ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆರಾಗಗಳ ಪ್ರಣಯಗೀತೆ

Last Updated 6 ಸೆಪ್ಟೆಂಬರ್ 2020, 1:02 IST
ಅಕ್ಷರ ಗಾತ್ರ

ಅತ್ತ, ದಾರಗಳನ್ನು ಪೋಣಿಸಿ ಇಳಿಬಿಟ್ಟಂತೆ ನಿಧಾನಗತಿಯ ಲಯದಲ್ಲಿ ಸುರಿಯುತ್ತಿರುವ ಮಳೆಯ ಪರದೆಯ ಸೊಬಗನ್ನು ಸವಿಯುತ್ತ ಸಿತಾರ್‌ ಎದೆಗಪ್ಪಿಕೊಂಡು ನುಡಿಸುತ್ತಿದ್ದ ಮೇಘ ಮಲ್ಹಾರ್‌ನಲ್ಲಿ ಅಡಗಿತ್ತು, ಪ್ರೇಮದ ಸವಿ. ಇತ್ತ, ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಹಿನ್ನೆಲೆಯಲ್ಲಿ ‘ಸಾವನ್ ಕಿ ಋತು ಆಯೋ ರೆ ಬಡೀ ಬಡೀ ಭೂಂದನ್ ಲಾಗೇ ಬರಸನ್…’ಗೆ ಜೀವ ತುಂಬಲು ನಡೆಯುತ್ತಿದ್ದ ರಿಯಾಜ್‌ನಲ್ಲೂ ಪ್ರೀತಿಯದೇ ಬಯಕೆ.

ಟ್ಯಾಕ್ಸಿಯ ಒಳಗಿನ ರೇಡಿಯೊದಲ್ಲಿ ಮೊಳಗುತ್ತಿದ್ದ ‘ಆ ಲೌಟ್ ಕೆ ಆಜಾ ಮೇರೆ ಮೀತ್ ತುಜೇ ಮೇರೆ ಗೀತ್ ಬುಲಾತೇ ಹೇಂ…’ ಹಾಡಿನಲ್ಲೂ ಮಲ್ಹಾರ್ ಸೊಬಗಿನ ಬೆಸುಗೆ; ಪಿಟೀಲಿನಲ್ಲಿ ನುಡಿಸುತ್ತಿದ್ದ ಅಮೃತವರ್ಷಿಣಿ ರಾಗದಲ್ಲಿ ಮೊಳಗುತ್ತಿದ್ದ ‘ಎನ್ನೈ ನೀ ಮರವಾದೆ ಅಂಗೈಯರ್ ಕನ್ನಿ’ಯಲ್ಲೂ ಪ್ರೀತಿಯದೇ ಮೋಹಕತೆ.

ಹೌದು, ಮಳೆಗೂ ಸಂಗೀತಕ್ಕೂ ಮಳೆರಾಗಗಳಿಗೂ ಪ್ರಣಯಕ್ಕೂ ಇರುವ ಬೆಸುಗೆ ಸುಂದರ, ಸುಮಧುರ. ಹಿಂದುಸ್ತಾನಿ ಸಂಗೀತದಲ್ಲಿ ಬರಖಾ ಋತು, ಸಾವನ್ ಕಿ ಋತು ಮುಂತಾದ ಪದಗಳನ್ನು ಕೇಳುತ್ತಿದ್ದಂತೆ ಮೊದಲು ಮೇಳೈಸುವುದು ಮಲ್ಹಾರ್ ರಾಗಗಳು. ಮೇಘ ಮಲ್ಹಾರ್, ಗೌಡ್ ಮಲ್ಹಾರ್, ಮಿಯಾನ್‌ ಕಿ ಮಲ್ಹಾರ್, ದೇಶ್ ಮಲ್ಹಾರ್, ರಾಮದಾಸಿ ಮಲ್ಹಾರ್, ಸೂರ್ ಮಲ್ಹಾರ್ ಮುಂತಾಗಿ ಯಾವುದೇ ಪ್ರಕಾರವಿರಲಿ, ಅವುಗಳ ರಚನೆಗಳಲ್ಲೆಲ್ಲ ಮೋಡ, ಮಳೆಯ ವರ್ಣನೆ ಮತ್ತು ಮೈ ಮನ ಮುದಗೊಳಿಸುವ ವಾತಾವರಣದ ಚಿತ್ರಣದ ಮೋಹಜಾಲ ಇದ್ದೇ ಇರುತ್ತದೆ.

ಮಳೆಗಾಲ ಪ್ರೇಮಿಗಳ ಮೈಮನದಲ್ಲೂ ಭಾವಲೋಕ ಸೃಷ್ಟಿಸುವುದರಿಂದ ಮಳೆರಾಗದ ಬಂದಿಶ್‌ಗಳಲ್ಲಿ ಪ್ರೇಯಸಿ–ಪ್ರಿಯಕರನ ತುಮುಲಗಳು, ವಿಪ್ರಲಂಬ ಶೃಂಗಾರದಲ್ಲಿ ಬೇಯುತ್ತಿರುವವರ ಸಮಾಗಮದ ಬಯಕೆ ಇತ್ಯಾದಿಗಳೂ ಜೊತೆಗೂಡುತ್ತವೆ. ಮೋರ್ ಮೋರನಿಯರ (ಗಂಡು–ಹೆಣ್ಣು ನವಿಲು) ಪ್ರಸ್ತಾಪ ಇದರ ರೂಪಕ. ಕರ್ನಾಟಕ ಸಂಗೀತದ ರಾಗಗಳಿಗೆ ಕಾಲದ ‘ಬಂಧ’ವಿಲ್ಲದಿರುವುದರಿಂದ ‘ವರ್ಷಿಣಿ’ಗೆ ಮಳೆಗಾಲದ ಹಂಗಿಲ್ಲ. ಆದರೂ ಮಳೆರಾಗಗಳ ಉತ್ಸವದಲ್ಲಿ ಈ ರಾಗಕ್ಕೇ ಮನ್ನಣೆ.

ಮಲ್ಹಾರ್ ಮತ್ತು ಅಮೃತವರ್ಷಿಣಿ ರಾಗಗಳಿಗೆ ಸಂಬಂಧಿಸಿದ ಕಥೆಯಲ್ಲಿ ರಾಗಗಳನ್ನು ಹಾಡಿ ಮಳೆ ಸುರಿಸಿದ ಪ್ರತೀತಿ ಇದೆ. ತಮಿಳುನಾಡಿನ ಎಟ್ಟಾಯಪುರಂನಲ್ಲಿ ಮುತ್ತುಸ್ವಾಮಿ ದೀಕ್ಷಿತರು ಅಮೃತವರ್ಷಿಣಿಯನ್ನು ಹಾಡಿ ವರ್ಷಧಾರೆ ಹರಿಸಿದರೆ, ಅಕ್ಬರನ ಆಸ್ತಾನ ಕವಿ ತಾನ್‌ಸೇನ್ ಬೆಂಕಿಗೇ ಸೆಡ್ಡು ಹೊಡೆದು ಮಲ್ಹಾರ್‌ನಿಂದ ಮಳೆ ಬರಿಸಿದ ಎಂಬುದು ಸಂಗೀತ ಕ್ಷೇತ್ರದಲ್ಲಿ ಈಗಲೂ ಜನಜನಿತ. ಮಲ್ಹಾರ್‌ನ ವಿವಿಧ ಪ್ರಕಾರಗಳು ಈಗಲೂ ಮಳೆಯ ಭಾವಕ್ಕೆ ರುಚಿ ತುಂಬುತ್ತಿವೆ. ಆದರೆ ಅಮೃತವರ್ಷಿಣಿಯನ್ನು ಮಳೆಗಾಲಕ್ಕೆ ಸೀಮಿತಗೊಳಿಸದೇ ಎಲ್ಲ ಕಾಲದಲ್ಲೂ ಸಂಗೀತಾಮೃತದ ಸಿಂಚನ ಮಾಡುತ್ತಿದೆ. ಬಂದಿಶ್‌ಗಳ ರಚನೆ ಮತ್ತು ಅವುಗಳನ್ನು ಹಾಡುವ ವಿಧಾನದಲ್ಲಿ ಮಳೆಯ ವಿವಿಧ ರೂಪಗಳು ಮನದಲ್ಲಿ ಮೂಡುತ್ತವೆ, ಪ್ರಣಯದ ಭಾವಗಳೂ ಅಮೂರ್ತವಾಗಿ ಚಿಗುರೊಡೆಯುತ್ತವೆ ಎನ್ನುವ ಹಿಂದುಸ್ತಾನಿ ಕಲಾವಿದರೂ ಇದ್ದಾರೆ. ‘ಸಾವನ್ ಕಿ ಋತು ಆಯೋ ರೆ...’ ಸಾಲು ಹಾಡುವಾಗ ಮೋಡಗಳು ನಿಧಾನಕ್ಕೆ ಶೇಖರಣೆ ಆಗುತ್ತಿರುವಂತೆ ಭಾಸವಾಗುತ್ತದೆ, ನವಿಲು ರೆಕ್ಕೆ ಬಿಚ್ಚಿ ಜೋಡಿ ಸೇರಲು ಬಯಸುವ, ಪ್ರೇಯಸಿಯು ಪ್ರಿಯಕರನ ಸಮಾಗಮಕ್ಕೆ ಕಾತರಳಾಗಿರುವ ಭಾವ ಮೂಡುತ್ತದೆ. ‘ಗರಜ್ ಘುಮಡ್ ಘನ್ ಛಾಯೋ ಬದರವಾ...’ ಎಂಬಲ್ಲಿ ಮೋಡಗಳ ವೇಗದ ಚಲನೆ, ಮಳೆ ರಭಸ ಪಡೆದುಕೊಳ್ಳುವುದು, ಪ್ರೇಮಿಗಳಿಗೆ ಸಮಾಗಮದ ಬಯಕೆ ತೀವ್ರವಾಗುವುದು ಮನದಟ್ಟಾಗುತ್ತದೆ ಎನ್ನುತ್ತಾರೆ ಸಾವನಿ ಶೇಂಡೆ ಸಾಠೆ.

ಮೇಘ ಮಲ್ಹಾರ್ ಈ ವಿಚಾರದಲ್ಲಿ ಹೆಚ್ಚು ಪ್ರಭಾವಿ ಎಂಬ ವಾದ ಅವರದು. ‘ಇತರ ಮಲ್ಹಾರಗಳಲ್ಲಿರುವಂತೆ ಮೇಘ ಮಲ್ಹಾರದಲ್ಲಿ ಎರಡು ನಿಷಾದಗಳಿರುವುದಿಲ್ಲ. ಕೋಮಲ ಗಾಂಧಾರವೂ ಅಲ್ಲಿ ವರ್ಜ್ಯ. ಕೋಮಲ ನಿಷಾದಕ್ಕೆ ಸ್ಥಾನವಿದೆ. ಆದರೆ ಶುದ್ಧ ನಿಷಾದ ಇರುವುದೇ ಇಲ್ಲ. ಕೋಮಲ ನಿಷಾದದ ‘ಆಂದೋಲನ’ವು ಮೋಡಗಳ ದಟ್ಟೈಸುವಿಕೆಯನ್ನು ಮೋಹಕವಾಗಿ ಬಿಂಬಿಸುತ್ತದೆ. ಮಿಯಾನ್‌ ಕಿ ಮಲ್ಹಾರ್ ಅಥವಾ ನಟ್ ಮಲ್ಹಾರ್‌ನಲ್ಲಿ ಆಕ್ರಮಣಕಾರಿ ಭಾವ ಹೆಚ್ಚು. ಮೇಘ ಮಲ್ಹಾರ್‌ ರೊಮ್ಯಾಂಟಿಕ್ ಮೂಡ್‌ ಮೂಡಿಸುತ್ತದೆ’ ಎಂದು ವಿವರಿಸುತ್ತಾರೆ.

ಮಳೆ ರಾಗಗಳ ವೈವಿಧ್ಯದ ಸೊಬಗು
ವಿಜಯ್ ಕೋಪರ್ಕರ್ ಅವರು ‘ಬರಕಾ ಋತು ಆಯಿ ಹಮಾರಿ’ ಬಂದಿಶ್ ಹಾಡುವಾಗ ಸೂರ್ ಮಲ್ಹಾರ್‌ ರಾಗವು ವಿರಹಕ್ಕಿಂತಲೂ ಶೃಂಗಾರ ಪ್ರಧಾನ ಎನಿಸಿದರೆ, ಅಶ್ವಿನಿ ಭಿಡೆ ದೇಶಪಾಂಡೆ ಅವರು ಮೇಘ ಮಲ್ಹಾರ್‌ನಲ್ಲಿ ‘ಮೇಘ ಶ್ಯಾಮ್ ಘನಶ್ಯಾಮ್... ಬಾದಲ್ ಕೆ ರೂಪ್ ಶ್ಯಾಮ್ ಭೀಮ್ ರಂಗ್ ಬರಸಾಯೊ’ ಹಾಡುತ್ತಿದ್ದರೆ ಇನ್ನೇನು ಕುಂಭದ್ರೋಣ ಮಳೆ ಸುರಿದೇ ಬಿಟ್ಟಿತು ಎಂದೆನಿಸಬೇಕು. ಭೀಮಸೇನ್ ಜೋಶಿ ಅವರು ಮೇಘ ಮಲ್ಹಾರ್‌ನಲ್ಲಿ ‘ಗರಜೆ ಘಟ ಘನ ಕರೆ ರಿ ಕರೀ…’ ಹಾಡುವಾಗಲೂ ಇದೇ ಭಾವ ಮೂಡುತ್ತದೆ. ರವಿಶಂಕರ್ ಅವರು ಸಿತಾರ್‌ನಲ್ಲಿ ಮಿಯಾನ್ ಕಿ ಮಲ್ಹಾರ್ ನುಡಿಸುವಾಗ, ಮಲ್ಲಿಕಾರ್ಜುನ ಮನ್ಸೂರ್ ಅವರು ರಾಮದಾಸಿ ಮಲ್ಹಾರ್‌ ಹಾಡುವಾಗ, ಮೋಹಕ ಆಲಾಪಗಳ ಒಡೆಯ ರಶೀದ್ ಖಾನ್ ಸ್ವರಮಂಡಲದ ಹಿನ್ನೆಲೆಯಲ್ಲಿ ರಾಗ ಮೇಘ ಹಾಡುವಾಗ ಎಲ್ಲವೂ ಶಾಂತ, ಸುಂದರ. ಅಭಿಕ್ ಮುಖರ್ಜಿ ಸಿತಾರ್‌ನಲ್ಲಿ ಗೌಡ್ ಮಲ್ಹಾರ್ ನುಡಿಸುವಾಗ, ವೀಣಾ ಸಹಸ್ರಬುದ್ಧೆ ಮಿಯಾನ್ ಕಿ ಮಲ್ಹಾರ್ ಹಾಡುವಾಗ, ರಾಜನ್ ಮತ್ತು ಸಾಜನ್ ಮಿಶ್ರಾ ರಾಗ ಮೇಘದಲ್ಲಿ ಖಯಾಲ್ ಪ್ರಸ್ತುತಪಡಿಸುವಾಗ, ಅಮ್ಜದ್ ಅಲಿ ಖಾನ್ ಅವರ ಸರೋದ್‌ನಲ್ಲಿ ಮಿಯಾನ್ ಕಿ ಮಲ್ಹಾರ್ ಮೂಡಿದಾಗ, ಡಿ.ಶ್ರೀನಿವಾಸ್ ಅವರ ವೀಣೆಯಲ್ಲಿ ಹಾಗೂ ನೆಯ್ವೇಲಿ ಸಂತಾನಗೋಪಾಲಂ ಅವರ ಗಾಯನದಲ್ಲಿ ಅಮೃತವರ್ಷಿಣಿ ಮೊಳಗಿದಾಗ, ವಿ.ವಿ.ಸುಬ್ರಹ್ಮಣ್ಯಂ ಅವರ ಪಿಟೀಲಿನಲ್ಲಿ ದೇವಾಮೃತವರ್ಷಿಣಿ ಕೇಳಿದಾಗಲೂ ಮಳೆರಾಗಗಳ ಶಾಂತ ಗುಣಕ್ಕೆ ಮನ ತಣಿಯುತ್ತದೆ.

ಗಂಗಜ್ಜಿಯ ಮಲ್ಹಾರ

‘ಮಳೆ ರಾಗ ಎಂದರೆ ತಕ್ಷಣ ನೆನಪಾಗುವುದು ಮುಂಬೈಯಲ್ಲಿ ನಡೆಯುತ್ತಿದ್ದ ಮಲ್ಹಾರ್ ಉತ್ಸವ ಮತ್ತು ಅಜ್ಜಿ’ ಎನ್ನುತ್ತಾರೆ ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳು ಹಾಗೂ ಖ್ಯಾತ ಗಾಯಕಿ ವೈಷ್ಣವಿ ಹಾನಗಲ್ ತಲಕಾಡು.

‘ಮಲ್ಹಾರ್ ಉತ್ಸವಕ್ಕೆ ಪ್ರತಿ ವರ್ಷವೂ ಅಜ್ಜಿಗೆ ಆಹ್ವಾನವಿರುತ್ತಿತ್ತು. ಅವರು ಅಲ್ಲಿ ಹೆಚ್ಚಾಗಿ ಮಿಯಾನ್ ಕಿ ಮಲ್ಹರ್ ಪ್ರಸ್ತುತಪಡಿಸುತ್ತಿದ್ದರು. ಮಳೆಯ ನಡುವೆ ಅವರು ಅಭ್ಯಾಸ ಮಾಡುತ್ತಿದ್ದಾಗ ನಮ್ಮ ಮನ ತುಂಬುತ್ತಿತ್ತು’ ಎಂದು ಹೇಳುವಾಗ ಅಜ್ಜಿಯ ಮಮತೆಯ ಪ್ರಭಾವ ವೈಷ್ಣವಿ ಅವರ ಧ್ವನಿಯಲ್ಲಿ ರಿಂಗಣಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT