ಶನಿವಾರ, ಜೂಲೈ 4, 2020
28 °C
ಸೂರ್ಯಾಸ್ತ (ಪುಸ್ತಕ ವಿಮರ್ಶೆ)

ಬದುಕಿನ ‍ಪ್ರತಿಮೆಯ ಚಿತ್ರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಮಕಾಲಿನ ಅಸ್ಸಾಮಿ ಸಾಹಿತ್ಯ ಲೋಕದಲ್ಲಿ ಹೊಮೆನ್‌ ಬೊರ್ಗೆಹೈನ್‌ ಹೆಸರು ಓದುಗರಿಗೆ ಹೆಚ್ಚು ಚಿರಪರಿಚಿತ. ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲಿ ಇವರು ಕೈ ಆಡಿಸಿದ್ದಾರೆ. ಅಸ್ಸಾಮಿ ಭಾಷೆಯಲ್ಲಿರುವ ಇವರ ‘ಅಸ್ಟೊರಾಗ್‌’ (ಸೂರ್ಯಾಸ್ತ) ಕಾದಂಬರಿಯನ್ನು  ಅಶೋಕ್‌ ಭಗವತಿ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಇಂಗ್ಲಿಷ್‌ನಿಂದ ಕನ್ನಡಕ್ಕೆ ಚಿನ್ನವ್ವ ಚಂದ್ರಶೇಖರ ವಸ್ತ್ರದ ಅವರು ಅಷ್ಟೇ ಅಚ್ಚುಕಟ್ಟಾಗಿ ಅನುವಾದಿಸಿದ್ದು, ಕನ್ನಡದ ಓದುಗರಿಗೂ ಈ ಕಾದಂಬರಿಯ ಸೊಗಡು ಆನಂದಿಸಲು ಅನುವು ಮಾಡಿಕೊಟ್ಟಿದ್ದಾರೆ.

ಅಪರಾಧ ಮತ್ತು ಪಶ್ಚಾತ್ತಾಪವೇ ಈ ಕಾದಂಬರಿಯ ಕೇಂದ್ರವಸ್ತು. ಕೊಂಚ ವಿಕ್ಷಿಪ್ತ ಮನಸಿನ, ಮಧ್ಯಮ ವಯಸ್ಸಿನ ದಿಲೀಪ ಕಾದಂಬರಿಯ ನಾಯಕ. ಈತ ತನ್ನ ತಂದೆಯ ವೃದ್ಧಾಪ್ಯದ ಕ್ಷಣಗಳನ್ನು, ನೋವುಗಳನ್ನು, ದೇಹವು ಸಾವಿಗೆ ಮುನ್ನ ನಿಧಾನವಾಗಿ ಕಟ್ಟಿಗೆಯಂತೆ ಒಣಗುವುದನ್ನು, ವೃದ್ಧಾಪ್ಯದ ಕಾರಣವಾಗಿ ಮತಿಹೀನ ಸ್ಥಿತಿಯೆಡೆಗೆ ಆತ ಜಾರುವುದನ್ನು ನೋಡಿ ಭಯವಿಹ್ವಲಗೊಳ್ಳುತ್ತಾನೆ. ಈತ ಎಲ್ಲ ವೃದ್ಧರ ಮಕ್ಕಳ ಪ್ರತಿನಿಧಿಯಂತೆಯೂ ಭಾಸವಾಗುತ್ತಾನೆ. 

ಅಪರಾಧಿ ಪ್ರಜ್ಞೆ, ಪ್ರೀತಿ, ಭೂತಕಾಲದ ನೆನಪು, ಹಂಬಲಿಸುವಿಕೆ, ಮನೋರೋಗ ಎನಿಸುವಂಥ ಆತಂಕಕಾರಿ ನಿರೀಕ್ಷೆ ಇಂತಹ ಅಂಶಗಳ ಸುತ್ತವೇ ಕಾದಂಬರಿಯ ಕಥಾವಸ್ತು ಗಿರಕಿಹೊಡೆಯುತ್ತದೆ. ಮಧ್ಯಮ ವಯಸ್ಸಿನ ಮಗ ಅನುಭವಿಸುವ ತೀವ್ರ ಒತ್ತಡ ಹಾಗೂ ಹಿಂಸೆಗೆ ಒಳಗಾಗುವ ಚಿತ್ರಣ ಈ ಕಾದಂಬರಿಯ ಹೂರಣ. ಅಲ್ಲದೆ, ವೈದ್ಯಕೀಯ ವಿಶ್ಲೇಷಣೆ ಮತ್ತು ಸೃಜನಶೀಲ ಅಂಶಗಳೂ ಮಿಳಿತಗೊಂಡಿವೆ.

ಕಾದಂಬರಿಯಲ್ಲಿ ಪದೇ ಪದೇ ಕಾಡುವ ಪಾತ್ರವೆಂದರೆ ನಾಯಕ ದಿಲೀಪನ ತಂದೆಯ ಪಾತ್ರ. ಏಕಾಂಗಿಯಾದ, ಯಾರನ್ನೂ ಪ್ರೀತಿಸದ, ಯಾರಿಂದಲೂ ಪ್ರೀತಿಸಲ್ಪಡದ ವೃದ್ಧ ತಂದೆಯ ಪಾತ್ರ; ಈ ಸಂದರ್ಭದ ಖಾಲಿತನವನ್ನು ಚಿತ್ರಿಸಲು ಪೋಣಿಸಿರುವ ಪದಪುಂಜಗಳು ಕೂಡ ಅಷ್ಟೇ ನಿರಾಡಂಬರದಿಂದ ಕೂಡಿವೆ. ‌

ಕಬಿನ್‌ ಫುಕಾನ್‌ ಅವರು ಮುನ್ನುಡಿಯಲ್ಲಿ ಬರೆದಿರುವಂತೆ ಈ ಕಾದಂಬರಿ ‘ದೇಹಬಲಕ್ಕಿಂತ ಬುದ್ಧಿಬಲ ಪ್ರಧಾನ ಕಾದಂಬರಿ’ ಎನ್ನಲು ಅಡ್ಡಿ ಇಲ್ಲ. ಇದರಲ್ಲಿ ಭಾವನಾತ್ಮಕತೆ, ಪ್ರಚೋದನಾತ್ಮಕತೆಗಿಂತ ಅನುಭವಗಳ ಅಭಿವ್ಯಕ್ತಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ. ವಿಮರ್ಶಾತ್ಮಕ ಮತ್ತು ವೈಚಾರಿಕತೆಗೆ ನೀಡಿರುವ ಆದ್ಯತೆಯಿಂದಾಗಿ ಸಹಜವಾಗಿಯೇ ಕಾದಂಬರಿಗೆ ಶಾಸ್ತ್ರೀಯ ಗುಣಲಕ್ಷಣ ದಕ್ಕಿದೆ. ಇದು ಬದುಕಿನ ‍ಪ್ರತಿಮೆಯನ್ನೂ ಕಣ್ಣಮುಂದಿಡುತ್ತದೆ. ವೃದ್ಧಾಪ್ಯ ಮತ್ತು ಸಾವಿನ ಕುರಿತಾದ ವಿಸ್ತಾರ ಅರಿವನ್ನು ನೀಡುತ್ತದೆ. ಜತೆಗೆ ಎಲ್ಲರ ಬದುಕಿನ ಸಂಧ್ಯಾಕಾಲವನ್ನು ‘ಸೂರ್ಯಾಸ್ತ’ ನೆನಪಿಸುತ್ತದೆ. ಜೀವನದ ಕಠೋರ ಸತ್ಯವೊಂದು ಓದುಗನ ಮಸ್ತಿಷ್ಕಕ್ಕೆ ಸದ್ದಿಲ್ಲದೆ ಇಳಿದುಬಿಡುತ್ತದೆ.

ಸೂರ್ಯಾಸ್ತ
ಮೂಲ: ಹೊಮೆನ್ ಬೊರ್ಗೆಹೈನ್
ಅನುವಾದ: ಚಿನ್ನವ್ವ ಚಂದ್ರಶೇಖರ ವಸ್ತ್ರದ
ಪ್ರಕಾಶನ: ಸಾಹಿತ್ಯ ಅಕಾಡೆಮಿ
ದೂರವಾಣಿ: 080-22245152

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು