ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥಕ್‌ ಡಾನ್ಸರ್‌ ಈಗ ಮಿಸಸ್‌ ಯೂನಿವರ್ಸ್‌

Last Updated 4 ಜನವರಿ 2019, 16:40 IST
ಅಕ್ಷರ ಗಾತ್ರ

‘ಡಾನ್ಸ್‌ ಮೇಲಿನ ಪ್ರೀತಿ ಹಾಗೂ ನನ್ನ ಶ್ರಮದ ಹಾದಿಯಿಂದಾಗಿ ಇಂದು ಮಿಸಸ್‌ಯೂನಿವರ್ಸ್‌ ಆಗಿದ್ದೇನೆ‘ ಎಂಬುದು ಸಿಮ್ರನ್‌ ಗೋದ್ವನಿ ಅವರ ಮಾತುಗಳು.

ಕಾರ್ಪೊರೇಟ್‌ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಅವರು ‘ಕಥಕ್‌’ ಮೇಲಿನ ಅಭಿಮಾನದಿಂದಾಗಿ ವೃತ್ತಿಯನ್ನು ತೊರೆದರು. ಗುರು ಮುರಾರಿ ಹಾಗೂ ಪಂಡಿತ್‌ ಬಿರ್ಜು ಮಹಾರಾಜ್‌ ಅವರಿಂದ ನೃತ್ಯದ ಪಟ್ಟುಗಳನ್ನು ಕಲಿತು ತಮ್ಮದೇ ಆದ ‘ಕ್ರಿಶಾಲಾ’ ಸಂಸ್ಥೆಯನ್ನು ಸ್ಥಾಪಿಸಿ ಎತ್ತರಕ್ಕೆ ಏರುವ ಹಾದಿಯನ್ನು ಹುಡುಕಿಕೊಂಡರು.

ಅಂದುಕೊಂಡಷ್ಟು ಜೀವನ ಸುಲಭವಾಗಿರಲಿಲ್ಲ. ಸಾಕಷ್ಟು ಸವಾಲುಗಳು ಎದುರಾದವು. ಮದುವೆ, ಮಕ್ಕಳು ಎಂಬ ಸಂಸಾರದ ಮೆಟ್ಟಿಲುಗಳನ್ನೂ ಹತ್ತಿದರು. ಇಬ್ಬರು ಮುದ್ದಾದ ಮಕ್ಕಳು ಹುಟ್ಟಿದರು. ಆದರೆ ಡಾನ್ಸ್‌ ಮತ್ತು ಮಾಡೆಲಿಂಗ್‌ ಮೇಲೆ ಇರುವ ಪ್ರೀತಿ ಮಾತ್ರ ಕಡಿಮೆಯಾಗಲೇ ಇಲ್ಲ.

ಅಮೆರಿಕ, ಫ್ರಾನ್ಸ್‌ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ನೃತ್ಯ ಪ್ರದರ್ಶನ ನೀಡಿದರು. ಆದರೂ ಇನ್ನಷ್ಟು ಸಾಧನೆ ಮಾಡುವ ಹಂಬಲ ಅವರಲ್ಲಿ ಇದ್ದೇ ಇತ್ತು. ಇಲ್ಲಿಯವರೆಗೂಮಾಡೆಲಿಂಗ್‌ ಅಂದರೆ ಕೆಲವು ಜಾಹೀರಾತುಗಳಲ್ಲಿ ನಟಿಸುವುದು ಅಷ್ಟೇ ಆಗಿತ್ತು. ಆದರೆ ಅವರ ಸ್ನೇಹಿತರು ನೀಡಿದ ಸಲಹೆ ಅವರನ್ನು ಬೇರೆ ಹಾದಿಗೆ ಕೊಂಡೊಯ್ದಿತು.

‘ವಿಶ್ವ ಮಟ್ಟದ ಸ್ಪರ್ಧೆಗಳಿಗೆ ಭಾಗವಹಿಸುವಷ್ಟು ಹಣ ನನ್ನ ಬಳಿ ಇರಲಿಲ್ಲ. ಮಿಸಸ್‌ ಯೂನಿವರ್ಸ್‌ ಅಂದ್ರೆ ಸಾಕಷ್ಟು ಖರ್ಚಾಗುತ್ತದೆ. ಉತ್ತಮ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಮೇಕಪ್‌ಗೆ ದುಡ್ಡು ಹಾಕಬೇಕು. ಇಷ್ಟೆಲ್ಲಾ ಹೇಗೆ ಸಾಧ್ಯ ಎಂದುಕೊಂಡಿದ್ದೆ. ಆದರೆ ಸ್ನೇಹಿತರು ಧೈರ್ಯ ತುಂಬಿದರು‘ ಎಂದು ತಮ್ಮ ಮನದಾಳ ಹಂಚಿಕೊಂಡರು.

‘2018ರ ಸೆಪ್ಟೆಂಬರ್‌ 9ರಂದು ಪುಣೆಯಲ್ಲಿ ‘ಮಿಸೆಸ್‌ ಇಂಡಿಯಾ’ ಸ್ಪರ್ಧೆಯಲ್ಲಿ ಪಾಲ್ಗೊಂಡೆ. ಯಾರೋ ನೀಡಿದ ಉಡುಗೆ, ಇನ್ಯಾರೋ ಸಹಾಯ ಮಾಡಿದ ಹಣ. ಹೇಗೋ ದಾರಿ ಸಿಕ್ಕಿತ್ತು. ಅಲ್ಲಿ ಕೇವಲ ಸೌಂದರ್ಯಕ್ಕಷ್ಟೇ ಬೆಲೆ ಎಂದು ನಾನು ತಪ್ಪು ತಿಳಿದುಕೊಂಡಿದ್ದೆ. ನನ್ನಲ್ಲಿದ್ದ ಸಾಮಾಜಿಕ ಕಳಕಳಿ ಹಾಗೂ ಕಲೆಯನ್ನು ಅವರು ಗುರುತಿಸಿ ಆಯ್ಕೆ ಮಾಡಿದರು. ಅಲ್ಲಿಂದ ಮುಂದೆ ‘ಮಿಸಸ್‌ ಯೂನಿವರ್ಸ್‌’ ಪಯಣ ಆರಂಭವಾಯಿತು‘ ಎಂದು ಅವರು ಆರಂಭದ ದಿನಗಳನ್ನು ನೆನೆದರು.

ಪೋರ್ಚುಗಲ್‌ನಲ್ಲಿ 2018ರ ನವೆಂಬರ್‌ 24ರಂದು ‘ಮಿಸಸ್‌ ಯೂನಿವರ್ಸ್‌: ಮಿಸ್ ಲೇಡಿ ಸ್ಟಾರ್‌ ಯೂನಿವರ್ಸ್‌’ ಸ್ಪರ್ಧೆ ನಡೆಯಿತು. ಅಲ್ಲಿ 24 ದೇಶದ ಮಹಿಳೆಯರು ಭಾಗವಹಿಸಿದ್ದರು. ಎಂಟಕ್ಕಿಂತ ಹೆಚ್ಚು ಸುತ್ತುಗಳು ನಡೆದವು. ಅದರಲ್ಲಿ ಟ್ಯಾಲೆಂಟ್‌ ಹಾಗೂ ಗೌನ್‌ ಸುತ್ತುಗಳಲ್ಲಿ ಸಿಮ್ರನ್‌ ಗೆದ್ದರು. ಕಾಸ್ಟೂಮ್‌, ಫೋಟೊಜೆನಿಕ್‌ ಸುತ್ತುಗಳಲ್ಲಿಯೂ ಪೈಪೋಟಿ ಒಡ್ಡಿದರು.

ಮೊದಲಿಗೆ ಟಾಪ್‌ 10ರಲ್ಲಿ ಆಯ್ಕೆಯಾದರು. ಟಾಪ್‌ 5ರಲ್ಲಿ ಕಾಣಿಸಿಕೊಂಡರು. ಆ ಕ್ಷಣಕ್ಕೂ ಅವರಿಗೆ ಕಿರೀಟ ಧರಿಸುವ ವಿಶ್ವಾಸ ಇರಲಿಲ್ಲ. ಆದರೆ ವೇದಿಕೆಯಲ್ಲಿ ಅವರ ಹೆಸರು ಕೇಳಿ ಬಂದಾಗ ಕಣ್ಣಲ್ಲಿ ಆಶ್ಚರ್ಯ ಹಾಗೂ ಆನಂದ ಎರಡೂ ಕಾದಿತ್ತು.

‘15 ವರ್ಷದ ಮಗ, 8 ವರ್ಷದ ಮಗಳು ಇದ್ದಾಳೆ. ಇಂತಹ ಸಂದರ್ಭದಲ್ಲಿ ನಾನು ಇಷ್ಟು ಎತ್ತರದ ಸಾಧನೆ ಮಾಡಬಲ್ಲೆ ಎಂದು ಕನಸು ಕಂಡಿರಲಿಲ್ಲ. ಆದರೆ ಇಂದು ಎಲ್ಲವೂ ಸಾಧ್ಯವಾಗಿದೆ‘ ಎಂದು ಅವರು ಸಂತಸ ಹಂಚಿಕೊಂಡರು.

‘ಮುಂದೆ ನಾನು ಸುಮ್ಮನೆ ಕುಳಿತುಕೊಳ್ಳುವ ಹಾಗಿಲ್ಲ. ಈಗ ನನ್ನ ಮುಂದೆ ಸಾಕಷ್ಟು ಹೊಸ ಸವಾಲುಗಳಿವೆ. ಬಿರ್ಜು ಮಹಾರಾಜ್‌ ಅವರು ದೇವದಾಸ್‌, ಬಾಜಿರಾವ್‌ ಮಸ್ತಾನಿಯಂತಹ ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಅವರಲ್ಲಿ ಕಲಿತ ನಾನು ಇನ್ನಷ್ಟು ಜನರಿಗೆ ಈ ಕಲೆಯನ್ನು ಹಂಚಬೇಕಿದೆ‘ ಎಂದು ಭವಿಷ್ಯದ ಯೋಜನೆಗಳನ್ನು ತೆರೆದಿಟ್ಟರು.

‘ಜೋಧಪುರದವಳಾದ ನಾನು ಸಾಕಷ್ಟು ವರ್ಷಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದೇನೆ. ಇಲ್ಲಿಯೂ ಕಥಕ್‌ ನೃತ್ಯವನ್ನು ಪಸರಿಸುವ ಅಭಿಲಾಷೆ ಇದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT