ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ | ಆನೆ ಬಂತೊಂದಾನೆ

Last Updated 23 ಮೇ 2020, 19:30 IST
ಅಕ್ಷರ ಗಾತ್ರ

ಆ ಮೃಗಾಲಯದ ನಿರ್ದೇಶಕ ತನ್ನ ವೃತ್ತಿಯಲ್ಲಿ ದಿಢೀರನೆ ಮೇಲಕ್ಕೆ ಏರಿದವನು. ಆತನ ಪಾಲಿಗೆ ಅಲ್ಲಿನ ಪ್ರಾಣಿಗಳು ಅವನಿಗೆ ಉದ್ಯೋಗದಲ್ಲಿ ಬಡ್ತಿ ಪಡೆಯಲು ಮೆಟ್ಟಿಲುಗಳು ಮಾತ್ರ. ತನ್ನ ಆ ಸಂಸ್ಥೆಯ ಶೈಕ್ಷಣಿಕ ಮಹತ್ವದ ಬಗ್ಗೆ ಆತನಿಗೆ ತೀರಾ ಅಸಡ್ಡೆ ಇತ್ತು. ಆದ್ದರಿಂದಲೇ ಆತನ ಮೃಗಾಲಯದಲ್ಲಿ ಜಿರಾಫೆಯ ಕತ್ತು ಅನೈಸರ್ಗಿಕವಾಗಿ ಗಿಡ್ಡವಾಗಿತ್ತು; ಬಿಳಿತಲೆಯ ಕರಡಿಗೆ ಮಲಗಲು ಬಿಲ ಇರಲಿಲ್ಲ; ಶಿಳ್ಳೆಹಕ್ಕಿಗಳೋ ಆಸಕ್ತಿಯನ್ನು ಕಳೆದುಕೊಂಡು ಯಾವಾಗಲಾದರೊಮ್ಮೆ ಮನಸ್ಸಿಲ್ಲದ ಮನಸ್ಸಿನಿಂದ ಶಿಳ್ಳೆ ಹಾಕುತ್ತಿದ್ದುವು. ಆ ಮೃಗಾಲಯಕ್ಕೆ ಶಾಲಾಮಕ್ಕಳ ತಂಡಗಳು ಶೈಕ್ಷಣಿಕ ಉದ್ದೇಶಕ್ಕಾಗಿ ಭೇಟಿಕೊಡುತ್ತಿದ್ದುವು. ಇಂತಹ ಸನ್ನಿವೇಶದಲ್ಲಿ ಮೃಗಾಲಯದಲ್ಲಿ ಈ ರೀತಿಯ ಕೊರತೆಗಳಿಗೆ ಅವಕಾಶ ಮಾಡಿಕೊಡಬಾರದಾಗಿತ್ತು ಎಂದು ಯಾರಿಗಾದರೂ ಅನ್ನಿಸುತ್ತಿತ್ತು.

ಆ ಮೃಗಾಲಯವು ಇದ್ದದ್ದು ಒಂದು ಪ್ರಾಂತೀಯ ಪಟ್ಟಣದಲ್ಲಿ. ಅದರಲ್ಲಿ ಕೆಲವು ಮುಖ್ಯವಾದ ಪ್ರಾಣಿಗಳ ಕೊರತೆ ಎದ್ದುಕಾಣುತ್ತಿತ್ತು. ಉದಾಹರಣೆಗೆ ಅಲ್ಲಿ ಆನೆ ಇರಲಿಲ್ಲ. ಬೃಹತ್ ಗಾತ್ರದ ಆನೆಗೆ ಮುನ್ನೂರು ಮೊಲಗಳು ಎಂದೂ ಬದಲಿ ಆಗಲಾರವು. ಆದಾಗ್ಯೂ ನಮ್ಮ ಪೋಲಂಡ್ ದೇಶ ಅಭಿವೃದ್ಧಿಹೊಂದುತ್ತಾ ಬಂದಹಾಗೆಲ್ಲ, ವ್ಯವಸ್ಥಿತವಾದ ರೀತಿಯಲ್ಲಿ ಆ ಕೊರತೆಗಳನ್ನು ತುಂಬುವ ಪ್ರಕ್ರಿಯೆ ಆರಂಭವಾಯಿತು. ದೇಶದ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಜುಲೈ 22ರಂದು ಹೊರಡಿಸಲಾದ ಪ್ರಕಟನೆಯೆಂದರೆ - ಆ ಮೃಗಾಲಯಕ್ಕೆ ಕೊನೆಗೂ ಒಂದು ಆನೆಯನ್ನು ತರಲಾಗುವುದು ಎಂದು. ಈ ಸುದ್ದಿಯನ್ನು ಕೇಳಿ, ತಮ್ಮ ಕರ್ತವ್ಯನಿಷ್ಠೆಗೆ ಹೆಸರಾಗಿದ್ದ ಆ ಮೃಗಾಲಯದ ಎಲ್ಲ ನೌಕರರು ಸಂಭ್ರಮಪಟ್ತರು. ಆದರೆ, ಆ ವೇಳೆಗೇ ಅವರಿಗೆ ಒಂದು ಆಶ್ಚರ್ಯದ ಸುದ್ದಿ ಕೂಡಾ ಬಂತು. ಮೃಗಾಲಯದ ನಿರ್ದೇಶಕನು ದೇಶದ ರಾಜಧಾನಿ ವಾರ್ಸಾಕ್ಕೆ ಪತ್ರ ಬರೆದು, ಆನೆಯನ್ನು ಕೊಳ್ಳುವ ಪ್ರಸ್ತಾವವನ್ನು ಕೈಬಿಟ್ಟು, ಹೆಚ್ಚು ಮಿತವ್ಯಯದ ಉಪಾಯದಿಂದ ಆನೆಯನ್ನು ಮೃಗಾಲಯಕ್ಕೆ ಪಡೆಯುವ ಯೋಜನೆಯೊಂದನ್ನು ಮುಂದಿಟ್ಟಿದ್ದನು.

ಅವನ ಪತ್ರ ಹೀಗಿತ್ತು: ‘ಈ ಆನೆಯನ್ನು ಕೊಳ್ಳುವುದರಿಂದಾಗಿ ಪೋಲಂಡಿನ ಗಣಿಕಾರ್ಮಿಕರ ಮೇಲೆ ಎಂತಹ ಆರ್ಥಿಕಭಾರ ಬೀಳಬಹುದು ಎಂಬುದನ್ನು ನಾನು ಮತ್ತು ನನ್ನ ಸಿಬ್ಬಂದಿ ಸಂಪೂರ್ಣವಾಗಿ ಮನಗಂಡಿದ್ದೇವೆ. ನಮ್ಮ ಖರ್ಚುವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ, ನಿಮ್ಮ ಸಂದೇಶದಲ್ಲಿ ಉಲ್ಲೇಖಿಸಿದ ಆನೆಯ ಬದಲು, ನಾವೇ ಆನೆಯೊಂದನ್ನು ಸಂಗ್ರಹಿಸುವ ಸೂಚನೆಯನ್ನು ನಾನು ಕೊಡುತ್ತಿದ್ದೇನೆ. ನಾವು ರಬ್ಬರ್‌ನಿಂದ ಆನೆಯನ್ನು ಮಾಡಬಹುದು. ಅದು ನಿಜವಾದ ಆನೆಯ ಗಾತ್ರದ್ದೇ ಆಗಿರುತ್ತದೆ. ಅದರಲ್ಲಿ ಗಾಳಿಯನ್ನು ತುಂಬಿಸಿ, ಹಳಿಗಳ ಮೇಲೆ ನಿಲ್ಲಿಸಲಾಗುತ್ತದೆ. ಅದಕ್ಕೆ ಆನೆಯದ್ದೇ ಬಣ್ಣವನ್ನು ಜಾಗರೂಕತೆಯಿಂದ ಬಳಿಯಲಾಗುತ್ತದೆ. ಬಹಳ ಹತ್ತಿರದಿಂದ ನೋಡಿದರೂ ಅದು ಜೀವಂತ ಆನೆ ಅಲ್ಲ ಎಂದು ಹೇಳಲು ಸಾಧ್ಯವಾಗಲಾರದು. ಆನೆಯು ಬಹಳ ಜಡಪ್ರಾಣಿ, ಅದು ಓಡುವುದಿಲ್ಲ, ಹಾರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ರಬ್ಬರ್ ಆನೆಯನ್ನು ಹಳಿಯಲ್ಲಿ ನಿಲ್ಲಿಸಿದ ಸ್ಥಳದಲ್ಲಿ ಒಂದು ಸೂಚನಾಫಲಕದಲ್ಲಿ ‘ವಿಶೇಷವಾಗಿ ಈ ಆನೆಯು ವಿಪರೀತ ಜಡಸ್ವಭಾವದ್ದು’ ಎಂದು ಬರೆದು ಇಡಲಾಗುತ್ತದೆ. ಈ ರೀತಿ ಮಾಡುವುದರಿಂದ ದೊರೆಯುವ ಉಳಿತಾಯದ ಹಣದಿಂದ ಒಂದು ಜೆಟ್ ವಿಮಾನವನ್ನು ಕೊಳ್ಳಬಹುದು ಅಥವಾ ಯಾವುದಾದರೊಂದು ಚರ್ಚ್‌ನ ಸ್ಮಾರಕವನ್ನು ಸಂರಕ್ಷಿಸಿ ಇಡಬಹುದು. ದಯವಿಟ್ಟು ಗಮನಿಸಿ, ಈ ಆಲೋಚನೆ ಮತ್ತು ಅದರ ಅನುಷ್ಠಾನ ಎರಡೂ ನಮ್ಮ ದೇಶದ ಸಾಮೂಹಿಕ ಗುರಿ ಮತ್ತು ಹೋರಾಟಕ್ಕೆ ನನ್ನ ವಿನಮ್ರವಾದ ಕೊಡುಗೆ.’

ಈ ಪತ್ರವು ಸರ್ಕಾರದ ಒಬ್ಬ ಹೃದಯಹೀನ ಅಧಿಕಾರಿಗೆ ತಲುಪಿರಬೇಕು. ಆತನೋ ಪೂರ್ಣಪ್ರಮಾಣದಲ್ಲಿ ಅಧಿಕಾರಶಾಹಿಯ ವ್ಯವಸ್ಥೆಯಲ್ಲಿ ಕೆಲಸ ಮಾಡುವವನು. ಅವನು ವಿಷಯದ ಸೂಕ್ಷ್ಮತೆಯನ್ನು ಗಮನಿಸದೆ, ಖರ್ಚು ಕಡಮೆಯಾಗುತ್ತದೆ ಎನ್ನುವ ಅಂಶವನ್ನು ಮಾತ್ರ ಪರಿಗಣಿಸಿ, ಮೃಗಾಲಯದ ನಿರ್ದೇಶಕನ ಪ್ರಸ್ತಾವಕ್ಕೆ ಒಪ್ಪಿಗೆಯನ್ನು ಕೊಟ್ಟನು. ಸಚಿವಾಲಯದ ಒಪ್ಪಿಗೆ ಸಿಕ್ಕಿದ ಒಡನೆಯೇ ಮೃಗಾಲಯದ ನಿರ್ದೇಶಕನು ರಬ್ಬರ್‌ನಿಂದ ಆನೆಯನ್ನು ಮಾಡುವ ಕೆಲಸಕ್ಕೆ ತನ್ನ ನೌಕರರಿಗೆ ಸೂಚನೆ ಕೊಟ್ಟನು.

ಆನೆಯನ್ನು ಮಾಡಲು ಅದರ ಆಕಾರದ ರಬ್ಬರಿನ ಕಳೇಬರವನ್ನು ಇಬ್ಬರು ಗಾರ್ಡ್‌ಗಳು ಎರಡು ಬದಿಗಳಿಂದ ಬಾಯಿಯಲ್ಲಿ ಗಾಳಿಯನ್ನು ಊದಿ ಉಬ್ಬಿಸುವುದು ಎಂದು ಸೂಚಿಸಲಾಯಿತು. ಈ ಇಡೀ ಕಾರ್ಯಾಚರಣೆಯನ್ನು ರಹಸ್ಯವಾಗಿ ಇಡುವುದಕ್ಕಾಗಿ ಅದನ್ನು ರಾತ್ರಿಯ ವೇಳೆಗೆ ನಡೆಸುವುದು ಎಂದು ನಿರ್ಧರಿಸಲಾಯಿತು. ಏಕೆಂದರೆ ಆ ಮೃಗಾಲಯಕ್ಕೆ ಹೊಸತಾಗಿ ಆನೆಯೊಂದು ಬರುತ್ತದೆ ಎನ್ನುವ ಸುದ್ದಿಯನ್ನು ಕೇಳಿದ್ದರಿಂದ ಆ ಪಟ್ಟಣದ ಜನರು ಅದನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದರು. ಮೃಗಾಲಯದ ನಿರ್ದೇಶಕನಂತೂ ಈ ಕಾರ್ಯಾಚರಣೆಯನ್ನು ಆದಷ್ಟು ಬೇಗನೆ ಮುಗಿಸಬೇಕೆಂದು ಒತ್ತಾಯಿಸಿದನು. ತನ್ನ ಈ ಯೋಜನೆ ಯಶಸ್ವಿಯಾದರೆ, ತನಗೆ ಬೋನಸ್ ಸಿಗಬಹುದು ಎನ್ನುವುದು ಅವನ ಅಭಿಲಾಷೆಯಾಗಿತ್ತು.

ಆ ಇಬ್ಬರು ಗಾರ್ಡ್‌ಗಳು ಕಾರ್ಖಾನೆಯ ಒಂದು ಶೆಡ್‌ನಲ್ಲಿ ಬೀಗಹಾಕಿಕೊಂಡು, ಅದರ ಒಳಗೆ ಆನೆಯ ಆ ರಬ್ಬರ್ ತೊಗಲಿಗೆ ಗಾಳಿ ಊದಲು ಶುರುಮಾಡಿದರು. ಸುಮಾರು ಎರಡು ಗಂಟೆಗಳ ಕಾಲ ಅವರಿಬ್ಬರು ಊದಿದರೂ ಆ ರಬ್ಬರ್ ತೊಗಲು ನೆಲದಿಂದ ಎರಡು ಇಂಚಿನಷ್ಟು ಕೂಡಾ ಮೇಲೆ ಎದ್ದಿರಲಿಲ್ಲ. ಅದರ ಉಬ್ಬುವಿಕೆ ಯಾವ ರೀತಿಯಲ್ಲೂ ಆನೆಯಂತೆ ಕಾಣಿಸುತ್ತಿರಲಿಲ್ಲ. ರಾತ್ರಿ ಕಳೆಯುತ್ತಾ ಬಂತು. ಹೊರಗಡೆ ಜನರ ಧ್ವನಿ ಸ್ತಬ್ಧವಾಗಿತ್ತು. ಕೇವಲ ಕತ್ತೆಗಳ ಕೂಗು ಮಾತ್ರ ಮೌನವನ್ನು ಮುರಿದಿತ್ತು. ಆಯಾಸಗೊಂಡಿದ್ದ ಆ ಇಬ್ಬರು ಗಾರ್ಡ್‌ಗಳು ಊದುವುದನ್ನು ನಿಲ್ಲಿಸಿದರು. ಆ ರಬ್ಬರ್ ಆನೆಯ ತೊಗಲಿನಲ್ಲಿ ಈಗಾಗಲೇ ತುಂಬಿಕೊಂಡಿದ್ದ ಗಾಳಿಯು ಹೊರಗೆ ಹೋಗದಂತೆ ವ್ಯವಸ್ಥೆ ಮಾಡಿದರು. ನಡುವಯಸ್ಸಿನ ಆ ಗಾರ್ಡ್‌ಗಳಿಗೆ ಈ ರೀತಿಯ ಕೆಲಸದ ಅಭ್ಯಾಸ ಇರಲಿಲ್ಲ.

ಒಬ್ಬ ಗಾರ್ಡ್ ಹೇಳಿದ: ‘ನಾವು ಈ ವೇಗದಲ್ಲಿ ಕೆಲಸ ಮುಂದುವರಿಸಿದರೆ, ಬೆಳಗ್ಗಿನ ಒಳಗೆ ಇದನ್ನು ಮುಗಿಸಲಾರೆವು. ಆನೆಗೆ ಗಾಳಿ ಊದುತ್ತಾ ನಾನು ಇಡೀ ರಾತ್ರಿಯನ್ನು ಕಳೆದೆ ಎಂದು ಮನೆಯಲ್ಲಿ ನನ್ನ ಹೆಂಡತಿಗೆ ಹೇಳಿದರೆ ಅವಳು ಖಂಡಿತ ನಂಬಲಾರಳು.’

‘ಅದು ಹೌದು.’ ಇನ್ನೊಬ್ಬ ಗಾರ್ಡ್‌ನ ಪ್ರತಿಕ್ರಿಯೆ: ‘ಆನೆಗೆ ಗಾಳಿ ಊದುವುದು ನಮ್ಮ ಕರ್ತವ್ಯದ ಭಾಗ ಅಲ್ಲ. ಇದೆಲ್ಲಾ ತಾನು ಸೈದ್ಧಾಂತಿಕ ಎಂದು ಪ್ರದರ್ಶಿಸುವ ನಮ್ಮ ನಿರ್ದೇಶಕನ ಸೋಗಿನಿಂದ’

ಅವರು ಗಾಳಿ ಊದುವ ಕೆಲಸವನ್ನು ಮುಂದುವರಿಸಿದರು. ಸುಮಾರು ಅರ್ಧಗಂಟೆ ಊದಿದ ಬಳಿಕ ಅವರಿಬ್ಬರೂ ಬಹಳ ಆಯಾಸಗೊಂಡರು. ಕೆಲಸ ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ನೆಲದಲ್ಲಿ ಬಿದ್ದುಕೊಂಡಿದ್ದ ರಬ್ಬರಿನ ಉಬ್ಬು ಸ್ವಲ್ಪ ದೊಡ್ಡದಾಗಿತ್ತು; ಆದರೆ ಅದು ಆನೆಯ ಆಕಾರವನ್ನು ತಾಳಿರಲಿಲ್ಲ.

‘ನಮಗೆ ಯಾವಾಗಲೂ ಕಷ್ಟ’ -ಮೊದಲನೆಯ ಗಾರ್ಡ್‌ನ ಉದ್ಗಾರ.

‘ಇದೊಂದು ಅಸಾಧ್ಯ ಕೆಲಸ’ - ಎರಡನೆಯ ಗಾರ್ಡ್‌ನ ಪ್ರತಿಕ್ರಿಯೆ.

‘ಸರಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ’

ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ಅವರಲ್ಲಿ ಒಬ್ಬನ ದೃಷ್ಟಿ ಕವಾಟವುಳ್ಳ ಒಂದು ಗ್ಯಾಸ್ ಪೈಪ್‌ನ ಕಡೆಗೆ ಹೋಯಿತು. ‘ಗ್ಯಾಸ್‌ನ್ನು ಆನೆಯ ರಬ್ಬರ್ ತೊಗಲಿಗೆ ತುಂಬಿಸಿ, ಆನೆಯ ಆಕಾರ ಬರಿಸಬಹುದಲ್ಲವೇ?’ ಆತ ತನ್ನ ಸಹವರ್ತಿಗೆ ಸಲಹೆಕೊಟ್ಟ.

ಸರಿ, ಪ್ರಯತ್ನ ಮಾಡೋಣ ಎಂದು ಇಬ್ಬರೂ ನಿರ್ಧಾರ ಮಾಡಿದರು. ಆನೆಯ ಆಕಾರದ ರಬ್ಬರನ್ನು ಗ್ಯಾಸ್ ಪೈಪ್‌ಗೆ ಜೋಡಿಸಿದರು. ಗ್ಯಾಸ್ ಪೈಪಿನ ಕವಾಟವನ್ನು ತೆರೆದರು. ಕೆಲವೇ ನಿಮಿಷಗಳಲ್ಲಿ ಪೂರ್ಣಪ್ರಮಾಣದ ಆನೆಯ ಆಕೃತಿಯೊಂದು ಶೆಡ್‌ನಲ್ಲಿ ಎದ್ದುನಿಂತಿತು. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅದು ನಿಜವಾದ ಆನೆಯ ಹಾಗೆಯೇ ಕಾಣಿಸುತ್ತಿತ್ತು. ಬೃಹತ್ತಾದ ದೇಹ, ಕಂಬದಂತಹ ಕಾಲುಗಳು, ದೊಡ್ಡ ಕಿವಿಗಳು ಮತ್ತು ಚಾಚಿಕೊಂಡಿರುವ ಸೊಂಡಿಲು. ಬಡ್ತಿ ಹೊಂದುವ ಮಹತ್ವಾಕಾಂಕ್ಷೆಯಿಂದ ನಿರ್ದೇಶಕ ತನ್ನ ಮೃಗಾಲಯದಲ್ಲಿ ಇರಿಸಲು ಯೋಚಿಸಿದ್ದ ಗಾಳಿಯಿಂದ ಉಬ್ಬಿಸಿದ್ದ ಆನೆಯು ಎದ್ದುನಿಂತಿತ್ತು !

‘ಫಸ್ಟ್ ಕ್ಲಾಸ್’ ಗ್ಯಾಸ್ ತುಂಬಿಸುವ ಉಪಾಯ ಹೇಳಿಕೊಟ್ಟ ಗಾರ್ಡ್‌ನ ಉದ್ಗಾರ. ‘ನಾವು ಈಗ ಮನೆಗೆ ಹೋಗಬಹುದು.’

ಮರುದಿನ ಬೆಳಿಗ್ಗೆ ಆ ಆನೆಯನ್ನು ಮೃಗಾಲಯದಲ್ಲಿ ಮಂಗಗಳ ಪಂಜರದ ಪಕ್ಕದ ಕೆಂದ್ರಸ್ಥಳಕ್ಕೆ ತರಲಾಯಿತು. ನೈಸರ್ಗಿಕವಾದ ದೊಡ್ದ ಬಂಡೆಕಲ್ಲಿನ ಮುಂದುಗಡೆ ನಿಲ್ಲಿಸಿದ ಆ ಆನೆಯು ಗಂಭೀರವಾಗಿ ಭವ್ಯವಾಗಿ ಕಾಣಿಸುತ್ತಿತ್ತು. ಆನೆಯ ಪಕ್ಕದಲ್ಲಿ ಒಂದು ಸೂಚನಾ ಫಲಕದಲ್ಲಿ ದೊಡ್ದ ಅಕ್ಷರಗಳಲ್ಲಿ ಬರೆಯಲಾಗಿತ್ತು: ‘ಈ ಆನೆಯು ಬಹಳ ಜಡಸ್ವಭಾವದ್ದು; ಚಲಿಸುವುದೇ ಇಲ್ಲ.’

ಆ ದಿನ ಬೆಳಿಗ್ಗೆ ಮೃಗಾಲಯದ ಮೊದಲ ಸಂದರ್ಶಕರೆಂದರೆ ತಂಡವಾಗಿ ಬಂದ ಸ್ಥಳೀಯ ಶಾಲೆಯ ಮಕ್ಕಳು. ಮಕ್ಕಳನ್ನು ಕರೆತಂದ ಶಾಲೆಯ ಅಧ್ಯಾಪಕ ಆನೆಯ ಬಗ್ಗೆ ಮಕ್ಕಳಿಗೆ ಪ್ರತ್ಯಕ್ಷ ಪರಿಚಯದ ಪಾಠವನ್ನು ಮಾಡಲು ಸಿದ್ಧತೆಮಾಡಿಕೊಂಡು ಬಂದಿದ್ದನು. ಆನೆಯ ಮುಂದುಗಡೆ ನಿಂತುಕೊಂಡು ಅವನು ಮಕ್ಕಳಿಗೆ ವಿವರಣೆಕೊಡಲು ಶುರುಮಾಡಿದನು:

‘ಆನೆ ಎಂಬುದು ಒಂದು ಸಸ್ಯಾಹಾರಿ ಸಸ್ತನಿ ಪ್ರಾಣಿ. ಅದು ತನ್ನ ಸೊಂಡಿಲಿನ ಸಹಾಯದಿಂದ ಎಳತಾದ ಮರಗಳನ್ನು ಎಳೆದುಹಾಕಿ, ಅದರ ಎಲೆಗಳನ್ನು ತಿನ್ನುತ್ತದೆ.’

ಶಾಲಾಮಕ್ಕಳು ಅತಿಶಯವಾದ ಮೆಚ್ಚುಗೆಯಿಂದ ಆನೆಯನ್ನು ನೋಡುತ್ತಿದ್ದರು. ಆ ಆನೆಯು ಎಳತಾದ ಮರವೊಂದನ್ನು ಎಳೆದುಹಾಕುವುದನ್ನು ನೋಡಲು ಅವರು ಕಾಯುತ್ತಿದ್ದರು. ಆದರೆ ಆ ಆನೆಯು ತನ್ನ ಹಳಿಗಳ ಮೇಲೆ ಸ್ತಬ್ಧವಾಗಿಯೇ ನಿಂತುಕೊಂಡಿತ್ತು.

ಅಧ್ಯಾಪಕನ ವಿವರಣೆ ಮುಂದುವರಿಯಿತು: ‘ಆನೆಯು ಈಗ ನಿಶ್ಶೇಷವಾಗಿರುವ ಮಹಾಗಜದ ನೇರ ಸಂತಾನಕ್ಕೆ ಸೇರಿದ್ದು. ಆದ್ದರಿಂದಲೇ ಅದು ಈಗ ಜೀವಂತವಾಗಿ ಉಳಿದಿರುವ ಅತ್ಯಂತ ದೊಡ್ದಗಾತ್ರದ ಪ್ರಾಣಿ.’

ಕುತೂಹಲಿಗಳಾದ ಆ ಮಕ್ಕಳು ಟಿಪ್ಪಣಿಗಳನ್ನು ಬರೆದುಕೊಳ್ಳುತ್ತಿದ್ದರು.

ಅಧ್ಯಾಪಕನ ವಿವರಣೆ ಮುಂದುವರಿಯಿತು: ‘‘ತಿಮಿಂಗಿಲ ಮಾತ್ರ ಆನೆಗಿಂತ ಹೆಚ್ಚು ಭಾರವಾದದ್ದು. ಆದರೆ ತಿಮಿಂಗಿಲವು ಸಮುದ್ರದಲ್ಲಿ ಜೀವಿಸುತ್ತದೆ. ಆದ್ದರಿಂದ ನಾವು ಖಚಿತವಾಗಿ ಹೇಳಬಹುದು- ‘ಭೂಮಿಯಲ್ಲಿ ಆನೆಯೇ ಅತ್ಯಂತ ಬಲಶಾಲಿ ಪ್ರಾಣಿ.’"

ಅಷ್ಟುಹೊತ್ತಿಗೆ ಸಣ್ಣಗೆ ಗಾಳಿ ಬೀಸಿತು; ಮೃಗಾಲಯದ ಮರಗಳ ಗೆಲ್ಲುಗಳು ಅಲುಗಾಡಿದವು.

ಅಧ್ಯಾಪಕನ ಮುಂದಿನ ಮಾಹಿತಿ: ‘ಪೂರ್ಣವಾಗಿ ಪ್ರೌಢಾವಸ್ಥೆಯ ಆನೆಯ ತೂಕವು ಸುಮಾರು ಒಂಬತ್ತು ಸಾವಿರದಿಂದ ಹದಿಮೂರು ಸಾವಿರ ಪೌಂಡ್‌ವರೆಗೆ ಇರುತ್ತದೆ.’

ಆವೇಳೆಗೆ ಆನೆಯು ಕಂಪಿಸಲು ತೊಡಗಿತು. ಅದು ಗಾಳಿಯಲ್ಲಿ ಮೇಲಕ್ಕೆ ಎದ್ದಿತು. ಕೆಲವು ನಿಮಿಷಗಳ ಕಾಲ ಅದು ನೆಲದಿಂದ ಮೇಲಕ್ಕೆ ಓಲಾಡಿತು. ಆದರೆ ಗಾಳಿಯ ರಭಸವು ಅದನ್ನು ಮೇಲಕ್ಕೆ ಹಾರಿಸಿಕೊಂಡು ಒಯ್ದಾಗ, ಆಕಾಶದಲ್ಲಿ ಅದರ ನೆರಳುಚಿತ್ರ ಮಾತ್ರ ಕಾಣಿಸಿತು. ನೆಲದಲ್ಲಿ ನಿಂತು ನೋಡುತ್ತಿದ್ದ ಜನರಿಗೆ ಸ್ವಲ್ಪಹೊತ್ತು ಅದರ ನಾಲ್ಕು ಪಾದಗಳ ಅಡಿಭಾಗ, ಅದರ ಗುಡಾಣ ಹೊಟ್ಟೆ ಮತ್ತು ಸೊಂಡಿಲು ಮಾತ್ರ ಕಾಣಿಸಿದವು. ಗಾಳಿಯ ಸುಳಿಯಲ್ಲಿ ಸಿಲುಕಿದ ಆನೆಯು ಬೇಲಿಯ ಮೇಲಿನಿಂದ ತೇಲುತ್ತಾ ಹೋಗಿ, ಮರಗಳ ಮೇಲ್ಗಡೆಯಲ್ಲಿ ಕಣ್ಮರೆಯಾಯಿತು. ಪಂಜರದ ಒಳಗಡೆ ಇದ್ದ ಮಂಗಗಳು ಬೆರಗಾಗಿ ಆಕಾಶದ ಕಡೆಗೆ ನೋಡುತ್ತಾ ಇದ್ದುವು.

ಆ ಆನೆಯು ಪಕ್ಕದ ಸಸ್ಯೋದ್ಯಾನದಲ್ಲಿ ಕಾಣಸಿಕ್ಕಿತು. ಅದು ಅಲ್ಲಿನ ಪಾಪಾಸುಕಳ್ಳಿಗೆ ತಾಗಿ, ಅದರ ರಬ್ಬರ್ ಪಂಕ್ಚರ್ ಆಗಿ ಅಲ್ಲಿ ಬಿದ್ದಿತ್ತು .

ಮೃಗಾಲಯದಲ್ಲಿ ಈ ದೃಶ್ಯವನ್ನು ಕಂಡ ಶಾಲಾಮಕ್ಕಳು ತಮ್ಮ ಶಾಲಾ ಶಿಕ್ಷಣವನ್ನು ಕಡೆಗಣಿಸಲು ತೊಡಗಿದರು. ಅವರು ಕಿಲಾಡಿಗಳಾಗಿ ಪರಿವರ್ತನೆಯಾದರು, ಮದ್ಯಪಾನ ಮಾಡಲು ಶುರುಮಾಡಿದರು, ಕಿಟಕಿಗಳನ್ನು ಒಡೆದರು ಎನ್ನುವ ಸುದ್ದಿ ಬಂದಿತು. ಆ ಮಕ್ಕಳು ಆಮೇಲೆ ಆನೆಗಳನ್ನು ನಂಬಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT