ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಮ್ಮನ ಒಡವೆ

Last Updated 20 ಜುಲೈ 2019, 19:30 IST
ಅಕ್ಷರ ಗಾತ್ರ

ರೋಹಿಣಿ ಮಳೆ ಹುಯ್ದು ನೆಲ ಹಸಿಯಾಗಿದ್ದೇ ಬಂತು, ಸಣ್ಣೇಗೌಡ ಬೆಳ್ಳಂಬೆಳಿಗ್ಗೆ ನಿಡಗೋಡ ಏರಿ ಹತ್ರ ನಿಂತು ಕೂಗು ಹಾಕ್ತಿದ್ದ.

‘ಲೇ ಈರ, ಹೊತ್ತು ಏರ್ತಾ ಬಂದ್ರೂ ಗುಡ್ಲು ಬಿಟ್ಟು ಬರಾಕಾಗಲ್ಲೇನೋ. ನಿನ್ನೆಯಿಂದ ಹೊಯ್ಕಂಡಿದೀನಿ. ಹೊತ್ತಿಗ್ ಮುಂಚೆ ಹಾರು ಕಟ್ರೋ ಅಂತ. ಇನ್ನೂ ಹೆಂಡ್ತಿ ಮಗ್ಲು ಬಿಟ್ಟು ಎದ್ದಿಲ್ಲೇನೋ’

ಗೌಡ ಅಷ್ಟು ಕೂಗಿದ್ರೂ ಕೇರಿ ಬೀದೀಲಿ ಯಾವ ಮಿಸುಕಾಟವೂ ಕಾಣದೆ ಅವನ ಸಿಟ್ಟು ಇನ್ನೂ ಜಾಸ್ತಿಯಾಯಿತು.

‘ಎಲ್ಲಿ ಹಾಳಾಗಿ ಹೋದ್ರೋ .... ತಿಂದ್ ಜಾಸ್ತಿಯಾದ್ರೆ ಹಿಂಗೇ ಅಲ್ವಾ’ ಅಂತಾ ಬುಸುಗುಡುತ್ತಾ ಗೌಡ, ಈರನ ಗುಡ್ಲ ಹತ್ರ ಬಂದ. ರಾತ್ರಿಯ ಮುಸುರೆ ಚೆಲ್ಲಾಕೆ ಅಂತ ಈಚೆಗೆ ಬಂದ ಚನ್ನಿ, ಗೌಡನ್ನ ನೋಡಿ ಗಾಬ್ರಿ ಮಾಡ್ಕಂಡು ಮುಸುರೆ ಪಾತ್ರೇನ ಅಲ್ಲೇ ಕುಕ್ಕಿ, ತಲೆ ಮೇಲೆ ಸೆರಗು ಎಳ್ಕೊಂಡು ಬದಿಗೆ ಸರಿದು ನಿಂತ್ಳು.

‘ಅಯ್ಯಾರೇ, ಇಲ್ಲಿಗ್ಯಾಕೆ ಬರೋಕೆ ಹೋದ್ರಿ, ಅವ ಕೆರೆತಾಕೆ ಹೋಗವ್ನೆ’ ತಲೆ ತಗ್ಗಿಸಿಕೊಂಡು ನೆಲ ನೋಡ್ಕೋತಾ ಅಂದ್ಳು ಚನ್ನಿ. ಅವಳನ್ನ ನೋಡಿ ಗೌಡ ಮೃದುವಾದ. ‘ಕೆರೆಕಡೆ ಹೋಗೋಕೆ ಸೂರ್ಯ ನೆತ್ತಿ ಮೇಲೆ ಬರ್ಬೇಕೇನೆ ಚನ್ನಿ’ ಅವಳನ್ನೇ ನೋಡ್ತಾ ಮೀಸೆ ಸವರ್ಕೊಂಡು ಹೇಳ್ದ. ಅವನ ಮಾತಲ್ಲಿ ಸಿಟ್ಟಿದ್ರೂ ಧ್ವನೀಲಿ ಗಡಸುತನ ಇರ್ಲಿಲ್ಲ.

ಚನ್ನಿ ಮಾತಾಡಲಿಲ್ಲ. ‘ತಿನ್ನೋ ಹಂಗೆ ನೋಡ್ತಾನೆ’ ಅಂತ ಬೈಯ್ಕೊಂಡ್ಲು ಮನಸಿನಾಗೆ.

ಬಿಸಿಲ ರವಸಕ್ಕೆ ಹೊಲ್ದಾಗೆ ಉಳ್ಮೆ ಮಾಡ್ತಿದ್ದ ಈರ ಬೆವೆತು ನೀರಾಗಿದ್ದ. ಸೂರ್ಯ ನೆತ್ತಿ ಮೇಲೆ ಬಂದು ನೆಲ ಸುಡೋಕೆ ಶುರು ಮಾಡಿದ್ದ. ಹಿಂದಿನ ದಿನ ಮಳೆ ಬಂದಿದ್ರೂ ಬಿದ್ದ ನೀರ್ನೆಲ್ಲ ಆತನೇ ಹೀರ್ಕತ್ತಿದ್ದ.

ಹೊಟ್ಟೆ ಚುರುಗುಡಾಕೆ ಶುರುಹಚ್ಕಂಡಾಗ ದೂರದಲ್ಲಿ ಚನ್ನಿ ಬುತ್ತಿ ಹೊತ್ಕೊಂಡು ಬಿರಬಿರನೆ ನಡ್ಕೊಂಡು ಬರೋದು ಕಾಣಿಸ್ತು. ಜೊತೆಗೆ ಮಗಳು ಲಚ್ಮಿ, ಅಮ್ಮನ ಸರಿಸಮ ಕಾಲು ಹಾಕಕ್ಕಾಗ್ದೆ ಬುಡುಬುಡು ಅಂತ ಓಡಿಕೊಂಡು ಬರ್ತಾ ಇದ್ಳು.

ಹಾರು ಬಿಚ್ಚಿದ ಈರ ಊಟಕ್ಕೆ ಕುಂತ. ಮುದ್ದೆಗೆ ಸಾರು ಸುರೀತಾ ಚನ್ನಿ ಹೇಳಿದ್ಳು, ‘ಗೌಡ್ರ ಮನೇಲಿ ದೇವ್ರ ಪೂಜಕಂತ ಇಟ್ಟಾರಲ್ಲ, ಅದುಕೆ ಗುಡಿ ಕಟ್ತಾರಂತೆ. ಅಮ್ಮೋರು ಏಳ್ತಾ ಇದ್ರು’

‘ನಿನ್ನ ಹತ್ರ ಹೇಳಿದ್ರೇನೆ’ ಅಂದ ಈರ.

‘ನಾನ್ಯಾವ ಸೀಮೆ ಒಕ್ಕಲು ಅಂತ ನನಗೆ ಹೇಳಾಕೆ ಬಂದಾರು. ಅವರ ಮಕ್ಕಳು, ಭಾವಂದಿರ ಜೊತೆಗೆ ಮಾತಾಡ್ಕಾತ ಇದ್ರು’ ಅನ್ನುತ್ತಾ ಚನ್ನಿ ತನ್ನ ಧ್ವನಿ ತಗ್ಗಿಸಿ ಪಿಸುಮಾತಲ್ಲಿ ಹೇಳಿದ್ಲು, ‘ದೇವ್ರಿಗೆ ಒಡವೆ ಮಾಡಿಸೋಕು ಹಾಕವ್ರಂತೆ. ಕಾಸಿನ ಸರ, ಹವಳದ ಸರ, ಬೆಳ್ಳಿ ಗೆಜ್ಜೆ ಎಲ್ಲಾ ಮಾಡಿಸ್ತಾರಂತೆ’

‘ಅವ್ವಾ ಅವ್ವ, ನಂಗೂ ಕಾಸಿನ ಸರ, ಹವಳದ ಸರ ಕೊಡ್ಸೆ, ಬೆಳ್ಳಿಗೆಜ್ಜೆ ಕೊಡ್ಸೆ. ಅವ್ವಾ ಕೊಡ್ಸೆ’ ಲಚ್ಮಿ ಅವ್ವನ ಕೈಹಿಡಿದು ಎಳೀತಾ ಕೇಳಿದ್ಲು. ಅವಳು ಕೈ ಎಳೆದಿದ್ದಕ್ಕೆ ಸಾರಿನ ಪಾತ್ರೆ ಮಗುಚಿಕೊಳಂಗೆ ಆಯ್ತು. ತಟಕ್ಕಂತ ಪಾತ್ರೆ ಹಿಡ್ಕಂಡ ಚನ್ನಿ, ಮಗಳ ಕೈಗೆ ಎರಡು ಬಾರಿಸಿದ್ಲು.

‘ಹೇ ನಿಮ್ಮಪ್ಪನ ಕೇಳು, ಮಾಡಿಸಿ ಹಾಕ್ತಾನೆ. ಇಲ್ಲಾ ಅಂದ್ರೆ ನನಗೆ ಹಾಕಿರೋದೆ ಭಾರ ಆಗೈತಿ. ತೆಗೆದುಕೊಡ್ತೀನಿ ಸುಮ್ಕೆ ಇರು’ ಅಂತಂದು ಗಂಡನ ಮುಖ ನೋಡಿದ್ಳು ಚನ್ನಿ.

ಲಚ್ಮಿ ಅವ್ವನ ಕೈಬಿಟ್ಟೋಳು ಅಪ್ಪನ ಕುತ್ತಿಗೆ ಸುತ್ತಾ ಕೈಹಾಕಿ ಜೋತುಬಿದ್ದು ‘ಅಯ್ಯಾ ಕೊಡಿಸಯ್ಯಾ. ನಂಗೂ ಸರ ಬೇಕು. ನಂಗೂ ಗೆಜ್ಜೆಬೇಕು’ ಅಂತ ಅಳುವ ಧ್ವನೀಲಿ ಕೇಳಿದ್ಲು. ಮಗಳ ತಲೆ ನೇವರಿಸ್ತಾ ಈರ, ‘ಆಯ್ತು ಮಗಾ ಕೊಡಿಸೋನಂತೆ’ ಅಂದ.

ಗೌಡ್ರು ಗುಡಿ ಕಟ್ಟೊ ವಿಷಯ ಗುಟ್ಟಿನದೇನೂ ಅಲ್ಲ. ಬಾಳ ವರ್ಷದಿಂದಲೂ ಸಣ್ಣೇಗೌಡನ ಅಪ್ಪನೂ ಅದೇ ಆಸೆ ಇಟ್ಕಂಡು, ಅದು ಮಾಡೋ ಮುಂಚೇನೆ ಕಣ್ಣು ಮುಚ್ಕಂಡಿದ್ದ. ಸಣ್ಣೇಗೌಡನಿಗೆ ಅಪ್ಪನ ಆಸೆ ತೀರಿಸ್ಬೇಕು ಅಂತ ಹಟ ಇತ್ತು. ತೋಟದ ಮನೇಲಿ ಭಾನುವಾರ ಬಾಡೂಟಕ್ಕೆ ಕುಂತಾಗ ಜೊತೆಗೆ ಹೇವಾರ್ಡ್ಸ್‌ ಇಟ್ಕಂಡಾಗ ‘ನಮ್ಮ ತಾತಂದ್ರ ಕೈಲಿ ಆಗ್ಲಿಲ್ಲ, ನಾನು ಮಾಡೇ ಮಾಡ್ತೀನಿ ನೋಡ್ತಾ ಇರು’ ಅಂತ ಈರನ ಹತ್ರ ಹೇಳೋನು.

ಸುತ್ತೂರ ಬ್ರಾಂಬ್ರ ಭಟ್ಟರೆನ್ನಲ್ಲಾ ಕರ್ಸಿ, ಮೂರ್ತಿ ಪ್ರತಿಷ್ಠಾಪನೆ, ಪ್ರಾಣ ಪ್ರತಿಷ್ಠಾಪನೆ, 108 ಕಳಶದ ಅಭಿಷೇಕ, ಹೋಮ ಹವನಗಳನ್ನೆಲ್ಲಾ ಜೋಯಿಸ್ರು ಹೇಳಿಕೊಟ್ಟಂಗೆ ಸಾಂಗವಾಗಿ ಮಾಡಿದ ಗೌಡ. ಮುಳ್ಳುಕಟ್ಟು ಮಾರಮ್ಮನ ಗುಡಿ ಜಾತ್ರೆ ಎರಡು ದಿನಗಂಟ ಜೋರಾಗೇ ನಡೀತು. ಮೂರನೇ ದಿನ ದೇವ್ರ ಸಿಡಿ, ಕೆಂಡ, ಮತ್ತೆ ಊರಜನಕ್ಕೆ ಕುರಿ ಊಟ. ಅದ್ನೆ ಕಾಯ್ಕಂಡಿದ್ವು ಊರಜನ. ಬನ್ನೂರ ಕಡೆಯಿಂದ ಹತ್ತುಕುರಿ ಹೊಡೆಸಿದ್ದ ಗೌಡ. ಒಂದೊಂದು ಹತ್ತತ್ರ ಇಪ್ಪತ್ತು ಇಪ್ಪತೈದು ಕೆ.ಜಿ ತೂಗೋವು. ಕೋಳಿಗಳಿಗಂತೂ ಲೆಕ್ಕವೇ ಇಲ್ಲ. ಈ ಕಾಕ್‍ಟೇಲ್ ಕೋಳಿ ಸಾರು, ಬನ್ನೂರು ಕುರಿ ಸಾರು, ಬೋಟಿ, ಖಲೀಜಿ, ತಲೆ ಕಾಲು ಇತ್ಯಾದಿ ಸ್ಪೇರ್ ಪಾರ್ಟ್‌ಗಳ ಮಸಾಲೆ ಗಮಲು ಆಕಾಶನೆಲ್ಲಾ ತುಂಬ್ತಿದ್ದಂಗೆ ಮೇಲೆ ಹದ್ದುಗಳು, ಕೆಳಗೆ ಜನಗೋಳು ತಂಡೋಪತಂಡವಾಗಿ ನೆರೆದ್ವು.

ಮಂದಿ ಮುದ್ದೆ ಮುರಿದ್ರು, ಸೊರಸೊರ ಸಾರು ಕುಡಿದ್ರು, ಹತ್ತಾರು ಕುರಿಗಳು, ನೂರಾರು ಕೋಳಿಗಳು ಕಂತುಕಂತಾಗಿ ಹೊಟ್ಟೆಗಿಳಿದ್ವು. ಢರ್‍ ಅಂತ ತೇಗಿಕೊಂಡು ಜನ ಭಲೇ ಗೌಡ ಸಾರ್ಥಕ ಕೆಲಸ ಮಾಡಿದೆ ಬುಡಪ್ಪಾ ಅಂತ ಹಾಡಿ ಹೊಗಳಿ ಹಲ್ಲಿನ ಸಂದಿಗೆ ಕಡ್ಡಿ ಚುಚ್ಕೊಂಡು ಹೋದ್ರು.

ಎಲ್ಲಾ ಸದ್ದಡಗಿದ ಮೇಲೆ ಗೌಡ ‘ಇವತ್ತು ತೋಟದ ಮನೇಲೇ ಇರ್ತೀನಿ. ನೀವು ನಡೀರಿ’ ಅಂತ ಮನೆ ಮಂದಿನೆಲ್ಲಾ ಸಾಗಹಾಕಿದ. ದೇವ್ರಿಗೆ ಹಾಕಿದ ಒಡವೆ ಪಡವೆ ಎಲ್ಲಾ ಹಂಗೆ ಇತ್ತು. ಈರಂಗೆ ದೇವಸ್ಥಾನದ ಜಗಲಿ ಮೇಲೆ ಮಲಕಳಕ್ಕೆ ಹೇಳಿದ. ಲಚ್ಮಿ ಅಪ್ಪನ ಜೊತೆ ನಾನು ಬರ್ತೀನಿ ಅಂತ ಓಡಿಬಂದ್ಳು. ಮಗಳ ಜೊತೆ ಚನ್ನೀನೂ ಅಲ್ಲಿಗೆ ಬಂದ್ಳು.

ಸಣ್ಣೇಗೌಡ ತೋಟದ ಮನೆ ಸೇರ್ಕೊಂಡೋನು ಈರನ್ನ ಕರೆದ. ಅವತ್ತು ಪೆಸಲ್‍ಡೇ. ಹೇವಾರ್ಡ್ಸ್‌ ಕ್ವಾರ್ಟರ್ ಬಾಟಲಲ್ಲ, ಫುಲ್ ಬಾಟಲ್‍ಗಳು ನಾಲ್ಕೋ ಐದೋ ಇದ್ವು. ಈರ ಸೇವೆಗೆ ನಿಂತ.

ಅರ್ಧ ಬಾಟಲ್ ಮುಗಿಯೋ ಅಷ್ಟರಲ್ಲಿ, ಗೌಡ, ‘ಬಾರ್ಲಾ ನೀನೂ ತಗೋ’ ಅಂತ ಈರನ್ನ ಕರೆದ. ‘ಹೇಯ್ ನಿಮ್ಮೆದುರಿಗಾ, ಬ್ಯಾಡ ಅಯ್ನೋರೆ’ ಅಂದ ಈರ. ‘ಲೇ ಬೋಸುಡಿಕೆ, ನೀನು ಕದ್ದು ಕುಡಿಯೋದು ನಾನೇನು ಕಂಡಿಲ್ಲೇನೋ, ಬಾ ಇವತ್ತು ಎದುರಿಗೆ ಕುಡಿ. ಗೌಡನ ತಾಕತ್ತು ತೋರ್ಸಿದೀನಿ ಇವತ್ತು ಊರ ಜನರಿಗೆ. ಮಜಾ ಮಾಡು ತಗಾ’ ಅಂದ. ಈಗ ಬ್ಯಾಡ ಅಂದ್ರೆ ಮಂಗ ಆಗ್ತೀನಿ ಅನ್ನುಸ್ತು ಈರನಿಗೆ. ‘ಏನೋ ನಿಮ್ಮದಯಾ’ ಅಂತ ಗೌಡ ಕೊಟ್ಟ ಲೋಟ ತಕ್ಕಂಡು ಟವಲ್ ಮುಚ್ಕಂಡು ಗಂಟಲ ಒಳಗ ಹುಯ್ಕೊಂಡು ಸಿವ ಸಿವ ಅಂತ ಬಾಯಿ ವರ್ಸಿ ಕೊಂಡ. ನಂತರ ಶುರುವಾದ ಅವರ ಮಾತುಕತೆ ಅವರಿಗೆ ಬೇಕಾದೋರ ಬಗ್ಗೆ, ಬೇಡವಾದೋರ ಬಗ್ಗೆ ಹೇಳಬಾರದ, ಕೇಳಲಾಗದ ಮಟ್ಟಕ್ಕೆ ಹೋಗಿ, ರಾತ್ರಿ ಬಹಳ ಹೊತ್ತಿನವರೆಗೂ ಗೌಡ ಅಬ್ಬರಿಸುತ್ತಲೇ ಇದ್ದ.

ಗುಡಿ ಜಗುಲೀಲಿ ಮಲಗಿದ್ದ ಚನ್ನೀಗೂ ಇವರ ಗಲಾಟೆ ಕಿವಿಗೆ ಬೀಳ್ತಿತ್ತು. ಲಚ್ಮಿ ಅವ್ವನ ಪಕ್ಕ ಮಲಗಿದ್ದೋಳು ‘ಅವ್ವಾ ಅಲ್ಲಿ ನೋಡೆ ದೇವ್ರಿಗೆ ಸರ ಹಾಕವ್ರೆ. ನಂಗೆ ಕೊಡಿಸ್ತೀನಿ ಅಂತ ಹೇಳಿ ಸುಳ್ಳು ಹೇಳಿದ್ರಿ ಹೋಗ್ರಿ’ ಅಂತ ಮುನಿಸು ಮಾಡಿದಳು.

ಆರೇಳು ವರ್ಷದ ಆ ಮಗೀಗೆ ಕಾಸಿನ ಸರದ, ಹವಳದ ಸರದ ಬೆಲೆ ಗೊತ್ತಿರಲಿಲ್ಲ. ಅದಕ್ಕೆ ಅವೆಲ್ಲಾ ಬೇಕೂ ಆಗಿರಲಿಲ್ಲ. ಸಂತೇಲಿ ಬತಾಸಿಗೆ ಆಸೆ ಮಾಡೋ ಹಂಗೆ ಅದು ಸರ ಆಸೆ ಮಾಡ್ತಿತ್ತು. ಸಂತೇಲಿ ಸಿಗೋ ಮೂರುಕಾಸಿನ ಸರ ಕೊಡ್ಸಿದ್ರೂ ಅದಕ್ಕೆ ಅಷ್ಟೇ ಖುಷಿ ಆಗ್ತಿತ್ತು. ‘ಸುಮ್ನೆ ಮಂಕಂತೀಯೋ ಇಲ್ವೋ. ಅಂಗೆ ಬೇಕು ಅಂದ್ರ ಹೋಗು ಆ ದೇವ್ರಿಗೇ ಕೇಳು. ಕೊಟ್ರ ಇಸ್ಕಾ’ ಅಂತೇಳಿ ಚನ್ನಿ ತೋಳಿಗೆ ತಲೆ ಹಚ್ಚಿ ಮಲಕ್ಕೊಂಡ್ಳು. ಮೂರ್ನಾಕು ದಿನದ ಸುಸ್ತಿಗೆ ಅವಳ ಕಣ್ಣೇಳಿತಿದ್ವು. ಅವಳಿಗೆ ಯಾವಾಗ ನಿದ್ದೆ ಬಂತೋ ಅವಳಿಗೆ ಗೊತ್ತಿಲ್ಲ.

ಚನ್ನಿ ಚನ್ನಿ ಅಂತಾ ಕರದಂಗಾದಾಗ ಎಚ್ಚರಾಯ್ತು. ಈರ ಇನ್ನೂ ಬಂದಿಲ್ಲ. ಈಗ ಕರ್ದಂಗೆ ಆಯ್ತಲ್ಲಾ. ಇಬ್ರೆ ಇಲ್ಲಿದಿವಿ ಅನ್ನೋ ಹರಾಸು ಇಲ್ಲ ಇವನಿಗೆ ಅಂತ ಗೊಣಗಿಕೊಂಡು ಅವನ ಕರ್ಕೊಂಡು ಬರಾಕೆ ಅಂತ ತೋಟದ ಮನೆ ಹತ್ರ ಬಂದ್ಳು. ಈರ ಕಾಲು ಮಡಚಿಕೊಂಡು ಬಾಗ್ಲ ಹತ್ರಾನೆ ಅಡ್ಡಡ್ಡ ಮಲಗಿ ಬಿಟ್ಟಿದ್ದ. ‘ಹೇ ಗಂಡಸೇ ಎದ್ದೇಳು, ಅಲ್ಲಿ ಮಗಾ ಒಂದೇ ಮಲಗೀತೆ’ ಅಂತ ಪ್ರಜ್ಞೆಯೇ ಇಲ್ಲದೇ ಮಲಗಿದ್ದ ಅವನನ್ನ ಅಲುಗಾಡಿಸಿದಳು ಚನ್ನಿ.

‘ಅವನು ಇವತ್ತು ಏಳಾಕಿಲ್ಲ ಬಿಡು ಚನ್ನಿ’ ಗೌಡನ ಧ್ವನಿ ಹಿಂದಿನಿಂದ ಕೇಳಿಸಿತು. ಗಾಬರಿಯಿಂದ ಅವಳು ಹಿಂದೆ ತಿರುಗಿ ನೋಡೋ ಅಷ್ಟರಲ್ಲಿ ಗೌಡನ ಬಲವಾದ ಕೈಗಳು ಅವಳ ಎರಡೂ ಭುಜಗಳನ್ನು ಗಟ್ಟಿಯಾಗಿ ಹಿಡಕೊಂಡವು. ಅವನ ಹಿಡಿತ ಬಿಡಿಸಿಕೊಂಡು ಎದ್ದು ನಿಂತ ಅವಳು ‘ಅಯ್ನೋರೆ, ಮಗ ಒಂದೇ ಮಲ್ಗೀತೆ, ಈರನ್ನ ಕರ್ಕೊಂಡು ಹೋಗಾನ ಅಂತ ಬಂದೆ’ ಎಂದು ತೊದಲಿದಳು.
ಕ್ಯಾಂಡಲ್ ಬಲ್ಬಿನ ಬೆಳಕಲ್ಲಿ ಕೆಂಪು ಕಣ್ಣು, ಊದಿದ ಮುಖ, ದಪ್ಪ ಮೀಸೆ, ಚನ್ನಿ ಕಣ್ಣಿಗೆ ಗೌಡ ರಾಕ್ಷಸನ ತರ ಕಂಡ. ‘ಬಾಳ ದಿನದಿಂದ ಆಸೆ ಮಡಗಿದ್ದೆ ಚನ್ನಿ. ಬ್ಯಾಡ ಅನ್ಬೇಡ’ ಅಂತ ಹೇಳ್ತಾ ಗೌಡ ಮುಂದೆ ನುಗ್ಗಿದವ್ನೆ ಚನ್ನೀನ ಗಟ್ಟಿಯಾಗಿ ಅಪ್ಪಿಕೊಂಡುಬಿಟ್ಟ. ಚನ್ನಿ ಕೊಸರಾಡ್ತಾ ಇದ್ರೆ, ಅವಳ ಮೈಮೇಲೆಲ್ಲಾ ಕೈ ಆಡಿಸ್ತಾ ಕೆಳಕ್ಕೆ ಕೆಡವಿಕೊಂಡುಬಿಟ್ಟ. ಚನ್ನಿ ಈಗ ನಿಜವಾಗಿಯೂ ದಿಗಿಲುಗೊಂಡ್ಳು. ಈರ ಈರ ಅಂತ ಕೂಗಿಕೊಂಡ್ಳು. ಈರನ ಎಳೆದು ಅಲ್ಲಾಡಿಸಿದ್ಳು. ಈರ ಮುಲುಗುಟ್ಟಿದ. ‘ಚನ್ನಿ ನನ್ನ ಮಾತು ಕೇಳು, ನಿನ್ನ ರಾಣಿತರಾ ನೋಡ್ಕೊತಿನಿ’ ಅಂತ ಗೌಡ ಮತ್ತೆ ಅವಳನ್ನ ಹತ್ತಿರಕ್ಕೆ ಎಳಕೊಂಡ.

‘ಥೂ! ನಿನ್ ಮಕ್ಕೇ, ದೇವ್ರಗುಡಿ ಮಾಡಿದಾನೆ ಪುಣ್ಯಾತ್ಮ ಅಂತ ಜನ ಅಂತಿದ್ರೆ ಇಂಥಾ ಹಲ್ಕಟ್‍ಕೆಲ್ಸಾ ಮಾಡೋಕೆ ಬತ್ತಿದಿಯಲ್ಲಾ ಆ ತಾಯಿ ಮೆಚ್ತಾಳಾ’ ಅಂದ್ಳು ಚನ್ನಿ ರೋಷದಿಂದ.

‘ನೀನು ಹೂ ಅನ್ನು, ಆ ದೇವ್ರಿಗೆ ಹಾಕಿರೋ ಒಡವೇನೆಲ್ಲಾ ನಿಂಗೇ ಕೊಡ್ತೀನಿ. ಬಾರೆ ಚನ್ನಿ’ ಅಂತ ಗೌಡ ಹತ್ರ ಬಂದ.

ಚನ್ನಿ ಈರನ ಎಬ್ಬಿಸೋ ಆಸೆ ಬಿಟ್ಟವಳೇ, ಬಾಗಿಲ ಕಡೆಯಿಂದ ಹಾರಿ ಗುಡಿ ಕಡೆ ಓಡತೊಡಗಿದಳು. ಗೌಡನೂ ಅವಳ ಹಿಂದೇನೆ ಓಡ್ದ. ಉತ್ಸವಕ್ಕೆ ಅಂತ ಗುಡಿ ಮುಂದೆ ಹಾಕಿದ ಕೊಂಡ ನಿಗಿ ನಿಗಿ ಅಂತಾನೆ ಇತ್ತು. ಕೊಲ್ಡುಗಳು ಚೆನ್ನಾಗಿ ಉರ್ದು ಕೆಂಡ ಆಗಿ ಹೊಗೆ ಆಡ್ತಾ ಇದ್ವು. ಚನ್ನಿ ಓಡೋ ಆತುರದಲ್ಲಿ, ಮಗೀನ ಕಡೆ ಗಮನದಲ್ಲಿ, ಕೊಂಡಾನೂ ಕಾಣ್ದೆ ಅದನ್ನ ಹಾಯ್ಕಂಡೇ ದಾಟಿಬಿಟ್ಳು. ಹಿಂದೆ ಓಡಿಬಂದ ಗೌಡನಿಗೆ ಚನ್ನಿ ಮೇಲಿನ ಆಸೆ ಕಾತರ, ತಲೆಗೆ ಏರಿದ್ದ ನಶೆ, ಕತ್ತಲು ಎಲ್ಲಾ ಸೇರಿ ಅವಳ ಹಿಂದೆ ಬಂದೋನು ಕೆಂಡದ ರಾಶಿ ಮೇಲೆ ಕಾಲಿಟ್ಟು ಅದರೊಳಗೆ ಬೋರಲಾಗಿ ಬಿದ್ಬಿಟ್ಟ. ಮೈಸುಡ್ತಾ ಇದ್ದಂಗೆ ಅವನ ನಶೆ ಇಳಿದು ‘ಅಯ್ಯೋ ಸತ್ನಲ್ಲಪ್ಪೋ’ ಅಂತ ಬೊಬ್ಬೆ ಹೊಡೆಯೊಕ್ಕೆ ಶುರುಮಾಡಿದ. ಈ ಗಲಾಟೆಗೆ ಈರ ಎಚ್ಚರಾಗಿ ಓಡಿಬಂದು ನೋಡತಾನೆ, ಗೌಡ ಕೆಂಡದಲ್ಲಿ ಹೊರಳಾಡ್ತಾ ಅವ್ನೆ, ಆ ಕಡೆ ಚನ್ನಿ ಮಗೀನ ಹೆಗಲ ಮೇಲೆ ಹಾಕ್ಕೊಂಡು ದಿಕ್ಕು ತೋಚದಂಗೆ ನಿಂತವ್ಳೆ. ಈರ ಓಡಿಬಂದವ್ನೆ ಗೌಡನ್ನ ಕೆಂಡದಿಂದ ಈಚೆಗೆ ಎಳೇದು ಹಾಕ್ದ. ಆಮೇಲೆ ಚನ್ನಿ ಹತ್ರ ಓಡಿಬಂದ.

ಚನ್ನಿ ಈರನ ಕೈ ಹಿಡ್ಕಂಡು ‘ನಡಿ ಹೋಗಾನ. ಇಲ್ಲಿರೋದು ಬ್ಯಾಡ’ ಅಂದಳು. ‘ಯಾಕೆ ಚನ್ನಿ ಗೌಡ್ರು ಸುಟ್ಕಂಡ್ರು? ಜನ ಕರ್ಕೊಂಡು ಬರ್ತೀನಿ ತಾಳು’ ಅಂದ ಈರ. ‘ಗೌಡನ ಕೂಗಾಟಕ್ಕೆ ಜನ ಬಂದೇ ಬರ್ತಾರೆ, ಅವನ್ನ ನೋಡ್ಕೋತಾರೆ. ನಾವಿಲ್ಲೇ ಇದ್ರೆ ನಮ್ಮನ್ನ ಕೆಂಡಕ್ಕೆ ಹಾಕತಾರೆ. ನಡೀ ಹೋಗಾವ’ ಅಂತ ಚನ್ನಿ ಈರನ ಕೈ ಹಿಡ್ಕಂಡು ದರದರ ಅಂತ ಎಳ್ಕೊಂಡು ಹೊರಟೇಬಿಟ್ಳು. ಏನೋ ಎಡವಟ್ಟಾಗಿದೆ ಅನ್ನುಸ್ತು ಈರನಿಗೆ.

ಅವನು ಸತ್ತೆ ಸತ್ತೆ ಅಂತ ಕೂಗು ಹಾಕ್ತಾ ಇದ್ದ ಗೌಡನ ಕಡೆ ಒಂದು ಸಲ ನೋಡ್ದ. ಆಮೇಲೆ ಚನ್ನಿ ಕಡೆ ನೋಡ್ದ. ಮಗ ಎತ್ಕೊಂಡು ಬಿರಬಿರನೆ ಸಾಗುತ್ತಿದ್ದ ಅವಳ ಹಿಂದೆ ಮಂತ್ರ ಹಾಕಿಸ್ಕೊಂಡರ ಹಂಗೆ ನಡೆದ.

ಮಳವಳ್ಳಿ ದಾರಿ ಹಿಡಿದು ನಡೀತಿದ್ದ ಅವರಿಗೆ, ಗದ್ದಲ ಕಡಿಮೆ ಆಗ್ತಿದಂಗೆ ತಮ್ಮ ಹಿಂದೇನೆ ಘಲ್‌ ಘಲ್‌ ಅಂತ ಗೆಜ್ಜೆ ಸದ್ದು ಕೇಳಿಬರೋದ.

ಒಂದು ನಿಮಿಷ ಇಬ್ರೂ ಗಪ್ಪಾಗಿಬಿಟ್ರು.

‘ಏನದು ಶಬ್ದ’ ಅಂದ ಈರ ಪಿಸುಗುಡುತ್ತಾ.

ಚನ್ನಿ ಎತ್ಕೊಂಡಿದ್ದ ಮಗೀನ ಕಾಲು ತಡವುದ್ಳು. ಲಚ್ಮಿ ಕಾಲಲ್ಲಿ ದೇವ್ರಿಗೆ ಮಾಡ್ಸಿದ್ದ ಬೆಳ್ಳಿ ಗೆಜ್ಜೆ ಕತ್ತಲಲ್ಲೂ ಹೊಳೀತಿತ್ತು. ಮಗೀನ ಕೊರಳಲ್ಲಿ ಕಾಸಿನ ಸರ, ಹವಳದ ಸರ.... ಚನ್ನಿ ತೊದಲಿದಳು ‘ಮಗಾ ತಗಂಡು ಹಾಕಂಡುಬಿಟ್ಟೀತೆ!’

ಗುಡೀಲಿದ್ದ ಮುಳ್ಳುಕಟ್ಟು ಮಾರಮ್ಮನ ಪಡಿಯಚ್ಚು ಹೆಗಲ ಮೇಲೆ ಮಲಗಿದ್ದ ಲಚ್ಮಿ ಮುಖದಲ್ಲಿ ಕಾಣಿಸ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT