ಗುರುವಾರ , ಜೂನ್ 4, 2020
27 °C

'ಸ್ವಯಂ ದಿಗ್ಬಂಧನ’ವೆಂಬ ಸುಸಮಯ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಲಾಕ್‌ಡೌನ್ ಆರಂಭವಾಗಿದೆ. ಒಂದಲ್ಲ ಎರಡಲ್ಲ, ಬರೊಬ್ಬರಿ 21ದಿನಗಳ ರಜೆ! ಕೆಲವರಿಗೆ ಮನೆಯಲ್ಲಿಯೇ ಕಚೇರಿ ಕೆಲಸ ಜೊತೆಯಾದರೆ, ಕೆಲವರಿಗೆ ಅದೂ ಇಲ್ಲ. ಗಂಡ–ಮಕ್ಕಳು, ಮನೆಮಂದಿಯೆಲ್ಲಾ ಒಟ್ಟಿಗಿರುವ ಈ ಅಮೃತ ಘಳಿಗೆಗಳನ್ನು ಹೇಗೆ ಕಳೆಯುವುದು? ಏನು ಮಾಡುವುದು? ಇಲ್ಲಿವೆ ಒಂದಷ್ಟು ಸಲಹೆಗಳು...

ದೀರ್ಘ ಕಾಲ ಮನೆಯಲ್ಲಿ, ಕೇವಲ ಮನೆಯಲ್ಲಿಯೇ ಇರಬೇಕಾದ ಸ್ಥಿತಿ. ದಿನವಿಡೀ ಕಚೇರಿ ಕೆಲಸ, ಮನೆಗೆಲಸ, ಓಡಾಟ, ತಿರುಗಾಟ ಎಂದು ಬ್ಯುಸಿಯಾಗಿದ್ದವರಿಗೆ ಈಗ ಸಂಕಟ. ಸ್ವಯಂ ದಿಗ್ಬಂಧನ, ಕೊರೊನಾ ಸೋಂಕಿನ ಭೀತಿ, ದಿನಕ್ಕೆ ಹತ್ತಿಪ್ಪತ್ತು ಬಾರಿ ಕೈ ತೊಳೆಯುವ ಕೆಲಸ, ಗಂಟೆಗೊಮ್ಮೆ ಕಾಫಿ–ತಿಂಡಿಗೆ ಬೇಡಿಕೆ... ಇದನ್ನು ಶಿಕ್ಷೆ ಎಂದುಕೊಳ್ಳದೇ ಮನೆಯವರೊಂದಿಗೆ ಕಾಲಕಳೆಯಲು ಸಿಕ್ಕ ಸದವಕಾಶ ಎಂದು ಭಾವಿಸಿದಲ್ಲಿ ಈ ದಿನಗಳು ಹೆಚ್ಚು ಆಪ್ತವಾಗುತ್ತವೆ.

ಕಚೇರಿ ಕೆಲಸ ಬೆನ್ನೇರಿ ಮನೆಗೆ ಬಂದಿದೆಯಾ? ಗೊಣಗಾಟ ಬೇಡ. ಅಶಿಸ್ತು, ಅಸಡ್ಡೆಯೂ ಸಲ್ಲದು. ಅದು ನಿಮ್ಮನ್ನು, ನಿಮ್ಮ ಕುಟುಂಬವನ್ನೂ ಸಲಹುವ ಕಾಯಕ. ಮನೆಯಲ್ಲಿಯೂ ಸಹ ಕಚೇರಿ ಕೆಲಸಕ್ಕೊಂದು ಶಿಸ್ತು, ಬದ್ಧತೆ, ನಿಯಮಪಾಲನೆ ಬೇಕು. ಮನೆಯಲ್ಲಿ ತಾನೆ, ಯಾವಾಗ ಮಾಡಿದರೂ ಆಯಿತು ಎನ್ನುವ ಉಡಾಫೆ ಮಾಡಬೇಡಿ. 

ಇನ್ನು ಕೆಲವರಿಗೆ ಮನೆಯಲ್ಲಿ ಕಚೇರಿ ಕೆಲಸ ಮಾಡುವ ಅವಕಾಶವಿಲ್ಲ. ಅಂಥವರಿಗೆ ಸಂಪೂರ್ಣ ರಜೆ. ‘ಹೇಗೂ ಕಚೇರಿ ಕೆಲಸ ಏನಿಲ್ಲ, ಮನೆಯಲ್ಲಿದ್ದು ದಿನವಿಡೀ ಮಾಡುವುದೇನು?’ ಎಂದು ಬೇಕಾಬಿಟ್ಟಿಯಾಗಿ ಸಮಯ ಕಳೆಯಬೇಡಿ. ಈ ದಿನಗಳು ಮುಗಿದ ಮೇಲೆ, ‘ಛೇ, ಆ 21 ದಿನಗಳನ್ನು ಏನೂ ಮಾಡದೆ ಕಳೆದು ಬಿಟ್ಟೆನಲ್ಲ’ ಎನ್ನುವ ತಪ್ಪಿತಸ್ಥ ಭಾವನೆ ಕನಿಷ್ಠ 21 ವರ್ಷ ಕಾಡೀತು... ಜೋಕೆ!

ಅದಕ್ಕಾಗಿ ನೀವೊಂದು ಶಿಸ್ತಿನ ವೇಳಾಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಯಾವಾಗ ಅಡುಗೆ, ಯಾವಾಗ ಮನೆಗೆಲಸ, ಕಚೇರಿ ಕೆಲಸವನ್ನು ಮನೆಗೆ ತಂದಿದ್ದರೆ ಅದಕ್ಕೆ ಎಷ್ಟು ಸಮಯ, ಅದನ್ನು ಯಾವ ವೇಳೆಯಲ್ಲಿ ನಿರ್ವಹಿಸಬೇಕು... ಎನ್ನುವುದನ್ನೆಲ್ಲಾ ಆ ವೇಳಾಪಟ್ಟಿ ಒಳಗೊಂಡಿರಲಿ. ಕಚೇರಿ ಕೆಲಸವನ್ನು ಮನೆಯಲ್ಲಿ ಮಾಡುವುದರಿಂದ ಬೆಂಗಳೂರಿನಂತಹ ಮೆಟ್ರೊ ನಗರಗಳಲ್ಲಾದರೆ 2–3 ಗಂಟೆ ಉಳಿತಾಯ. ಇತರ ನಗರ–ಪಟ್ಟಣಗಳಲ್ಲಾದರೆ ಕನಿಷ್ಠ ಒಂದು ಗಂಟೆಯಾದರೂ ಪ್ರಯಾಣದ ಸಮಯ ಉಳಿದೇ ಉಳಿಯುತ್ತದೆ. ಈ ಸಮಯವನ್ನು ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯಲು ವಿನಿಯೋಗಿಸಿ. 

ನಿಮ್ಮ ವೇಳಾಪಟ್ಟಿಯಲ್ಲಿ ಏನೇನಿದ್ದರೆ ಚೆನ್ನ...

ದಿನಚರಿ: ಇದು ಬಹಳ ಮುಖ್ಯವಾದ ಸಂಗತಿ. ದೈನಂದಿನ ಚಟುವಟಿಕೆಗಳೆಲ್ಲವೂ ಅದದೇ ಸಮಯದಲ್ಲಿ, ವ್ಯವಸ್ಥಿತವಾಗಿ ಸಾಗಬೇಕಾದರೆ ನೀವು ನಿಮ್ಮ ದಿನಚರಿಯನ್ನು ಹೇಗೆ ಹೊಂದಿಸಿಕೊಳ್ಳುವಿರಿ ಮತ್ತು ಅದನ್ನು ಹೇಗೆ ಅನುಸರಿಸುತ್ತಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಕಚೇರಿ, ಶಾಲೆ–ಕಾಲೇಜುಗಳು, ಅಂಗಡಿ–ಮುಂಗಟ್ಟುಗಳು, ಮಾಲ್‌ಗಳು, ಸಿನಿಮಾ ಹಾಲ್‌, ಹೋಟೆಲ್‌ಗಳೆಲ್ಲ ಬಾಗಿಲು ಮುಚ್ಚಿ, ಈಗ ಮನೆಯೊಂದೇ ಗತಿ ಎನ್ನುವಂತಾಗಿದೆ. ಹೀಗೆಂದು ದೈನಂದಿನ ಕೆಲಸ, ಚಟುವಟಿಕೆಗಳನ್ನು ಅಸ್ತವ್ಯಸ್ಥ ಮಾಡಿಕೊಳ್ಳಬೇಡಿ. ಇದರಿಂದ ಅನವಶ್ಯಕ ಒತ್ತಡ ಉಂಟಾಗುತ್ತದೆ. 

ಹೌದು, ನಿಗದಿತ ಸಮಯದಲ್ಲಿ ಊಟ, ನಿದ್ರೆ, ವ್ಯಾಯಾಮ ಮಾಡುವುದನ್ನು ತಪ್ಪಿಸಲೇಬೇಡಿ. ರಜೆ ಇದೆ ಎಂದು ಯಾವ ಸಮಯದಲ್ಲೊ, ಮಲಗುವುದು, ಯಾವಾಗಲೊ ಏಳುವುದು, ಇನ್ನು ಯಾವಾಗಲೊ ತಿನ್ನುವುದು... ಇವೆಲ್ಲ ದೈಹಿಕ ಬಾಧೆಯ ಜೊತೆಗೆ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಬೇಸರ, ಆತಂಕ, ಖಿನ್ನತೆ ಉಂಟಾಗಬಹುದು. ತಪ್ಪಿಯೂ ಆನಾರೋಗ್ಯಕರ ಜೀವನಶೈಲಿಯನ್ನು ಬಿಟ್ಟುಕೊಳ್ಳಬೇಡಿ.

ಕಚೇರಿಗೆ ಹೋಗುತ್ತೀರಿ ಎನ್ನುವ ಮನಸ್ಥಿತಿಯಲ್ಲಿಯೇ ಇರುವುದು ಮತ್ತು ಎಲ್ಲವನ್ನೂ ಆಯಾ ಸಮಯದಲ್ಲಿಯೇ ಮಾಡುವುದರಿಂದ ಕೆಲಸ ಒಂದಿಷ್ಟು ಸಲೀಸು. ಉಳಿಯುವ ಅವಧಿಯನ್ನು ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ಯೋಜಿಸಿ. 

ಮನೆಯನ್ನು ಸ್ವಚ್ಛಗೊಳಿಸಿ 

ಬಹುತೇಕ ಎಲ್ಲರೂ ಒಪ್ಪುವ ಸಂಗತಿ ಇದು. ಮನೆಯನ್ನು ಶುಚಿಗೊಳಿಸಲು, ವಾರ್ಡ್‌ರೋಬ್‌ಗಳನ್ನು ವ್ಯವಸ್ಥಿತಗೊಳಿಸಲು, ಹಾಸಿಗೆ–ಹೊದಿಕೆಗಳನ್ನು ತೊಳೆಯಲು, ಕೊಠಡಿಗಳಿಗೆ ಹೊಸ ರೂಪ ನೀಡಲು ನಿಮಗೀಗ ಸಮಯವಿದೆ. ಈ ಲಾಕ್‌ಡೌನ್‌ ಮುಗಿಯುವ ಹೊತ್ತಿಗೆ ನಿಮ್ಮ ಮನೆಗೆ ಸಂಪೂರ್ಣ ಹೊಸ ಕಳೆ ತುಂಬಬಹುದು.

ಲಾಕ್‌ಡೌನ್ ಪಾಕವಿಧಾನ 

ಪ್ರತಿದಿನ ಕೆಲಸಕ್ಕೆ ಓಡುವ ತರಾತುರಿಯಲ್ಲಿ ಯಾವುದೊ ಒಂದು ಬೇಯಿಸಿ ಹಾಕುವುದೇ ಆಗುತ್ತದೆ. ಈಗ ಅಡುಗೆಮನೆಯಲ್ಲುಳಿಯಲು ಹೆಚ್ಚು ಸಮಯವಿದೆ. ಮನೆಯಿಂದಲೇ ಕಚೇರಿ ಕೆಲಸ ಮಾಡುವವರಿಗೂ ಒಂದೆರಡು ಗಂಟೆ ಹೆಚ್ಚೇ ಸಮಯ ಸಿಗುತ್ತದೆ. ಈ ಅವಧಿಯಲ್ಲಿ ರುಚಿಕರವಾದ ಆಹಾರ ತಯಾರಿಸಿ. ಹೊಸ ರುಚಿಗಳನ್ನೂ ಪ್ರಯತ್ನಿಸಿ. ಪಾಕಶಾಲೆಯ ಕೌಶಲಗಳನ್ನು ನೀವೀಗ ಅಭ್ಯಾಸ ಮಾಡಿಕೊಳ್ಳಬಹುದು. 

ಹವ್ಯಾಸಕ್ಕೆ ಮರುಜೀವ ತುಂಬಿ

ನಿಮ್ಮೊಳಗೇ ಇದ್ದರೂ ನೀವದಕ್ಕೆ ಸಮಯ ನೀಡಲಾಗದೇ ಮರೆಯಾಗಿ ಹೋದ ಹವ್ಯಾಸಗಳಿಗೆ ಮರುಜೀವ ತುಂಬಬಹುದು. ಪಿಯಾನೊ, ಗಿಟಾರ್‌ ನುಡಿಸುವುದರಿಂದ ಹಿಡಿದು, ಚಿತ್ರಕಲೆ, ಕೈತೋಟ, ಚೆಸ್ ಆಡುವುದು ಹೀಗೆ ಯಾವುದೊ ಒಂದು ಹವ್ಯಾಸ. ಸದಾ ನಿಮ್ಮ ಆಂತರ್ಯದಲ್ಲಿ ಜಾಗೃತವಾಗಿದ್ದು, ಸಮಯದ ಅಭಾವದಿಂದ ಹಿನ್ನೆಲೆಗೆ ಸರಿದ ನಿಮ್ಮ ಒಳದನಿಗೆ ಕಿವಿಯಾಗಿ. ಇವುಗಳಿಗೆಲ್ಲಾ ಆನ್‌ಲೈನ್‌ ತರಗತಿಗಳೂ ಲಭ್ಯ ಇವೆ.

ಪುಸ್ತಕ, ಸಿನಿಮಾ ಇತ್ಯಾದಿ

ನಿಮ್ಮ ನೆಚ್ಚಿನ ನಟ–ನಟಿಯರ ಚಿತ್ರಗಳನ್ನು ನೋಡಲು ಸಾಧ್ಯವಾಗಿರಲಿಲ್ಲವೆ? ಈಗ ಅವುಗಳಿಗಾಗಿ ತಡಕಾಡಬಹುದು. ಆ್ಯಕ್ಷನ್, ಥ್ರಿಲ್ಲರ್, ಪತ್ತೇದಾರಿ, ರೊಮ್ಯಾಂಟಿಕ್‌... ಹೀಗೆ ನಿಮ್ಮಿಷ್ಟದ ಪ್ರಕಾರಗಳನ್ನು ಹುಡುಕಿಕೊಳ್ಳಬಹುದು. ಪುಸ್ತಕ ಪ್ರೇಮಿಗಳು ವರ್ಷಗಳಿಂದ ಓದಲಾಗದೇ ಇರುವ, ಓದಬೇಕೆಂದು ಇಟ್ಟುಕೊಂಡಿರುವ ಪುಸ್ತಕಗಳನ್ನೆಲ್ಲಾ ಈಗ ಹೊರಗೆಳೆಯಬಹುದು. ಹೊಸ ಪುಸ್ತಕಗಳ ಪಟ್ಟಿಯನ್ನೂ ತಯಾರಿಸಿಕೊಳ್ಳಬಹುದು.

ಹೊಸ ಕಲಿಕೆ

ಕೊರೊನಾ ಲಾಕ್‌ಡೌನ್‌ ಜಗತ್ತಿನಲ್ಲೇ ಸಂಚಲನ ಮೂಡಿಸಿದ ವಿದ್ಯಮಾನ. ಇದನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಸಂಸ್ಥೆಗಳು 15–20 ದಿನಗಳ, ಒಂದು ವಾರದ ವಿಶೇಷ ಕೋರ್ಸ್‌ಗಳನ್ನು ಪರಿಚಯಿಸಿವೆ. ನಿಮ್ಮ ವೃತ್ತಿಗೆ ಅಥವಾ ಪ್ರವೃತ್ತಿಗೆ ಅನುಕೂಲವಾಗುವ ಅಲ್ಪಾವಧಿ ಕೋರ್ಸ್‌ಗಳನ್ನು ಸೇರಿಕೊಳ್ಳಬಹುದು. ಈ ಹೊಸ ಕಲಿಕೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ಜೊತೆಗೆ, ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಹೊಸ ಕಲಿಕೆಗೆ ಅನುಕೂಲವಾಗುವ ಹತ್ತಾರು ವೆಬ್‌ಸೈಟ್‌ಗಳು ಅಮೆಜಾನ್‌ನಲ್ಲಿ ಲಭ್ಯ ಇವೆ. www.coursera.org,  www.creativelive.com,  join.skillshare.com, www.udemy.com ನಂತಹ ವೆಬ್‌ಸೈಟ್‌ಗಳಿವೆ. ಕಲಿಯುವ ಉತ್ಸಾಹಕ್ಕೆ ತಡೆ ಏಕೆ?

ವ್ಯಾಯಾಮ ತಪ್ಪಿಸಬೇಡಿ

ನೀವೀಗ ವ್ಯಾಯಾಮಕ್ಕೆ ತುಸು ಹೆಚ್ಚೇ ಸಮಯವಿಡಬಹುದು. ಮನೆಯಲ್ಲಿರುವುದರಿಂದ ಹೆಚ್ಚು ತಿನ್ನುತ್ತೀರಿ, ವ್ಯಾಯಾಮವೂ ತುಸು ಹೆಚ್ಚೇ ಇರಲಿ. ಯೋಗ, ಧ್ಯಾನಗಳನ್ನೂ ಪ್ರಾರಂಭಿಸಿ. ಆನ್‌ಲೈನ್‌ನಲ್ಲಿ ಏರೊಬಿಕ್ಸ್‌ನ ಉಚಿತ ತರಬೇತಿಗಳಿವೆ. ಅವುಗಳ ಸಹಾಯ ಪಡೆಯಬಹುದು. ಮನೆಯ ಹಿಂದೆ ಅಥವಾ ಟೆರೇಸ್‌ ಮೇಲೆ ಗಾರ್ಡನಿಂಗ್‌ ಮಾಡಬಹುದು.

ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಮನೆಯಲ್ಲಿ ಸಣ್ಣ ಜಗಳ, ಗಲಾಟೆ, ಅಶಿಸ್ತಿಗೆಲ್ಲಾ ಕಿರುಚಾಡಿ ನಿಮ್ಮ ಹಾಗೂ ಮನೆಯವರ ನೆಮ್ಮದಿಗೆ ಭಂಗ ತರಬೇಡಿ. ಮಕ್ಕಳಿಗೆ ದೀರ್ಘ ರಜೆ ಇದೆ. ಹೊರಗೆ ಹೋಗುವಂತಿಲ್ಲ. ದಿನವಿಡೀ ಟಿವಿ ಮುಂದೆ ಕೂರಬಹುದು, ಕೆಲವರು ನೆಟ್‌ಫ್ಲಿಕ್ಸ್‌ಗೆ ಅಂಟಿಕೊಳ್ಳುತ್ತಾರೆನ್ನಿ, ತಡೆಯಿಲ್ಲದೆ ವಿಡಿಯೊ ಗೇಮ್‌ಗಳನ್ನೂ ಆಡಬಹುದು, ಮತ್ತೆ ಮತ್ತೆ ತಿಂಡಿ ಕೇಳಬಹುದು... ಇದಕ್ಕೆಲ್ಲಾ ಅಸಮಾಧಾನಗೊಳ್ಳದಿರಿ. ಗಂಡ–ಮಕ್ಕಳನ್ನು ಮನೆಗೆಲಸದಲ್ಲಿ ತೊಡಗಿಸಿಕೊಳ್ಳಿ, ಅಡುಗೆ ಮನೆಯಲ್ಲಿ ಚಿಕ್ಕಪುಟ್ಟ ಸಹಾಯ ಕೋರಿ. ಇದರಿಂದ ಅವರಿಗೂ ಅನುಕೂಲ, ನಿಮಗೂ ಸಹಾಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು