ಮಂಗಳವಾರ, ಜನವರಿ 21, 2020
20 °C
‘ಟೀಚಿಂಗ್‌ ಬ್ರಶ್‌’ನಿಂದ ಶಾಲೆಗಳಾಗಿವೆ ಫ್ರೆಶ್‌ !

ಕಲಿಕೆಯ ಹಂಬಲಕ್ಕೆ ಕುಂಚದ ಬೆಂಬಲ

ಸುಮನಾ ಕೆ. Updated:

ಅಕ್ಷರ ಗಾತ್ರ : | |

ಹಾಗೇ ಸುಮ್ಮನೆ ಸರ್ಕಾರಿ ಶಾಲೆಗೊಂದು ಸುತ್ತು ಹಾಕಿಕೊಂಡು ಬರೋಣ ಎಂದು ಹೊರಟ ಮಕ್ಕಳ ಗುಂಪಿಗೆ ಆ ಶಾಲೆಯ ಸ್ಥಿತಿ ನೋಡಿ ಅಚ್ಚರಿಯಾಯ್ತು. ತಾವು ಕಲಿಯುತ್ತಿರುವ ಶಾಲೆಯಲ್ಲಿರುವ ಹೊಳಪು ಇಲ್ಯಾಕೆ ಇಲ್ಲ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತು. ಏನಾದರೂ ಮಾಡಬೇಕು ಎಂದು ಅಂದುಕೊಂಡ ಅವರಿಗೆ ಮೊದಲು ಕಂಡಿದ್ದು ಶಾಲೆಯ ಗೋಡೆಗಳು.

ಸುಣ್ಣ ಮಾಸಿ ಬಳಲಿದಂತಿದ್ದ ಆ ಗೋಡೆಗಳನ್ನೇ ತಮ್ಮ ಪ್ರಯೋಗದ ಮೊದಲ ಕ್ಯಾನ್ವಾಸ್ ಆಗಿಸಿಕೊಳ್ಳಲು ನಿರ್ಧರಿಸಿದರು. ಚಿಣ್ಣರ ಮನಸ್ಸಿನಲ್ಲಿ ಅಂದು ಹುಟ್ಟಿಕೊಂಡ ಆ ಕಳಕಳಿಯ ಪರಿಣಾಮವಾಗಿ ಕೆಲವೇ ದಿನಗಳಲ್ಲಿ ಆ ಸರ್ಕಾರಿ ಶಾಲೆಯ ಗೋಡೆ ಸುಣ್ಣ ಬಣ್ಣಗಳಿಂದ ನಳನಳಿಸಿದವು. ಬರೀ ಬಣ್ಣ ಬಳಿಯುವುದಷ್ಟೇ ಅಲ್ಲ, ಮಕ್ಕಳ ಶಿಕ್ಷಣಕ್ಕೆ, ಸೃಜನಶೀಲತೆಯ ವಿಸ್ತರಣೆಗೆ ಅನುಕೂಲವಾಗುವ ರೀತಿಯಲ್ಲಿ ಪಠ್ಯಕ್ಕೆ ಸಂಬಂಧಿಸಿದ ಹಲವು ಕಲಾಕೃತಿಗಳು ಅಲ್ಲಿ ಒಡಮೂಡಿದವು.

ಅದು ಆರಂಭವಷ್ಟೇ. ಅಂದು ಇಟ್ಟ ಆ ಮಕ್ಕಳ ಮೊದಲ ಹೆಜ್ಜೆ ಇಂದು ಹಲವಾಗಿವೆ. ಐದಾರು ಸರ್ಕಾರಿ ಶಾಲೆಗಳು ಈ ಚಿಣ್ಣರ ಕಾಳಜಿಯಲ್ಲಿ ಹೊಳೆಯತೊಡಗಿವೆ.  ಈಗ ಅವರು ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಸರ್ಕಾರಿ ಶಾಲೆಯ ಗೋಡೆಗಳಲ್ಲಿ ನಾನಾ ಬಗೆಯ ಪಠ್ಯಕ್ಕೆ ಸಂಬಂಧಿಸಿದ ಚಿತ್ರ, ಕಲಾಕೃತಿಗಳನ್ನು ಬಿಡಿಸುವ ಈ ಅಭಿಯಾನಕ್ಕೆ ‘ಟೀಚಿಂಗ್‌ ಬ್ರಶ್‌’ ಎಂದು ಹೆಸರು ಕೊಟ್ಟುಕೊಂಡಿದ್ದಾರೆ.

ಕೈಜೋಡಿಸಿದ ಗೆಳೆಯರು
ಇದು ಇನ್ನೂ 12ನೇ ತರಗತಿಯಲ್ಲಿ ಓದುತ್ತಿರುವ ಯುವ ಮತ್ತು ಕ್ರಿಯಾಶೀಲ ಮನಸ್ಸುಗಳ ತಂಡ. ಸರ್ಜಾಪುರದ ಗ್ರೀನ್‌ಹುಡ್‌ ಹೈ ಇಂಟರ್‌ನ್ಯಾಷನಲ್‌ ಶಾಲೆಯ ವಿದ್ಯಾರ್ಥಿ ಅಂಕಿತ್‌ ರಾಟಕೊಂಡ ಹಾಗೂ ಸಮಾನ ಮನಸ್ಕ ಗೆಳೆಯರ ತಂಡ ಈ ಕೆಲಸ ಮಾಡುತ್ತಿದೆ. ಚಿತ್ರ, ಕಲಾಕೃತಿಗಳ ಮೂಲಕ  ಸರ್ಕಾರಿ ಶಾಲೆಯ ಮಕ್ಕಳಲ್ಲೂ ಚಿತ್ರಕಲೆ, ಗಣಿತ, ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳಲ್ಲೂ ಕಲೆಗೆ ಬಗ್ಗೆ ಆಸಕ್ತಿ ಮೂಡಿಸುವುದು ಹಾಗೂ ಖುಷಿಖುಷಿಯಾಗಿ ಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ.

ವಾರಾಂತ್ಯಗಳಲ್ಲಿ ನಗರದ ಯಾವುದಾದರೊಂದು ಶಾಲೆಯನ್ನು ಆಯ್ಕೆ ಮಾಡಿಕೊಂಡು, ಒಪ್ಪಿಗೆ ಪಡೆದು ಅಲ್ಲಿನ ಗೋಡೆಗಳನ್ನು ಕಲಾಕೃತಿಗಳಿಂದ ಅಲಂಕರಿಸುತ್ತಾರೆ. ಇವರು ಪಠ್ಯಕ್ಕೆ ಸಂಬಂಧಿಸಿದ ಸೌರಗ್ರಹ, ಗ್ರಹಗಳ ಚಲನೆ, ಮಳೆ, ರಸಾಯನ ವಿಜ್ಞಾನ ಸಂಬಂಧಿಸಿದ ಪ್ರಯೋಗಗಳ ಚಿತ್ರಗಳನ್ನು ಗೋಡೆ ಮೇಲೆ ಬಿಡಿಸುತ್ತಾರೆ. ಅಂಕಿತ್‌ ಅವರೊಂದಿಗೆ ಮೇಘಾ ಶಾಸ್ತ್ರಿ, ಆಯುಷ್‌ ಸಿಂಗ್‌, ನೇಹಾ ಹೀಗೆ 10–12 ವಿದ್ಯಾರ್ಥಿಗಳು ಜತೆಗೂಡಿದ್ದಾರೆ.

 ನೀರಿನ ಪುನರ್ಬಳಕೆ, ತ್ಯಾಜ್ಯ ಸಂಸ್ಕರಣೆ ಕುರಿತ ಚಿತ್ರಗಳನ್ನು ಬಿಡಿಸಿ, ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಮಕ್ಕಳ ಈ ಕಾರ್ಯಕ್ಕೆ ರೋಟರಿ ಸಂಸ್ಥೆ ನೆರವು ನೀಡಿದೆ. ಚಿತ್ರಕಲೆಗೆ ಅಗತ್ಯವಾದ ಬ್ರಶ್‌, ಬಣ್ಣ ಹಾಗೂ ಇನ್ನಿತರ ಪರಿಕರಗಳನ್ನು ರೋಟರಿ ಒದಗಿಸುತ್ತದೆ.

ಕಲೆ ಮೂಲಕ ಗಣಿತ, ವಿಜ್ಞಾನ
ಟೀಚಿಂಗ್‌ ಬ್ರಶ್‌ ತಂಡವು ಸರ್ಕಾರಿ ಶಾಲೆಗಳಲ್ಲಿ ಶನಿವಾರ, ಭಾನುವಾರ ಅಲ್ಲಿನ ಮಕ್ಕಳಿಗೆ ಆಟ, ಪ್ರಯೋಗಗಳ ಮೂಲಕ ಗಣಿತ, ವಿಜ್ಞಾನವನ್ನು ಹೇಳಿಕೊಡುತ್ತದೆ. ತಮಗೆ ಲಭ್ಯವಾಗುವ ವಸ್ತು, ಪರಿಕರಗಳನ್ನು ಬಳಸಿಕೊಂಡು ಪ್ರಯೋಗಗಳ ಮೂಲಕ ಕಲಿಸುತ್ತದೆ. ಹಾಗೇ ಗಣಿತವನ್ನೂ ಸರಳ ಲೆಕ್ಕಗಳ ಮೂಲಕ ತಿಳಿಸಿಕೊಡುವ ಪ್ರಯತ್ನ ಮಾಡುತ್ತದೆ. ಗಣಿತ ಹಾಗೂ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸಿ, ಮಕ್ಕಳನ್ನು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ‘ಚಿತ್ರಕಲೆ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಆ ಕಲೆಯನ್ನು ವಿಭಿನ್ನವಾಗಿ ಬಳಸಿಕೊಳ್ಳಬೇಕು ಎಂಬ ಇಚ್ಛೆಯಿತ್ತು. ಸರ್ಕಾರಿ ಶಾಲೆಗಳಲ್ಲಿ ಕಲೆಗೆ ಪ್ರೋತ್ಸಾಹ ಕಡಿಮೆ. ಹಾಗೇ ಕೆಲ ಶಾಲೆಗಳಲ್ಲಿ ಅಧ್ಯಾಪಕರ ಕೊರತೆ, ಪ್ರಯೋಗಾಲಯಗಳ ಕೊರತೆ ಇದೆ. ಇದರಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಗುಹೋಗುಗಳ ಬಗ್ಗೆ ಜ್ಞಾನ ಕಡಿಮೆ ಎಂಬುದು ಅನೇಕ ಶಾಲಾ ಕಾರ್ಯಕ್ರಮಗಳು ಹಾಗೂ ವಿಜ್ಞಾನ, ಗಣಿತ ಸಂಬಂಧಿತ ಕಾರ್ಯಕ್ರಮಗಳಲ್ಲಿ ಅರಿವಿಗೆ ಬಂತು. ಆಗ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನೂ ಜೊತೆ ಸೇರಿಸಿಕೊಂಡು, ಕಲೆ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ‘ಟೀಚಿಂಗ್‌ ಬ್ರಶ್‌’ ಕಾರ್ಯಕ್ರಮ ಆರಂಭಿಸಿದೆವು’ ಎಂದು ಹೇಳುತ್ತಾನೆ ತಂಡದ ನೇತೃತ್ವ ವಹಿಸಿಕೊಂಡ ಅಂಕಿತ್‌ ರಾಟಕೊಂಡ.

ಐದಾರು ಶಾಲೆ ಅಂದಗಾಣಿಸಿದ ಎಳೆಯರ ತಂಡ
‘ಟೀಚಿಂಗ್‌ ಬ್ರಶ್‌’ ತಂಡ ಇಮ್ಮಡಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ, ಇಮ್ಮಡಿಹಳ್ಳಿ ಹೈಸ್ಕೂಲ್‌, ಸರ್ಕಾರಿ ಸಿಂಧಿ ಮಾಡೆಲ್‌ ಪ್ರಾಥಮಿಕ ಶಾಲೆ, ಗುಂಜೂರ್‌ ಸರ್ಕಾರಿ ಶಾಲೆ ಸೇರಿದಂತೆ ಐದಾರು ಶಾಲೆಗಳ ಗೋಡೆಗಳನ್ನು ಚಿತ್ರಗಳಿಂದ ಅಂದಗಾಣಿಸಿದೆ.

ಎಲ್ಲಾ ಸಮಯದಲ್ಲೂ ಮಕ್ಕಳಿಗೂ ಕಾಣುವಂತೆ ಇರುವ ಸ್ಥಳಗಳಲ್ಲಿ ಈ ತಂಡ ಚಿತ್ರ ಕಲಾಕೃತಿಗಳನ್ನು ಬಿಡಿಸುತ್ತದೆ. ಇದು ಆಗಾಗ್ಗೆ ಮಕ್ಕಳ ಕಣ್ಣಿಗೆ ಕಾಣುವುದರಿಂದ ಅವರಿಗೆ ಬೇಗ ವಿಷಯ ಮನದಟ್ಟಾಗುತ್ತದೆ. 

*
ಮಕ್ಕಳನ್ನು ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು ಈಗ ತುಂಬಾ ಮುಖ್ಯ. ಇದರಿಂದ ಅವರಿಗೆ ಸಮಾಜದಲ್ಲಿ ಬೆರೆಯಲು ಅವಕಾಶ ಸಿಕ್ಕಂತಾಗುತ್ತದೆ. ಬೇರೆ ವಿದ್ಯಾರ್ಥಿಗಳಿಗೆ ಈ ತಂಡ ಮಾದರಿ.
-ನೀರೂ ಅಗರ್‌ವಾಲ್‌, ಗ್ರೀನ್‌ಹುಡ್‌ ಹೈ ಇಂಟರ್‌ನ್ಯಾಷನಲ್‌ ಶಾಲೆಯ ಟ್ರಸ್ಟಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು