ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ಯಾಮಲಾ ಭಾವೆ ಒಂದು ನೆನಪು

Last Updated 13 ಜೂನ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಶ್ಯಾಮಲಾಜೀ ಅವರು ಹದಿನೈದು ನಿಮಿಷದ ನಂತರ ಬಂದು ನನ್ನ ಮುಂದೆ ಕುಳಿತರು. ನನಗೆ ಸಾಕ್ಷಾತ್ ಸರಸ್ವತಿಯೇ ಬಂದು ನನ್ನ ಮುಂದೆ ಕುಳಿತಂತಾಯಿತು. ಅವರ ಸರಳತೆ, ನನ್ನನ್ನು ಮಾತನಾಡಿಸಿದ ರೀತಿ ಹಾಗೂ ಅವರ ಮುಗ್ಧ ವ್ಯಕ್ತಿತ್ವ ಕಂಡು ಬೆರಗಾದೆ...

‘ಮೂರ್ತಿ ಚಿಕ್ಕದು ಕೀರ್ತಿ ದೊಡ್ದದು’ ಎಂಬ ಗಾದೆ ಮಾತು ಸಂಗೀತ ವಿದುಷಿ ಶ್ಯಾಮ­ಲಾ ಜಿ. ಭಾವೆ ಅವರಿಗೆ ಮೀಸಲು ಎಂದು ಹೇಳಿದರೆ ತಪ್ಪಾಗ­ಲಾರದು. ಅವರ ಸಂಗೀತದ ಹಿರಿಮೆ ಅಂಥದ್ದು. ನಾನುಚಿಕ್ಕವಯಸ್ಸಿನಿಂದಲೂ ಅವರ ಹಾಡುಗಾರಿಕೆ ಕೇಳುತ್ತಾ ಬಂದಿದ್ದೇನೆ. ಬಹಳ ಭಾವಪೂರ್ಣವಾದ ಧ್ವನಿ ಮತ್ತು ಮನಸ್ಸಿಗೆ ಆನಂದ ಕೊಡುವ ಕೊರಳು ಅವರದ್ದಾಗಿತ್ತು. ಅನೇಕ ಬಾರಿ ಅವರ ಸಂಗೀತ ಕಾರ್ಯಕ್ರಮಗಳು ಹಾಗೂ ಧ್ವನಿಸುರುಳಿಗಳನ್ನು ಕೇಳಿದ್ದೆ. ನನ್ನ ಅಚ್ಚುಮೆಚ್ಚಿನ ಸಂಗೀತ ಕ­ಲಾವಿದರಲ್ಲಿ ಅವರೂ ಒಬ್ಬರು.

ನನಗೆ ಸುಮಾರು 18 ವಯಸ್ಸು ಇರಬೇಕು. ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದೆ (ಬೆಂಗಳೂರಿನ ಜಯನಗರದಲ್ಲಿರುವ ಎನ್ಎಂಕೆಆರ್‌ವಿ ಕಾಲೇಜಿನಲ್ಲಿ). ನನ್ನ ಅಜ್ಜನ ಮನೆ ಕುಮಾರಪಾರ್ಕ್ ಪಶ್ಚಿಮದಲ್ಲಿತ್ತು. ಅಲ್ಲಿಂದ ಜಯನಗರಕ್ಕೆ ಬಸ್ಸಿನಲ್ಲಿ ಹೋಗಿ ಬರುತ್ತಿದ್ದೆ. ಶ್ಯಾಮಲಾ ಭಾವೆ ಅವರ ಮನೆ, ನಮ್ಮ ಅಜ್ಜನ ಮನೆಗೆ ಸ್ವಲ್ಪ ದೂರದಲ್ಲೇ ಇದೆ ಎಂದು ಸ್ನೇಹಿತರಿಂದ ತಿಳಿದುಕೊಂಡೆ. ಅವರನ್ನು ಭೇಟಿ ಮಾಡುವ ಹಂಬಲವಾಯಿತು.

ಒಂದು ದಿನ ಸಂಜೆ 5 ಗಂಟೆಗೆ ನಾನು ಅವರ ಮನೆಯ ವಿಳಾಸ ಕೇಳಿಕೊಂಡು ಹೊರಟೆ. ಹತ್ತಿರವಿದ್ದರಿಂದ ನಡೆದುಕೊಂಡೇ ಹೋದೆ. ಮನೆಯೂ ಸಿಕ್ಕಿತು. ಸಂತೋಷದಿಂದ ಒಳನಡೆದೆ. ಆ ಮನೆಯ ವಾತಾವರಣ ನೋಡಿ ನನಗೆ ಅತ್ಯಾನಂದವಾಯಿತು. ಮನೆಯ ಮುಂದೆ ಸಣ್ಣ ಉದ್ಯಾನ, ಅಲ್ಲಲ್ಲಿ ಗುಲಾಬಿ ಗಿಡಗಳು ಹೂ ಬಿಟ್ಟಿದ್ದವು. ಹೆಬ್ಬಾಗಿಲಿನ ಮೇ­ಲೆ ಶಾರದೆಯ ಪ್ರತಿಮೆ ಇತ್ತು. ಸಣ್ಣ ಮಕ್ಕಳು ಹಾಡುವ ಧ್ವನಿ ಒಂದು ಕಡೆ; ಇನ್ನೊಂದು ಕಡೆ ಹಾರ್ಮೋನಿಯಂ ನುಡಿಸುವ ಶಬ್ದ, ತಬಲದ ನಾದ ಇವೆಲ್ಲಾ ಕೇಳಿ ಬರುತ್ತಿತ್ತು. ಗಂಧದ ಕಡ್ಡಿಯ ಸುವಾಸನೆ... ಎಲ್ಲವನ್ನೂ ಆನಂದಿಸಿದೆ.

ಹುಡುಗಿಯೊಬ್ಬಳು ಬಾಗಿಲಲ್ಲಿ ನಿಂತು, ಯಾರು ಬೇಕೆಂದು ನನ್ನನ್ನು ಕೇಳಿದಳು. ನಾನು ಶ್ಯಾಮಲಾಜೀ ಅವರನ್ನು ನೋಡಲು ಬಂದಿದ್ದೇನೆ ಎಂದು ಅವಳಿಗೆ ತಿಳಿಸಿದೆ. ಅವಳು ಅವರನ್ನು ಕರೆತರಲು ಹೋದಳು. ಆ ಮನೆ ಸಂಗೀತದಲ್ಲಿ ಮುಳುಗಿ ಹೋಗಿತ್ತು. ಹಾಗೆಯೇ ಹತ್ತು ನಿಮಿಷಗಳು ಆ ಸಂಗೀತದ ಅ­ಲೆಗಳನ್ನು ಆಲಿಸಿ ಕುಳಿತೆ. ಶ್ಯಾಮಲಾಜೀ ಅವರು ಹದಿನೈದು ನಿಮಿಷದ ನಂತರ ಬಂದು ನನ್ನ ಮುಂದೆ ಕುಳಿತರು. ನನಗೆ ಸಾಕ್ಷಾತ್ ಸರಸ್ವತಿಯೇ ಬಂದು ನನ್ನ ಮುಂದೆ ಕುಳಿತಂತಾಯಿತು. ಅವರ ಸರಳತೆ, ನನ್ನನ್ನು ಮಾತನಾಡಿಸಿದ ರೀತಿ ಹಾಗೂ ಅವರ ಮುಗ್ಧ ವ್ಯಕ್ತಿತ್ವ ಕಂಡು ಬೆರಗಾದೆ.

ಶ್ಯಾಮ­ಲಾ ಜಿ. ಭಾವೆ

ಅವರು ನನ್ನನ್ನು ಬರಮಾಡಿಕೊಂಡು ಅವರು ನಡೆಸುತ್ತಿರುವ ಸಂಗೀತ ಶಾ­ಲೆಯ ವಿವಿಧ ಕ್ಲಾಸ್‍ಗಳು, ಅವರ ಯೋಜನೆಗಳು, ಪುಸ್ತಕಗಳು ಹೀಗೆ ವಿವರವಾಗಿ ವಿಷಯ ತಿಳಿಸಿದರು.

ಶ್ಯಾಮಲಾ ಭಾವೆ ಉಭಯಗಾನ (ವಿಶಾರದೆ) ಗಾಯಕಿ ಎಂದೇ ಪ್ರಸಿದ್ಧರಾಗಿದ್ದರು. ಅಂದರೆ ಅವರು ಕರ್ನಾಟಕ ಶಾಸ್ತ್ರೀಯ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಎರಡನ್ನೂ ಚೆನ್ನಾಗಿ ಅಭ್ಯಾಸ ಮಾಡಿದ್ದರು. ಅದನ್ನು ಬೇರೆ ಬೇರೆ ಸಭೆಗಳಲ್ಲಿ ಅತ್ಯುತ್ತಮವಾಗಿ ವಿಶಿಷ್ಟರೀತಿಯಲ್ಲಿ ಪ್ರಸ್ತುತಪಡಿಸಿದ್ದರು. ಸಂಗೀತದ ಜ್ಞಾನ ಒಂದು ಸಾಗರವಿದ್ದಂತೆ. ಅದರ ಕಲಿಕೆಗೆ ಒಂದು ಜನ್ಮ ಸಾಲುವುದಿಲ್ಲವೆಂದು ಹೇಳುತ್ತಾರೆ. ಅವರು ಈ ಎರಡು ಪ್ರಕಾರಗಳನ್ನು ಅಭ್ಯಾಸ ಮಾಡಿ, ಹಾಡುತ್ತಿದ್ದರೆಂದರೆ ಅದು ಅದ್ಭುತ ಸಾಧನೆ ಎನ್ನಬಹುದು.

ಮುಂದೆ ನಾನು 1998ರಲ್ಲಿ ಮ್ಯೂಸಿಕ್‌ನಲ್ಲಿ ಎಂ.ಎ ಮಾಡುತ್ತಿದ್ದಾಗ, ನಮ್ಮ ಪ್ರಾಂಶುಪಾಲರು, ಶ್ಯಾಮಲಾ ಭಾವೆ ಅವರನ್ನು ಒಂದು ಸಂಗೀತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಅವರ ಸಂಗೀತ ಕಛೇರಿಯನ್ನೂ ಏರ್ಪಡಿಸಿದ್ದರು.

ಅವರು ಹಾಡಿದ ಭೈರವಿ ರಾಗವನ್ನು ನಾನು ಇಲ್ಲಿ ನೆನಪಿಸಿಕೊಳ್ಳುತ್ತೇನೆ. ಅತ್ಯಂತ ವಿಶಿಷ್ಟ ರೀತಿಯಲ್ಲಿ ಆ ರಾಗವನ್ನು ಪ್ರಸ್ತುತಪಡಿಸಿದ್ದರು. ಅವರು ಹಾಡಿದ ದೇವರ ನಾಮಗಳು ಹಾಗೂ ವಚನಗಳನ್ನು ಮರೆಯುವಂತಿಲ್ಲ. ಇದೊಂದು ಉತ್ತಮವಾದ ಅನುಭವ ನನಗೆ. ಅವರು ಆ ಸಂಗೀತ ಕಾರ್ಯಕ್ರಮದ ನಂತರ ಬಹಳ ಸುಂದರವಾಗಿ ಹಿಂದೂಸ್ಥಾನಿ ಶೈಲಿ ಹಾಗೂ ಕರ್ನಾಟಕ ಶೈಲಿಯಲ್ಲಿ ಒಂದೇ ರಾಗವನ್ನು ತೆಗೆದುಕೊಂಡು, ಅದರ ವ್ಯತ್ಯಾಸ ಹಾಗೂ ಹಾಡುವ ರೀತಿಯನ್ನು ವಿವರಿಸಿ ತಿಳಿಸಿಕೊಟ್ಟಿದ್ದು ನನಗೆ ಇನ್ನೂ ನೆನಪಿದೆ.

ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ನಾನು ಅವರು ಹಾಡುವ ಶೈಲಿಯನ್ನು ಗಮನಿಸುತ್ತಾ ಬರುತ್ತಿದ್ದೆ. ಮುಂದೆ 1998ರಲ್ಲಿರಾಷ್ಟ್ರೀಯ ಏಕೀಕರಣಕ್ಕಾಗಿ ದೆಹಲಿಯಿಂದ ಸ್ಪಿರಿಟ್ ಆಫ್ ಯೂನಿಟಿ ಕನ್ಸರ್ಟ್ಸ್‌ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದ್ದರು. ಇದರಲ್ಲಿ ನಾನು ಶ್ಯಾಮಲಾ ಭಾವೆ ಮತ್ತು ವಿದುಷಿ ನಾಗಮಣಿ ಶ್ರೀನಾಥ್ ಅವರ ಜುಗಲ್‌ಬಂದಿ ಸಂಗೀತ ಕಾರ್ಯಕ್ರಮವನ್ನು ಆಲಿಸಿದ್ದೆ. ಬಹಳ ಸುಂದರವಾಗಿ ಇಬ್ಬರು ಅವರವರ ಶೈಲಿಯಲ್ಲಿ ಹಿಂದೋಳ ರಾಗವನ್ನು ಹಾಡಿದ್ದರು.

ಇಬ್ಬರು ಒಟ್ಟಿಗೆ ಹಾಡಿದ ಒಂದು ಭಜನ್‌ ನನಗೆ ಈಗಲೂ ರೋಮಾಂಚನಗೊಳಿಸುತ್ತದೆ. ನಾನು ವೈಯಕ್ತಿಕವಾಗಿ ಅನೇಕ ಬಾರಿ ಶ್ಯಾಮಲಾ ಭಾವೆ ಅವರ ಸಂಗೀತ ಕಛೇರಿಗಳನ್ನು ಆಲಿಸಿದ್ದೇನೆ. ಶೇಷಾದ್ರಿಪುರಂನಲ್ಲಿ ನಡೆಯುವ ಶ್ರೀರಾಮನವಮಿ ಉತ್ಸವವಿರಬಹುದು, ಗಾಯನ ಸಮಾಜದಲ್ಲಿ ನಡೆದ ಸಂಗೀತ ಉತ್ಸವ ಇತ್ಯಾದಿಗಳಲ್ಲಿ ಕೇಳಿ ಆನಂದಿಸಿದ್ದೇನೆ. ಅವರು ಅತ್ಯುತ್ತಮ ಉನ್ನತ ಉಭಯ ಗಾಯಕಿ ಎಂದೇ
ಹೇಳಬಹುದು.

ಅವರ ದಾಸರ ಪದಗಳು ನನಗೆ ತುಂಬಾ ಇಷ್ಟ. ಸರಳ ರೀತಿಯಲ್ಲಿ ಜನರಿಗೆ ಮುಟ್ಟುವಂತೆ, ಸ್ಪಷ್ಟವಾಗಿ ಹಾಡುತ್ತಿದ್ದರು. ಉದಾಹರಣೆಗೆ ರಂಗ ಬಾರೋ, ಗೋವಿಂದ ಗೋಪಾಲ, ಮಹಾದೇವ ಶಂಭೋ ಇತ್ಯಾದಿ.

ಇನ್ನು ಅವರು ಹಾಡಿರುವ ವಚನಗಳು, ಭಜನೆಗಳು, ಅಷ್ಟಪದಿಗಳು ಲೆಕ್ಕವಿಲ್ಲ. ಅದು ಅವರಿಗೆ ನೀರು ಕುಡಿದ ಹಾಗೆ. ಚಂದನ ಚರ್ಚಿತ, ಶ್ರೀರಾಮಚಂದ್ರ ಕೃಪಾಲು ವೈಷ್ಣವ ಜನತೋ ಜಯ ಜಯದೇವ ಹರೇ, ಲಲಿತ ಲವಂಗ ಇತ್ಯಾದಿ.

ಒಮ್ಮೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಅದು ಯುವ ಕಲಾವಿದರನ್ನು ಗುರುತಿಸಿ ಅವರಿಗೆ ಸನ್ಮಾನಿಸಿ, ಪ್ರೋತ್ಸಾಹಿಸುವ ಕಾರ್ಯಕ್ರಮವಾಗಿತ್ತು. ಅದರಲ್ಲಿ ನಾನೂ ಒಬ್ಬಳಾಗಿದ್ದೆ. ಈ ಕಾರ್ಯಕ್ರಮಕ್ಕೆ ಶ್ಯಾಮಲಾ ಭಾವೆ ಅವರೇ ಮುಖ್ಯ ಅತಿಥಿಯಾಗಿದ್ದರು. ಅವರೇ ಎಲ್ಲಾ ಕಲಾವಿದರನ್ನು ಸನ್ಮಾನಿಸಿದ್ದರು! ಇದನ್ನು ಮರೆಯಲು ಸಾಧ್ಯವಿಲ್ಲ.

ಹೀಗೆ ಅವರ ಬಗ್ಗೆ ಅನೇಕ ನೆನಪುಗಳಿವೆ. ಅವರು ತನ್ನ ಇಡೀ ಜೀವನವನ್ನು ಸಂಗೀತಕ್ಕೆ ಮುಡುಪಾಗಿಟ್ಟಿದ್ದರು. ದೇಶದೆಲ್ಲೆಡೆ ಸಂಗೀತದ ಹಿರಿಮೆಯನ್ನು ಪಸರಿಸಿದ್ದರು. ಅವರ ಸಂಗೀತದ ಅಲೆಗಳು ಎಲ್ಲೆಲ್ಲೂ ಹಚ್ಚಹಸುರಾಗಿರಲಿ ಎಂದು ಆಶಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT