ಭಾನುವಾರ, ಸೆಪ್ಟೆಂಬರ್ 19, 2021
29 °C

Father's Day| ಅಪ್ಪನ ದಿನದ ಇತಿಹಾಸ ಏನು ಗೊತ್ತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1907ರಲ್ಲಿ ವೆಸ್ಟ್‌ ವರ್ಜಿನಿಯಾದ ಸಂಭವಿಸಿದ ಗಣಿ ದುರಂತದಲ್ಲಿ ಬೃಹತ್‌ ಸಂಖ್ಯೆಯಲ್ಲಿ ಪುರುಷರು ಮೃತರಾದರು. ಅವರ ನೆನಪಿಗಾಗಿ ತಂದೆಯರಿಗೆ ಗೌರವ ಸಲ್ಲಿಸಲು ಅಪ್ಪನ ದಿನ ಆಚರಿಸಲಾಯಿತು. ನಂತರ 1909ರಲ್ಲಿ ವಾಷಿಂಗ್ಟನ್‌ನ ಸ್ಪೋಕೇನ್‌ನಲ್ಲಿ ಸೊನೊರಾ ಡೋಡ್‌ ತಂದೆಯ ಮಹತ್ವ ತಿಳಿಸಲು ಅಪ್ಪನ ದಿನ ಆಚರಿಸಲು ಪ್ರಸ್ತಾಪಿಸಿದರು. ಸೊನೊರಾ ಅವರ ತಂದೆ ವಿಲಿಯಮ್ಸ್‌ ಜಾಕ್ಸನ್‌ ಸ್ಮಾರ್ಟ್‌ ಯೋಧರಾಗಿದ್ದು, ನಂತರ ಏಕಾಂಗಿಯಾಗಿ ಆರು ಮಕ್ಕಳನ್ನು ಆತ ಪೋಷಿಸಿದ್ದರು. ಅಮ್ಮನ ದಿನ ಆಚರಣೆ ಬಂದ ನಂತರ, ತಂದೆಯ ಪಾತ್ರವೂ ಹಿರಿದು ಎಂದು ಸೊನೊರಾ ಅಪ್ಪನ ದಿನ ಆಚರಣೆಗೆ ಮುಂದಾದರು. ಜೂನ್‌ 5ರಂದು ಆಕೆಯ ತಂದೆಯ ಜನ್ಮ ದಿನವಾದ್ದರಿಂದ ಅಂದೇ ಆಚರಿಸಬೇಕೆಂದು ಬಯಸಿದರೂ ಅದು ಸಾಧ್ಯವಾಗದೆ, 1910ರಲ್ಲಿ ಜೂನ್‌ 19ರಂದು ಪ್ರಥಮ ಬಾರಿಗೆ ಸ್ಪೋಕೇನ್‌ನ ವೈಎಂಸಿಎಯಲ್ಲಿ ಸೊನೊರಾ ನೇತೃತ್ವದಲ್ಲಿ ಅಪ್ಪನ ದಿನ ಆಚರಿಸಲಾಯಿತು.

ಇದಾದ ಮೇಲೆ ಪ್ರತಿ ವರ್ಷದ ಆಚರಣೆ ಅಲ್ಪ ಮಟ್ಟದಲ್ಲಿ ನಡೆಯಿತಾದರೂ ಯಶಸ್ಸು ಕಾಣಲಿಲ್ಲ. 1920ರಲ್ಲಿ ಸೊನೊರಾ ಈ ಆಚರಣೆ ಉತ್ತೇಜಿಸುವುದನ್ನು ನಿಲ್ಲಿಸಿದರು. ಷಿಕಾಗೊಗೆ ತಮ್ಮ ಕಲಾ ಶಿಕ್ಷಣ ಮುಂದುವರಿಸಲು ಹೋದರು. 1930ರಲ್ಲಿ ಆಕೆ ಮತ್ತೆ ಸ್ಪೋಕೇನ್‌ಗೆ ವಾಪಸ್‌ ಬಂದ ಮೇಲೆ ರಾಷ್ಟ್ರಮಟ್ಟದಲ್ಲಿ ಅಪ್ಪನ ದಿನ ಆಚರಣೆ ಮಾಡಲು ಎಲ್ಲರನ್ನೂ ಪ್ರೇರೇಪಿಸಲು ಮುಂದಾದರು. 1938ರಲ್ಲಿ ಫಾದರ್ಸ್‌ ಡೇ ಕೌನ್ಸಿಲ್‌ನ ನೆರವಿನೊಂದಿಗೆ ದಿನದ ಆಚರಣೆಗೆ ಮುಂದಾದರು. ಕೌನ್ಸಿಲ್‌ ವ್ಯಾಪಾರಸ್ಥರ ಸಮೂಹವಾಗಿದ್ದರಿಂದ ಅಪ್ಪನ ದಿನಕ್ಕೆ ಅವರಿಗೆ ಟೈ, ಟೊಬ್ಯಾಕೊ ಪೈಪ್‌ ಮತ್ತು ಇತರೆ ಸಾಂಪ್ರದಾಯಿಕ ಉಡುಗೊರೆಗಳನ್ನು ನೀಡಲು ಉತ್ತೇಜಿಸಿದರು. ಇಷ್ಟೆಲ್ಲ ಆದರೂ, ಅಮೆರಿಕದಲ್ಲಿ ಅಪ್ಪನ ದಿನವನ್ನು ರಜೆ ದಿನವನ್ನಾಗಿ ಪರಿಗಣಿಸಲಿಲ್ಲ. ಅಲ್ಲಿನ ಕಾಂಗ್ರೆಸ್‌ನಲ್ಲಿ 1913, 1916ರಲ್ಲಿ ಇದರ ಪ್ರಸ್ತಾಪವೂ ಆಗಿತ್ತು. 1924ರಲ್ಲಿ ಅಧ್ಯಕ್ಷ ಕಾಲ್ವಿನ್‌ ಕೂಲಿಡ್ಜ್‌ ಅವರ ಸಲಹೆಯಿಂದ ರಾಷ್ಟ್ರದಾದ್ಯಂತ ಆಚರಣೆಯಾಯಿತು. 1966ರಲ್ಲಿ ಅಧ್ಯಕ್ಷ ಲಿಂಡನ್‌ ಬಿ. ಜಾನ್ಸನ್‌ ಪ್ರಥಮ ಬಾರಿಗೆ ಅಪ್ಪಂದಿರಿಗೆ ಗೌರವ ಸಲ್ಲಿಸಲು ಜೂನ್‌ ಮೂರನೇ ವಾರ ಅಪ‍್ಪನ ದಿನವನ್ನಾಗಿ ಘೋಷಣೆ ಮಾಡಿದರು. ಆರು ವರ್ಷದ ನಂತರ ಅಧ್ಯಕ್ಷ ರಿಚರ್ಡ್‌ ನಿಕ್ಸನ್‌ ಅಪ್ಪನ ದಿನದಂದು ರಾಷ್ಟ್ರೀಯ ರಜೆಯನ್ನಾಗಿ ಘೋಷಿಸಿ ಕಾನೂನು ತಂದರು. ಅಂದಿನಿಂದ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಜೂನ್‌ ಮೂರನೇ ವಾರದಂದು ಅಪ್ಪನ ದಿನದ ಆಚರಣೆ ಆಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು