ಬುಧವಾರ, ಆಗಸ್ಟ್ 10, 2022
21 °C

ಭಯ ಬೇಡ, ಮುಂದೆ ಸಾಗಿರಿ...

ಶ್ರೀವತ್ಸ ಅನಂತ ರಾವ್‌ Updated:

ಅಕ್ಷರ ಗಾತ್ರ : | |

Prajavani

ಮನಸ್ಸು. ಇದು ನಮ್ಮ ಉಪಯೋಗಕ್ಕಾಗಿ ಸಿದ್ಧವಾಗಿರುವ ಉತ್ತಮ ಸಾಧನವೇನೋ ಹೌದು; ಆದರೆ ತಪ್ಪಾಗಿ ಬಳಸಿದರೆ ಅದು ನಮ್ಮ ಅಂಕೆಯಲ್ಲಿ ಉಳಿಯುವುದಿಲ್ಲ. ನಾವು ನಮ್ಮ ಮನಸ್ಸನ್ನು ತಪ್ಪಾಗಿ ಬಳಸುವುದಿಲ್ಲ, ಯಾವಾಗಲೂ ಅದೇ ನಮ್ಮನ್ನು ಬಳಸಿಕೊಳ್ಳುತ್ತದೆ. ಇಂದು ಕೋವಿಡ್‌ ಸೃಷ್ಟಿಸುತ್ತಿರುವ ಆತಂಕದಲ್ಲಿ ನಿಮ್ಮ ಮನಸ್ಸು ಭಯದ ದಾಳಿಗೆ ತುತ್ತಾಗುತ್ತಲೇ ಇರುವುದು ಸುಳ್ಳಲ್ಲ. ಹಾಗಾದರೆ ಭಯದ ಮೂಲ ಏನು? ಅವರ ನಿರ್ವಹಣೆ ಹೇಗೆ?

ಭಯದ ಮೂಲ: ಇದು ಆತಂಕ, ಒತ್ತಡ, ಚಿಂತೆ, ಚಡಪಡಿಕೆಯ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇದು ವರ್ತಮಾನವನ್ನು ಕುರಿತು ಅಲ್ಲ, ಮುಂದೆ ಆಗಬಹುದಾದ್ದರ ಕುರಿತಾಗಿ ಇರುವ ಭಯ. ನೀವು ಇಲ್ಲೇ ವರ್ತಮಾನದಲ್ಲಿ ಇರುತ್ತೀರಿ; ಆದರೆ ನಿಮ್ಮ ಮನಸ್ಸು ಮಾತ್ರ ಭವಿಷ್ಯದಲ್ಲಿರುತ್ತದೆ. ಇದೇ ಆತಂಕಕ್ಕೆ ಕಾರಣ.

ಭಯದ ಉದ್ದೇಶ: ಭಯ ನಿಮ್ಮನ್ನು ಅಪಾಯದ ಕುರಿತಾಗಿ ಎಚ್ಚರಿಸುತ್ತದೆ. ಸಮಾಧಾನವಾಗಿ ಯೋಚಿಸಿ, ಇದು ವರ್ತಮಾನದಿಂದ ಪ್ರೇರಿತವೇ, ನಿಜವೇ ಅಥವಾ ಮುಂದೆ ಜರುಗಲಿರುವ ಸನ್ನಿವೇಶವನ್ನು ಕುರಿತು ಬರೀ ನನ್ನ ಕಲ್ಪನೆಯೇ ಎಂದು. ನೀವೇ ತೀರ್ಮಾನಿಸಿ, ಇದರ ಬಗ್ಗೆ ಎಷ್ಟು ತಲೆಕೆಡಿಸಿಕೊಳ್ಳಬೇಕೆಂದು.

