ಭಾನುವಾರ, ಆಗಸ್ಟ್ 9, 2020
21 °C

ಶಿಕ್ಷಣಕ್ಕೆ ‘ಅರ್ಥ’ವಾದ ರಾಯರು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

prajavani

ಸಮಾಜದ ಏಳಿಗೆಯಲ್ಲಿ, ಸಂಸ್ಕೃತಿಯ ಉತ್ಕರ್ಷದಲ್ಲಿ ನಮ್ಮ ಹಲವರು ಹಿರಿಯರ ಪರಿಶ್ರಮ–ಸಾಧನೆಗಳು ಕಾರಣಗಳಾಗಿರುತ್ತವೆ. ಆದರೆ ಇಂಥವರನ್ನು ನಾವು ನಮ್ಮ ಸದ್ಯದ ಸ್ಮರಣೆಯಿಂದ ಹಿಂದಕ್ಕೆ ಸರಿಸಿರುತ್ತೇವೆ. ಅವರ ಸ್ಮರಣೆ ನಮಗೆ ಆಗಾಗ ಒದಗುತ್ತಿರಬೇಕು. ಏಕೆಂದರೆ ಈ ಸ್ಮರಣೆ ಕೇವಲ ಕೃತಜ್ಞತೆಯ ಸಂಕೇತವಷ್ಟೆ ಅಲ್ಲ, ಅದು ನಮ್ಮ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರದ ಎಳೆಯನ್ನೂ ಒದಗಿಸಬಲ್ಲದು. ಇದು ಸರಿ, ಆದರೆ ಅವರ ನೆನಪನ್ನು ಒದಗಿಸುವಂಥ ಕೆಲಸವನ್ನು ಯಾರು ಮಾಡಬೇಕು? ಈ ಕೆಲಸ ಸಮಾಜದಿಂದಲೇ ನಡೆಯಬೇಕಾಗುತ್ತದೆ. ಸಂಸ್ಕೃತಿಚಿಂತಕರು, ವಿದ್ವಾಂಸರು, ಶಿಕ್ಷಣತಜ್ಞರು – ಇಂಥವರು ಈ ಕೆಲಸವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ‘ಉಪಕುಲಪತಿ ಎನ್‌. ಎಸ್‌. ಸುಬ್ಬರಾಯರು‘ ಈ ಕೃತಿಯ ಸಂಪಾದನೆಯ ಮೂಲಕ ಟಿ. ವಿ. ವೆಂಕಟಾಚಲಶಾಸ್ತ್ರೀ ಅಂಥದೊಂದು ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಈ ಕೃತಿಯ ಪ್ರಸ್ತುತತೆಯ ಬಗ್ಗೆ ಶಾಸ್ತ್ರಿಗಳು ಆರಂಭದಲ್ಲಿ ಹೇಳಿರುವ ಮಾತುಗಳು ಹೀಗಿವೆ:

‘ಪ್ರೊಫೆಸರ್‌ ಎನ್‌. ಎಸ್‌. ಸುಬ್ಬರಾವ್‌ ಎಂ. ಎ. (ಕ್ಯಾಂಟಾಬ್‌), ಬಾರ್‌–ಅಟ್‌–ಲಾ ಅವರು ಮೈಸೂರು ವಿಶ್ವವಿದ್ಯಾನಿಲ
ಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ, ಮಹಾರಾಜ ಕಾಲೇಜಿನ ಪ್ರಿನ್ಸಿಪಾಲರಾಗಿ, ವಿಶ್ವವಿದ್ಯಾನಿಲಯದ ಉಪಕುಪತಿಗಳಾಗಿ ಖ್ಯಾತರಾದವರು. ಕಳೆದ ಶತಮಾನದ ಪೂರ್ವಾರ್ಧದಲ್ಲಿ ತಮ್ಮ ಸ್ಥಾನಗೌರವದಿಂದ, ಧೀಮಂತ ವ್ಯಕ್ತಿತ್ವದಿಂದ, ವಿಶೇಷವಾಗಿ ಅರ್ಥಶಾಸ್ತ್ರ ಪಾಂಡಿತ್ಯದಿಂದ ಪ್ರಭಾವಶಾಲಿಗಳಾಗಿ, ತಮ್ಮ ವಿದ್ಯಾರ್ಥಿಗಳ ನಡುವೆ, ಸಹೋದ್ಯೋಗಿಗಳ ನಡುವೆ ಜನಪ್ರಿಯತೆ ಗಳಿಸಿದ ಮಹೋಪಾಧ್ಯಾಯರು. ತಮ್ಮ ಕಾಲದ ವಿದ್ಯಾವಂತರ ಜೊತೆಗೂಡಿ ನಾಡು ನುಡಿಗಳ ಸೇವೆಯಲ್ಲಿ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದ ದೇಶಪ್ರೇಮಿಗಳು, ಕನ್ನಡ ಭಾಷೆ ಸಾಹಿತ್ಯಗಳ ಬೆಳವಣಿಗೆಗೆ, ಶಾಲೆ ಕಾಲೇಜುಗಳ ವಿದ್ಯಾಭ್ಯಾಸದಲ್ಲಿ ಅದರ ಫಲ ಪ್ರಯೋಜನಗಳು ದೊರೆಯಲು ತಮ್ಮದೇ ರೀತಿಯಲ್ಲಿ ನಾಯಕತ್ವ ವಹಿಸಿ ಅನುಕೂಲಗಳನ್ನು ಕಲ್ಪಿಸಿದವರು, ನೆಲೆ ಬೆಲೆಗಳನ್ನು ತಂದುಕೊಟ್ಟವರು.

‘ಸುಬ್ಬರಾಯರು ತೀರಿಕೊಂಡು 75 ವರ್ಷಗಳೇ ಕಳೆದಿವೆ. ಆದರೆ ಅವರ ಜೀವನದ ಸಾಧನೆ, ಶೈಕ್ಷಣಿಕ ಮತ್ತು ಸಾಮಾಜಿಕ ಜವಾಬ್ದಾರಿಗಳ, ವ್ಯಕ್ತಿತ್ವದ ಘನತೆ ಇವು ಕೂಡ ಗುರು–ಶಿಷ್ಯ ಸಂಬಂಧದ ಪುನರುಜ್ಜೀವನಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಮೌಲ್ಯಗಳು ಎನ್ನುವುದರಲ್ಲಿ ಸಂಶಯವಿಲ್ಲ.’

ಎನ್‌. ಎಸ್‌. ಸುಬ್ಬರಾಯರು ಜನಿಸಿದ್ದು 1885ರ ಮಾರ್ಚ್‌ 14ರಂದು, ಶ್ರೀರಂಗಪಟ್ಟಣದಲ್ಲಿ; ತೀರಿಕೊಂಡದ್ದು: 1943ರ ಜೂನ್‌ 29ರಂದು, ಬೆಂಗಳೂರಿನಲ್ಲಿ. ಅವರು ಶ್ರೀಮಂತ ಕುಟುಂಬದಲ್ಲಿ ಬೆಳೆದವರು; ಆರಂಭದಿಂದಲೂ ಓದಿನಲ್ಲಿ ಆಸಕ್ತಿ ಇದ್ದವರು. ಕೇಂಬ್ರಿಜ್‌ ವಿಶ್ವವಿದ್ಯಾಲಯದ ಸೆಯಿಂಟ್‌ ಜಾನ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದವರು; ಅಲ್ಲಿ ಅವರಿಗೆ ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಆಲ್‌ಫ್ರೆಡ್‌ ಮಾರ್ಷಲ್‌ ಅವರು ಗುರುಗಳಾಗಿ ದೊರೆತರು.

ಹಲವು ಹುದ್ದೆಗಳನ್ನು ನಿರ್ವಹಿಸಿದ ಸುಬ್ಬರಾಯರು 1937ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ಅದಕ್ಕೂ ಮೊದಲು, 1935ರಲ್ಲಿ ಮುಂಬೈಯಲ್ಲಿ ನಡೆದ 21ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ರಾಯರು ಕೆಲಸ ನಿರ್ವಹಿಸಿದ ಎಲ್ಲ ಹುದ್ದೆಗಳಲ್ಲೂ ಪ್ರಾಮಾಣಿಕತೆಯಿಂದಲೂ ದಕ್ಷತೆಯಿಂದಲೂ ದುಡಿದರು. ಅವರ ವ್ಯಕ್ತಿತ್ವದಲ್ಲಿದ್ದ ಕೋಪ, ನಿರ್ಭೀತಿಗಳಿಂದ ಹಲವರ ವೈರವನ್ನೂ ಕಟ್ಟಿಕೊಂಡರು; ಟೀಕೆಗಳಿಗೂ ಗುರಿಯಾದರು. ಆದರೆ ಅವರ ಕಾರ್ಯದಕ್ಷತೆಯನ್ನು ಎಲ್ಲರೂ ಮೆಚ್ಚಿಕೊಂಡವರೇ. ಅವರ ವ್ಯಕ್ತಿತ್ವ ಕುರಿತು ಸೊಗಸಾದ, ವಿಸ್ತಾರವಾದ ಎರಡು ಲೇಖನಗಳು ಈ ಕೃತಿಯಲ್ಲಿ ಸೇರ್ಪಡೆಯಾಗಿವೆ; ಒಂದು ವಿ. ಸೀತಾರಾಮಯ್ಯನವರದ್ದು, ಮತ್ತೊಂದು ಎ. ಎನ್‌. ಮೂರ್ತಿರಾಯರದ್ದು.

ಈ ಕೃತಿಯಲ್ಲಿ ಮೂರು ವಿಭಾಗಗಳಿವೆ: ಮೊದಲನೆಯ ಭಾಗದಲ್ಲಿ, ಸುಬ್ಬರಾಯರ ಬಗ್ಗೆ ಜೀವನವೃತ್ತಾಂತವನ್ನು ವೆಂಕಟಾಚಲಶಾಸ್ತ್ರಿಗಳೇ ವಿಸ್ತಾರವಾಗಿ ಒದಗಿಸಿದ್ದಾರೆ. ಎರಡನೆಯ ಭಾಗದಲ್ಲಿ, ರಾಯರ ಬರಹ–ಭಾಷಣಗಳು ಸೇರಿವೆ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಭಾಷಣವೂ ಇದರಲ್ಲಿದೆ. ಮೂರನೆಯ ಭಾಗದಲ್ಲಿ, ರಾಯರನ್ನು ಕುರಿತ ವ್ಯಕ್ತಿಚಿತ್ರಗಳು, ಸ್ಮರಣೆ, ಸಂಪಾದಕೀಯಗಳು ಸೇರಿವೆ. ಕೊನೆಯಲ್ಲಿ ಅವರ ಜೀವನದ ಪ್ರಮುಖ ಘಟ್ಟಗಳ ಪಟ್ಟಿಯನ್ನೂ ನೀಡಲಾಗಿದೆ.

ಸುಬ್ಬರಾಯರು ಸಾಹಿತಿಯಾಗಿ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಿದವರಲ್ಲ, ದಿಟ; ಆದರೆ ಕನ್ನಡ ಸಾಹಿತ್ಯ ಶ್ರೀಮಂತವಾಗಿ ಬೆಳೆಯಲು ಕಾರಣರಾದವರಲ್ಲಿ ಅವರೂ ಒಬ್ಬರು. ಮೈಸೂರು ವಿಶ್ವವಿದ್ಯಾಲಯದ ಪ್ರಚಾರೋಪನ್ಯಾಸಗಳನ್ನೂ ಪುಸ್ತಕಗಳ ಪ್ರಕಟನೆಯನ್ನೂ ಆರಂಭಿಸಿದ ಕೀರ್ತಿ ರಾಯರಿಗೆ ಸೇರುತ್ತದೆ. ಹೀಗೆ ಶಿಕ್ಷಣಕ್ಷೇತ್ರದಲ್ಲಿ ಅವರು ಹಲವು ಸಾಧನೆಗಳನ್ನು ಮಾಡಿದವರು. ಪ್ರಸ್ತುತ ಕೃತಿಯಲ್ಲಿ ಅವರ ಜೀವನವನ್ನೂ ಸಾಧನೆಗಳನ್ನೂ ಒಂದೆಡೆ ನಿರೂಪಿಸಲಾಗಿದೆ. ಮುದ್ರಣದೋಷಗಳು ಇಲ್ಲವೇ ಇಲ್ಲ ಎನ್ನುವಷ್ಟು ಅಚ್ಚುಕಟ್ಟಾಗಿ ಈ ಪುಸ್ತಕ ಪ್ರಕಟವಾಗಿದೆ. ಕರ್ನಾಟಕದ ಶಿಕ್ಷಣಕ್ಷೇತ್ರದ ಇತಿಹಾಸ, ವಿಶೇಷವಾಗಿ ಮೈಸೂರು ವಿಶ್ವವಿದ್ಯಾನಿಲಯದ ಬಗ್ಗೆ ತಿಳಿದುಕೊಳ್ಳಲು ಈ ಕೃತಿ ಆಕರವಾಗಿಯೂ ಒದಗುತ್ತದೆ.

ಉಪಕುಲಪತಿ ಎನ್‌. ಎಸ್‌. ಸುಬ್ಬರಾಯರು (ಬದುಕು ಬರೆಹ ನೆನಪು)

ಸಂಪಾದಕ: ಟಿ. ವಿ. ವೆಂಕಟಾಚಲಶಾಸ್ತ್ರೀ

ಪುಟಗಳು: 152

ಬೆಲೆ: ರೂ. 110/–

ಪ್ರಕಟನೆಯ ವರ್ಷ: 2019

ಪ್ರಕಾಶಕರು: ವಸಂತ ಪ್ರಕಾಶನ, ನಂ. 360, 10ನೇ ’ಬಿ‘ ಮುಖ್ಯರಸ್ತೆ, 3ನೇ ಬ್ಲಾಕ್‌, ಜಯನಗರ, ಬೆಂಗಳೂರು – 560 011

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು