ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು ನೆಲದಲ್ಲಿ ಕನ್ನಡದ ಸಂಗೀತ

Last Updated 15 ನವೆಂಬರ್ 2020, 9:30 IST
ಅಕ್ಷರ ಗಾತ್ರ

ತಮಿಳು ನೆಲದಲ್ಲಿ ಕನ್ನಡ ಜೋಡಿಯ ಸಂಗೀತ ಸುರಭಿ. ಕೇಳುವ ಹೃದಯಗಳಿಗೆ ಭಾಷೆಯ ಹಂಗಿಲ್ಲ. ಯೋಗ, ಧ್ಯಾನವನ್ನರಸಿ ದೇಶ–ವಿದೇಶದಿಂದ ಬಂದ ಮನಸ್ಸುಗಳೆದುರು ಈ ಜೋಡಿ ಕನ್ನಡ ಜನಪದ ಗೀತೆ, ಬಸವಾದಿ ಶರಣರ ವಚನ ಸುಧೆ, ಶರೀಫರ ತತ್ವಪದಗಳ ಧಾರೆ ಹರಿಸುತ್ತಾರೆ. ಭೋರ್ಗರೆಯುವ ಪಾಶ್ಚಾತ್ಯ ಸಂಗೀತದಲೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸ್ವರದ ಸ್ಪರ್ಶಮಾಡಿ ಸಾಗರವನ್ನು ಶಾಂತಗೊಳಸುತ್ತಾರೆ. ಕಣ್ಣುಮುಚ್ಚಿ ಕುಳಿತ ರಸಿಕರ ಎದೆಯಲ್ಲಿ ರಾಗ, ತಾಳ, ಆಲಾಪಗಳ ಮೂಲಕ ಭಕ್ತಿಯ ಭಾವ ಮೂಡಿಸುತ್ತಾರೆ. ಶಿವರಾತ್ರಿ ಜಾಗರಣೆಯಲ್ಲಿ ಅತೀ ಎತ್ತರದ ‘ಆದಿಯೋಗಿ’ ಶಿವನೆದುರು ಡಮರುಗ ನುಡಿಯುವಾಗ ಇವರು ಭಜಿಸುವ ಭಜನೆ, ಕೀರ್ತನೆ, ವಚನ, ದೇವರನಾಮಗಳು ಹೃದಯಕ್ಕೆ ತಂಪೆರೆಯುತ್ತವೆ.

ಆತ ಬೆಳಗಾವಿಯ ಹುಡುಗ ಮಂಜುನಾಥ ಹೊಸವಾಳ, ಈಕೆ ವಿಜಯಪುರದ ಸೌಮ್ಯಾ ಪತ್ತಾರ. ಹುಬ್ಬಳ್ಳಿಯ ಡಾ.ಗಂಗೂಬಾಯಿ ಹಾನಗಲ್ಲ ಗುರುಕುಲದಲ್ಲಿ ಒಬ್ಬರಿಗೊಬ್ಬರು ಪ್ರೀತಿಗೆ ಒಲಿದರು. ಈ ಜೋಡಿ ಈಗ ಕೊಯಮತ್ತೂರಿನ ಈಶಾ ಫೌಂಡೇಷನ್‌ ಸಂಗೀತ ಲೋಕದಲ್ಲಿ ಮಿನುಗುತ್ತಿದೆ. ಯೋಗ ಪ್ರಧಾನವಾದ ‘ಮನೆ ಶಾಲೆ’ಯಲ್ಲಿ (ಹೋಮ್‌ ಸ್ಕೂಲ್‌) ಶಾಸ್ತ್ರೀಯ ಸಂಗೀತ ಪಾಠ ಮಾಡುತ್ತದೆ. ಚೀನಾ, ಅಮೆರಿಕ, ಇಂಗ್ಲೆಂಡ್‌, ಜರ್ಮನಿ ಸೇರಿದಂತೆ ಹತ್ತಾರು ದೇಶಗಳಿಂದ ಬರುವ ಮಕ್ಕಳಿಗೆ ಶಾಸ್ತ್ರೀಯ ಸಂಗೀತವಲ್ಲದೆ ಕನ್ನಡ ವಚನ, ಜನಪದ ಗೀತೆ, ಭಜನೆ, ದೇವರನಾಮಗಳನ್ನೂ ಉಣಬಡಿಸುತ್ತದೆ.

‘ಸೌಂಡ್ಸ್‌ ಆಫ್‌ ಈಶಾ’ ಸಂಗೀತ ತಂಡದಲ್ಲಿ ನಾದಸುಧೆ ಹರಿಸುವ ಈ ಜೋಡಿ, ವಿವಿಧ ದೇಶಗಳ ಸಂಗೀತ ಪ್ರಕಾರಗಳ ಜತೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಪೋಣಿಸುತ್ತದೆ. ಈಚೆಗೆ ಜಗ್ಗಿ ವಾಸುದೇವ ಅವರ ‘ದರ್ಶನ’ ಕಾರ್ಯಕ್ರಮದಲ್ಲಿ ಅಮೆರಿಕ ಸಂಗೀತದೊಂದಿಗೆ ಮಂಜುನಾಥ–ಸೌಮ್ಯಾ ಜೋಡಿಸಿದ ಪ್ರಕೃತಿ ವರ್ಣನೆಯ ‘ಪೃಥ್ವಿಂ ನಮಾಮಿ, ಜಲಂ, ನೆಲಂ ನಮಾಮಿ’ ಆಲಾಪಗಳು ಶ್ರೋತೃಗಳ ಮನಮುಟ್ಟುವಲ್ಲಿ ಯಶಸ್ವಿಯಾಗಿದ್ದವು. ‘ಜಕ್ಕನಕ್ಕ ನಕ್ಕಜಕ್ಕ ಜಕ್ಕನಕ್ಕನಾ ಜೀವನವೆಲ್ಲಾ ಬೇವುಬೆಲ್ಲ’ ಜನಪದ ಗೀತೆಗೆ ಜಗ್ಗಿ ವಾಸುದೇವ ಹಾಗೂ ಅವರ ಭಕ್ತರು ನೃತ್ಯ ಮಾಡಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

‘ಯೋಗ ಮತ್ತು ಧ್ಯಾನ’ ತತ್ವದಡಿ ರೂಪಗೊಂಡಿರುವ ಈಶ ಫೌಂಡೇಷನ್‌ನ ವಸತಿಸಹಿತ ಶಾಲೆಯಲ್ಲಿ ಮಂಜುನಾಥ, ಸೌಮ್ಯಾ ಕಳೆದ ಮೂರು ವರ್ಷಗಳಿಂದ ಸಂಗೀತ ಬೋಧನೆ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ಗುರುಕುಲದಲ್ಲಿ ನಾಲ್ಕು ವರ್ಷ ಪಂ.ಗಣಪತಿ ಭಟ್‌ ಹಾಸಣಗಿ ಅವರ ಶಿಷ್ಯತ್ವದಲ್ಲಿ ಸಂಗೀತ ಕಲಿತಿದ್ದ ಈ ಜೋಡಿ, ವಯಲಿನ್‌ ಕಲಾವಿದೆ ವಿದುಷಿ ಎನ್‌.ರಾಜಂ ಅವರ ಮಾರ್ಗದರ್ಶನದೊಂದಿಗೆ ಈಶ ಫೌಂಡೇಷನ್‌ ಸಂಗೀತಲೋಕ ಸೇರಿದ್ದಾರೆ. ಮಂಜುನಾಥ– ಸೌಮ್ಯಾ ಜೋಡಿ ಹಾಡುಗಾರಿಕೆಯ ಜೊತೆಗೆ ಹಾರ್ಮೊನಿಯಂನಲ್ಲೂ ಪರಿಣತಿ ಪಡೆದಿದ್ದು ಒಬ್ಬರಿಗೊಬ್ಬರು ಪಕ್ಕವಾದ್ಯ ಸಾಥಿಯೂ ಆಗುತ್ತಾರೆ.

4 ಲಕ್ಷ ಕೇಳುಗರು: ಮಕ್ಕಳಿಗೆ ಸಂಗೀತ ಪಾಠ ಮಾಡುವ ಜತೆಗೆ ಶಾಸ್ತ್ರೀಯ ಸಂಗೀತ ಕಛೇರಿಗಳನ್ನೂ ಇವರು ಮುಂದುವರಿಸಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ತವರಾಗಿರುವ ತಮಿಳುನಾಡಿನ ಹಲವೆಡೆ ಹಿಂದೂಸ್ತಾನಿ ಸಂಗೀತ ಕಛೇರಿ ನೀಡಿದ್ದಾರೆ. ಹೊಸ ಕಾಲಘಟ್ಟಕ್ಕೆ ತಕ್ಕಂತೆ ಯೂಟ್ಯೂಬ್‌ ಚಾನೆಲ್ ಸೇರಿ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು ನಾಲ್ಕು ಲಕ್ಷಕ್ಕೂ ಅಧಿಕ ಕೇಳುಗರನ್ನು ಹೊಂದಿದ್ದಾರೆ.

ಹೊಸದಾಗಿ ಸಂಗೀತ ಕಲಿಯುವವರಿಗಾಗಿ ‘ಸಂಗೀತ ಮನೆ’ ಯೂಟ್ಯೂಬ್‌ ಚಾನೆಲ್‌ ರೂಪಿಸಿದ್ದು ಲಕ್ಷಕ್ಕೂ ಹೆಚ್ಚು ಜನರು ಸದಸ್ಯತ್ವ ಪಡೆದಿದ್ದಾರೆ. ಉಚಿತವಾಗಿ ಇಲ್ಲಿ ಸಂಗೀತ ಬೋಧನೆ ಮಾಡಲಾಗುತ್ತದೆ. ಶಾಸ್ತ್ರೀಯ, ಭಕ್ತಿ, ಭಾವ, ಜನಪದ ಗೀತೆಗಳ ನೂರಕ್ಕೂ ಹೆಚ್ಚು ವಿಡಿಯೊಗಳು ಇಲ್ಲಿ ದೊರೆಯುತ್ತವೆ. ‘ಎಂ.ಎಸ್‌ ಸ್ವರ’ ಚಾನೆಲ್‌ನಲ್ಲಿ ಇಬ್ಬರೂ ಹಾಡಿರುವ ಹಲವು ವಿಡಿಯೊ ಗೀತೆಗಳು ಪ್ರಸಿದ್ಧಿ ಪಡೆದಿವೆ.

ಧಾರಾವಾಹಿಯ ಟ್ರ್ಯಾಕ್‌ ಹಾಡುಗಳು, ಸಿನಿಮಾ ಹಾಡುಗಳನ್ನು ಶಾಸ್ತ್ರೀಯ ಸ್ಪರ್ಶದೊಂದಿಗೆ ಹೊಸರೀತಿಯಲ್ಲಿ ಹಾಡಿ ಮೆಚ್ಚುಗೆ ಗಳಿಸಿದ್ದಾರೆ. ಹಬ್ಬಹರಿದಿನದ ಸಂದರ್ಭದಲ್ಲಿ ಈ ಜೋಡಿ ಬಿಡುಗಡೆ ಮಾಡುವ ಆಡಿಯೊ, ವಿಡಿಯೊ ಗೀತೆಗಳು ಜಾಲತಾಣಗಳಲ್ಲಿ ಕೇಳುಗರಿಗೆ ಇಷ್ಟವಾಗಿವೆ. ಈಚಿನ ನವರಾತ್ರಿ ಸಂದರ್ಭದಲ್ಲಿ ಬಿಡುಗಡೆ ಮಾಡಿದ ‘ಐಗಿರಿ ನಂದಿನಿ’ ಮೆಚ್ಚುಗೆ ಗಳಿಸಿದೆ. ಇಬ್ಬರೂ ಹಾರ್ಮೊನಿಯಂ ಹಿಡಿದು ಫೇಸ್‌ಬುಕ್‌ ಲೈವ್‌ ಬಂದರೆ ಲಕ್ಷಾಂತರ ವೀಕ್ಷಕರು ಜತೆಯಾಗುತ್ತಾರೆ. ಈ ಕೋವಿಡ್‌ ಅವಧಿಯಲ್ಲಿ ಆನ್‌ಲೈನ್‌ ಕಛೇರಿಗಳು ಜನರಿಗೆ ಸಂಗೀತದ ರಸದೌತಣ ನೀಡುತ್ತಿವೆ. ಜತೆಗೆ ಸೌಮ್ಯಾ ಅವರು ಹಾಡಿರುವ ‘ಜೀವ ನೀನು ಭಾವ ನೀನು’ ಧ್ವನಿಸುರುಳಿ ಬಿಡುಗಡೆಯಾಗಿದೆ. ಮಂಜುನಾಥ್‌, ಗೋಲ್ಡನ್‌ ಗೋಲ್‌, ಮಾಜಿ ಮುಗುಳ್ನಗೆ ಚಲನಚಿತ್ರಗಳಲ್ಲಿ ಹಾಡಿದ್ದಾರೆ.

ಮಂಜುನಾಥ, ಸವದತ್ತಿ ತಾಲ್ಲೂಕಿನ ಇಂಗಳಗಿ ಗ್ರಾಮದವರು. ತಂದೆ ಮಲ್ಲಪ್ಪ ಹೊಸವಾಳ ನಿವೃತ್ತ ಪೋಸ್ಟ್‌ ಮ್ಯಾನ್‌, ತಾಯಿ ಸೀತಾ ಗೃಹಿಣಿ. ಸಂಗೀತಾಸಕ್ತ ತಂದೆಯಿಂದ ಮಂಜುನಾಥ ಅವರಲ್ಲಿ ಹಾಡಿನ ಗೀಳು ಮೂಡಿತು. ನಾಲ್ಕನೇ ತರಗತಿಯಿಂದ ಎಂಟು ವರ್ಷಗಳ ಕಾಲ ಗದುಗಿನ ಪುಣ್ಯಾಶ್ರಮದಲ್ಲಿ ಸಂಗೀತ ಕಲಿತರು. ಪಂ.ಪುಟ್ಟರಾಜ ಗವಾಯಿಗಳಿಗೆ ಸೇವೆ ಮಾಡುತ್ತಾ ಅವರ ಪ್ರಭಾವಕ್ಕೆ ಒಳಗಾಗಿದ್ದರು. ನಂತರ ಹುಬ್ಬಳ್ಳಿಯ ಗುರುಕುಲ ಸೇರಿದರು. ಆಮೇಲೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ. ಮ್ಯೂಸಿಕ್‌ ಪದವಿ ಪಡೆದರು.

ಸೌಮ್ಯಾ ಅವರು ತಬಲಾ ವಾದಕ, ವಿಜಯಪುರ ಸರ್ಕಾರಿ ಐಟಿಐ ಉಪನ್ಯಾಸಕ ಮೌನೇಶ ಪತ್ತಾರ–ಮಧುಶ್ರೀ ದಂಪತಿಯ ಪುತ್ರಿ. ಆರಂಭಿಕವಾಗಿ ಅವರು ಶ್ರೀಮಂತ ಕೆ ಅವಟಿ ಅವರಲ್ಲಿ ಸಂಗೀತಾಭ್ಯಾಸ ಮಾಡಿದರು. ಹುಬ್ಬಳ್ಳಿ ಗುರುಕುಲದಲ್ಲಿ ಸಂಗೀತ ಕಲಿತು ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಎಂ.ಮ್ಯೂಸಿಕ್‌ ಪೂರೈಸಿದರು.

ಹಾಡುತ್ತಲೇ ಹಸೆಮಣೆ: ಸಂಗೀತ ಕಲಿಯುತ್ತಲೇ ಪ್ರೀತಿಗೊಲಿದ ಈ ಜೋಡಿ ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳ ಗದ್ದುಗೆ ಮುಂದೆಯೇ ಹಸೆಮಣೆ ಏರಿದರು. ಪುಟ್ಟರಾಜ ಗವಾಯಿಗಳ ಸೇವೆ ಮಾಡಿದ್ದ ಮಂಜುನಾಥ, ಅವರ ಎದುರಲ್ಲೇ ವಿವಾಹವಾದರು. ಕಳೆದ ವರ್ಷ ಪುಣ್ಯಾಶ್ರಮದಲ್ಲಿ ನಡೆದ ಈ ವಿವಾಹ ಸಂಪೂರ್ಣ ಸಂಗೀತಮಯವಾಗಿತ್ತು. ಹುಬ್ಬಳ್ಳಿಯ ಗುರುಕುಲ, ಪುಣ್ಯಾಶ್ರಮದ ಸಂಗೀತ ವಿದ್ಯಾರ್ಥಿಗಳು ದಿನವಿಡೀ ಹಾಡಿದ್ದರು. ಕಡೆಗೆ ವಧು–ವರರಿಂದಲೂ ಹಾಡಿಸಿದರು.

‘ಈಶ ಫೌಂಡೇಷನ್‌ನ ಸಂಗೀತ ಲೋಕದಲ್ಲಿ ಸಂಗೀತ ಎಂದರೆ ಕೇವಲ ಕೇಳುವುದಷ್ಟೇ ಅಲ್ಲ, ಸಂಗೀತವನ್ನು ಧ್ಯಾನದ ಜೊತೆಯಲ್ಲಿ ಕಣ್ಣು ಮುಚ್ಚಿ ಅನುಭವಿಸುತ್ತಾರೆ. ಸಂಗೀತ, ಕೇಳುಗರ ಮನಸ್ಸಿನ ಬದಲಾವಣೆಗೆ ನಾಂದಿ ಹಾಡುತ್ತದೆ. ಜೊತೆಗೆ ಇಲ್ಲಿಯ ವಾತಾವರಣ ಸಂಗೀತಕ್ಕೆ ಹೇಳಿ ಮಾಡಿಸಿದಂತಿದ್ದು ನಾವಿಬ್ಬರೂ ಇಲ್ಲಿಯೇ ಜೀವನ ಕಟ್ಟಿಕೊಂಡಿದ್ದೇವೆ. ವಿವಿಧ ರಾಜ್ಯಗಳ, ದೇಶಗಳ ಮಕ್ಕಳಿಗೆ ಸಂಗೀತ ಕಲಿಸುತ್ತಿರುವ ಹೆಮ್ಮ ನಮ್ಮಲ್ಲಿದೆ. ಜತೆಗೆ ಹೊರಗೆ ಸಂಗೀತ ಕಛೇರಿ ನೀಡಲು, ರೆಕಾರ್ಡಿಂಗ್‌ ತೆರಳಲು ಯಾವುದೇ ಅಡ್ಡಿ ಆತಂಕಗಳಿಲ್ಲ. ಹೀಗಾಗಿ ನಮಗಿದು ಸೂಕ್ತ ತಾಣವಾಗಿದೆ’ ಎಂದು ಮಂಜುನಾಥ್– ಸೌಮ್ಯಾ ದಂಪತಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT