದೇ ಕಾರ್ಯಕ್ರಮಕ್ಕೂ ಹೋಗಲಿಲ್ಲ. ಆಶೀರ್ವಚನವೂ ಇಲ್ಲ. ಪಾದಪೂಜೆಯನ್ನೂ ಬದಿಗಿಟ್ಟು ಕನ್ನಡಕ್ಕೆ ಭಾಷಾಂತರ ಕೆಲಸವನ್ನೇ ಮಾಡಿದರು. ಅದರ ಫಲವಾಗಿ ಎಲ್ಲ ಧವಳಗಳೂ ಈಗ ಕನ್ನಡದಲ್ಲಿ 42 ಸಂಪುಟಗಳಲ್ಲಿ ಲಭ್ಯವಾಗಿವೆ. ಕನ್ನಡದ ಜನರೂ ಈಗ ಸುಲಭವಾಗಿ ಜೈನ ಸಾಹಿತ್ಯವನ್ನು ಓದುವಂತಾಗಿದೆ. 2015ರಲ್ಲಿ ಅಷ್ಟೇ ನಿಷ್ಠೆಯಿಂದ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನೂ ಅಚ್ಚುಕಟ್ಟಾಗಿ ಶ್ರವಣಬೆಳಗೊಳದಲ್ಲಿ ನಡೆಸಿಕೊಟ್ಟಿದ್ದಾರೆ.

‘ಧವಳ ಗ್ರಂಥದ ಮೂಲ ಪ್ರತಿ ಮೂಡಬಿದರೆ ಬಸದಿಯಲ್ಲಿ ಇತ್ತು. ಎಲ್ಲರೂ ಬಂದು ಅದಕ್ಕೆ ಕೈಮುಗಿದು ಹೋಗುತ್ತಿದ್ದರು. ಉತ್ತರ ಭಾರತದವರು ತುಂಬಾ ಕಷ್ಟಪಟ್ಟು 25 ವರ್ಷಗಳಲ್ಲಿ ಅದನ್ನು ಹಿಂದಿಗೆ ಅನುವಾದಿಸಿದರು. ಇದರಿಂದ ಉತ್ತರದ ವಿದ್ವಾಂಸರು ಬೀಗುತ್ತಿದ್ದರು. ಜೊತೆಗೆ ದಕ್ಷಿಣದವರೂ ಉತ್ತರಕ್ಕೇ ಹೋಗಿ ಅಲ್ಲಿಯೇ ನೆಲೆ ನಿಲ್ಲುತ್ತಿದ್ದರು. ಉತ್ತರದವರ ಮುಂದೆ ಕನ್ನಡಿಗರು ತಲೆತಗ್ಗಿಸುವಂತಹ ವಾತಾವರಣ ಸೃಷ್ಟಿಯಾಗಿತ್ತು. ಹೀಗಾಗಿ ಅದನ್ನು ಕನ್ನಡಕ್ಕೆ ಅನುವಾದ ಮಾಡುವ ಕೆಲಸಕ್ಕೆ ಕೈ ಹಾಕಿದೆವು. ನಾನೊಬ್ಬನೇ ಇದನ್ನು ಮಾಡಲು ಸಾಧ್ಯವಿಲ್ಲ ಎನ್ನುವುದು ಗೊತ್ತಿತ್ತು. ಅದಕ್ಕೆ ಸಾಕಷ್ಟು ಮಂದಿ ವಿದ್ವಾಂಸರನ್ನು ಒಟ್ಟುಗೂಡಿಸಿ, ಮಧ್ಯಪ್ರದೇಶದಿಂದ ಗಣಿತ ತಜ್ಞರನ್ನು ಕರೆಸಿ ಶಿಬಿರ ಮಾಡಿದೆವು. ಶಬ್ದಕೋಶ, ಪಾರಿಭಾಷಿಕ ಶಬ್ದಗಳನ್ನು ಗುರುತಿಸಿ ತಿಳಿಸಿದೆವು. 2–3 ವರ್ಷ ಬರೀ ತಯಾರಿಯಲ್ಲಿಯೇ ಆಯಿತು. ಒಟ್ಟಾರೆ ಭಾಷಾಂತರಕ್ಕೆ 15 ವರ್ಷ ತೆಗೆದುಕೊಂಡಿದ್ದರೂ ನಿಜವಾದ ಕೆಲಸ ನಡೆದಿದ್ದು 10 ವರ್ಷ. ಇದು ನಿಮ್ಮಿಂದ ಸಾಧ್ಯವಿಲ್ಲ ಎಂದೇ ಎಲ್ಲರೂ ಹೇಳುತ್ತಿದ್ದರು. ಆದರೂ ನಾವು ಪಟ್ಟು ಬಿಡದೇ ಕೆಲಸ ಮುಂದುವರಿಸಿದೆವು. ಇದೊಂದು ತರಹ ತೇನ್ ಸಿಂಗ್ ಹಿಮಾಲಯ ಹತ್ತಿದ ಹಾಗೆ. ಪ್ರಯತ್ನ ಮಾಡುತ್ತಾ ಹೋದೆವು. ಫಲ ಸಿಕ್ಕಿತು‘ ಎಂದು ಚಾರುಶ್ರೀ ವಿವರಿಸುತ್ತಾರೆ.

‘ಇದು ಕನ್ನಡದ ಕೆಲಸ. ಸರಸ್ವತಿಯ ಕೆಲಸ. ಯಾಕೆ ಆಗಲ್ಲ. ಆಗಲೇ ಬೇಕು ಎಂಬ ಸಂಕಲ್ಪದಿಂದ ಮುಂದುವರಿದೆವು. ಕೆಲಸ ಸಾಧಿಸಿದ್ದಾಯಿತು. ಇದು ನಮ್ಮ ಇತರ ಕೆಲಸಗಳಿಗೂ ಅನ್ವಯವಾಗುತ್ತದೆ. 1969ರಲ್ಲಿ ನಾವು ಇಲ್ಲಿಯ ಜವಾಬ್ದಾರಿಯನ್ನು ವಹಿಸಿಕೊಂಡಾಗ ನಮ್ಮ ಗುರುಗಳು ಹೇಳಿದ್ದರು. ‘ಮಗಾ ಇಲ್ಲಿ ಏನೂ ಇಲ್ಲ. ಆದರೆ ನಿಷ್ಠೆಯಿಂದ ಮಾಡುತ್ತಾ ಹೋಗು. ನಮ್ಮ ಆಶೀರ್ವಾದ ಯಾವಾಗಲೂ ಇರುತ್ತದೆ’ ಎಂದು ಹೇಳಿದ್ದರು. ನಾವು ಅದನ್ನೇ ಮಾಡಿದೆವು. ಒಂದೊಂದೇ ಕೆಲಸ ಸಾಗಿತು. ಈಗ ಶ್ರವಣಬೆಳಗೊಳ ಇಷ್ಟೊಂದು ಮಟ್ಟಕ್ಕೆ ಬೆಳೆದು ನಿಂತಿದೆ.

‘ನಮ್ಮ ಗುರುಗಳಿಗೆ ಏನೇನು ಮಾಡಬೇಕು ಎಂಬ ಬಯಕೆ ಇತ್ತೋ ಅದೆಲ್ಲವನ್ನೂ ಮಾಡುವ ಪ್ರಯತ್ನ ಮಾಡಿದ್ದೇವೆ ಎಂಬ ತೃಪ್ತಿ ನಮ್ಮದು. ಭೂಸುಧಾರಣೆ ಕಾಯ್ದೆ ಕಾರಣಕ್ಕಾಗಿ ನಮ್ಮ ಭೂಮಿ ಹೋಗಿತ್ತು. ಮಠ ಸಂಪೂರ್ಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಆಗಿನ ಕಾಲದಲ್ಲಿ ಬಾಹುಬಲಿ ದರ್ಶನಕ್ಕೆ ಟಿಕೆಟ್ ಇಟ್ಟಿದ್ದರು. ಅದು ನಮ್ಮ ಮನಸ್ಸಿಗೆ ಹಿತ ಎನಿಸಲಿಲ್ಲ. ದೇವರನ್ನು ನೋಡಲು ದುಡ್ಡು ಪಡೆಯವುದು ಸರಿ ಅಲ್ಲ ಎನ್ನಿಸಿತ್ತು. ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಜನರು ನೆರವು ನೀಡಿದರು. 1981ರಲ್ಲಿ ಸಾವಿರ ವರ್ಷದ ಬಾಹುಬಲಿ ಪ್ರತಿಷ್ಠಾಪನಾ ಮಹಾಮಸ್ತಕಾಭಿಷೇಕ ಬಂತು. ದೇಶದ ಜನರ ಸಹಕಾರದಿಂದ ಅದು ಯಶಸ್ವಿಯಾಗಿ ನಡೆಯಿತು. ನಮ್ಮ ನೇತೃತ್ವದಲ್ಲಿ ನಡೆದ ಮೊದಲ ಮಹಾಮಸ್ತಕಾಭಿಷೇಕ ಅದು. ಇಡೀ ವಿಶ್ವದ ಗಮನ ಸೆಳೆಯಿತು. ಬಾಹುಬಲಿಯ ಅಹಿಂಸಾ ತತ್ವ ವಿಶ್ವಕ್ಕೆ ಮತ್ತೊಮ್ಮ ಪ್ರಚುರಪಡಿಸಲಾಯಿತು. ಇದರಿಂದ ಶ್ರವಣಬೆಳಗೊಳಕ್ಕೂ ಅನುಕೂಲವಾಯಿತು.

ಮೈಸೂರು ಮಹಾರಾಜರೂ ಶ್ರವಣಬೆಳಗೊಳಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ. ಮಹಾಮಸ್ತಕಾಭಿಷೇಕಕ್ಕೆ, ಕ್ಷೀರಾಭಿಷೇಕಕ್ಕೆ, ಅಕ್ಕಿಮಡುವಿಗೆ, ಮುನಿಗಳ ಆಹಾರಕ್ಕೆ ಹೀಗೆ ಬೇರೆ ಬೇರೆ ಕಾರಣಗಳಿಗೆ ಗ್ರಾಮಗಳನ್ನೇ ದತ್ತು ನೀಡಿದ್ದರು. ಈಗ ಪ್ರಜಾಪ್ರಭುತ್ವ ಇದೆ. ಪ್ರಜೆಗಳೇ ಮುಂದೆ ನಿಂತು ಇಲ್ಲಿನ ಕೆಲಸ ಮಾಡುತ್ತಾರೆ. ಮಕ್ಕಳ ಆಸ್ಪತ್ರೆ, ಪ್ರಾಕೃತ ಸಂಶೋಧನಾ ಕೇಂದ್ರ ಎಲ್ಲವನ್ನೂ ಜನರೇ ಮಾಡಿದ್ದಾರೆ. ಚಾರುಕೀರ್ತಿ ಎನ್ನುವುದು ಹೊಯ್ಸಳರು ಕೊಟ್ಟ ಬಿರುದು. ಶ್ರವಣಬೆಳಗೊಳದಲ್ಲಿ ಈಗ ಒಬ್ಬ ಚಾರುಕೀರ್ತಿ ಇಲ್ಲ. ಇಲ್ಲಿರುವ ಎಲ್ಲರೂ ಚಾರುಕೀರ್ತಿಗಳು. ಯಾಕೆಂದರೆ ಇದರ ಅಭಿವೃದ್ಧಿಯಲ್ಲಿ ಎಲ್ಲರ ಪಾಲೂ ಇದೆ.

ಮೊಟ್ಟಮೊದಲ ಬಾರಿಗೆ ತಮ್ಮ ತಿರುಗಾಟಕ್ಕೆ ಎತ್ತಿನಗಾಡಿಯನ್ನು ಖರೀದಿಸಿದ್ದ, ಈಗಲೂ ನಡೆಯುವುದನ್ನೇ ಪ್ರೀತಿಸುವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಈಗಲೂ ವರ್ಷದಲ್ಲಿ 48 ದಿನ ಮೌನಕ್ಕೆ ಶರಣಾಗುತ್ತಾರೆ. ಮೌನ ಎಂದರೆ ಮನ ಮೌನ, ಕಾಯ ಮೌನ. ಮಾತನಾಡದೇ ಇರುವುದಷ್ಟೇ ಮೌನ ಅಲ್ಲ. ದೇಹದ ಎಲ್ಲ ಅಂಗಗಳಿಗೂ ವಿಶ್ರಾಂತಿ. ದೇಹ ಮತ್ತು ದೇಶವನ್ನು ಕಾಡುವ ಹಲವು ರೋಗಗಳಿಗೆ ಮೌನವೇ ಮದ್ದು ಎನ್ನುವುದು ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT