ಮಂಗಳವಾರ, ಜುಲೈ 5, 2022
27 °C

ಮುನವ್ವರ್ ಜೋಗಿಬೆಟ್ಟು ಬರೆದ ಕತೆ: ಸೇತುವೆ

ಮುನವ್ವರ್, ಜೋಗಿಬೆಟ್ಟು Updated:

ಅಕ್ಷರ ಗಾತ್ರ : | |

Prajavani

ಹೊರಗೆ ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೆ ಬಾಬಣ್ಣನ ತಟ್ಟಿಯ ಹೋಟೆಲಿನಲ್ಲಿ ಊರ ಮಧ್ಯ ವಯಸ್ಸಿನವರು ಖಾಲಿ ಕುಳಿತು ಕೇರಂ ಕುಟ್ಟುತ್ತಿದ್ದರು. ತವಾದಲ್ಲಿ ಮಲಗಿ ಚಳಿ ಕಾಯಿಸಿಕೊಳ್ಳುತ್ತಾ ಕಣ್ಣು ತೆರೆದು ಮಸಾಲೆ ಹೊದ್ದು ಮಲಗಿದ್ದ ಮುರು, ಬಂಗುಡೆ, ಡಿಸ್ಕೋ ಮೀನುಗಳ ವಾಸನೆ ಅಲ್ಲೆಲ್ಲಾ ನೆಲೆಸಿತ್ತು‌. ಅವುಗಳ ಬೇಗುದಿ ಹೊಗೆಯಾಗಿ ಹರಡಿ ಅಲ್ಲೇ ಕುಳಿತು ಪಟ್ಟಾಂಗ ಹೊಡೆಯುತ್ತಾ ಪಂಥ ಕಟ್ಟಿ ಆಡುತ್ತಿದ್ದವರ ತುಟಿಯಲ್ಲಿ ಬೀಡಿಯ ಚಿತಾಭಸ್ಮದಿಂದ ಹೊರಡುವ ಹೊಗೆಯೊಡನೆ ಮಿಳಿತಗೊಳ್ಳುತ್ತಿತ್ತು. ಎದುರಿನಲ್ಲಿ ಟಾರು ರಸ್ತೆ. ಜಗತ್ತೇ ಕೊನೆಯಾಗುವಂತಹ ಊರು. ಮುಂದೆ ತುಂಬಿ ಹರಿಯುವ ಹೊಳೆ. ಎದುರಿನಲ್ಲಿ ಮಾಡು ಬೀಳಿಸಿಕೊಂಡ ಹಳೆಯ ಕಟ್ಟಡ ಗೋಡೆ ತುಂಬಾ ಪಾಚಿ ಬೆಳೆದು, ಯಾವುದೋ ಚಲನ ಚಿತ್ರದ ಪೋಸ್ಟರ್ ಅರ್ಧ ಹರಿದು ನೇತು ಬಿದ್ದು ಮಳೆಯ ನೀರಿನಲ್ಲಿ ಕರಗಿ ಹೋಗುತ್ತಿತ್ತು. ಯಾರ ಶಾಪ ಈ ಊರಿಗೆ ಬಿತ್ತೋ, ಅನ್ನುವಂತೆ ಮಳೆಗಾಲ ಬಂದರೆ ತುಂಬಿ ಹರಿಯುವ ನದಿ, ದೊಡ್ಡ ಪೇಟೆಗೆ ಹೋಗಲು ಒಂದು ಸೇತುವೆಯೂ ಇಲ್ಲದೆ ಪರ್ಯಾಯ ದ್ವೀಪದಂತಾಗಿ ಬಿಟ್ಟಿತ್ತು. ಊರವರ ಕಂಗು- ಅಡಕೆ ತೋಟಗಳು ಅರ್ಧ ಮುಳುಗಿ ಮರಗಳೆಲ್ಲಾ ಗಿಡ್ಡವಾಗಿ ಬಿಡುತ್ತಿತ್ತು. ನದಿ ದಾಟಲು ಎರಡು ದೋಣಿಗಳಿದ್ದರೂ, ಜನರು ದಾಟಿಸಲು ವಿಶ್ವಾಸದಿಂದ ಕೂರುವುದು ತನಿಯನ ದೋಣಿಯಲ್ಲಿ ಮಾತ್ರ. ಅವನು ಹುಟ್ಟು ಹಾಕಿದರೆ ಕುಟುಂಬವೂ ಸಾಗುತ್ತದೆ. ಸರಕಾರದ ನಿಯಮ ಪ್ರಕಾರ ಆರೇ ಜನರು ದೋಣಿಯಲ್ಲಿ ಕುಳಿತುಕೊಳ್ಳಬೇಕಾದರೂ ತನಿಯ ಹನ್ನೆರಡು ಜನರನ್ನೂ ತುಂಬಿ ಹರಿವ ನೇತ್ರಾವತಿ ನದಿ ದಾಟಿಸುತ್ತಾನೆ. ಇತ್ತ ಹೋಗುವವರೊಂದಿಗೆ "ಅಜಿಲಮೊಗರಿನ ಬಾಬ ಫಕ್ರುದ್ದೀನ್ ಕಾಯುತ್ತಾರೆ, ಹೆದರಬೇಡಿ ಹತ್ತಿ" ಅಂದರೆ, ಅತ್ತ "ಕಡೇಶಿವಾಲಯದ ಶಿವನು ಕಾಯುತ್ತಾನೆ" ಎಂದು ಗುಡಿಗೆ ನಮಸ್ಕಾರಗೈದು ಓಲಾಡುವ ದೋಣಿಗೆ ಹುಟ್ಟು ಹಾಕುತ್ತಾ ಪ್ರಯಾಣಿಕರಲ್ಲಿ ಧೈರ್ಯ ತುಂಬುತ್ತಾನೆ. ಎರಡೂ ಊರಿಗೂ ಸಂಬಂಧ ಕಲ್ಪಿಸಲು ಊರವರು ಹರಸಾಹಸ ಪಟ್ಟು ಸೇತುವೆಯೇನೋ ಸರಕಾರ ಮಂಜೂರು ಮಾಡಿತ್ತಾದರೂ.ಗ್ರಾಮ ಪಂಚಾಯತ್, ಅಧಿಕಾರಿಗಳು, ಮೇಲುಸ್ತುವಾರಿಗಳು ಎಂದು ಹಣದ ಪಾಲು ತಿಂದು ಮುಗಿಸಿ ಐದು ವರ್ಷವಾದರೂ ಕೆಲಸ ಅರ್ಧಕ್ಕರ್ಧ ಮುಗಿಸಿ ಇನ್ನು ಹತ್ತು ವರ್ಷಕ್ಕಾದರೂ ಆಗದು ಎಂಬಷ್ಟು ತಡವಾಗಿ ಕಾಮಗಾರಿ ಮಾಡಿ ಬಿಟ್ಟಿದ್ದರು. ಕಾಮಗಾರಿ ತಡವಾದಷ್ಟು ತನಿಯನಿಗೆ ಖುಷಿ. ಅಷ್ಟೂ ದಿನವೂ ದೋಣಿ ಸಾಗಿಸಿ ಜೀವನ ನಡೆಸಬಹುದೆಂಬ ಭರವಸೆ.

ತುಂಬಿದ್ದ ಬಾಬಣ್ಣನ ಹೋಟೇಲಿನ ಬದಿಗೆ ಇಳಿಸಿ ಕಟ್ಟಿದ್ದ ಟರ್ಪಾಲಿನ ಕೊನೆಗೆ ಉದುರುತ್ತಿದ್ದ ನೀರ ಧಾರೆಗೆ ಕೈ ಇಟ್ಟು ಮುಖಕ್ಕೆ ಸುಮ್ಮನೆ ರಾಚಿಸುತ್ತ ನಿಂತಿದ್ದ ಸಪೂರ ದೇಹದ ಕಪ್ಪು ಮನುಷ್ಯ ತನಿಯ. ಜೋರು ಮಳೆಗೆ ದೋಣಿಗೆ ಹತ್ತುವವರೂ ಇರುವುದಿಲ್ಲ. ಬರಲಿರುವವರೆಲ್ಲಾ ಈಗ ಮಳೆ ನಿಲ್ಲುತ್ತದೆಯೆಂದು ನಂಬಿ ಬಾಬಣ್ಣನ ಮೀನು ಹೋಟೇಲಿನಲ್ಲಿ ಕೇರಂ ಆಡುತ್ತ ಕುಳಿತು ಬಿಟ್ಟಿದ್ದಾರೆ. ಸುಮ್ಮನೆ ಮಳೆಯಲ್ಲಿ ಒದ್ದೆಯಾಗಿ ಯಾಕೆ ಜ್ಚರ ಬರಿಸಿಕೊಳ್ಳ ಬೇಕೆಂದು ತನಿಯ ಅವರ ಆಟ ಮುಗಿಯುವವರೆಗೂ ಮುಗಿಲು ಚಿತ್ರಿಸಿದ ಕಾಮನ ಬಿಲ್ಲು ನೋಡುತ್ತಾ ಪರವಶನಾಗಿದ್ದ.

ಅಷ್ಟರಲ್ಲೇ ಮಳೆಯಿಂದ ಮಬ್ಬಾದ ಟಾರು ರಸ್ತೆಯಲ್ಲಿ ಗೂಟದ ಕಾರಿನ ಹಿಂದೆ ನಾಲ್ಕೈದು ಪೋಲಿಸು ಜೀಪು ಬಂದು ನಿಂತಿರಬೇಕು. ಎತ್ತಿ ಕಟ್ಟಿದ ಪಂಚೆಯನ್ನು ತನ್ನ ಸಣಕಲು ಕಾಲುಗಳ ಮೇಲೆ ಇಳಿ ಬಿಟ್ಟ ತನಿಯ ಗರಬಡಿದವನಂತೆ ನಿಂತು ಬಿಟ್ಟ. ಈ ಊರಿಗೆ ಪೋಲಿಸರು, ಗೂಟದ ಕಾರುಗಳೆಲ್ಲಾ ತುಂಬಾ ಅಪರೂಪ. ಕ್ರೈಂ ಕೇಸ್ಗಳಿಗಳಾದರೆ ಮಾತ್ರ ಪೋಲಿಸರು ಬರುತ್ತಾರೆಂದು ನಂಬುವ ಊರದು. " ಧನೀ ಪೋಲಿಸ್, ಪೋಲಿಸ್..." ಎಂದು ಮೆಲ್ಲ ಸ್ವರದಲ್ಲಿ ಎಚ್ಚರಿಸಿದ್ದು ಕೇಳಿದಾಗಲೇ ಕೇರಂ ಆಟ ನಿಂತು ಹೋಗಿ, ಬಾಬಣ್ಣನ ಸಿಗರೇಟು ಪ್ಯಾಕುಗಳು ಕೂಡ ಟೇಬಲ್ ಒಳಗಡೆ ಅವಿತುಕೊಂಡು ಬಿಟ್ಟಿದ್ದವು. ಬಿರು ಮಳೆಯಲ್ಲಿ ಟಾರು ರಸ್ತೆ ಮುಕ್ತಾಯಗೊಂಡಲ್ಲಿ ಕಾರು ನಿಂತಿತು. ಅಷ್ಟರಲ್ಲಿ ಹಿಂದಿನ ಡೋರು ತೆರೆದು ಕೊಡೆಯೊಂದು ಹೊರಬಂದು ಎದುರಿನ ಸೀಟಿನ ಬಳಿ ನಿಂತಿತು. ಮೆಲ್ಲಗೆ ಎದುರಿನ ಬಾಗಿಲು ತೆರೆಯಿತು. ಬಿಳಿ ವಸ್ತ್ರಧಾರಿ ಕಾರಿನಿಂದಿಳಿಯುವುದೂ ಕಂಡಿತು. ಅದರ ಬೆನ್ನಿಗೆ ರಕ್ಷಣೆಗೆಂದು ಬಂದ ಪೋಲಿಸರು ಜೀಪಿನಿಂದಿಳಿದು ಬಿಳಿ ವಸ್ತ್ರಧಾರಿ ಹಿಂದೆ ನಡೆಯುತ್ತಾ ಹೋಟೇಲ್ ಬಳಿ ಬಂದರು. ಅಷ್ಟರಲ್ಲೇ ಕೇರಂ ಆಡುತ್ತಿದ್ದವರೆಲ್ಲಾ ಏನೂ ಆಗದಂತೆ ಹೋಟೆಲ್ ಬಾಗಿಲ ಬಳಿ ನಿಂತು ಇರುವಷ್ಟೂ ಹಲ್ಲುಗಳನ್ನು ಬಿಟ್ಟು ದಿವ್ಯ ಸ್ವಾಗತ ಕೋರುತ್ತಿದ್ದರು.ಆ ಬಿಳಿ ವಸ್ತ್ರಾಧಾರಿಯನ್ನು ಎಲ್ಲರೂ ಬಲ್ಲರು. ಅವನು ಊರಿನ ಈಗಿನ ಶಾಸಕ ಜನಾರ್ಧನ. ಗೂಟದ ಕಾರು ಬರುವುದಿದ್ದರೆ ಊರವರಿಗೆ ಸತ್ಯವೊಂದು ಗೊತ್ತೇ ಇದೆ. 'ಓಟು ಬಂದಿದೆ. ಊರು ಸಂಧಿಸಲು ಸೇತುವೆಯ ಹೊಸ ಭರವಸೆಯೂ ಬರುತ್ತದೆ. ಕೊನೆಗೂ ಏನೇನೋ‌ ಕಾರಣಗಳಲ್ಲಿ ಕೊನೆ‌ ಮೊದಲಿಲ್ಲದೆ ಹಾಗೆಯೇ ಉಳಿದು ಬಿಡುತ್ತದೆ.'

ಸುಮಾರು ಇಪ್ಪತ್ತು ವರ್ಷ ಸಂದರೂ ಮುಗಿಯದ ಊರವರ ಈ ಅಹವಾಲು ಊರಿಗೆ ಯಾರೋ ಹಿರಿಯರಿಟ್ಟ ಶಾಪದಂತೆ ಅಭಿವೃದ್ಧಿಯಾಗದೆ ಉಳಿದು ಬಿಟ್ಟಿತ್ತು.

ಆ ಮಳೆಯಲ್ಲೇ ನಡೆದುಕೊಂಡ ಬಂದ ಜನಾರ್ಧನ ಹೋಟೇಲಿನ ಬಾಗಿಲ ಅಷ್ಟೂ‌ ಜನರನ್ನು ನೋಡಿ ನಮಸ್ಕರಿಸಿದ. ಅವನ ಮೀಸೆಯ ಮಧ್ಯೆ ತೇಲುವ ಕಿರುನಗೆಗೆ ಮತ ಕೊಡಬೇಕೆಂಬ ಅಪೇಕ್ಷೆಯೇ ಎಂಬುವುದರಲ್ಲಿ ಎರಡು ಮಾತಿಲ್ಲ. " ಅಹ...ಅಹ್" ಎಂದು ಗಂಟಲು ಸರಿಪಡಿಸಿದವನೆ, "ಈ ಬಾರಿ ಖಂಡಿತಾ ಸೇತುವೆ ಪೂರ್ತಿಯಾಗುತ್ತೆ?. ಓಟು ಒತ್ತುವಾಗ ಸೇತುವೆ ಚಿಹ್ನೆ ಮರೆಯದಿರಿ" ಅಂತ ಕೈ ಬೀಸಿ ಹೊರಟವನ ಹಿಂದೆ ಕಿಸಕ್ಕನೆ ಜಾರಿದ ಬಾಬಣ್ಣನ ನಗೆ ಮಳೆಯ ಸದ್ದಿಗೆ ಜೋರಾಗಿ ಕೇಳಿಸದಿದ್ದರೂ ಅಲ್ಲೆಲ್ಲಾ ಸಾಂಕ್ರಾಮಿಕವಾಗಿ ಹರಡಿ ನಗೆಗಡಲನ್ನೇ ನಿರ್ಮಿಸಿದ್ದು ಸುಳ್ಳಲ್ಲ. ಪ್ರತೀ ಬಾರಿಯೂ ಸೇತುವೆ ಕಾಮಗಾರಿ ವಿಳಂಬಗೊಂಡಾಗ ಊರವರೆಲ್ಲರೂ ಬೇಸರಪಟ್ಟರೂ ಖುಷಿಪಟ್ಟಿದ್ದು ಆ ಊರಿನ ಒಂದೇ ಜೀವ; ತನಿಯ ಮಾತ್ರ. ವಿಳಂಬ ಹೊಂದಿದಷ್ಟೂ ದೋಣಿಯ ಕಾಸು ಹೊಟ್ಟೆ ಹೊರೆಯುತ್ತಿತ್ತು.

ಕೆಸರಿನಿಂದ ರಾಡಿಯಾದ ಆ ರಸ್ತೆಯಲ್ಲಿ ಗೂಟದ ಕಾರುಗಳು ತೆವಳಿಕೊಂಡು ದೂರವಾದಾಗ, ಮತ್ತೇ ಕೇರಂ ಆಟ ಮುಂದುವರಿಯಿತು. ಬಾಬಣ್ಣನ ಮೀನಿನ ವಾಸನೆ ಆ ರುಮು ರುಮು ಮಳೆಗೆ ಹೊಟ್ಟೆಯನ್ನು ಕೆರಳಿಸಿ ಬಿಟ್ಟಿತ್ತು. ತನಿಯ ಅನಿಯಂತ್ರಿತವಾಗಿ "ಒಂದು ಬೂತಾಯಿ ಕೊಡಿ, ಬಾಬಣ್ಣ" ಅಂತ ಮೀನು ಕೊಂಡು ಸೊಂಟದಲ್ಲಿ ಅಡಗಿಸಿಟ್ಟಿದ್ದ ಈಚಳು ಕಳ್ಳನ್ನು ಲೋಟಕ್ಕೆ ಸುರುವಿಕೊಂಡು "ಸೊರ್ರ್" ಎಂದು ಎಳೆದೆಳೆದು ಕುಡಿದ. ಬೂತಾಯಿಯ ಕಳೇ ಬರಹವೂ ಉಳಿಯದಂತೆ ಕಬ್ಬಿನ ರಸ ಮಾಡುವ ಮಿಷಿನಿನಂತೆ ಜಗಿದು, ಜಳ್ಳಾದ ಉಚ್ಪಿಷ್ಠವನ್ನು ಅಲ್ಲೇ ಬಿಡಾರ ಹೂಡಿದ್ದ ಅಬ್ಬೇಪಾರಿ ಬೆಕ್ಕಿಗೆ ಉಗಿದ. ಆ ಗಡುವ ಬೆಕ್ಕು ಖುಷಿಯಿಂದ ಓಡಿ ಬಂದು " ಹಾಳಾದವನೇ, ಮೀನಿನ ಮುಳ್ಳನ್ನೂ ಬಿಡುವುದಿಲ್ಲವಲ್ಲ ನೀನು" ಅಸಡ್ಡೆಯಿಂದ ಮೂಗು ಮುರಿದು ಮೂಲೆಗೆ ಸರಿಯಬೇಕಾದರೆ, "ದನಿ ನನ್ನ ಲೆಕ್ಕಕ್ಕೆ ಮೀನು ಬರೆಯಿರಿ" ಎಂದು ತನಿಯ ದೋಣಿಯ ಕಡೆಗೆ ಹೊರಟು ಬಂದಿದ್ದ.ಆಗಲೇ ಹೊತ್ತು ಮೀರಿತ್ತು. ಇನ್ನೇನು ಕತ್ತಲಾದರೆ ಕೇರಂನಲ್ಲಿ ಸೋತವರು, ಗೆದ್ದವರೂ ದೋಣಿ ಹತ್ತುತ್ತಾರೆ. ತಲೆಗೆ ಹತ್ತು ರೂಪಾಯಿಯಂತೆ ಸಿಕ್ಕರೆ ಅದಕ್ಕಿಂತ ಖುಷಿ ಬೇರೇನಿದೆ. ತನ್ನ ಆ ದಿನದ ದೆಸೆಯನ್ನು ನೆನೆದು ಕೊಂಡು ಕತ್ತಲೆಗೆ ದೋಣಿಗಾಗಿ ಇಡುತ್ತಿದ್ದ ಸೀಮೆ ಎಣ್ಣೆ ಲ್ಯಾಂಪನ್ನು ಬೆಂಕಿ ಕಡ್ಡಿ ಗೀರಿ ಬೆಳಗಿಸಿದ. ಅಲ್ಲೆಲ್ಲಾ ಬೆಳಕು ಆವರಿಸಿ, ಅದರ ಪ್ರತಿಫಲನವೂ ನದಿಗೆ ಬಿದ್ದು ಒಂದಿಷ್ಟು ಬೆಳಕಾಯಿತು. ಇದಕ್ಕೂ ನನಗೂ ಯಾವ ಸಂಬಂಧವೂ ಇಲ್ಲವೆಂದು ಜೀರುಂಡೆ, ಕಪ್ಪೆಗಳಾದಿಗಳ ಹಿಮ್ಮೇಳ ಜೋರಾಗಿತ್ತು.

ತನಿಯನಿಗೆ ಊರಿನಲ್ಲಿ ಅವನದೇ ಆದ ಸ್ಥಾನವಿದೆ. ಈಜು ಬಲ್ಲವನಾದ ತನಿಯ, ಊರ ಯಾವ ಕೆಲಸಕ್ಕೂ ಸೈ. ಊರ ಬಾವಿಗೆ ಬೆಕ್ಕು, ಕೋಳಿ ಬಿದ್ದರೆ ಓಡಿ ಬರುವವ, ಆತ್ಮ ಹತ್ಯೆ ಮಾಡಲು ಹೊರಟವಳೊಬ್ಬಳು ನದಿಗೆ ಹಾರಿದಾಗಲೂ ರಕ್ಷಣೆ ಮಾಡಿದವನು ತನಿಯ. ಊರ ಯಾವ ಗಣ್ಯರ ಮನೆಗೂ ಹಬ್ಬ ಹರಿದಿನಗಳಲ್ಲಿ ತನಿಯನಿಗೊಂದು ಕರೆ ಇದ್ದೇ ಇರುತ್ತೆ. ಬೇಸಿಗೆಯಲ್ಲಿ ನೀರು ಬತ್ತಿದರೆ ದೋಣಿಗೆ ಜನ ಇರುವುದಿಲ್ಲ. ಆ ದಿನಗಳಲ್ಲಿ ತೋಟಾ ಹಾಕಿಯೋ,‌ಗಾಳ ಇಕ್ಕಿ ಮೀನು ಹಿಡಿಯಲು ತನಿಯ ಹನುಮಗುಂಡಿಗೂ,‌ಮಾಕಲಬೆ ಗುಂಡಿಗೋ‌ ಹೋಗುತ್ತಾನೆ, ಮೀನು ಸಿಕ್ಕರೆ ಅವನಿಗೆ ತಕ್ಕಷ್ಟು ಹುರಿದು ತಿನ್ನುತ್ತಾನೆ. ಉಳಿದರೆ ಯಾರಿಗಾದರೂ ಮಾರಿ ಹಣಗಳಿಸುತ್ತಾನೆ.‌ಒಟ್ಟಿನಲ್ಲಿ ಈ ನೇತ್ರಾವತಿ‌‌ ನದಿಯಲ್ಲಿ ಮೀನು-ಕಪ್ಪೆಗಳ ಜೊತೆ ತನಿಯನೂ ಒಂದು ಜಲಚರವೆಂದರೆ ತಪ್ಪಾಗದು.

ಆ ವರ್ಷವೂ ಚುನಾವಣಾ ಫಲಿತಾಂಶ ಬಂತು. ಮತದಾರರು ಗೆಲ್ಲುವ ಕುದುರೆಯ ಬಾಲವನ್ನೇ ಹಿಡಿದರು. ತನಿಯನಿಗೂ ಇದ್ಯಾವುದರ ಗೊಡವೆಯೇ ಇಲ್ಲ. ನದಿ ಇದ್ದರೆ ಸಾಕು. ಈ ರಾಜಕೀಯ, ಪಂಚಾತಿಗೆ ಯಾವುದೂ ಅವನಿಗೆ ಆಗಿ ಬರುವುದಿಲ್ಲ. ಊರಿಗೆ ಸಾಧ್ಯವಾದಷ್ಟು ಉಪಕಾರವನ್ನೇ ಕೊಟ್ಟು ಅವನ ಬದುಕು ಸರಿದೂಗಿಸುತ್ತಿದ್ದವನಿಗೆ ಯಾವೊಬ್ಬನ ತಂಟೆ- ತಕರಾರುಗಳು ಬೇಕಿರಲಿಲ್ಲ. ಆದರೆ ತನಿಯನ ಕಷ್ಟಕಾಲ ಪ್ರಾರಂಭಗೊಂಡವು.

ಇತ್ತೀಚೆಗೆ ಮಳೆಗಾಲ ಮುಗಿದ ಬೆನ್ನಿಗೆ ಊರಿನ ರಸ್ತೆ ಅಗಲೀಕರಣ ನೆಪದಲ್ಲಿ ರೋಲರ್, ಟಿಪ್ಪರ್ಗಳ ದಂಡು ಧಾವಿಸತೊಡಗಿತು. ಬಾಬಣ್ಣನ ಹೊಟೇಲನ್ನು ಹೊಸ ಡಾಂಬಾರು ರಸ್ತೆಗಾಗಿ ಅಗಲೀಕರಣ ಎಂಬ ನೆಪ ತಿಂದು ಹಾಕಿತು. ಒಂದಿಷ್ಟು ಬಡವರ ತೋಟವೂ ರಸ್ತೆಗೆ ಹೋಯಿತು. ಖುಷಿಗೆಂದು‌ ಮೀನು ತಿನ್ನಲಾದರೂ, ಹರಟುವುದಕ್ಕಾದರೂ ದಡಕ್ಕೆ ಬರಲು ತನಿಯನಿಗೆ ಎಡವಿಲ್ಲದಾಗಿ ತನಿಯ ನದಿಯಲ್ಲೇ ಧ್ಯಾನಸ್ಥನಾದ.

ಅದೊಂದು ದಿನ ಗೂಟದ ಕಾರಿನಲ್ಲಿ ಜನಾರ್ಧನ ಬಂದಿಳಿದ. ಜೊತೆಗೆ ನೀಟಾಗಿ ಡ್ರೆಸ್ಸು ಹಾಕಿದ್ದವರೂ ಬಂದರು. ನಡು ನೀರಲ್ಲಿ ಮೀನು ಹಿಡಿಯಲು ಬಂದಿದ್ದ ತನಿಯ ಕೈಯಾಡಿಸುವುದು‌ ಕಂಡು ಬೇಗ ಬೇಗನೆ ಆ ಕಡೆಗೆ ಹುಟ್ಟು ಹಾಕಿದ. ಜನಾರ್ಧನ ಮತ್ತು ಸಂಗಡಿಗರು ದೋಣಿ ಹತ್ತಿದರು. " ಸ್ವಲ್ಪ ನದಿಯನ್ನು ಸುತ್ತು ಹಾಕಿಸು" ಎಂದು ಹೇಳಿದ ಜನಾರ್ಧನ ಬಂದವರ ಜೊತೆ ಮಾತು ಮುಂದುವರಿಸಿದ.‌ಇಂಗ್ಲೀಷು-ಹಿಂದಿ ಮಿಶ್ರಿತವಾಗಿ ಮಾತನಾಡುತ್ತಿದ್ದ ಅವರ ಮಾತುಕತೆಯಲ್ಲಿ ಅಲ್ಲಲ್ಲಿ ಗುರುತು ಮಾಡಲು ಹೇಳುವಂತೆ ಅವನಿಗೆ ಅನಿಸಿತು. ಅವರ ಯೋಜನೆಗಳು ಸರಿಯಾಗಿ ಗಮನಿಸಿದರೆ ಅಲ್ಲಿ ಸೇತುವೆ ಬರುವ‌ ಎಲ್ಲಾ‌ ಸಾಧ್ಯತೆಗಳು ನಿಚ್ಚಲವಾಗಿದ್ದವು. ತನಿಯ ಹೇಳಿಕೊಳ್ಳಲಾಗದ ಸಂಕಟದೊಂದಿಗೆ ತನ್ನ ಭವಿಷ್ಯದ ಬಗ್ಗೆ ಚಿಂತಾಕ್ರಾಂತನಾಗಿ ಹುಟ್ಟು ಹಾಕುತ್ತಿದ್ದ. ಅವರ ಮಾತು ಕತೆ ಮುಗಿಯಿತಿರಬೇಕು. ಬದಿಗೆ ತಿರುಗಿಸೆಂದು‌ ಕೈ ಸಣ್ಣೆಯ ಮೂಲಕ ಜನಾರ್ಧನ ಸೂಚಿಸಿದ.‌ತನಿಯನ ಬದುಕಿನ ತೇಲುವ ದೋಣಿ ಬದಿಗೆ ಸರಿಯುತ್ತಿತ್ತು. ಎಲ್ಲರೂ ದೋಣಿಯಿಂದಿಳಿದರು. ಜನಾರ್ಧನ ಬೆಚ್ಚಗಿನ ನೂರರ ನೋಟೊಂದನ್ನು ತನಿಯನ ಕಿಸೆಗೆ ತುರುಕಿ " ಬರಲಾ?" ಎಂದು ಕೇಳಿ ಉಳಿದವರನ್ನು‌ ಕಟ್ಟಿಕೊಂಡು ಕಾರಿನಡೆಗೆ ನಡೆದ. ಬದುಕು ಮುಗಿಸುವ ಕೊನೆಯ ಕಾಸಿದು ಎಂದನಿಸಿತು ತನಿಯನಿಗೆ. ಆ ಗರಿ ನೋಟನ್ನು ಸೊಂಟಕ್ಕೆ ತುರುಕಿಕೊಂಡು ನದಿಯ ಮಧ್ಯಕ್ಕೆ ಹುಟ್ಟು ಹಾಕಿದ‌.ಆ ದಿನ ಪೂರ್ತಿ ನೀರಲ್ಲೇ ಕಳೆದ. ಅವನ ಮನಸ್ಸಿನೊಳಗಿನ ಹೋಯ್ದಾಟ, ಸಂಕಟವನ್ನು ಒಬ್ಬನೇ‌ ನದಿಯಲ್ಲಿ ಹೇಳಿಕೊಂಡು ಅತ್ತ.

ಮರು ದಿನ ದೊಡ್ಡ ಮಿಷಿನ್ಗಳು, ಟ್ರೈಲರ್ಗಳು ನದಿಯ ಬಳಿಗೆ ಬಂದವು. ದೊಡ್ಡ ಶಬ್ದ ಮಾಡುತ್ತಾ ನದಿಯನ್ನು‌ ಕೊರೆಯ ತೊಡಗಿದವು. ಮೂರು ದಿನಗಳಲ್ಲಿ‌ ಜೇಸಿಬಿಗಳು‌ ಬಂದು‌ ಮಣ್ಣನ್ನು ರಾಶಿ ಮಾಡಿ ಸುರುವತೊಡಗಿತು.‌ ತನಿಯ ಒಬ್ಬನೇ ಕುಳಿತು ನದಿಯನ್ನು ನೋಡಿ ಅಳತೊಡಗಿದ. ನದಿಯ ಚಿತ್ರಣವೇ ಬದಲಾಗಿ ನೀರೆಲ್ಲಾ ರಾಡಿಯಾಗಿ ರಕ್ತ ವರ್ಣದಂತೆ ಗೋಚರಿಸಿದರೆ, ತನಿಯ 'ನದಿ ಅಳುತ್ತಿದೆ' ಎಂದೇ ವ್ಯಾಖ್ಯಾನ ಹೇಳಿದ. ಇನ್ನೊಂದು ವಾರದಲ್ಲಿ ಪಿಲ್ಲರ್ ಹಾಕುವ ರೂಪುರೇಷೆಗಳು ತಯಾರಾಯಿತು. ಕೆಲವೇ ದಿನಗಳಲ್ಲಿ ಅಲ್ಲೊಂದು ದೊಡ್ಡ ಜನಾರ್ಧನನ ಕೈ ಮುಗಿದು ನಗುವ ಕಟೌಟ್ ಬಿತ್ತು. ಇಡೀ ಜಗತ್ತೇ ತನಿಯನಿಗೆ ತಿರುಗಿ ಬಿದ್ದಂತೆ ಅನಿಸತೊಡಗಿತು. ಖಿನ್ನನಾಗಿ ಎಲ್ಲಿಗೂ ಹೋಗದೆ, ಒಬ್ಬಂಟಿ ನದಿಯಲ್ಲಿ ಕಾಲ ಕಳೆಯತೊಡಗಿದ.

ಆ ದಿನ ಪಿಲ್ಲರ್‌ಗಳು ಪೂರ್ಣಗೊಂಡು ಸೇತುವೆಗೆ ಅಡ್ಡ ಸ್ಲಾಬ್ ಹಾಕುವ ದಿನ. ಜನಾರ್ಧನ ಕಾರು ಬಂದು‌ ನಿಂತಿತು. ಒಂದಿಬ್ಬರು ಇಳಿದಾದ ಬಳಿಕ, ಕಾವಿ ಉಟ್ಟ ಸನ್ಯಾಸಿಯೊಬ್ಬ ಇಳಿದ. ದೂರದಲ್ಲೇ ಕುಳಿತು ಗಾಳ ಹಾಕುತ್ತಿದ್ದ ತನಿಯ ಅವರನ್ನೇ ದಿಟ್ಟಿಸುತ್ತಿದ್ದ. ಸುಮಾರು ಹೊತ್ತು ಅವರು ಸೇತುವೆಯ ಬದಿಯಲ್ಲಿ ನಿಂತು ಗಹನವಾಗಿ ಚರ್ಚಿಸುತ್ತಿದ್ದರು. ಜನಾರ್ಧನ ಏನೆನೋ ಗಾಳಿಯಲ್ಲಿ ಕೈ ಬೀಸಿ ಫೋನಿನಲ್ಲಿ ಮಾತನಾಡುತ್ತಿದ್ದ. ಸ್ವಲ್ಪ ಹೊತ್ತಿನಲ್ಲಿ ಹಿಂದಿನಿಂದ ಕಪ್ಪು ಬಣ್ಣದ ಓಮಿನಿ ಕಾರೊಂದು ಶರವೇಗದಲ್ಲಿ ನುಗ್ಗಿತು. ನಾಲ್ಕೈದು ಗೂಂಡಾಗಳು ಕಾರಿನಿಂದಿಳಿದರು. ಕಣ್ಣಿಗೆ ಬಟ್ಟೆ ಕಟ್ಟಿದ ಯಾವುದೋ ಸಣ್ಣ ಬಾಲಕನನ್ನು ತಂದು ಇಳಿಸಿದರು. 'ಇಲ್ಲೇನೋ ಅಪಾಯ ಸಂಭವಿಸಲಿದೆಯೆಂದು' ತನಿಯನ ಸುಷುಪ್ತಿಯೊಂದು ಒತ್ತಿಹೇಳತೊಡಗಿತ್ತು. ನನ್ನ ಬದುಕು ಈ ಸೇತುವೆ ಉದ್ಘಾಟನೆಗೊಳ್ಳುವುದರೊಳಗಾಗಿ ಮುಗಿದು ಹೋಗಲಿದೆ. ನಿಷ್ಪಪ್ರಯೋಜಕ ಬಾಳು ಯಾರಿಗಾದರೂ ಸಾರ್ಥಕವಾಗಲೇ ಬೇಕು. ಬಹುಶಃ ಆ ಮಗುವನ್ನು ಇವರು ಕೊಲ್ಲಬಹುದು, ಇಲ್ಲದಿದ್ದರೆ ಈ ಪರಿಸ್ಥಿತಿ ಏನಾದರೂ ಅಪಾಯವನ್ನು ತಂದೊಡ್ಡಬಹುದು ಎಂಬುವುದು ತನಿಯನ ಲೆಕ್ಕಾಚಾರ. 'ಆದದ್ದಾಗಲಿ ಈ ಬಾಲಕನ್ನು ರಕ್ಷಿಸಲೇ ಬೇಕು' ಎಂದು ತೀರ್ಮಾನಿಸಿ ತನಿಯ ಮೆಲ್ಲಗೆ ಮರೆಯಿಂದ ಹೊರ ಬಂದ. ಅಷ್ಟರಲ್ಲೇ ಒಬ್ಬ ಕಾರಿನಿಂದ ಉದ್ದ ತಲವಾರೊಂದು ತಂದು ಸನ್ಯಾಸಿಯ ಕೈಗೆ‌ ಕೊಟ್ಟ. 'ಹೊತ್ತು‌ ಮೀರಿತು' ಎಂದು ತಿಳಿಯುವಷ್ಟರಲ್ಲೇ ತನಿಯ ಚಂಗನೆ ಹಾರಿ, ಜೋರಾಗಿ ಬೊಬ್ಬೆ ಹಾಕತೊಡಗಿದ.

ನಮ್ಮನ್ನು ಯಾರೋ ನೋಡಿದ್ದಾರೆ ಎಂದು ಹೆದರಿದ ಗುಂಪು ಚದುರುವಷ್ಟರಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿದ ಬಾಲಕ ಯದ್ವಾ ತದ್ವಾ ಓಡತೊಡಗಿದ. ಅವನನ್ನು ತಡೆಯಲು ಇನ್ನಿಬ್ಬರು ಬರುವಷ್ಟರಲ್ಲಿ ತನಿಯ ಇನ್ನೂ ಜೋರಾಗಿ ಕಿರುಚಿಕೊಂಡ. 'ಪರಿಸ್ಥಿತಿ ಕೈ ಮೀರಿತು' ಅನ್ನುವಷ್ಟರಲ್ಲಿ ಅವರು ಹುಡುಗನನ್ನು ಬಿಟ್ಟು‌ ಕಾರು ಏರಿ ಹೊರಟು ಬಿಟ್ಟರು. ಹುಡುಗ ಅಡ್ಡ ದಾರಿಯಲ್ಲಿ ಓಡಿಕೊಂಡು ಬಂದಾಗ ತನಿಯ ಎದುರ್ಗೊಂಡ. ಅವನ ಕಣ್ಣಿಗೆ ಕಟ್ಟಿದ ಬಟ್ಟೆ ಅದಾಗಲೇ ಬಿಚ್ಚಿ ಹೋಗಿತ್ತು. ಪಿಳಿ ಪಿಳಿ ನೋಡುತ್ತಿದ್ದ ಆ ಹುಡುಗ, ಯಾವುದೋ ಹಿಂದಿ‌ ಮಾತನಾಡುವ ಬಾಲ ಕಾರ್ಮಿಕನಂತಿದ್ದ. ಬಾಷೆ ಬರದವನ ಜೊತೆ ಏನು ಮಾತು. ಮೂಕರಂತೆ ಇಬ್ಬರು ಕಣ್ಬಾಷೆಯಲ್ಲೇ ಸಂಭಾಷಿಸಿದರು. ಅಷ್ಟು‌ಹೊತ್ತಿಗೆ ಎರಡೂ ಕಾರುಗಳು ಬಂದು ಅವರ ಬಳಿಯಲ್ಲೇ ನಿಂತವು. ಇನ್ನು ಉಳಿಗಾಲವಲ್ಲವೆಂದು ತನಿಯ ಅವರ ಮುಖವನ್ನೇ‌ ನೋಡುತ್ತಾ ಸುಮ್ಮನೆ ನಿಂತ. ಗೂಂಡಾಗಳು ಅದಾಗಲೇ ಸುತ್ತುವರಿದರು. ಸನ್ಯಾಸಿ ಕಾರಿನೊಳಗಿನಿಂದಲೇ ಜನಾರ್ಧನನಲ್ಲಿ ಹೇಳಿದ. " ಸ್ವಾಮೀ, ಒಂದಕ್ಕೆ ತೃಪ್ತಿಯಾಗಲಿಲ್ಲ ದೇವಿಗೆ ಎರಡು ಬಲಿ. ಖಂಡಿತಾ ನಿಮ್ಮ ಕಾರ್ಯ ಸಾಂಗವಾಗಿ‌ ನೆರವೇರುತ್ತದೆ. ಈ ಬಲಿ ದೇವಿಗೆ ಖುಷಿಕೊಡಬಹುದು" ಎಂದು ತಲೆಯಲ್ಲಾಡಿಸಿದ. ಆ ದಿನದಿಂದ ತನಿಯ ನಿಗೂಢ ನಾಪತ್ತೆಯಾದ. ನದಿ ತೀರದಲ್ಲಿ‌ ಹೊಯ್ದಾಡುತ್ತಿದ್ದ ಅನಾಥ ದೋಣಿ ಮತ್ತೆಂದೂ ಈಜಲಿಲ್ಲ. ಊರಿಗೆ ಉಪಕಾರಿಯಾಗಿದ್ದ ತನಿಯ ಯಾವ ಸಾಹಿತಿ, ರಾಜಕೀಯ ಹಿನ್ನಲೆಯಿರದವನಾದ್ದರಿಂದ ಜನ ಹುಡುಕಲೂ ಹೋಗಲಿಲ್ಲ.

****
ಊರವರಿಗೆಲ್ಲ ಸಂಭ್ರಮದ ದಿನ.‌ಬಹುಕಾಲದ ಕನಸು ನನಸಾದ ದಿನ. ಕಿಕ್ಕಿರಿದು ನೆರೆದ ಜನೋಸ್ತಮ ಹೊಸ ಸೇತುವೆಯ ಉದ್ಘಾಟನೆಗೆ ಅನಿಯಾಗಿದ್ದರು. ಊರ ಗಣ್ಯರು ಆಗಮಿಸಿದರು. ರಿಬ್ಬನ್ ಕತ್ತರಿಸಲು ಮುಂದೆ ಬಂದ ಜನಾರ್ಧನ ಇನ್ನಿಬ್ಬರು ಧುರೀಣರೊಂದಿಗೆ ಸಾರ್ಥಕತೆಯ ಕಿರು ನಗೆ ಬೀರಿದ.

" ನಮಸ್ಕಾರ... ಬಂಧುಗಳೇ

ನಿಮ್ಮ ಕನಸನ್ನು ನನಸು ಮಾಡಿದ್ದೇನೆ. ಇದಕ್ಕೆಲ್ಲಾ ನಿಮ್ಮ ಸಹಕಾರ , ಹಾರೈಕೆ ಬಹು ಮುಖ್ಯ ಕಾರಣ.
ನಿಮಗೊಂದು ವಿಚಾರ ಹೇಳಬೇಕು. ಈ ಊರಿನ ಈ ಸೇತುವೆಗೆ ಒಂದು ಹೆಸರಿಡಬೇಕೆಂದು ನನಗೆ ಬಹು ದಿನದ ಉದ್ದೇಶವಾಗಿತ್ತು. ಅದೂ ನಮ್ಮೂರಿನವರದ್ದೇ ಆಗಬೇಕೆಂಬುವುದು ಮಹದಾಸೆ. ನಮ್ಮೆಲ್ಲರ ಕಣ್ಮನಿಯಾಗಿದ್ದ 'ತನಿಯ' ಕಣ್ಮರೆಯಾಗಿದ್ದು ನಿಮಗೆ ಗೊತ್ತೇ ಇದೆ. ಅವನ ಉಪಕಾರವನ್ನು ಹೇಗೆ ಮರೆಯಲು ಸಾಧ್ಯ. ಊರಿನವರಿಗೆಲ್ಲರಿಗೂ ಹೆಗಲಾಗಿ ನಮ್ಮೆಲ್ಲರನ್ನೂ ದಡ ದಾಟಿಸುತ್ತಿದ್ದ ತನಿಯನ ಹೆಸರನ್ನೇ ಇದಕ್ಕಿಟ್ಟರೆ ಹೇಗೆ?" ಎಂದ. ಊರಿನವರ ಉದ್ಘೋಷ ಮೊಳಗಿತು. ಚಪ್ಪಾಳೆ, ಕೇಕೆ ಮುಗಿಲು ಮುಟ್ಟಿದವು. ಅಷ್ಟರಲ್ಲಿ ಎಲ್ಲರಿಗೂ ಕೈ ಮುಗಿದ ಜನಾರ್ಧನ ರಿಬ್ಬನ್ ಕತ್ತರಿಸಿದ. ಅದು ಗಾಳಿಯಲ್ಲಿ ಶಕ್ತಿ ಕಳೆದುಕೊಂಡು ತೇಲುತ್ತಾ ನೆಲ ಮುಟ್ಟಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು