ಬುಧವಾರ, ಜೂನ್ 16, 2021
23 °C

ಕಥೆ | ಸಾಕ್ಷ್ಯ ಚಿತ್ರ‌

ಅನಂತ ರಮೇಶ್ Updated:

ಅಕ್ಷರ ಗಾತ್ರ : | |

Prajavani

ಪಾದೇಗೌಡರು ಇರೋದು ಹನುಮನಹಳ್ಳಿ. ರಾಮನಗರ ಪಟ್ಟಣದ ಪಕ್ಕದಲ್ಲಿದೆ. ಈ ಮೂಲೆಯ ಹಳ್ಳಿಗೂ ರಾಮನಗರಕ್ಕೂ ಹದಿನೈದು ಮೈಲಿ. ಒಂದೆರಡು ಸಾವ್ಕಾರಿ ಬಸ್ಸು, ಮೂರ್ನಾಲ್ಕು ಟೆಂಪೊ ಸರ್ವೀಸು, ಒಂದಷ್ಟು ಬೈಕು, ಸ್ಕೂಟರಗಳು ಪಟ್ಟಣದ ಸಂಪರ್ಕ ಸೇತುಗಳು.

ಪಾದೇಗೌಡರು ಹಳ್ಳೀಲಿ ಎಲ್ಲರಿಗಿಂತ ಹಿರಿಯ. ಶತಾಯುಷಿ. ಹೆಂಡತಿ ತೀರಿಹೋಗಿ ಇಪ್ಪತ್ತು ವರ್ಷವಾಯ್ತು. ಒಬ್ಬ ಮಗ ಮತ್ತು ಅವನ ಸಂಸಾರ. ಇಬ್ಬರು ಹೆಣ್ಮಕ್ಳನ್ನ ಪಕ್ಕದೂರಿಗೆ ಕೊಟ್ಟಿದಾರೆ. ಗೌಡ್ರ ಮಗನಿಗೆ ಒಬ್ಬ ಮಗ, ಅವನಿಗೂ ಮದುವೆಯಾಗಿದೆ. ಮಗನ ಮಗಳಿಗೂ ಮದುವೆಯಾಗಿ ಹದಿನೈದು ವರ್ಷವಾಯ್ತು.

ಐದೆಕ್ರೆ ತೋಟ, ಮೂರೆಕರೆ ಹೊಲ ಮತ್ತೆ ರೇಷ್ಮೆ ಸಾಕಣೆ ಅವರ ಕುಟುಂಬದ್ದು. ಗೌಡ್ರು ಬೆಳಿಗ್ಗೆ ಬೇಗ ಎದ್ದು ಎದ್ದು ತೋಟ, ಗದ್ದೆ ನೋಡ್ಕೊಂಡು ವಾಪಸ್ಸು ಬರೋವಾಗ ಸೊಸೆ ಅಥವಾ ಸೊಸೆಯ ಸೊಸೆ ಕುದಿಯೊ ಕಾಫಿ ಕೊಡ್ತಾಳೆ. ಕುಡ್ದು ಸ್ನಾನ ಮುಗ್ಸಿ, ವಿಭೂತಿ ಹಚ್ಚಿ, ದೇವರಿಗೆ ಊದುಬತ್ತಿ ಹಚ್ಚಿ, ಸೂರ್ಯನಿಗೂ ಬೆಳಗಿ ಬರೋದ್ರಲ್ಲಿ ರಾಗಿದೋ, ಅಕ್ಕಿದೋ ರೊಟ್ಟಿ ತಟ್ಟೆಮೇಲೆ ಇರುತ್ತೆ. ಖಾರದ ಚಟ್ನಿ ಜೊತೆ ತಿಂದ್ರೆ ಏನಾದ್ರೂ ಸೇರೀತು. ಒಂದು ಚೊಂಬು ನೀರು ಕುಡಿದು, ಹೊರ ಬಂದು ಬೀಡಿ ಹಚ್ಚೋದು ರೂಢಿ.

ಗೌಡ್ರಿಗೆ ಒಂದೆರಡು ಚಟಗಳಿವೆ. ಬೀಡಿ ಸೇದೋದು, ಎಲೆ ಅಡಿಕೆ ಜೊತೆ ಸ್ವಲ್ಪ ಹೊಗೆಸೊಪ್ಪು ಮತ್ತೆ ನಶ್ಯ. ಪಟ್ಣಕ್ಕೆ ಹೋದಾಗೆಲ್ಲ ಬಸವರಾಜು ಹೋಟೆಲ್‌ನಲ್ಲಿ ಎರಡೆರಡು ಮಸಾಲೆ ದೋಸೆ ಮತ್ತೆ ಡಬಲ್‌ ಸ್ಟ್ರಾಂಗ್‌ ಕಾಫಿ ಕುಡಿಯೋದು.

ಊರವರು ಮತ್ತೆ ರಾಮನಗರದ ಪರಿಚಯಸ್ತರು ಹೇಳೋದು ಈ ಚಟದಿಂದಲೇ ಗೌಡ್ರಿಗೆ ಆಗಾಗ ಆರೋಗ್ಯದ ಏರುಪೇರು ಆಗೋದು ಅಂತ.

ತಿಂಗಳಲ್ಲಿ ಒಂದೆರಡು ಸಲವಾದರೂ ರಾಮನಗರದ ಡಾಕ್ಟರ್‌ ಚಿರಂಜೀವಿ ಹತ್ರ ಹೋಗಿ ಏನಾದರೂ ಔಷಧೋಪಚಾರ ಪಡೀಯೋ ಅಭ್ಯಾಸ ಗೌಡ್ರಿಗೆ.

ಇವತ್ತು ಬೆಳಿಗ್ಗೆ ಎದ್ದ ಮೇಲೆ ದೇಹದಲ್ಲಿ ಲವಲವಿಕೆ ಇಲ್ಲ ಅನ್ನಿಸಿಬಿಡ್ತು. ದೊಡ್ಡ ಮಗನ ಹತ್ರ ‘ಲೇ ಮಗಾ, ಡಾಕ್ಟ್ರು ತಾವ ಓಗ್‌ಬರ್ತೀನಿ. ಯಾಕೋ ಮಂಡಿ ನೋವು, ತಲೆ ಬೇರೆ ಧಿಂ ಅಂತಿದೆ?’

‘ಅಪ್ಪಾ... ನಾನೆಷ್ಟು ಸಲ ಹೇಳಿದೀನಿ. ಹೊಗೆಸೊಪ್ಪು ಬಿಡು ಅಂತ. ಮಂಡಿನೋವ್ಗೂ, ತಲೆ ತಿರ್ಗೋದಕ್ಕೂ ಏನು ಸಂಬಂಧ? ನಿಂಗೆ ಪೇಟೆಗೋಗೊದಿಕ್ಕೆ ಒಂದು ನೆವ’. ಮಗ ಹಾಗೆ ಗೊಣಗುವಾಗ, ಮೊಮ್ಮಗ ಪಾದೇಶ್‌, ಗೌಡ್ರ ಕೈಗೆ ಐನೂರು ರೂಪಾಯಿ ಕೊಟ್ಟ!

‘ಆ ಚಪ್ರದ ಬಳ್ಳಿ ಒಣಗ್ಸಿ ಪೌಡ್ರು ಮಾಡು ಅಂದಿದ್ನಲ್ಲ. ಮಾಡಿದ್ರೆ ಮೂರು ಪೊಟ್ಟಣ ಮಾಡಿ ಕೊಡು’ ಮಗನಿಗೆ ಹೇಳುತ್ತಾ, ಹಣ ಜೇಬಲ್ಲಿಟ್ಟುಕೊಂಡರು.

ತಲೆಗೆ ಸ್ವಲ್ಪ ಹರಳೆಣ್ಣೆ ಜಾಸ್ತೀನೆ ಹಚ್ಚಿ, ಬಳ್ಳಿ ಪೌಡರ್‌ ತನ್ನ ಮಾಮೂಲು ಚೀಲಕ್ಕೆ ಹಾಕಿ, ಕೊಡೆ ಹಿಡ್ದು ಹತ್ತು ಗಂಟೆ ಬಸ್ಸಿಗೆ ಅರ್ಧಗಂಟೆ ಮೊದಲೆ ಹೋಗಿ ಸ್ಟಾಪ್‌ ಹತ್ರ ನಿಂತ್ರು.

‘ಏನೋ ರಾಜಾ, ಎಂಗಿದೀಯ? ಭತ್ತ ಈದಫ ಎಷ್ಟ್‌ ಪಲ್ಲ ಬಂತು?ʼ

‘ಲೇ, ರಂಗಾ.. ಯಾಕೆ ಅಂಗೇ ಓಗ್ತಾ ಇದೀಯ? ಬಾ ಇಲ್ಲಿ. ಅದೇನು ಮೊನ್ನೆ ನನ್ನ ಮೊಮ್ಮಗನ್ತಾವ ಜಗ್ಳ ತೆಗ್ದೀಯಂತಲ್ಲ?’

‘ಮಾದೇವ, ಬಾ ಮಗಾ.. ನಾಳೆ ಬೆಳಿಗ್ಗೆ ನಮ್ಮ ತೋಟ್ದಾಗೆ ಅಡ್ಕೆ ಇಳ್ಸೋದಿದೆ. ಬೇಗ್ನೆ ಬಂದ್ಬಿಡು’ ಅಬ್ಬಬ್ಬ, ಗೌಡ್ರಿಗೆ ಎಲ್ಲಾ ವಿಷಯ ಬೇಕು!

ಬಸ್ಸು ಬರೋದರೊಳಗೆ ಹೀಗೆ ಒಂದಷ್ಟು ಮಾತು ಮುಗಿಸಿದರು. ಬಸ್ಸೊಳಗೂ ಒಂದು ಹತ್ತು ಜನ ಪರಿಚಯದವರು ಸಿಕ್ಕಿ ಮಾತು ಪಟ್ಣ ತಲುಪೋವರೆಗೆ ನಡೀತು.

ರಾಮನಗರ ತಲುಪಿದಾಗ ಹನ್ನೊಂದೂವರೆ ಗಂಟೆ ಆಗೇ ಬಿಟ್ಟಿದೆ. ಮೊದ್ಲು ‘ಡಾಕ್ಟರ್ತಾವ ಓಗಾಣ’ ಅಂತ ಡಾ. ಚಿರಂಜೀವಿ ಕಡೆ ಹೊರಟ್ರು.

ಗೌಡ್ರು ಬಂದದ್ದೇ ‘ಡಾಕ್ಟ್ರೇ’ ಅಂತ ಒಳಗೆ ಹೋಗೇಬಿಟ್ರು. ಡಾಕ್ಟರ್‌ ಎದುರಿಗಿದ್ದ ಪೇಷಂಟ್‌ನ ಕಳಿಸಿ, ‘ಬನ್ನಿ ಗೌಡ್ರೆ. ಹೋದಸಲ ಕೊಟ್ಟಿದ್ದ ಔಷಧ ಕೆಲ್ಸ ಮಾಡ್ತ? ಈಗ ಆರಮವಾ?’ ಅಂದರು.

‘ಹೌದ್ರ… ಅದೇ ಮಾತ್ರೆ ಇನ್ನೊಂದು ಹದಿನೈದು ದಿನಕ್ಕೆ ಬರ್ಕೊಡಿ. ಅಂಗೇ, ಇಗಾ ಪೌಡರು, ನಿಮ್ಮ ಮನೇವರಿಗೆ ಕೊಡಿ’ ಅಂತ ಚೀಲದಲ್ಲಿಟ್ಟಿದ್ದ ಪೊಟ್ಟಣ ಡಾಕ್ಟರ ಕೈಗೆ ಕೊಟ್ಟರು.

‘ಥ್ಯಾಂಕ್ಸ್‌, ಗೌಡ್ರೆ. ಪೌಡ್ರು ಚೆನ್ನಾಗಿ ಕೆಲ್ಸ ಮಾಡುತ್ತೆ. ನಾಲ್ಕು ತಿಂಗಳಿಂದ ನನ್ನ ಹೆಂಡ್ತಿ ಕಾಲು ನೋವು ಅಂತ್ಲೂ ಹೇಳಿಲ್ಲ, ತಲೆ ಧಿಂ ಅಂತಿದೆ ಅಂತ್ಲೂ ಹೇಳಿಲ್ಲ’

‘ಒಳ್ಳೆದಾಯ್ತು ಬುಡಿ. ಎರಡು ತಿಂಗಳಿಗೆ ಬೇಕಾದಷ್ಟು ತಂದೀನಿ’

ಚೀಟಿ ಬರೆಯುತ್ತಾ ಪ್ರತಿ ಸಲವೂ ಹೇಳುವಂತೆ ಈ ಸಲವೂ ಚಿರಂಜೀವಿ ಹೇಳಿದರು, ‘ಆ ಹಾಳು ಬೀಡಿ, ಹೊಗೆ ಸೊಪ್ಪು ಬಿಟ್ಬಿಡಿ’. ಮತ್ತೆ ಏನೋ ನೆನಪಾಗಿ, ‘ಹೋದ ತಿಂಗಳು ಆರೋಗ್ಯ ಇಲಾಖೆಯವ್ರು ನಿಮ್ಮ ಮೇಲೆ ಒಂದು ಡಾಕ್ಯುಮೆಂಟರಿ ತೆಕ್ಕೊಂಡು ಹೋದ್ರಲ್ಲ. ಅದು ನಾಳೆ ದೂರದರ್ಶನದಾಗೆ ಹಾಕ್ತಾರಂತೆ. ನೋಡಿ. ನಾನೂ ನೋಡ್ತೀನಿ’

‘ಹೌದ್ರಾ? ನೋಡ್ತೀನಿ... ನೋಡ್ತೀನಿ’ ಗೌಡ್ರು ಹೆಮ್ಮೆಯಿಂದ ಮುಖ ಅರಳಿಸಿದರು.

ಅವರೇನೂ ಫೀ ಕೇಳಲಿಲ್ಲ. ಗೌಡ್ರು ಮೆಡಿಕಲ್‌ ಅಂಗಡಿಗೆ ಹೋಗಿ ಪರಿಚಿತ ಈಶ್ವರನ ಕೈಗೆ ಚೀಟಿ ಕೊಟ್ಟದ್ದೇ, ಅವನು ನಗ್ತಾ, ‘ಇಗಾ.. 15 ಮಾತ್ರೆ. ದಿನಾ ಮಧ್ಯಾಹ್ನ ಊಟ್ವಾದ ಮೇಲೆ ಒಂದು ತಗಳ್ಳಿ. ಎರಡೇ ದಿನಕ್ಕೆ ಸರಿ ಹೋಗ್ತೀರ’ ಅಂದ.

‘ಎಷ್ಟಾಯ್ತಪ್ಪ?’ ಅಂತ ಕೇಳಿದ್ರೆ, ಈಶ್ವರ್‌, ‘ಯೇ, ಎಲ್ಲಾದರು ಉಂಟಾ... ನಮ್ಮ ಅಜ್ಜಯ್ಯನ ಫ್ರೆಂಡ್‌ ಅಲ್ವ ನೀವು. ನಿಮ್ಮ ಹತ್ರ ದುಡ್ಡು ತಗೊಂಡರೆ ಅಜ್ಜಯ್ಯನ ಆತ್ಮಕ್ಕೆ ಶಾಂತಿ ಸಿಗತ್ತಾ?’ ಅಂದುಬಿಟ್ಟ!

ಈಶ್ವರ್‌ಗೆ ಕೂಡ ಪೊಟ್ಟಣದ ಪೌಡರ್‌ಕೊಟ್ಟು ‘ಹೋದ ಸಲ ಹೇಳಿದ್ದೆ, ಅಂಗಡೀಲಿ ನಿಂತು ನಿಂತೂ ಕಾಲು ಸೋತೋಗಿದೆ ಅಂತ. ಈ ಪೌಡ್ರು ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಚಮ್ಚ ತಗೋ ಸರಿಹೋಗತ್ತೆ’ ಅಂದರು.

ಅವನು ‘ಗೌಡ್ರೆ ನೆನಪಿಟ್ಕೊಂಡು ತಂದ್ರಲ್ಲಾ ಥ್ಯಾಂಕ್ಸ್’ ಅಂದ.

ಒಂದು ಸುತ್ತು ಪೇಟೆ ಬೀದಿ ಸುತ್ತಿ ಪರಿಚಯದವರನ್ನೆಲ್ಲ ಮಾತಾಡಿಸಿ, ಶಾನುಭೋಗ ಸೀನಪ್ಪನ ಮನೆಗೆ ಹೋಗಿ ‘ರಾಯರೇ...’ ಅಂತ ಕರೆಯೋದಕ್ಕೂ, ಸೀನಪ್ಪನ ಮಗ ಊಟ ಮುಗಿಸಿ ಹೊರ ಬರೋಕ್ಕೂ ಸರಿಯಾಯ್ತು.

‘ಡಾಕ್ಟ್ರು ತಾವ ಬಂದಿದ್ದೆ. ನಿಮ್ಮಪ್ಪ ಎಂಗಿದಾರೆ ಈಗ?’

‘ಏನೂ ಪ್ರಯೋಜನ ಇಲ್ಲ.. ಓಡಾಡಕ್ಕೆ ಕಷ್ಟ. ನೋಡ್ಕಳಕ್ಕೆ ಒಂದಾಳು ಇದೆ’

ಆಗ ಒಳಗಿಂದನೇ ಸೀನಪ್ಪ ‘ಚನ್ನಾಗಿದೀರ?’ ಅಂತ ಕೇಳಿದ್ದಕ್ಕೆ, ‘ಏ.. ಏನು ಚೆನ್ನ ಸ್ವಾಮಿ, ನಾ ಡಾಕ್ಟರ್‌ನ ನೋಡುದು ತಪ್ಪಲಿಲ್ಲ’.

ಬಂದ ಕೆಲಸ ನೆನಪಾಗಿ ಉಳಿದುಕೊಂಡಿದ್ದ ಇನ್ನೊಂದು ಪೌಡ್ರು ಪೊಟ್ಟಣ ಕೊಟ್ಟು ‘ನಿಮ್ಮಪ್ಪಂಗೆ ಇದನ್ನ ಹದಿನೈದು ದಿನಾ ಬಿಡದೆ ಕೊಡು. ಮೈ ನೋವು ಸುಧಾರಿಸತ್ತೆ’.

‘ಊಟ ಮಾಡ್ಕೊಂಡು ಹೋಗಿ’ ಒಳಗಿಂದ ಶಾನುಭೋಗರ ಧ್ವನಿ. ‘ಅದೇನೂ ಬ್ಯಾಡ. ನೀರು ಮಜ್ಜಿಗೆ ಸಾಕು’ ಅಂತ ದೊಡ್ಡ ಲೋಟದ ತುಂಬ ಮಜ್ಜಿಗೆ ಕುಡಿದು ದಣಿವಾರಿಸಿಕೊಂಡರು.

ಒಳಗೆ ನರಳುತ್ತಾ ಮಲಗಿದ ಎಂಬತ್ತು ವರ್ಷದ ಸೀನಪ್ಪನಿಗೆ ಮತ್ತೆ ನೆನಪಾಯಿತು ‘ಪಾದೇಗೌಡ ಹುಟ್ಟಿದ್ದು ‘ಸಾಧಾರಣ’ ಸಂವತ್ಸರ. ಈಗ ವಿಕಾರಿ. ಅಂದ್ರೆ ನೂರು ವರ್ಷ! ಗಟ್ಟಿ ಜೀವ!’ ಯಾಕೋ ನಿಟ್ಟುಸಿರು ಬಿಟ್ಟರು.

ಒಂದು ಗಂಟೆ ಕಳೆದು, ‘ಬಸ್ಸಿಗೆ ಹೊಂಟೆ. ಬರ್ಲಾ’ ಹೇಳಿ ಹೊರಟು ಬಂದದ್ದು ಬಸವರಾಜು ಹೋಟೆಲ್ಲಿಗೆ. ಅದೀಗ ದೋಸೆಗೆ ಹೆಂಚು ಕಾಯಿಸುತ್ತಿದ್ದ ಹುಡುಗ, ‘ಸಂಜೆ ದೋಸೆ, ಮೊದ್ಲು ಗೌಡ್ರಿಗೆ’ ಅಂತ ಕೂಗಿದ. ಮಾಮೂಲಿ ಎರಡು ಖಡಕ್ಕಾಗಿರೊ ಮಸಾಲೆ, ಡಬಲ್‌ಸ್ಟ್ರಾಂಗ್‌ ಕಾಫಿ ಕುಡಿದು ಬಿಲ್ಲು ಗಲ್ಲದಲ್ಲಿ ಕೊಟ್ಟು ಊರ ಬಸ್ಸು ಹಿಡಿಯಲು ಹೊರಟರು.

ಮನೆಗೆ ಬಂದಾಗ ರಾತ್ರಿ ಎಂಟಾಗಿತ್ತು. ‘ನಾಳೆ ಟಿವಿನಾಗೆ ನಂದು ಪಿಚ್ಚರ್‌ ಹಾಕ್ತಾರಂತೆ’ ಅಂತ ಮನೆಯವರಿಗೆಲ್ಲ ಹೇಳಿ, ಊಟ ಮುಗಿಸಿ ಮಲಗುವಾಗ ಏನೋ ಸಮಾಧಾನ.

ಡಾಕ್ಟ್ರ ಹೆಂಡ್ತಿಗೆ ಕಾಲುನೋವು, ತಲೆ ಧಿಂ ಅನ್ನೋದು ಕಡಿಮೆ ಆಗಿದ್ದು ಖುಷಿ. ಪಾಪ, ನಮ್ಮ ಸೀನಪ್ಪ ಓಡಾಡಕ್ಕೂ ಆಗ್ದೆಹೋದ್ನಲ್ಲ ಅಂತ ಬೇಸರ. ಹೋದ ತಿಂಗಳು ಆರೋಗ್ಯ ಇಲಾಖೆ ಕಡೆಯಿಂದ ಆಫೀಸರುಗಳು ಕ್ಯಾಮೆರಾ ತಂದು ತನ್ನ ಬಗ್ಗೆ ಚಿತ್ರ ತೆಗೆದದ್ದು... ಅವರು ಹೇಳಿದಂತೆ, ಎರಡು ಮೂರು ಸಲ ತಾನು ಬೀಡಿ ಸೇದೋದು, ಹೊಗೆಸೊಪ್ಪು, ಎಲೆ ಮೆಲ್ಲೋದು ಕೂಡ ತೆಗೆದದ್ದು, ಸ್ವಲ್ಪ ಕೆಮ್ಮಿ, ಆ ಕಡೆ ತಿರುಗಿ, ಈ ಥರ ಮಲಕೊಳಿ ಅಂತ ಬರೀ ಚಡ್ಡೀಲಿ ಕೂಡ್ಸಿ ತನ್ನ ಎದೆಗೂಡ ಹತ್ರ ತಂದು, ‘ಭಾಳ ಚೆನ್ನಾಗಿ ಕಾಣ್ಸತ್ತೆ’ ಅಂತ ಅವರು ಹೇಳತ ಇದ್ದದು ಎಲ್ಲ ನೆನಪಾಯಿತು. ನಿದ್ರೆಗೆ ಹಾಗೇ ಜಾರಿದರು.

ಬೆಳಿಗ್ಗೆ ಎದ್ದು ಮಾಮೂಲು ಲವಲವಿಕೆಲಿ ಹೊರಗೆ ಹೊರಟಾಗ ಬೆಂಗ್ಳೂರಲ್ಲಿ ಈ ಸಲ ಡಿಗ್ರಿ ಮುಗ್ಸಿದ ಗೌಡ್ರ ಮಗಳ ಮೊಮ್ಮಗ ಬರ್ತಾ ಇರೋದು ಕಾಣಿಸ್ತು. ‘ಓ ನಂಜೊತೆಗೆ ನನ್ನ ಪಿಚ್ಚರ್‌ ನೋಡಕ್ಕೆ ಬಂದಿರಬೇಕು!’ ಒಳಗೊಳಗೆ ಖುಷಿ.

ಮರಿಮಗನ್ನ ಮಾತಾಡಿಸ್ತಾ ಇರೋವಾಗ ನೆನಪಾಗಿ, ‘ಮಗಾ... ಇದ್ಯಾವದೊ ಒಳ್ಳೆ ಮಾತ್ರೆ ರಾಮನಗರ ಡಾಕ್ಟರು ಬರ್ಕೊಟ್ಟವ್ರೆ. ಏನು ಮಾತ್ರೆ ಇದು?’

ಅವನು ‘ಇದಾ... ವಿಟಮಿನ್‌ಮಾತ್ರೆ ಅಷ್ಟೇಯ’ ಅಂದ. ‘ಅಷ್ಟೇಯ’ ಅಂದಿದ್ದು ಅವರಿಗೆ ಇಷ್ಟವಾಗಲಿಲ್ಲ. ‘ನಿಂಗೆ ಗೊತ್ತಾಗಕಿಲ್ಲ ಬಿಡು’ ಅಂತ ಗೊಣಗಿ ಚೀಟಿ ಬೀರುವಲ್ಲಿಟ್ಟರು.

ಸಂಜೆ ಟಿ.ವಿ ಆರೋಗ್ಯ ಕಾರ್ಯಕ್ರಮ. ಮರಿ ಮಗನ ಸಹಿತ ಎಲ್ಲರೂ ಟಿ.ವಿ ಮುಂದೆ ಕುಳಿತಾಗ, ಗೌಡರಿಗೆ ಖುಷಿ ಮತ್ತೆ ಚಡಪಡಿಕೆ. ಯಾವಾಗ ತನ್ನನ್ನ ಟಿ.ವಿಲಿ ನೋಡೋದು ಅಂತ. ಒಂದು ಕುರ್ಚಿ ಎಳೆದು ಕಾಲ ಮೇಲೆ ಕಾಲು ಹಾಕಿ ಠೀವಿಯಲ್ಲಿ ಕುಳಿತರು.

ಸಮಯ ಐದು ಮೂವತ್ತು. ಕಾರ್ಯಕ್ರಮ ಪ್ರಾರಂಭ. ಗೌಡರು ಅಂಗಳದಲ್ಲಿ ಕುಳಿತ ಚಿತ್ರ. ಅವರ ಮುಖ ಕಾಣಿಸ್ತಾ ಇದೆ. ಮನೆಯವರೆಲ್ಲರ ಚಪ್ಪಾಳೆ.

ಗೌಡರ ನೆರಿಗೆಯ ಹಣೆ, ಆಳ ಕಣ್ಣುಗಳು, ಒಳ ಹೋದ ಎರಡೂ ಕೆನ್ನೆ, ಹಾಗೇ ಎದೆ ಗೂಡಿನ ಮೂಳೆಗಳು, ಉಬ್ಬಿದ ನರಗಳ ಕೈ, ಕಾಲು ಟಿ.ವಿ ಪರದೆಯ ತುಂಬಾ. ಬೀಡಿ ಸೇದುತ್ತಾ ಕುಳಿತ ದೃಶ್ಯ. ಹೊಗೆಸೊಪ್ಪು ಬಾಯಿಗೆ ತುಂಬಿಸಿಕೊಳ್ಳುತ್ತಿರುವುದು. ಮುಂದಿನ ದೃಶ್ಯ, ಗೌಡರ ಕೆಮ್ಮು.. ಮೂಲೆಯ ಮಂಚದ ಮೇಲೆ ಮಲಗಿರುವುದು, ಬೆನ್ನಿನ ದೃಶ್ಯ.. ಕತ್ತಲೆ ಕತ್ತಲೆ.. ನರಳುವ ಕ್ಷೀಣ ಸದ್ದು...ಮತ್ತೆ ಹಿನ್ನೆಲೆಯ ಧ್ವನಿ, ‘ನೂರು ವರ್ಷ ಬದುಕಿ ಬಾಳ ಬೇಕಾದ ಜೀವ ಐವತ್ತು ವರ್ಷಕ್ಕೇ ಈ ಸ್ಥಿತಿ!’ ಪೂರಕವಾಗಿ ದು:ಖ ಭರಿತ ವೀಣಾ ಧ್ವನಿಯ ಹಿನ್ನೆಲೆ! ‘ಇದಕ್ಕೆ ಪರಿಹಾರ ಒಂದೇ.... ದುರಭ್ಯಾಸಗಳಿಂದ ದೂರವಿರುವುದು’ ಅನ್ನುವ ಸಂದೇಶ.

ಮನೆಯೊಳಗೆ ಈಗ ನಿಶ್ಯಬ್ಧ.

ಗೌಡರು ಕಸಿವಿಸಿಯಾಗಿ ‘ಸರ್ಕಾರದವ್ರು ತೋರ್ಸೋದರಲ್ಲಿ ಸತ್ಯ ಇದ್ದಾತಾ! ಐವತ್ತು ವರ್ಸಕ್ಕೆ ಸಾಯಿಸ್ತಾ ಅವ್ರೆ!’ ಗೊಣಗುತ್ತಾ ಹೊರ ಹೊರಟು... ಜಗುಲಿಯಲ್ಲಿ ಕೂತು ಜೇಬಿನಿಂದ ಬೀಡಿ ತೆಗೆದು ಬಾಯಿಗಿಟ್ಟು ಕಡ್ಡಿಗೀಚಿದರು. ಒಂದು ನಿಮಿಷ ಅಷ್ಟೇ... ಶಾಂತರಾದರು. ‘ನಂಗೆ ನೂರು ವರ್ಸ ಅಂತ ಜನಕ್ಕೆ ತಿಳಿದ್ರೆ, ಜನ ಬೀಡಿ, ಹೊಗೆಸೊಪ್ಪಿನ ಹಿಂದೆ ಬಿದ್ದಾರು... ಒಳ್ಳೆ ಕೆಲ್ಸ ಮಾಡವ್ರೆ..’ ಅಂದು ಕೊಳ್ಳುತ್ತಾ ಒಂದು ದೀರ್ಘ ದಂ ಎಳೆದರು.

***

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.