ಭಯದ ನಿರ್ವಹಣೆ: ವಿಭಿನ್ನ ವಿಷಯಗಳು ನಿಮ್ಮನ್ನು ತಲ್ಲಣಗೊಳಿಸುತ್ತವೆ. ನಿಮ್ಮ ನಿರೀಕ್ಷೆಗಳೇ ನಿಮ್ಮ ಭಯಕ್ಕೆ ಕಾರಣವಾಗಿರುತ್ತವೆ. ಉದಾ: ನೌಕರಿ ಹೋಗಬಹುದು, ಜೀವಹಾನಿ, ಅನಾರೋಗ್ಯ, ಒಂಟಿತನ, ವ್ಯಾಪಾರನಷ್ಟ – ಇಂಥವು ನಿಮ್ಮನ್ನು ಆತಂಕಕ್ಕೆ ತಳ್ಳಬಹುದು. ಕೋವಿಡ್‌ ಅನ್ನು ಕುರಿತ ಆಲೋಚನೆಯೇ ನಿಮ್ಮನ್ನು ಅಸ್ವಸ್ಥರನ್ನಾಗಿಸುತ್ತದೆ.

ಇಂದಿನ ಭಯದ ಆಯಾಮಗಳು

ನೌಕರಿ ಕಳೆದುಕೊಳ್ಳುವ ಭಯ: ಇಂದಿನ ಅಸ್ಥಿರ ಪರಿಸ್ಥಿತಿಯಲ್ಲಿ ಕೆಲಸವನ್ನು ಕಳೆದುಕೊಳ್ಳುವುದೆಂದರೆ ಅತಿ ಒತ್ತಡದ ವಿಷಯವೇ ಸರಿ. ನಿಮ್ಮ ಕೌಶಲದ ಮೇಲೆ ನಿಮಗೆ ವಿಶ್ವಾಸವಿರಲಿ.

ಸೋಂಕು ತಗಲುವ ಭಯ: ಸೋಂಕಿನಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ನೀವು ಒಪ್ಪಿಕೊಳ್ಳಲೇಬೇಕು, ಅದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದರ ಕಡೆಗೆ ಗಮನಹರಿಸುವಂತೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಮಾನಸಿಕ ನೆಲೆಯಲ್ಲಿ ಕಂಡುಕೊಳ್ಳಿ.

ವೈರಸ್ ಬಗ್ಗೆ ಆತಂಕ, ಲಸಿಕೆ ಪಡೆಯಲು ಹಿಂಜರಿಕೆ: ರೂಪಾಂತರಗೊಳ್ಳುತ್ತಿರುವ ರೋಗಾಣುಗಳು ಶರೀರದ ರೋಗನಿರೋಧಕ ಶಕ್ತಿಯಿಂದ ನುಣುಚಿಕೊಳ್ಳುತ್ತಿವೆ. ಜೊತೆಗೆ ಲಸಿಕೆಯಿಂದ ಪ್ರಯೋಜನ ಇದೆಯೋ ಇಲ್ಲವೋ ಎಂಬ ಅನುಮಾನ; ಮುಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿವಳಿಕೆ ಇಲ್ಲದಿರುವುದು.

ಒಂಟಿತನದ ಭಯ: ತನ್ನಿಂದ ಇನ್ನೊಬ್ಬರಿಗೆ ಸೋಂಕು ಹರಡೀತೆಂಬ ಭಯದಿಂದ ಜನ ನಗರದಿಂದ ಚಿಕ್ಕ ಊರುಗಳ ಕಡೆಗೆ ವಾಸಕ್ಕೆ ಹೊರಟಿದ್ದಾರೆ. ಸ್ನೇಹಿತರು, ಬಂಧುಗಳಿಂದ ದೂರವಾಗಿ ಪ್ರೀತಿಯನ್ನು ಕಳೆದುಕೊಂಡು ಏಕಾಂಗಿಯಾಗಿ ಜೀವಿಸಬೇಕಾಗಿರುವುದಕ್ಕೆ ಭಯಗೊಂಡಿದ್ದಾರೆ. ಈ ಏಕಾಂಗಿತನದ ಭಯವು ನಿಮ್ಮನ್ನು ನೀವು ಪ್ರೀತಿಸಿಕೊಳ್ಳುವುದಕ್ಕೆ, ಹೊಂದಿಕೊಳ್ಳುವುದಕ್ಕೆ, ಸಂತೋಷವಾಗಿರುವುದಕ್ಕೆ ಸಹಕಾರಿಯಾಗಲಿ.

ಆಸ್ಪತ್ರೆಯ ಭಯ: ಮನೆಯಲ್ಲೇ ನಿಗಾ ವಹಿಸಲು ಸಾಧ್ಯವಿಲ್ಲದೆ ಆಸ್ಪತ್ರೆ ಸೇರುತ್ತಿರುವೆ, ಆರೋಗ್ಯದ ಚೇತರಿಕೆಗೆ ಇದು ಉತ್ತಮ ನಿರ್ಧಾರ ಎಂದು ವಾಸ್ತವಸತ್ಯವನ್ನು ತಿಳಿದುಕೊಳ್ಳಿ.

ಸಾವಿನ ಭಯ: ನಿಮ್ಮ ತಂದೆ–ತಾಯಿಗೆ, ಸಂಗಾತಿಗೆ, ಸ್ನೇಹಿತರಿಗೆ, ಮಕ್ಕಳಿಗೆ ಏನಾದರೂ ಆಗಿಬಿಟ್ಟರೆ ಎನ್ನುವ ಅಭದ್ರತೆಯ ಭಯ. ಈ ಭಯವೇ ನಿಮ್ಮ ಜೀವನದ ನಿಜವಾದ ಬೆಲೆಯನ್ನು ಗುರುತಿಸುವಂತಾಗಲಿ.

ಶೋಕದಲ್ಲೂ ಒಂಟಿಯಾಗುವ ಭಯ: ಹತ್ತಿರದವರು ತೀರಿಹೋದರೆ, ಸಾವಿನ ನಂತರದ ವಿಧಿ–ವಿಧಾನಗಳು ಕೆಲವರಿಗೆ ಸಮಾಧಾನ ನೀಡುತ್ತವೆ. ಆದರೆ ಈಗ ಅದನ್ನೂ ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ

ಭಯಕ್ಕೆ ಮುಖಾಮುಖಿಯಾಗುವುದು: ನಿಮಗಿರುವ ಭಯ ಸವಾಲಿನದಾದರೂ ಅದನ್ನು ಎದುರಿಸಲೇಬೇಕಾಗಿದೆ ಎಂಬುದನ್ನು ಅರಿತು,  ನೀವು ಕಾರ್ಯೋನ್ಮುಖರಾಗಬೇಕಿದೆ. ಇದು ರಾತ್ರೋರಾತ್ರಿ ಆಗುವ ಕೆಲಸವಲ್ಲ. ದಿನನಿತ್ಯದ ಕಾರ್ಯ ಚಟುವಟಿಕೆಗಳ ಮೂಲಕವೇ ಈ ಭಯವನ್ನು ನಿರ್ವಹಿಸುವ ಕೌಶಲವನ್ನು ರೂಢಿಸಿಕೊಳ್ಳಿ.

ಭಯವನ್ನು ಸಮರ್ಥವಾಗಿ ಎದುರಿಸಲು ಹೀಗೆ ಮಾಡಿ

ಭಯವನ್ನು ಅನುಭವಿಸಿ: ಯಾವುದನ್ನು ಕಳೆದುಕೊಳ್ಳುವ ಭಯವಿದೆಯೋ ಅದನ್ನು ಗುರುತಿಸಿ, ಉಳಿಸಿಕೊಳ್ಳುವ ಪ್ರಯತ್ನದತ್ತ ಕಾರ್ಯೋನ್ಮುಖರಾಗಿ.

ಒಪ್ಪಿಕೊಳ್ಳಿ: ಭಯವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎನ್ನುವ ತವಕನ್ನು ಬಿಟ್ಟುಬಿಡಿ, ಸನ್ನಿವೇಶಕ್ಕೆ ತಕ್ಕಂತೆ ಮುಂದೆ ಸಾಗಿ. ಭಯ ತಾತ್ಕಾಲಿಕವಾದುದು.

ಪ್ರಾಣಾಯಾಮವನ್ನು ಅಭ್ಯಾಸ ಮಾಡಿ: ಉಸಿರಾಟದ ವ್ಯಾಯಾಮ ಮನಸ್ಸನ್ನು ಪ್ರಶಾಂತಗೊಳಿಸಲು ಸಹಕಾರಿಯಾಗುತ್ತದೆ.

ಗೊತ್ತಾದ ದಿನಚರಿಯನ್ನು ಅನುಸರಿಸಿ:  ನಿಮ್ಮ ದೇಹ–ಮನಸ್ಸುಗಳನ್ನು ನಿತ್ಯದ ಚಟುವಟಿಕೆಗಳಲ್ಲಿ ಎಷ್ಟೆಷ್ಟು ತೊಡಗಿಸಿ. ಇದರಿಂದ ಮೈಮನಗಳು ಉಲ್ಲಾಸದಿಂದ ಇರುತ್ತವೆ.

ಆತ್ಮೀಯರ ಸಂಪರ್ಕದಲ್ಲಿರಿ: ಈಗಿನ ಸಂದಿಗ್ಧ ಪರಿಸ್ಥಿತಿ ಇರುವುದು ನಿಮಗೊಬ್ಬರಿಗೆ ಅಲ್ಲ ಎನ್ನುವುದನ್ನು ನೆನಪಿಡಿ. ಬಂಧುಗಳು, ಸ್ನೇಹಿತರು, ಸಹೋದ್ಯೋಗಿಗಳು, ನೆರೆಹೊರೆಯವರು ಎಲ್ಲರೊಂದಿಗೆ ಸ್ನೇಹಸಂಬಂಧವನ್ನು ಜೀವಂತವಾಗಿಟ್ಟುಕೊಳ್ಳಿ.

ಧೈರ್ಯವಾಗಿರಿ: ನೇರವಾಗಿ ನಿಮ್ಮ ಭಾವನೆಗಳನ್ನು ಮುಕ್ತವಾಗಿ ಸಹಜವಾಗಿ ವ್ಯಕ್ತಪಡಿಸಿ. ಇತರರಿಗಿಂತ ನಿಮ್ಮ ಅಭಿಪ್ರಾಯ ಭಿನ್ನವಾಗಿದ್ದರೆ, ವ್ಯಕ್ತಪಡಿಸಲು ಹಿಂಜರಿಯಬೇಡಿ. ಭಯದಿಂದ ನಿಮ್ಮ ಕೆಲಸಕಾರ್ಯಗಳು ನಿಂತು ಹೋಗದಿರಲಿ.

ದಾರಿ ಮುಂದಿದೆ: ಕೋವಿಡ್ ಅನ್ನು ಎದುರಿಸುವುದು ಮತ್ತು ಅದರ ಮೇಲೆ ಜಯ ಸಾಧಿಸುವುದು ಎಂದರೆ ಮ್ಯಾರಥಾನ್ ಓಟದ ಹಾಗೆ. ಆತಂಕವನ್ನು ಎದುರುಗೊಳ್ಳಲು ಭಯ ಬೇಡ. ಕೂಡಲೇ ಫಲಿತಾಂಶ ಸಿಕ್ಕೀತೆಂಬ ನಿರೀಕ್ಷೆಯೂ ಬೇಡ, ಸಿಗಲಿಲ್ಲವೆಂಬ ಉದ್ವೇಗವೂ ಬೇಡ. ಮನರಂಜನೆಗೂ ಸಮಯ ಮೀಸಲಿಡಿ. ಕುಟುಂಬದ ಸದಸ್ಯರಿಗೆ, ಸ್ನೇಹಿತರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞರಾಗಿರಿ. ಮುಂದೆ ಸಾಗಿರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು