ಬುಧವಾರ, ಆಗಸ್ಟ್ 17, 2022
30 °C
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕು ಕಟಕೋಳದ ಪ್ರತಿಭೆ

Pv Web Exclusive | ದ್ವಿಧ್ವನಿಯ ಗಾಯಕನಿಗೆ ಲಕ್ಷ ಲಕ್ಷ ವೀವ್ಸ್

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲ್ಲೂಕು ಕಟಕೋಳದ ಅಪ್ಪಟ ಗ್ರಾಮೀಣ ಪ್ರತಿಭೆ ಮರಿಯಪ್ಪ ಮಾರುತಿ ಭಜಂತ್ರಿ ದ್ವಿಧ್ವನಿ (ಗಂಡು ಹಾಗೂ ಹೆಣ್ಣು)ಯಲ್ಲಿ ಹಾಡುವ ಕಲೆಯಿಂದಾಗಿ ಗಮನಸಳೆದಿದ್ದಾರೆ.

ಅವರ ಗಾಯನವು ಫೇಸ್‌ಬುಕ್‌ ಮೊದಲಾದ ಸಾಮಾಜಿಕ ಜಾಲತಾಣದಲ್ಲಿ ಲಕ್ಷ ಲಕ್ಷ ವೀವ್ಸ್ ಪಡೆದುಕೊಳ್ಳುತ್ತಿವೆ.

13 ವರ್ಷಗಳಿಂದ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಇತ್ತೀಚೆಗೆ ಚಿತ್ತಾಪುರದ  ಬಂಕೂರು ಕ್ಲಸ್ಟರ್‌ನ ಸಿಆರ್‌ಪಿ ಆಗಿದ್ದಾರೆ. ಶಿಕ್ಷಣ ಇಲಾಖೆ ನೌಕರಿಯೊಂದಿಗೆ ತಮ್ಮ ಹವ್ಯಾಸದ ಗಾಯನ ಕಲೆಯನ್ನೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರು ಶಾಸ್ತ್ರೀಯವಾಗಿ ಸಂಗೀತ ಕಲಿತಿಲ್ಲ. ಹಾಡುತ್ತಾ ಹಾಡುತ್ತಾ ಕೌಶಲ ವೃದ್ಧಿಸಿಕೊಂಡಿದ್ದಾರೆ. ಮಾಧುರ್ಯಪೂರ್ಣ ಮತ್ತು ಹೆಣ್ಣಿನ ಧ್ವನಿಯ ಮೂಲಕ ಸಂಗೀತ ರಸಿಕರ ಮನ ಗೆಲ್ಲುತ್ತಿದ್ದಾರೆ.

ನೋಡದೆ

34 ವರ್ಷದ ಅವರು, ಕನ್ನಡ, ಹಿಂದಿ, ಮರಾಠಿ ಹಾಗೂ ತೆಲುಗು ಭಾಷೆಯ ಹಾಡುಗಳನ್ನು ಎರಡು ಧ್ವನಿಯಲ್ಲಿ ಹಾಡಬಲ್ಲರು. ಚಲನಚಿತ್ರಗೀತೆ, ಭಾವಗೀತೆ, ಜನಪದ ಗೀತೆ, ಭಕ್ತಿಗೀತೆ ಮತ್ತು ವಚನಗಳನ್ನು ಹಾಡುತ್ತಾರೆ. ಇನ್ನೂರಕ್ಕೂ ಅಧಿಕ ಗೀತೆಗಳು ಅವರ ಸ್ಮೃತಿಪಟಲದಲ್ಲಿವೆ. ಆಗಾಗ, ಫೇಸ್‌ಬುಕ್‌ ಲೈವ್ ಕೂಡ ಮಾಡುತ್ತಿರುತ್ತಾರೆ. ಗಾನಸುಧೆ ಹರಿಸುತ್ತಿರುತ್ತಾರೆ.

ಕೋವಿಡ್–19 ಲಾಕ್‌ಡೌನ್‌ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಲೈವ್ ಕಾರ್ಯಕ್ರಮಗಳನ್ನು ಮಾಡಿ, ನೂರಾರು ಹಾಡುಗಳಿಗೆ ದನಿಯಾಗಿದ್ದಾರೆ. ಹಲವು ಸಂಘ– ಸಂಸ್ಥೆಗಳುವರು ಲೈವ್ ಗಾಯನ ಕಾರ್ಯಕ್ರಮ ಮಾಡಿಸಿವೆ. ಕೋವಿಡ್ ದುರಿತ ಕಾಲದಲ್ಲಿ ನೊಂದ ಮನಸ್ಸುಗಳಿಗೆ ಮನೋಲ್ಲಾಸ ನೀಡುವುದಕ್ಕಾಗಿ ಸಂಗೀತ ಮಾಧ್ಯಮವನ್ನು ಬಳಸಿಕೊಂಡಿದ್ದಾರೆ.

ಥೇಟ್ ಎಸ್. ಜಾನಕಿ ಅವರಂತೆಯೇ ಧ್ವನಿ ಹೊರಡಿಸುವ ಅವರು, ಈವರೆಗೆ 2ಸಾವಿರಕ್ಕೂ ಹೆಚ್ಚಿನ ಕಾರ್ಯಕ್ರಮ ನೀಡಿದ್ದಾರೆ. ವಿವಿಧ ಬ್ಯಾಂಡ್‌ಗಳಲ್ಲಿ ಹಾಡಿ ರಂಜಿಸಿದ್ದಾರೆ. ತಮ್ಮ ಕಲಾ ಜ್ಞಾನವನ್ನು ಶಾಲೆಯ ಮಕ್ಕಳಿಗೂ ಧಾರೆ ಎರೆಯುತ್ತಿದ್ದಾರೆ.

ಸ್ಪರ್ಧೆಯಿಂದಾಗಿ

‘ಪ್ರಥಮ ಪಿಯುಸಿಯಲ್ಲಿದ್ದಾಗ ಸ್ನೇಹಿತರ ಒತ್ತಾಯದಿಂದಾಗಿ ಗಾಯನ ಸ್ಪರ್ಧೆಯಲ್ಲಿ ಭಾವಗೀತೆ ಹಾಡಿದ್ದೆ. ಆ ಕಾರ್ಯಕ್ರಮ ನನ್ನ ಪ್ರತಿಭೆ ಹೊರಹೊಮ್ಮಲು ವೇದಿಕೆಯಾಯಿತು. ಎಲ್ಲರೂ ಗುರುತಿಸಲು, ಮೆಚ್ಚುಗೆಯ ಮಾತುಗಳನ್ನಾಡಲು ಶುರು ಮಾಡಿದರು. ಬಳಿಕ ಶ್ರೀಸರಸ್ವತಿ ಮ್ಯೂಸಿಕಲ್ ಬ್ರಾಸ್ ಬ್ಯಾಂಡ್  ಕಂಪನಿಯಲ್ಲಿ ಹಾಡುತ್ತಿದ್ದೆ. ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿತ್ತು. ಬಳಿಕ ಹಲವು ಕಡೆಗಳಲ್ಲಿ ಹಲವು ಬ್ಯಾಂಡ್‌ಗಳಲ್ಲಿ ಕಾರ್ಯಕ್ರಮ ನೀಡಿದ್ದೇನೆ. ಇತ್ತೀಚೆಗೆ ಕುಟುಂಬದವರು ಶ್ರೀಸಿದ್ದೇಶ್ವರ ಮ್ಯೂಸಿಕಲ್ ಬ್ರಾಸ್ ಬ್ಯಾಂಡ್ ಕಂಪನಿ ಮಾಡಿದ್ದೇವೆ. ಕೋವಿಡ್ ಕಾರಣದಿಂದ ಕಾರ್ಯಕ್ರಮಗಳಿಲ್ಲದೆ ಸಂಕಷ್ಟ ಎದುರಾಗಿದೆ’ ಎಂದು ಮಾಹಿತಿ ನೀಡಿದರು.

ಕಲಬುರ್ಗಿಯಲ್ಲಿ ಶಿಕ್ಷಕರಾಗಿದ್ದ ಕಾರಣಕ್ಕೆ ಕಲಬುರ್ಗಿ ಹಾಗೂ ಬೀದರ್‌ ಭಾಗದಲ್ಲಿ ಬಹಳ ಕಾರ್ಯಕ್ರಮ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ‘ಎರಡೂ ಧ್ವನಿಯಲ್ಲಿ ಹಾಡಬಾರದೇಕೆ ಎಂದು ಪ್ರಯತ್ನಿಸಿದೆ. ಎಸ್. ಜಾನಕಿ ಅಮ್ಮ ಅವರಂತೆ ಹಾಡುತ್ತೀರಿ ಎಂದು ಕೇಳಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅದು ಖುಷಿಯೊಂದಿಗೆ ಹೆಮ್ಮೆಯ ಭಾವ ತರಿಸುತ್ತದೆ. ಹೆಣ್ಣಿನ ಧ್ವನಿ ಬರುತ್ತಿದೆ; ಹಾಡುತ್ತಿದ್ದೇನೆ’ ಎನ್ನುತ್ತಾರೆ ಅವರು.

ಬದುಕು ಕೊಟ್ಟಿದೆ

‘ಹಾಡುಗಾರಿಕೆ ಕಲೆ ನನಗೆ ಬದುಕು ನೀಡಿದೆ. ಒಂದು ಕಾಲದಲ್ಲಿ ಈ ಕ್ಷೇತ್ರಕ್ಕೆ ಬರಲೇಬೇಡ ಎಂದು ಬಯಸಿದ್ದ ತಂದೆ–ತಾಯಿ ಕೂಡ ಬಳಿಕ ನನ್ನ ಕಲೆಯನ್ನು ಗೌರವಿಸಿದರು. ಗಾಯನದಿಂದ ಬರುತ್ತಿದ್ದ ಹಣದಿಂದ ಕಾಲೇಜಿನ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದೆ. ಸರ್ಕಾರಿ ನೌಕರಿಗೆ ಸೇರಿದ್ದೀಯಲ್ಲಾ, ಈಗೇಕೆ ಬ್ಯಾಂಡ್‌? ಎಂದು ಕೆಲವರು ಕೇಳುತ್ತಾರೆ. ಆದರೆ, ಈ ಕಲೆಯನ್ನು ನಾನು ಬಿಡುವುದಿಲ್ಲ. ಗಾಯನ–ನೌಕರಿ ಎರಡನ್ನೂ ಮುಂದುವರಿಸಿಕೊಂಡು ಹೋಗುತ್ತೇನೆ’ ಎಂದು ತಿಳಿಸಿದರು.

‘ತಂದೆ ಮಾರುತಿ ಹಾಗೂ ಚಿಕ್ಕಪ್ಪ ಭೀಮಶಿ ಭಜಂತ್ರಿ ಟ್ರಂಪೆಟ್ ಕಲಾವಿದರು. ತಾಯಿ ಶಹನಾಯಿ ನುಡಿಸುತ್ತಿದ್ದರು. ಮದುವೆ ಮೊದಲಾದ ಸಮಾರಂಭಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದರು. ಚಿಕ್ಕವನಿದ್ದಾಗ ನಾನೂ ಅವರೊಂದಿಗೆ ಹೋಗುತ್ತಿದ್ದೆ. ಕೊನೆಯಲ್ಲಿ ಊಟ ಮಾಡಿ ಎಂದು ಆಯೋಜಕರು ನಮಗೆ ಹೇಳುತ್ತಿದ್ದರು. ಆಗಿನ ಸಾಮಾಜಿಕ ಪರಿಸ್ಥಿತಿಯೂ ಹಾಗೆಯೇ ಇತ್ತು. ಬಡತನ ಆವರಿಸಿದ್ದ ದಿನಗಳವು. ಸಮಾಜ ನಮ್ಮನ್ನು ಕಾಣುತ್ತಿದ್ದ ರೀತಿ ನೋಡಿ ತಂದೆ–ತಾಯಿ ಬಹಳ ನೊಂದಿದ್ದರು. ಹೀಗಾಗಿ, ನೀನು ಹಾಡೋದು, ಬಾರಿಸೋದು ಏನೂ ಬೇಡ ಎಂದು ಹೇಳುತ್ತಿದ್ದರು. ನನಗಾಗಿದ್ದ ಶೋಷಣೆ ಛಲ ತುಂಬಿತು’ ಎನ್ನುತ್ತಾರೆ ಮರಿಯಪ್ಪ.

‘ಬಡತನದ ಕಾರಣದಿಂದಾಗಿ 5ನೇ ತರಗತಿಯಲ್ಲಿ ಶಾಲೆ ಬಿಟ್ಟಿದ್ದೆ. ಶಿಕ್ಷಕ ಕೃಷ್ಣಪ್ಪ ಜಿಂಗಿ ಅವರು ಬುದ್ಧಿವಾದ ಹೇಳಿ ಶಾಲೆ ಮರಳುವಂತೆ ಮಾಡಿ ಪ್ರೇರಣೆಯಾದರು. ಎಸ್ಸೆಸ್ಸೆಲ್ಸಿಯಲ್ಲಿ ಆ ಕಾಲದಲ್ಲೇ ಶೇ 78ರಷ್ಟು ಅಂಕ ಗಳಿಸಿದ್ದೆ. ಪಿಯುಸಿ (ವಿಜ್ಞಾನ)ದಲ್ಲೂ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದೆ. ಸಿಇಟಿಯಲ್ಲೂ ಒಳ್ಳೆಯ ಅಂಕಗಳು ಬಂದಿದ್ದವು. ವೈದ್ಯಕೀಯ ಕೋರ್ಸ್‌ ಸೇರುವುದಕ್ಕಾಗಿ ಶಿಕ್ಷಣ ಕೃಷ್ಣಪ್ಪ ಅವರೇ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಆದರೆ, ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರಿಂದ ಸೇರಲಾಗಲಿಲ್ಲ. ನಂತರ ಡಿ.ಇಡಿ ಮುಗಿಸಿ ಶಿಕ್ಷಕ ವೃತ್ತಿ ಸೇರಿದೆ’ ಎಂದು ತಮ್ಮ ಹಾದಿಯನ್ನು ಹಂಚಿಕೊಂಡರು. ಸಂಪರ್ಕಕ್ಕೆ: 9148980040.

ಅವರ ಗಾಯನದ ಕೆಲವು ಲಿಂಕ್‌ಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು