ಸೋಮವಾರ, ಡಿಸೆಂಬರ್ 6, 2021
23 °C

ಪತ್ರಗಳಲ್ಲಿ ಕಂಡ ಬಹುತ್ವದ ಪರಿಕಲ್ಪನೆ

ಎಸ್. ಆರ್. ವಿಜಯಶಂಕರ Updated:

ಅಕ್ಷರ ಗಾತ್ರ : | |

Prajavani

ಒಂದು ಕಾಲದ ಶ್ರೇಷ್ಠ ಬರಹಗಾರರು ತಮ್ಮ ಕಾಲದಲ್ಲಿ ಕಂಡ ಕಾಣ್ಕೆಯು ಎಲ್ಲಾ ಕಾಲಕ್ಕೂ ಅನ್ವಯಗೊಂಡಾಗ ಅವರ ವಿಚಾರ ಸಾರ್ವಕಾಲಿಕವೆಂದು ಪರಿಗಣಿತವಾಗುತ್ತದೆ. ಅಂತಹವರ ಸಂಖ್ಯೆ ಹೆಚ್ಚಿರುವುದಿಲ್ಲ. ನಮ್ಮ ಕಾಲದಲ್ಲಿ ಡಾ. ಶಿವರಾಮ ಕಾರಂತರು ಅಂತಹ ವಿರಳರಲ್ಲಿ ಒಬ್ಬರು. ಈಚೆಗೆ ನಾವು ಪ್ರಜಾಪ್ರಭುತ್ವದಲ್ಲಿ ಸಮಾನತೆ, ಸಮಾಜದಲ್ಲಿ ಬಹುತ್ವದ ಅಂದರೆ ಬಹು ರೀತಿಯ ಚಿಂತನೆಯ ನೆಲೆಗಳಿಗೆ ಇರಬೇಕಾದ ಅವಕಾಶಗಳು ಎಂಬಿತ್ಯಾದಿ ವಿಚಾರಗಳ ಬಗೆಗೆ ಯೋಚಿಸುವಾಗಲೂ ಕಾರಂತರ ನೆನಪು ಸಹಜವಾಗಿ ಬರುತ್ತದೆ.

ಕಾರಂತರ ಹಲವಾರು ಕೊಡುಗೆಗಳಿಂದ, ಪುಸ್ತಕಗಳಿಂದ ಅವರ ನೆನಪು ಸಹಜ. ಅವರು ಬರವಣಿಗೆ, ಭಾಷಣ, ನೃತ್ಯ, ನಾಟಕ, ಯಕ್ಷಗಾನ, ಪ್ರವಾಸ, ಚಿತ್ರಕಲೆ ಮೊದಲಾದವುಗಳಲ್ಲಿ ತೊಡಗಿದ್ದಂತೆಯೇ, ಪಂಡಿತ, ಪಾಮರರೆಲ್ಲರ ಜೊತೆ ನಿರಂತರವಾದ ಪತ್ರ ವ್ಯವಹಾರದ ಮೂಲಕವೂ ಸಂಪರ್ಕ ಇರಿಸಿಕೊಂಡಿದ್ದರು. ಅವರು ಪ್ರವಾಸದಲ್ಲಿಲ್ಲದೆ ಮನೆಯಲ್ಲಿದ್ದಾಗ ಬೆಳಗ್ಗೆ 6.30ರಿಂದ ಮಧ್ಯಾಹ್ನ 12.30ರವರೆಗೆ ಗಂಭೀರ ಅಧ್ಯಯನ, ಬರವಣಿಗೆಯಲ್ಲಿ ತೊಡಗಿರುತ್ತಿದ್ದರಂತೆ. ಮಧ್ಯಾಹ್ನದ ಊಟ ಹಾಗೂ ತುಸು ವಿಶ್ರಾಂತಿ ಬಳಿಕ ಪ್ರತಿದಿನ ಕನಿಷ್ಠ ಒಂದು ಗಂಟೆಯನ್ನು ಪತ್ರ ಬರೆಯುವುದಕ್ಕೆ ಮೀಸಲಿಡುತ್ತಿದ್ದರು. ಬಿ. ಮಾಲಿನಿ ಮಲ್ಯ ಅವರ ಸಹಾಯದಿಂದ ಕಾರಂತರು ನಾಡಿನ ಹಲವರಿಗೆ ಬರೆದ ಪತ್ರಗಳನ್ನು ಸಂಗ್ರಹಿಸಿ ‘ಪತ್ರ ವ್ಯವಹಾರ ಮತ್ತು ನಾನು’ ಎಂಬ ಕೃತಿಯೊಂದನ್ನು ಮಂಗಳೂರು ವಿಶ್ವವಿದ್ಯಾಲಯದ ಡಾ. ಕೆ. ಶಿವರಾಮ ಕಾರಂತ ಪೀಠ ಪ್ರಕಟಿಸಿದೆ. ಅಲ್ಲಿರುವ ಪತ್ರ ವೈವಿಧ್ಯ ಸಮಾನತೆ, ಪ್ರಜಾಪ್ರಭುತ್ವದ ಬಗೆಗಿನ ಕಾರಂತರ ವಿಚಾರ ಹಾಗೂ ಬಹುತ್ವದ ಚಿಂತನೆಗಳಿಗೆ ಪೂರಕವಾಗಿ ಹಲವು ಆಕರಗಳನ್ನು ಒದಗಿಸುತ್ತದೆ.

ಸ್ವಾತಂತ್ರ್ಯ-ಸಮಾನತೆ
ಕಾರಂತರು ತಮ್ಮ 74ನೇ ವಯಸ್ಸಿನಲ್ಲಿ ಅಂದರೆ ದಿನಾಂಕ 1975ರ ಅಕ್ಟೋಬರ್‌ 2ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದರಿಗೆ ಇಂಗ್ಲಿಷ್‌ನಲ್ಲಿ ಬರೆದ ಪತ್ರದಲ್ಲಿ ಆಗ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದರು. ತಮಗೆ ಭಾರತ ಸರ್ಕಾರ 1968ರಲ್ಲಿ ನೀಡಿದ ಪದ್ಮಭೂಷಣ ಪ್ರಶಸ್ತಿಯನ್ನು ಅದರೊಟ್ಟಿಗೆ ಹಿಂತಿರುಗಿಸಿದರು. ಗಾಂಧೀಜಿ ನೇತೃತ್ವದ ರಾಷ್ಟ್ರೀಯ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದ ತಾವು, 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ, ಪ್ರಜಾಪ್ರಭುತ್ವ ಹಾಗೂ ಅದರ ರಕ್ಷಣೆಗಾಗಿ ರಚಿಸಲ್ಪಟ್ಟ ಸಂವಿಧಾನಗಳಿಂದ ಸಂತೋಷಪಟ್ಟಿದ್ದಾಗಿ ತಿಳಿಸಿದ್ದರು. ಆದರೆ, ಬೇಸರದ ವಿಚಾರವೆಂದರೆ, ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರೇ, ನಿರಂತರವಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡುತ್ತಾ ಜನರಿಗೆ ನೀಡಿದ ಹಕ್ಕುಗಳನ್ನು ಮೊಟಕುಗೊಳಿಸುತ್ತಾ ಬಂದಾಗಿತ್ತು.

ಈ ರೀತಿ ಜನರ ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತಾ ಸಾಗಿದ ಕ್ರಮದ ದೊಡ್ಡ ಆಘಾತ ಜುಲೈ 1975ರಲ್ಲಿ (ತುರ್ತು ಪರಿಸ್ಥಿತಿ ಘೋಷಣೆ) ಉಂಟಾಯಿತು. ಜನರ ಹಕ್ಕುಗಳನ್ನು ರಕ್ಷಿಸಬೇಕಾದ ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತೆಯನ್ನು ವ್ಯಕ್ತಿಯೊಬ್ಬರ ಮರ್ಜಿಗೆ ಅನುಗುಣವಾಗಿ ಕಿತ್ತುಕೊಳ್ಳಲಾಯಿತು. ಇದರಿಂದ ಈಗ 74ನೇ ವಯಸ್ಸಿನಲ್ಲಿ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಯಾವನೇ ಒಬ್ಬ ವ್ಯಕ್ತಿಗೆ ಜನರ ಹಕ್ಕು- ಸ್ವಾತಂತ್ರ್ಯಗಳನ್ನು ಹತ್ತಿಕ್ಕುವ ಅಧಿಕಾರವಿಲ್ಲ. ಕೆಲವು ದಶಕಗಳಿಂದ ನಾನು ಸಕ್ರಿಯ ರಾಜಕಾರಣದಲ್ಲಿ ಇಲ್ಲದೆ ಇದ್ದರೂ ಒಬ್ಬ ಲೇಖಕನಾಗಿ ಜನರ ಸ್ವಾತಂತ್ರ್ಯ ಹಕ್ಕುಗಳನ್ನು ಮೊಟಕುಗೊಳಿಸುವುದನ್ನು ಪ್ರತಿಭಟಿಸುವುದು ನನ್ನ ಕರ್ತವ್ಯ ಎಂದು ತಿಳಿದಿದ್ದೇನೆ. ಆತ್ಮಸಾಕ್ಷಿಯ ಸಮಾಧಾನಕ್ಕಾದರೂ 1968ರಲ್ಲಿ ನನಗೆ ನೀಡಿರುವ ಪದ್ಮಭೂಷಣ ಪ್ರಶಸ್ತಿಯನ್ನು ಹಿಂತಿರುಗಿಸಲೇ ಬೇಕಾಗಿದೆ ಎಂದು ಕಾರಂತರು ರಾಷ್ಟ್ರಪತಿಗಳಿಗೆ ಗೌರವ ಪೂರ್ವಕ ವಂದಿಸುವುದರೊಂದಿಗೆ ತಮ್ಮ ಪತ್ರವನ್ನು ಮುಕ್ತಾಯಗೊಳಿಸಿ, ಪ್ರಶಸ್ತಿಯನ್ನು ಹಿಂತಿರುಗಿಸಿದ್ದರು.

ಸ್ವಾತಂತ್ರ್ಯ, ಸಮಾನತೆಯನ್ನು ಒಳಗೊಂಡ ವ್ಯಕ್ತಿಯ ಹಕ್ಕುಗಳು ಎಷ್ಟು ಮುಖ್ಯವೋ ಅದನ್ನು ರಕ್ಷಿಸುವ ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತತೆಯೂ ಅಷ್ಟೇ ಮುಖ್ಯ ಎಂದು ಕಾರಂತರು ತಿಳಿದಿದ್ದರು. ಸಂವಿಧಾನದ ರಕ್ಷಣೆಗೆ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಇರಬೇಕಾದ ಸಮತೋಲ ವ್ಯವಸ್ಥೆಯೂ ಉಳಿಯಬೇಕು. ಅವು ಪರಸ್ಪರ ಒಂದನ್ನೊಂದು ನಿಯಂತ್ರಿಸುತ್ತಾ ಜನರ ಹಕ್ಕು, ಸ್ವಾತಂತ್ರ್ಯ, ಸಮಾನತೆಯನ್ನು ರಕ್ಷಿಸುವಂತಾಗಬೇಕು ಎಂಬುದು ಅವರ ಚಿಂತನೆಯಾಗಿತ್ತು.

ಬಹುತ್ವದ ನೆಲೆ
ಬಹುತ್ವದ ಕಲ್ಪನೆಯೂ ಕಾರಂತರಿಗೆ ಸಹನೆ, ಸಮಾನತೆ ಮತ್ತು ಪರಸ್ಪರ ಗೌರವಿಸುವ ಸ್ವಾತಂತ್ರ್ಯದ ನೆಲೆಯೇ ಆಗಿದ್ದವು. ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮೇಲು ಕೀಳಿನ ಭಾವನೆಗಳಿಗೆ ಹಲವು ಸಲ ಆಹಾರ ಪದ್ಧತಿಯೂ ಕಾರಣವಾಗುತ್ತದೆ. ಮಾಂಸಾಹಾರ ಮತ್ತು ಸಸ್ಯಾಹಾರವೆಂಬ ಭಿನ್ನ ಆಹಾರಕ್ರಮಗಳು ಅನೇಕ ಸಲ ತರ-ತಮ ಮಾಡಿ ಮೇಲು- ಕೀಳಿನ ಭಾವನೆಗಳಿಗೂ ಕಾರಣವಾಗುತ್ತವೆ. ಈ ಬಗ್ಗೆ ಕಾರಂತರು ಬರೆದ ಪತ್ರವೊಂದು ನಮ್ಮ ಕಣ್ಣು ತೆರೆಸುವಂತಿದೆ.

ಏಕೆ ಶಾಖಾಹಾರಿಗಳಾಗಬೇಕು ಎಂಬ ತಮ್ಮ ಪುಸ್ತಕವೊಂದನ್ನು ಎ. ಶ್ರೀನಿವಾಸ ಮೂರ್ತಿಯವರು ಕಾರಂತರಿಗೆ ಕಳುಹಿಸಿಕೊಟ್ಟರು. ಅವರ ಪುಸ್ತಕಕ್ಕೆ ಪ್ರತಿಕ್ರಿಯೆಯಾಗಿ 1995ರ ಅಕ್ಟೋಬರ್‌ 5ರಂದು ಶ್ರೀನಿವಾಸ ಮೂರ್ತಿಯವರಿಗೆ 94ನೇ ಇಳಿವಯಸ್ಸಿನ ಕಾರಂತರು ಬರೆದ ಪತ್ರ ಸ್ವಾರಸ್ಯಕರವಾಗಿದೆ. ವೈಜ್ಞಾನಿಕ ಆಹಾರ, ಪಿಷ್ಟ, ಪ್ರೊಟೀನು, ವಿಟಮಿನ್ ಇತ್ಯಾದಿ ಕಲ್ಪನೆ ಬರುವುದಕ್ಕಿಂತ ಸಹಸ್ರಾರು ವರ್ಷಗಳ ಹಿಂದೆಯೇ ಪ್ರಾಣಿಗಳಿಗೆ ಆಹಾರ ಬೇಕಿತ್ತು. ವೈಜ್ಞಾನಿಕ ಸಮಸ್ಯೆ ಆಹಾರಕ್ಕೆ ಎಂದೂ ಕಾರಣವಾಗಿರಲಿಲ್ಲ ಎಂದು ಹೇಳಿ ಸಸ್ಯಾಹಾರ ಹಾಗೂ ಮಾಂಸಾಹಾರದ ಸಮಸ್ಯೆಯನ್ನು ಕಾರಂತರು ಈ ಪತ್ರದಲ್ಲಿ ಮುಖಾಮುಖಿಯಾಗಿಸಿದ್ದರು.

ನೆಟ್ಟನೆ ನಿಂತು ಕಾಳುಕಡ್ಡಿ ಬೆಳೆಯ ತೊಡಗಿದ ಮಾನವನ ‘ಕೃಷಿಯುಗ’ ಪ್ರಾರಂಭವಾಗುವ ಮೊದಲು ಮನುಷ್ಯ ಏನು ತಿನ್ನುತ್ತಿದ್ದ? ಮಾನವ ಎಂದೂ ಮೇಯುವ ಪ್ರಾಣಿ ಆಗಿರಲಿಲ್ಲ. ಆದುದರಿಂದ ಆತ ಆದಿಮಾನವನ ಹಂತದಿಂದಲೂ ಮಾಂಸ ತಿನ್ನುತ್ತಿದ್ದ ಪ್ರಾಣಿಯೇ ಆಗಿದ್ದಿರಬೇಕೆಂದು ಕಾರಂತರು ತರ್ಕಿಸಿದ್ದರು. ಅದಕ್ಕೆ ಪೂರಕವಾಗಿ ಒಂದು ಪ್ಯಾರಾ ಪೂರ್ತಿ ಸೂಡಾನು, ಎಬಿಸ್ಸೀನಿಯಾಗಳಲ್ಲಿ ಹುಟ್ಟಿದ ಮಾನವ ಜೀವಿಗಳ ಅವಶೇಷಗಳ ಹಲ್ಲಿನ ಸ್ವರೂಪ ಆತ ಮಾಂಸಾಹಾರಿ ಆಗಿದ್ದಿರಬೇಕೆಂಬುದನ್ನು ಸೂಚಿಸುವುದಾಗಿ ವಿವರಿಸಿದ್ದರು. ನಿಯಾಂಡರ್ಥಾಲ್‌ ಗುಹೆಯಲ್ಲಿ ಸಿಕ್ಕ ಮಾನವ ಅವಶೇಷಗಳ ಆಧಾರದಿಂದ ನಿಯಾಂಡರ್ಥಾಲ್‌ ಯುಗ ಒಂದು ಲಕ್ಷ ವರ್ಷಗಳವರೆಗಿತ್ತು ಎಂಬುದನ್ನು ತರ್ಕಿಸಬೇಕಾಗುತ್ತದೆ. ಹಿಮಯುಗದಲ್ಲಿ ಏನೂ ಬೆಳೆಯಲಾಗದ ಭೂಮಿಯಲ್ಲಿದ್ದ ಮಾನವ ಮಾಂಸವನ್ನೇ ತಿಂದಿರಬೇಕಷ್ಟೆ.

ಮಾಂಸಾಹಾರದ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಕಾರಂತರು ಹೀಗೆ ಹೇಳಿದ್ದರು: ‘ಮಾನವಕುಲ ಎಂದಾದರೂ ‘ಪ್ರಾಣಿ ದಯಾ ಸಂಘ’ದ ಪೋಷಕ ಅದುದುಂಟೇ? ದನ, ಕತ್ತೆ, ಒಂಟೆ, ಕುದುರೆ- ಮನುಷ್ಯನಿಗಾಗಿ ಹಾಲು ಕೊಡುತ್ತಿವೆಯೇ? ಮಾನವ ಅವನ್ನು ಸಾಕಿ, ಕೊಂದು, ತಿಂದು, ಮಾತ್ರವಲ್ಲ ಅವುಗಳಿಂದ ಚಾಕರಿ ಮಾಡಿಸಿಕೊಂಡ; ಅವುಗಳ ಮೇಲೆ ಸವಾರಿ ಮಾಡಿದ. ಹಾಲು, ಮೊಸರು ಎಂದೂ ಆದಿ ಮಾನವರ ಆಹಾರವಾಗಿರಲಿಲ್ಲ. ಹಿಂದಿನ ಕಾಲದಲ್ಲಿ ಇಂದಿನ ವೈಜ್ಞಾನಿಕ ದೃಷ್ಟಿ ಇದ್ದಿರಲಿಲ್ಲ. ಪ್ರಾಣಿಗಳನ್ನು ಸಾಕಿದಾತ, ಅವುಗಳಿಂದ ಕೆಲಸ ಮಾಡಿಸಿಕೊಂಡಾತ- ಎಂದೂ ಕರುಣಾಳುವಲ್ಲ.’

ಮಾಂಸಾಹಾರ ಮಾನವನ ಸಹಜ ಆಹಾರವಾಗಿತ್ತು. ಅದು ಇಂದು ಮಾನವರ ಆಹಾರವಾಗಿರುವುದರಲ್ಲಿ ಯಾವ ತಪ್ಪೂ ಇಲ್ಲ ಎನ್ನುವ ಕಾರಂತರು, ಪತ್ರದ ಕೊನೆಯಲ್ಲಿ ತನಗೆ ‘ಮೊಟ್ಟೆಯೂ ಸಲ್ಲದು, ಮಾಂಸವೂ ಸಲ್ಲದು’ ಎಂದಿದ್ದರು. ತಾನು ಮೊಟ್ಟೆ, ಮಾಂಸ ಎರಡನ್ನೂ ತಿನ್ನದೇ ಇದ್ದರೂ ಸ್ವಂತ ಆಹಾರದಲ್ಲಿ ಸಂಪೂರ್ಣ ಶಾಖಾಹಾರಿಯೇ ಆಗಿದ್ದರೂ ಇನ್ನೊಬ್ಬ ಮಾಂಸಾಹಾರಿಯಾಗಿದ್ದರೆ ಅದು ಮಾನವನ ಸಹಜ ಗುಣ ಎನ್ನುವಲ್ಲಿ ಕಾರಂತರ ಬಹುತ್ವದ ಕಲ್ಪನೆ ಇದೆ. ಸಸ್ಯವಾಗಲಿ, ಮಾಂಸವಾಗಲಿ ಇಂದು ಮನುಷ್ಯ ಅವನ್ನು ಬೇಯಿಸದೆ ತಿನ್ನಲಾರ. ಯಾವ ಪಶುಪಕ್ಷಿಗಳೂ ಮಾಡದ ಬೇಯಿಸಿ ತಿನ್ನುವ ಗುಣ ಸಸ್ಯಾಹಾರಿಗಳಿಗೂ ಇದೆ. ಅದು ಕೂಡ ಪ್ರಕೃತಿಯಲ್ಲಿ ಇರಬಹುದಾದ ಕೇವಲ ಶಾಖಾಹಾರಿಗಳ ನಿಜವಾದ ಗುಣವಲ್ಲ. ಕೊನೆಯಲ್ಲಿ ಕಾರಂತರು, ‘ಇವತ್ತು ಬಾಯಿ ರುಚಿಗಾಗಿಯೇ ಬದುಕಿರುವ ನಾವು- ಮನುಷ್ಯನನ್ನೇ ಮನುಷ್ಯ ತಿನ್ನದೆ ಬಿಟ್ಟರೆ ಉಪಕಾರ; ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕಿದೆ ಎಂದು ಮಾನವ ತಿಳಿದರೆ ಪರಮೋಪಕಾರ’ ಎಂದು ಹೇಳಿ ಪತ್ರವನ್ನು ಮುಗಿಸಿದ್ದರು.

ನೀತಿಯ ಪರಿಕಲ್ಪನೆ
ದೇವರು, ಧರ್ಮ ಮಾನವನಿರ್ಮಿತ ಎಂದಾದರೆ ಬಹುತ್ವ, ಸಮಾನತೆಗಳ ಸಮಾಜವನ್ನು ನಡೆಸುವ ವ್ಯವಸ್ಥೆ ಏನು ಎಂಬ ಪ್ರಶ್ನೆ ಬರುತ್ತದೆ. ಪ್ರಜಾಪ್ರಭುತ್ವದಲ್ಲಿ ಸಮರ್ಪಕವಾದ ಕಾನೂನಿನ ಆಡಳಿತ ಅದರ ಒಂದು ಕ್ರಮ. ಯಾಕೆಂದರೆ ಜೀವನದಲ್ಲಿ ‘ನೀತಿ’ಯ ಬಗೆಯು ಸ್ವತಂತ್ರವಾದ ನೆಲೆಗಟ್ಟಿನ ಮೇಲೆ ನಿಂತಿಲ್ಲ ಎಂಬುದನ್ನು ಕಾರಂತರು ತಮ್ಮ ‘ಬಾಳ್ವೆಯೇ ಬೆಳಕು’ ಕೃತಿಯಲ್ಲಿ ವಿವರಿಸಿದ್ದರು. ನೀತಿ ಎಂಬುದು ವ್ಯಕ್ತಿಯ ನಡತೆಯನ್ನು ಅಳೆಯುವ ನೋಟ. ಅದು ವ್ಯಕ್ತಿಯು ತನ್ನ ಸಮೀಪದ ಮತ್ತು ದೂರದ ಮನುಷ್ಯ ಕುಟುಂಬದೊಡನೆ ವರ್ತಿಸುವ ರೀತಿ ಹೇಗಿರಬೇಕೆಂಬುದರ ಅಳತೆ. ಕೆಲವೊಮ್ಮೆ ಮನುಷ್ಯ ಇತರ ‘ಜೀವಿಗಳೊಡನೆ’ ಇರಿಸಿಕೊಳ್ಳುವ ಸಂಬಂಧವನ್ನು ಅದು ತೂಕ ಮಾಡುತ್ತದೆ.

ಆದರೆ, ಮನುಷ್ಯನ ನೀತಿ ಶಾಸ್ತ್ರಕ್ಕೊಂದು ಸ್ವತಂತ್ರವಾದ ನೆಲೆಗಟ್ಟು ಇಲ್ಲದ್ದರಿಂದ ಅದು ಮನುಷ್ಯನ ಹಿನ್ನೆಲೆಯನ್ನು ಹೊಂದಿದೆ. ಈ ಕಾರಣದಿಂದ ಅದು ಆಯಾಯ ಕಾಲದ ಅವಶ್ಯಕತೆ ಮಾತ್ರವಲ್ಲದೆ ಜನಾಭಿಪ್ರಾಯಗಳನ್ನು ಹೊಂದಿಕೊಂಡಿದೆ ಎನ್ನುವ ಕಾರಂತರು ಅವುಗಳನ್ನು ಬಾಳ್ವೆಯೆ ಬೆಳಕಿನಲ್ಲಿ ವಿಸ್ತರಿಸಿ ವಿವರಿಸಿದ್ದರು.

ಇದಕ್ಕೊಂದು ಉದಾಹರಣೆಯನ್ನು ರೇಖಾ ವಿ. ಬನ್ನಾಡಿ ಅವರ ‘ಕಾರಂತ ದುಡಿಮೆ ಪ್ರಪಂಚ’ ಕೃತಿಯಿಂದ ನೀಡಬಹುದು. ಕಾರಂತರು ತಮ್ಮ ಕೊನೆಯ ದಿನಗಳಲ್ಲಿ ಕೋಟ-ಸಾಲಿಗ್ರಾಮದಲ್ಲಿ ವಾಸಿಸುತ್ತಿದ್ದರು. ಅಲ್ಲಿಗೆ ಸಮೀಪದ ಕುಂದಾಪುರದಲ್ಲಿರುವ ರೇಖಾ ಬನ್ನಾಡಿ, ಕಾರಂತರ ನಿಜಜೀವನದ ಈ ವಿವರ ದಾಖಲಿಸಿದ್ದಾರೆ. ಯಾವುದೇ ಸಿದ್ಧಾಂತಕ್ಕೆ ಬದ್ಧರಾಗದೇ ಇದ್ದರೂ ಸದಾ ಅವರಲ್ಲಿದ್ದ ಜೀವಪರ ಕಾಳಜಿ ಈ ಘಟನೆಗಳಿಂದ ತಿಳಿಯುತ್ತದೆ.

ಪರಸ್ಪರ ಪ್ರೇಮಿಸುತ್ತಿದ್ದ ಗಂಡು- ಹೆಣ್ಣು ವಿವಾಹವಾಗಲು ಹಿರಿಯರು ಅಡ್ಡಬಂದರು. ತಮಗೆ ಆಸ್ತಿ, ಅಂತಸ್ತು ಯಾವುದೂ ಬೇಡ. ತಮ್ಮ ಪ್ರೀತಿಗೆ ಬೆಂಬಲ ಬೇಕು ಎಂದು ಯುವ ಪ್ರೇಮಿಗಳು ಕಾರಂತರ ಸಹಾಯ ಯಾಚಿಸಿದರು. ಕಾರಂತರು ಅವರಿಗೆ ಬೆಂಬಲವಾಗಿ ನಿಂತಾಗ ಮದುವೆ ಸುಸೂತ್ರವಾಗಿ ನಡೆಯಿತು. ಕೆಲವು ವರ್ಷಗಳ ಬಳಿಕ ಆ ಜೋಡಿ ತಮ್ಮ ಹೆತ್ತವರ ಆಸ್ತಿಯಲ್ಲಿ ಪಾಲು ಬೇಕೆಂದು ಹಕ್ಕು ಸ್ಥಾಪನೆಗೆ ಹೊರಟು ಕಿತ್ತಾಟವಾದಾಗ ಆ ವೃದ್ಧ ದಂಪತಿ ಕಾರಂತರನ್ನು ಕಂಡು ತಮ್ಮ ಗೋಳನ್ನು ತೋಡಿಕೊಂಡರು. ಆಗ ಕಾರಂತರು ಈ ವೃದ್ಧ ದಂಪತಿ ಪರ ನಿಂತರು.

ಹೀಗೆ ಮನುಷ್ಯನು ಮನುಷ್ಯನೊಡನೆ ನಡೆಯಿಸುವ ಅನೇಕಾನೇಕ ವ್ಯವಹಾರಗಳು, ಆಯಾಯ ಕಾಲದ, ಸಂದರ್ಭದ ದೃಷ್ಟಿಯಿಂದ ನೀತಿ, ಅನೀತಿ ಎಂದು ಸಾರಲ್ಪಡುತ್ತವೆ ಎಂಬ ಕಾರಂತರ ಮಾತಿಗೆ ಅವರೇ ಉದಾಹರಣೆಯಾಗಿದ್ದಾರೆ. ಬಹುತ್ವದ ಚಿಂತನೆಯು, ನೀತಿಯ ಪ್ರಶ್ನೆಯೂ ಸೇರಿದಂತೆ ಕಾರಂತರಲ್ಲಿ ಹಲವು ಆಯಾಮಗಳ ಜಿಜ್ಞಾಸೆಗೆ ಒಳಗಾಗುತ್ತದೆ.

ಜೀವಕೋಟಿ ಒಂದೇ ಸಮಾಜ
ಕಾರಂತರ ತಾತ್ವಿಕ ಭಿತ್ತಿಯಲ್ಲಿ ಸಮಾನತೆ ಎಂಬುದು ಮನುಷ್ಯ-ಮನುಷ್ಯರ ನಡುವೆ ಮಾತ್ರ ಇರಬೇಕಾದ ತತ್ವವಲ್ಲ. ತಮ್ಮ ‘ಬಾಳ್ವೆಯೇ ಬೆಳಕು’ ಕೃತಿಯಲ್ಲಿ ಅವರು, ‘ಜೀವನದ ಸುಖವನ್ನು ಕುರಿತು ಚಿಂತಿಸುವಾಗ- ಯಾವತ್ತೂ ಜೀವಕೋಟಿ ಒಂದೇ ಸಮಾಜವೆನಿಸುತ್ತದೆ’ ಎಂದು ಹೇಳಿದ್ದರು. ಮನುಷ್ಯ ತನ್ನನ್ನು ಬೇರೆಯೇ ಒಂದು ಜೀವಿ ಎಂದು ಭಾವಿಸುವುದೇ ಈ ಪ್ರಪಂಚದ ಕುರಿತಾದ ಮಾನವ ಚಿಂತನೆಯ ದೊಡ್ಡ ಬಾಧಕ ಎಂದು ಅವರು ತಿಳಿದಿದ್ದರು. ಈ ಜಗತ್ತಿನ ಪರಿಸರದಲ್ಲಿ ಸಕಲ ಜೀವಿಗಳೊಡನೆ ತಾನೂ ಒಬ್ಬ ಎಂದು ತಿಳಿಯದಿರುವುದೇ ಇತರ ಜೀವಿಗಳೊಡನೆ ಅವನ ವ್ಯವಹಾರ ಕೆಡುವುದಕ್ಕೆ ಕಾರಣ. ‘ತನ್ನ ಉಸಿರು, ಕ್ರಿಯೆ, ಮನಸ್ಸುಗಳೆಲ್ಲ ಸುತ್ತಲಿನ ಪ್ರಪಂಚವನ್ನು ಹೊಂದಿರಬೇಕಾದವು ಎಂದು ಎಲ್ಲಿಯತನಕ ಅವನು ತಿಳಿಯಲಾರನೋ, ಅಲ್ಲಿಯ ತನಕ ತನ್ನ ಜೀವನದ ಬೆಲೆಯೂ ಅವನಿಗೆ ತಿಳಿಯಲಾರದು’ ಎಂಬುದು ವಿಶ್ವಕುಟುಂಬಿಯಾಗಿ ಕಾರಂತರು ಸಮಾನತೆಯನ್ನು ಪರಿಭಾವಿಸಿದ ಕ್ರಮ. ಅವರ ವಿಶ್ವಾತ್ಮಕ ದೃಷ್ಟಿಕೋನದಲ್ಲಿ ಸಕಲ ಜೀವಿಗಳೊಡನಿರಬೇಕಾದ ಸಮಾನತೆಯ ತಾತ್ವಿಕತೆ ಸೇರಿಕೊಂಡಿದೆ. ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯಲ್ಲಿ ಈ ತನಕ ಚರ್ಚಿಸಿದ ವಿಚಾರಗಳು ಪರಿಸರದ ಜೀವ ಮೂಲ ಧ್ವನಿಯಾಗಿ ದೇವರ ಬಗ್ಗೆ ಮೂಕಜ್ಜಿ ತನ್ನ ಮೊಮ್ಮಗನಿಗೆ ಹೀಗೆ ಹೇಳುತ್ತಾಳೆ: ‘ಗುಡಿಯೂ ಶಾಶ್ವತವಲ್ಲ; ಆ ದೇವರೂ ಶಾಶ್ವತವಲ್ಲ. ಒಬ್ಬ ಶಾಶ್ವತವಾದ ದೇವರು ಇದ್ದಾನೆಂದರೂ ಅವನು ಎಂಥವನೆಂದು ನಮ್ಮ ಎಟುಕಿಗೆ ಸಿಕ್ಕಿದ್ದಲ್ಲ. ನಾವು, ನೂರು, ಸಾವಿರಗಟ್ಟಲೆ ದೇವರನ್ನು ಮಾಡಿಕೊಂಡು ‘ಇದೇ ನಿಜ’, ‘ಅದೇ ನಿಜ ಅಂತ ಮರುಳು ಮಾತನಾಡಿದವರು.’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು