ಗುರುವಾರ , ನವೆಂಬರ್ 26, 2020
21 °C
ಮಲೆನಾಡಿನ ಭಾಗದಲ್ಲಿನ ಜನಪದ ಸಂಪ್ರದಾಯ ಅಂಟಿಗೆ–ಪಂಟಿಗೆ ಸುತ್ತ

PV Web Exclusive: ‘ದೀಪ್‌ ದೀಪ್‌ ಏಳ್ಗ್ಯೋ..’ ಪರಸ್ಪರ ಬಾಳ್ಗ್ಯೋ

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

Prajavani

‘ದೀಪ್‌ ದೀಪ್‌ ಏಳ್ಗ್ಯೋ..’ ಎಂದು ಜೋರಾಗಿ ಕೂಗಿಕೊಂಡು 10–15 ಜನರು ಇರುವ ತಂಡ ರಸ್ತೆಯಲ್ಲಿ ಬರುತ್ತಿದ್ದರೆ, ಊರಿನ ಮನೆಮಂದಿ ಎಲ್ಲರೂ ದೀಪವನ್ನು ಬರಮಾಡಿಕೊಳ್ಳಲು ತಯಾರಾಗುತ್ತಾರೆ. ಮಲೆನಾಡಿನ ಭಾಗದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಜನಪದ ಸಂಪ್ರದಾಯವನ್ನು ನಡೆಸಲಾಗುತ್ತದೆ. ಹಬ್ಬಹಾಡು, ಅಂಟಿಗೆ–ಪಂಟಿಗೆ ಎಂಬಿತ್ಯಾದಿ ಆಗಿ ಇದನ್ನು ಕರೆಯುತ್ತಾರೆ. ಹಸಲರು, ದೀವರ ಸಮುದಾಯದವರೇ ಹೆಚ್ಚಾಗಿ ತಂಡಕಟ್ಟಿಕೊಂಡು ಹಾಡುವುದು ರೂಢಿ. ಆದರೆ, ಕಾಲಾಂತರದಲ್ಲಿ ಬ್ರಾಹ್ಮಣ ಸಮುದಾಯದವರೂ ಸಹ ತಂಡ ಕಟ್ಟಿಕೊಂಡು, ಹಾಡು ಕಲಿತು ಈ ಆಚರಣೆಯನ್ನು ಮಾಡುತ್ತಿದ್ದಾರೆ.

ಊರಿನ ದೇವಸ್ಥಾನದ ದೀಪವನ್ನು ಹಚ್ಚಿಕೊಂಡು ಹಬ್ಬಹಾಡುವ ತಂಡದವರು ಊರಿನ ಮನೆ ಮನೆಗಳಿಗೆ ಹೋಗಿ, ದೀಪ ‘ಅಂಟಿಸಿ’ ಬರುತ್ತಾರೆ. ಮನೆಯವರು ದವಸ ಧಾನ್ಯ, ಹಬ್ಬಕ್ಕೆ ಮಾಡಿದ ಕಡುಬು, ಸಿಹಿತಿಂಡಿಗಳನ್ನು ನೀಡಿ, ತಂಡದವರ ಬಳಿ ಇನ್ನಷ್ಟು ಹಾಡಿ ಹೇಳಿಸಿಕೊಂಡು ಬೀಳ್ಕೊಡುತ್ತಾರೆ. ಮನೆ ಮನೆಯಲ್ಲಿ ಕೊಟ್ಟ ವಸ್ತುಗಳನ್ನು ಹೊರುವುದಕ್ಕೇ 4–5 ಜನ ತಂಡದಲ್ಲಿ ಇರುತ್ತಾರೆ. ಹೀಗೆ ಕೊಟ್ಟ ವಸ್ತುಗಳನ್ನು ಮೊದಲೆಲ್ಲ ತಂಡದವರೇ ಹಂಚಿಕೊಳ್ಳುತ್ತಿದ್ದರು. ಈಗ ದವಸ ಧಾನ್ಯಗಳನ್ನು ಊರಿನ ದೇವಸ್ಥಾನಕ್ಕೆ ನೀಡಿ, ಸಂತರ್ಪಣೆ ಹೊತ್ತಿನಲ್ಲಿ ಈ ಧಾನ್ಯಗಳನ್ನೂ ಬಳಸಿಕೊಳ್ಳಲಾಗುತ್ತದೆ.

ದೀಪ ಹೊತ್ತುಕೊಂಡು ಬರುವ ತಂಡದವರು ದೀಪ ಆರದಂತೆ ನೋಡಿಕೊಳ್ಳಬೇಕು. ಒಮ್ಮೆ ದೇವಸ್ಥಾನದಿಂದ ದೀಪ ಹಚ್ಚಿಸಿಕೊಂಡು ಹೊರಟರೆ ಊರ ಮನೆಗೆಲ್ಲ ಹೋಗಿ ಮತ್ತೆ ವಾಪಸು ದೇವಸ್ಥಾನಕ್ಕೆ ಬಂದು ಆ ದೀಪವನ್ನು ಇಡಬೇಕು, ಅಲ್ಲಿಗೆ ಸಮಾಪ್ತಿ. ದೀಪಾವಳಿ(ಪಾಡ್ಯದಿಂದ) ಹಬ್ಬದ ಮೂರು ರಾತ್ರಿಗಳಲ್ಲಿ ಹೀಗೆ ಮನೆ ಮನೆಗೆ ಹಾಡು ಹೇಳಿಕೊಂಡು, ದೀಪ ಹಿಡಿದು ಹೊರಡುತ್ತಾರೆ. ಸಂಪ್ರದಾಯದಂತೆ, ಮನೆಯವರು ಮಲಗಿದ ಮೇಲೆ ಈ ತಂಡದವರು ಹಾಡು ಹೇಳಿಕೊಂಡು ಹೊರಡುತ್ತಾರೆ. ಹಾಡು ಹೇಳಿಕೊಂಡೇ ಬರುವುದರಿಂದ ಬಂದದ್ದು ಊರಿನ ಮನೆಯವರಿಗೆಲ್ಲಾ ತಿಳಿಯುತ್ತದೆ. ಆದರೆ, ತಂಡದವರು ತಮ್ಮ ಮನೆಗೆ ಬಂದೊಡನೆ ಬಾಗಿಲು ತೆರೆಯುವ ಹಾಗಿಲ್ಲ. ತಂಡದವರು ಬಾಗಿಲು ತೆರೆಯುವಂತೆ ಹಾಡಬೇಕು. ನಂತರವೇ ಬಾಗಿಲು ತೆರೆಯುವುದು.

ದೀಪ ಹಚ್ಚುವುದು, ಎಣ್ಣೆ ಹೊಯ್ಯುವುದು, ಗರತಿ ಬರುವುದು, ಹೀಗೆ ಎಲ್ಲವಕ್ಕೂ ಒಂದೊಂದು ಹಾಡು, ಒಂದೊಂದು ಪದ. ಕೆಲವು ಹಿರಿಯರು ಅಲ್ಲೇ ಪದಕಟ್ಟಿ ಹಾಡುತ್ತಾರೆ. ನಂತರ ಮುಂದಿನ ಮನೆ. ಹೀಗೆ ರಾತ್ರಿ 9 ಗಂಟೆ ಸುಮಾರಿಗೆ ಹೊರಟ ಪ್ರಯಾಣ ಬೆಳಿಗ್ಗೆ 6ರ ಸುಮಾರಿಗೆ ಮತ್ತೆ ದೇವಸ್ಥಾನಕ್ಕೆ ಬಂದು ತಲುಪುತ್ತದೆ. ಹೀಗೆ ಮೂರು ರಾತ್ರಿ ನಡೆಯುತ್ತದೆ.‌ ಇದು ಹಬ್ಬಹಾಡುವ ಸಂಪ್ರದಾಯದ ಸ್ಥೂಲ ಚಿತ್ರಣ.

ಈ ರೀತಿಯ ಎಲ್ಲ ಆಚರಣೆಗಳು, ಸಂಪ್ರದಾಯಗಳು ವಿಶಿಷ್ಟವೇ ಆಗಿರುತ್ತವೆ. ಎಲ್ಲ ಜಾತಿ ಧರ್ಮದ, ವರ್ಗದ ಇಂಥ ಆಚರಣೆಗಳನ್ನು ಮೂಲಭೂತವಾದದ ‘ಸಂಸ್ಕೃತಿ ರಕ್ಷಣೆಯ’ ಚೌಕಟ್ಟಿಗೆ ಸಿಲುಕಿಸದೇ, ಅದರ ಒಡಲಿನಲ್ಲಿರುವ ಸೌಹಾರ್ದ, ಬಾಂಧವ್ಯವನ್ನು ಅರಿಯುವ ಮತ್ತು ರೂಢಿಸಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಿದೆ.

ಅಂಟಿಗೆ–ಪಂಟಿಗೆಯನ್ನೇ ಗಮನಿಸುವುದಾದರೆ, ಕೊನೇಪಕ್ಷ ಮೂರು ದಿನಗಳ ಕಾಲವಾದರೂ, ಜಾತಿಯಲ್ಲಿ ಮೇಲು ಕೀಳು, ಶ್ರೀಮಂತ–ಬಡವ ಎನ್ನುವ ತರತಮಗಳನ್ನು ಬಿಟ್ಟು ಎಲ್ಲರೂ ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ತಂಡದವರು ತಂದ ದೀಪಕ್ಕೆ ಎಣ್ಣೆ ಕಮ್ಮಿ ಆಗಿದ್ದರೆ, ಮನೆಯವರು ಅದಕ್ಕೆ ಎಣ್ಣೆ ಹಾಕಬೇಕು. ಹೀಗೆ ಪ್ರತೀ ಮನೆಯಲ್ಲೂ ಎಣ್ಣೆ ಹಾಕುತ್ತಾರೆ. ಅದರ ಮೂಲಕ ಇನ್ನೊಬ್ಬರ ಮನೆ ದೀಪ ಬೆಳಗುತ್ತದೆ. ‘ದೀಪ’ದ ಮೂಲಕ ಪಡೆದುಕೊಡುವ ಕ್ರಿಯೇ ನಡೆಯುತ್ತದೆ. ಇದೇ ಒಂದು ರೂಪಕದಂತೆ ಭಾಸವಾಗುತ್ತದೆ.

ಮನೆಯವರೊಂದಿಗೆ ಹಬ್ಬಹಾಡುವವರು ಹಾಡಿನ ಮೂಲಕವೇ ಮಾತುಕತೆ ನಡೆಸುತ್ತಾರೆ. ಇನ್ನೂ ನಾಲ್ಕು ಕಡುಬು ಕೊಡಿ ಎಂದು ಕೇಳುತ್ತಾರೆ, ತಮಾಷೆ, ಹೊಸದಾಗಿ ಮದುವೆ ಆದವರು ಇದ್ದರೆ ಅವರನ್ನು ಚುಡಾಯಿಸುವುದು. ಒಟ್ಟಿನಲ್ಲಿ ಹಾಡಿನ ಮೂಲಕ ನಮ್ಮ ತಲೆಯೊಳಗಿನ ಎಲ್ಲ ತಾರತಮ್ಯದ ಭಾವವನ್ನು ಮರೆಯಿಸುವ ಪ್ರಕ್ರಿಯೆ ಇಂಥ ಆಚರಣೆಗಳಿಂದ ಸಾಧ್ಯವಾಗುತ್ತದೆ. ಅವು ನಮ್ಮ ಸಂಸ್ಕೃತಿ ಅಂತಲೋ, ಅದು ಅವಸಾನದಲ್ಲಿದೆ, ಅದರ ರಕ್ಷಣೆಗೆ ಟೊಂಕಕಟ್ಟಿ ನಿಲ್ಲಬೇಕು ಅಂತಲೋ ವೀರಾವೇಷದಿಂದ ಹೋರಾಡಬೇಕು ಅಂತಲೋ ಇವನ್ನು ಉಳಿಸಿಕೊಳ್ಳಬೇಕಾಗಿಲ್ಲ. ಇಂಥ ಸಂಪ್ರದಾಯಗಳು ತನ್ನಲ್ಲಿ ಇರಿಸಿಕೊಂಡಿರುವ ಜೀವನ ಪ್ರೀತಿ ದೃಷ್ಟಿಯಿಂದ ಇವನ್ನು ಉಳಿಸಿಕೊಳ್ಳಬೇಕಾಗಿದೆ. ಅದಕ್ಕೆ ಹೋರಾಟಬೇಕಿಲ್ಲ ಆಚರಣೆ ಸಾಕು.

‘ಇಂಥ ಸಂಪ್ರದಾಯವೆಲ್ಲ ನಮ್ಮ ಕಾಲಕ್ಕೆ ಮುಗಿಯುತ್ತವೇನೋ ಎನ್ನಿಸುತ್ತದೆ. ಈಗಿನ ಮಕ್ಕಳಿಗೆ ಇಂಥ ಹಾಡುಗಳನ್ನು ಕಲಿಯುವ ತಾಳ್ಮೆ ಇಲ್ಲ. ಹಾಗಂತ ಆಸಕ್ತಿ ಇಲ್ಲ ಅಂತಲ್ಲ; ಇದೆ. ನಮ್ಮ ಕಾಲದಲ್ಲಿ ಒಂದೊಂದು ಊರಿಗೆ 5–6 ತಂಡಗಳು ಇರುತ್ತಿದ್ದವು. ಈಗ ಒಂದು ಇದ್ದರೆ ಹೆಚ್ಚು. ಅವರೂ ಸಹ ನಮ್ಮ ರೀತಿ ಪದಕಟ್ಟಿ ಹಾಡುವವರಲ್ಲ. ನಮಗೆಲ್ಲಾ ಕನಿಷ್ಟ ಅಂದರೂ ನೂರಾರು ಲೆಕ್ಕದಲ್ಲಿ ಹಾಡುಗಳು ಬಾಯಲ್ಲೇ ಇದ್ದವು. 10–20 ಸೊಲ್ಲಿನ ಪದ್ಯಗಳು. ಈಗ ನಮ್ಮ ಹುಡುಗರು 2–3 ಸೊಲ್ಲಿನಲ್ಲಿ ಮುಗಿಸಿಬಿಡುತ್ತಾರೆ. ಅದೊಂದು ಸಂಪ್ರದಾಯ ಮಾಡಬೇಕು, ಆದ್ದರಿಂದ ಮಾಡುವುದು ಎನ್ನುವ ರೀತಿಯಲ್ಲಿ ಈಗಿನ ಹುಡುಗರು ಮುಂದುವರೆಸುತ್ತಿದ್ದಾರೆ ಅಷ್ಟೆ’ ಎನ್ನುತ್ತಾರೆ ಅಂಟಿಗೆ–ಪಂಟಿಗೆ ಹಾಡುತ್ತಿದ್ದ ಸಾಗರ ತಾಲ್ಲುಕಿನ ಬಿಲ್ಗೋಡಿಯ ಎಂಭತ್ತು ವರ್ಷದ ಗುಂಡಾ ನಾಯ್ಕ.

ಜಾತ್ರೆಗಳು, ಈ ರೀತಿಯ ಜಾನಪದ ಕಲೆಗಳು, ಕೆಲವು ಆಚರಣೆಗಳನ್ನು ನಮ್ಮ ಹಿರಿಯರು ತುಂಬು ಜೀವನಪ್ರೀತಿಯಿಂದ ನಮಗಾಗಿ ಕೊಟ್ಟಿದ್ದಾರೆ. ಇದರಿಂದಲೇ ಜಾತಿ, ವರ್ಗ ವಿನಾಶವಾಗುತ್ತದೆ, ಸಮ ಸಮಾಜ ನಿರ್ಮಾಣವಾಗುತ್ತದೆ ಎನ್ನುವ ಮೊಂಡು ವಾದ ಇಲ್ಲ. ಆದರೆ, ಇವುಗಳಿಂದ ಖಂಡಿತವಾಗಿಯೂ ಸಮಾಜದಲ್ಲಿ ಒಂದು ಸಮತೋಲನವನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ. ನಮ್ಮ ನಮ್ಮಗಳ ನಡುವಿನ ವಿಶ್ವಾಸ, ಪ್ರೀತಿ, ನಂಬಿಕೆಗಳನ್ನು ಉಳಿಸಿಕೊಳ್ಳುವಲ್ಲಿ ಸಹಕಾರಿ ಆಗುತ್ತದೆ. ಎಲ್ಲರನ್ನೂ ಒಳಗೊಳ್ಳುತ್ತದೆ. ಇಂಥ ಸಂಪ್ರದಾಯಗಳು ಹಾಡಿನ ಮೂಲಕವೋ ನೃತ್ಯದ ಮೂಲಕವೋ ನಮಗೆ ಮನೊರಂಜನೆ ನೀಡುತ್ತವೆ; ಅಂತೆಯೇ ಸಮುದಾಯಗಳ ನಡುವಿನ ಸದ್ಭಾವಕ್ಕೂ ಪ್ರೇರಣೆ ಆಗುತ್ತವೆ. ಆದ್ದರಿಂದ ಇಂಥವುಗಳು ನಮ್ಮ ನಡುವೆ ಉಳಿದುಕೊಳ್ಳಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು