ಗುರುವಾರ , ಜನವರಿ 21, 2021
30 °C

PV Web Exclusive: ಪತ್ರಕರ್ತರಾಗಿ ತ ರಾ ಸು

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

TR Subba Rao

ಕಳೆದ ವರ್ಷ ಮೈಸೂರಿಗೆ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಮಹಾತ್ಮಾ ಗಾಂಧಿ ಅವರ ಮೊಮ್ಮಗ ರಾಜಮೋಹನ ಗಾಂಧಿ ಅವರು ಪ್ರೇಕ್ಷಕರಿಗೆ ಒಂದು ಪ್ರಶ್ನೆ ಕೇಳಿದ್ದರು. ‘ಮಹಾತ್ಮಾ, ಸ್ವಾತಂತ್ರ ಹೋರಾಟಗಾರ, ರಾಷ್ಟ್ರಪಿತ ಎಂದು ಕರೆಸಿಕೊಳ್ಳುವ ಗಾಂಧೀಜಿ ಅವರ ವೃತ್ತಿ ಯಾವುದಾಗಿತ್ತು?’ ಎಂದು. ಅದಕ್ಕೆ ಉತ್ತರವನ್ನೂ ಅವರೇ ಹೇಳಿದರು. ವೃತ್ತಿಯಿಂದ ಗಾಂಧೀಜಿ ಅವರು ಪತ್ರಕರ್ತರಾಗಿದ್ದರು ಎಂದು. ಅದೇ ಮಾತನ್ನು ಕನ್ನಡದ ಖ್ಯಾತ ಕಾದಂಬರಿಕಾರ ತರಾಸು ಅವರಿಗೂ ಹೇಳಬಹುದು. ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಎಂದೇ ಖ್ಯಾತರಾಗಿದ್ದ ತರಾಸು ಅವರ ವೃತ್ತಿಯೂ ಪತ್ರಿಕಾವೃತ್ತಿಯೇ ಆಗಿತ್ತು.

ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಕೊಂಡಿದ್ದ ತರಾಸು ಜೈಲು ವಾಸದ ನಂತರ ‘ವಿಶ್ವಕರ್ನಾಟಕ’ ಪತ್ರಿಕೆಯಲ್ಲಿ ವರದಿಗಾರರಾಗಿ ಸೇರಿದರು. ವಿಶ್ವಕರ್ನಾಟಕ ತಿರುಮಲೆ ತಾತಾಚಾರ್ಯ ಅವರು ಆರಂಭಿಸಿದ ಪತ್ರಿಕೆ. ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದ ಪತ್ರಿಕೆ. ನಂತರ ಅವರು ಎಂ.ಎಸ್.ಚಿಂತಾಮಣಿ ಅವರ ‘ವಾಹಿನಿ’ ಪತ್ರಿಕೆಯ ಸಹ ಸಂಪಾದಕರಾಗಿದ್ದರು. 1950ರಲ್ಲಿ ಚಿತ್ರದುರ್ಗದಲ್ಲಿ ಮ.ನ.ಶ್ರೀಧರಮೂರ್ತಿ ಅವರು ಆರಂಭಿಸಿದ ‘ನವೋದಯ’ ಪತ್ರಿಕೆಯಲ್ಲಿಯೂ ಕೆಲಸ ಮಾಡಿದ್ದರು.

ಪತ್ರಕರ್ತರಾಗಿದ್ದ ತರಾಸು ಅವರು ಖ್ಯಾತ ಕಾದಂಬರಿಕಾರ ಅ.ನ.ಕೃ. ಅವರನ್ನು ಒಮ್ಮೆ ಸಂದರ್ಶಿಸಿದ್ದರು. ಆ ನಂತರ ಇಬ್ಬರಲ್ಲಿಯೂ ಆತ್ಮೀಯತೆ ಬೆಳೆಯಿತು. ಪ್ರಗತಿಶೀಲ ಚಳವಳಿಯ ನೇತಾರರಾಗಿದ್ದ ಅ.ನ.ಕೃ ಅವರಿಂದ ಸ್ಫೂರ್ತಿಗೊಂಡು ತರಾಸು ಅವರು ಕಾದಂಬರಿ ಬರೆಯಲು ಆರಂಭಿಸಿದರು. ಸಿದ್ದವನಹಳ್ಳಿ ಕೃಷ್ಣ ಶರ್ಮ, ನಾಡಿಗೇರ ಕೃಷ್ಣಮೂರ್ತಿ ಮುಂತಾದವರ ಜೊತೆಗೆ ಅವರು ಪತ್ರಕರ್ತರಾಗಿ ದುಡಿದಿದ್ದಾರೆ.

ಪತ್ರಿಕಾಉದ್ಯೋಗಿ ಎನ್ನುವುದು ಅರೆಹೊಟ್ಟೆಯ ಕಾಯಕ ಎನ್ನುವುದು ಗೊತ್ತಿದ್ದರೂ ತರಾಸು ಅದನ್ನೇ ಆಯ್ಕೆ ಮಾಡಿಕೊಂಡಿದ್ದರು. ಪತ್ರಿಕಾ ಉದ್ಯೋಗದ ಬಗ್ಗೆ ಅವರಲ್ಲಿ ಸ್ಪಷ್ಟ ಚಿಂತನೆಗಳಿದ್ದವು. ಲೋಕಸೇವೆ ಮಾಡಬೇಕು ಎನ್ನುವವರಿಗೆ ಪತ್ರಿಕಾ ವೃತ್ತಿಗಿಂತ ಮಿಗಿಲಾದ ವೃತ್ತಿ ಇನ್ನೊಂದಿಲ್ಲ. ಜನಕಂಟಕರನ್ನು ಬಯಲಿಗೆಳೆದು, ಅವರ ದುರ್ವ್ಯಾಪಾರವನ್ನು ಬಹಿರಂಗ ಮಾಡಿ, ಸಮಾಜದಲ್ಲಿ ಬೇರೂರಿರುವ ದುಷ್ಟ ಶಕ್ತಿಗಳನ್ನು ಮರ್ಧನ ಮಾಡಿ ಜನರಲ್ಲಿ ಜ್ಞಾನ ಪ್ರಸಾರ ಮಾಡಲು ಪತ್ರಿಕೆ ಅತ್ಯುತ್ತಮ ಅಸ್ತ್ರ. ಇಲ್ಲಿಯದು ಸ್ವತಂತ್ರ ಜೀವನ. ಯಾರಿಗೂ ತಲೆ ಬಾಗದೆ, ಯಾರ ಬಾಯೆಂಜಲಿಗೂ ಕೈಯಾಡಿಸದೆ ನಿರಂಕುಶವಾಗಿ ಜೀವನ ಸಾಗಿಸಬಹುದು. ಸಾವಿರ ಕಷ್ಟಗಳಿದ್ದರೂ ಈ ವೃತ್ತಿ ಪವಿತ್ರ ಎಂಬುದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು.

‘ಹಣ, ಸುಖ ಜೀವನ ಬೇಕಾಗಿದ್ದರೆ ಬೇರೆ ಯಾವುದೇ ವೃತ್ತಿ ಹಿಡಿಯಿರಿ. ಪತ್ರಿಕಾ ವೃತ್ತಿಗೆ ಬರಲೇ ಬೇಡಿ’ ಎಂದು ಅವರು ಹೇಳುತ್ತಿದ್ದರು. ಪತ್ರಕರ್ತ ಎಂದರೆ ಎಂದೋ ಒಂದು ದಿನ ಯಾವುದೋ ಕಾರಣಕ್ಕೆ ಎರಡು ಸಾಲು ಬರೆಯುವವನಲ್ಲ. 24 ಗಂಟೆ ತನ್ನ ಮಿದುಳನ್ನು ಮುದ್ರಣ ಯಂತ್ರಕ್ಕೆ ಮಾರಿಕೊಂಡ ಜೀವಿ. ಆತನೊಬ್ಬ ಯೋಧ. ಆತನ ಮಿರುಗುವ ಹೊರಮೈಯನ್ನು ಜನರು ಬಲ್ಲರೇ ವಿನಾ ಅಂತರಂಗದ ಹೋರಾಟವನ್ನು ಹಲವಾರು ಅನಿಶ್ಚಿತತೆಯ ವಿಷಚಕ್ರತೀರ್ಥದಲ್ಲಿ ಸುಳಿಸುತ್ತವ ಆತನ ಗಂಭೀರ ಬಾಳನ್ನು ಕಂಡವರು ಕಡಿಮೆ ಎಂದು ಅವರು ಹೇಳುತ್ತಿದ್ದರು.

ಕನ್ನಡದಲ್ಲಿ ಪತ್ರಿಕೋದ್ಯಮ, ಪತ್ರಕರ್ತನ ಜೀವನ ಸುಭದ್ರ ತಳಹದಿಯ ಮೇಲೆ ನಿಲ್ಲಬೇಕು. ಉನ್ನತ ಮಟ್ಟಕ್ಕೆ ಏರಬೇಕು ಎಂದು ಅವರು ಬಯಸಿದ್ದರು. ಪತ್ರಿಕಾ ಉದ್ಯೋಗ ಹೊರಗಿದ್ದವರನ್ನು ಆಕರ್ಷಿಸುತ್ತದೆ ಏನೋ ಸ್ವರ್ಗವನ್ನು ತಂದುಕೊಡುವ ಹಾಗೆ. ಒಳಗೆ ಬಂದ ಮೇಲೆ ಅದೊಂದು ಅಗ್ನಿಕುಂಡ. ಪತ್ರಿಕಾ ಉದ್ಯೋಗ ಹೂವಿನ ಹಾಸಿಗೆಯಲ್ಲ. ಶರಪಂಜರ. ಇದನ್ನು ಆಯ್ಕೆ ಮಾಡಿಕೊಳ್ಳುವುದು ಎಂದರೆ ಬಡತನವನ್ನು ಆಹ್ವಾನಿಸಿದ ಹಾಗೆ ಎಂದು ಅವರು ಅಂದಿನ ಪತ್ರಿಕಾ ವೃತ್ತಿಯನ್ನು ಬಣ್ಣಿಸಿದ್ದರು.

ಪತ್ರಿಕಾ ವೃತ್ತಿಯಲ್ಲಿ ಇರುವವರಿಗೆ ಅನುವಾದ ಸಾಮರ್ಥ್ಯ ಬಹಳ ಮುಖ್ಯ. ಬಿಟ್ಟಿ ಹಣ ಪಡೆಯಲು ಪತ್ರಿಕಾ ಉದ್ಯೋಗಿ ಮುಂದಾಗಬಾರದು. ಸುಮ್ಮನೆ ಯಾರೂ ಹಣ ಕೊಡುವುದಿಲ್ಲ. ಮೂರು ಕಾಸು ಕೊಟ್ಟು 12 ಕಾಸು ಜಾಹೀರಾತು ಬಯಸುತ್ತಾರೆ ಎನ್ನುವುದು ಅವರ ನಂಬಿಕೆಯಾಗಿತ್ತು. ಪತ್ರಿಕಾ ಉದ್ಯೋಗಿಗೆ ಕೇವಲ ಪದವಿ ಇದ್ದರೆ ಸಾಲದು. ಅನುಭವ ಬಹಳ ಮುಖ್ಯ. ಲೇಖನಿ ಮಾರಿಕೊಂಡು ಬದುಕಬಾರದು. ಕವಿ ವಾಲ್ಟರ್ ಹೇಳಿದಂತೆ ‘ನನ್ನಲ್ಲಿ ರಾಜದಂಡವಿಲ್ಲ. ಆದರೆ ಲೇಖನಿ ಇದೆ’ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಪತ್ರಿಕಾ ಮಾಲೀಕನ ಸ್ಥಿತಿ ಕೂಡ ಚೆನ್ನಾಗಿಲ್ಲ. ‘ಒಲೆಯ ಮೇಲೆ ಎಸರು ಒರಳಲ್ಲಿ ಭತ್ತ’ ಎನ್ನುವ ಸ್ಥಿತಿ ಮಾಲಿಕರದ್ದು. ಪತ್ರಿಕಾ ಕಚೇರಿ ಬಾಗಿಲು ಮುಚ್ಚಿ ಬದುಕುವ ಮಾಲೀಕರು ಯಾರೂ ಇಲ್ಲ. ಅವರ ಬಗ್ಗೆಯೂ ನಮಗೆ ಕಾಳಜಿ ಇರಬೇಕು ಎಂದು ಅವರು ಬಯಸುತ್ತಿದ್ದರು.

ಜಗತ್ತಿನ ಎಲ್ಲ ಅನ್ಯಾಯ, ದುಃಖ, ಅತ್ಯಾಚಾರಗಳ ವಿರುದ್ಧ ಹೋರಾಡುವ ಪತ್ರಿಕಾ ಉದ್ಯೋಗಿಯ ಪಾಲಿಗೆ ಅಯ್ಯೋ ಎನ್ನುವವರು ಯಾರೂ ದಿಕ್ಕಿಲ್ಲ. ದಿನದ 24 ಗಂಟೆ ಕತ್ತೆಯಂತೆ ದುಡಿದರೂ ಬಲೂನು ಕೇಳುವ ಮಗುವಿಗೆ ಹೆಂಡತಿಯ ಮೊಲೆಯನ್ನೇ ಎರಡು ಬಲೂನು ಎಂದು ತೋರಿಸುವ ಬಡತನ ಪತ್ರಕರ್ತನದ್ದು ಎಂದು ವ್ಯಾಖ್ಯಾನಿಸುವ ಅವರು ಅಂದಿನ ಪತ್ರಿಕಾ ಉದ್ಯೋಗಿಯ ಸಂಕಷ್ಟವನ್ನು ಬಿಡಿಬಿಡಿಯಾಗಿ ಬಿಚ್ಚಿಡುತ್ತಿದ್ದರು.

ಎರಡು ಸಾಲು ಸರಿಯಾಗಿ ಬರೆಯಲು ಬಾರದವನೂ ಪತ್ರಿಕಾ ಉದ್ಯೋಗಿ ಆಗಬಲ್ಲ. ಅವನಿಗೆ ಪಾರಿಭಾಷಿಕ ಪರಿಜ್ಞಾನ, ವಿದ್ಯಾಬಲ, ಭಾಷಾ ಕೌಶಲ ಇರಬೇಕು ಎಂಬ ಸಾಮಾನ್ಯ ಜ್ಞಾನದ ಅಗತ್ಯವೂ ಇಲ್ಲ. ಮೂರ್ಖರು, ಫಟಿಂಗರೂ ಪತ್ರಿಕಾ ಉದ್ಯೋಗಿಯಾಗಬಹುದು ಎಂಬ ವಾತಾವರಣ ಇದೆ ಎಂದು ಈಗ 70 ವರ್ಷಗಳ ಹಿಂದೆಯೇ ಅವರು ಹೇಳಿದ್ದರು.

ಕೈಕೆಳಗೆ ಇರುವವರು ಮಾನವರೆಂಬುದನ್ನು ಮರೆಯುವ ಮಟ್ಟಕ್ಕೆ ಈ ಉದ್ಯಮ ಮುಟ್ಟಿಲ್ಲ. ಯಾಂತ್ರಿಕತೆ ಹೃದಯವನ್ನು ಮರೆಮಾಚುವಷ್ಟು ಆಳಕ್ಕೆ ಇಳಿದಿಲ್ಲ ಎಂದೂ ಅವರು ಆಗಿನ ಸಂದರ್ಭಕ್ಕೆ ಹೇಳಿದ್ದರು. ಮಾಲೀಕರು ಮತ್ತು ಉದ್ಯೋಗಿಗಳು ಮೃಗಗಳಾದರೆ ಮಾತ್ರ ಕಾದಾಟ ಮಾಡಬೇಕು. ಇಲ್ಲವಾದರೆ ಮಾನವರಾಗಿ ಸ್ನೇಹದಿಂದಲೇ ಇರಬೇಕು ಎಂದು ಅವರು ಬಯಸುತ್ತಿದ್ದರು.

ಪತ್ರಿಕೋದ್ಯಮವನ್ನೇ ಕೇಂದ್ರವಾಗಿ ಇಟ್ಟುಕೊಂಡು ಅವರು ‘ಮುಂಜಾವಿನಿಂದ ಮುಂಜಾವು’ ಎಂಬ ಕಾದಂಬರಿಯನ್ನೂ ಬರೆದಿದ್ದಾರೆ. ಆ ಕಾದಂಬರಿಯ ನಾಯಕ ಲಕ್ಷ್ಮಣ್ ‘ಕನ್ನಡ ಕೇಸರಿ’ ಎಂಬ ಪತ್ರಿಕೆಯನ್ನು ಸೇರಲು ಹೋದಾಗ ಅಲ್ಲಿನ ಹಿರಿಯ ಉಪ ಸಂಪಾದಕ ಈತನಿಗೆ ಕೇಳುವ ಮೊದಲ ಮಾತು ‘ಆತ್ಮಹತ್ಯೆಗೆ ಬೇರೆ ಏನೂ ಉತ್ತಮೋಪಾಯ ನಿಮಗೆ ತೋಚಲಿಲ್ಲವೇ?’ ಎಂದು.

ಕಾದಂಬರಿಯಲ್ಲಿ ಅವರು ಪತ್ರಿಕಾ ಉದ್ಯೋಗಿ ಕಷ್ಟ, ಸಂಘಟನೆಯ ಅಗತ್ಯ ಮತ್ತು ಮಹತ್ವ, ಮಾಲೀಕರ ಸಂಕಷ್ಟ ಎಲ್ಲವನ್ನೂ ಚಿತ್ರಿಸಿದ್ದಾರೆ. ಪತ್ರಕರ್ತರಿಗೆ ಸಾಕಷ್ಟು ಎಚ್ಚರಿಕೆಯ ಮಾತನ್ನೂ ಹೇಳಿದ್ದಾರೆ. ಈಗಿನ ಪತ್ರಕರ್ತರೂ ಓದಬೇಕಾದ ಕಾದಂಬರಿ ಅದು.

ಈ ಕಾದಂಬರಿಯಲ್ಲಿ ಒಂದು ಸನ್ನಿವೇಶ ಬರುತ್ತದೆ. ಕಾದಂಬರಿಯ ನಾಯಕ ಲಕ್ಷ್ಮಣ ಪ್ರತಿ ದಿನ ಊಟಕ್ಕೆ ಒಂದು ಹೋಟೆಲ್ ಗೆ ಹೋಗುತ್ತಿರುತ್ತಾನೆ. ಒಂದು ದಿನ ಹೋಟೆಲ್ ಹಿಂಭಾಗದಲ್ಲಿ ಸಾಕಷ್ಟು ಗಲಾಟೆ ಕೇಳಿಸುತ್ತದೆ. ಏನೆಂದು ನೋಡಲು ಅಲ್ಲಿಗೆ ಹೋದಾಗ ಅಲ್ಲಿನ ದೃಶ್ಯ ಕಂಡು ನಾಯಕ ಕಂಗಾಲಾಗುತ್ತಾನೆ. ಅಲ್ಲಿ ಎಂಜಲು ಎಲೆ ಪಡೆಯಲು ನಾಯಿಗಳು ಮತ್ತು ಒಂದಿಷ್ಟು ಮಕ್ಕಳ ನಡುವೆ ಪೈಪೋಟಿ ನಡೆದಿರುತ್ತದೆ. ಅಪೌಷ್ಟಿಕಾಂಶದಿಂದ ಬಳಲುತ್ತಿರುವ, ಹರಕು ಬಟ್ಟೆ ಹಾಕಿಕೊಂಡ, ಬಟ್ಟೆಯೇ ಇಲ್ಲದ ಕೆಲವು ಮಕ್ಕಳು ಎಂಜಲು ಎಲೆಯನ್ನು ಪಡೆದುಕೊಳ್ಳಲು ಕಚ್ಚಾಡುತ್ತಿದ್ದರು. ಇದನ್ನು ಕಂಡು ಮನನೊಂದು ನಾಯಕ ಆ ಬಗ್ಗೆ ಲೇಖನವೊಂದನ್ನು ಬರೆದ. ಅದು ಸಾಕಷ್ಟು ಜನಪ್ರಿಯವಾಯಿತು. ಆತನಿಗೂ ಹೆಸರು ಬಂತು. ಮಾರನೆ ದಿನದಿಂದಲೇ ಹೋಟೆಲ್ ಹಿಂಭಾಗದಲ್ಲಿ ಎಂಜಲು ಎಲೆಗಳಿಗೆ ಮಕ್ಕಳು ಕಚ್ಚಾಡುವುದು ನಿಂತಿತು. ಪಾಲಿಕೆ ಅಲ್ಲಿ ಕಾವಲು ಹಾಕಿತ್ತು. ಇದರಿಂದ ಲಕ್ಷ್ಮಣ ತೃಪ್ತಿ ಹೊಂದಿದ.

ಇದಾದ ಕೆಲವು ದಿನಗಳ ನಂತರ ಆ ಪತ್ರಿಕೆಯ ಹಿರಿಯ ಉಪಸಂಪಾದಕ ಲಕ್ಷ್ಮಣನನ್ನು ಛತ್ರವೊಂದಕ್ಕೆ ಕರೆದುಕೊಂಡು ಹೋದ. ಅಲ್ಲಿ ನಿರಾಶ್ರಿತರು, ಹೊಟ್ಟೆಗೆ ಇಲ್ಲದವರು, ನಿರ್ಗತಿಕರು ಎಲ್ಲರೂ ಇದ್ದರು. ಮಹಿಳೆಯೊಬ್ಬಳು ತನ್ನ ಮಗನ ಹೆಣವನ್ನು ತೊಡೆಯ ಮೇಲೆ ಇರಿಸಿಕೊಂಡು ಅಳುತ್ತಿದ್ದಳು. ಲಕ್ಷ್ಮಣನನ್ನು ಅಲ್ಲಿಗೆ ಕರೆದುಕೊಂಡ ಹೋದ ಹಿರಿಯ ಉಪ ಸಂಪಾದಕ ‘ನೋಡು ಆ ಮಗುವುವನ್ನು ನಿನಗೆ ಪರಿಚಯ ಇರಬಹುದು’ ಎಂದ. ಮಗುವನ್ನು ನೋಡಿದಾಗ ಲಕ್ಷ್ಮಣನಿಗೆ ಗೊತ್ತಾಯಿತು ಆ ಮಗುವೇ ಅಂದು ಹೊಟೇಲ್ ಹಿಂಭಾಗದಲ್ಲಿ ಎಂಜಲು ಎಲೆಗಾಗಿ ನಾಯಿಯೊಂದಿಗೆ ಹೋರಾಡುತ್ತಿದ್ದ ಮಗು ಎಂದು. ‘ಗೊತ್ತಾಯಿತು’ ಎಂದ. ‘ಇದು ನಿನ್ನ ಲೇಖನದ ಫಲ. ನೀನು ಲೇಖನ ಬರೆಯುವುದಕ್ಕೆ ಮೊದಲು ನಾಯಿಗಳೊಂದಿಗೆ ಹೋರಾಡಿಯಾದರೂ ಎಂಜಲು ಎಲೆಯನ್ನು ಕಿತ್ತುಕೊಂಡು ಆ ಮಗು ಏನಾದರೂ ಒಂದಿಷ್ಟು ತಿನ್ನುತ್ತಿತ್ತು. ನಿನ್ನ ಲೇಖನ ಬಂದ ನಂತರ ಎಂಜಲು ಎಲೆ ಪಡೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಅನ್ನವೂ ಸಿಗಲಿಲ್ಲ. ಹಸಿವೆಯಿಂದ ಮಗು ಸತ್ತು ಹೋಯಿತು’ ಎಂದು ಅವರು ಹೇಳಿದಾಗ ಲಕ್ಷ್ಮಣ ದಂಗಾಗಿ ಹೋದ.

ಲೇಖನ ಬರೆಯುವುದು ಮುಖ್ಯವಲ್ಲ. ಲೇಖನ ಬಂದ ನಂತರ ಪರಿಣಾಮ ಏನಾಗುತ್ತದೆ ಎಂಬ ಬಗ್ಗೆಯೂ ಆಲೋಚಿಸಬೇಕು. ಸಮಸ್ಯೆಯೊಂದಕ್ಕೆ ತಾರ್ಕಿಕ ಅಂತ್ಯ ಹಾಡಬೇಕು. ಕೇವಲ ಸೆಂಟಿಮೆಂಟ್ ಇದ್ದರೆ ಪ್ರಯೋಜನ ಇಲ್ಲ. ಅದು ದೌರ್ಬಲ್ಯ. ದುಃಖವನ್ನು ಕಂಡು ಮರುಗುವ ಹೃದಯ ಇರಬೇಕು. ಆದರೆ ಅನುಕಂಪ ಎನ್ನುವುದು ನಿಷ್ಕ್ರಿಯಾತ್ಮಕ ರೋದನವಾಗಬಾರದು. ಷಂಡ ಕ್ರೋಧವೂ ಆಗಬಾರದು. ದುಃಖ ಕಂಡರೆ ಅದರ ಪರಿಹಾರಕ್ಕೆ ದಾರಿ ಹುಡುಕಬೇಕೇ ವಿನಾ ಲೇಖನ ಬರೆದು ದುಃಖ ಹೆಚ್ಚಿಸಬಾರದು. ಮೇಣವಾದರೆ ಪ್ರಯೋಜನ ಇಲ್ಲ. ಉಕ್ಕಾಗಬೇಕು ಎಂದು ಹಿರಿಯ ಉಪ ಸಂಪಾದಕ ಹೇಳುತ್ತಾನೆ. ಇದು ಎಲ್ಲ ಪತ್ರಕರ್ತರಿಗೂ ಮಾರ್ಗದರ್ಶಕ ಮಾತು. ಅದಕ್ಕಾಗಿಯೇ ತರಾಸು ಕಾದಂಬರಿಕಾರರಂತೆ ಪತ್ರಿಕಾ ಉದ್ಯೋಗಿಯಾಗಿಯೂ ನಮಗೆ ಮುಖ್ಯರಾಗುತ್ತಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು