ಗುರುವಾರ , ಜನವರಿ 21, 2021
29 °C

ಕಥೆ: ಹೊಳಲೂರಿನ ಹಾಸ್ಟೆಲ್‌ ಹುಡುಗರು

ಶಂಕರ್‌ ಸಿಹಿಮೊಗೆ Updated:

ಅಕ್ಷರ ಗಾತ್ರ : | |

ಮೀಸೆ ದೊಡ್ಡಪ್ಪ, ದೊಡ್ಡ ಮೀಸೆಯ ದೊಡ್ಡಪ್ಪ ಹೀಗೆ ತನ್ನ ಗಾಢವಾದ ಹುರಿ ಮೀಸೆಯ ಕಾರಣಕ್ಕಾಗಿಯೆ ಹೊಳಲೂರಿನ ತುಂಬೆಲ್ಲಾ ಮನೆಮಾತಾಗಿದ್ದವನು ಸರಕಾರದ ಹಿಂದುಳಿದ ವರ್ಗಗಳ ಹಾಸ್ಟೆಲ್‌ನ ವಾರ್ಡನ್ ದೊಡ್ಡಪ್ಪ. ಇಲ್ಲಿ ದೊಡ್ಡಪ್ಪ ಕೆಲಸ ಮಾಡಲು ಶುರುಮಾಡಿ ಸರಿಯಾಗಿ ಐದು ವರ್ಷಗಳೇ ಆಗಿ ಹೋಗಿದ್ದವು. ತನ್ನ ಅನುಭವದ ಪಾಕ ಶಾಲೆಯಲ್ಲಿ ದೊಡ್ಡಪ್ಪ ‘ಯಾವ ಹುಡುಗ ಸಕ್ಕರೆಯಂತವನು, ಯಾವ ಹುಡುಗ ಚುರುಕು ಹಸಿ ಮೆಣಸಿನಕಾಯಿ, ಯಾವ ಹುಡುಗ ಹಾಲಿನಂತ ಗುಣದ ಸಭ್ಯಸ್ಥ ಮತ್ತು ಯಾವ ಹುಡುಗ ಹಾಗಲಕಾಯಿಯಂತವನು’ ಎಂದು ಕ್ಷಣದಲ್ಲಿಯೇ ಹೇಳಿ ಬಿಡುತ್ತಿದ್ದ. ಕಳೆದ ಐದು ವರ್ಷಗಳಲ್ಲಿ ಆ ಹಾಸ್ಟೆಲಿನ ಹುಡುಗರಲ್ಲಿ ದೊಡ್ಡಪ್ಪ ನೋಡದ ಗುಣವೇ ಇರಲಿಲ್ಲ. ಒಬ್ಬ ಹುಡುಗ ಮತ್ತೊಬ್ಬ ಹುಡುಗನ ಟ್ರಂಕ್ ಒಡೆದು ಚಟ್ನಿಪುಡಿ ಕದ್ದ ವಿಷಯವೋ ಅಥವಾ ಒಂದೆರಡು ಚಮಚ ತುಪ್ಪವನ್ನು ಅನ್ನಕ್ಕೆ ಹಾಕಿಕೊಂಡ ವಿಷಯವೋ ಬಂದರೆ ಕರಾರುವಕ್ಕಾಗಿ ಇಂತವರೇ ಈ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿ ಹಾಸ್ಟೆಲಿನ ಹುಡುಗರು ಹುಬ್ಬೇರಿಸುವಂತೆ ಮಾಡಿಬಿಡುತ್ತಿದ್ದ. ಇಂತಹ ಹುರಿ ಮೀಸೆಯ ದೊಡ್ಡಪ್ಪ ಹೊಳಲೂರಿನ ಹಾಸ್ಟೆಲಿಗೆ ವರ್ಗವಾಗಿ ಬಂದ ನಂತರ ಹಾಸ್ಟೆಲಿನ ಹುಡುಗರೆಲ್ಲಾ ಮೊದಲಿನಂತೆ ವಾತಾವರಣವನ್ನು ಗಲೀಜು ಮಾಡುತ್ತಿರಲಿಲ್ಲ, ಸ್ವ ಇಚ್ಛೆಯಿಂದ ಹಾಸ್ಟೆಲಿನ ಹೊರಾಂಗಣವನ್ನು ಸ್ವಚ್ಛಗೊಳಿಸುತ್ತಿದ್ದರು, ಅಲ್ಲಿ ಹಾಕಿದ್ದ ಬೀಟೆ, ತೇಗ, ಹೊನ್ನೆ ಮತ್ತು ಮರಗೆಣಸು ಗಿಡಗಳಿಗೆ ನೀರುಣಿಸುತ್ತಿದ್ದರು. ಹಾಸ್ಟೆಲಿನಲ್ಲಿ ವಾರಕ್ಕೊಮ್ಮೆ ಸಿಹಿಯೂಟ ಕಾಯಂ, ಹಾಗೆ ಪ್ರತಿ ಶುಕ್ರವಾರ ಬಾಳೆಹಣ್ಣನ್ನು ಊಟದ ನಂತರ ಕೊಟ್ಟರೆ, ಪ್ರತಿ ಭಾನುವಾರ ಬೇಯಿಸಿದ ಮೊಟ್ಟೆಯನ್ನು ಊಟದ ಮೊದಲೇ ಕೊಡುತ್ತಿದ್ದರು. ವಾರದಲ್ಲಿ ಶುಕ್ರವಾರ ಮತ್ತು ಭಾನುವಾರ ಬಂತೆಂದರೆ ಸಾಕು ಹುಡುಗರಿಗೆ ಹಬ್ಬವೋ ಹಬ್ಬ!

ಈ ಕತೆಯನ್ನು ಇಲ್ಲಿ ಕೇಳಿ 

ಪ್ರತಿ ವರ್ಷವು ಐದರಿಂದ ಹತ್ತನೆಯ ತರಗತಿಯ ಒಟ್ಟು ಐವತ್ತು ಜನ ಹುಡುಗರಿಗೆ ಹಾಸ್ಟೆಲಿನಲ್ಲಿ ವಿದ್ಯಾರ್ಥಿಗಳಾಗಿ ತೆಗೆದುಕೊಳ್ಳಲು ಅವಕಾಶವಿತ್ತು. ನೇರವಾಗಿ ಅರ್ಜಿ ಹಾಕಿ ಸೇರಿಕೊಳ್ಳುವವರು ಒಂದಷ್ಟು ಜನ ಹುಡುಗರಾದರೆ, ತಮ್ಮ ಮನೆಯ ಗೋಳಿನ ಕಥೆ ವ್ಯಥೆಗಳನ್ನೆಲ್ಲಾ ಹೇಳಿ ವಾರ್ಡನ್ ಮೂಲಕ ಸೇರಿಕೊಳ್ಳುವ ಹುಡುಗರು  ಇನ್ನೊಂದಷ್ಟು ಜನ ಇರುತ್ತಿದ್ದರು. ಒಬ್ಬೊಬ್ಬ ಹುಡುಗನ ಹಿಂದೆಯು ಒಂದೊಂದು ಕಥೆ, ಹೀಗೆ ವಾರ್ಡನ್ ದೊಡ್ಡಪ್ಪನ ಬಳಿ ಖುದ್ದು ಹುಡುಗರೇ ಬಂದು ತಮ್ಮ ಗೋಳಿನ ಕಥೆಯನ್ನೇನು ಹೇಳುತ್ತಿರಲಿಲ್ಲ, ಬದಲಾಗಿ ಹುಡುಗರ ಅಪ್ಪನೋ ಅಥವಾ ಅಮ್ಮನೋ, ಮಾವನೋ ಇಲ್ಲ ಸಂಬಂಧಿಕರೋ ಬಂದು ಹುಡುಗರ ಪರವಾಗಿ ‘ಒಂದು ಸೀಟು ಕೊಡಿ ಸಾಮ್ಯಾರ, ಮನ್ಯಾಗ ಸಾಕೋದು ಕಷ್ಟ ಆಗ್ಯಾತ’ ಅನ್ನೋರು. ದೊಡ್ಡಪ್ಪ ನೋಡೋಕೆ ದೊಡ್ಡ ದಪ್ಪ ಮೀಸೆಯ ದೊಡ್ಡ ದೇಹದ ಆಳಾದರು, ಆತನ ಮನಸ್ಸು ಮಾತ್ರ ತಾಯಿಯಂತೆ ಮಕ್ಕಳಿಗಾಗಿ ಕರಗಿಬಿಡುತ್ತಿತ್ತು. ಹೀಗೆ ಕೇಳಿಕೊಂಡು ಬಂದ ಪೋಷಕರಿಗೆ ಇಲ್ಲ ಎಂದು ವಾಪಾಸು ಕಳಿಸಿದ ಉದಾಹರಣೆಯೇ ಇರಲಿಲ್ಲ, ಏನಾದರು ಐವತ್ತು ಹುಡುಗರಿಗಿಂತ ಆ ವರ್ಷ ಸಂಖ್ಯೆ ಹೆಚ್ಚಾದರೆ ಹೇಗೋ ಮೇಲಧಿಕಾರಿಗಳಿಗೆ ತಿಳಿಸಿ ಹುಡುಗರನ್ನು ಹಾಸ್ಟೆಲಿಗೆ ದಾಖಲು ಮಾಡಿಕೊಳ್ಳುತ್ತಿದ್ದನು. ಹೀಗೆ ಹಾಸ್ಟೆಲಿಗೆ ದಾಖಲಾಗುತ್ತಿದ್ದ ಹುಡುಗರ ಎದೆಯ ಮೇಲೆ ಹರಿದ ಅಂಗಿಯಿದ್ದರು, ಅವರ ಕಣ್ಣುಗಳೊಳಗೆ ಮಾತ್ರ ನಭೋಮಂಡಲದ ಸೂರ್ಯನ ತೇಜಸ್ಸು ತುಂಬಿರುತ್ತಿತ್ತು. ಹುಡುಗರು ಜಿಂಕೆಯಂತೆ ನೆಗೆಯುತ್ತಿದ್ದರು, ಮೀನಿನಂತೆ ಹೊಳೆಯಲ್ಲಿ ಈಜುತ್ತಿದ್ದರು, ಮಿಂಚುಳ್ಳಿಯಂತೆ ಮೇಲೆ ಕೆಳಗೆ ಹಾರಿ ಗಾಳಿಯಲ್ಲಿ ನಿಂತು ಕುಣಿದು ಕುಪ್ಪಳಿಸುತ್ತಿದ್ದರು.

ಹೊಳಲೂರಿನ ಹಾಸ್ಟೆಲ್ ಇದ್ದ ಪ್ರದೇಶ ಹೊಂಗೆಯ ವನದಂತಿತ್ತು, ಸುತ್ತಲೂ ಗಿಡಮರಗಳು, ಹಾಸ್ಟೆಲ್ ಹಿಂಭಾಗದಲ್ಲಿ ಹಳ್ಳಿಯ ಹೊಲಗದ್ದೆಗಳು, ನೀರಿನ ಸಣ್ಣ ಕಾಲುವೆ, ಇನ್ನೊಂದು ಮೂರು ಮೈಲಿ ನಡೆದು ಹೋದರೆ ಸಿಗುವ ದಟ್ಟ ಕಾನನ, ಹೊರಾಂಗಣದಲ್ಲಿ ಮಕ್ಕಳೇ ಮಾಡಿದ್ದ ಉದ್ಯಾನ, ಹತ್ತಿರದಲ್ಲಿಯೇ ಇದ್ದ ಮಾರುತಿ ಪ್ರೌಢಶಾಲೆ, ಕಾಲೇಜು ಮತ್ತು ಮಕ್ಕಳು ಆಡಲು ದೊಡ್ಡದಾದ ಹಸಿರು ಮೈದಾನ. ಈ ಹಾಸ್ಟೆಲಿನ ಎಡಭಾಗ ಪಕ್ಕದಲ್ಲಿಯೇ ಕಾಲೇಜಿನ ಅಡಿಕೆ ತೋಟ, ಈ ತೋಟದಿಂದ ಬಂದ ಆದಾಯವನ್ನು ಕಾಲೇಜಿನ ಅಭಿವೃದ್ಧಿಗೆ ಬಳಸುತ್ತಿದ್ದರು. ಹೀಗೆ ಮಕ್ಕಳಿಗೆ  ಹೊಸದೊಂದು ಮನೋಲೋಕವನ್ನೇ ಸೃಷ್ಟಿಮಾಡುವ ಭೂಮಿ ಮೇಲಿನ ಸ್ವರ್ಗಲೋಕವಾಗಿತ್ತು. ಇಂತಹ ಸ್ಥಳಕ್ಕೆ ಭಿನ್ನ ಭಿನ್ನ ಸಂಸ್ಕೃತಿಯ ಬೇರೆ ಪ್ರದೇಶಗಳ ಹುಡುಗರು ವಿದ್ಯಾಭ್ಯಾಸದ ಕಾರಣಕ್ಕಾಗಿ ಬಂದು ಸೇರುತ್ತಿದ್ದರು. ನಗರಗಳಿಂದ ಮತ್ತು ಹಳ್ಳಿಗಳಿಂದ ಬಂದ ಹುಡುಗರಿಗೂ ಅವರ ಮಾತುಕತೆ ಮತ್ತು ವೇಷಭೂಷಣಗಳಲ್ಲಿ ಬಹಳಷ್ಟು ವ್ಯತ್ಯಾಸ ಇರುತ್ತಿತ್ತು, ಕೆಲವರು ದಾವಣಗೆರೆ ಭಾಗದ ಹಳ್ಳಿ ಹುಡುಗರಿಗೆ ‘ಲೇ’ ಪದ ಬಳಸಿದರೆ ವಿಪರೀತ ಸಿಟ್ಟು ಬಂದು ಹೊಡೆಯಲು ಹೋಗಿಬಿಡುತ್ತಿದ್ದರು, ಆದರೆ ನಗರ ಭಾಗದಲ್ಲಿ ಈ ಪದ ಬಳಕೆ ಸಾಮಾನ್ಯವಾಗಿತ್ತು.

ಈ ಹಾಸ್ಟೆಲಿನಲ್ಲಿ ತಮ್ಮ ಚುರುಕುತನ ಮತ್ತು ಬುದ್ಧಿವಂತಿಕೆಗಾಗಿ ಎಲ್ಲರ ಗಮನ ಸೆಳೆದ ಹುಡುಗರ ಗುಂಪೊದಿತ್ತು, ಆ ಗುಂಪಿನ ನಾಯಕನ ಹೆಸರೇ ಬಸವರಾಜ, ಮತ್ತು ಅವನಿಗೆ ಜೊತೆಯಾಗಿದ್ದ ಗೆಳೆಯರೆ ಶಂಕರ, ಲೋಹಿತ, ರೇಣುಕೇಶ ಮತ್ತು ಗಿರೀಶ. ಇವರು ಹಾಸ್ಟೆಲಿನಲ್ಲಿ ಮಾಡದ ಕಿತಾಪತಿಗಳಿಲ್ಲ, ಆದರೆ ವಾರ್ಡನ್ ದೊಡ್ಡಪ್ಪನ ಮುಂದೆ ಸಭ್ಯಸ್ಥರಾಗಿ ಆತನ ಮನ ಗೆದ್ದಿದ್ದರು. ಹಾಸ್ಟೆಲಿನಲ್ಲಿ ಜರುಗುತ್ತಿದ್ದ ಬಹುತೇಕ ತಲೆಹರಟೆ ಗಲಾಟೆಗಳಲ್ಲಿ ಇವರಲ್ಲಿ ಒಬ್ಬರ ಹೆಸರಾದರು ಇರದೆ ಆ ಗಲಾಟೆ ಮುಗಿಯುತ್ತಲೇ ಇರಲಿಲ್ಲ. ಹಾಸ್ಟೆಲಿಗೆ ಪಂಚ ಪಾಂಡವರಂತಿದ್ದರು ಈ ಐದು ಜನ ಪುಂಡರು. ಬೇರೆ ಹುಡುಗರು ಇರದ ಸಮಯ ನೋಡಿ ಯಾರದ್ದೋ ಟ್ರಂಕಿನ ಬೀಗ ಒಡೆದು ಅವರು ಮನೆಯಿಂದ ತಂದಿರುತ್ತಿದ್ದ, ಶೇಂಗಾ ಚಟ್ನಿಪುಡಿ, ತುಪ್ಪ, ಒಣ ರೊಟ್ಟಿ, ಕುರುಕಲು ತಿಂಡಿಗಳನ್ನು ಕ್ಷಣಾರ್ಧದಲ್ಲಿ ಗುಳುಮ್ ಸ್ವಾಹಾ ಮಾಡಿಬಿಡೋರು, ಬಹುತೇಕ ಹುಡುಗರಿಗೆ ಈ ವಿಷಯ ತಿಳಿದಿದ್ದರೂ, ಇವರನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಾರಿಗೂ ಇರಲಿಲ್ಲ!

**

ಹಾಸ್ಟೆಲ್ ಆರಂಭದ ದಿನಗಳು, ಜೂನ್ ತಿಂಗಳಿನಲ್ಲಿ ಶಾಲೆಗಳ ಆರಂಭ, ಒಂದು ವಾರ ತಡವಾಗಿಯೇ ಬಂದು ಸೇರೋರು ಹಾಸ್ಟೆಲಿನ ಹಳೆಯ ಹುಡುಗರು, ಅವರಿಗೂ ಎಂದಿನಂತೆ ಆ ವರ್ಷದ ದಾಖಲಾತಿ ಮಾಡುವುದು ಮಾತ್ರ ಕಡ್ಡಾಯವಾಗಿತ್ತು. ಹೀಗೆ ಮೊದಲ ದಿನ ಹಾಸ್ಟೆಲಿಗೆ ಬಂದ ಹುಡುಗರಿಗೆ ದಾಖಲಾತಿ ಮಾಡಿಕೊಂಡು ತಟ್ಟೆ, ಲೋಟ, ಟ್ರಂಕ್, ಒಂದು ಜಮಕಾನ, ದಿಂಬು, ಮತ್ತು ಹೊದಿಯಲು ಕಂಬಳಿಯನ್ನು ಕೊಡುತ್ತಿದ್ದರು. ಹೀಗೆ ಕೊಡುವ ಹಾಸ್ಟೆಲಿನ ವಸ್ತುಗಳಲ್ಲಿ ಕೆಲವು ಹಳೆಯದಾದರೆ ಕೆಲವು ಹೊಸದು ಬಂದಿರುತ್ತಿದ್ದವು, ಹೊಸ ಕಂಬಳಿಯನ್ನು ಪಡೆಯಲು ಹುಡುಗರ ನಡುವೆ ಜಗಳಗಳಾದ ಉದಾಹರಣೆಗೆ ಲೆಕ್ಕವೇ ಇಲ್ಲ, ಕೊನೆಗೆ ಯಾರ ಪಾಲಿಗೆ ಏನೂ ಬರುತ್ತದೆಯೋ ಅದನ್ನೇ ತೆಗೆದುಕೊಳ್ಳಬೇಕು ಎಂದು ಹಾಸ್ಟೆಲಿನ ಅಡುಗೆಯವನಾದ ಬಸವರಾಜಪ್ಪ ಕಟ್ಟಪ್ಪಣೆ ಮಾಡಿದ್ದ, ಹುಡುಗರು ಬೆಕ್ಕಿನಂತೆ ಬಾಲ ಮುದುರಿಕೊಂಡು ಕೊಟ್ಟಿದ್ದನ್ನು ತೆಗೆದುಕೊಂಡು, ಇದ್ದ ಎರಡು ಕೊಠಡಿಗಳಲ್ಲಿ ತಮಗೆ ಬೇಕಾದ ಒಂದು ಕೊಠಡಿಯಲ್ಲಿ ಹೋಗಿ ಜಾಗ ಖಾಯಂ ಮಾಡಿಕೊಳ್ಳೋರು, ಹೀಗೆ ಮೊದಲ ಬಾರಿ ಹಿಡಿದ ಜಾಗ ವರ್ಷಪೂರ್ತಿ ಅವರದ್ದೇ ಆಗಿರುತ್ತಿತ್ತು.

ವಾರ್ಡನ್ ದೊಡ್ಡಪ್ಪ ಒಮ್ಮೊಮ್ಮೆ ಮನೆಯಲ್ಲಿ ಜಗಳ ಮಾಡಿಕೊಂಡು ತನ್ನ ಮನಸ್ಸನ್ನು ಕೆಡಿಸಿಕೊಂಡಿದ್ದರೆ ಅದನ್ನು ಹಾಸ್ಟೆಲಿನ ಹುಡುಗರ ಮೇಲೆ ಇಲ್ಲದ ನಿಯಮಗಳ ಮಾಡಿ ತೀರಿಸಿಕೊಳ್ಳುತ್ತಿದ್ದನು, ಮನೆಯಲ್ಲಿ ಇಲಿ, ಊರಿನಲ್ಲಿ ಹುಲಿ ಎಂದ ಹಾಗೆ, ಹುಡುಗರು ಹಿಡಿದ ಜಾಗವನ್ನು ಅದಲು ಬದಲು ಮಾಡಿ ನಾನು ಹೇಳಿದ ಜಾಗಗಳಲ್ಲಿ ಪ್ರತಿಯೊಬ್ಬರು ಉಳಿದುಕೊಳ್ಳಬೇಕು ಎಂದು ಆಜ್ಞೆ ಮಾಡುತ್ತಿದ್ದ, ತಪ್ಪಿದವರಿಗೆ ಮಾರನೆಯ ದಿನ ಬಾರೆಕೋಲಿನ ಏಟು ಖಾಯಂಯಾಗಿರುತ್ತಿತ್ತು. ಬಾಗಿಲ ಪಕ್ಕವೇ ಸೀಟು ಸಿಕ್ಕವನಿಗೆ ಬರುತ್ತಿದ್ದ ಪರಿಸ್ಥಿತಿ ಶತ್ರುವಿಗೂ ಬೇಡ ಎನ್ನುತ್ತಿದ್ದರು ಹುಡುಗರು. ಕಾರಣ ಚಳಿಗಾಲದಲ್ಲಿ ಕೊರೆಯುವ ಗಾಳಿ ಬಾಗಿಲ ಸಂದಿಯಿಂದ ಹಾದು ಕಂಬಳಿಯ ತೂತು ನುಗ್ಗಿ ಮೈ ಚರ್ಮಕ್ಕೆ ಮುತ್ತನಿಕ್ಕುತ್ತಿದ್ದರೆ, ಯಾರಿಗೆ ತಾನೇ ನೆಮ್ಮದಿಯ ನಿದ್ದೆ ಬಂದೀತು? ಅದೂ ಅಲ್ಲದೇ ಪದೇ ಪದೇ ರೂಮಿನೊಳಗಿನಿಂದ ಹೊರಗೆ ಹುಡುಗರ ಓಡಾಟ, ಆ ಸದ್ದೇ ನರಕಲೋಕದ ಸದ್ದು ಎನಿಸೋದು, ಇವೆಲ್ಲವೂ ಹೇಗೋ ಸಹಿಸೋಣವೆಂದರೆ ಒಮ್ಮೊಮ್ಮೆ ವಾರ್ಡನ್ ದಿಢೀರನೇ ಬೆಳಿಗ್ಗೆ ಐದು ಗಂಟೆಗೆ ಪ್ರತ್ಯಕ್ಷನಾಗಿ ಹುಡುಗರು ಬೆಳಿಗ್ಗೆ ಸರಿಯಾಗಿ ಎದ್ದಿರುವರೋ ಇಲ್ಲವೋ ಎಂದು ಪರೀಕ್ಷೆ ಮಾಡೋನು, ಹೀಗೆ ಮಾಡುವಾಗ ಏನು ಸುಮ್ಮನೇ ಬಾಯಿ ಮಾತಿನಲ್ಲಿ ಹೇಳುತ್ತಿರಲಿಲ್ಲ, ಅವನ ಮನೆಯಿಂದ ಒಂದು ಸರಿಯಾದ ಬಾರಕೋಲನ್ನು ಹಿಡಿದುಕೊಂಡು ಬಂದವನೇ ಬಾಗಿಲ ಕಡೆಯಿಂದ ಮಲಗಿದವರಿಗೆ ತಿಕದ ಮೇಲೆ ಬಾಸುಂಡೆ ಬರುವ ಹಾಗೆ ಬಾರಿಸಿಕೊಂಡು ಬರುವಷ್ಟರಲ್ಲಿ ಚುರುಕು ಹುಡುಗರು ಎಚ್ಚರಾಗಿ ಹೊಡೆತ ಬೀಳುವ ಮೊದಲೇ ಹಾಳು ಹಾಸಿಗೆಯಲ್ಲಿ ಪುಸ್ತಕ ಹಿಡಿದು ಓದುವಂತೆ ನಟಿಸಿ ಹೊಡೆತ ತಪ್ಪಿಸಿಕೊಳ್ಳುತ್ತಿದ್ದರು. ಬಾಗಿಲ ಬಳಿ ಜಾಗ ಸಿಕ್ಕವನ ಪರಿಸ್ಥಿತಿ ಏನಾಗಿರಬಲ್ಲದು ನೀವೇ ಆಲೋಚಿಸಿ.

ಹೀಗೆ ಹೊಸಬರು ಮತ್ತು ಹಳಬರನ್ನು ಸೇರಿಸಿಕೊಂಡು ಆ ವರ್ಷದ ಹಾಸ್ಟೆಲಿನ ಆರಂಭ ಶುರುವಾಗೋದು, ಹೊಸದಾಗಿ ಬಂದವರನ್ನು ಸೇರಿಸಿಕೊಂಡು ಐದರಿಂದ ಏಳನೇಯ ತರಗತಿಯ ಹುಡುಗರು ಹೆಚ್ಚೆಂದರೆ ಒಂದು ಹತ್ತು ಜನ ಇರೋರು, ಹೊಸದಾಗಿ ಬಂದ ಹುಡುಗರಿಗೆ ಊರು ನೆನಪಾಗೋದು, ಹೀಗೆ ನೆನಪಾದಗೆಲ್ಲಾ ಗೋಳೋ ಎಂದು ಅಳುತ್ತಿದ್ದರೆ ಹತ್ತನೆಯ ತರಗತಿಯ ಮಹೇಶ ಎಲ್ಲರನ್ನೂ ಸಮಾಧಾನ ಮಾಡೋನು, ಅವತ್ತು ಅವನ ಬಗಲಲ್ಲಿಯೆ ಮಲಗಿಸಿಕೊಂಡು ಯಾವುದೋ ಸಿನಿಮಾದ ಹಾಡೊಂದನ್ನು ಹೇಳುತ್ತಾ ಲಾಲಿ ಹಾಡಿ ಮಲಗಿಸೋನು. ಚೀಲೂರು, ಹೊಳೆಹಟ್ಟಿ, ಭದ್ರಾಪುರ, ಬುಳ್ಳಾಪುರ, ಹರಮಘಟ್ಟ ಮತ್ತು ಮೇಲಿನ ಹನಸವಾಡಿ, ಈ ಹಳ್ಳಿಗಳ ಒಬ್ಬರಾದರು ಹುಡುಗರು ಹಾಸ್ಟೆಲಿನಲ್ಲಿ ಪ್ರತಿವರ್ಷ ಕಾಯಂ ಆಗಿ ಇರೋರು. ಪುಂಡರ ಗ್ಯಾಂಗಿನ ಬಸವ ಭದ್ರಾಪುರಕ್ಕೆ ಸೇರಿದವನು, ಹೊಳಲೂರಿನ ತುಂಗಾ ನದಿಯನ್ನು ತೆಪ್ಪದ ಮೂಲಕ ದಾಟಿದರೆ ದಕ್ಷಿಣದ ಆ ಭಾಗವೇ ಭದ್ರಾಪುರ, ಜನರು ಮಳೆಗಾಲದಲ್ಲಿ ತೆಪ್ಪವನ್ನು ಆಶ್ರಯಿಸಿದ್ದರೆ, ಬೇರೆ ಕಾಲದಲ್ಲಿ ನೀರಿನ ಮಟ್ಟ ಇಳಿದು ನದಿಯಲ್ಲಿ ನಡೆದೆ ಸಾಗಬಹುದಿತ್ತು. ಹಾಸ್ಟೆಲಿನಲ್ಲಿ ಇರುತ್ತಿದ್ದ ಬಹುತೇಕ ಹುಡುಗರು ಬಡವರಾದರು ಅವರ ಮಧ್ಯೆ ಒಬ್ಬರೋ ಇಬ್ಬರೋ ಒಂದು ಹದಿನೈದು ಎಕರೆ ಅಡಿಕೆ ತೋಟ ಇರುವ ಹುಡುಗರು ಇರುತ್ತಿದ್ದರು, ಇಂತವರಿಗೆ ಅಲ್ಲಿ ಏನ್ ಮರ್ಯಾದೆ ಅವರು ಮಾಡೋ ತಪ್ಪುಗಳಿಗೆಲ್ಲಾ ಖುದ್ದು ಹಾಸ್ಟೆಲಿನ ಹುಡುಗರೆ ಮಾಫಿ ಬರೆದು ಬಿಡೋರು, ‘ಬಿಡ್ಲಾ ಹೋಗ್ಲಿ ಅವ್ನಿಗೆ ಏನಾಗ್ಬೇಕೈತಿ ಊರ್ ಕಡೆ ಅವರಪ್ಪ ಸರಿಯಾಗಿ ಮಾಡಿಟ್ಟವ್ನೆ’ ಅನ್ನೋರು ದಾವಣಗೆರೆ ಭಾಗದ ಹುಡುಗರು. ಇಷ್ಟೆಲ್ಲಾ ಕೊಚ್ಚಿಕೊಂಡರು ಉಳಿದ ಹುಡುಗರ ಜೊತೆಗಿರುತ್ತಿದ್ದ ಅವರೇನು ಬಿಸಿನೀರಿನಲ್ಲಿ ಸ್ನಾನ ಮಾಡುತ್ತಿರಲಿಲ್ಲ ಎಲ್ಲರಂತೆ ಅದೇ ದೊಡ್ಡ ತೊಟ್ಟಿಯ ಮುಂದೆ ನಿಂತು ನಲ್ಲಿಬಿಟ್ಕೊಂಡು ಕಲ್ಲಿನಲ್ಲಿ ಮೈಯುಜ್ಜುತ್ತಾ ತಣ್ಣೀರಿನಲ್ಲಿ ಸ್ನಾನ ಮಾಡೋರು, ಹುಡುಗರು ಮಾತ್ರ ಇವರ ಪರವಾಗಿ ಅವರಿಗಿಂತಲೂ ಹೇಳಿಕೊಳ್ಳುವುದರಲ್ಲಿ ವಿಚಿತ್ರ ಖುಷಿಪಡೋರು.

ಹಾಸ್ಟೆಲಿನ ಅಡುಗೆ ಭಟ್ಟರಾದ ಬಸವರಾಜಪ್ಪ ಮತ್ತು ದುರ್ಗೇಶಪ್ಪ ಸಂಜೆ ಏಳುಗಂಟೆಗೆ ಸರಿಯಾಗಿ ಅಂದಿನ ರಾತ್ರಿಯ ಊಟ ಬಡಿಸೋರು, ಈ ಬಸವರಾಜಪ್ಪ ಸಿಡುಕು ಮೂತಿಯ ಗಂಭೀರ ವ್ಯಕ್ತಿಯಾದರೆ ದುರ್ಗೇಶಪ್ಪ ಮಾತ್ರ ಹುಡುಗರ ನಡುವೆ ಪೋಲಿ ಜೋಕುಗಳನ್ನು ಹೇಳುತ್ತಾ ಹುಡುಗರ ಜೊತೆಯಾಗಿ ಬಿಡೋನು, ಬಸವರಾಜಪ್ಪನಿಗೆ ಹೊಳಲೂರಿನಲ್ಲಿಯೇ ಮನೆ ಇದ್ದ ಕಾರಣ ಹೋಗಿ ಬರಲು ಅನುಕೂಲ ಆಗೋದು. ಆದರೆ, ಈ ದುರ್ಗೇಶಪ್ಪ ಮಾತ್ರ ಪ್ರತಿ ದಿನ ಭದ್ರಾವತಿಯಿಂದ ಓಡಾಡೋನು, ಹೀಗೆ ಓಡಾಡುವಾಗ ಒಂದೊಂದು ದಿನ ಬೇಸರವಾಗಿ ಹಾಸ್ಟೆಲಿನಲ್ಲಿಯೆ ಉಳಿದುಕೊಂಡು ಬಿಡುತ್ತಿದ್ದ. ಈತ ಉಳಿದು ಕೊಂಡ ಅಂದಿನ ರಾತ್ರಿ ಕೆಲವು ಹುಡುಗರು ಇವನ ಜೊತೆಯೇ ಮಲಗಲು ಹಾತೊರೆಯುತ್ತಿದ್ದರು. ಕಾರಣ ದುರ್ಗೇಶಪ್ಪ ಪೋಲಿ ಜೋಕುಗಳ ಜೊತೆಗೆ ಮಜಬೂತಾಗಿ ಕಥೆ ಹೇಳೋನು, ಹುಡುಗರೆಲ್ಲರೂ ಅಂದು ತಮ್ಮ ಮಾಮೂಲು ಮಲಗುವ ಕೋಣೆಯನ್ನು ಬಿಟ್ಟು ಊಟ ಬಡಿಸುತ್ತಿದ್ದ ಅಡುಗೆ ಮನೆಯ ಮುಂದಿನ ದೊಡ್ಡ ಕೋಣೆಗೆ ತಮ್ಮ ಮಲಗುವ ಜಾಗವನ್ನು, ಹಾಸಿಗೆ ದಿಂಬಿನ ಜೊತೆಗೆ ದಿನದಮಟ್ಟಿಗೆ ಬದಲಾಯಿಸಿಕೊಳ್ಳೋರು. ಆ ದಿನದ ರಾತ್ರಿ ಹುಡುಗರಿಗೆ ಕಳೆದದ್ದೇ ತಿಳಿಯುತ್ತಿರಲಿಲ್ಲ, ಮಾತುಕತೆ ಜೋಕುಗಳ ನಡುವೆ ಹುಡುಗರು ನಿದ್ದೆಗೆ ಜಾರಿಬಿಡುತ್ತಿದ್ದರು.

***

ಪ್ರತಿ ಶುಕ್ರವಾರವು ಹೊಳಲೂರಿನಲ್ಲಿ ಸಂತೆಯ ಸಂಭ್ರಮ, ಅಕ್ಕ ಪಕ್ಕದ ಹಳ್ಳಿಯವರಿಗೆ ಹೊಳಲೂರಿನ ಸಂತೆಯೆಂದರೆ ದೂರದ ಶಿವಮೊಗ್ಗಕ್ಕೆ ಹೋಗಿ ಬರುವ ಕೆಲಸವನ್ನು ಕಡಿಮೆ ಮಾಡಿ, ಹತ್ತಿರದ ಹಳ್ಳಿಯಲ್ಲಿಯೇ ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಲು ಇದ್ದ ಏಕೈಕ ಮಾರ್ಗವಾಗಿತ್ತು. ಎಂದಿನಂತೆ ಸಂತೆ ತರಕಾರಿ, ಹಣ್ಣು-ಹಂಪಲು, ಗೆಣಸು, ಮಂಡಕ್ಕಿ-ಬತ್ತಾಸು, ಮಿರ್ಚಿ ಬೋಂಡದಿಂದ ಜನರ ಬಾಯಲ್ಲಿ ನೀರುರಿಸುತ್ತಿತ್ತು. ತಮ್ಮ ದನಕರುಗಳ ಮಾರಲು ಮತ್ತು ಖರೀದಿ ಮಾಡಲು ರೈತರು ಇದೇ ಸಂತೆಯನ್ನೇ ನೆಚ್ಚಿಕೊಂಡಿದ್ದರು. ಹಾಸ್ಟೆಲಿನಲ್ಲಿ ಸಿಹಿಯೂಟ ಕೂಡ ಅಂದೇ ಇರುತ್ತಿತ್ತು, ಒಂದೊಂದು ಶುಕ್ರವಾರವು ಒಂದೊಂದು ವಿಶೇಷ ಅಡುಗೆ, ಒಂದು ವಾರ ಕೇಸರಿಬಾತ್ ಮಾಡಿದರೆ ಮುಂದಿನ ವಾರ ಹುಗ್ಗಿ ಮತ್ತೇ ಅದರ ಮುಂದಿನ ವಾರ ಅದೇ ಕೇಸರಿಬಾತ್ ಇದ್ದರೂ ಹುಡುಗರು ಮಾತ್ರ ಚಪ್ಪರಿಸಿಕೊಂಡು ಸಿಹಿಯೂಟವನ್ನು ಸವಿಯುತ್ತಿದ್ದರು. ಹಾಸ್ಟೆಲಿಗೆ ಬೇಕಾದ ತರಕಾರಿ ಸರಕು ಸಾಮಾನುಗಳನ್ನು ಸಂತೆಯಿಂದ ತರಲು ವಾರ್ಡನ್ ದೊಡ್ಡಪ್ಪ ಬಸವರಾಜ ಮತ್ತು ಗಿರೀಶನಿಗೆ ಕೆಲಸ ಒಪ್ಪಿಸುತ್ತಿದ್ದನು, ಕಾರಣ ಇವರು ಪುಂಡರಾದರು ಸಂತೆಯಲ್ಲಿ ಹೇಗೆ ಚೌಕಾಸಿ ಮಾಡಿ ಗುಣಮಟ್ಟದ ವಸ್ತುಗಳನ್ನು ಖರೀದಿ ಮಾಡಬೇಕೆಂದು ಬಲ್ಲವರಾಗಿದ್ದರು, ಹೀಗೆ ಸಂತೆಗೆ ಹೋಗಿ ಹಾಸ್ಟೆಲಿಗೆ ಬೇಕಾದ ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ, ಆಲೂಗೆಡ್ಡೆ ಮತ್ತು ತೊಂಡೆಕಾಯಿಯನ್ನು ಖರೀದಿಸಿ ತರೋರು, ಹೀಗೆ ಸಂತೆಯಿಂದ ಹಾಸ್ಟೆಲಿಗೆ ಬರುವ ದಾರಿ ಮಧ್ಯದಲ್ಲಿ ಒಂದಷ್ಟು ಈರುಳ್ಳಿಗಳನ್ನು ಕದ್ದು ತಮ್ಮ ಶಾಲೆಯ ಬ್ಯಾಗಿಗೆ ಹಾಕಿಕೊಳ್ಳೋರು, ಹೀಗೆ ಕದ್ದ ಈರುಳ್ಳಿಗಳನ್ನು ಊಟ ಮಾಡುವ ಸಮಯದಲ್ಲಿ ನೆಂಚಿಕೊಳ್ಳಲು ಬಳಸುತ್ತಿದ್ದರು, ಆ ದಿನ ಈರುಳ್ಳಿ ಜೊತೆಗಿದ್ದರೆ ಸಾಕು ಒಂದು ಸೌಟು ಅನ್ನ ಹೆಚ್ಚಿಗೆ ಹೊಟ್ಟೆ ಸೇರೋದು. ಇವರು ಹೀಗೆ ಮಾಡಿದರೆ ಉಳಿದವರು ನೇರವಾಗಿ ಅಡುಗೆ ಮನೆಯಿಂದಲೇ ತರಕಾರಿಗಳನ್ನು ಕದ್ದು ಬಿಡುವಿನ ಸಮಯದಲ್ಲಿ ತಿನ್ನೋರು, ಏಳು ದಿನ ಉಪಯೋಗಕ್ಕೆ ಬರಬೇಕಾದ ಈರುಳ್ಳಿ ಐದೇ ದಿನಕ್ಕೆ ಖಾಲಿಯಾಗಿಬಿಡೋದು. ಹಾಸ್ಟೆಲಿನಲ್ಲಿ ಅಡುಗೆ ಭಟ್ಟರಿಗೆ ಇದೊಂದು ದೊಡ್ಡ ತಲೆಬಿಸಿಯಾಗಿಬಿಟ್ಟಿತ್ತು.

ವಾರ್ಡನ್ ದೊಡ್ಡಪ್ಪನ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ತಡಕಾಡುತ್ತಿದ್ದರು, ಎಲ್ಲಿ ಭಟ್ಟರು ತರಕಾರಿಗಳನ್ನು ಮನೆಗೆ ಸಾಗಿಸುತ್ತಿದ್ದಾರೋ ಎಂದು ಅನುಮಾನ ಬಂದರೂ ದೊಡ್ಡಪ್ಪ ಅದನ್ನು ನೇರವಾಗಿ ಕೇಳದೆ ಹೀಗೆ ಪ್ರಶ್ನೆ ಮಾಡೋನು. ಪಾಪ ಬಸವರಾಜಪ್ಪ ಮಾತ್ರ ಹುಡುಗರ ಕಾರಣದಿಂದಾಗಿ ಪ್ರತಿಸಲವು ಮುಜುಗರಕ್ಕೆ ಒಳಗಾಗುತ್ತಿದ್ದನು. ಇದನ್ನು ಏನಾದರು ಮಾಡಿ ಕಂಡುಹಿಡಿಯಲೇಬೇಕು ಎಂದುಕೊಂಡ ಬಸವರಾಜಪ್ಪ ಒಂದು ಉಪಾಯ ಮಾಡಿದನು, ಅದರಂತೆ ಹಾಸ್ಟೆಲಿನಲ್ಲಿ ಒಂದು ಮೂರು ಜನ ಸಭ್ಯಸ್ಥ ಸಾಧು ಹುಡುಗರಾದ ಸಂತೋಷ, ಲೋಹಿತ ಮತ್ತು ಕಲ್ಲಪ್ಪ ಇವರಿಗೆ ಗೊತ್ತು ಮಾಡಿ ಅಡುಗೆ ಮನೆ ಪಹರೆಗೆ ಯಾರೆಂದರೆ ಯಾರಿಗೂ ತಿಳಿಯದಂತೆ ಗಮನಿಸಲು ಹೇಳಿದನು.

ಕಳ್ಳರನ್ನು ಕಂಡುಹಿಡಿದವರಿಗೆ ಆ ದಿನ ಐದು ಮೊಟ್ಟೆಗಳನ್ನು ಬೇಯಿಸಿ ಕೊಡುವುದಾಗಿ ಆಸೆ ತೋರಿಸಿದನು, ಆಸೆಗೆ ಬಿದ್ದ ಈ ಹುಡುಗರು ಭಯವಾದರು ಪಹರೆಗೆ ನಿಂತೇಬಿಟ್ಟರು. ಅಡುಗೆ ಮನೆಯ ಬಾಗಿಲಿಗೆ ಭದ್ರವಾಗಿ ಬೀಗ ಹಾಕಿದರೂ ಕದಿಯುವವರು ಮಾತ್ರ ಯಾರೆಂದು ತಿಳಿಯದೆ ಪೇಚಿಗೆ ಸಿಲುಕಿದ್ದ ಬಸವರಾಜಪ್ಪನಿಗೆ ಈಗ ಕೊಂಚ ನಿರಾಳವೆನಿಸಿತ್ತು. ಈ ಹುಡುಗರಿಗೆ ಗಮನಿಸಲು ಹೇಳಿ ಸರಿಯಾಗಿ ಮೂರು ದಿನವಾಗಿತ್ತು, ಅಡುಗೆ ಮನೆಯಿಂದ ಎರಡು ಕೆ.ಜಿ. ಸಕ್ಕರೆ, ಈರುಳ್ಳಿ, ಬೆಳ್ಳುಳ್ಳಿ, ಜೊತೆಗೆ ಎರಡು ಡಜನ್ ಮೊಟ್ಟೆಗಳು ಕಳವಾಗಿದ್ದು ಹಾಸ್ಟೆಲಿನಲ್ಲಿ ದೊಡ್ಡ ಸುದ್ದಿಯಾಗಿ ವಾರ್ಡನ್ ದೊಡ್ಡಪ್ಪನ ಕಿವಿಗೂ ಈ ವಿಷಯ ಬಿದ್ದಿತ್ತು. ವಾರದ ಕೊನೆಯ ದಿನವಾದ್ದರಿಂದ ಉಳಿದ ವಸ್ತುಗಳಿಂದಲೇ ಬಸವರಾಜಪ್ಪ ಹುಡುಗರಿಗೆ ಅಡುಗೆ ಮಾಡಬೇಕಾಗಿತ್ತು ಮತ್ತು ಮೊಟ್ಟೆಗಳು ಕಳ್ಳತನವಾದ ಕಾರಣ ಅಂದು ಆ ಭಾನುವಾರದ ಸರದಿಗೆ ಎಲ್ಲರಿಗೂ ಮೊಟ್ಟೆ ಕೊಡಲು ಸಾಧ್ಯವಾಗದೆ ಮೊಟ್ಟೆಯನ್ನು ಯಾರೊಬ್ಬರಿಗೂ ಕೊಡಲಿಲ್ಲ, ಇದರಿಂದಾಗಿ ಕೆಲ ಹುಡುಗರಿಗೆ ಸಿಟ್ಟು ಬಂದು ಇದನ್ನು ವಾರ್ಡನ್ ದೊಡ್ಡಪ್ಪನಿಗೆ ಮಾರನೇಯ ದಿನ ತಿಳಿಸಿದಾಗ ವಿಷಯ ಹೊರಗೆ ಬಂದಿತ್ತು.

ಹಾಸ್ಟೆಲಿನ ಹಿಂಭಾಗಕ್ಕೆ ಸಂತೋಷ, ಲೋಹಿತ ಮತ್ತು ಕಲ್ಲಪ್ಪನನ್ನು ಕರೆದುಕೊಂಡು ಹೋದ ಬಸವರಾಜಪ್ಪ ಗುಟ್ಟಾಗಿ ‘ನಡೆದ ಕಳ್ಳತನದ ಬಗ್ಗೆ ನಿಮಗೇನಾದ್ರು ಸುಳಿವು ಸಿಕ್ತಾ ಹುಡುಗ್ರಾ’ ಎಂದ. ಅದಕ್ಕೆ ಸಂತೋಷ ‘ಇಲ್ಲ ಭಟ್ರೇ ಯಾರು ಅಂತಾ ನಂಗೊಂತು ಗೊತ್ತಾಗ್ಲಿಲ್ಲ’ ಎನ್ನುವಾಗ ಲೋಹಿತ ‘ಇದು ನಡೆದಿದ್ರೆ ನಾವೆಲ್ಲರೂ ಮಲಗಿದ್ದ ಸಮಯ ನೋಡಿಕೊಂಡು ಮಧ್ಯರಾತ್ರಿಯೇ ನಡೆದಿರಬೇಕು ಭಟ್ರೇ’ ಎಂದನು. ಕಲ್ಲಪ್ಪ ಮಾತ್ರ ಏನು ಮಾತನಾಡದೆ ಹಾಗೆ ನಿಶ್ಯಬ್ದವಾಗಿ ನಿಂತಿದ್ದನು, ಇದನ್ನು ಗಮನಿಸಿದ ಬಸವರಾಜಪ್ಪ ‘ಹೇ ಕಲ್ಲ ನೀನ್ಯಾಕೆ ಹಂಗೆ ಗರ ಬಡ್ದೋನ್ ಥರ ನಿಂತಿದ್ದಿಯೋ ನಿಂಗೇನಾದ್ರು ವಿಷಯ ಗೊತ್ತ’ ಎಂದು ಕೇಳಿದನು. ಅದಕ್ಕೆ ಕಲ್ಲಪ್ಪ ‘ಭಟ್ರೆ ಮೊನ್ನೆ ಶನಿವಾರ ಮಧ್ಯರಾತ್ರಿ ಜೀರುಂಡೆಗಳ ಸದ್ದು ಕೇಳಿಸ್ತಾ ಇತ್ತ, ನಂಗೆ ಸರಿಯಾಗಿ ನಿದ್ದೆ ಮಾಡೋಕೆ ಆಗ್ದೆ ಉಚ್ಚೇ ಹುಯ್ಯೋಣ ಅಂತಾ ತೊಟ್ಟಿ ಮುಂದಿನ ದಿಬ್ಬದ ಬಳಿಗೆ ಹೋಗ್ತಾ ಇದ್ದೆ, ಅಲ್ಲಿ ಈ ಬಸವ ಮತ್ತು ಗಿರೀಶ ಇಬ್ರು ತೊಟ್ಟಿ ಹತ್ರಾನೆ ನಿಂತಿದ್ರು, ಏನ್ರೋ ಇಲ್ಲಿ ಇಷ್ಟೊತ್ತಿಗೆ ನಿಂತಿದೀರ ಅಂದ್ನ, ನಿದ್ದೆ ಬರ್ಲಿಲ್ಲ ಕಲ ಅದ್ಕೆ ಬಂದ್ವಿ ಅಂದ್ರು’ ಎಂದ. ಇದನ್ನು ಕೇಳಿದ ಬಸವರಾಜಪ್ಪನಿಗೆ ಅವರ ಮೇಲೆ ನಿಧಾನಕ್ಕೆ ಅನುಮಾನ ಬಂದರು ಯಾವುದಕ್ಕೂ ಧೃಡಪಡಿಸಿಕೊಳ್ಳದೆ ಆರೋಪ ಮಾಡಲು ಸಾಧ್ಯವಿಲ್ಲ, ಮೊದಲೇ ಪುಂಡ ಹುಡುಗರು ಹಾಸ್ಟೆಲಿನಲ್ಲಿ ರಂಪ ಎಬ್ಬಿಸಿ ಬಿಟ್ಟಾರು ಎಂದು ‘ಸರಿ ಕಲ್ಲ ಮುಂದೆ ಏನಾಯ್ತು ಬೇಗ ಹೇಳೋ’ ಎಂದ. ‘ನಾನು ಉಚ್ಚೇ ಹುಯ್ತಾ ಇದ್ನ, ತೊಟ್ಟಿ ಮೇಲಿರುವ ಅಡುಗೆ ಮನೆಯ ಕಿಟಕಿಯಿಂದ ಏನೋ ಸದ್ದು ಬಂದ್ಹಂಗಾಗ್ತಾ ಇತ್ತು, ಯೋ ಏನ್ಲಾ ಅದು ಸದ್ದು ಅಂತಾ ಗಿರಿನ ಕೇಳಿದ್ದಕ್ಕೆ ‘ಯಗ್ಣ ಕಲ ಯಗ್ಣ’ ಅಂದ’ ಸರಿ ಬುಡು ಅಂದು ನಾನು ರೂಮಿನ್ ಕಡೆ ಬರ್ವಾಗ ಇಬ್ರಿದ್ದ ಇವ್ರ ಗುಂಪು ಮೂರಾಗಿತ್ತು, ‘ಮೂರ್ ಜನಾನು ಕೈನಾಗೆ ಏನೋ ಕವರ್ ಮಡಿಕೊಂಡು ಬೇಲಿ ಸಂದಿಗೆ ಹೋದ್ರು’ ಅಷ್ಟೇ ನಾನ್ ನೋಡಿದ್ದು ಎಂದ.

ಸೋಮವಾರ ಸಂಜೆ ಹುಡುಗರು ಹಾಸ್ಟೆಲಿನ ಹೊರಾಂಗಣದ ಕಟ್ಟೆಯ ಮೇಲೆ ಸಾಲಾಗಿ ಕೂತು ರಾಗವಾಗಿ ‘ಸ್ವಾಮಿ ದೇವನೇ ಲೋಕಪಾಲನೇ, ಥೇ ನಮೋಸ್ತು ನಮೋಸ್ತುತೆ’ ಹಾಡನ್ನು ಹಾಡುತ್ತಿದ್ದಾರೆ, ಅವರ ಎದುರಿಗೆ ವಾರ್ಡನ್ ದೊಡ್ಡಪ್ಪ ಕುರ್ಚಿಯ ಮೇಲೆ ಕೂತುಕೊಂಡಿದ್ದರೆ ಅಡುಗೆ ಭಟ್ಟ ಬಸವರಾಜಪ್ಪ ಮಾತ್ರ ನಿಂತುಕೊಂಡೆ ಅವರ ಹಾಡಿಗೆ ತಾನು ಗುನುಗುತ್ತಾ ದೂರನ್ನು ಮತ್ತೊಮ್ಮೆ ಎಲ್ಲರ ಮುಂದೆ ಹೇಳಲು ಕಾಯ್ದುಕೊಂಡು ನಿಂತಿದ್ದಾನೆ. ಪ್ರಾರ್ಥನೆ ಮುಗಿಯುತ್ತಲೆ ಬಸವರಾಜಪ್ಪ ಎಲ್ಲರ ಮುಂದೆ ಮೊನ್ನೆ ಅಡುಗೆ ಮನೆಯಲ್ಲಿ ಕದ್ದ ಸುದ್ದಿಯನ್ನು ಹೇಳುತ್ತಾನೆ, ಇದನ್ನು ಕೇಳಿದ ನಂತರ ವಾರ್ಡನ್ ದೊಡ್ಡಪ್ಪ ಒಂದು ತೀರ್ಮಾನಕ್ಕೆ ಬಂದು ತನ್ನ ತೀರ್ಮಾನವನ್ನು ಈ ರೀತಿಯಾಗಿ ‘ಮೊನ್ನೆ ಅಡುಗೆ ಮನೆಯಿಂದ ಕಳ್ಳತನವಾದ ಸಕ್ಕರೆ, ಈರುಳ್ಳಿ, ಬೆಳ್ಳುಳ್ಳಿ, ಮತ್ತು ಮೊಟ್ಟೆಯ ವಿಷಯವಾಗಿ ಒಂದಷ್ಟು ಹುಡುಗರ ಮೇಲೆ ಸಾಕ್ಷಿ ಸಮೇತ ಆರೋಪ ಸಾಬೀತಾಗಿದೆ, ಆ ಹುಡುಗರ ಹೆಸರನ್ನು ನಾವಾಗಿಯೇ ಎಲ್ಲರ ಮುಂದೆ ಹೇಳುವ ಮೊದಲು ಅವರಾಗಿಯೇ ತಮ್ಮ ತಪ್ಪುಗಳನ್ನು ಒಪ್ಪಿಕೊಂಡರೆ ಎಲ್ಲರನ್ನೂ ಕ್ಷಮಿಸಲಾಗುವುದು, ಯಾರೊಬ್ಬರೂ ಒಪ್ಪಿಕೊಳ್ಳದೆ ಹೋದರೆ ಈ ದಿನ ಮತ್ತು ನಾಳೆ ಹಾಸ್ಟೆಲಿನಲ್ಲಿ ಅಡುಗೆ ಮಾಡಲಾಗುವುದಿಲ್ಲ’ ಎಂದು ಷರಾ ಬರೆದು ಬಿಟ್ಟನು.

ಹೀಗೆ ವಾರ್ಡನ್ ಹೇಳಿದ್ದೆ ತಡ ಕಳ್ಳರು ಯಾರೆಂದು ವಿಷಯ ತಿಳಿದ ಹುಡುಗರು ಆರೋಪಿಗಳಿಗೆ ಒಳಗೊಳಗೆ ಒಪ್ಪಿಕೊಳ್ಳಲು ಒತ್ತಡ ಹೇರಿದರು, ಅದರಲ್ಲಿ ಕಳ್ಳತನವನ್ನು ಕಣ್ಣಾರೆ ನೋಡಿದ್ದ ಕಲ್ಲಪ್ಪ ‘ಲೇ ಬಸ್ಯಾ ನೀವೇ ಮಾಡಿದ್ದು ಒಪ್ಕಂಡ್ ಬಿಡ್ರೋ ಇಲ್ಲ ನಾವೆಲ್ಲ ಉಪ್ವಾಸ ಸಾಯ್ಬೇಕು’ ಅಂದ, ಇದನ್ನು ಕೇಳಿಸಿಕೊಂಡ ಬಸವನಿಗೆ ಒಳಗೊಳಗೆ ಮುನಿಸಾದರು ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ. ಕೊನೆಗೆ ಬಸವ ಎದ್ದು ನಿಂತು ‘ಸಾರ್ ನಾವೇ ಕದ್ದಿದ್ದು ಸಾರ್, ಬೇಲಿ ಸಂದ್ಯಾಗ ಇಟ್ಟಿದಿವಿ ಮಾಲುನ್ನ’ ಎಂದನು. ‘ಯಾಕೋ ಬಸ್ಯಾ ನಿಂಗೆ ಹಾಸ್ಟೆಲಿನಲ್ಲಿ ಸರಿಯಾಗಿ ಊಟ ಹಾಕ್ತೀವ್ ತಾನೇ ಮತ್ತೇ ಕದಿಯೋದು ಯಾಕೆ?’ ಅದಕ್ಕೆ ‘ಏನ್ ಮಾಡೋದು ಸಾರ್ ನಮ್ಗೆ ಆಗಾಗ ಹೊಟ್ಟೆ ಹಸಿತಾನೇ ಇರತ್ತೆ, ಏನಾದ್ರೂ ತಿಂದೆ ಹೋದ್ರೆ ಸಮಾಧಾನ್ವೇ ಆಗೋದಿಲ್ಲ’ ಎಂದ, ‘ಸರಿ ನಿನ್ ಜೊತೆ ಮತ್ತೆ ಯಾರ್ ಯಾರ್ ಸೇರ್ಕಂಡ್ ಕದ್ದಿದ್ದು ಅದುನು ವಸಿ ಹೇಳಪ’ ಅಂದಿದ್ದಕ್ಕೆ ‘ಗಿರೀಶ ಮತ್ತೆ ಪುಟ್ರಾಜ’ ಎಂದನು. ಕೊನೆಗೆ ಮೂರು ಜನಕ್ಕೂ ವೇದಿಕೆಯ ಮೇಲೆ ಕರೆಸಿ ‘ಮುಂದೆ ಹೀಗೆ ಮಾಡಬಾರದು ನೀವೆಲ್ಲಾ ಹಾಸ್ಟೆಲಿನ ಹಳೆಯ ವಿದ್ಯಾರ್ಥಿಗಳು ಬೇರೆಯವರಿಗೆ ಮಾದರಿಯಾಗಿರ್ಬೇಕು’ ಎಂದು ಅಲ್ಲಿಗೆ ಕಳ್ಳತನದ ಸಮಸ್ಯೆಯನ್ನು ಇತ್ಯರ್ಥ ಮಾಡಲಾಯಿತು.

ವಾರ್ಡನ್ ದೊಡ್ಡಪ್ಪ ಹುಡುಗರಿಗೆ ಏಟು ಕೊಡುವುದಿರಲಿ ಕೊನೆ ಪಕ್ಷ ಗದರದೆ ಇರುವುದನ್ನು ಕಂಡ ಅಡುಗೆ ಭಟ್ಟ ಬಸವರಾಜಪ್ಪ ಒಳಗೊಳಗೆ ‘ಓಹೋ ಸಾಹೇಬ್ರಿಗೆ ಮನೆಯಲ್ಲಿ ಹೆಂಡ್ತಿ ತುಂಬಾ ಸಂತೋಷದಿಂದ ನೋಡ್ಕೊಳ್ತಾ ಇರ್ಬೇಕು, ಅದಕ್ಕೆ ಇತ್ತೀಚೆಗೆ ಸಿಡಿಮಿಡಿ ಮಾಡೋದನ್ನೇ ಬಿಟ್ಟಿದ್ದಾರೆ, ಹುಡುಗರ ನಸಿಬ್ ಕೂಡ ಚೆನ್ನಾಗಿತ್ತು ಅನಿಸುತ್ತೆ’ ಎನ್ನುತ್ತಾ ಅಡುಗೆ ಕೋಣೆಯ ಕಡೆ ನಡೆದನು. ಅಂದು ಹುಡುಗರಿಗೆ ಬಸವರಾಜಪ್ಪ ಊಟ ಬಡಿಸುವುದರಲ್ಲಿ ಸಮಯ ರಾತ್ರಿ ಹತ್ತು ಗಂಟೆಯಾಗಿತ್ತು.

ಸರಿಯಾಗಿ ಈ ಘಟನೆ ನಡೆದು ಎರಡು ತಿಂಗಳಾಗಿತ್ತು ಹಾಸ್ಟೆಲ್ ಪಕ್ಕದ ಮಾರುತಿ ಪ್ರೌಢಶಾಲೆಗೆ ಸೇರಿದ ಅಡಿಕೆ ತೋಟದಲ್ಲಿ ಅಡಿಕೆ ಕಳ್ಳತನವಾಗಲು ಶುರುವಾಗಿತ್ತು, ಇದರಿಂದ ಶಾಲೆಯ ಆಡಳಿತ ಮಂಡಳಿಗೆ ಮಾಡಬೇಕಾದ ಅಭಿವೃದ್ಧಿ ಕೆಲಸಗಳಿಗೆ ಆರ್ಥಿಕ ಸಂಕಷ್ಟ ಉಂಟಾಗುತ್ತಿತ್ತು. ಒಂದು ದಿನ ಮಧ್ಯರಾತ್ರಿ ಹಾಸ್ಟೆಲಿನ ಒಳಗೆ ಮಲಗಿದ್ದ ಕೆಲವು ಹುಡುಗರಿಗೆ ಹೊರಾಂಗಣದಲ್ಲಿ ಯಾರೋ ಜನರು ಓಡಾಡಿದ ಶಬ್ದ ಕೇಳಿಸುತ್ತಿದೆ, ಎಚ್ಚರಗೊಂಡ ಗಿರೀಶ ‘ಲೋ ಬಸ್ಯಾ ಯದ್ದಾಳೋ ಯದ್ದಾಳೋ, ಹೊರ್ಗೆ ಏನೋ ಶಬ್ದ ಕೇಳ್ತೈತಿ’ ಎಂದ, ಇದನ್ನು ಕೇಳಿಸಿಕೊಂಡು ಎದ್ದ ಬಸ್ಯಾ ನಿಧಾನವಾಗಿ ಕಿಟಕಿಯ ಬಳಿ ಹೋಗಿ ನೋಡಿದ ‘ಒಂದಷ್ಟು ಜನ ಮುಖಕ್ಕೆ ಟವಲ್ ಕಟ್ಟಿಕೊಂಡು ಅಡಿಕೆ ಕಳ್ಳತನ ಮಾಡ್ತಾ ಇದ್ರು’ ಬೆವರಿದವನೇ ‘ಲೋ ಗಿರೀಶ ಬಾರೋ ಇಲ್ಲಿ, ಇವ್ರು ಅಡಿಕೆ ಕದಿಯೋಕೆ ಬಂದವ್ರೆ ಕಣೋ’ ಓಡಿ ಬಂದವನೇ ಗಿರೀಶ ‘ಏನಿಲ್ಲವೆಂದ್ರೂ ಒಂದು ಹದಿನೈದು ಜನ ಇದಾರೆ ಕಣೋ, ನಮ್ಮ ಕೈಯಿಂದ ಇವರ ಹಿಡಿಯೋಕೆ ಆಗೋದಿಲ್ಲ’ ಅದಕ್ಕೆ ಬಸ್ಯಾ ‘ನೀನ್ ಹೇಳಿದ್ದು ಸರಿ ನಾವಿಬ್ರೆ ಹೋದ್ರೆ ಅಷ್ಟೇ ನಮ್ ಕತೆ, ಒಂದು ಕೆಲ್ಸ ಮಾಡೋಣ ನೀನು ಆ ಸಾಲಿನಿಂದ ಒಬ್ಬೊರಿಗೆ ನಿಧಾನಕ್ಕೆ ವಿಷಯ ಹೇಳಿ ಎದ್ದೇಳ್ಸು, ನಾನು ಈ ಸಾಲಿಂದ ಎದ್ದೇಳಿಸ್ತೀನಿ’ ಅಂದವರೆ ನಡು ಮಧ್ಯೆಯ ಗೋಡೆಯಲ್ಲಿದ್ದ ಕಿಟಕಿಯ ಮೂಲಕ ಪಕ್ಕದ ರೂಮಿನ ಹುಡುಗರನ್ನು ಎದ್ದೇಳಿಸ್ಬಿಟ್ರು. ನೋಡ ನೋಡುತ್ತಲೇ ಐವತ್ತು ಜನ ಹುಡುಗರು ತೋಟದ ಕಡೆ ನುಗ್ಗಿ ‘ಕಳ್ರು ಕಳ್ರು’ ಎಂದು ಜೋರಾಗಿ ಕಿರುಚೋಕೆ ಶುರು ಮಾಡಿದ್ದೆ ತಡ, ಅವರ ದೊಡ್ಡ ದನಿಗೆ ಬೆದರಿದ ಕಳ್ರು ಅಲ್ಲಿಂದ ಓಡೋಕೆ ಶುರು ಮಾಡಿದ್ರು, ಕೊನೆಗೆ ಆ ಕಳ್ಳರ ತಂಡದಲ್ಲಿ ಐದು ಜನರನ್ನು ಹಿಡಿದು, ಆ ಮಧ್ಯರಾತ್ರಿಯಲ್ಲಿಯೇ ಪಟೇಲರು, ಗೌಡರು ಊರಿನ ಬಹುತೇಕರಿಗೆ ಸುದ್ದಿ ಮುಟ್ಟಿಸಿ ಊರವರಿಗೆ ಕಳ್ಳರನ್ನು ಒಪ್ಪಿಸಿದರು.

ಘಟನೆ ನಡೆದ ಮಾರನೇಯ ದಿನ ರಾಜ್ಯದ ಮುಖ್ಯ ಪತ್ರಿಕೆಯೊಂದರಲ್ಲಿ ವಾರ್ಡನ್ ದೊಡ್ಡಪ್ಪನ ನಗುಮುಖದೊಂದಿಗೆ ಅಡುಗೆ ಭಟ್ಟ ಬಸವರಾಜಪ್ಪ, ದುರ್ಗೇಶಪ್ಪರನ್ನು ಸೇರಿದಂತೆ ಐವತ್ತು ಹುಡುಗರ ಗುಂಪಿನ ಚಿತ್ರ ‘ಹೊಳಲೂರಿನ ಹಾಸ್ಟೆಲ್ ಹುಡುಗರು’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು