ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟಿ... ಕನ್ನಡದ ಭಾವ ಮೀಟಿ

Last Updated 16 ಜನವರಿ 2021, 19:30 IST
ಅಕ್ಷರ ಗಾತ್ರ

ನಿಸರ್ಗ ದೇವತೆಯೇ ಧರೆಗಿಳಿದುಬಂದು ಇಲ್ಲಿ ನೆಲೆಸಿಹಳೇನೋ ಎಂಬಂತೆ ಕಂಗೊಳಿಸುವ ಈ ಊರಿಗೆ ಉದಗೈ, ಉದಕಮಂಡಲ ಮತ್ತು ಊಟಿ ಎಂಬ ಹೆಸರುಗಳಿವೆ. ಊಟಿ ಎಂಬ ಹೆಸರಿನ ಕುರಿತು ಅನೇಕ ಕಥೆಗಳಿವೆ.

ಇಲ್ಲಿಯ ಮೂಲನಿವಾಸಿಗಳಾದ ತೋಡರ ಭಾಷೆಯಲ್ಲಿ ಗ್ರಾಮಕ್ಕೆ ‘ಮಂಡ್’ ಎಂದು ಹೆಸರು. ಬಹಳ ಹಿಂದೆಯೇ ಇಲ್ಲಿಗೆ ಬ್ರಿಟಿಷರು ಬಂದು ತಳವೂರಿದ ಸಮಯದಲ್ಲಿ ತನ್ನ ಗ್ರಾಮವೊಂದನ್ನು ಅವರಿಗೆ ಹಣಕ್ಕಾಗಿ ಮಾರಿಕೊಂಡ ತೋಡನೊಬ್ಬ ‘ಐ ಟೇಕ್ಡ್‌ ಮನಿ, ಯೂ ಟೇಕ್ಡ್‌ ಮಂಡ್’ ಅಂದನಂತೆ. ಈ ಮಂಡ್‍ಗಳ ಗುಂಪು ಊಟಕ್‍ಮಂಡ್ ಅಂತ ಆಗಿ, ಬರುಬರುತ್ತಾ ಉದಕಮಂಡಲ ಅಂತ ಆಯಿತಂತೆ. ಈ ಊಟಕ್‍ಮಂಡ್ ಮುಂದೆ ಊಟಿ ಅಂತ ಆಗಿರಬಹುದು. ಹಾಗಂತ ಊಟಿಯ ಚರಿತ್ರೆಯನ್ನು ಶೋಧಿಸಿದ ಸರ್ ಫ್ರೆಡ್ರಿಕ್ ಪ್ರೈಸ್ ಬರೆದಿದ್ದಾರೆ.

ಬ್ರಿಟಿಷರು ಭಾರತಕ್ಕೆ ಬಂದು, ಸಾಹಸ ಜೀವಿಯಾಗಿದ್ದ ಮದ್ರಾಸ್ ಪ್ರಾಂತ್ಯದ ಅಂದಿನ ಗವರ್ನರ್ ಜಾನ್ ಸುಲಿವನ್ ಅವರ ಕಣ್ಣಿಗೆ ಈ ಪ್ರದೇಶ ಬೀಳದಿದ್ದಿದ್ದರೆ ಬಹುಶಃ ಇಂದಿಗೂ ಊಟಿ ಬೆಟ್ಟಗುಡ್ಡಗಳಿಂದ ಆವೃತವಾದ ಕಾಡಾಗಿರುತ್ತಿತ್ತೇನೋ. ಇಂಗ್ಲಿಷರು ಇಲ್ಲಿಗೆ ಪ್ರವೇಶಿಸುವ ಮುನ್ನ, ಗಿರಿಜನರಾದ ತೋಡರು, ಶೋಲಾ ನಾಯಕರು, ಇರುಂಬರು, ಕೋಟ ಮತ್ತು ಕಣಿ ಜನಾಂಗದವರು ವಾಸಿಸುತ್ತಿದ್ದರು.

ಸಮುದ್ರ ಮಟ್ಟದಿಂದ ಸುಮಾರು 7350 ಅಡಿ ಎತ್ತರದಲ್ಲಿರುವ ಈ ಪ್ರದೇಶ ಅರ್ಧ ಚಂದ್ರಾಕಾರದಲ್ಲಿದ್ದು, ಇಲ್ಲಿ ಜಾನ್ ಸುಲಿವನ್ 1823ರಲ್ಲಿ ಹಿಲ್‌ ಸ್ಟೇಷನ್‌ (ಗಿರಿಧಾಮ) ಸ್ಥಾಪಿಸಿದರು. ಬ್ರಿಟಿಷರು ಅಲ್ಲಿಯ ಮೂಲ ನಿವಾಸಿಗಳಾದ ತೋಡರು ಮತ್ತು ಶೋಲರನ್ನು ದುಡಿಸಿಕೊಂಡು ಕಾಡನ್ನು ಕಡಿದು, ಮುಂದೆ ಬೆಟ್ಟಗುಡ್ಡಗಳ ವಿಹಂಗಮ ನೋಟವಿರುವ ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿಕೊಂಡರು. ಅವರೇ ಹೆಸರಿಟ್ಟ ವೆಲ್ಲಿಂಗ್ಟನ್ ಎಂಬಲ್ಲಿ ದಂಡು ಪ್ರದೇಶ ನಿರ್ಮಿಸಿದರು. ತೋಟಕೋವಿಗಳಿಗೆ ಉಪಯೋಗಿಸುವ ತೋಟ ತಯಾರಿಸುವ ಕಾರ್ಖಾನೆ ಮತ್ತು ನೀಡಲ್ ಫ್ಯಾಕ್ಟರಿ ಕಟ್ಟಿದರು. ಇಂದಿಗೂ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಕೃತಕ ಸರೋವರವನ್ನು ನಿರ್ಮಿಸಿದರು.

ಊಟಿಯ ಅಂದವನ್ನು ಹೆಚ್ಚಿಸಿದ ಸೇಂಟ್ ಸ್ಟೀಫನ್ ಚರ್ಚ್, ಹೋಲಿ ಟ್ರಿನಿಟಿ ಚರ್ಚ್, ಸೇಕ್ರೆಡ್ ಹಾರ್ಟ್ ಚರ್ಚ್, ಸೇಂಟ್ ಥೆರೇಸಾ ಚರ್ಚ್, ಸೇಂಟ್ ಮೇರಿಸ್ ಚರ್ಚ್‌ ಕಟ್ಟಿದರು. ಇಂಗ್ಲಿಷ್ ಮಿಷನರಿಗಳನ್ನು ಸ್ಥಾಪಿಸಿ ಸ್ಥಳೀಯರಿಗೂ ಒಳ್ಳೆಯ ವಿದ್ಯಾಭ್ಯಾಸ ಸಿಗುವಂತೆ ನೋಡಿಕೊಂಡರು. ಅಲ್ಲಿ ರೇಸ್ ಕೋರ್ಸ್ ಮತ್ತು ಗಾಲ್ಫ್ ಕ್ಲಬ್‍ಗಳನ್ನು ಕಟ್ಟಿಕೊಂಡು, ಕುದುರೆ ಸವಾರಿ, ಶಿಕಾರಿ, ಮೋಜು ಮಸ್ತಿ ಮಾಡಿಕೊಂಡು ನಾವೆಲ್ಲ ಊಹಿಸಲಾರದಷ್ಟು ಸುಖವನ್ನು ಅಲ್ಲಿ ಬ್ರಿಟಿಷರು ಸೂರೆಗೈದರು. ಇಡೀ ಜಿಲ್ಲೆಯ ಗುಡ್ಡಗಾಡು ಪ್ರದೇಶಕ್ಕೆ 1850ರ ಹೊತ್ತಿಗೆ ಆಸ್ಟ್ರೇಲಿಯಾ ಮೂಲದ ನೀಲಗಿರಿ ಮತ್ತು ಸಿಲ್ವರ್ ಮರಗಳನ್ನು ತಂದು ನೆಟ್ಟರು. ಹತ್ತಾರು ಎಕರೆ ಪ್ರದೇಶಗಳಲ್ಲಿ ಕಣ್ಮನ ಸೆಳೆಯುವ ಬಟಾನಿಕಲ್ ಮತ್ತು ರೋಜ್ ಗಾರ್ಡನ್‍ಗಳನ್ನು ನಿರ್ಮಿಸಿದರು.

ಊಟಿಯಲ್ಲಿ ನಿರ್ಮಾಣಗೊಂಡಿರುವ ಕರ್ನಾಟಕ ಕಲಾ ಸಿರಿ ಉದ್ಯಾನ
ಊಟಿಯಲ್ಲಿ ನಿರ್ಮಾಣಗೊಂಡಿರುವ ಕರ್ನಾಟಕ ಕಲಾ ಸಿರಿ ಉದ್ಯಾನ

ಊಟಿಯ ಆಜುಬಾಜಿನಲ್ಲಿರುವ ಅನೇಕ ಸುಂದರ ತಾಣಗಳನ್ನು ಪ್ರವಾಸಿಗರು ನೋಡುವುದೇ ಇಲ್ಲ. ಭವಾನಿ ಸಾಗರ ಅಣೆಕಟ್ಟೆಯ ಇಡೀ ಹಿನ್ನೀರಿನ ವಿಹಂಗಮ ನೋಟ ವೀಕ್ಷಿಸಬಹುದಾದ ಕೊಡನಾಡು ವ್ಯೂ ಪಾಯಿಂಟ್, ಕೊತಗಿರಿಯ ಪರ್ವತಗಳ ಶ್ರೇಣಿಯಲ್ಲಿರುವ ಟೀ ಮತ್ತು ಕಾಫಿ ತೋಟ, ಅಲ್ಲಿಯ ನಿಸರ್ಗಕ್ಕೆ ಹೂ ಮುಡಿಸಿದಂತೆ ಕಾಣುವ ಅವಲಾಂಚಿ ಮತ್ತು ಅಲ್ಲಿಯ ಸರೋವರ, ಪೈಕಾರ ಮತ್ತು ಕ್ಯಾದರೀನ್ ಜಲಪಾತಗಳು ಪ್ರವಾಸಿಗರ ಪಟ್ಟಿಯಲ್ಲಿ ಇರುವುದೇ ಇಲ್ಲ.

ನಮ್ಮ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಗೆ ಸೇರಿಸಿದ ‘ಕರ್ನಾಟಕ ಸಿರಿ’ ಉದ್ಯಾನ ಕೂಡ ಇಲ್ಲಿದೆ. ಊಟಿ ಮತ್ತು ಕೂನೂರು ಮಧ್ಯ ಓಡುವ ಮೋನೊ ರೈಲು ಇದೆ. ಊಟಿಯ ಮೂಲ ನಿವಾಸಿಗಳಾದ ತೋಡರ ಗುಹೆಗಳಿವೆ. ಊಟಿಯಿಂದ 30 ಕಿಲೊಮೀಟರ್‌ ದೂರದಲ್ಲಿರುವ ಮಧುಮಲೈ ಸಂರಕ್ಷಿತ ಅರಣ್ಯವಿದ್ದು ಅಲ್ಲಿ ಆನೆ, ಹುಲಿ, ಚಿರತೆ, ಭಾರಿ ಗಾತ್ರದ ಕಾಡುಕೋಣಗಳು ಇವೆ. ಮೆಟ್ಟುಪಾಳ್ಯಂನಲ್ಲಿ ನೀರಿಗಿಳಿದು ದಿನವಿಡೀ ಕಾಲಕಳೆಯಬಹುದಾದ ಬ್ಲಾಕ್ ಥಂಡರ್ ಇದೆ. ಉದಕಮಂಡಲ ಎಂಬುದು ಸದಾ ಹಸಿರು ಮುಕ್ಕಳಿಸುವ, ಬೆಟ್ಟಗುಡ್ಡಗಳಿಂದ ಆವೃತವಾದ ಸ್ವರ್ಗದ ತುಣುಕಾಗಿದೆ.

ಊಟಿ ಅಪ್ಪಟ ಕನ್ನಡ ನಾಡು. ಊಟಿ ಪಟ್ಟಣ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸರಿಸುಮಾರು ಇಪ್ಪತೈದು ಸಾವಿರಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಇವರಲ್ಲಿ ಬಹುಸಂಖ್ಯಾತರೆಂದರೆ ಗೌಡ ಜನಾಂಗದವರು. ಇವರ ಬಗ್ಗೆ ಚರ್ಚಿಸುವ ಮುನ್ನ ಇಡೀ ನೀಲಗಿರಿ ಜಿಲ್ಲೆಯನ್ನು ಆವರಿಸಿಕೊಂಡಿರುವ ಕನ್ನಡ ಮೂಲದ ‘ಬಡಗ’ ಜನಾಂಗದ ಬಗ್ಗೆ ತಿಳಿದುಕೊಳ್ಳೋಣ. ಮೂರು ಲಕ್ಷದಷ್ಟು ಜನಸಂಖ್ಯೆಯುಳ್ಳ ಬಡಗ ಜನಾಂಗದವರು ಮೂಲತಃ ಕನ್ನಡಿಗರಾಗಿದ್ದು, ಬೆಟ್ಟಗುಡ್ಡಗಳ ನಡುವಿನ ಹಳ್ಳಿಗಾಡಿನ ಹೆಚ್ಚಿನಂಶ ಕೃಷಿಭೂಮಿಯ ಒಡೆಯರು!

ಈ ಬಡಗರ ಭಾಷೆಯ ಪದಪುಂಜಗಳಲ್ಲಿ ಹೆಚ್ಚಿನಂಶ ಕನ್ನಡದವು. ಅವರು ಬಳಸುವ ಅಂಕಿಗಳು ಸಹ ಒಂದು, ಎರಡು, ಮೂರು... ಹೀಗೆ ಪ್ರಾರಂಭವಾಗುತ್ತವೆ. ಅದೇ ಜನಾಂಗದ ಇತಿಹಾಸತಜ್ಞ ಸುಬ್ರಮಣ್ಯಂ ಮತ್ತಿತರರು ದಾಖಲಿಸಿರುವಂತೆ, ಮತಾಂತರ ಭೀತಿಗೆ ಹೆದರಿ ಮೈಸೂರು ಮತ್ತು ಮಂಡ್ಯ ಭಾಗದ ಕನ್ನಡಿಗರು ಉದಕಮಂಡಲದತ್ತ ವಲಸೆ ಹೋದರು. ಹೀಗೆ ವಲಸೆ ಹೋದವರ ಪೈಕಿ ಹೆಚ್ಚಾಗಿ ಒಕ್ಕಲಿಗರು ಇದ್ದರು. ಲಿಂಗಾಯತ, ಕುರುಬ ಮತ್ತು ಇತರ ಜನಾಂಗದ ಜನ ಸಹ ಇದ್ದರು. ಇವರೆಲ್ಲ ಊಟಿಗೆ ಬಡಗ ದಿಕ್ಕಿನಿಂದ ಬಂದವರಾಗಿದ್ದರಿಂದ ಈ ಎಲ್ಲಾ ಜಾತಿಯ ಜನರು ಸೇರಿ ಬಡಗ ಜನಾಂಗದವರೆಂದು ಹೆಸರಿಸಲ್ಪಟ್ಟರು.

ಆಲೂಗೆಡ್ಡೆ, ಬಾರ್ಲಿ, ಕ್ಯಾರೆಟ್, ಬೀಟ್ರೂಟ್, ಬೀನ್ಸ್, ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾದವರು ಬಡಗರು. ಅವರ ಹಟ್ಟಿಗಳು ಈಗ ಆಧುನಿಕ ಸವಲತ್ತುಗಳೊಂದಿಗೆ ರಾರಾಜಿಸುತ್ತಿರುವುದು ಸುಳ್ಳಲ್ಲ. ಬಡಗರಾಡುವ ಭಾಷೆ ಮೂಲತಃ ಕನ್ನಡದಂತೆ ಇದ್ದರೂ ಆ ಭಾಷೆಗೆ ಲಿಪಿ ಇಲ್ಲವಾದ್ದರಿಂದ ಅವರು ತಮ್ಮ ಭಾಷಾ ಮಾಧ್ಯಮವಾಗಿ ಅನಿವಾರ್ಯವಾಗಿ ತಮಿಳನ್ನೇ ಅವಲಂಬಿಸಬೇಕಾಗಿದೆ. ಈ ಬಡಗರ ಕುಲ ದೇವರ ಹೆಸರು ಮಾಸ್ತಿಯಮ್ಮ ಅಥವಾ ಮಾಸ್ತಿ ಹೆತ್ತಾಯಿ. ಬಡಗರಿಗೆ ಅವರದೇ ಆದ ಆಕರ್ಷಕ ನೃತ್ಯ ಮತ್ತು ಸುಗ್ಗಿ ಕುಣಿತಗಳಿವೆ.

ನಮ್ಮ ಹಾಸನ ಮತ್ತು ಮಂಡ್ಯದ ಹಳ್ಳಿಗಾಡಿನ ಜನ ಉದಕಮಂಡಲಕ್ಕೆ ಬಂದು ನೆಲೆಸಿದ್ದು ಸೋಜಿಗ. ಹೀಗೆ ಬಂದವರಲ್ಲಿ ಒಕ್ಕಲಿಗರೇ ಹೆಚ್ಚು. ಹುಲ್ಲು ಬೆಳೆದು ಹಸುಗಳನ್ನು ಸಾಕಿ ಆಂಗ್ಲರಿಗೆ ಹಾಲು ಒದಗಿಸುವುದೇ ಅಲ್ಲದೆ ಅವರ ಮನೆ ಮತ್ತು ಟೀ ತೋಟಗಳ ಕೂಲಿ ಕೆಲಸಗಳನ್ನು ಮಾಡುವುದು, ಕುದುರೆ ಲಾಯಗಳನ್ನು ತೊಳೆದು ಸ್ವಚ್ಛವಾಗಿ ಇಡುವುದು, ಅವರ ಮಕ್ಕಳನ್ನು ಕುದುರೆ ಮತ್ತು ಜಟಕಾ ಬಂಡಿಗಳಲ್ಲಿ ಶಾಲೆಗಳಿಗೆ ಕರೆದೊಯ್ಯುವುದು ಮತ್ತಿತರ ಪರಿಚಾರಕ ಕೆಲಸಗಳನ್ನು ಮಾಡುತ್ತಿದ್ದರು. ಈಗ ಅವರು ಅಲ್ಲಿನ ಭೂಮಾಲೀಕರು.

ಉದಕಮಂಡಲ ಜಿಲ್ಲೆ ಕನ್ನಡದ ವಾತಾವರಣದಿಂದ ಕೂಡಿತ್ತಾದ್ದರಿಂದ ರಾಜ್ಯಗಳ ಪುನರ್ವಿಂಗಡಣೆಯ ಕಾಲಕ್ಕೆ ಊಟಿಯಲ್ಲಿ ತಾವೊಂದು ಅರಮನೆಯನ್ನು ಹೊಂದಿದ್ದ - ಮೈಸೂರು ಮಹಾರಾಜರು ಊಟಿಯನ್ನು ಅಂದಿನ ಮೈಸೂರು ಪ್ರಾಂತ್ಯಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಸಿದ್ದರಂತೆ. ಆದರೆ ಅಂದಿನ ಹಳೆಯ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕಾಮರಾಜರು ತಮ್ಮ ರಾಜ್ಯದಲ್ಲಿ ಹೆಚ್ಚು ಮಳೆಯಾಗುವ ಮಲೆನಾಡು ಪ್ರಾಂತ್ಯ ಕಡಿಮೆ ಇರುವ ಕಾರಣ ಈ ಭಾಗದ ಮೇಲೆ ಮಾತ್ರ ನಿಮ್ಮ ಹಕ್ಕು ಚಲಾಯಿಸಬೇಡಿ ಎಂದು ಮಹಾರಾಜರನ್ನು ಪರಿಪರಿಯಾಗಿ ಕೇಳಿಕೊಂಡು ಉಳಿಸಿಕೊಂಡರಂತೆ.

ದೊಡ್ಡಬೆಟ್ಟದ ತುದಿಯಿಂದ ಕಾಣುವ ನೀಲಗಿರಿ ಪರ್ವತಗಳ ಸಾಲು
ದೊಡ್ಡಬೆಟ್ಟದ ತುದಿಯಿಂದ ಕಾಣುವ ನೀಲಗಿರಿ ಪರ್ವತಗಳ ಸಾಲು

ತಮ್ಮ ಬಳಿ ನಿಷ್ಠೆಯಿಂದ ಕೆಲಸ ಮಾಡಿಕೊಂಡಿದ್ದ ಅನೇಕ ಕನ್ನಡಿಗರಿಗೆ ಇಂಗ್ಲಿಷರು ಇಲ್ಲಿಂದ ವಾಪಸಾಗುವಾಗ ಕಡಿಮೆ ಬೆಲೆಗೋ ಪುಕ್ಕಟೆಯಾಗಿಯೋ ಭವ್ಯ ಬಂಗಲೆಗಳು ಮತ್ತು ಟೀ ತೋಟಗಳನ್ನು ಕೊಟ್ಟು ಹೋದರು. ಹಾಗಾಗಿಯೇ ಬ್ರಿಟಿಷರು ವಾಸಿಸುತ್ತಿದ್ದ ಅನೇಕ ಐಷಾರಾಮಿ ಬಂಗಲೆಗಳೆಲ್ಲ ಕನ್ನಡಿಗರ ಪಾಲಾಗಿವೆ. ಪ್ರತಿಷ್ಠಿತ ಶಾಲೆಗಳು, ಹೋಟೆಲ್‌ಗಳು ಸಹ ಕನ್ನಡಿಗರಿಗೆ ಸೇರಿವೆ.

ಇಲ್ಲಿಯ ಬಹಳಷ್ಟು ಒಕ್ಕಲಿಗರು ನಾಗಮಂಗಲ, ಚನ್ನರಾಯಪಟ್ಟಣ, ನುಗ್ಗೇಹಳ್ಳಿ, ಸಂತೇಶಿವರ, ಹಿರಿಸಾವೆ ಮೂಲದವರಾದ್ದರಿಂದ ಇಂದಿಗೂ ಮೇಲಿನ ಪ್ರದೇಶಗಳ ಜೊತೆ ಸಂಬಂಧ ಮತ್ತು ಒಡನಾಟ ಇಟ್ಟುಕೊಂಡಿದ್ದಾರೆ. ಆದರೆ ಖೇದದ ಸಂಗತಿಯೆಂದರೆ ಇವರು ತಮ್ಮ ಮಾತೃಭಾಷೆಯ ಮೇಲೆ ಒಂಚೂರೂ ಪ್ರೀತಿ ಮತ್ತು ಅಭಿಮಾನ ಬೆಳೆಸಿಕೊಂಡಿಲ್ಲ. ಅನೇಕ ಗೌಡರುಗಳ ಮನೆಯಲ್ಲಿ ಕನ್ನಡದ ಬದಲು ತಮಿಳು ಮಾತನಾಡುವ ರೂಢಿ ಇದೆ. ಇಪ್ಪತ್ತೈದು ಸಾವಿರ ಕನ್ನಡಿಗರಿರುವ ಊಟಿಯಲ್ಲಿ ಕನ್ನಡದ ಪತ್ರಿಕೆಗಳು ಮಾರಾಟವಾಗುವುದು ತುಂಬಾ ಕಡಿಮೆ.

ಒಂದು ಕಾಲಕ್ಕೆ ಕನ್ನಡದ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಊರುಗಳಾದ ಗೂಡ್ಲೂರು ಗುಡಲೂರಾಗಿ ಕೋತಿಗಿರಿ ಕೊತಗಿರಿಯಾಗಿ, ಬಾಳೆತೋಟ ವಾಳೆತೋಟಂ ಆಗಿ, ಉಬ್ಬುತಲೆ ಹುಬ್ಬುದಲೈಯಾಗಿ, ತಲೆಕುಂದ ತಲೈಗುಂದವಾಗಿ, ನಡುಬೆಟ್ಟ ನಡುವಟ್ಟಂ ಆಗಿ, ಮಾಸನಗುಡಿ ಮಸಣ್‍ಗುಡಿಯಾಗಿ ಪೂರಾ ತಮಿಳುಮಯವಾಗಿ ಮಾರ್ಪಟ್ಟಿವೆ. ಪ್ರವಾಸಿಗರ ಮೆಚ್ಚಿನ ತಾಣ ದೊಡ್ಡಬೆಟ್ಟವನ್ನು ತಮಿಳರು ತೊಟ್ಟಬೆಟ್ಟಂ ಎಂದು ಕರೆಯುತ್ತಾರಾದರೂ ದೊಡ್ಡಬೆಟ್ಟದ ಹೆಸರನ್ನು ಅಷ್ಟು ಸುಲಭವಾಗಿ ಬದಲಾಯಿಸಲು ಅವರಿಗೆ ಸಾಧ್ಯವಾಗಿಲ್ಲ!

ಕಳೆದ ಎಂಬತ್ತರ ದಶಕದವರೆಗೂ ನಗರದ ಪುರಸಭೆಯ ನೇತೃತ್ವವನ್ನು ಕನ್ನಡಿಗರೇ ವಹಿಸಿಕೊಂಡು ಅಧ್ಯಕ್ಷರಾಗುತ್ತಿದ್ದರು. ಓಟಿನ ರಾಜಕೀಯದ ದೆಸೆಯಿಂದಾಗಿ ಅಲ್ಲಿ ಅಲ್ಪಸಂಖ್ಯಾತರಾಗಿದ್ದ ತಮಿಳರು ಬೇರೆಕಡೆಯಿಂದ ತಮ್ಮ ಜನರನ್ನು ಕರೆತಂದು ಸ್ಲಂಗಳನ್ನು ಏಳಿಸಿದ್ದಾರೆ. ಆದ್ದರಿಂದ ಇಡೀ ಊಟಿ ಪಟ್ಟಣ ಅಕ್ಷರ ಸಹ ಕೊಚ್ಚೆಗುಂಡಿಯಂತಾಗಿದೆ. ರಸ್ತೆಗಳಿಗೆ ಸರಿಯಾದ ಫುಟ್‍ಪಾತ್ ಮತ್ತು ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಎಲ್ಲೆಂದರಲ್ಲಿ ದುರ್ನಾತ ಬೀರುವ ನೀರು ಉಕ್ಕಿ ಹರಿಯುತ್ತದೆ.

ಈಗ್ಗೆ ಎರಡು ದಶಕಗಳ ಹಿಂದಿನವರೆಗೂ ಊಟಿಯ ಮಧ್ಯಪೇಟೆಯಲ್ಲಿ ಕನ್ನಡ ನಾಮ ಫಲಕದೊಂದಿಗೆ ರಾರಾಜಿಸುತ್ತಿದ್ದ ಕೆಂಪೇಗೌಡ ಟಾಕೀಸ್ ಈಗ ಹಾಳು ಸುರಿದಿದೆ. ಊಟಿಯ ಅನೇಕ ಕುಟುಂಬಗಳಿಗೆ ಅನ್ನದಾತನಾಗಿದ್ದ ಹಿಂದೂಸ್ಥಾನ್ ಫೋಟೊ ಫಿಲ್ಮ್ಸ್‌ ಈಗ ಮುಚ್ಚುವ ಹಂತ ತಲುಪಿದೆ. ಮೈಸೂರು ಅರಸರಿಗೆ ಸೇರಿದ್ದ ಅರಮನೆ, ಹೋಟೆಲ್ ಆಗಿ ಪರಿವರ್ತನೆಯಾಗಿದೆ. ಊಟಿ ಲೇಕ್ ಗಲೀಜು ನೀರಿನಿಂದ ತುಂಬಿಕೊಂಡು ನಾರುತ್ತಿದೆ. ಕನ್ನಡದ ಕಂಪಿನಿಂದ ದೂರ ಸರಿಯುತ್ತಾ, ಸ್ವಚ್ಛ ಪರಿಸರದಿಂದಲೂ ವಂಚಿತವಾಗುತ್ತಾ ನಿಸರ್ಗ ಮತ್ತು ಕನ್ನಡ ಪ್ರೇಮಿಗಳನ್ನು ತೀರಾ ನಿರಾಸೆಗೆ ಒಳಗಾಗುವಂತೆ ಮಾಡಿಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT