ಶನಿವಾರ, ಜುಲೈ 2, 2022
20 °C

ಜೈರಾಂ ರಮೇಶ್ ಅವರ ಪುಸ್ತಕ ವಿಮರ್ಶೆ ‘ಬುದ್ಧನೆನ್ನುವ ಬೆಳಕು’

ಪ್ರೊ.ಕೆ.ಈ.ರಾಧಾಕೃಷ್ಣ Updated:

ಅಕ್ಷರ ಗಾತ್ರ : | |

Prajavani

(ಎಡ್ವಿನ್‌ ಅರ್ನಾಲ್ಡ್‌ ಅವರ ಕಾವ್ಯ ‘ಏಷ್ಯಾದ ಬೆಳಕು’ ಜಗತ್ತಿನ ಹಲವು ದಾರ್ಶನಿಕರನ್ನು ಗಾಢವಾಗಿ ಕಾಡಿದ ಕೃತಿ. ಬುದ್ಧನ ಚರಿತ್ರೆಯನ್ನು ಬೌದ್ಧಮತದ ಮಹತ್ವವನ್ನು ಈ ಕೃತಿ ಸೊಗಸಾಗಿ ಕಟ್ಟಿಕೊಟ್ಟಿದೆ. ಅರ್ನಾಲ್ಡ್‌ ಅವರಂತಹ ಬಹುಶ್ರುತ ವಿದ್ವಾಂಸರು ಬರೆದ ಈ ಕೃತಿಯ ಕುರಿತು ‘Light of Asia’ ಎಂಬ ಮತ್ತೊಂದು ಕೃತಿಯನ್ನು ಚಿಂತಕ ಜೈರಾಮ್‌ ರಮೇಶ್‌ ಬರೆದಿದ್ದಾರೆ. ಆ ಕೃತಿಯ ಮಹತ್ವವನ್ನು ಪ್ರೊ.ಕೆ.ಈ. ರಾಧಾಕೃಷ್ಣ ಅವರು ಇಲ್ಲಿ ವಿಶ್ಲೇಷಿಸಿದ್ದಾರೆ.)

ಬೌದ್ಧಮತದ ಅಹಿಂಸಾಮಾರ್ಗದ ಕಾರಣ ಭಾರತದ ಪ್ರಭುತ್ವ ಶಕ್ತಿಹೀನವಾಗಿ ಬಿಟ್ಟಿತು ಎಂದು ಭಾವಿಸಿದ್ದ ವಿವೇಕಾನಂದರು, ಭಾರತೀಯರು ಸ್ವಾತಂತ್ರಕ್ಕೆ ಅರ್ಹರಲ್ಲ, ಅವರಿಗೆ ಪ್ರಜಾಪ್ರಭುತ್ವದ ನೆಲೆಯ ಅರಿವೇ ಇಲ್ಲ ಎಂದು ತೀವ್ರವಾಗಿ ಭಾವಿಸಿದ್ದ ಇಂಗ್ಲೆಂಡಿನ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್ಲರು, ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದ ರುಡ್ಯಾರ್ಡ್‌ ಕಿಫ್ಲಿಂಗ್‌ (1907) ರವೀಂದ್ರನಾಥ ಟ್ಯಾಗೋರ್‌ (1913) ಡಬ್ಲ್ಯೂ.ಬಿ.ಯೇಟ್ಸ್‌ (1923) ಲಿಯೋ ಟಾಲ್‌ಸ್ಟಾಯ್‌, ಡಿ.ಎಚ್‌.ಲಾರೆನ್ಸ್‌, ಜೋಸೆಫ್‌ ಕಾರ್ನಾರ್ಡ್‌ ಮುಂತಾದ ಮಹಾನ್‌ ಲೇಖಕರು, ವಿಜ್ಞಾನಿ ಸರ್.ಸಿ.ವಿರಾಮನ್‌, ಮಹಾ ಉದ್ದಿಮೆದಾರ ಆಂಡ್ರೋ ಕಾರ್ನೆಗೆ, ನೊಬೆಲ್‌ ಪ್ರಶಸ್ತಿ ಸಂಸ್ಥಾಪಕ ಆಲ್‌ಫ್ರೆಡ್‌ ನೊಬಲ್‌ರು, ಅಲ್ಲದೆ ಇಂಗ್ಲೆಂಡಿನ ಮಹಾರಾಣಿ ವಿಕ್ಟೋರಿಯಾ, ಮಹಾತ್ಮ ಗಾಂಧಿ, ಬಿ.ಆರ್‌.ಅಂಬೇಡ್ಕರ್,‌ ಪಂಡಿತ್‌ ನೆಹರೂ ಅವರು ತಮ್ಮ ಗ್ರಂಥಾಲಯಗಳಲ್ಲಿ ಇಟ್ಟುಕೊಂಡಿದ್ದ ಪುಸ್ತಕವೇ, 1879ರಲ್ಲಿ ಪ್ರಕಟವಾಗಿ ಎಪ್ಪತ್ತೊಂಬತ್ತು ಮರು ಮುದ್ರಣಗಳನ್ನು ಕಂಡ ‘ದ ಲೈಟ್‌ ಆಫ್‌ ಏಷ್ಯಾ’ (ಏಷ್ಯಾದ ಬೆಳಕು) ಕೃತಿ.

ಬ್ರಿಟಿಷ್‌ ಪ್ರಭುತ್ವವಾದಿ ವಿನ್‌ಸ್ಟನ್‌ ಚರ್ಚಿಲ್ಲರು 1922ರಲ್ಲಿ ಪಂಡಿತ್‌ ಜವಹರಲಾಲ್‌ ನೆಹರೂ ಲಖನೌ ಜೈಲಿನಲ್ಲಿದ್ದಾಗ ಅವರನ್ನು ಜೈಲಿಗೆ ಅಟ್ಟಿದ್ದ ಚರ್ಚಿಲ್ಲರೇ ಅವರಿಗೆ ಹನ್ನೆರಡು ಪುಸ್ತಕಗಳನ್ನು ಕಳುಹಿಸಿ ಅವುಗಳಲ್ಲಿ ‘Arnold’s Light of Asia’ ವನ್ನು ಓದಲೇಬೇಕು ಎಂದು ಸೂಚಿಸುತ್ತಾರೆ! ಭಗವದ್ಗೀತೆಯನ್ನು ‘The Song celestial’ ಎಂದು ಭಾಷಾಂತರಿಸಿದ ಬಹುಭಾಷಾ ತಜ್ಞ, ಭಾರತೀಯ ಸಂಸ್ಕೃತಿಯ ಸಂಶೋಧಕ, ಆಕ್ಸ್‌ಫರ್ಡ್‌ ಪದವೀಧರ, ತನ್ನ ಇಪ್ಪತ್ತೈದನೇ ವಯಸ್ಸಿನಲ್ಲೇ, ಪುಣೆಯ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತಿಗೊಂಡ ಎಡ್ವಿನ್‌ ಅರ್ನಾಲ್ಡ್‌ ಅನ್ನುವ ಮಹಾಚೇತನ ಬರೆದ ಕಾವ್ಯಕಥನ.

ಭಾರತೀಯರು ಸ್ವಯಮಾಡಳಿತವನ್ನು ನಿರ್ವಹಿಸಲು ಅಸಮರ್ಥರು, ಬ್ರಿಟಿಷ್‌ ಪ್ರಜಾಪ್ರಭುತ್ವ ವ್ಯವಸ್ಥೆಯೇ ಸರ್ವಶ್ರೇಷ್ಠ ಎಂದು ನಂಬಿದ್ದ ಕಾಲಮಾನದಲ್ಲಿ ‘The Light of Asia’ ಪಾಶ್ಚಾತ್ಯ ಜಗತ್ತಿನ ಬೌದ್ಧಿಕ ಲೋಕದಲ್ಲಿ ಬಿರುಗಾಳಿಯನ್ನೆಬ್ಬಿಸಿತು.

1870ರಲ್ಲಿ ಅಲೆಕ್ಸಾಂಡರ್‌ ಕನ್ನಿಂಗ್‌ಹ್ಯಾಮ್‌ ಬೆಳಕಿಗೆ ತಂದ Bharhut ಸ್ತೂಪ, ಮ್ಯಾಕ್ಸ್‌ಮುಲರ್‌ ಉಪನಿಷತ್ತುಗಳ ಮೂಲಕ ಆರಂಭಿಸಿದ ‘Sacred Books of the East’ ಬರಹ ಸರಣಿಗಳು ಅರ್ನಾಲ್ಡ್‌ರಂತಹವರನ್ನು ಭಾರತದತ್ತ ಆಕರ್ಷಿಸಿದವು. ಇಂತಹ ಕಾಲಮಾನದಲ್ಲೇ ‘The Light of Asia’ (or) – The Great renunciation, ಮಹಾಭಿನಿಷ್ಕ್ರಮಣ – (ಭಾರತದ ರಾಜಕುಮಾರ, ಬೌದ್ಧಮತದ ಸಂಸ್ಥಾಪಕ ಗೌತಮನ ಜೀವನ ಮತ್ತು ಉಪದೇಶಗಳು) ಅರ್ನಾಲ್ಡ್‌ರು ರಚಿಸಿ, ಪ್ರಕಟಿಸಿ ಅದನ್ನು The Most Exalted Star of India – ರಾಣಿ ವಿಕ್ಟೋರಿಯಾ ಅವರಿಗೆ ಅರ್ಪಿಸಿದರು.

ಓರ್ವ ಕಲ್ಪಿತ ಭಾರತೀಯ ಬುದ್ಧ ಧರ್ಮೀಯನು ಹೇಳುವ ಕಥೆಗಳ ಮೂಲಕ, ಮುಕ್ತ ಛಂದಸ್ಸಿನಲ್ಲಿ ರಚಿತವಾದ ಈ ಕಾವ್ಯ, ಕಾವ್ಯ ರಚನಾ ತಂತ್ರದಲ್ಲೇ ಹೊಸದಾರಿಯನ್ನು ಹಿಡಿದಿತ್ತು.

53,000 ಸಾಲುಗಳುಳ್ಳ, 41,000 ಪದಗಳುಳ್ಳ ‘The Light of Asia’ ಹೀಗೆ ಆರಂಭವಾಗುತ್ತದೆ.

ಪ್ರಬುದ್ಧ – ರಾಜಕುವರ ಸಿದ್ಧಾರ್ಥ – ಭುವಿಯಶೈಲಿಯ ಹರಿಕಾರ-
ಎಲ್ಲೆಲ್ಲೂ ಪೂಜಿತ, ವಿವೇಕಿ, ಅತ್ಯುತ್ತಮ, ಕಾರಣ್ಯಸಿಂಧು
ನಿರ್ವಾಣ, ಬದುಕಸೂತ್ರಗಳ ಗುರುದೇವ,
ಮತ್ತೆ ಮನುಜರಿಗಾಗಿ ಹುಟ್ಟಿಬಂದನು ಭುವಿಗೆ -
ಈ ಕಾವ್ಯ ಕೊನೆಗೊಳ್ಳುವುದು ಹೀಗೆ.
‘ಬುದ್ಧ ಮರಣಿಸಿದ, ಮಹಾತ್ಮ ತಥಾಗತ
ಮನುಜರೊಡನೆ ಮನುಜ-ಸಾರ್ಥಕ್ಯಬದುಕು
ಸಾವಿರದ ಕೋಟಿ ಜನ ತುಳಿದದಾರಿಗೆ ತಾನು ತೋರಿದ ದೀಪ-
ಬೆಳಕ ಚೆಲ್ಲಿದ ಬುದ್ಧ ತನ್ನ ಪಥದೆಡೆಗೆ
ನಿಶ್ಯಬ್ದ-ಮೌನ ತಾಣದ ನಿರ್ವಾಣದೆಡೆಗೆ’

ಅನೇಕ ವ್ಯಕ್ತಿತ್ವಗಳನ್ನು ಪ್ರೇರೇಪಿಸಿದ ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆಗಳು ಜಗತ್ತಿನ ಗ್ರಂಥಾಲಯಗಳನ್ನು ಸಿರಿವಂತಗೊಳಿಸಿವೆ. ಆದರೆ, ಬಹುಶೃತ ವಿದ್ವಾಂಸರಾದ, ಸಂಶೋಧಕರಾದ, ಸತ್ಯನಿಷ್ಠುರರಾದ, ರಾಜಕಾರಣದಲ್ಲೂ ಕಿಂಚಿತ್‌ ಅಂಟಿಕೊಂಡ, ಮೂಲತಃ ತಂತ್ರಜ್ಞಾನಿ, ಪ್ರವೃತ್ತಿಯಲ್ಲಿ ಅರ್ಥಶಾಸ್ತ್ರಜ್ಞ, ಜೈರಾಮ್‌ ರಮೇಶ್‌ರವರು ತಮ್ಮ ಚೈತನ್ಯಶೀಲ ಕೈಗಳಿಂದ ಬರೆದದ್ದು ಈ ದಶಕದಲ್ಲೇ ಮುಖ್ಯ ಗ್ರಂಥವಾದ ‘The Light of Asia’ ಕಾವ್ಯದ ಜೀವನ ಚರಿತ್ರೆ. ಅದು ಸಾಗಿ ಬಂದ ಹಾದಿ, ಎಡ್ವರ್ಡ್‌ ಅರ್ನಾಲ್ಡ್‌‌ರ ಹುಟ್ಟಿನಿಂದ ಆರಂಭವಾಗುವ ಗೇಯಗದ್ಯದ ಶೈಲಿಯ ಕಥನಕಾವ್ಯ, ಬುದ್ಧನ ಜೀವನ, ತತ್ವ, ಸಿದ್ಧಾಂತಗಳ ಜತೆಗೆ ಅರ‍್ನಾಲ್ಡ್‌ರ ಕಾವ್ಯದ ಸಾಲುಗಳನ್ನು ಪ್ರಬುದ್ಧವಾಗಿ ಉಲ್ಲೇಖಿಸುತ್ತಾ 458 ಪುಟಗಳ ಪ್ರೌಢಗ್ರಂಥವನ್ನು ನಮಗೆ ಕೊಡುತ್ತದೆ.

ಬೌದ್ಧಮತದ ಹುಟ್ಟುನೆಲ ಭಾರತದಲ್ಲಿ ಅದರ ʻಮತಶಕ್ತಿʼ ಕುಂಠಿತವಾದರೂ, ಚೀನಾ, ಜಪಾನ್‌, ಮಲೇಷ್ಯಾ, ಇಂಡೋನೇಷ್ಯಾ, ವಿಯಟ್ನಾಂ, ಫಿಲಿಪೀನ್ಸ್‌ಗಳಲ್ಲಿ ಹರಡಿಕೊಂಡರೂ, ಭಾರತೀಯತೆಯ ಅದರಲ್ಲೂ ವಿಶೇಷವಾಗಿ ಶಂಕರಾಚಾರ್ಯರು ಮಾರ್ಪಡಿಸಿದ ಪ್ರಸ್ತುತ ಹಿಂದೂ ಸಮಾಜ ಆಚರಿಸುತ್ತಿರುವ ಮತೀಯ ಆಚರಣೆಗಳು, ಚಿಂತನೆಗಳ ಮೇಲೆ ಪರೋಕ್ಷವಾಗಿ ಬೀರಿದ ಪ್ರಭಾವ ಅಗಾಧವಾದದ್ದು, ಆದರೆ ತನ್ನ ಜನ್ಮಭೂಮಿಯಲ್ಲಿ ಅದು ಬೇರುಬಿಟ್ಟ ಜಾಗದಲ್ಲಿ ಅದಕ್ಕೆ ಸೂಕ್ತ ಸ್ಮಾರಕಗಳಿರಲಿಲ್ಲ. ಆದರೆ ಎಡ್ವಿನ್‌ ಅರ್ನಾಲ್ಡ್‌ ‘The Light of Asia’ –ಭಾರತವೂ ಬೌದ್ಧಧರ್ಮ ʻತನ್ನದುʼ ಎನ್ನುವ ಧನ್ಯತಾಭಾವವನ್ನು ಸೃಷ್ಟಿಮಾಡಿದ ಮಹಾಗ್ರಂಥವಾಗಿ ಪರಿಣಮಿಸಿತು. ಅನೇಕ ರಾಜಕೀಯ ವ್ಯಾಖ್ಯಾನಗಳನ್ನು ಬರೆದ ರಾಮಮಂದಿರದ ʻಕಥಾನಕʼದಷ್ಟೇ ದೀರ್ಘಕಾಲ ನಡೆದದ್ದು 1886 ಮತ್ತು 1953ರ ಮಧ್ಯೆ ನಡೆದ ʻಭೋಧಗಯಾಮಂದಿರʼದ ಹಕ್ಕಿನ ಸಂಬಂಧ ನಡೆದ ಹೋರಾಟ. ಬುದ್ಧ ಗೌತಮನಿಗೆ ‘ಜ್ಞಾನದ ಬೆಳಕು’ ಮೂಡಿದ ಪವಿತ್ರ ಸ್ಥಳ ‘ಬೋಧಗಯಾ ಮಂದಿರ’ ಸಹಜವಾಗಿ ಬುದ್ಧಮತೀಯರ ಆಡಳಿತಕ್ಕೊಳಪಡಬೇಕು ಎಂದು ನಂಬಿದವರಲ್ಲಿ 1986ರಲ್ಲೇ ಅರ್ನಾಲ್ಡ್‌ರೇ ಮೊದಲಿಗರು. ಆದರೆ ಅಲ್ಲಿ, ಹದಿನೇಳನೆಯ ಶತಮಾನದಲ್ಲಿ ಶಿವಮಂದಿರ ಸ್ಥಾಪಿತವಾಗಿ ಈ ಪವಿತ್ರಸ್ಥಳ ಬಲಿಷ್ಠ ಹಿಂದೂ ಪ್ರಭಾವೀ ಮಹಾಂತ ಮನೆತನದ ವೈಯಕ್ತಿಕ ಆಸ್ತಿಯಾಗಿ, ಬೋಧಗಯಾವನ್ನು ಸಂದರ್ಶಿಸಲು ಬರುತ್ತಿದ್ದ ಬೌದ್ಧಮತೀಯರನ್ನು ಅವಮಾನಿಸಲಾಗುತ್ತಿತ್ತು.

ಎಡ್ವಿನ್‌ ಅರ್ನಾಲ್ಡರ ಕಾವ್ಯದಿಂದ ಪ್ರಭಾವಿತರಾದ, ಶ್ರೀಲಂಕೆಯ ಬೌದ್ಧ ಸನ್ಯಾಸಿ ಮಹಾಬೋಧಿಸಂಸ್ಥೆಯ ಸಂಸ್ಥಾಪಕ ಧರ್ಮಪಾಲರು ನಿರಂತರ ಕಾನೂನಾತ್ಮಕ, ಸಾಮಾಜಿಕ ಹೋರಾಟವನ್ನು ಮಾಡಿ ಭಾರತವೂ ಸೇರಿದಂತೆ ಜಗತ್ತಿನ ಬುದ್ಧಮತೀಯರಿಗೆ ಭೋಧಗಯಾ, ಶ್ರದ್ಧಾ ಮತ್ತು ಜ್ಞಾನ ಕೇಂದ್ರವಾಗುವಂತೆ ಪರಿಶ್ರಮಿಸಿದರು. ಮಹಾ ಸಾಂಸ್ಕೃತಿಕ ಸಾಹಿತ್ಯ ಅನ್ವೇಷಕ ಎಡ್ವಿನ್‌ ಅರ್ನಾಲ್ಡ್‌ರು ಬಿತ್ತಿದ ಬೆಳಕಿನ ಬೀಜ ಆರಲಿಲ್ಲ. ಜಪಾನಿನ ಕನಗ್ವಾ ಬುದ್ಧ ಮಂದಿರದ ಮುಖ್ಯ ಅರ್ಚಕರು ಧರ್ಮಪಾಲರಿಗೆ ಕ್ರಿಸ್ತಪೂರ್ವ 1252ರಲ್ಲಿ ಜಪಾನಿನ ಸೇನಾಧಿಕಾರಿಯೊಬ್ಬರು ಕೆತ್ತಿದ ಕಂಚಿನ ಬುದ್ಧನ ಪ್ರತಿಮೆಯನ್ನು ಕೊಡುತ್ತಾರೆ. ಆ ಪ್ರತಿಮೆಯನ್ನು ಬುದ್ಧಗಯಾದಲ್ಲಿ ಪ್ರತಿಷ್ಠಾಪಿಸಬೇಕೆಂದು ಪ್ರಯತ್ನಿಸುವ ಧರ್ಮಪಾಲರಿಗೆ ಎಡ್ವಿನ್‌ ಅರ್ನಾಲ್ಡ್‌ರು ಸಹಾಯಕರಾಗಿ ನಿಲ್ಲುತ್ತಾರೆ. ಹಿಂದುಗಳ ವಿರೋಧ ಕಟ್ಟಿಕೊಳ್ಳಬೇಕಾಬಹುದೆಂಬ ಭಯದಿಂದ ಬ್ರಿಟಿಷ್‌ ಸರಕಾರ ಬುದ್ಧವಿಗ್ರಹದ ಸ್ಥಾಪನೆಗೆ ಅನುಮತಿ ನೀಡುವುದಿಲ್ಲ. ಆದರೆ 25ನೇ ಫೆಬ್ರವರಿ 1895ರಂದು ಧರ್ಮಪಾಲರು, ಅರ್ನಾಲ್ಡರ ಪರೋಕ್ಷ ಬೆಂಬಲದೊಂದಿಗೆ, ಖಾಲಿಯಾಗಿದ್ದ ಗರ್ಭಗುಡಿಯಲ್ಲಿ ಅದನ್ನು ಪ್ರತಿಷ್ಠಾಪಿಸಿಬಿಡುತ್ತಾರೆ. ಬಳಿಕ ನಡೆದ ಕಾನೂನು ಸಮರದಲ್ಲಿ 1895ನೇ ಜುಲೈ 19ರಂದು ನ್ಯಾಯಧೀಶರಾದ Maxpherson, ಬುದ್ಧಗಯಾದ ಜಮೀನಿನ ಒಡೆತನ ಬುದ್ಧ ಮತ್ತು ಹಿಂದೂಮತಗಳೆರಡಕ್ಕೂ ಸೆರಿದ್ದು ಎಂದು ಮಹತ್ವದ ತೀರ್ಪು ನೀಡುತ್ತಾರೆ. 1953ರಲ್ಲಿ ಅರವತ್ತೇಳು ವರ್ಷಗಳ ದೀರ್ಘ ಕಾಲದ ಹೋರಾಟದ ಬಳಿಕ ಭಾರತ ಸರ್ಕಾರ ಬೋಧಗಯಾವನ್ನು ಮಾಹಬೋಧಿ ಸಂಸ್ಥೆಗೆ ಒಪ್ಪಿಸಿತು. ಒಂದು ಬಲಿಷ್ಠ ಮಹಾಂತ ಮನೆತನ ವೈಯಕ್ತಿಕ ಆಸ್ತಿಯನ್ನಾಗಿ ಮಾಡಿಕೊಂಡಿದ್ದ ಈ ಪವಿತ್ರಸ್ಥಳಕ್ಕೆ ನಡೆದ ದೀರ್ಘಕಾಲದ ಹೋರಾಟ ಸಮಾಜದಲ್ಲಿ ಮತಾಂಧ ಸಾಂಪ್ರದಾಯಿಕತೆ ಸ್ಥಾಪಿಸಿದ್ದ ಹಿಡಿತಕ್ಕೆ ಸಾಕ್ಷಿ.

ಓರ್ವ ಕ್ರಿಶ್ಚಿಯನ್‌ ಧರ್ಮಿಷ್ಠ, ಬ್ರಿಟಿಷ್‌ ಮಹಾರಾಜ್ಯದ ಪ್ರಜೆ, ಅರ್ನಾಲ್ಡ್‌ರು 1879ರಲ್ಲಿ ಬರೆದ ಈ ಕಾವ್ಯಕಥನ ಕ್ರಿಶ್ಚಿಯನ್‌ ಸಂಪ್ರದಾಯವಾದಿಗಳ ತೀರ್ವ ಟೀಕೆಗೂ ಗುರಿಯಾಯಿತು. ಸಿ.ಟಿ. ಪ್ಲಾಂಟರ‍್ಸ್‌ ಎನ್ನುವ ಧರ್ಮಶಾಸ್ತ್ರಜ್ಞ Christ or Buddha ಎನ್ನುವ ಕಿರುಹೊತ್ತಿಗೆಯನ್ನು 1881ರಲ್ಲಿ ಪ್ರಕಟಿಸಿ, ಪಾಶ್ಚಾತ್ಯ ಜಗತ್ತಿನ ಅನೇಕ ಮೇಧಾವಿಗಳನ್ನು ಪ್ರಭಾವಿಸಿದ ಅರ್ನಾಲ್ಡ್‌ರ ಕಾವ್ಯ, ಬುದ್ಧನನ್ನು ಕ್ರಿಸ್ತನಿಗಿಂತ ಎತ್ತರದ ಸ್ಥಾನದಲ್ಲಿ ತೋರಿಸುವುದರಿಂದ ಅದು ʻಅಪಾಯಕಾರಿʼ ‘Extra-ordinarily Dangerous Book’ ಎಂದು ತೀರ್ಪಿತ್ತರು! ಇವರ ಜತೆ ವಿಲಿಯಂ ವಿಲ್ಸನ್‌ ಎನ್ನುವ ಬ್ಯಾಪ್ಟಿಸ್ಟ್‌ ಮತಾಧ್ಯಾಪಕರು, ಎಸ್.ಎಚ್‌. ಕೈಲಾಸ್‌ ಅನ್ನುವ ಭಾರತವಾಸಿ ಕೆನಡಿಯನ್‌ ಪಾದ್ರಿ, ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಂಸ್ಕೃತ ಪ್ರೊಫೆಸರ್‌ ಸರ್‌.ಎಂ.ಎಂ. ವಿಲಿಯಮ್ಸ್‌ ಕೂಡಾ ಬುದ್ಧಮತವನ್ನು ತೀವ್ರವಾಗಿ ಟೀಕಿಸಿದ್ದರು.

ʻಏಷ್ಯಾದ ಬೆಳಕುʼ ಕಾವ್ಯಕ್ಕೇ ತಮ್ಮನ್ನು ಮಿತಿಗೊಳಿಸದ ಅರ್ನಾಲ್ಡ್‌, The Song Celetial (1885) (ಭಗವದ್ಗೀತೆ) Indian Song of Songs (1875) Pearls of Faith ಪೈಗಂಬರರ ತೊಂಬತ್ತೊಂಭತ್ತು ನುಡಿಗಳು (1883) ಅಲ್ಲದೆ 1891ರಲ್ಲಿ ಜೀಸಸ್‌ ಕ್ರಿಸ್ತನ ಜೀವನಾಧಾರಿತ The Light of the World – ವಿಶ್ವದ ಬೆಳಕು ಕಾವ್ಯಕಥನಗಳನ್ನು ಹೊರತಂದರು. ಆದರೆ ಎಪ್ಪತ್ತೆರಡು ಮುದ್ರಣಗಳನ್ನು ಕಂಡು, ಹದಿಮೂರು ಯೂರೋಪಿಯನ್, ಎಂಟು ಉತ್ತರ-ದಕ್ಷಿಣ ಭೂಖಂಡಗಳ ಮತ್ತು ಹದಿನಾಲ್ಕು ದಕ್ಷಿಣ ಏಷಿಯಾದ ಹಾಗೂ ಹತ್ತು ಭಾರತೀಯ ಭಾಷೆಗಳಿಗೆ ಅನುವಾದಗೊಂಡು, ಅನೇಕ ನಾಟಕಗಳು, ನೃತ್ಯ ರೂಪಗಳು ಮತ್ತು ಸಿನೆಮಾಗಳಿಗೆ ದ್ರವ್ಯ ಒದಗಿಸಿದ ‘The Light of Asia’ದ ಯಶಸ್ಸಿನ ಎತ್ತರಕ್ಕೆ ಅವುಗಳು ಏರಲಾಗಲಿಲ್ಲ.

‘The Light of Asia’ ಕಥನಕಾವ್ಯದ ಕೀರ್ತಿ ಪಾಶ್ಚಾತ್ಯ ಜಗತ್ತಿನಲ್ಲಿ ಹಬ್ಬಿ ಅದು ಬೌದ್ಧಿಕ ಮತ್ತು ಸಾಂಸ್ಕೃತಿಕ ಜಗತ್ತಿಗೆ ಪ್ರಸರಿಸಿದಾಗ ಅದರ ಮೊದಲ ಅನುವಾದವನ್ನು Prof.Hagouden Mayboom ಡಚ್‌ ಭಾಷೆಗೆ ಅನುವಾದಿಸುತ್ತಾರೆ. 1885ರಲ್ಲಿ ರಾಮಕೃಷ್ಣಪರಮಹಂಸರ ಶಿಷ್ಯರಾದ ಗಿರೀಷ್‌ಚಂದ್ರ ಘೋಷ್‌, ಈ ಕಾವ್ಯದಿಂದ ಪ್ರೇರಿತರಾಗಿ ʻಬುದ್ಧದೇವಚರಿತʼ ನಾಟಕವನ್ನು ಪ್ರದರ್ಶಿಸುತ್ತಾರೆ. Arthur Pfugnst ಮತ್ತು Konrad Wernieke ಜರ್ಮನ್‌ ಭಾಷೆಗೆ, 1888ರಲ್ಲಿ Albert Bonniers ಸ್ವಿಸ್‌ ಭಾಷೆಗೆ 1890ರಲ್ಲಿ Alexandra Anneskaria ರಷ್ಯನ್‌ ಭಾಷೆಗೆ, ಮತ್ತು ನತಗಾವಾತಾರೋ ಜಪಾನಿ ಭಾಷೆಗೆ, 1899ರಲ್ಲಿ Leon Song ಫ್ರೆಂಚ್‌ ಭಾಷೆಗೆ ಅನುವಾದ ಮಾಡುತ್ತಾರೆ. ಬಳಿಕ ಅದು ಮುಖ್ಯ ಭಾರತೀಯ ಭಾಷೆಗಳಿಗೂ ಅನುವಾದಗೊಳ್ಳುತ್ತದೆ. ಈ ಮಹಾನ್‌ಕಥನಕಾವ್ಯ 1902ರಲ್ಲಿ ವೆಂಕಟಶಾಸ್ತ್ರಿ ಮತ್ತು ತಿರುಪತಿ ಶಾಸ್ತ್ರಿಗಳು ತೆಲುಗು ಭಾಷೆಯಲ್ಲಿ ʻಬುದ್ದಚರಿತಮುʼ ಎನ್ನುವ ಹೆಸರಿನಲ್ಲಿ, 1914ರಲ್ಲಿ ನಲಪತ್‌ ನಾರಾಯಣ ವೇತನ ಪೌರತ್ವ ದೀಪಮ್‌, ಮತ್ತು ಮಹಾಕವಿ ಕುಮಾರನ್‌ ಆಶನ್ ‌ʻಬುದ್ಧಚರಿತಮ್‌ʼ ಕೃತಿಗಳನ್ನು ಮಲಯಾಳ ಭಾಷೆಗೆ ಭಾಷಾಂತರಿಸುತ್ತಾರೆ. ತಮಿಳುನಾಡಿನ ಸಮಾಜ ಸುಧಾರಕರಾದ ಇಯಾ ತಿಡಾಸ್‌, ಪ. ಲಕ್ಷ್ಮೀನರಸು, ಕಲ್ಕಿ ಕೃಷ್ಣಮೂರ್ತಿ ಯಂತಹವರನ್ನು ತೀರ್ವವಾಗಿ ಪ್ರಭಾವಿಸಿದ್ದು ಈ ಕಥನಕಾವ್ಯ. 1922ರಲ್ಲಿ ಅಚಾರ್ಯ ರಾಮಚಂದ್ರ ಇದನ್ನು ಶುಕ್ಲ ಹಿಂದಿ ಭಾಷೆಗೆ ತರುತ್ತಾರೆ. (ಬುದ್ಧಚರಿತ್‌) 1922ರಲ್ಲಿ ಫೆಡರೋತ್ಲಿಮೆಂಟ್‌ ಅಟೆರಸ್‌ ಸ್ಪಾನಿಶ್‌ ಭಾಷೆಯಲ್ಲಿ, 1925ರಲ್ಲಿ ಇದೇ ಭಾಷೆಯಲ್ಲಿ ರಾಫೆಲ್‌ ರಾಬ್ರೆರಾ ಮೆಕ್ಸಿಕನ್‌ ಭಾಷೆಗೆ ಈ ಕಥನಕಾವ್ಯವನ್ನು ಭಾಷಾಂತರಿಸುತ್ತಾರೆ. 1930ರಲ್ಲಿ ನರಸಿಂಹರಾವ್‌ ದೈವೇತಿಯಾ, ಗುಜರಾತೀ ಭಾಷೆಗೆ 1934ರಲ್ಲಿ ಗುರುಭಕ್ಷಸಿಂಗ್‌ ಪಂಜಾಬೀ ಭಾಷೆಗೆ ತರುತ್ತಾರೆ.
ಪ್ರಜಾವಾಣಿ ಪತ್ರಿಕೆಯ ಸಂಸ್ಥಾಪನ ಸಂಪಾದಕರಾಗಿದ್ದ ಬಿ.ಪುಟ್ಟಸ್ವಾಮಯ್ಯನವರು ಈ ಕಥಾನಕದ ಆಧಾರದ ಮೇಲೆ ಬರೆದ ʻಗೌತಮಬುದ್ಧʼ ನಾಟಕದಲ್ಲಿ ಮಹಮ್ಮದ್‌ಫೀರ್‌ ವಹಿಸುತ್ತಿದ್ದ ಬುದ್ಧನ ಪಾತ್ರದಂತ ಕಥೆಯಾಗಿಬಿಟ್ಟಿತ್ತು. ಮಂಜೇಶ್ವರ ಗೋವಿಂದಪೈ ಅವರ ಗೋಲ್ಗೋಥಾದ ಮೇಲೆ ಅರ್ನಾಲ್ಡ್‌ರ ಪ್ರಭಾವ ನಿಚ್ಚಳ. ಪ್ರೊ.ಲೀಲಾಭಟ್‌ 1995ರಲ್ಲಿ ʻಏಷ್ಯಾದ ಬೆಳಕುʼ ಎನ್ನು ಹೆಸರಿನಲ್ಲಿ ಕನ್ನಡ ಭಾಷೆಗೆ ಅನುವಾದಿಸುತ್ತಾರೆ. ಕೃಷ್ಣರಾವ್‌ ಕೆಲುಸ್ಕರ್‌ ಈ ಕಾವ್ಯವನ್ನು ಮರಾಠಿಗೆ ʻಬುದ್ಧಾಂಚೇಚರಿತ್ರʼ ಎನ್ನುವ ಹೆಸರಿನಿಂದ ಅನುವಾದಿಸುತ್ತಾರೆ.

ಈ ಕಾವ್ಯ ಕಥಾನಕದ ಜೀವನ ಚರಿತ್ರೆಯ ಜೀವಂತಿಕೆಯ ಕಣಕಣಗಳನ್ನು ದಾಖಲಿಸುವ ಜೈರಾಮ್‌ ರಮೇಶ್‌, ಅದು ದಾಮರ್ಲ ರಾಮರಾವ್‌ ರಂತ ಹೆಸರಾಂತ ಕುಂಚಕಲಾವಿದರು ಚಿತ್ರಿಸಿದ ಚಿತ್ರಗಳನ್ನು ನೇಪಾಲಿ ಕವಿ ಕಲಾವಿದ ಚಿತ್ರಧರ್‌ ಹೃದಂಸು ಅವರ ಕಲಾಕೃತಿಯನ್ನು ಉಲ್ಲೇಖಿಸುವುದು ಮಾತ್ರವಲ್ಲದೇ, 1894ರಲ್ಲಿ ಲಂಡನ್ನಿನಲ್ಲಿ Sarah Bernhardt ಪ್ರದರ್ಶಿಸಿದ ನಾಟಕ, 1889ರಲ್ಲಿ ಅಮೆರಿಕಾ ಮತ್ತು ಲಂಡನ್ನಿನ ಅನೇಕಸ್ಥಳಗಳಲ್ಲಿ ಸಂಗೀತ ದಿಗ್ದರ್ಶಕ Dudly Buck ಪ್ರದರ್ಶಿಸಿದ ಗಾಯನ ಗೋಷ್ಠಿಗಳೂ, ಅರ‍್ನಾಲ್ಡರ ಕಾವ್ಯಾಧಾರಿತವಾದುದನ್ನು ಉಲ್ಲೇಖಿಸುತ್ತಾರೆ. ಅರ್ನಾಲ್ಡರು ಪಾಶ್ಯಾತ್ಯ ಮತ್ತು ಪೌರ್ವಾತ್ವ ಬೌದ್ಧಿಕ ಪ್ರಪಂಚದಲ್ಲಿ ಬುದ್ಧ ಮತ್ತು ತನ್ಮೂಲಕ ಅದು ದರ್ಶಿಸಿದ ʻಮಾನವೀಯತಾವಾದʼ ವನ್ನು ಪರಿಚಯಿಸುವುದರ ಮೂಲಕ, ಭಾರತದ ಬಗ್ಗೆ ಅಜ್ಞಾನವನ್ನು ಹೊಂದಿದ್ದ ಪ್ರಭುತ್ವಗಳನ್ನೆಲ್ಲಾ ಕಣ್ತೆರೆಯಿಸುತ್ತಾರೆ.

ನ್ಯೂಯಾರ್ಕ್‌ ಟೈಮ್ಸ್‌, ಇಂಗ್ಲೆಂಡಿನ ಗಾರ್ಡಿಯನ್‌, ಭಾರತದ ಹಿಂದು, ಟೈಮ್ಸ್‌ ಆಫ್ ಇಂಡಿಯಾದಂತಹ ಪತ್ರಿಕೆಗಳಲ್ಲಿ ಬಂದ ವಿಮರ್ಶೆಗಳನ್ನೂ ಈ ಕಾವ್ಯಕಥನಕ್ಕೆ ಸಂಬಂಧಿತವಾದ ಸುದ್ದಿಗಳನ್ನು ಪ್ರಕಟವಾದುದನ್ನು ಸಂಗ್ರಹಿಸಿ ತಮ್ಮ ಪುಸ್ತಕದ ಸತ್ಯತೆಯನ್ನು ಜೈರಾಮ್‌ ರಮೇಶ್‌ ಹೆಚ್ಚಿಸುತ್ತಾರೆ.

ಅರ್ನಾಲ್ಡ್‌ ಅವರ ಆಸಕ್ತಿ ಬುದ್ಧಮೋಹಕ್ಕೆ ಮಾತ್ರ ಸೀಮಿತವಾದದ್ದಲ್ಲ. ʻಮಹಾಭಾರತವನ್ನುʼ ಪ್ರಥಮ ಬಾರಿಗೆ 1896ರಲ್ಲಿ ಇಂಗ್ಲಿಷ್‌ಗೆ ಭಾಷಾಂತರಿಸಿದ ಕೇಸರಿ ಮೋಹನ್‌ ಗಂಗೊಲಿಯವರಿಗೆ, ವೈಸ್‌ರಾಯ್‌ ಆಗಿದ್ದ ಲಾರ್ಡ್‌ ಕರ್ಜನ್‌ ಅವರನ್ನು ಒಪ್ಪಿಸಿ (1899) ವಾರ್ಷಿಕ ಆರು ನೂರು ರೂಪಾಯಿಗಳ ಗೌರವಧನ ಸಿಗುವಂತೆ ಪ್ರೋತ್ಸಾಹಿಸುತ್ತಾರೆ. ಸ್ವಭಾವತಃ ಬ್ರಿಟಿಷ್‌ ಸಾರ್ವಭೌಮತೆಯ ಬೆಂಬಲಿಗರಾಗಿದ್ದರೂ, ಭಾರತೀಯ ವಿದ್ವತ್‌ ಲೋಕವನ್ನು ವಿಶ್ವದ ಪ್ರಭಾವಿಗಳ ಮನಸ್ಸುಗಳಿಗೆ ಮುಟ್ಟಿಸಿದ ಅರ್ನಾಲ್ಡರ ಸಣ್ಣಪುಟ್ಟ ಪ್ರಯತ್ನಗಳನ್ನೂ ದಾಖಲೆಗಳ ಮೂಲಕ ಹೇಳುತ್ತಾರೆ ಜೈರಾಮ್‌ ರಮೇಶ್‌, The Light of Asia ದ ಮೂಲಕ ಬುದ್ಧ-ಸಿದ್ಧಾಂತವನ್ನು ಹೊರಜಗತ್ತಿಗೆ ತಲುಪಿಸುವಲ್ಲಿ, ಅನಿಬೆಸೆಂಟರು ಮತ್ತು ಬೇರೆ ಬೇರೆ ದೇಶಗಳಲ್ಲಿದ್ಧ ಥಿಯೋಸಿಫಿಕಲ್‌ ಸೊಸೈಟಿಯ ಪ್ರಯತ್ನವೂ ಗಮನಾರ್ಹವಾದುದನ್ನು ಸ್ಮರಿಸುತ್ತಾರೆ. ಗಾಂಧೀವಾದಿಗಳೂ, ಪಾಲಿ ಮತ್ತು ಬುದ್ಧ ವಿದ್ವಾಂಸರೂ ಆಗಿದ್ದ ಧರ್ಮಾನಂದ ಕೋಸಂಬಿಯವರು, ಆರ್‌.ಜಿ.ಭಂಡಾರ್‌ಕರ್‌, ಕಾಶೀನಾಥ್‌ ರಘುನಾಥ ಮಿತ್ರ (ಅಜಿಗಾಂವ್‌ಕರ್‌), ಗೋವಿಂದ ನಾರಾಯಣ ಕಾಣೆ, ಇಂತಹ ಅನೇಕ ಘನವಿದ್ವಾಂಸರು The Light of Asia ದ ಮೂಲಕ ಬುದ್ಧ ಸಿದ್ಧಾಂತದ ಬಗ್ಗೆ ಆಕರ್ಷಿತರಾಗುವುದೂ ಈ ಗ್ರಂಥದ ಭಾಗವಾಗುತ್ತದೆ. ಅರ್ನಾಲ್ಡರು ಆಮಂತ್ರಿತವಾಗುವ ವಿದ್ವತ್‌ಸಭೆಗಳಿಗೆ ಮುದ್ರಿತವಾಗುವ ಆಮಂತ್ರಣ ಪತ್ರಿಕೆ, ಅರ್ನಾಲ್ಡರ ಹಸ್ತಪ್ರತಿಗಳು, ಅನೇಕ ಸಂಬಂಧೀ ಛಾಯಾಚಿತ್ರಗಳು, ಅಲ್ಲದೇ ಮಧ್ಯೆಮಧ್ಯೆ ಪ್ರಾಸಂಗಿಕವಾಗಿ ಮತ್ತು ಸೂಕ್ತವಾಗಿ ಉಲ್ಲೇಖಿತಗೊಳ್ಳುವ The Light of Asia ದ ಆಯ್ದ ಭಾಗಗಳು ಭಾರತೀಯ ಚರಿತ್ರೆಯ ಕಾಲಮಾನ ಮತ್ತು ಅದರ ಸಾಂಸ್ಕೃತಿಕ ವ್ಯಾಖ್ಯಾನವನ್ನು ಮಾಡುತ್ತವೆ.

The Light of Asia ಜಗತ್ತಿನಲ್ಲಿ ವಿವಿಧ ಮಾಧ್ಯಮಗಳ ಮೂಲಕ ಹರಡಿಕೊಂಡದರ ಜತೆಗೆ, ಅರ್ನಾಲ್ಡರ ಜೀವನಕತೆಯನ್ನೂ ಕಥನ ನಿರ್ವಹಣೆಗೆ ಭಂಗಬಾರದಂತೆ ಕಾಲಮಾನಗಳಿಗೆ ಅನುಗುಣವಾಗಿ, ಹೇಳುವ ಕಥನಕಾರ ಜೈರಾಮ್‌ ರಮೇಶರು, ಅರ್ನಾಲ್ಡರ ಮಗ Channing Arnoldರು ಇಂಗ್ಲಿಷ್‌ಗೆ ಭಾಷಾಂತರಿಸಿದ The Maha Bharata – Being the story of the Great Epic told in English (1920)ನ ಕತೆ, ಮತ್ತು ಅವರ ಕತೆಯನ್ನೂ ಹೇಳಲು ಬಿಡುವುದಿಲ್ಲ. Channingರು ಬ್ರಿಟಿಷ್‌ ವಸಾಹತು ಶಾಹಿಯನ್ನು ತೀವ್ರವಾಗಿ ಖಂಡಿಸಿದವರು. ಬ್ರಿಟಿಷ್‌ ಪೊಲೀಸ್‌ ವ್ಯವಸ್ಥೆಯ ವಿರುದ್ಧ ಬಂಡಾಯವೆದ್ದು ಒಂದು ವರ್ಷ ಜೈಲುವಾಸ ಅನುಭವಿಸಿ, ಕೊನೆಗೆ ತನ್ನ ಮುಸ್ಲಿಂ ಮಡದಿಯ ಜತೆಗೆ ಉತ್ತರ ಪ್ರದೇಶದ ಫೈಜಾಬಾದಿನಲ್ಲಿ ಒಂದು ಕೃಷಿ ಭೂಮಿಯಲ್ಲಿ ಬದುಕುತ್ತಿದ್ದ Channing ರನ್ನು ಪರಮಾನಂದನೆನ್ನುವವನು ತನ್ನ ಮೂವರು ಸಹಾಯಕರ ಜತೆಗೆ ಕೊಲೆ ಮಾಡಿದ ಬರ್ಬರ ಸನ್ನಿವೇಶ, ಎಡ್ವಿನ್‌ ಅರ್ನಾಲ್ಡರ ಕುಟುಂಬದ ಮಾಹಿತಿ, ಈಗ ಭೋಪಾಲದಲ್ಲಿ ವಾಸಿಸುತ್ತಿರುವ ಅವರ ಮರಿಮೊಮ್ಮಗ ಮಹಮ್ಮದ್‌ ಮೈಕಲ್‌ ಅರ್ನಾಲ್ಡರ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಚಾನಿಂಗ್‌ ಅರ್ನಾಲ್ಡರ ಸುಲ್ತಾನಪುರದ ಆಸ್ತಿ ಅಕ್ರಮವಾಗಿ ಪರಾಧೀನಗೊಂಡ ಮಾಹಿತಿಯನ್ನು ರಮೇಶ್‌ ಹೊರಗೆಡಹುತ್ತಾರೆ. ಬುದ್ಧನ ಮೂಲಕ ಭಾರತ ದರ್ಶನದ ಬೆಳಕನ್ನು ಜಗತ್ತಿಗೆ ತೋರಿದ ಎಡ್ವಿನ್‌ ಅರ್ನಾಲ್ಡರ ಕುಟುಂಬದ ಒಂದು ಕುಡಿ ವರ್ತಮಾನ ಕಾಲದಲ್ಲಿ ಹೀಗೆ ಅತಿ ಸಾಮಾನ್ಯ ಬದುಕನ್ನು ತೋರುವುದೂ ಈ ʻಜೀವನಚರಿತ್ರೆಯʼ ವಿಶೇಷ.

ಈ ಅರ್ನಾಲ್ಡ್, ತನಗಿಂತ ನಲವತ್ತು ವರ್ಷ ಕಿರಿಯಳಾದ ಜಪಾನೀ ತರುಣಿ ತಾನೇ ಕುರುಕೋವಳನ್ನು ಮದುವೆಯಾಗಿ ತನ್ನ ಕೊನೆಯದಿನಗಳಲ್ಲಿ ಬೌದ್ಧ ಮತವನ್ನು ಸ್ವೀಕರಿಸುತ್ತಾರೆ. ಭಾರತೀಯ ದರ್ಶನ ಕಾವ್ಯ ಕಥಾನಕಗಳ ಬಗ್ಗೆ ಹೊರ ಜಗತ್ತಿಗೆ ಏನೇನೂ ಅರಿವಿಲ್ಲದ ಕಾಲದಲ್ಲಿ ಅದನ್ನು ತೋರುವ ದೀವಟಿಗೆಯಗುತ್ತಾರೆ. ಜಗತ್ತಿನ ಬೌದ್ಧಿಕ ಚರಿತ್ರೆಯಲ್ಲಿ ತಮಗೂ ಒಂದು ಗೂಡನ್ನು ನಿರ್ಮಿಸಿಕೊಳ್ಳುತ್ತಾರೆ. The Song Celestial ನ ಮೂಲಕ ಹಿಂದೂ ಧರ್ಮದ ಮೂಲಸಾರ ಭಗವಧ್ಗೀತೆಯನ್ನು, The Light of Asia ದ ಮೂಲಕ ಬೌದ್ಧ ದರ್ಶನವನ್ನು ಕಾವ್ಯಕಥನವಾಗಿ ಹಾಡುವ ಅರ‍್ನಾಲ್ಡರು, ಸಾಹಿತ್ಯ ರಚಿಸಿದ ಕಾಲ ಘಟ್ಟವೂ ವಿಶೇಷವಾದ್ದು. ಧರ್ಮದ ಬಗ್ಗೆ ಸಂಶಯಗಳು ವ್ಯಕ್ತವಾಗುತ್ತಿದ್ದ ಕಾಲಮಾನದಲ್ಲಿ ಅರ‍್ನಾಲ್ಡ್‌ ʻಮಾನವ ಧರ್ಮʼ ವನ್ನು ಸಾರಿದ ಬೌದ್ಧಧರ್ಮವನ್ನು ಮುನ್ನೆಲೆಗೆ ತಂದವರು.
ತುಟಿಗಳನು ಆಳಿಕೋ
ಅವು ನಿನ್ನ ರಾಜನಿರುವರ ಮನೆಗೆ ತೆರೆದ ಬಾಗಿಲುಗಳು
ನಿನ್ನೆಲ್ಲ ಮಾತುಗಳು ಶಾಂತ, ಶುದ್ಧ, ವಿನಮ್ರವಾಗಿರಲಿ
ಗೆಲಬಲ್ಲೆ ನೀನು, ನಿನ್ನ ಮತ್ತು ಜಗವ-
ಜೈರಾಮ್‌ ರಮೇಶರು, ಎಡ್ವಿನ್‌ ಅರ್ನಾಲ್ಡರ ಕಾವ್ಯಕಥನದಿಂದ ಆಯುವ ಇಂತಹ ಸಾಲುಗಳು. ಅವರ ವಿದ್ವತ್‌ ಪ್ರಬುದ್ಧತೆಯನ್ನು ತೋರಿಸುತ್ತದೆ, ಪೂರ್ತಿ ಕಾವ್ಯದ ದರ್ಶನವನ್ನುಂಟು ಮಾಡುತ್ತದೆ.

ಬುದ್ಧನ ದೈವತ್ವಕ್ಕಿಂತ ಹೆಚ್ಚು ಅವರ ಮಾನವೀಯತೆಯನ್ನು ಪರಿಚಯಸಿ ಅವನನ್ನು ಜಗತ್ತಿಗೆ ಮತ್ತು ಅರ್ನಾಲ್ಡರನ್ನು ಭಾರತೀಯರಿಗೂ ಪರಿಚಯಿಸಿದ The Light of Asia ದ ಜೀವನ ಕಥನವನ್ನು ಜೈರಾಮ್‌ ರಮೇಶರು ಪ್ರತಿಯೊಂದು ಅಕ್ಷರ ಮತ್ತು ಮಾಹಿತಿಗಳನ್ನು ಆಳವಾದ ನಿಖರ ಸಂಶೋಧನೆಗೆ ಹಚ್ಚಿ ಬರೆದ ಈ ಪುಸ್ತಕ ಜಾಗತಿಕ ಗ್ರಂಥ ಭಂಡಾರಗಳಲ್ಲಿ ಅಳಿಯದೆ ಉಳಿಯುವ, ಮತ್ತನೇಕಾನೇಕ ಸಂಶೋಧನೆಗಳನ್ನು ಪ್ರೇರೇಪಿಸುವ ಅಪರೂಪದ ಗ್ರಂಥ. ಬಹುಶಃ ಜಗತ್ತಿನ ಸಾಹಿತ್ಯದ ಇತಿಹಾಸದಲ್ಲೇ ಕಥಾರೂಪವಾದ ಒಂದು ಕಾವ್ಯದ ಜೀವನ ಚರಿತ್ರೆ.

ʻಜೈರಾಮ್‌ ರಮೇಶ್‌ ನಮ್ಮ ಕರ್ನಾಟಕದವರೂ ಎನ್ನುವುದೂ ನಮಗೆ ಹೆಮ್ಮೆ. ಇಂಗ್ಲಿಷ್‌ನಲ್ಲಿ ಬರೆದ ಈ ಗ್ರಂಥದಲ್ಲಿ ಕನ್ನಡದ ಕಾಫಿ ಮತ್ತು ಕಾಫಿ ಹೂವುಗಳ ಸುಗಂಧದ ವಾಸನೆ ಹರಡಿಕೊಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು