ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಚಲನಚಿತ್ರದ ‘ಚುಟುಕು’ ಚರಿತ್ರೆ

Last Updated 28 ಜನವರಿ 2023, 19:30 IST
ಅಕ್ಷರ ಗಾತ್ರ

ಹೆಜ್ಜೆ ಗುರುತು – ಕನ್ನಡ ಚಲನಚಿತ್ರ ಚರಿತ್ರೆ

ಲೇ: ಅ.ನಾ. ಪ್ರಹ್ಲಾದರಾವ್

ಪು: 580; ಬೆ: ರೂ. 750

ಪ್ರ: ತಾರಾ ಪ್ರಿಂಟ್ಸ್‌, ಮೈಸೂರು. ಫೋನ್: 9611227565

ಒಂಬತ್ತು ದಶಕಗಳ ಕನ್ನಡ ಸಿನಿಮಾ ಚರಿತ್ರೆಯ ಪ್ರಮುಖ ಮೈಲಿಗಲ್ಲುಗಳನ್ನು ಗುರ್ತಿಸುವ ಪ್ರಯತ್ನದ ‘ಹೆಜ್ಜೆ ಗುರುತು’, ಚುಟುಕು–ಗುಟುಕು ಮಾದರಿಯ ಕೃತಿ.

ಕನ್ನಡ ಚಲನಚಿತ್ರ ಚರಿತ್ರೆಗೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಕೃತಿಗಳು ಪ್ರಕಟವಾಗಿವೆ. ಇತಿಹಾಸದ ಭಿನ್ನ ನೋಟ–ವ್ಯಾಖ್ಯಾನಗಳು ಸಾಧ್ಯವಾದುದರಿಂದ, ಹೊಸ ಕೃತಿಗಳಿಗೆ ಅವಕಾಶವಿದ್ದೇ ಇದೆ. ಆದರೆ, ‘ಹೆಜ್ಜೆ ಗುರುತು‘ ಕೃತಿ ಭಿನ್ನ ನೋಟ ಅಥವಾ ವ್ಯಾಖ್ಯಾನಗಳ ಉದ್ದೇಶವನ್ನು ಹೊಂದಿಲ್ಲ. ಇದು ಮಾಹಿತಿಪ್ರಧಾನ ಕೃತಿ. ಸಿನಿಮಾಗಳ ಮೂಲಕ ಇತಿಹಾಸವನ್ನು ವಿಶ್ಲೇಷಿಸುವ ಮಾದರಿಯ ಬದಲು, ಕನ್ನಡ ಸಿನಿಮಾರಂಗವನ್ನು ರೂಪಿಸಿದ ಸಾಧಕರ ಹೆಜ್ಜೆಗುರುತುಗಳನ್ನು ದಾಖಲಿಸುವ ಮೂಲಕ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯತ್ನ ಈ ಕೃತಿಯಲ್ಲಿದೆ. ಮಾಹಿತಿಯನ್ನು ಬಯಸುವ ಓದುಗರಿಗೆ ಇದು ಅನುಕೂಲಕರ ಮಾದರಿ.

ಅ.ನಾ. ಪ್ರಹ್ಲಾದರಾವ್‌ ಅವರದು ಸಂಗ್ರಹಿಸಿದ ಮಾಹಿತಿಯನ್ನು ಜೋಡಿಸುವ ಕ್ರಮ. ಆದರೆ, ಈ ಜೋಡಣೆಯೇನೂ ಸುಸಂಬದ್ಧವಾಗಿಲ್ಲ. ಖಾಲಿ ಜಾಗಗಳನ್ನು ತುಂಬುವ ಉದ್ದೇಶದಂತೆ ಪುಸ್ತಕದುದ್ದಕ್ಕೂ ಇಡುಕಿರಿದಿರುವ ‘ಪರಿಚಯ’ಗಳು ಮಾಹಿತಿ ನೀಡುವುದಕ್ಕಿಂತಲೂ ಹೆಚ್ಚಾಗಿ ಓದಿನ ರಸಭಂಗವನ್ನು ಉಂಟುಮಾಡುತ್ತವೆ. ಕನ್ನಡದ ಮೊದಲ ವಾಕ್ಚಿತ್ರಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ‘ನಿರ್ದೇಶಕ ಪಿ. ವಾಸು’ ಅವರ ಒಂದು ಪುಟದ ಪರಿಚಯ ಇದ್ದಕ್ಕಿದ್ದಂತೆ ಎದುರಾಗುತ್ತದೆ. ಇಂಥ ಪರಿಚಯಗಳನ್ನು ‘ಅನುಬಂಧ’ದ ರೂಪದಲ್ಲಿ ಪ್ರತ್ಯೇಕವಾಗಿ ನೀಡಬಹುದಾಗಿತ್ತು.

ಕೆಲವು ಮಾಹಿತಿಗಳು ಅಸ್ಪಷ್ಟತೆ ಹಾಗೂ ತಪ್ಪುಗ್ರಹಿಕೆಗೆ ಆಸ್ಪದ ಕಲ್ಪಿಸುವಂತಿವೆ. ‘ನಟಿ ಲಕ್ಷ್ಮೀಬಾಯಿ’ ಶೀರ್ಷಿಕೆಯಲ್ಲಿ, ‘ನಾಯಕಿ ಸುಲೋಚನಾ’ ಪಾತ್ರವನ್ನು ತ್ರಿಪುರಾಂಬ ನಿರ್ವಹಿಸಿದರು’ ಎನ್ನುವ ಮಾಹಿತಿಯಿದೆ. ಎರಡು ಪುಟಗಳ ನಂತರದ, ‘ಮೊದಲ ಚಿತ್ರದ ನಟಿ
ಎಸ್‌.ಕೆ. ಪದ್ಮಾದೇವಿ’ ಎನ್ನುವ ಶೀರ್ಷಿಕೆಯ ಬರಹ ಆರಂಭವಾಗುವುದೇ, ‘ಕನ್ನಡದ ಮೊದಲ ಚಲನಚಿತ್ರ ಸತಿ ಸುಲೋಚನಾ ಪಾತ್ರಧಾರಿ ಎಸ್‌.ಕೆ. ಪದ್ಮಾದೇವಿ’ ಎನ್ನುವ ಸಾಲಿನಿಂದ. ಆದರೆ, ಪದ್ಮಾದೇವಿ ನಟಿಸಿದ್ದು ಕನ್ನಡದ ಎರಡನೇ ವಾಕ್ಚಿತ್ರ ‘ಭಕ್ತ ಧ್ರುವ’ದಲ್ಲಿ, ‘ಸತಿ ಸುಲೋಚನಾ‘ದಲ್ಲಿ ಅಲ್ಲ.

‘ಬೇಡರ ಕಣ್ಣಪ್ಪ’ ಚಿತ್ರಕ್ಕೆ ಸಂಬಂಧಿಸಿದ ಬರಹದಲ್ಲಿ – ‘‘1934ರಲ್ಲಿ ಕನ್ನಡ ಮೊದಲ ಚಿತ್ರ ‘ಸತಿ ಸುಲೋಚನಾ’ ಬಿಡುಗಡೆಗೊಂಡ ದಿನದಿಂದ 1954ರವರೆಗೆ ರಾಜಕುಮಾರ್‌ ಅಭಿನಯದ ‘ಬೇಡರ ಕಣ್ಣಪ್ಪ’ ಚಿತ್ರ ಬಿಡುಗಡೆಗೊಳ್ಳುವವರೆಗೆ 39 ಚಲನಚಿತ್ರಗಳು ಬಿಡುಗಡೆಗೊಂಡಿದ್ದವಾದರೂ, ಯಾವುದೇ ಚಿತ್ರ ಕೇಂದ್ರ ಸರ್ಕಾರದ ಪ್ರಶಸ್ತಿಗೆ ಪುರಸ್ಕೃತಗೊಂಡಿರಲಿಲ್ಲ. ‘ಬೇಡರ ಕಣ್ಣಪ್ಪ’ ಆ ಕೊರತೆಯನ್ನು ನೀಗಿಸಿ ರಾಷ್ಟ್ರಪತಿಗಳ ಅರ್ಹತಾ ಪತ್ರ ತಂದುಕೊಟ್ಟಿತು’’ ಎನ್ನುವ ಮಾಹಿತಿಯಿದೆ. ಆದರೆ, ರಾಷ್ಟ್ರಪ್ರಶಸ್ತಿಗಳನ್ನು ನೀಡುವ ಪರಿಪಾಟ ಆರಂಭವಾದುದೇ 1954ರಲ್ಲಿ. ಹಾಗಾಗಿ, ‘ಬೇಡರ ಕಣ್ಣಪ್ಪ’ನಿಗೆ ಮುನ್ನಾ ಸಿನಿಮಾಗಳು ರಾಷ್ಟ್ರಪತಿಗಳ ಅರ್ಹತಾ ಪತ್ರ ಪಡೆಯುವ, ಪಡೆಯದಿರುವ ಪ್ರಶ್ನೆಯೇ ಎದುರಾಗುವುದಿಲ್ಲ.

ತಾತ್ವಿಕತೆಯ ದೃಷ್ಟಿಯಿಂದಲೂ ಪ್ರಹ್ಲಾದರಾವ್‌ ಅವರ ಕೆಲವು ವಿಚಾರಗಳು ಚರ್ಚೆಗೆ ಆಸ್ಪದ ಕಲ್ಪಿಸುವಂತಿವೆ. ಸ್ತ್ರೀವಾದಿ ನೆಲೆಗಟ್ಟಿನಲ್ಲಿ ಮಹಿಳಾ ಶೋಷಣೆ ವಿರುದ್ಧ ಭಾರತದಲ್ಲಿ ಆರಂಭವಾದ ಚಳವಳಿ ಮತ್ತು ಹೋರಾಟಗಳಿಗೆ ಮೊದಲೇ ಪುಟ್ಟಣ್ಣ ಕಣಗಾಲ್‌ ತಮ್ಮ ಚಿತ್ರಗಳಲ್ಲಿ ಪರಿವರ್ತನೆಯ ನಾಂದಿ ಹಾಡಿದರು ಎನ್ನುವ ಅಭಿಪ್ರಾಯವನ್ನು ಒಪ್ಪುವುದು ಕಷ್ಟ. ಪುಟ್ಟಣ್ಣನವರ ಸಿನಿಮಾಗಳಲ್ಲಿ ಹೆಣ್ಣಿನ ಸಾಂಪ್ರದಾಯಿಕ ಚೌಕಟ್ಟಿನ ಗ್ರಹಿಕೆಯ ಚಿತ್ರಣಗಳಿವೆಯೇ ಹೊರತು, ಆಧುನಿಕ ಸ್ತ್ರೀವಾದಿ ವಿಚಾರಗಳ ತಾತ್ವಿಕತೆಯಲ್ಲ.

ಮೂಕಿಚಿತ್ರಗಳಿಂದ ಹೊಸ ಅಲೆಯ ಚಿತ್ರಗಳವರೆಗೆ ಕನ್ನಡ ಚಿತ್ರರಂಗ ಸಾಗಿಬಂದ ಹಾದಿಯ ಚಿತ್ರಣಕ್ಕೆ ಕೃತಿಯಲ್ಲಿ 450 ಪುಟಗಳು ಮೀಸಲಾಗಿದ್ದರೆ, 1966–2021ರವರೆಗಿನ ‘ಕನ್ನಡ ಚಿತ್ರಗಳು ಮುದ್ರಿಸಿದ ಹೆಜ್ಜೆಗುರುತುಗಳು’ ದಾಖಲೆಗೆ ದೊರೆತಿರುವುದು 80 ಪುಟಗಳಷ್ಟೇ. ಈ ಅಸಮತೋಲನದಿಂದಾಗಿ, ‘ತಿಥಿ’ಯಂಥ ಸಿನಿಮಾ ಪ್ರಾಸಂಗಿಕವಾಗಿಯಷ್ಟೇ ಬಂದುಹೋಗುತ್ತದೆ.

‘ಹೆಜ್ಜೆ ಗುರುತು’ ಕೃತಿಯನ್ನು ಪ್ರಹ್ಲಾದರಾವ್‌ ಅವರ ಮುಂದಿನ ಕೃತಿಗಳಿಗೆ ನಾಂದಿ ರೂಪದ ಕೃತಿ ಎಂದು ಭಾವಿಸಬಹುದು. ಈ ಕೃತಿಯಲ್ಲಿರುವ ಅಪಾರ ಮಾಹಿತಿ, ಸಿನಿಮಾ ಅಭ್ಯಾಸಿಗಳಿಗೆ ಆಕರವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT