ಮಂಗಳವಾರ, ಮೇ 17, 2022
26 °C

ಭರತನಾಟ್ಯದ ‘ರಾಣಿ’ ಸತ್ಯಮೂರ್ತಿ

ರಾಮಚಂದ್ರ ಗಣಾಪೂರ, ಬೀದರ್ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಬೀದರ್ ಜಿಲ್ಲೆ ಅಪೂರ್ವ ಸಾಧಕರ ನೆಲೆವೀಡು. ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ದಿಗ್ಗಜರು ತಮ್ಮ ಪ್ರತಿಭೆ ಹಾಗೂ ಪ್ರಾವೀಣ್ಯತೆಯಿಂದ ಸುಂದರ ಸಮಾಜ ನಿರ್ಮಾಣದಲ್ಲಿ ತಲ್ಲೀನರಾಗಿದ್ದಾರೆ. ಅಂತಹ ಉತ್ಕೃಷ್ಟ ಮಟ್ಟದ ಸಾಧಕರ ಸರತಿಯಲ್ಲಿ ಇಲ್ಲಿಯ ‘ನಾಟ್ಯಶ್ರೀ ನೃತ್ಯಾಲಯ’ದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಅಗ್ರಗಣ್ಯರು.

ಭರತನಾಟ್ಯ ಕಲೆಯಲ್ಲಿ ತೊಡಗಿಸಿಕೊಂಡು ತನ್ಮಯತೆ ಹಾಗೂ ಭಕ್ತಿಯಿಂದ ಭರತನಾಟ್ಯ ಕಲೆಯನ್ನು ಶಾಸ್ತ್ರೀಯವಾಗಿ ಬೀದರ್ ಜನತೆಗೆ, ಮಕ್ಕಳಿಗೆ ಧಾರೆಯೆರೆಯುತ್ತಿದ್ದಾರೆ. ಚಿಕ್ಕಂದಿನಿಂದಲೇ ಭರತನಾಟ್ಯದ ಗೀಳು ಹಚ್ಚಿಸಿಕೊಂಡ ರಾಣಿ ಸತ್ಯಮೂರ್ತಿಯವರಿಗೆ ಉತ್ತಮ ಗುರುಗಳು ದೊರೆತರು. ಆರಂಭದಲ್ಲಿ ಕಮಲಾ ಭಟ್ ಇವರಿಗೆ ಭರತನಾಟ್ಯದೆಡೆಗೆ ಸೆಳೆದರು. ಅನಂತರದಲ್ಲಿ ಉಮಾ ಕೆ. ಅವರನ್ನು ತಮ್ಮ ನೃತ್ಯದ ಗುರುವಾಗಿ ಸ್ವೀಕರಿಸಿದ ಇವರು ಮತ್ತೆ ಹಿಂದಕ್ಕೆ ನೋಡಲೇ ಇಲ್ಲ.

ಸತತ ಪ್ರಯತ್ನ ಹಾಗೂ ಪರಿಶ್ರಮದೊಂದಿಗೆ ಶಾಸ್ತ್ರೀಯ ನೃತ್ಯದ ಹಂತಗಳಾದ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪದವಿಗಳನ್ನು ತಮ್ಮದಾಗಿಸಿಕೊಂಡರು. ನಂತರ ಉಡುಪಿ ಜಿಲ್ಲೆಯ ಕಬ್ಬಿನಾಲೆಯ ಕೆ.ಸತ್ಯಮೂರ್ತಿಯವರನ್ನು 1992ರಲ್ಲಿ ವಿವಾಹವಾದರು. ವಿವಾಹದ ನಂತರವೂ ತಮ್ಮ ನೆಚ್ಚಿನ ಕಲೆಯನ್ನು ಗೌರವಿಸಿ ಮಕ್ಕಳಿಗೆ ನೃತ್ಯಕಲೆಯನ್ನು ಧಾರೆಯೆರೆಯಲು ಮುಂದಾದರು.

ಕೆ.ಸತ್ಯಮೂರ್ತಿ ಅವರೂ ಪ್ರೋತ್ಸಾಹದ ನೀರೆರೆದರು. ಕೆ.ಸತ್ಯಮೂರ್ತಿಯವರಷ್ಟೇ ಅಲ್ಲದೆ ಅವರಿಗೆ ಇಡೀ ಮೂರ್ತಿ ಪರಿವಾರದ ಪ್ರೀತಿ ದೊರೆಯಿತು. ಶಾಸ್ತ್ರೀಯ ಕಲೆಯನ್ನು ಮತ್ತಷ್ಟು ಶಕ್ತವಾಗಿ ಕಟ್ಟಿಕೊಡಲು ಇವರಿಗೆ ಸಾಧ್ಯವಾಯಿತು. ಇಂದಿಗೂ ಅವರಿಗೆ ಕಲೆಯ ಕುರಿತಾದ ಅದಮ್ಯ, ಉತ್ಸಾಹ, ಭಕ್ತಿ, ಗೌರವ ಅಮೋಘವಾದುದು. ಕಲೆಯನ್ನು ಕಲಿತದ್ದು ದಕ್ಷಿಣ ಕನ್ನಡದಲ್ಲಿ, ಆದರೆ ಅದನ್ನು ಪ್ರಫುಲ್ಲವಾಗಿ ಬೆಳೆಸಿದ್ದು ಬೀದರ್‌ನಲ್ಲಿ.

2003ರಲ್ಲಿ ಕೆಲವೇ ವಿದ್ಯಾರ್ಥಿಗಳಿಂದ ‘ನಾಟ್ಯಶ್ರೀ ನೃತ್ಯಾಲಯ’ವನ್ನು ಆರಂಭಿಸಿದ ರಾಣಿ ಸತ್ಯಮೂರ್ತಿ, ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಕಲಾ ಸಂಸ್ಕಾರ ನೀಡುವಲ್ಲಿ ತಲ್ಲೀನರಾಗಿದ್ದಾರೆ. ಮಕ್ಕಳೊಂದಿಗೆ ಅವರ ತಾಯಂದಿರಿಗೂ ಸಹ ಕೆಲವೊಮ್ಮೆ ತರಬೇತಿ ನೀಡಿ ವೇದಿಕೆಗೆ ಕರೆತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ತಮ್ಮ ಕಲೆಯನ್ನು ಜಿಲ್ಲೆಯ, ನಾಡಿನ ಪ್ರಮುಖ ವೇದಿಕೆಗಳಲ್ಲಿ ಅಂದಿನಿಂದ ಇಂದಿನವರೆಗೂ ಅನೂಚಾನವಾಗಿ ತಮ್ಮ ಸಂಸ್ಥೆಯ ವತಿಯಿಂದ ನೂರಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

ಭರತನಾಟ್ಯ ಪರಂಪರೆಯನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಬರಬೇಕೆಂಬ ಒಂದೇ ಒಂದು ಹಂಬಲದಿಂದ, ಅಭಿಮಾನದಿಂದ ಭರತನಾಟ್ಯದಂತಹ ವಿಶಿಷ್ಟ ಕಲೆಗೆ ಬೆಲೆಕೊಟ್ಟಿದ್ದಾರೆ. ಈ ಕಲೆಯನ್ನು ಹೊಟ್ಟೆಪಾಡಿಗಾಗಿಯೋ ಅಥವಾ ವಾಣಿಜ್ಯ ದೃಷ್ಟಿಯಿಂದಲೋ ಮಾರಿಕೊಂಡವರಲ್ಲ. ಬದಲಾಗಿ ನೃತ್ಯ ಪರಂಪರೆಯಲ್ಲಿ ಇಂದಿಗೂ ಶಾಸ್ತ್ರೋಕ್ತವಾಗಿ ಬದ್ಧತೆಯಿಂದ ನೃತ್ಯವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯುತ್ತಿದ್ದಾರೆ.

ಪಾಶ್ಚಾತ್ಯ ಪ್ರಭಾವದ ಯಾಂತ್ರಿಕ ಯುಗದಲ್ಲಿ ಭರತನಾಟ್ಯದಂತಹ ಸಂಸ್ಕಾರದ ಸ್ಪರ್ಶ ಇಂದಿನ ಮಕ್ಕಳಿಗೆ ಅವಶ್ಯವಿದೆ. ಅರ್ಥವಿರದ ವಿಧವಿಧ ವಿಚಿತ್ರ ದಿನಾಚರಣೆಗಳ ಸಂದರ್ಭದಲ್ಲಿ ಸ್ವೇಚ್ಛೆಯಿಂದ ಕುಣಿದು ಕುಪ್ಪಳಿಸುವ ಮನಗಳಿಗೆ ತಿದ್ದುವಲ್ಲಿ ಭರತನಾಟ್ಯ ಕಲೆ ದಿವ್ಯ ಔಷಧಿಯಾಗಿದೆ. ಈ ದಿಶೆಯಲ್ಲಿ ‘ನಾಟ್ಯಶ್ರೀ ನೃತ್ಯಾಲಯ’ವು ನಮ್ಮ ಭರತ ಭೂಮಿಯ ಸಂಸ್ಕೃತಿಯನ್ನು ಉಳಿಸಿ ಪೋಷಿಸುವ ಪ್ರಾಂಜಲ ನಡೆ ಅನುಪಮವಾಗಿದೆ.

ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನಕ್ಕೆ ಸರ್ವಾಧ್ಯಕ್ಷೆ 

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಆಶ್ರಯದಲ್ಲಿ ಫೆಬ್ರುವರಿ 7 ಮತ್ತು 8 ರಂದು ನಡೆಯಲಿರುವ ಜಿಲ್ಲಾ ಮಟ್ಟದ ದ್ವಿತೀಯ ಜಾನಪದ ಸಮ್ಮೇಳನಕ್ಕೆ ರಾಣಿ ಸತ್ಯಮೂರ್ತಿ ಸರ್ವಾಧ್ಯಕ್ಷೆ ಆಗಿ ಆಯ್ಕೆಯಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು