ಗುರುವಾರ , ಜುಲೈ 29, 2021
21 °C

ಕೇರಳ ರಂಗಭೂಮಿಯ ಆಕರ್ಷಕ ಕೊಲಾಜ್

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

‘ನಾನಂತೂ ನನ್ನ ಪ್ರತಿ ಕಣವನ್ನೂ ನಿನ್ನ ಪ್ರೇಮದ ಸುತ್ತ ಗಿರಗಿಟ್ಲಿ ಹಾಕುತ್ತಾ ಬದುಕುತ್ತಿದ್ದೇನೆ.’ ವೈಕಂ ಬರೆದ ‘ಲವ್ ಲೆಟರ್’ ಎನ್ನುವ ಲೇಖನದ ಪ್ರಾರ್ಥನಾನುಡಿಯಂತಿರುವ ಈ ಸಾಲನ್ನು ಕಿರಣ್ ಭಟ್ ಅವರ ‘ರಂಗ ಕೈರಳಿ’ ಕೃತಿಗೂ ಅನ್ವಯಿಸಬಹುದು. ರಂಗಭೂಮಿಯ ಪ್ರತಿ ಕಣವನ್ನೂ ಅನುಭವಿಸುವ ರಂಗಕರ್ಮಿಯೊಬ್ಬನ ಬದುಕಿನ ಕಾಲಘಟ್ಟವೊಂದರ ಈ ಕಥನ ಗಮನಸೆಳೆಯುವುದು ಲೇಖಕರ ಬದುಕಿನ (ರಂಗ ಬದುಕಿನ) ಕುರಿತಾದ ಅದಮ್ಯ ಕುತೂಹಲದ ಕಾರಣದಿಂದಾಗಿ.

ಕೇರಳಕ್ಕೆ ಹೋಗಿಬಂದವರು ಅಲ್ಲಿನ ಪ್ರಾಕೃತಿಕ ಸೌಂದರ್ಯದ ಕುರಿತು, ಸಾರ್ವಜನಿಕ ಜೀವನದಲ್ಲಿ ಹಾಸುಹೊಕ್ಕಾದ ರಾಜಕೀಯ ಪ್ರಜ್ಞೆಯ ಕುರಿತು ಕಥೆ ಕಟ್ಟುವುದು ಹೆಚ್ಚು. ಆದರೆ, ಕಿರಣ್ ಭಟ್ ಅವರು ಹೇಳಹೊರಟಿರುವುದು ರಂಗ ಸೌಂದರ್ಯದ ಕಥನ. ಉದ್ಯೋಗನಿಮಿತ್ತವಾಗಿ ಕೇರಳಕ್ಕೆ ಹೋದ ಅವರು, ಅಲ್ಲಿನ ರಂಗಭೂಮಿಯೊಂದಿಗೆ ಒಡನಾಡಿದ ವಿಶಿಷ್ಟ ಕ್ಷಣಗಳ ದಾಖಲಾತಿ ‘ರಂಗ ಕೈರಳಿ.’ ಸಂಕಲನದ ಇಪ್ಪತ್ತೈದು ಕಿರು ಬರಹಗಳು ಲೇಖಕರ ನಾಟಕಪ್ರೀತಿಯ ಜೊತೆಗೆ, ಕೇರಳದ ರಂಗವೈಭವದ ಮಗ್ಗುಲೊಂದರ ಇಣುಕುನೋಟವನ್ನೂ ಮಾಡಿಸುತ್ತವೆ. ಆ ಮೂಲಕ ‘ರಂಗ ಪ್ರವಾಸ ಕಥನ’ ಎಂದು ಕೃತಿಯನ್ನು ಹೆಸರಿಸಿರುವುದು ಅರ್ಥಪೂರ್ಣವಾಗಿದೆ.

‘ಮಾಟ ಮಂತ್ರ ಮಾಡೋರ ರಾಜ್ಯ ಅದು’ ಎನ್ನುವ ಅಳುಕಿನಿಂದಲೇ ಗಂಟುಮೂಟೆಯೊಂದಿಗೆ ಕೇರಳಕ್ಕೆ ಬಂದಿಳಿಯುವ ಲೇಖಕರು ಅಂತಿಮವಾಗಿ ತಲುಪುವುದು, ‘ಕೇರಳವೇ, ನಿನಗೆ ವಂದನೆ’ ಎನ್ನುವ ಕೃತಜ್ಞತಾಭಾವದ ನಿಲುವಿಗೆ. ನಾಟಕಗಳನ್ನು ಹುಡುಕಿಕೊಂಡು ಊರುಕೇರಿ ಅಲೆಯುವ ಅವರು, ಆ ಅನುಭವವನ್ನು ದಾಖಲಿಸುವಾಗ ನಾಟಕದ ಜೊತೆಗೆ ಕೇರಳದ ಸಾಂಸ್ಕೃತಿಕ ವಲಯದ ಕಿರು ಪರಿಚಯವನ್ನು ಮಾಡುವ ಕ್ರಮ ಚೆನ್ನಾಗಿದೆ. ಮಲಯಾಳಂ ಪ್ರಯೋಗಗಳಿಗೆ ಪ್ರತಿಕ್ರಿಯಿಸುತ್ತ ಕನ್ನಡನಾಡಿನ ಸಂಗತಿಗಳನ್ನು ನೆನಪಿಸಿಕೊಳ್ಳುವುದು ಬರಹಗಳಿಗೆ ಆಪ್ತಗುಣ ತಂದುಕೊಟ್ಟಿದೆ. ಪೆರಿಯಾರ್ ನದಿ ದಂಡೆಯ ಮನಪ್ಪುರಂನ ಜಾತ್ರೆಯ ನಾಟಕೋತ್ಸವದ ಬಗ್ಗೆ ಬರೆಯುತ್ತಾ ಶಿರಸಿ ಮಾರಿಕಾಂಬೆ ಜಾತ್ರೆಯಲ್ಲಿನ ನಾಟಕ ನೆನಪಿಸಿಕೊಳ್ಳುವ ಲೇಖಕರು, ಕೇರಳದ ನಾಟಕ ಕಂಪನಿಗಳ ಬಗ್ಗೆ ಬರೆಯುತ್ತ ಕನ್ನಡನಾಡಿನ ಕಂಪನಿಗಳು ನಾಟಕಗಳಲ್ಲಿ ಕಥೆಯನ್ನೇ ಕಳೆದುಕೊಳ್ಳುತ್ತಿರುವುದನ್ನು ಸೂಚಿಸುತ್ತಾರೆ.

ನಟರುಗಳೆಲ್ಲ ಹಾಡುತ್ತಾ, ಬಿಡುಬೀಸಾಗಿ ಕೈಯಾಡಿಸುತ್ತ, ಡ್ರಂನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವ ‘ಚವಿಟ್ಟು ನಾಡಕಂ’ ಎನ್ನುವ ವಿಶಿಷ್ಟ ರಂಗಪ್ರಕಾರವನ್ನು ಪರಿಚಯಿಸುವ ಕಿರಣ್, ಕೇರಳದಲ್ಲಿ ತಾವು ಕಂಡ ಕೆಲವು ವಿಶಿಷ್ಟ ಪ್ರಯೋಗಗಳನ್ನು ದಾಖಲಿಸುತ್ತಾರೆ. ಹೆಮ್ಮಿಂಗ್ವೇ ಕಾದಂಬರಿ ಆಧರಿಸಿದ ಪ್ರದರ್ಶನ, ಪದ್ಮಶ್ರೀ ಆನೆ, ದೇವರಂಥ ಕಳ್ಳ ಕೊಚ್ಚುಣ್ಣಿ, ಅರ್ಧ ಕೋಟಿ ವೆಚ್ಚದಲ್ಲಿ ಪ್ರದರ್ಶನ ಕಂಡ ‘ಮ್ಯಾಕ್ ಬೆತ್’, ದಲಿತರ ಬಂಡಾಯದ ಜ್ವಾಲೆಯ ‘ತೀ ಪೋಟ್ಟನ್’, ಬೊಂಬೆಯಾಟ – ಇವೆಲ್ಲ ಒಂದು ಪ್ರದರ್ಶನವಾಗಿ ಉಳಿಯದೆ ರಂಗಸಂಬಂಧದ ಮೂಲಕ ಸಾಧ್ಯವಾಗುವ ಮನುಷ್ಯಸಂಬಂಧಗಳ ಸಾಧ್ಯತೆಯ ರೂಪಕಗಳಾಗಿ ಕಾಣಿಸುತ್ತವೆ.

ಕಿರಣ್ ಅವರ ರಂಗಭೂಮಿ ಕಥನದಲ್ಲಿ ಪ್ರಸಿದ್ಧರಿಗಿಂತಲೂ ಪೋಷಕ ಪಾತ್ರಗಳಿಗೇ ಹೆಚ್ಚಿನ ಪ್ರಾಮುಖ್ಯತೆ. ಇದಕ್ಕೆ ಉದಾಹರಣೆಯಾಗಿ, ಚಹಾದ ಬ್ರಿಜ್ ಕಟ್ಟುವ ‘ಚಾಯ’ ಅಂಗಡಿಯ ನಾಯರ್, ರಂಗಭೂಮಿಯ ಇನ್ ಫಾರ್ಮರ್ ಉನ್ನಿಕೃಷ್ಣನ್, ಕಥಕ್ಕಳಿ ವೇಷಧಾರಿ ಪದ್ಮನಾಭನ್, ಹಾಡುಗಾರ ಬಾಬು, ತವರಿನ ಹಂಬಲದ ಪಾರ್ವತಿ, ಮುಂತಾದವರನ್ನು ಗಮನಿಸಬಹುದು.

ಕಿರಣ್ ಅವರ ಈ ಬರಹಗಳು ಮೊದಲಿಗೆ ಅಂಕಣರೂಪದಲ್ಲಿ ಪ್ರಕಟಗೊಂಡಿವೆ. ಅಂಕಣಕ್ಕೆ ಅಗತ್ಯವಾದ ಅಡಕಗುಣ ಬರಹಗಳಲ್ಲಿದೆ. ಆದರೆ, ಪುಸ್ತಕರೂಪದಲ್ಲಿ ಒಟ್ಟಾಗುವಾಗ ಈ ಕಿರು ಬರಹಗಳು ಇನ್ನಷ್ಟು ವಿಸ್ತಾರಗೊಂಡಿದ್ದರೆ ಚೆನ್ನಾಗಿತ್ತು. ಕೇರಳದ ರಂಗಕಥನವನ್ನು ಸಾಮಾಜಿಕ ಪಠ್ಯದ ಹಿನ್ನೆಲೆಯಲ್ಲಿ ನೋಡುವ ಸಾಧ್ಯತೆ ಪ್ರಸಕ್ತ ಕೃತಿಯಲ್ಲಿದ್ದರೂ ಅದು ಸೂಚ್ಯವಾಗಿಯಷ್ಟೇ ಇದೆ. ಇದಕ್ಕೆ ಉದಾಹರಣೆಯ ರೂಪದಲ್ಲಿ ‘ಅವಸಾನತ್ತೆ ಉರವ್’ (ಸೆಲೆಯೊಂದರ ಅಂತ್ಯ) ನಾಟಕದ ಕುರಿತ ಬರಹವನ್ನು ನೋಡಬಹುದು. ಪ್ರವಾಹದ ಕಾರಣದಿಂದಾಗಿ ಕೇರಳದ ಪ್ರಾಕೃತಿಕ-ಸಾಮಾಜಿಕ ನಕಾಶೆಗಳಲ್ಲಿ ವ್ಯತ್ಯಯವುಂಟಾಗಿರುವುದನ್ನು ನೆನಪಿಸಿಕೊಳ್ಳುವ ಲೇಖಕರು, ಆ ದುರಂತಕ್ಕೆ ಪ್ರತಿಕ್ರಿಯೆ ರೂಪದಲ್ಲಿ ನಾಟಕವೊಂದನ್ನು ನೆನಪಿಸಿಕೊಳ್ಳುತ್ತಾರೆ. ಝರಿ, ಹಾವು, ಹುಳಗಳನ್ನು ರೂಪಕಗಳಾಗಿ ಬಳಸಿಕೊಂಡಿರುವ ಆ ನಾಟಕದ ಮ್ಯಾಜಿಕ್ ಕೇರಳೀಯರ ಜೀವನದಲ್ಲೂ ಆಗಬೇಕೆಂದು ಆಶಿಸುತ್ತಾರೆ. ಇಂಥ ಕಾಳಜಿಯ ಬರಹಗಳ ಸಾಧ್ಯತೆಗಳಿಗೆ ಸ್ವಯಂ ಲೇಖಕರೇ ನಿರ್ಬಂಧ ವಿಧಿಸಿಕೊಂಡಿರುವಂತಿದೆ ಹಾಗೂ ತಮ್ಮ ನೇರ ಅನುಭವದಾಚೆಗಿನ ಸಂಗತಿಗಳನ್ನು ಹೇಳದಿರಲು ಅವರು ನಿರ್ಧರಿಸುವಂತಿದೆ.

ಆಕರ್ಷಕ ರಂಗಪ್ರಯೋಗದಂತೆ ಪುಸ್ತಕ ವಿನ್ಯಾಸದ ಕಾರಣದಿಂದಲೂ ‘ರಂಗ ಕೈರಳಿ’ ಕೃತಿ ಗಮನಸೆಳೆಯುತ್ತದೆ. ಈ  ಕೃತಿ ತನ್ನ ಪುಟ್ಟ ಸ್ವರೂಪದಲ್ಲಿಯೇ ಮಲಯಾಳಿ ರಂಗಭೂಮಿಯ ಜೀವಂತಿಕೆ ಹಾಗೂ ಪ್ರಯೋಗಶೀಲತೆಯನ್ನು ಓದುಗರ ಅನುಭವಕ್ಕೆ ತರುವಂತಿದೆ. ಆರೋಗ್ಯಕ್ಷೇತ್ರದಲ್ಲಿನ ಪ್ರಸಕ್ತ ಬಿಕ್ಕಟ್ಟನ್ನು ಕೇರಳ ಆತ್ಮವಿಶ್ವಾಸದೊಂದಿಗೆ ಎದುರಿಸಲು ಸಾಧ್ಯವಾಗಿರುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರವೊಂದನ್ನು ಈ ಕೃತಿಯಲ್ಲಿ ಹುಡುಕಬಹುದೇನೊ? ಸಂಕಟವನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಎಷ್ಟರಮಟ್ಟಿಗೆ ಒದಗಿಸುತ್ತದೆ ಎನ್ನುವ ಲೆಕ್ಕಾಚಾರ ನೆಲವೊಂದರ ಸಾಂಸ್ಕೃತಿಕ ಗಟ್ಟಿತನಕ್ಕೆ ಮಾನದಂಡವಲ್ಲವೇ?

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು