ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜ್ಜೆ ಉಳಿಸಿಹೋದ ‘ರಂಗ ರಾಕ್ಷಸ’

Last Updated 17 ಜುಲೈ 2021, 19:30 IST
ಅಕ್ಷರ ಗಾತ್ರ

ರಂಗಸ್ಥಳದಲ್ಲಿ ಮಿಂಚಿ ರಾತ್ರಿಯೆಲ್ಲಾ ನಿದ್ದೆಗೆಡಿಸಿದ್ದ ‘ರಾಕ್ಷಸ’ ಸಂಪಾಜೆ ಶೀನಪ್ಪ ರೈ. ರಾಕ್ಷಸನೂ ಪ್ರೇಕ್ಷಕನ ಕಣ್ಣಲ್ಲಿ ಕಾಡುವ ಪ್ರಧಾನ ಪಾತ್ರವಾಗಿ ಗೋಚರಿಸುವಂತೆ ರೂಪಿಸಿದ ಶಕ್ತಿ ಅವರದ್ದು. ಅಂಥ ‘ರಂಗ ರಾಕ್ಷಸ’ ಅಬ್ಬರ ಮುಗಿಸಿ ಸದ್ದಿಲ್ಲದೇ ಗೆಜ್ಜೆ ಬಿಚ್ಚಿಟ್ಟು ಇಹದ ಹೆಜ್ಜೆ ಮುಗಿಸಿದ್ದಾರೆ. ರಂಗಸ್ಥಳದ ರಾಕ್ಷಸನ ಜಾಗ ಖಾಲಿಯಾಗಿದೆ. ಯಕ್ಷ ಲೋಕದ ದೇವೇಂದ್ರ, ಅರ್ಜುನ, ಭೀಮ, ತಾಮ್ರಧ್ವಜರೂ... ಮೌನವಾಗಿದ್ದಾರೆ.

ಸಂಪಾಜೆ ಶೀನಪ್ಪ ರೈ – ತೆಂಕುತಿಟ್ಟು ಯಕ್ಷಗಾನದ ಕಲಾವಿದ. ವಿವಿಧ ಮೇಳಗಳಲ್ಲಿ ಆರು ದಶಕಕ್ಕೂ ಮಿಕ್ಕಿದ ವ್ಯವಸಾಯ. ಸುಳ್ಯ ತಾಲ್ಲೂಕು ಸಂಪಾಜೆ ಕೀಲಾರು-ಮದೇಪಾಲು ಹುಟ್ಟೂರು. 1943ರಲ್ಲಿ ಜನನ. ತಂದೆ ರಾಮಣ್ಣ ರೈ. ತಾಯಿ ಕಾವೇರಿ ರೈ. ಓದಿದ್ದು ನಾಲ್ಕನೇ ತರಗತಿ. ದಿ.ಕುಂಬಳೆ ಕಣ್ಣನ್ ಅವರಿಂದ ನಾಟ್ಯಾಭ್ಯಾಸ. ಅರ್ಥಗಾರಿಕೆಗೆ ತಂದೆ ಗುರು. ಮಾ. ಕೇಶವರಿಂದ ಭರತನಾಟ್ಯಾಭ್ಯಾಸ. ಬಣ್ಣದ ಕುಟ್ಯಪ್ಪು ಅವರಿಂದ ಬಣ್ಣಗಾರಿಕೆಯ ಕಲಿಕೆ. ಹದಿಮೂರನೇ ವರುಷದಲ್ಲಿ ರಂಗಪ್ರವೇಶ. ಬಹುಶಃ ಸಂಪಾಜೆಯವರನ್ನು ಓರ್ವ ವ್ಯಕ್ತಿಯಾಗಿ ಪರಿಚಯಿಸಲು ಇಷ್ಟು ಬಯೋಡೇಟಾ ಸಾಕಾಗಬಹುದು.

ಕಲಾವಿದನೂ ಓರ್ವ ವ್ಯಕ್ತಿ. ಆ ವ್ಯಕ್ತಿಯೊಳಗೆ ವೃತ್ತಿಬದ್ಧತೆಯು ಸಾಧನೆಯ ರೂಪದಲ್ಲಿ ಅವಿತುಕೊಂಡಿರುತ್ತದೆ. ಅದು ರಂಗದಲ್ಲಿ ಅನಾವರಣಗೊಂಡಾಗ ವಿಸ್ಮಯದಂತೆ ಗೋಚರವಾಗುತ್ತದೆ. ಶೀನಪ್ಪ ರೈಗಳ ಹೆಸರನ್ನು ನೆನಪಿಸಿಕೊಂಡರೆ ಅವರು ಕಡೆದ ಪಾತ್ರಶಿಲ್ಪಗಳೆಲ್ಲವೂ ಕಣ್ಣೆದುರು ಹೆಜ್ಜೆ ಹಾಕುತ್ತವೆ. ಅವುಗಳು ‘ವಿಸ್ಮಯ’ವನ್ನು ಸೃಷ್ಟಿಸಿದ ದಿನಮಾನಗಳಿದ್ದುವು. ಈಗದು ಇತಿಹಾಸ. 2021 ಜುಲೈ 13ರಂದು ಶೀನಪ್ಪ ರೈಗಳು (78) ವಿಧಿವಶರಾದರು.

ಎಪ್ಪತ್ತೆಂಟರಲ್ಲಿ ಅರುವತ್ತಕ್ಕೂ ಮಿಕ್ಕಿದ ವರುಷಗಳನ್ನು ರಂಗದಲ್ಲಿ ಕಳೆದರು. ಯಕ್ಷರಾತ್ರಿಗಳು ಅವರ ನಿದ್ದೆಗೆಡಿಸಲಿಲ್ಲ! ಕೃಷಿಯೊಂದಿಗೆ ಯಕ್ಷಗಾನ ಹೊಟ್ಟೆಪಾಡಿನ ಕ್ಷೇತ್ರವಾದರೂ ಪೂರ್ಣ ತೃಪ್ತಿಯಿಂದ ಇಷ್ಟು ದೀರ್ಘಕಾಲ ವ್ಯವಸಾಯ ಮಾಡಿದವರಲ್ಲಿ ಮೊದಲಿಗರೆಂದರೆ ಅತಿಶಯ ಅಲ್ಲ. ಅರುವತ್ತು-ಎಪ್ಪತ್ತರ ಕಾಲಘಟ್ಟದ ಮಹಾನ್ ಕಲಾವಿದರ ಗರಡಿಯಲ್ಲಿ ಪಳಗಿದ್ದರು. ಐದಾರು ದಶಕಗಳ ಕಲಾಯಾನದ ಕೊಂಡಿಯಾಗಿ, ಆಗಿನ ಜ್ಞಾನವನ್ನೂ ಈಗಿನದನ್ನೂ ಮಿಳಿತಗೊಳಿಸುತ್ತಾ ಇಳಿ ವಯಸ್ಸಿನವರೆಗೂ ರಂಗಕಸುಬನ್ನು ನಿರ್ವಹಿಸುತ್ತಾ ಬಂದಿದ್ದರು.

ಮೂರು ದಶಕಗಳ ಹಿಂದೆ ‘ಹಿರಣ್ಯಾಕ್ಷ ವಧೆ’ ಪ್ರಸಂಗದ ಜೋಡಾಟ ನೋಡಿದ ನೆನಪಿನ್ನೂ ಹಸಿಯಾಗಿದೆ. ಒಂದು ರಂಗದಲ್ಲಿ ಸಂಪಾಜೆಯವರ ಹಿರಣ್ಯಾಕ್ಷ, ಇನ್ನೊಂದರಲ್ಲಿ ಸೂರಿಕುಮೇರು ಗೋವಿಂದ ಭಟ್. ಇಬ್ಬರೂ ಸರಿಸಮಾನರು. ಇಬ್ಬರ ನಡೆಯಲ್ಲೂ ಎರಕ. ಶಾರೀರದಲ್ಲೂ ಪೈಪೋಟಿ. ರಂಗಚಲನೆಯಲ್ಲಿ ಸ್ಪರ್ಧೆ. ಎರಡೂ ಪಾತ್ರಗಳು ಒಂದೇ ಸರಳರೇಖೆಯಲ್ಲಿ ಓಡಾಡಿದ ಅನುಭವ. ಜೋಡಾಟ ಮುಗಿದ ಬಳಿಕ ಎರಡೂ ಪಾತ್ರಗಳು ಪ್ರೇಕ್ಷಕರನ್ನು ಹಿಡಿದಿಟ್ಟಿದ್ದುವು. ಪಾತ್ರ ಪರಿಣಾಮದ ಕುರಿತು ಎಚ್ಚರ ಮತ್ತು ಪಾತ್ರಗಳು ಎಲ್ಲೂ ಸೋಲಬಾರದೆನ್ನುವ ಬೌದ್ಧಿಕ ಪಕ್ವತೆ ಇಬ್ಬರಲ್ಲೂ ಇದ್ದುವು. ಹಾಗಾಗಿ ಕಾಲು ಶತಮಾನದ ಬಳಿಕವೂ ಆ ಪ್ರದರ್ಶನವು ನೆನಪಿನಿಂದ ಮಾಸಿಲ್ಲ.

ಇರಾ ಸೋಮನಾಥೇಶ್ವರ ಮೇಳದಿಂದ(ಕುಂಡಾವು ಮೇಳ) ಗೆಜ್ಜೆಯ ಹೆಜ್ಜೆಗೆ ಶ್ರೀಕಾರ. ಹನುಮಗಿರಿ ಶ್ರೀಕೋದಂಡರಾಮ ಮೇಳದಲ್ಲಿ ಗೆಜ್ಜೆ ಬಿಚ್ಚಿದರು. ಈ ಎರಡು ವೃತ್ತಿ ಧ್ರುವಗಳ ಮಧ್ಯೆ ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ, ಕಟೀಲು, ಎಡನೀರು, ಹೊಸನಗರ ಮೇಳಗಳಲ್ಲಿ ವ್ಯವಸಾಯ ಪೂರೈಸಿದ ಶೀನಪ್ಪ ರೈಗಳು ಕಟೀಲು ಮೇಳವೊಂದರಲ್ಲೇ ಮೂವತ್ತಮೂರು ವರ್ಷ ದೀರ್ಘ ದುಡಿದರು.

ಒಂದು ಕಾಲಘಟ್ಟದ ರಂಗದಲ್ಲಿ ಹಿರಣ್ಯಾಕ್ಷ, ಇಂದ್ರಜಿತು, ರಕ್ತಬೀಜ, ಭಾನುಗೋಪ, ಕಾರ್ತವೀರ್ಯ, ಅರುಣಾಸುರ’ ಪಾತ್ರಾಭಿವ್ಯಕ್ತಿಗಳು ವಿಸ್ಮಯ! ಪಾತ್ರಗಳ ಜೀವನಾಡಿಯ ಸ್ಪಷ್ಟತೆಯ ಅರಿವು, ಯಕ್ಷಗಾನದ ಚೌಕಟ್ಟು ಹಾಗೂ ನಡೆಯ ಎಚ್ಚರ, ಪಾತ್ರವೊಂದರ ಪ್ರವೇಶದ ನಂತರದ ಒಂದೊಂದು ಸನ್ನಿವೇಶದಲ್ಲೂ ಏರಿಕೊಂಡು ಹೋಗುವ ಅಭಿವ್ಯಕ್ತಿ ವ್ಯತ್ಯಾಸಗಳು, ರಾಕ್ಷಸ ಪಾತ್ರಗಳ ವ್ಯಕ್ತಿತ್ವಗಳ ಅನಾವರಣವನ್ನು ರೈಗಳ ಪಾತ್ರ ನಿರ್ವಹಣೆಯಲ್ಲಿ ಕಾಣಬಹುದು.

ದೇವೇಂದ್ರ, ಅರ್ಜುನ, ಕರ್ಣ, ದಕ್ಷ, ಕೌಂಡ್ಲಿಕ, ಭಾನುಗೋಪ, ಶಿಶುಪಾಲ, ಭೀಮ, ವೀರಮಣಿ, ತಾಮ್ರಧ್ವಜ, ಮಕರಾಕ್ಷ.. ಪಾತ್ರಗಳಲ್ಲಿ ಸ್ವಂತಿಕೆಯ ಸಂಪನ್ಮೂಲಗಳಿದ್ದುವು.

ಎಲ್ಲಾ ವಿಧದ ಕಿರೀಟ ವೇಷಗಳನ್ನು ಪಾತ್ರದ ಸ್ವಭಾವದಂತೆ ಚಿತ್ರಿಸುವುದು ವಿಶೇಷ. ಹೆಚ್ಚು ರಂಗಜಾಣ್ಮೆ ಬೇಕಾದ ಕಿರಾತಾರ್ಜುನ ಪ್ರಸಂಗದ ಅರ್ಜುನ, ತಾಮ್ರಧ್ವಜ ಕಾಳಗದ ತಾಮ್ರಧ್ವಜ.. ಮೊದಲಾದುವು ಅನನ್ಯ. ಸಹ ಕಲಾವಿದರು ಹೊಂತಕಾರಿಗಳಾದರೆ ಅವರ ರಂಗಕ್ರಿಯೆಗೆ ತೊಡಕಾಗದಂತೆ ಎಚ್ಚರ. ಕೆಲವೊಮ್ಮೆ ಅಂತಹ ಸಂದರ್ಭ ಬಂದಾಗ ಅವರ ವಯಸ್ಸು ಹಿಂದಕ್ಕೋಡುತ್ತಿತ್ತು. ಪಾತ್ರ ಪ್ರವೇಶದಲ್ಲೇ ಅನಾವರಣಗೊಳ್ಳುವ ಗಂಡುಗತ್ತಿನ ಹೆಜ್ಜೆಗಳು. ಪಾತ್ರವಾಗಿ ತಾನೇನು ಮಾಡುತ್ತೇನೆ ಮತ್ತು ತಾನೇನು ಮಾಡಬೇಕು ಎಂಬ ಎಚ್ಚರ ಅವರಿಗೆ ತಾರಾಮೌಲ್ಯ ತಂದು ಕೊಟ್ಟಿತು.

ಎಪ್ಪತ್ತೈದು ವರುಷದ ತನಕವೂ ಶೀನಪ್ಪರು ವೇಷ ಹಾಕಿದ್ದಾರೆ. ಕೊನೆ ಕೊನೆಗೆ ಹನುಮಗಿರಿ ಮೇಳದಲ್ಲಿ ಹೆಚ್ಚು ತನುಶ್ರಮವಿಲ್ಲದ ಪಾತ್ರಗಳನ್ನು ಮಾಡುತ್ತಿದ್ದರು. ಇವರ ವಯೋಸಹಜ ಅಶಕ್ತಿ ಹಾಗೂ ಅಭಿಮಾನದಿಂದ ಮೇಳದ ಯಜಮಾನರು ಅವಕಾಶ ನೀಡಿದ್ದರು. ಚಿಕ್ಕ ಪಾತ್ರವಾದರೂ ತಿರುಗಾಟದ ಪಕ್ವತೆಯು ರಂಗಚಲನೆಯಲ್ಲಿ ಗೋಚರವಾಗುತ್ತಿತ್ತು. ಮೊದಲಿನ ಹೊಂತಕಾರಿ ಬಲುಮೆ ಇಲ್ಲದಿದ್ದರೂ ಪಾತ್ರಸ್ವಭಾವ, ಅಭಿವ್ಯಕ್ತಿಯಲ್ಲಿ ಹೊಂತಕಾರಿ ಭಾವ ಇಣುಕುತ್ತಲೇ ಇರುತ್ತಿತ್ತು. ಅವರು ಮೂಡಿಸಿದ ಗತ್ತುಗಳಲ್ಲಿ ಏರು ಜವ್ವನವನ್ನು ಕಾಣಬಹುದಾಗಿತ್ತು.

<em><strong>-ನಾ. ಕಾರಂತ ಪೆರಾಜೆ</strong></em>
-ನಾ. ಕಾರಂತ ಪೆರಾಜೆ

ಮುಖ್ಯವಾಗಿ ಗಮನಿಸಬೇಕಾದ್ದು ಅವರಲ್ಲಿ ಪ್ರತ್ಯೇಕ ಗುಣವಾಗಿ ಎದ್ದುಕಾಣುವ ಸಜ್ಜನಿಕೆ, ಸರಳತೆ. ಬಾಗುವ ಗುಣ. ಬೀಗದ ವ್ಯಕ್ತಿತ್ವ. ಕಲಾವಿದರನೇಕರಲ್ಲಿ ಇನ್ನೂ ಪಕ್ವಗೊಳ್ಳಬೇಕಾದ ಈ ಎರಡು ಗುಣಗಳು ಶೀನಪ್ಪ ರೈಗಳಲ್ಲಿ ಸ್ವಭಾವವಾಗಿ ಎತ್ತರಕ್ಕೇರಿಸಿವೆ. ಮಾತನಾಡುವ ವ್ಯಕ್ತಿ ಮತ್ತು ತಾನು ಮಾನಸಿಕವಾಗಿ ಎಷ್ಟು ಅಂತರದಲ್ಲಿರಬೇಕು ಎನ್ನುವ ಮಾಪಕ ಇದೆಯಲ್ಲಾ ಅದು ಬದುಕು ಕಲಿಸಿದ ಬದುಕಿನ ಪಾಠ. ‘ವಿದ್ಯೆಗೆ ವಿನಯವೇ ಭೂಷಣ’ - ಹಿರಿಯರ ಮಾತು ರೈಗಳಲ್ಲಿ ಸಾಕಾರಗೊಂಡಿತ್ತು.

ಶೀನಪ್ಪ ರೈಗಳ ರಂಗಕಸುಬಿನುದ್ದಕ್ಕೂ ಪ್ರೇಕ್ಷಕರನ್ನು ಮೆಚ್ಚಿಸುವ ‘ಗಿಮಿಕ್’ಗಳಿದ್ದಿರಲಿಲ್ಲ. ಹಿಂದೊಮ್ಮೆ ಅವರನ್ನು ಪ್ರಶ್ನಿಸಿದ್ದೆ. ‘ನಿಮ್ಮ ಪಾತ್ರಗಳಲ್ಲಿ ಯಾಕೆ ಗಿಮಿಕ್‌ಗಳಿಲ್ಲ?’ ಅದಕ್ಕವರು, ‘ಗಿಮಿಕ್ ಮಾಡಲು ಯಕ್ಷಗಾನ ಯಾಕೆ. ಸರ್ಕಸ್ ಕಂಪೆನಿ ಇಲ್ವಾ. ಅದೂ ಕಲೆಯಲ್ವಾ. ಕಲೆಗೆ ಗೌರವ ಕೊಡುವುದನ್ನು ಕಲಾವಿದ ಮೊದಲು ರೂಢಿಸಿಕೊಳ್ಳಬೇಕು. ಮತ್ತೆಲ್ಲಾ ನಂತರ’ ಎಂದು ಖಡಕ್ಕಾಗಿ ಉತ್ತರಿಸಿದ್ದರು. ಆ ಪ್ರಶ್ನೆಯು ಸ್ವಲ್ಪ ಹೊತ್ತು ಅವರ ಚಿತ್ತವನ್ನು ಕದಡಿತ್ತು. ‘ಯಕ್ಷಗಾನದಲ್ಲಿ ಗಿಮಿಕ್‌ಗಳಿಲ್ಲ. ಪಾತ್ರಕ್ಕೆ ಸೀಮಿತವಾದ ನಡೆಯಿದೆ. ಅದೇ ಯಕ್ಷಗಾನ. ಅದರಲ್ಲಿ ಸಾಧನೆ ತೋರಿಸಿ. ಅದು ಕಲಾವಿದನಾದವನು ಯಕ್ಷಗಾನಕ್ಕೆ ಸಲ್ಲಿಸುವ ಗೌರವ’ ಎಂದು ಹೇಳಿದ್ದರು.

‘ಯಕ್ಷಗಾನ ರಂಗದಲ್ಲಿ ನನ್ನ ಬೆಳವಣಿಗೆಯ ಯಶಸ್ಸು ಕೀರ್ತಿಶೇಷ ಕೀಲಾರು ಗೋಪಾಲಕೃಷ್ಣಯ್ಯರಿಗೆ ಸಲ್ಲಬೇಕು. ಮಗುವಿನಂತೆ ನೋಡಿಕೊಂಡಿದ್ದಾರೆ. ನನ್ನ ಏಳ್ಗೆಯ ಶಿಲ್ಪಿ ಅವರು’ ಎಂದು ವಿನೀತವಾಗಿ ಒಮ್ಮೆ ಹೇಳಿಕೊಂಡಿದ್ದರು. ಸಾಗಿ ಬಂದ ಪಥವನ್ನು ಮರೆಯದ ಸಜ್ಜನಿಕೆಯು ಅವರಲ್ಲಿ ವಿನೀತತೆಯನ್ನು ಹುಟ್ಟು ಹಾಕಿತ್ತು. ಅಹಂಕಾರವನ್ನು ಹೊಸಕಿ ಹಾಕಿತ್ತು. ಸಮಾಜ, ಕಲೆ ಮತ್ತು ಇವುಗಳಿಂದ ನಾವು ಪಡೆದ ಸಂಸ್ಕಾರ – ಇವಿಷ್ಟು ವ್ಯಕ್ತಿಯೊಬ್ಬನ ಉತ್ಕರ್ಷಕ್ಕೆ ಸಹಕಾರಿಯಾಗುತ್ತವೆ. ಮಡದಿ ಗಿರಿಜಾವತಿ. ಜಯರಾಮ, ರೇವತಿ, ರಾಜು ಮಕ್ಕಳು. ಬದುಕಿನ ಉತ್ತರಾರ್ಧದಲ್ಲಿ ಸುರತ್ಕಲ್ಲಿನಲ್ಲಿ ನೆಲೆಸಿದ್ದರು. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಬಹುತೇಕ ಪ್ರತಿಷ್ಠಿತ ಪ್ರಶಸ್ತಿಗಳಿಂದ ಪುರಸ್ಕೃತರು. ವ್ಯಕ್ತಿಯಾಗಿಯೂ, ಯಕ್ಷಗಾನ ಕಲಾವಿದನಾಗಿಯೂ ಬಹುಮಾನ್ಯರಾಗಿದ್ದ ಶೀನಪ್ಪ ರೈಗಳಿಗೆ ಅಕ್ಷರ ನಮನ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT