ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿ ಎಚ್.ಎಸ್. ವೆಂಕಟೇಶಮೂರ್ತಿ ಸಂದರ್ಶನ: ಏಕಾಂತದ ಮೂರ್ತಿ ಲೋಕಾಂತದ ಜೊತೆಗೆ...

Last Updated 3 ಫೆಬ್ರುವರಿ 2020, 13:19 IST
ಅಕ್ಷರ ಗಾತ್ರ

ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಭಾವಗೀತೆ, ಸಿನಿಮಾ ನಿರ್ದೇಶನ, ನಟನೆ –ಹೀಗೆ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು ಕೃಷಿ ಮಾಡಿದ ಕ್ಷೇತ್ರಗಳ ವ್ಯಾಪ್ತಿ ದೊಡ್ಡದು. ನವ್ಯದಿಂದ ರಸಗೊಬ್ಬರ ಪಡೆದು ನವೋದಯದಲ್ಲಿ ಮೊಳಕೆ ಮೂಡಿಸಿದ, ಅವರು 76ರ ಇಳಿವಯಸ್ಸಿನಲ್ಲೂ ಸೃಜನಶೀಲತೆಯ ತಾರುಣ್ಯ ಉಳಿಸಿಕೊಂಡವರು. ಕಲಬುರ್ಗಿಯಲ್ಲಿ ಫೆ. 5ರಿಂದ ಮೂರು ದಿನಗಳ ಕಾಲ ನಡೆಯಲಿರುವ 85ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಯ್ಕೆ ಆಗಿರುವ ‘ಏಕಾಂತಪ್ರಿಯ’ ಮೂರ್ತಿಯವರ ಜೊತೆಗೆ ಹೀಗೊಂದು ಲೋಕಾಂತದ ಮಾತುಕತೆ. ಎಚ್ಚೆಸ್ವಿಯವರ ಆಪ್ತ ಸ್ನೇಹಿತ, ಸಮಕಾಲೀನ, ಕವಿ ಬಿ.ಆರ್‌.ಲಕ್ಷ್ಮಣರಾವ್‌ ಜೊತೆಗೂಡಿ ನಡೆಸಿದ ಈ ತ್ರಿಕೋನ ಸಂದರ್ಶನದ ಸಂಕ್ಷಿಪ್ತ ರೂಪ ಇಲ್ಲಿದೆ...

*ನಮಸ್ಕಾರ. 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ. ಶುಭಾಶಯಗಳು. ಆಯ್ಕೆಯ ನಿರೀಕ್ಷೆ ಇತ್ತಾ? ಸುದ್ದಿ ತಿಳಿದಾಕ್ಷಣ ಏನನ್ನಿಸಿತು..?

ಎಚ್‌ಎಸ್‌ವಿ: ಆಶ್ಚರ್ಯವಾಯಿತು. ನನಗೆ ಗೊತ್ತೇ ಇಲ್ಲದಂತೆ ಆಕಸ್ಮಿಕವಾಗಿ ದೊರಕಿದ ಗೌರವವಿದು. ಸಂತೋಷವೂ ಆಯ್ತು. ಇದು 85ನೇ ಸಮ್ಮೇಳನ. ಈವರೆಗೆ ಕನ್ನಡದ ಅನೇಕ ಸಾಧಕರು ಅಲಂಕರಿಸಿದ ಪಂಕ್ತಿಯಲ್ಲಿ ನನಗೂ ಸ್ಥಾನ ಸಿಕ್ಕಿತಲ್ಲ ಎನ್ನುವ ಸಂತೋಷ. ಆಶ್ಚರ್ಯ ಮತ್ತು ಸಂತೋಷದ ಸಮ್ಮಿಶ್ರ ಭಾವ.

ಲಕ್ಷ್ಮಣರಾವ್‌: ಸಾಮಾನ್ಯವಾಗಿ ಸಮ್ಮೇಳನದ ಅಧ್ಯಕ್ಷರ ಆಯ್ಕೆಯಾದಾಗ ಪ್ರತಿರೋಧ, ವಿವಾದ ಸಾಮಾನ್ಯ. ಆದರೆ, ನಿಮ್ಮ ಆಯ್ಕೆಗೆ ಸಣ್ಣ ಭಿನ್ನಧ್ವನಿ ಬಿಟ್ಟರೆ ಎಲ್ಲರೂ ಸ್ವಾಗತಿಸಿದ್ದಾರೆ. ಇದಕ್ಕೆ ನಿಮ್ಮ ಸಮನ್ವಯ ದೃಷ್ಟಿ ಕಾರಣವೋ..?

ಎಚ್‌ಎಸ್‌ವಿ: ಸಮನ್ವಯವೆಂದು ಸರಳೀಕರಣ ಮಾಡಿ ಹೇಳುವುದು ಕಷ್ಟ. ನನ್ನ ಜೀವನ ಧೋರಣೆ ಮತ್ತು ಬರವಣಿಗೆಯಲ್ಲಿ ತೋರಿದ ಮೌಲ್ಯಗಳು, ಆಯ್ಕೆಗೆ ಪ್ರಧಾನ ಕಾರಣ ಆಗಿರಬೇಕು. ನಾನು ಸುಲಭವಾಗಿ ಯಾವುದೇ ಗುಂಪಿಗೆ ಸಿಕ್ಕಿಕೊಂಡವನಲ್ಲ. ಎಲ್ಲ ರೀತಿಯ, ಎಲ್ಲ ವಯೋಮಾನದ ಲೇಖಕರು; ಬೇಂದ್ರೆ, ಕುವೆಂಪು ನಂತರ ಬಂದ ಎಲ್ಲ ಹಿರಿಯ ಸಾಹಿತಿಗಳು... ಪುತಿನ, ನರಸಿಂಹಸ್ವಾಮಿ, ಅಡಿಗರಿಂದ ಶುರು ಮಾಡಿ ಇವತ್ತಿನ ಹೊಸಪೀಳಿಗೆಯ ಬೇರೆ ಬೇರೆ ಮನೋಧರ್ಮದ ಲೇಖಕರು ನನಗೆ ಆಪ್ತರು. ಉತ್ತಮವಾದ ಕಾವ್ಯ ಯಾವ ದಿಕ್ಕಿನಿಂದ ಬಂದರೂ ಸ್ವಾಗತಾರ್ಹ ಎನ್ನುವ ನನ್ನ ದೃಢನಂಬಿಕೆಯೇ ಇದಕ್ಕೆ ಕಾರಣ. ಲೇಖಕರಲ್ಲಿ ಜಾತಿ ಮತ್ತು ಪಕ್ಷವನ್ನು ನೋಡಬಾರದು. ಅವರ ಸಾಹಿತ್ಯ ಪ್ರತಿಭೆ ಮತ್ತು ಕೃತಿಯ ಮೌಲ್ಯವನ್ನು ಮಾತ್ರ ನೋಡಬೇಕು ಎನ್ನುವುದು ನನ್ನ ನಿಲುವು. ಅದನ್ನು ನನ್ನ ಗುರುಗಳಿಂದ ಕಲಿತುಕೊಂಡದ್ದು.

ಲಕ್ಷ್ಮಣರಾವ್‌: ಸಾಮಾನ್ಯವಾಗಿ ಕವಿಯ ಮೇಲೆ ಪರಿಸರದ ಪ್ರಭಾವ ಮುಖ್ಯ ಎನ್ನುತ್ತಾರೆ. ಆದರೆ ಅದೆಲ್ಲ ಇದ್ದೂ ಕವಿ ಆದವನಿಗೆ ಅವನ ಜೀವಕೋಶದಲ್ಲಿ ಕಾವ್ಯದ ಬೀಜ ಇರಬೇಕು ಎನ್ನುವುದು ನನ್ನ ಅನಿಸಿಕೆ.

ಎಚ್‌ಎಸ್‌ವಿ: ಕೆಲವು ಸಲ ಪರಿಸರ ಕೂಡಾ ಮುಖ್ಯ ಆಗುತ್ತೆ. ಮಲೆನಾಡಿನಿಂದ ಬಂದವರು ಹೆಚ್ಚಾಗಿ ಕಾವ್ಯದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಬಯಲುಸೀಮೆಯವರು ಹೆಚ್ಚಾಗಿ ಕಥೆ, ಕಾದಂಬರಿಗಳನ್ನು ಬರೆದಿದ್ದಾರೆ. ಸ್ಥೂಲವಾಗಿ ಹೇಳೋದಾದರೆ, ಕವಿಯ ಪರಿಸರ ಕೂಡಾ ಅಂತರಂಗದ ರೂಪರೇಖೆಗೆ ಕಾರಣವಾಗುತ್ತೆ. ಸಾಹಿತ್ಯದ ಕಲಿಕೆ ಮತ್ತು ಓದುವಿಕೆ, ಜೊತೆಗೆ ಏನು ಕಣ್ಣಿಗೆ ಕಾಣುತ್ತೋ ಅದರಾಚೆ ನೋಡಬೇಕೆಂಬ ಹಂಬಲ. ಒಂದನ್ನು ನೋಡಿ ಇನ್ನೊಂದನ್ನು ಊಹಿಸುವ, ರಚಿಸುವ ಶಕ್ತಿ ಇದೆಯಲ್ಲ ಅದು ಕಾವ್ಯದ ಮೊದಲ ಸೋಪಾನ. ಏಕಾಂತ ನನಗೆ ಅನಿವಾರ್ಯವಾಗಿತ್ತು. ದೊಡ್ಡ ಮನೆಯಲ್ಲಿ ಒಂದೇ ಮಗು.ಬರೀ ಹೆಣ್ಮಕ್ಕಳ ಆಶ್ರಯದಲ್ಲಿ ಬೆಳೆದೆ. ಹತ್ತು ಮಕ್ಕಳ ಜೊತೆಗೆ ಬೆಳೆದರೆ ಬಹಿರ್ಮುಖತೆ ಸಾಧ್ಯವಾಗುತ್ತಿತ್ತೇನೋ. ಈ ಅಂತರ್ಮುಖತೆ ಎನ್ನುವುದು ಸಾಹಿತ್ಯ ರಚನೆಗೆ ಅಗತ್ಯವಾದ ಸಾಮಗ್ರಿ.

ಸಂಸಾರದಲ್ಲಿ ಮುಳುಗುವ ಮತ್ತು ಅದರಿಂದ ಹೊರಗೆ ಬರುವ; ಒಂದು ಅಂತರದಲ್ಲಿ ಅದನ್ನು ಅನುಭವಿಸುವ, ಸಂವೇದನೆಗೆ ಒಳಪಡಿಸುವ, ಭಾಷೆಯಲ್ಲಿ ಅದಕ್ಕೆ ತಕ್ಕ ರೂಪಕಗಳನ್ನು ಕಲ್ಪಿಸುವ ಶಕ್ತಿ ಒಂದಿದೆಯಲ್ಲ ಅದು ಹೇಗೋ ಏನೋ ಸಹಜವಾಗಿ ನನ್ನಲ್ಲಿ ಒಡಮೂಡಿದೆ. ಪ್ರತಿಭೆ ಎನ್ನುವುದು ಮೂಲಭೂತವಾಗಿ ಇರಬೇಕು. ಅದಕ್ಕೆ ಪರಿಷ್ಕಾರ ಸಂಸ್ಕಾರಗಳ ಕಲಿಕೆ, ಅಭ್ಯಾಸ ಇರಬೇಕು.

ಲಕ್ಷ್ಮಣರಾವ್‌: ನೀವು ಕನ್ನಡ ಸಾಹಿತ್ಯಲೋಕ ಪ್ರವೇಶಿಸಿದಾಗ ನವ್ಯದ ಉಚ್ಛ್ರಾಯ ಕಾಲ. ಆದರೆ, ನವೋದಯದ ಮನೋಧರ್ಮ ಮತ್ತು ಶೈಲಿ ನಿಮ್ಮದು. ಇದನ್ನು ಸ್ಥಾಪಿಸಬೇಕಾದರೆ ಇದ್ದ ತೊಡಕುಗಳೇನು?

ಎಚ್‌ಎಸ್‌ವಿ: ನನ್ನ ಮೇಲೆ ನವೋದಯದ ಪ್ರಭಾವ ಗಾಢವಾಗಿ ಆಯಿತು– ಮನೋಧರ್ಮದ ಮತ್ತು ಚಿಂತನಾ ಕ್ರಮದ ದೃಷ್ಟಿಯಿಂದ. ಆದರೆ, ಕವಿತೆಯನ್ನು ಕಟ್ಟುವ ಕಸುಬುಗಾರಿಕೆ ನವ್ಯದಿಂದ ಹೆಚ್ಚಾಗಿ ಬಂತು. ಅದರಲ್ಲೂ ಅಡಿಗರು, ನರಸಿಂಹಸ್ವಾಮಿ ಅವರಿಂದ ನಾನು ಕಲಿತದ್ದು ಬಹಳ. ನವ್ಯದ ಕವಿಗಳಲ್ಲಿ ಸಾವಯವ ಶಿಲ್ಪದ ಕಲ್ಪನೆ ಬಹಳ ತೀವ್ರವಾಗಿತ್ತು. ನವೋದಯ ಸ್ಪೂರ್ಥಕಾವ್ಯವಾದದ್ದರಿಂದ ನಾಲ್ಕು ಸಾಲು ಹೆಚ್ಚಿಗೆ ಬರೆದರೂ ಯಾರೂ ಆಕ್ಷೇಪಣೆ ಮಾಡುತ್ತಿರಲಿಲ್ಲ. ನವ್ಯದಲ್ಲಿ ಒಂದೊಂದು ಶಬ್ದ ಕೂಡಾ ಬೇಕೆ ಬೇಡವೆ ಎನ್ನುವ ಔಚಿತ್ಯದ ಪ್ರಜ್ಞೆ ಜಾಗ್ರತವಾಗಿ ಕೆಲಸ ಮಾಡಿತು. ನನಗೆ ನವೋದಯದ ಒಂದು ಸ್ಪಾಂಟೇನಿಯಿಟಿ, ನವ್ಯದ ಕಸುಬುಗಾರಿಕೆ, ಶಿಲ್ಪರಚನೆ, ಕ್ರಿಯಾಶೀಲತೆ ಎರಡನ್ನೂ ನಾನು ಪಡೆಯಲು ಸಾಧ್ಯವಾಯಿತು. ಒಂದು ಕಡೆ ಬೇಂದ್ರೆ, ಕುವೆಂಪು, ಪುತಿನ ಚಿಂತನೆ ಸ್ಫೂರ್ತ ಬರವಣಿಗೆಗೆ, ಜಗತ್ತಲ್ಲಿ ಎಲ್ಲವನ್ನೂ ಪ್ರೀತಿಸಬೇಕು ಎನ್ನುವ ಮಾನವೀಯ ನಿಲುವಿಗೆ ಕಾರಣವಾಯಿತು. ಅವರಿಂದ ಪಡೆದೆ. ಹಾಗೆಯೇ ನವ್ಯದಿಂದ ಹೇಗೆ ಕಟ್ಟಬೇಕು, ಹೇಗೆ ಬರೆಯಬೇಕು, ಹೇಗೆ ಪ್ರಾಮಾಣಿಕತೆ ಅತ್ಯಂತ ಮುಖ್ಯವಾದ ಮೌಲ್ಯ ಎನ್ನುವುದನ್ನು ಅಡಿಗರು, ಅನಂತಮೂರ್ತಿ, ಚಿತ್ತಾಲ ಮತ್ತಿತರರು ಕಲಿಸಿದರು.

*ಕೆ.ಎಸ್‌.ನಿಸಾರ್ ಅಹ್ಮದ್‌ ಕುರಿತೂ ನೀವು ಹೇಳಿದ್ದಿದೆ...

ನನ್ನ ಕಾವ್ಯದ ಆರಂಭದ ಕಾಲದಲ್ಲಿ ನನ್ನನ್ನು ಹೆಚ್ಚು ಗಾಢವಾಗಿ ಪ್ರಭಾವಿಸಿದವರು ನಿಸಾರ್‌ ಅಹ್ಮದ್‌. ಏಕೆಂದರೆ ನಿಸಾರ್‌ ಹೊಸಬರಿಗೆ ಬೇಗ ಸಿಕ್ಕುವ ಕವಿ. ಪಿ. ಲಂಕೇಶ್‌, ಎ.ಕೆ. ರಾಮಾನುಜನ್‌ ಇವರ ಪ್ರಭಾವ ನನ್ನ ಮೇಲೆ ಆಗಿದೆ. ಲಂಕೇಶ್‌ ಅವರ ಗದ್ಯದ ಪ್ರಭಾವ ತುಂಬಾ ಇದೆ. ಕಾರಂತರು ಬಂದ ಮೇಲೆ ಅನಕೃ ಹೇಗೆ ಹಿಂದೆ ಸರಿದರೋ ಹಾಗೆ ಆ ಬಳಿಕ ಅಡಿಗರು, ಅನಂತಮೂರ್ತಿಯವರ ಪ್ರಭಾವ ಹೆಚ್ಚಾಯಿತು.

*ಲಂಕೇಶ್ ಗದ್ಯದ ಪ್ರಭಾವ ಅಂತೀರಿ. ಆದರೆ ಬಹಿರ್ಮುಖದಲ್ಲಿ ನಡೆಯುವ ಯಾವ ದಾರುಣ ಸಂಗತಿಗಳೂ ನಿಮ್ಮನ್ನು ಕಾಡಲಿಲ್ಲವೆ? ಈ ವಿಷಯಗಳಿಗೂ ನನಗೆ ಸಂಬಂಧವೇ ಇಲ್ಲ ಎಂದು ನೀವು ಭಾವಿಸಲು ಹೇಗೆ ಸಾಧ್ಯ?

ಎಚ್‌ಎಸ್‌ವಿ: ನೋಡಿ, ಲಂಕೇಶರ ‘ನಾನಲ್ಲ’ ಎನ್ನುವ ಸಂಗ್ರಹಕ್ಕೂ, ‘ಮುಸ್ಸಂಜೆಯ ಕಥಾಪ್ರಸಂಗ’ ಎನ್ನುವ ಕಾದಂಬರಿಗೂ ಇರುವ ಅಂತರ ಇದೆಯಲ್ಲ.. ಅದು ಒಂದು ಕಡೆ ಈ ನಮ್ಮ ಜಿಜ್ಞಾಸೆಗೆ ಪೂರಕ ಆಗಬಹುದು. ನಾನಲ್ಲ ಎನ್ನುವುದು ಏಕಾಂತದ ಆತ್ಮಚಿಂತನೆಯ ಒಂದು ಪ್ರಯೋಗ. ಮುಸ್ಸಂಜೆಯ ಕಥಾಪ್ರಸಂಗ ಇಡೀ ಹಳ್ಳಿಯನ್ನು ತನ್ನೊಳಗೆ ಮಾಡಿಕೊಳ್ಳುವ ಪ್ರಯೋಗ. ಮೊದಲೇ ನಾನು ಹೇಳಿದ್ದು– ಏಕಾಂತ ಮತ್ತು ಲೋಕಾಂತಗಳ ಸಮನ್ವಯ. ಇದನ್ನು ಲಂಕೇಶರು ಸಿದ್ಧಿಸಿಕೊಂಡಿದ್ದರು. ಅದು ನನ್ನ ಮೇಲೂ ಪರಿಣಾಮ ಬೀರಿದೆ. ನನ್ನ ಗದ್ಯ ಬರಹ ಹೆಚ್ಚಾಗಿ ಲೋಕಾಂತವನ್ನು ಕುರಿತದ್ದು. ಪದ್ಯ ಕೂಡಾ ಅದಕ್ಕೆ ಹಂಬಲಿಸುತ್ತೆ.

ಲಕ್ಷ್ಮಣರಾವ್‌: ನಿಮ್ಮ ಕಥನಕಾವ್ಯಗಳ ಬಗ್ಗೆ ಹೇಳಿ. ಅದೇ ವಿಷಯದಲ್ಲಿ ನಿಮ್ಮ ಪಿಎಚ್‌ಡಿ ಕೂಡಾ ಆಯಿತು..

ಎಚ್‌ಎಸ್‌ವಿ: ಈ ಕಥನ ಕಾವ್ಯ ಕೂಡಾ, ಕೇವಲ ನಾನು ಕೇಂದ್ರವಾಗಿದ್ದ ಕಾವ್ಯಗಳಿಂದ ವಿಮುಕ್ತಿಯನ್ನು ಪಡೆದು ಅನೇಕರನ್ನು ಒಳಗೊಳ್ಳುವ ಪ್ರಯತ್ನ. ನವ್ಯದ ವ್ಯಕ್ತಿಕೇಂದ್ರಿತ ಬರವಣಿಗೆಯಿಂದ ಎಲ್ಲರನ್ನೂ ಒಳಗೊಳ್ಳುವ; ಮನುಷ್ಯರನ್ನು ಮಾತ್ರವಲ್ಲ ಪ್ರಾಣಿ–ಪಕ್ಷಿಗಳನ್ನು, ಗಿಡ–ಮರಗಳನ್ನು ಸಮಗ್ರವಾಗಿ ಒಳಗೊಳ್ಳುವ ಯತ್ನ. ನಾನು ಸೃಷ್ಟಿಯ ಕೇಂದ್ರವಲ್ಲ ಎನ್ನುವ ವಿನಯವನ್ನು ಒಳಗೊಳ್ಳುವುದು.

ಲಕ್ಷ್ಮಣರಾವ್‌: ನಮ್ಮ ಸಮಸ್ಯೆಗಳು ವ್ಯಕ್ತಿಕೇಂದ್ರಿತ ಆಗಬಾರದು, ವಿಶ್ವಕೇಂದ್ರಿತ ಆಗಬೇಕು, ಸಮಸ್ತವನ್ನೂ ಒಳಗೊಳ್ಳಬೇಕು ಎಂದು ಹಿಂದೆಯೂ ನೀವು ಹೇಳಿದ್ದಿದೆ...

ಎಚ್‌ಎಸ್‌ವಿ: ಸೃಷ್ಟಿ ಆಗಿದ್ದೇ ಮನುಷ್ಯನಿಗೋಸ್ಕರ ಎನ್ನುವುದು ಒಂದು ಚಿಂತನೆ. ಹಾಗಿಲ್ಲ, ನಾನು ಪ್ರಕೃತಿಯೊಂದಿಗೆ ಸಹಜೀವನ ಮಾಡುವಂತಹ ಇನ್ನೊಂದು ಜೀವಿ. ಇನ್ನೊಬ್ಬರಿಗೆ ನೋವಾಗಬಾರದು ಎನ್ನುವ ಮನುಷ್ಯನ ಚಿಂತನೆ ಆತನನ್ನು ಆತ್ಮಕೇಂದ್ರಿತದಿಂದ ವಿಶ್ವರೂಪದ ಕಲ್ಪನೆಯತ್ತ ಕರೆದೊಯ್ಯುತ್ತದೆ. ಎಲ್ಲರೊಂದಿಗೆ ಒಂದಾಗುವುದು. ಬದುಕು ಮತ್ತು ಬದುಕಲು ಬಿಡುವುದು. ಚಿಕ್ಕಂದಿನಿಂದಲೂ ನಾನು ಈ ತರಹದ ಒತ್ತಡಗಳಿಗೆ ಒಳಗಾಗಿದ್ದರಿಂದ ಈ ದೃಷ್ಟಿ ಬಂದಿದೆ. ಸಾಹಿತ್ಯ ಈ ಪರಚಿಂತನೆಯನ್ನು ಒಳಗೊಳ್ಳಬೇಕು.

*ಸಾಹಿತ್ಯದಲ್ಲಿ ಸಿಟ್ಟಿನ ಅಭಿವ್ಯಕ್ತಿಯೂ ಇದೆ. ನವ್ಯ, ನವೋದಯದ ಬಳಿಕ ದಲಿತ ಬಂಡಾಯ ಮಾರ್ಗವೂ ಬಂತು. ನಿಮ್ಮ ಕೃತಿಗಳಲ್ಲಿ ಅಂತಹ ಅಭಿವ್ಯಕ್ತಿ ಏಕೆ ಕಾಣಿಸಲಿಲ್ಲ?

ಎಚ್‌ಎಸ್‌ವಿ: ಇದೆ, ಮೊದಲ ಕೃತಿ ಪರಿವೃತ್ತದಿಂದ ಈವರೆಗೂ ಬರೆದದ್ದರಲ್ಲಿ ಸಾತ್ವಿಕ ಸಿಟ್ಟೂ ಬಂದಿದೆ. ಬಹಳ ಗಟ್ಟಿಯಾದ ಧ್ವನಿಯನ್ನೇ ಕೇಳಬಯಸುವವರಿಗೆ ನನ್ನ ಸೂಕ್ಷ್ಮ ಕಂಪನಗಳು ತಲುಪುವುದಿಲ್ಲ. ನನ್ನ ಪ್ರಕಾರ, ಕವಿಗೆ ಸೃಷ್ಟಿಶೀಲ ಕೋಪ ಇರಬೇಕು. ಇನ್ನೊಬ್ಬರನ್ನು ವಿನಾಶ ಮಾಡುವ ಕೋಪವಲ್ಲ.

*ನಿಮ್ಮ ಮೇಲೆ ಅಡಿಗರ ಪ್ರಭಾವ ಇದೆ ಎನ್ನುತ್ತೀರಿ. ಅವರು ಇಂತಹ ‘ಸಿಟ್ಟು ಉಕ್ಕುಕ್ಕಿ ಹರಿವ’ ಹಲವು ಕವಿತೆಗಳನ್ನು ಬರೆದಿದ್ದಾರೆ. ನೀವು ಸಿಟ್ಟನ್ನು ಒಳಹಂತದಲ್ಲೇ ಇಟ್ಟುಕೊಂಡಿದ್ದು ಹೇಗೆ?

ಲಕ್ಷ್ಮಣರಾವ್‌: ಇಲ್ಲಿ ನನಗನ್ನಿಸುವುದು ಎಚ್ಚೆಸ್ವಿ ಅವರದ್ದು ಹೆಂಗರುಳಿನ ಸಾಹಿತ್ಯ ಅಂತ. ಅವರೇ ಹಲವೆಡೆ ಅಡಿಗರ ‘ದುರಿತಾನುಸಾರಿ ಕವಿತಾ..’ ಎನ್ನುವ ಸಾಲನ್ನು ಹೇಳುತ್ತಿರುತ್ತಾರೆ. ನಿಮ್ಮ ಮನೋಧರ್ಮವೇ ಹೆಂಗರುಳಿನ ಆರ್ದ್ರ ಕಾವ್ಯ. ಇದಕ್ಕೇನು ಕಾರಣ?

ಎಚ್‌ಎಸ್‌ವಿ: ಪುರುಷನಿಗೆ ಸ್ತ್ರೀತ್ವದ ಸಾಧನೆ ಅನಿವಾರ್ಯ ಎಂದು ನಂಬಿದವನು ನಾನು. ಪ್ರತಿಯೊಬ್ಬ ಪುರುಷನು ಕೂಡಾ ಹೆಣ್ತನವನ್ನು ಸಾಧಿಸಬೇಕು. ಅದು ಮಾನಸಿಕವಾಗಿ. ಆಗ ಕರುಳು ಎನ್ನುವುದು ಹೆಂಗರುಳು ಎನ್ನುವ ಸ್ತ್ರೀವಾಚಕವಾಗುತ್ತದೆ. ಇದು ಆಂತರಿಕವಾದ ಹೃದಯ ಮತ್ತು ಕರುಳಿಗೆ ಸಂಬಂಧಿಸಿದ ನಿರ್ವಚನ. ಗಂಡು ತಾಯ್ತನವನ್ನು ಸಾಧಿಸಬೇಕು. ಹಾಗೆಯೇ ಹೆಣ್ಣು ಕೂಡಾ ಸ್ವಲ್ಪ ಪುರುಷತ್ವವನ್ನು ಪಡೆಯಬೇಕಾದ ಅಗತ್ಯವಿದೆ.

ಅರ್ಧನಾರೀಶ್ವರನ ಕಲ್ಪನೆ.. ಯಾವ ರೂಪಕವನ್ನು ಸೃಷ್ಟಿ ಮಾಡಿದ್ದೇವಲ್ಲ ಅದು ಇವತ್ತಿನ ಅಗತ್ಯ. ನಮ್ಮ ಶಿಲ್ಪಗಳಲ್ಲೇ ಗಮನಿಸಿ, ಪುರುಷ ವಿಗ್ರಹಗಳ ಮುಖ ನೋಡಿದಾಗ ಒಂದು ಸ್ತ್ರೀಭಾವ ಕಾಣಿಸುತ್ತದೆ. ಕೋಮಲವಾದ ಆರ್ದ್ರಭಾವವಿದು. ದೇವತೆಗಳನ್ನು ಸಂಪೂರ್ಣವಾಗಿ ಹೊರಗಿಡುವುದು ಅಥವಾ ದೇವಸ್ಥಾನಗಳನ್ನು ಬಹಿಷ್ಕರಿಸುವ ಕರೆಯನ್ನು ಕುವೆಂಪು ನಮಗೆ ಕೊಟ್ಟರು. ಇದು ಅತ್ಯಂತ ಆಧುನಿಕವಾದ ವೈಚಾರಿಕ ನಿಲುವು. ಸಮಾಜ ದೇವಸ್ಥಾನವನ್ನು ಹೊರಗಿಡಲಿಲ್ಲ ಎಂದಾದರೆ ಅಲ್ಲಿರುವ ಪ್ರತಿಮೆಗಳನ್ನು ಬದಲಾಯಿಸಬೇಕು. ಅದು ಹೇಗೆ ಎಂದರೆ ಕತ್ತಿ ಹಿಡಿದ, ಬಿಲ್ಲು ಹಿಡಿದ ದೇವತೆಗಳಿಗಿಂತ ನೇಗಿಲು ಹಿಡಿದ, ಕೊಳಲು ಹಿಡಿದ, ಸೌಟು ಹಿಡಿದ ದೇವತೆಗಳು ಮುಖ್ಯವಾಗ್ತಾರೆ. ದೇವತೆಗಳ ಕಲ್ಪನೆಯಲ್ಲಿ ಕೂಡಾ ನಾವು ರೂಪಕಾತ್ಮಕವಾದ ಬದಲಾವಣೆಗಳನ್ನು ತಂದರೆ ಅದು ಒಂದು ರೀತಿಯ ಸಾತ್ವಿಕ ಭಾವನೆಗಳನ್ನು ಅಲ್ಲಿ ಹೋಗುವವರಲ್ಲಿ ಪ್ರಚೋದಿಸಲು ಸಾಧ್ಯವಾಗುತ್ತದೆ. ತಾವೇ ಕತ್ತಿ ಹಿಡಿದಿರುವ ದೇವರು ನಮಗೆ ಶಾಂತಿಯನ್ನು ಕೊಡ್ತಾರಾ?

ಲಕ್ಷ್ಮಣರಾವ್‌: ಕೇಡನ್ನು ಸಂಹರಿಸಬೇಕು ಎನ್ನುವ ಕಾರಣಕ್ಕಾಗಿ ಈ ರೀತಿ ಇದೆಯಲ್ವಾ?

ಎಚ್‌ಎಸ್‌ವಿ: ಆದರೆ ಆ ರೂಪಕ ತಪ್ಪು ಸಂದೇಶ ಕಳುಹಿಸುತ್ತದೆ.

* ಹಿಂದೆ ಶ್ರೀರಾಮಚಂದ್ರ ಬಿಲ್ಲು–ಬಾಣಗಳನ್ನು ಹೆಗಲಲ್ಲಿ ಇಟ್ಟುಕೊಂಡ ಚಿತ್ರಗಳು ಕಾಣಿಸುತ್ತಿದ್ದವು. ಈಗ ಬಾಣ ಬಿಡುವ ಶ್ರೀರಾಮನ ಇಮೇಜ್ ಜನಪ್ರಿಯವಾಗಿದೆ. ಇದಕ್ಕೊಂದು ರಾಜಕೀಯ ಆಯಾಮವೂ ದೊರಕಿದೆಯಲ್ಲ..

ಎಚ್‌ಎಸ್‌ವಿ: ನನ್ನ ಒಂದು ಪದ್ಯ ‘ಶ್ರೀಸಂಸಾರಿ’ ಎನ್ನುವುದನ್ನು ನೀವು ಗಮನಿಸಿರಬಹುದು. ಅಲ್ಲಿ ನನಗೆ ಬಿಲ್ಲು–ಬಾಣಗಳನ್ನು ಹೊಂದಿರುವ ಶ್ರೀರಾಮನಿಗಿಂತ ಕುಟುಂಬವನ್ನು ತನ್ನೊಟ್ಟಿಗೆ ಇಟ್ಟುಕೊಂಡಿರುವ ವಾತ್ಸಲ್ಯದ ಮೂರ್ತಿಯೇ ಮುಖ್ಯನಾಗ್ತಾನೆ. ಅವನು ಒಬ್ಬನೇ ಪೂಜೆಯನ್ನು ಸ್ವೀಕಾರ ಮಾಡಲ್ಲ. ಕುಟುಂಬದ ಎಲ್ಲರೂ ಜೊತೆಗೆ ಇರ್ತಾರೆ. ಅದರಲ್ಲೂ ಸುಗ್ರೀವ, ಜಾಂಬವಂತ, ವಿಭೀಷಣ ಎಲ್ಲರೂ ಅಲ್ಲಿದ್ದಾರೆ. ಕವಿತೆಯಲ್ಲಿ ಫೋಟೊಗ್ರಾಫರ್ ಹೇಳ್ತಾನೆ- ‘ನಿಮ್ಮ ಹೆಗಲಲ್ಲಿ ಸ್ವಲ್ಪ ಜಾಗ ಇದೆ. ನೀವು ಆ ಬಿಲ್ಲು ತೆಗೆದು ಕೆಳಗಿಟ್ಟರೆ ಅಲ್ಲಿ ಇನ್ನೊಬ್ಬರು ಕೂರಬಹುದು’ ಅಂತ. ಆಗ ಅಲ್ಲೊಂದು ಅಳಿಲು ಬಂದು ಕೂರುತ್ತದೆ. ರಾಮಾಯಣದಲ್ಲಿ ಧನುರ್ಭಂಗ ಎನ್ನುವುದು ಬಹಳ ಅದ್ಭುತವಾದ ರೂಪಕ. ಮತ್ತೆ ಮತ್ತೆ ಬಿಲ್ಲನ್ನು ಮುರಿಯಲಾಗುತ್ತದೆ. ಇದನ್ನೆಲ್ಲ ನಮ್ಮ ಹೊಸ ಪೀಳಿಗೆಯವರು ಓದಬೇಕಾದ ಅಗತ್ಯವಿದೆ. ಅಂದರೆ ಈ ಜೀವಜಾಲದಲ್ಲಿ ಎಲ್ಲ ಜೀವಿಗಳಿಗೂ ಅವಕಾಶವಿದೆ. ಸಕಲ ಜೀವರಾಶಿಯಲ್ಲೂ ಪ್ರೀತಿ ಮತ್ತು ಕರುಣೆ ಹುಟ್ಟಿಸುವ ರಾಮನ ಪ್ರತಿಮೆ ಇದು. ಕೃಷ್ಣ ನನ್ನ ಆಪ್ತಗೀತ ಎನ್ನುವ ಕವಿತೆಯಲ್ಲಿ ನಾನು ಹೇಗೆ ಕೃಷ್ಣನಾಗಲಿ ಎಂದು ಕೇಳುತ್ತಾನೆ. ಅರ್ಜುನನಿಗೆ ನೀನೇನು ಮಾಡಬೇಕು ಎಂದು ಬೋಧಿಸುವುದಲ್ಲ, ನಾನೇನು ಮಾಡಿದೆ ಎಂದು ಹೇಳುತ್ತಾನೆ.

*ನಿಮ್ಮ ಕಾವ್ಯಕ್ಕಿಂತ ಸಿನಿಮಾ ಮತ್ತು ಟಿ.ವಿ. ಸೀರಿಯಲ್‌ಗೆ ಬರೆದ ಹಾಡುಗಳೇ ಹೆಚ್ಚು ಜನಪ್ರಿಯವಾಗಿರುವುದು ನಿಮ್ಮ ಗಮನಕ್ಕೇನಾದರೂ ಬಂದಿದೆಯಾ?

ಲಕ್ಷ್ಮಣರಾವ್‌: ಇದನ್ನು ಹೀಗೂ ಹೇಳಬಹುದು. ಎಚ್ಚೆಸ್ವಿ ಅಂದರೆ ಬಹಳ ಕೀರ್ತಿವಂತ, ಜನಪ್ರಿಯ ಕವಿ. ಈ ಜನಪ್ರಿಯತೆಯ ದೊಡ್ಡಪಾಲು ಭಾವಗೀತೆ, ಚಿತ್ರಗೀತೆಗಳದ್ದೇ ಆಗಿದೆಯಲ್ವ?

ಎಚ್‌ಎಸ್‌ವಿ: ಅದನ್ನು ನಾನು ಗೌರವಿಸ್ತೀನಿ. ಜನ ನನ್ನನ್ನು ಇಷ್ಟಪಡ್ತಾರೆ ಎನ್ನುವುದು ಇಷ್ಟದ ಸಂಗತಿಯೇ. ಆದರೆ. ನನ್ನ ಅತ್ಯಂತ ಜನಪ್ರಿಯವಾದ ಹಾಡುಗಳ ಬಂದ ಸಂದರ್ಭದಲ್ಲೇ ನನ್ನ ಅನೇಕ ಗಂಭೀರ ಕೃತಿಗಳೂ ಬಂದವು. ಪೂರ್ಣ ಹಾಡಿಗೆ ಮರುಳಾದವನಲ್ಲ ನಾನು. ಹಾಡಿನಿಂದ ನಾನೇನೂ ಕಳಕೊಂಡಿಲ್ಲ, ಅದರಿಂದ ಪಡಕೊಂಡು ನನ್ನ ನಿಜವಾದ ಕಾವ್ಯ ಮಾಧ್ಯಮದಲ್ಲಿ ಗಟ್ಟಿ ಕೆಲಸ ಮಾಡಿದೆ. ಉತ್ತರಾಯಣ ಬರೆದದ್ದು ಅನಂತಸ್ವಾಮಿ, ಅಶ್ವಥ್ ಅವರು ನನ್ನ ಹಾಡುಗಳನ್ನು ತುಂಬ ಜನಪ್ರಿಯಗೊಳಿಸಿದ್ದಾಗಲೇ... ಆಪ್ತಗೀತ ಹೇಗೆ ಸಾಧ್ಯವಾಯಿತು? ಜನಪ್ರಿಯತೆ ನನ್ನ ಅಂತರಂಗದ ಏಕಾಗ್ರತೆಯನ್ನು ಎಂದೂ ಕದಡಲಿಲ್ಲ.

ಲಕ್ಷ್ಮಣರಾವ್‌: ಪರಂಪರೆಯಲ್ಲಿ ಆಳವಾಗಿ ಬೇರೂರಿದ ಕವಿ ನೀವು. ಇವತ್ತಿನ ಕವಿಗಳಲ್ಲಿ ಪರಂಪರೆಯ ಅಗತ್ಯವೇ ಇಲ್ಲ ಅನ್ನುವ ಭಾವನೆ ಇದೆಯಲ್ಲಾ.. ಅದಕ್ಕೇನು ಕಾರಣ?

ಎಚ್‌ಎಸ್‌ವಿ: ಇದರಲ್ಲಿ ಹಿರಿಯರ ಜವಾಬ್ದಾರಿಯೂ ಇದೆ. ಇವತ್ತಿನ ತರುಣರಿಗೆ ನಾವು ಯಾವ ಮಾದರಿಗಳನ್ನು ಹಾಕಿಕೊಡ್ತೀವಿ? ಹಳೆಗನ್ನಡದ ದೊಡ್ಡ ಕವಿಗಳನ್ನು ಪರಿಚಯ ಮಾಡಿ. ಓದಿಲ್ಲ ಅನ್ನೋದು ಒಂದು. ಆದರೆ ಅವರಲ್ಲಿ ಆಸಕ್ತಿ ಹುಟ್ಟಿಸಿದರೆ ಒಳ್ಳೆಯದು. ನಡೆದುಬಂದ ದಾರಿ ತಿರುಗಿ ನೋಡುವುದನ್ನು ಕಲಿಸಬೇಕು. ಇದನ್ನು ಇವತ್ತಿನ ಹೆಸರಾಂತ ಕವಿಗಳು ಅದನ್ನು ಮಾಡಬೇಕು.

ನನ್ನ ಇತಿಮಿತಿಯಲ್ಲಿ ಆ ಕೆಲಸ ಮಾಡಿದ್ದೇನೆ. ತರಗತಿಯಲ್ಲಿ ಪಾಠ ಮಾಡೋದು. ಸೈಂಟ್ ಜೋಸೆಫ್ಸ್‌ನಲ್ಲಿ ಇಂಗ್ಲಿಷ್ ವಾತಾವರಣದಲ್ಲಿ ಪಾಠ ಮಾಡುತ್ತಲೇ ನಾನು ಕನ್ನಡ ಸಂಘ ಮಾಡಿದ್ದು. ಪ್ರಾಚಾರ್ಯರೂ ಕನ್ನಡದಲ್ಲಿ ಭಾಷಣ ಮಾಡುವಂತೆ ಮಾಡಿದೆ. 30 ವರ್ಷದ ನನ್ನ ವೃತ್ತಿಯಲ್ಲಿ ನನ್ನ ದೊಡ್ಡ ಸಾಧನೆ ಇದು. ನಾನು ಎಷ್ಟು ಒಳ್ಳೆಯ ಕವಿ ಎನ್ನುವುದನ್ನು ವಿಮರ್ಶಕರು, ಸಹೃದಯಿಗಳು ಹೇಳ್ತಾರೆ. ಆದರೆ, ನಾನು ಒಳ್ಳೆಯ ಮೇಷ್ಟ್ರು ಎನ್ನುವುದನ್ನು ನಮ್ಮ ಹುಡುಗರು ಸಾರಿ ಸಾರಿ ಹೇಳಿದ್ದಾರೆ. 40 ವರ್ಷಗಳ ಹಿಂದಿನ ವಿದ್ಯಾರ್ಥಿಗಳೂ ಇವತ್ತು ನನ್ನ ಜೊತೆಗೇ ಇದ್ದಾರೆ.

*ನಿಮ್ಮ ಪೀಳಿಗೆಯ ಅಧ್ಯಾಪಕರು ಪರಂಪರೆಯ ಸೂಕ್ಷ್ಮಗಳನ್ನು ತಿಳಿಸಿದ್ದೀರಿ ನಿಜ. ಆದರೆ, ಇವತ್ತು ಪರಂಪರೆಯ ವ್ಯಾಖ್ಯಾನವೇ ಬೇರೆ ಆಗುತ್ತಿರುವಂತಹ ಸಂದರ್ಭದಲ್ಲಿ ನಾವಿದ್ದೇವಲ್ಲ?

ಎಚ್‌ಎಸ್‌ವಿ: ನೀವು ಯಾವ ದೃಷ್ಟಿಯಿಂದ ನೋಡಿದರೂ ಅವನು ಮಹತ್ವದ ಕವಿಯಾಗಿದ್ದರೆ ಎಲ್ಲ ಕಾಲಕ್ಕೂ ಸಲ್ಲುವಂತಿರುತ್ತಾನೆ. ಕೆಲವರು ಒಂದು ಧರ್ಮಕ್ಕೆ ಕಟ್ಟುಬಿದ್ದು ಬರೆಯಬಹುದು. ಪಂಪ ಹಾಗೆ ತನ್ನನ್ನು ಕಟ್ಟಿಕೊಳ್ಳಲಿಲ್ಲ. ಜೈನ ಕವಿಯಾದರೂ ಜೈನ ಧರ್ಮದ ಆಶಯಗಳನ್ನು ಮೀರಿದ ಅನೇಕ ಸಂಗತಿಗಳನ್ನು ಬರೆಯುತ್ತಾನೆ. ಹಳೆಯದನ್ನು ಹೊಸದು ಮಾಡಿಕೊಳ್ಳುವ ಒಳ್ಳೆಯ ಉಪಾಯ ಎಂದರೆ ಅದನ್ನು ವರ್ತಮಾನಕ್ಕೆ ಜೋಡಿಸುವುದು. ಪಂಪ, ಕುಮಾರವ್ಯಾಸ, ವಚನಕಾರರು ಇವತ್ತೂ ಬರಬೇಕು. ಕುಮಾರವ್ಯಾಸ ಎಲ್ಲ ಪಾತ್ರಗಳಲ್ಲೂ ಮನುಷ್ಯನ ಘನತೆಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಾನೆ. ಅವನು ಯಾವ ಧರ್ಮವನ್ನು ಒಪ್ಪಿಕೊಂಡಿದ್ದಾನೋ ಆ ಧರ್ಮ ಹೇಳುವ ಮೌಲ್ಯಗಳನ್ನೂ ಮೀರುವುದು ಅವನಿಗೆ ಸಾಧ್ಯವಾಗಿದೆ. ಒಬ್ಬ ಲೇಖಕನಿಗೆ ಹೀಗೆ ದಾಟುವುದು ಸಾಧ್ಯವಾಗಬೇಕು.

*ಈಗ ಮತ್ತೆ ರಾಜಾಶ್ರಯದ ಪ್ರಶ್ನೆ ಬಂದಿದೆ. ಈಗಿನ ರಾಜಾಶ್ರಯ ಅಂದರೆ ಸರ್ಕಾರ, ಸಾಹಿತಿಗಳು ನಮಗೆ ಇಷ್ಟವಾದದ್ದನ್ನೇ ಹೇಳಬೇಕು.. ನಾವು ಇಷ್ಟಪಟ್ಟವರನ್ನೇ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಪರಿಸ್ಥಿತಿ ಬಂದಿದೆಯಲ್ಲ..

ಎಚ್‌ಎಸ್‌ವಿ: ‘ಏಳು ಜನ ಖಳರು’ ಎನ್ನುವುದು ನಿಜವಾದ ಮೆಟಫರ್. ನಿಜವಾದ ಲೇಖಕ ತನ್ನ ಅಂತರಂಗದ ಮಾತು ಕೇಳುತ್ತಾನೆ. ಆನು ಒಲಿದಂತೆ ಹಾಡುವೆ... ಇದು ಕನ್ನಡದ ಧ್ಯೇಯವಾಕ್ಯ. ನನಗೆ ಇಷ್ಟವಾದದ್ದನ್ನು ನಾನು ಹೇಳ್ತೇನೆ. ಸಮರ್ಥ ಲೇಖಕರು ಇದನ್ನು ಮಾಡಿಕೊಂಡೇ ಬಂದಿದ್ದಾರೆ.

*ಸ್ಪಷ್ಟವಾಗಿಯೇ ಹೇಳಬೇಕೆಂದರೆ ಮೊನ್ನೆ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಆಳುವವರ ಅವಕೃಪೆಯಿಂದಾಗಿ ಒಂದೇ ದಿನಕ್ಕೆ ಮೊಟಕುಗೊಂಡಿತು. ನಮ್ಮ ಇಷ್ಟದ ಅಧ್ಯಕ್ಷರು ಇಲ್ಲ ಎನ್ನುವ ಕಾರಣಕ್ಕಾಗಿ ಸರ್ಕಾರ ಅನುದಾನ ತಡೆಹಿಡಿಯಿತು. ನೀವು ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ..

ಎಚ್‌ಎಸ್‌ವಿ: ಒಂದು ಸಂಗತಿ ಅನ್ನುವುದು ನನಗಿಂತ ದೂರದಲ್ಲಿ ಆಗಿರುವುದು. ಅದರ ಪೂರ್ವಪಕ್ಷ ಪ್ರತಿಪಕ್ಷ ಯಾವುದೂ ನನಗೆ ಸ್ಪಷ್ಟವಿಲ್ಲ. ಲೋಕಸಮ್ಮತ ಮಾತುಗಳನ್ನು ಸುಲಭವಾಗಿ ಹೇಳಬಹುದು. ಆದರೆ ಹಾಗೆ ಹೇಳಲು, ಪೊಲಿಟಿಕಲಿ ಕರೆಕ್ಟ್ ಆಗಿರಲು ನಾನು ಯಾವತ್ತೂ ಪ್ರಯತ್ನಿಸಿಲ್ಲ. ಎಡ-ಬಲ, ತತ್ವವಿಚಾರ, ಸ್ತ್ರೀ–ಪುರುಷ ವಾದವಾಗಿರಲಿ ಯಾವುದಕ್ಕೂ ಸಂಪೂರ್ಣ ತನ್ನನ್ನು ಒಪ್ಪಿಸಿಕೊಳ್ಳುವುದನ್ನು ಪಂಪನೂ ಮಾಡಲಿಲ್ಲ, ಕುಮಾರವ್ಯಾಸನೂ ಮಾಡಲಿಲ್ಲ.

*ನೀವು ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. ಈ ವಿಷಯದಲ್ಲಿ ನಿಮ್ಮ ಮಾರ್ಗದರ್ಶನದ ಅಗತ್ಯವಿದೆ ಎಂದು ಸಾಹಿತ್ಯಾಸಕ್ತರು ನಿರೀಕ್ಷಿಸುತ್ತಾರೆ. ಕೆಲವರಿಗೆ ನಿಮ್ಮ ನಿಲುವು ಏನು ಎನ್ನುವ ಕುತೂಹಲವೂ ಇದೆ...

ಎಚ್‌ಎಸ್‌ವಿ: ನಾನು ಮಾರ್ಗದರ್ಶನ ಮಾಡುವ ಒಬ್ಬ ವ್ಯಕ್ತಿಯಾಗಲು ಸಾಧ್ಯವಿಲ್ಲ. ನಾನು ಮಾರ್ಗವನ್ನು ಕಂಡುಕೊಳ್ಳುವಂತಹ ಮಾರ್ಗಾನ್ವೇಷಕ ಕವಿ. ಕವಿಗಳೆಲ್ಲ ಹೆಚ್ಚುಕಡಿಮೆ ಹಾಗೇನೇ. ತೀರ್ಮಾನವನ್ನು ಹೇಳುವವರಲ್ಲ. ಮಾನವೀಯತೆಯ ನೆಲೆಯಲ್ಲಿ ಸಮಸ್ಯೆಯನ್ನು ಹುಡುಕಿಕೊಂಡು ಹೋಗುವವರು. ಇದಮಿತ್ಥಂ ಎಂದು ಋಷಿಯಂತೆ ಹೇಳುವುದಿಲ್ಲ. ಋಷಿಯ ಪಟ್ಟ ನನಗೆ ಬೇಡ. ನಾನು ಹೇಳಬೇಕಾದ ಅತ್ಯಂತ ಮುಖ್ಯವಾದ ಮಾತುಗಳನ್ನು ನಾನು ಭಾಷಣದಲ್ಲಿ ಹೇಳಲು ಸಾಧ್ಯವಾಗಲ್ಲ. ಹರಟೆ ಹೊಡೆಯುವಾಗ ಏನನ್ನೂ ಮಾತನಾಡಬಹುದು. ಆದರೆ, ಕುಳಿತು ಸ್ಪಷ್ಟವಾಗಿ ಯೋಚಿಸಿ ಚಿಂತಿಸಿ ಬರೆದಾಗ ಮಾತ್ರ ಅದಕ್ಕೆ ಎಲ್ಲವನ್ನೂ ಒಳಗೊಳ್ಳುವ ಸಾಮರ್ಥ್ಯ ಬರುತ್ತದೆ.

ಸುಲಭವಾಗಿ ತೀರ್ಮಾನಕ್ಕೆ ಬರುವುದು ನನ್ನ ಸ್ವಭಾವವೂ ಅಲ್ಲ. 40 ವರ್ಷಗಳಿಂದ ನಾನು ಬರೆದುಕೊಂಡು ಬಂದಿದ್ದೇನೆ. ಯಾವತ್ತೂ ಬಹಿರಂಗದ ಸಂಗತಿಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ. ಕೆಲವು ಸಂಗತಿಗಳು ನನ್ನ ಅಂತರಂಗದ ಮೇಲೆ ಆಘಾತ ಮಾಡುತ್ತೆ, ಕಲಕುತ್ತೆ. ಆದರೆ ನಾನು ತಿಳಿಯುವುದಕ್ಕೆ ಕಾಯುತ್ತೇನೆ. ತಿಳಿವು ಎನ್ನುವುದಕ್ಕೆ ಎರಡು ಅರ್ಥಗಳಿವೆ. ಸಾವಧಾನದ ಮನಸ್ಸು ನನ್ನದು. ಕಠೋರವಾದ ಗಟ್ಟಿಯಾದ ಮಾತುಗಳಿಗಿಂತ ಮೃದುವಾದ ಮಾತುಗಳಿಗೆ ಹೆಚ್ಚು ಶಕ್ತಿ ಇದೆ ಎಂದು ನಂಬಿದವನು ನಾನು. ಕಾಂತಾಸಂಹಿತಾ.. ಎನ್ನುವ ತತ್ವವೇ ಇದೆ. ಸಾಹಿತ್ಯ ಎನ್ನುವುದು ಗುಂಪಿಗೆ ಹೇಳುವ ಮಾತಲ್ಲ. ಒಬ್ಬ ರಾಜಕಾರಣಿಗೆ ಸಮೂಹ ಮುಖ್ಯ. ಅವನಿಗೆ ಎಷ್ಟು ಜನ ಬಂದಿದ್ದಾರೆ ಎನ್ನುವುದು ಮುಖ್ಯ. ಒಬ್ಬ ಕವಿ ಎಷ್ಟುಜನ ರಸಿಕರಿದ್ದಾರೆ ಎಂದು ನೋಡ್ತಾನೆ. ನಾನು ಏಕಾಂತದವನು. ಗುಂಪಿಗೆ ಮುಖ ಮಾಡಿ ಮಾತನಾಡಲಾಗಲ್ಲ.

*ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಮ್ಮ ಮುಂದೆ ದೊಡ್ಡ ಜನಸಮೂಹವೇ ನೆರೆಯುತ್ತದಲ್ಲ. ಕಲಬುರ್ಗಿಯಲ್ಲಿ ಲೋಕಾಂತಕ್ಕೆ ಮುಖ ಮಾಡಿ ಮಾತನಾಡುವ ಪ್ರಸಂಗ ಈಗ ಬಂದಿದೆಯಲ್ಲ.. ಜನ ನಿಮ್ಮಿಂದ ಭಾಷಣವನ್ನು ನಿರೀಕ್ಷಿಸುತ್ತಾರೆ...

ಎಚ್‌ಎಸ್‌ವಿ: ಗುಂಪು ಯಾವತ್ತೂ ತನಗೆ ಬೇಕಾದ ಮಾತುಗಳನ್ನೇ ಬಯಸುತ್ತದೆ. ಸಾವಿರಾರು ಜನರು ಸೇರಿದಾಗ ನನ್ನ ಮಾತಿನ ಶೈಲಿ ಯಾವ ರೀತಿ ಇರಬೇಕು ಎನ್ನುವುದನ್ನು ನಾನು ಯೋಚಿಸಿದ್ದೇನೆ. ರೂಪಕದ ಭಾಷೆಯಲ್ಲಿ ಹೇಳಬೇಕೆಂದರೆ, ಹಕ್ಕಿಯ ಹಾಗೆ ಕೆಲವೊಮ್ಮೆ ರೆಕ್ಕೆ ಬಡಿಯುವುದು, ಕೆಲವೊಮ್ಮೆ ಹಾಗೆಯೇ ರೆಕ್ಕೆ ಬಿಚ್ಚಿ ಹಾರುವುದು. ಸಮುದಾಯವನ್ನು ಉದ್ದೇಶಿಸಿ ಮಾತನಾಡುವುದು, ಇದಕ್ಕಿದ್ದ ಹಾಗೆ ಅಂತರ್ಮುಖಿಯಾಗಿ ಮಾತನಾಡುವುದು. ಸ್ವಗತ ಮತ್ತು ಬಹಿರ್ಗತ. ಎರಡನ್ನೂ ಮಿಶ್ರ ಮಾಡುವ ಚಂಪೂಶೈಲಿಯನ್ನು ನನ್ನದಾಗಿಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ನನ್ನ ಭಾಷಣವನ್ನು ಸಿದ್ಧಪಡಿಸಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT