ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ನದಿಯಂಥವಳು

Last Updated 27 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಸಿನಿಮಾ ಒಂದರ ಕೆಲಸದ ಸಲುವಾಗಿ ಚೆನ್ನೈನ ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ ಎರಡು ದಿನವಿದ್ದು ಪುನಃ ಬೆಂಗಳೂರಿಗೆ ಹೊರಟಿದ್ದೆ. ಕನ್ನಡದ್ದೇ ಸಿನಿಮಾವಾದರೂ ತಮಿಳು ರೈಟರ್ ಒಬ್ಬರು ಸ್ಕ್ರಿಪ್ಟ್‌ ಮಾಡಿದ್ದರು. ಮೊದಲಿನಿಂದಲೂ ನಮ್ಮವರಿಗೆ ಬೇರೆ ಭಾಷೆಯ ರೈಟರ್ಸ್ ಅಂದರೆ ಶ್ಯಾನೆ ಗೌರವ. ಅವರು ಹತ್ತಾರು ಸಿನಿಮಾ ಕಥೆಗಳನ್ನು ಕದ್ದು ಮಾಡುವ, ರಂಗುರಂಗಾಗಿ ‘ಶಾಟ್‌ವೈಸ್’ ಹೇಳುವ ಕಥೆಗಳೆಂದರೆ ನಮ್ಮವರಿಗೆ ಪ್ರಾಣ. ಒರಿಜಿನಲ್ ಕಥೆಗಳು, ಕಾದಂಬರಿಗಳೆಂದರೆ ಯಾವತ್ತೂ ಅಷ್ಟಕ್ಕಷ್ಟೆ. ರಿಮೇಕ್ ಸಿನಿಮಾಕ್ಕೆ ನಿರ್ಮಾಪಕರು ಹಿರೋಗಳು ಒಗ್ಗಿ ಹೋಗಿದ್ದಾರೆ.

ರಿಮೇಕ್ ಸಿನಿಮಾಗಳನ್ನೇ ಹೆಚ್ಚು ನಿರ್ದೇಶಿಸಿ ತಮ್ಮ ಒರಿಜಿನಾಲಿಟಿಯನ್ನೇ ಕಳೆದುಕೊಂಡ ಎಷ್ಟೋ ನಿರ್ದೇಶಕರೀಗ ರಿಮೇಕ್ಗೇ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಇವರುಗಳು ಶಾಟ್ಸ್ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಸೀನ್ ತೆಗೆದು ಅವನ್ನು ಸ್ಪಾಟ್‌ನಲ್ಲಿಯೇ ಲ್ಯಾಪ್‌ಟಾಪ್‌ಗಳಲ್ಲಿ ನೋಡಿ ರೀ-ಶೂಟ್ ಮಾಡಿ ಸರಿಪಡಿಸುವ ಕಾಲದಲ್ಲೀಗ ನಿರ್ದೇಶಕನೂ ಬ್ರೇನ್ಗೆ ಕೆಲಸ ಕೊಡದಷ್ಟು ಈಸಿಗೋಯಿಂಗ್ ಕಾಯಿಲೆ ಮೈಗಂಟಿಸಿಕೊಂಡು, ರೀಲ್ ಸುತ್ತಿ ಹೇಗೋ ಸಿನಿಮಾ ಮುಗಿಸಿದರೆ ಮತ್ತೊಬ್ಬ ನಿರ್ಮಾಪಕ ಸೂಟ್‌ಕೇಸ್ ಹಿಡಿದು ಕಾದಿರುತ್ತಾನೆ. ನಿರ್ಮಾಪಕನಿಗೆ ಹಾಕಿದ ಹಣ ಬರುತ್ತದೋ ಇಲ್ಲವೋ ಅದರ ಚಿಂತೆ ಹಿರೋಗೂ ಇಲ್ಲ ನಿರ್ದೇಶಕನಿಗೂ ಇಲ್ಲ. ಅಷ್ಟೆ ಏಕೆ ನಿರ್ಮಾಪಕನಿಗೇ ಇಲ್ಲದಂತಹ ಜಮಾನ. ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ಸಿನಿಮಾ ಮಾಡುತ್ತಿರಬೇಕು. ಈಸಬೇಕು ಇದ್ದು ಜಯಿಸಬೇಕಂತೇನಿಲ್ಲ. ಇಂಡಸ್ಟ್ರಿಯಲ್ಲಿರಬೇಕು.

ಒಂದು ಸಿನಿಮಾ ಬಿದ್ದರೆ ಇನ್ನೊಂದು ಎದ್ದೀತೆಂಬ ದೂರದ ಆಶೆ, ಎಲ್ಲರೂ ರೇಸ್ ಕುದುರೆಗಳೇ. ಕಥೆ ಕೇಳಿ ಸಂಭಾಷಣೆ ಬರೆದಿಡುವ ನಮಗೂ ಕಥೆ ಬಗ್ಗೆ ಜಡ್ಜ್ ಮಾಡುವ ಯಾವ ಸ್ವಾತಂತ್ರ್ಯವಿರೋದಿಲ್ಲ. ನಾನಂತೂ ಅನೇಕ ಸಲ ನನ್ನ ಡೈಲಾಗ್ಸ್ಗೆ ಸ್ಕೋಪ್ ಇರುವಂತೆ ಸ್ಕ್ರಿಪ್ಟ್‌ ಚೇಂಜ್ ಮಾಡಿಕೊಂಡು ಬರೆದರೂ ಸರಿಯೆ. ಶೀಟಿ ಬೀಳುವಂತಹ ಪಂಚ್ ಡೈಲಾಗ್‌ಗಳಿದ್ದರಾಯಿತು. ನಿರ್ಮಾಪಕ-ನಿರ್ದೇಶಕರಿಗಿಂತಲೂ ಹಿರೋಗೆ ಕಥೆ ಓಕೆ ಆದರಾಯಿತು. ದುಸ್ರಾ ಮಾತಾಡದೆ ವರ್ಕ್ ಸ್ಟಾರ್ಟ್. ಪಿಕ್ಚರ್ ಫಿನಿಶ್. ಯಾರೂ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಷೋ ಮಸ್ಟ್ ಗೋ ಆನ್. ಇನ್ನು ತತ್ರಾಪಿ ಕನ್ನಡ ರೈಟರ್ ಮನೋಸ್ಥಿತಿ ಕಟ್ಟಿಕೊಂಡು ಯಾರಿಗೇನಾಗಬೇಕಿದೆ. ಮೊದಲೆಲ್ಲಾ ನನ್ನ ಕಾದಂಬರಿಗೆ ಅಪಚಾರವಾಗದಂತೆ ಸಿನಿಮಾಗಳು ಮೂಡಿಬರಬೇಕೆಂದು ದೊಡ್ಡ ದೊಡ್ಡ ನಿರ್ದೇಶಕರ ಜೋಡಿ ಜಗಳವಾಡಿದ್ದಿದೆ. ಹಿರೋಗಾಗಿ ಡೈಲಾಗ್ ಚೇಂಜ್ ಮಾಡಲ್ಲವೆಂದು ಹಠ ಹಿಡಿದ್ದದ್ದೂ ಉಂಟು. ನಮಗೆ ಬೆಂಬಲವಾಗಿ ನಿಲ್ಲುವಂತಹ ನಿರ್ದೇಶಕರುಗಳಿದ್ದರಾಗ. ಈಗ ಎಲ್ಲರಿಗೂ ಹಿರೋಗಳನ್ನು ತೃಪ್ತಿ ಪಡಿಸುವ ರೋಗ. ನನ್ನ ಕಥೆಯನ್ನು ನನ್ನ ಕಣ್ಣೆದುರೇ ಡೈಸೆಕ್ಟ್ ಮಾಡಿ ಹಿರೋ ಇಮೇಜಿಗೆ ತಕ್ಕಂತೆ ಬದಲಿಸಿ ಹಳ್ಳ ಹಿಡಿಸಿದರೂ ಅದಕ್ಕೆ ತಕ್ಕಂತೆಯೇ ಡೈಲಾಗ್ ಹೊಸೆದು ಬಿಸುಡುತ್ತೇನೆ. ನನ್ನ ಕಥೆ ಹೇಗಿದೆಯೆಂದು ಕಾದಂಬರಿ ಓದಿದವರಿಗೆಲ್ಲಾ ಗೊತ್ತು.

ಸಿನಿಮಾದವರ ಹಣೆ ಬರಹವೂ ಪ್ರೇಕ್ಷಕರಿಗೆ ಜಾಹೀರು. ಕ್ಯಾಪ್ಟನ್ ಆಫ್ ದಿ ಶಿಪ್ ಎನ್ನಿಸಿಕೊಳ್ಳಬೇಕಾದ ನಿರ್ದೇಶಕನೇ ಈಗ ಶೀಪ್. ಎಲ್ಲದಕ್ಕೂ ‘ಯಸ್‌ಸರ್-ಸೂಪರ್’ ಅನ್ನುವಾಗ ನಿರ್ಮಾಪಕ ಪಾಪರ್. ತಮಿಳು ರೈಟರ್ಸ್ ಗತ್ತೇಗತ್ತು. ‘ಸ್ಟೋರಿ ಎಂದ ಭಾಷೇಲಿ ಸೊಲ್ಲಣಮ್? ತೆಲುಗು ತಮಿಳ್ ಇಂಗ್ಲೀಷ್? ಚಾಯ್ಸ್ ಈಸ್ ಯುರ‍್ಸ್?’ ಆತ ಕೇಳಿದಾಗ ನನಗೆ ಒಂದಷ್ಟು ತೆಲುಗೇ ವಾಸಿ ಅಂದೆ. ಆತ ತೆಲುಗಲ್ಲಿ ಚೆಪ್ಪಿ, ಇಂಗ್ಲೀಷಲ್ಲಿ ಗೀಚಿದ ಸ್ಕ್ರಿಪ್ಟ್‌ ಫೈಲ್ ಕೈಗಿಟ್ಟಿದ್ದ. ‘ರುಂಬಾ ನಲ್ಲ ಸ್ಟೋರಿ ಸಾ. ವಂಡರ್‌ಫುಲ್ ಸ್ಕ್ರಿಪ್ಟ್‌’ ಎಂದು ಆತನನ್ನು ನಿರ್ಮಾಪಕ ನಿರ್ದೇಶಕ ತಬ್ಬಿ ಮುದ್ದಾಡುವಾಗ ನನ್ನದು ಮೌನ. ಮೌನ ಅಂದರೆ ತಪ್ಪಾಗಿ ಭಾವಿಸಬೇಡಿ. ಮೌನಂ ಸಮ್ಮತಿ ಲಕ್ಷಣಂ ಎಂದರ್ಥ. ಕೇಳಿದಷ್ಟು ಸಂಭಾವನೆಗೆ ನಿರ್ಮಾಪಕನೂ ಒಪ್ಪಿ, ಬಯಸಿದಷ್ಟು ಅಡ್ವಾನ್ಸ್ ಸಿಕ್ಕಾಗ ಚೆನ್ನೈನ ಬಿಸಿಲೂ ತಂಪುತಂಪು ಕೂಲ್ ಕೂಲ್. ನಿರ್ಮಾಪಕ ನಿರ್ದೇಶಕರಿಬ್ಬರೂ ಕಾರ್ಯನಿಮಿತ್ತ ಉಳಿದುಕೊಂಡಿದ್ದರಿಂದ ನಾನೊಬ್ಬನೇ ಬೆಂಗಳೂರಿಗೆ ನೈಟ್ ಹೊರಟೆ. ಬರುತ್ತಾ ಫ್ಲೈಟಲ್ಲಿ ಕರೆತಂದವರೀಗ ಬಸ್ ಹತ್ತಿಸಿ ‘ಟಾಟಾ’ ಮಾಡಿ ಮಾಯವಾಗಿದ್ದರು.

ಎಸ್.ಆರ್.ಎಸ್. ಬಸ್ ಹೊರಟೇ ಬಿಡುವಂತೆ ಸ್ಟಾರ್ಟ್ ಆಗಿಯೂ ಅರ್ಧಗಂಟೆಯಿಂದ ನಿಂತೇಯಿತ್ತು. ಸೆಖೆ ಬೇರೆ. ಹೊರಗೂ ಜನ ಬಸ್ ಒಳಗೂ ಜನ. ಒಂದೆರಡು ಸೀಟು ಖಾಲಿಯಿದ್ದವು. ಅವು ರಿಸರ್ವ್ ಆಗಿದ್ದಿರಬಹುದೆನಿಸಿತು. ಹೊರಗಿದ್ದ ಜನರ ನಡುವೆ ಪಿಳಿಪಿಳಿ ನೋಡುತ್ತಿರುವ ಹುಡುಗಿಯೊಬ್ಬಳು ಕಣ್ಸೆಳೆದಳು. ಕೋಲುಮುಖ ಕೆನೆಹಾಲಿನ ಮೈ ಬಣ್ಣದ ಅವಳಿಗೆ ಬಾಬ್ ಒಪ್ಪುತ್ತಿತ್ತು. ಕಣ್ಣುಗಳಂತೂ ಅಕ್ವೇರಿಯಂನಲ್ಲಿನ ಮೀನುಗಳಂತೆ ಫಳಗುಟ್ಟುತ್ತಾ ಇದ್ದತ್ತ ಇರವು. ಅಂತಹ ಗದ್ದಲದಲ್ಲೂ ಶಾಂತವಾಗಿ ನಿಂತಿದ್ದಳು. ಇವಳು ನನ್ನ ಪಕ್ಕದ ಸೀಟಿಗೆ ಬಂದರೆಷ್ಟು ಚೆನ್ನವೆಂದಿತು ಮನ. ಬಸ್ ಕುಲುಕಾಡಿ ಕೊನೆಗೂ ಹೊರಟಿತು. ಒಂದಿಷ್ಟು ಮುಂದೆ ಹೋಗುತ್ತಲೇ ಅವಳು ಇನ್ನೊಬ್ಬನ ಜೊತೆ ಬಸ್ ಏರುವುದನ್ನು ಕಂಡೆ. ಅವನು ಹಿಂದಿನ ಸೀಟಿನಲ್ಲಿ ಸೆಟ್ಲ್ ಆದ. ಕಂಡಕ್ಟರ್ ಅವಳಿಗೆ ‘ಇಲ್ಲಿ ಕೂತ್ಕೊಳ್ರೀ’ ಎಂದು ಅಣತಿ ಮಾಡಿದ. ನನ್ನ ಪಕ್ಕದ ವಿಂಡೋ ಸೀಟು ಖಾಲಿಯಿತ್ತು. ಅಲ್ಲಿಗೆ ನದಿಯಂತೆ ಹರಿದು ಬಂದು ಕೂತಳು. ಫರ್‌ಫ್ಯೂಮ್ ಗಮ್ ಅಂದಿತು. ದೊಡ್ಡ ಕಿಟಕಿಯಲ್ಲಿ ತಲೆತೂರಿಸಿ ಯಾರೋ ತಾತನಿಗೆ ಕಾಣುವವರೆಗೂ ‘ಟಾಟಾ’ ಮಾಡಿ ನಕ್ಕಳು. ಅವಳ ದಾಳಿಂಬೆ ದಂತ ಪಂಕ್ತಿಗಳು ಕತ್ತಲಲ್ಲಿ ಮಿಂಚಿದವು. ಅವಳ ನಗುವಿನ್ನೂ ತುಟಿಗಳಲ್ಲಿದ್ದು ಅವಳ ಸೊಬಗನ್ನು ದ್ವಿಗುಣಗೊಳಿಸಿದವು. ಈಗೀಗ ಅವಳು ಪಕ್ಕದಲ್ಲಿ ಬಂದು ಕೂತದ್ದು ಖುಷಿಗಿಂತ ಕಿರಿಕಿರಿಯೇ ಹೆಚ್ಚೆನಿಸಿತು. ರಾತ್ರಿಯ ಜರ್ನಿ. ಪಕ್ಕದಲ್ಲಿ ಅಪರಿಚಿತ ಹೆಣ್ಣು. ಫ್ರೀಯಾಗಿ ಕೈಕಾಲೂ ಆಡಿಸಲೂ ಸಂಕೋಚ. ಹಳೆ ಪಣಂ ‘ಸಿಂಧೂಭೈರವಿ’ ಮೂಡಿದಾಗ ಮತ್ತಷ್ಟು ಸಂಕಟ. ‘ಹಾಳು ವಿಡಿಯೋ ಹಾಕದಿದ್ದರೆ ಹಾಯಾಗಿ ನಿದ್ರಿಸಬಹುದಿತ್ತು’ ಅಂದು ಪಕ್ಕದವಳ ಗಮನಸೆಳೆದೆ. ನನ್ನತ್ತ ನೋಡಲೇ ಇಲ್ಲ. ತಾನು ಮಹಾತ್ರಿಪುರ ಸುಂದರಿ ಎಂಬ ಬಿಗುಮಾನವಿರಬಹುದೇನೋ. ಹಾಲು ಬೆಳಕಿನಲ್ಲಿ ನಿಜಕ್ಕೂ ಆಕೆ ಅಪ್ಸರೆಯಂತೆ ಕಂಡಳು. ಟಿವಿ ನೋಡದೆ ನಿದ್ರೆಯೂ ಮಾಡದೇ ಅವಳನ್ನೇ ನೋಡುತ್ತಾ ಜಾಗರಣೆ ಮಾಡಬಹುದೆನ್ನಿಸಿದರೂ ಸೌಜನ್ಯದ ತೆರೆ ಅಡ್ಡಬಂತು.

ಟಿ.ವಿ. ತುಂಬಾ ಸುಹಾಸಿನಿಯ ನಗೆ ಪಸರಿಸಿತ್ತು. ದೊಡ್ಡ ಬಾಯಿ ದಪ್ಪ ತುಟಿ ಉದ್ದನೆ ಹಲ್ಲುಗಳನ್ನು ಪ್ರದರ್ಶಿಸುತ್ತಾ ಪದೆಪದೆ ನಗುತ್ತಾ ‘ಬೋರ್’ ಹೊಡಿಸಿದರೂ ಹಳೆ ಸಿನಿಮಾದ ಹಾಡುಗಳು ಒಂದಿಷ್ಟು ಮುದ ನೀಡದೆ ಇರಲಿಲ್ಲ. ಸುಹಾಸಿನಿಗಿಂತ ಸುಲಕ್ಷಣ ಪಕ್ಕಾ ಹೆಣ್ಣೆನಿಸಿತು ಕಣ್ಣುಗಳಿಗೆ. ಇದ್ದಕ್ಕಿದ್ದಂತೆ ಪಕ್ಕದಾಕೆ ಯಾರಿರಬಹುದು? ತಲೆಗೆ ಹುಳ ಹೊಕ್ಕಿತು. ಕನ್ನಡದ ಸ್ಟಾರಂತೂ ಅಲ್ಲ. ಎಕ್ಸ್‌ ಆರ್ಟಿಸ್ಟಾ? ಭಾವಿ ಸ್ಟಾರಾ? ತಲೆಕೆಡಿಸಿಕೊಂಡೆ. ಒಂದಷ್ಟು ಹೊತ್ತು ಸಿನಿಮಾ ನೋಡಿದೆ. ‘ಬಾಲಚಂದರ್ ನೋಡ್ರಿ ಅತ್ಯಂತ ಸೂಕ್ಷ್ಮ ಸನ್ನಿವೇಶಗಳನ್ನು ಹೇಗೆ ಹ್ಯಾಂಡಲ್ ಮಾಡ್ತಾರೆ ಅಲ್ವಾ?’ ನನಗೇ ತಿಳಿಯದಂತೆ ಆಡಿ ಪಕ್ಕದವಳತ್ತ ತಿರುಗಿದ್ದೆ. ಆಕೆ ವಿಂಡೋ ಕಡೆ ಮುಖ ಹಾಕಿ ಕತ್ತಲೆಯೇ ಪ್ರಿಯವೆಂಬಂತೆ ನೋಡುತ್ತಿದ್ದವಳು, ನನ್ನ ಧನಿ ಕೇಳಿ ಕ್ಷಣ ನನ್ನತ್ತ ನೋಡಿ ಪುನಃ ಕತ್ತಲತ್ತ ಕಣ್ಣು ಕೀಲಿಸಿದಳು. ಇವಳು ತಮಿಳರಸಿಯಾ? ಹಾಗಿದ್ದರೆ ಅವಳಿಗೆ ಸಿನಿಮಾ ಇಷ್ಟವಾಗಬೇಕಿತ್ತಲ್ಲ. ಮೂಗಿಯಾ! ಏನಾದರೆ ನನಗೇನಾಗಬೇಕಿದೆ ಅನ್ನಿಸಿ ಕಾಲು ಚಾಚಿ ಕುಳಿತು ರಿಲ್ಯಾಕ್ಸಾದೆ. ಕಣ್ಣು ಮುಚ್ಚಿ ನಿದ್ರೆಗೆ ಹಾತೊರೆದೆ. ಟಿ.ವಿಯ ಗದ್ದಲಕ್ಕಿಂತಲೂ ಪಕ್ಕದ ಕಣ್ಮಣಿಯು ಮನದ ಕೋಟೆಗೆ ಲಗ್ಗೆ ಇಟ್ಟಳು. ಬಸ್ಸಿನಲ್ಲಿರುವವರೆಲ್ಲಾ ಎಷ್ಟೊಂದು ಕೂಲಾಗಿರುವಾಗ ನನಗೇಕಷ್ಟು ಬರ್ನಿಂಗ್ ಸೆನ್ಸೇಷನ್ ಅನ್ನಿಸಿತು. ಅವಳೆಡೆ ನೋಡುವ ಮಾತನಾಡಿಸುವ ಬಯಕೆ ಓಕ್‌ನಂತೆ ಬೆಳೆಯಿತು. ಆದರೂ ಬಿಗುಮಾನ. ನನ್ನ ಸಿನಿಮಾ ಯಾನದಲ್ಲಿ ನಾನಿಂಥವಳನ್ನ ಅದೆಷ್ಟು ನೋಡಿಲ್ಲವೆಂದು ಸಂತೈಸಿಕೊಂಡೆ. ಆಕೆ ಈಗ ಚಿತ್ರ ನೋಡುತ್ತಿದ್ದಳು. ನಾನೇ ಅವಕಾಶ ಬಿಡಬಾರದೆಂದು ಫೀಲ್ಡಿಗಿಳಿದೆ.

‘ಹೆಂಡತಿ ಒಪ್ಪುವುದಾದರೆ ಗಂಡನಿಗೆ ಎರಡನೆ ವಿವಾಹವಾಗಲು ಸರ್ಕಾರದ ಕಾನೂನು ಅಡ್ಡಬರಬಾರದಲ್ಲವೆ?’ ಸಿನಿಮಾದ ಸಂದರ್ಭ ವಿಶ್ಲೇಷಿಸಿದೆ. ಅವಳೀಗ ನಕ್ಕಂತೆ ಭಾಸವಾಯಿತು. ಒಂದು ಆ್ಯಂಗಲ್‌ನಲ್ಲಿ ರಚಿತಾರಾಮ್ ಟೈಪ್ ಕಂಡಳು. ಸ್ನೇಹ ಬೆಳಸಲಡ್ಡಿಯಿಲ್ಲವೆನಿಸಿತು. ನನ್ನೊಡನೆ ಮಾತನಾಡಲು ಹಾತೊರೆವ ಹುಡುಗಿಯರ ಎದುರು ಘನಗಂಭೀರನಾಗುವ ನಾನೇಕೆ ಹೀಗಾಡುತ್ತಿದ್ದೇನೆಂಬುದೇ ನನಗೂ ಅನೂಹ್ಯ. ಅವಳು ಮಾತ್ರ ಟಿವಿಯಿಂದ ಮುಖ ಕೀಳಲಿಲ್ಲ. ಪುಣ್ಯಕ್ಕೆ ಚಿತ್ರ ಮುಗಿದು ಸದ್ದಡಗಿತು. ಸುಮಾರು ಎರಡುಗಂಟೆಯ ಸಮಯ. ಮೊಬೈಲ್ ಖಾತರಿಸಿತು. ಎಲ್ಲರಿಗೂ ನಿದ್ದೆಯ ಮಂಪರು. ಇವಳು ಕಣ್ಣುಮುಚ್ಚಿದಳು. ನಿದ್ರಿಸುವ ಮಗುವಿನಂತೆ ಮೋಹಕವಾಗಿ ಕಂಡಳು. ನನ್ನ ನಿದ್ರೆ ಹಾರಿಹೋಯಿತು. ಆಂಬರೂ ಸ್ಟಾಪ್ ಬಂದಾಗ ಖಾಯಂ ಟೀಸ್ಟಾಲ್ ಬಳಿ ಬಸ್ ನಿಲ್ಲಿಸಿ ‘ಯಾರಿಕ್ಕು ಟೀ ವೇಣುಂ ಟೀಸ್ಟಾಪ್’ ಎಂದು ಕೂಗಿದ ಕಂಡಕ್ಟರ್ ಡ್ರೈವರ್‌ನೊಡನೆ ಇಳಿದು ಹೋದ. ಹಲವರು ತಡವರಿಸುತ್ತಾ ಇಳಿವಾಗ ನಾನು ಇಳಿದುಕೊಂಡೆ. ‘ಟೀ’ ಅಂಗಡಿ ಒಳಗೂ ಹೊರಗೂ ಜನ. ಟ್ಯೂಬ್‌ಲೈಟ್‌ನ ಬೆಳಕೋ ಬೆಳಕು. ‘ನಾ ಆಣೆ ಇಟ್ಟಾಲ್ ಅದು ನಡೆಂದು ವಿಟ್ಟಾಲ್’ ಎಂಬ ಪುರಾನಾ ಪಾಟ್ಟು ಸೌಂದರರಾಜನ್ ಹಾಡುತ್ತಿರುವಾಗ ಕಣ್ಮುಂದೆ ಎಂಜಿಆರ್ ಬಂದರು. ಒಂದೆಡೆ ಜಾಗ ಹುಡುಕಿ ಕೂತೆ. ಅವಳೂ ಎದ್ದು ಬರಬಾರದೆ ಎಂದು ಹಪಪಹಿಸಿದೆ. ತಡಿಕೆ ಬಾಗಿಲತ್ತ ದೃಷ್ಟಿ ಹೋಯಿತು. ಅರೆ! ಬರುತ್ತಿದ್ದಾಳೆ! ಹಾರಾಡುವ ಮುಂಗುರಳನ್ನು ಸೊಗಸಾಗಿ ಹಿಂದೆ ತಳ್ಳುತ್ತಾ ಟೈಟ್ ಚೂಡಿದಾರ್‌ನಲ್ಲಿ ತುಂಬಿತುಳುಕುತ್ತಾ ಬರುವ ಭಾವಭಂಗಿಯನ್ನೇ ಕಣ್ಣುಗಳು ಬಗಬಗನೆ ನೆಂಚಿಕೊಂಡವು. ಅತ್ತ ಇತ್ತ ಜಾಗಕ್ಕಾಗಿ ಕಣ್ಣರಳಿಸುತ್ತಿದ್ದಳು. ನನ್ನ ಎದುರು ಕೂತಿದ್ದ ಎಡಿಟರ್ ರಾಮಾನುಜಂ ಎದ್ದುಹೋದಾಗ ‘ಇಲ್ಲೇ ಬನ್ನಿ ಪ್ಲೀಸ್’ ಅಂತ ಕೈ ಬೀಸಿ ಕರೆದೆ. ಸ್ಲೋಮೋಷನ್‌ನಲ್ಲಿ ಬಂದು ಆಸೀನಳಾದಳು.

‘ಏನಾದ್ರೂ ತಗೋತಿರಾ? ಉಂಗಳಕ್ಕು ಎನ್ನ ವೇಣುಂ?’ ಎಂದು ಜಟ್ಕಾ ತಮಿಳು ಬಿಟ್ಟೆ. ‘ಟೀ’ ಅಂದು ಸ್ಮೈಲ್‌ ಕೊಟ್ಟಳು. ದೊಡ್ಡ ಗ್ಲಾಸ್‌ಗಳಲ್ಲಿ ಹಬೆಯಾಡುವ ‘ಟೀ’ ಬಂದು ಕೂತಿತು. ಮೌನವಾಗಿ ‘ಟೀ’ ಹೀರುತ್ತಿದ್ದಳು. ಅವಳ ನಿಡಿದಾದ ರೆಪ್ಪೆಗಳು ತೆರೆದು ಮುಚ್ಚುವ ಆಟವನ್ನೇ ಸವಿದೆ. ನಿರ್ದೇಶಕನೊಬ್ಬ ಒಳ್ಳೆ ಹುಡ್ಗಿ ಇದ್ದರೆ ಹೇಳ್ರಿ ಅಂದಿದ್ದ ಮಾತು ನೆನಪಿಗೆ ಬಂತು. ಇವಳೂ ಹಿರೋಯಿನ್ ಮೆಟೀರಿಯಲ್‌ನಂತೆಯೇ ಕಂಡಳು. ಅದೇಕೋ ಈ ಸ್ನಿಗ್ಧ ಸೊಬಗನ್ನು ಸಿನಿಮಾದವರಿಗೆ ಬಲಿ ಕೊಡಬಾರದೆನಿಸಿತು. ಅವಳೂ ನನ್ನನ್ನೇ ನೋಡುತ್ತಿರುವುದನ್ನು ಗಮನಿಸಿ ಪುಳಕಗೊಂಡೆ. ಕೂಂಬ್ ತೆಗೆದು ಜೊಂಪೆಗೂದಲನ್ನು ತೀಡಿಕೊಂಡೆ. ‘ಸರ್, ‘ನೀವು ನಾವಲಿಸ್ಟ್ ಗೋಪಿನಾಥ್ ಅಲ್ಲವೆ?’ ಅರೆ! ಆಕೆ ಮಾತನಾಡಿದ್ದಳು! ದಿಲ್‌ಖುಷ್ ಆಗಿ ‘ಯಸ್ ಯಸ್’ ಎಂದು ಸಡಗರಪಟ್ಟೆ. ‘ನಿಮ್ಮ ಕಥೆ ಕಾದಂಬರಿಗಳೆಂದರೆ ನನಗೆ ಹುಚ್ಚು ಸಾರ್’ ಎಂದವಳು ಹೂನಗೆ ಚೆಲ್ಲಿದಾಗ ಫಿದಾ ಆದೆ. ‘ನಿಮ್ಮ ಕಾದಂಬರಿಗಳಲ್ಲಿನ ನವಿರಾದ ಪ್ರೇಮವನ್ನು ಸಿನಿಮಾದವರು ಒರಟಾಗಿ ಫುಲ್ ಕಮರ್ಷಿಯಲ್ ಆಗಿ ಚಿತ್ರಿಸಿಬಿಡ್ತಾರೆ ಸರ್’ ಪಟಪಟನೆ ಮಾತನಾಡುತ್ತಾ ಹಲವು ಸಿನಿಮಾಗಳ ಎಕ್ಸಾಂಪಲ್ಸ್ ಕೊಡುತ್ತಾ ಆತ್ಮೀಯಳಾದಳು. ‘ನಿಮ್ಮ ಸಿನಿಮಾಗಳಿಗಿಂತ ನಿಮ್ಮ ಕಾದಂಬರಿಗಳ್ನೇ ಐ ಲೈಕ್ ಮೋರ್! ಅಂದಳು. ದೇವರೇ ಹೊಗಳಿಕೆಗೆ ಮಣಿಯುವಾಗ ತತ್ರಾಪಿ ರೈಟರ್ ಯಾವ ಮಹಾ ಗೊಂಜಾಯಿ. ನಕ್ಕೆ. ‘ಸಿನಿಮಾದವರು ಸರಿಯಾಗಿ ಕಾಸು ಕೊಡ್ತರ‍್ಯೇ ಸರ್? ಟೋಪಿ ಹಾಕೋರೇ ಜಾಸ್ತಿ ಅಂತೆ!’ ನಕ್ಕಳು. ಪ್ರಶ್ನೆಗೆ ಉತ್ತರವೂ ಅವಳ ಮಾತಿನಲ್ಲೇ ಇದ್ದರಿಂದ ಮೌನವಾಗಿ ನಕ್ಕೆ.

‘ಈಗ ಯಾವ ಸಿನಿಮಾಕ್ಕೆ ಬರಿತಿದಿರಾ?’ ಹೇಳಿದೆ.‘ಈಗ ರೈಟರ್ಸ್ಗೂ ಲಕ್ಷಗಟ್ಟಲೆ ಕೊಡ್ತಾರಂತೆ ಹೌದಾ?’ ಕಣ್ಣರಳಿಸಿದಳು. ತಲೆಯಾಡಿಸಿದೆ. ‘ಫುಲ್ ಸೆಟ್ಲ್ಮೆಂಟಾಯ್ತಾ ಸರ್?’ ಮತ್ತವಳ ಕುತೂಹಲ. ‘ಬರ್ದುಕೊಟ್ಟ ಮೇಲಲ್ವೆ. ಈಗ ಅಡ್ವಾನ್ಸ್ ವಸೂಲಾಗಿದೆ’ ಹೇಳಿದೆ. ‘ಅದೂ ಲಕ್ಷಗಟ್ಟಲೆ ಅಲ್ವೆ ಸರ್!’ ಬಟ್ಟಲಕಂಗಳ ಅರಳಿಸಿದಳು. ‘ಯಾರಿಗೆ ಹೇಗೋ ನನಗಂತೂ ಕೊಡ್ತಾರೆ ಕಣ್ರಿ’ ಎಂದವಳ ಜಲಮಿಶ್ರಿತ ಕಣ್ಣುಗಳಲ್ಲಿ ತೇಲಿದೆ. ‘ರಿಮೇಕಾ ಸರ್?’ ತಲೆಯಾಡಿಸಿದೆ. ರಿಮೇಕೆಗೆಲ್ಲಾ ಯಾಕೆ ಬರಿತೀರಾ ಸರ್? ಕಾರ್ಬನ್ ಕಾಪಿ ಅಲ್ವಾ?’ ‘ನೊ ನೊ...... ನಾನು ಹಾಗೆ ಮಾಡಲ್ಲಾ. ಕನ್ನಡ ನೇಟಿವಿಟಿ ಇರುತ್ತೆ’ ಎಲ್ಲರಂತೆ ನನ್ನದೂ ಕಾರ್ಬನ್ ಕಾಪಿಯ ಉತ್ತರವಾದರೂ ನಾಚಿಕೆಯಾಯಿತು. ಸಿಟ್ಟು ಬಂದರೂ ‘ಹೊಟ್ಟೆ ಪಾಡು ಮೇಡಮ್’ ಅಂದೆ. ‘ಈಗ ನಮ್ಮವರಾರೂ ಕಾದಂಬರಿಗಳನ್ನ ಓದೋದಿಲ್ವಾ?’ ನನ್ನತ್ತ ಬಾಗಿ ಕೇಳಿದಳು. ‘ಆ ಸಂಸ್ಕಾರ ಹಿರೋಗಳಿಗೂ ಇಲ್ಲ...... ನಿರ್ದೇಶಕರಿಗೂ ಇಲ್ಲ ಬಿಡಿ. ಇದು ಸಿದ್ದಲಿಂಗಯ್ಯ, ಪುಟ್ಟಣ್ಣ ದೊರೆ ಭಗವಾನ್ ಅವರ ಕಾಲವಲ್ಲಾರೀ’ ನಿಟ್ಟುಸಿರುಬಿಟ್ಟೆ . ಬಸ್ ಹಾರನ್ ಕೇಳಿತು. ಆಗಲೆ ಎಲ್ಲಾ ಹೋಗಿಯಾಗಿತ್ತು. ಇಬ್ಬರೂ ಓಡಿ ಬಸ್ಸು ಏರಿ ಕುಳಿತಾಗ ಬರ್ನಿಂಗ್‌ ಸೆನ್‌ಸೇಶನ್ ಮಾಯವಾಗಿತ್ತು. ತನ್ನ ದೊಡ್ಡ ಪರ್ಸ್‌ನಲ್ಲಿದ್ದ ಬ್ಯಾಗಡಿ ಪೇಪರಲ್ಲಿ ಬಚ್ಚಿಟ್ಟ ಲಡ್ಡುವಿನಂತಹ ಪ್ರಸಾದ ತೆಗೆದುಕೊಟ್ಟಳು. ಕಣ್ಣಲ್ಲೇ ಕೇಳಿದೆ. ‘ಇದು ತಿರುಪತಿ ಪ್ರಸಾದ. ಕಣ್ಗೊತ್ತಿಕೊಂಡು ಬಾಯಿಗಿಡಿ. ಸಖತ್ ಡೈಲಾಗ್ಸ್ ಬರ್ತುವೆ’ ಅಂದಳು. ಭಕ್ತಿಯಿಂದ ಬಾಯಿಗಿಟ್ಟೆ. ‘ನೀವು ಮದರಾಸ್ನಲ್ಲಾ ಇರೋದು? ಒಳಗೆ ಕುದಿಯುತ್ತಿದ್ದ ಪ್ರಶ್ನೆ ಜಂಪ್ ಮಾಡಿತು. ‘ಇಲ್ಲಪ್ಪಾ. ಅಣ್ಣ ಇಲ್ಲಿದಾನೆ. ವೆಕೇಶನ್ ಹಾಲಿಡೇ ಇತ್ತಲ್ಲ..... ಬಂದಿದ್ದೆ. ನಾನು ನಿಮ್ಮ ಫ್ಯಾನ್ ಸರ್’ ಎಂದು ಮೈಗತ್ತಿಕೊಂಡು ಕೂತಳು. ಅವಳನ್ನು ಕಣ್ಣುಗಳಲ್ಲಿ ಹೀರುವಾಗಲೇ ದೀಪ ಆರಿತು. ಯಾರ ಮೇಲೆ ರೇಗೋದು? ಈಗ ಕೇಳುತ್ತಿದದ್ದು ಅವಳ ಇಂಪಾದ ದನಿ. ಅದಕ್ಕೂ ರೂಪವಿತ್ತು. ಬಸ್ಸು ಕುಲುಕಾಡುವಾಗ ಮೊಳಕೈಗಳು ಅವಳಿಗೆ ತಾಗಿದರೂ ಅವಳು ಇನ್ನೂ ಸರಿದು ಕೂತಾಗ ಕತ್ತಲಲ್ಲೂ ಗರಿಗೆದರಿತು ಮನದ ಬನ. ‘ಕೆಲಸದಲ್ಲಿದ್ದೀರಾ?’ ಕೇಳಿದೆ. ‘ಹೂಂ..... ರೇಲ್ವೇಸ್‌ನಲ್ಲಿ’ ಅಂದಳು. ಪುನಃ ಅವಳೇ ಕತ್ತಲ ಮೌನ ಮುರಿದಳು.

‘ಸಾರ್, ರೇಲ್ವೇ ಜರ್ನಿನಲ್ಲಿ ಇಬ್ಬರೂ ಫ್ರೆಂಡ್ಸ್ ಆಗೋದು, ಸ್ಟೇಶನ್ ಬರುವುದರಲ್ಲಿ ಲವರ್ಸ್‌ಗಳಾಗೋದು. ಏನು ಥ್ರಿಲ್ಲಾಗಿ ಬರೆದಿದೀರಾ ನಿಮ್ಮ ಕಾದಂಬರಿನಲ್ಲಿ ವಾವ್! ಎಂಡಿಂಗ್‌ನಲ್ಲಿ ರೇಲು ಆಕ್ಸಿಡೆಂಟಾಗೋದು. ಸಡನ್ ಶಾಖ್. ಹೃದಯ ಸ್ಪರ್ಶಿ ಲವ್‌ಸ್ಟೋರೀಸ್ ಸಾರ್ ನಿಮ್ಮವು. ಇಂಟರ್‌ಕ್ಯಾಸ್ಟ್ ಮ್ಯಾರೇಜಸ್ ಬಗ್ಗೆ ಕೂಡ ಬೋಲ್ಡ್ ಆಗಿ ಬರಿತೀರಾ ಸರ್. ಐ ಲೈಕ್ ಇಂಟರ್‌ಕ್ಯಾಸ್ಟ್ ಮ್ಯಾರೇಜ್ ಸರ್’ ಅಂದಾಗ ಅವಳ ಕಣ್ಣಲ್ಲಿ ಮಿಂಚಿತ್ತು. ಅವಳ ಕಡೆಗೇ ತಿರುಗಿ ಕೂತು ಬಿಟ್ಟೆ. ‘ಇಷ್ಟೆಲ್ಲಾ ನೇಮು ಫೇಮು ಇದ್ದರೂ ಯಾಕೆ ಸರ್ ಮದುವೆಯಾಗಿಲ್ಲ? ಲವ್ ಡಿಸ್ ಅಪಾಯಿಂಟ್ ಅಂತ ಓದಿದ್ದೆ ಪೇಪರಲ್ಲಿ’ . ಅವಳದ್ದೇ ಪ್ರಶ್ನೆಗೆ ಅವಳದ್ದೇ ಉತ್ತರ. ತುಂಟನಗೆ ಬೇರೆ. ‘ಹೊಡಿರೀ ಸಾರ್ ಪುರಾನಾ ಪ್ರೇಮ ಕಹಾನಿಗೆ ಗೋಲಿ’ ಮತ್ತದೇ ಎದೆಯ ಮೇಲೆ ಮಂಚಿಟ್ಟಂತಹ ನಗೆ. ‘ಸಾಹಿತಿಗಳಿಗೆ ಎಲ್ಲಾ ದುಶ್ಚಟಗಳಿರ್ತಾವಂತೆ? ನಿಮಗಿಲ್ವಾ?’ ಪ್ರಶ್ನೆ ಕೆಣಕಿತ್ತು. ‘ಇಲ್ಲಾರೀ’ ನನ್ನದೂ ಚುಟುಕು ಉತ್ತರ. ಚೌಕಾಸಿ ನಗೆ. ‘ಅಂದ್ಕೊಂಡೆ.... ಟೀ ಕುಡಿದ್ಮೇಲೆ ನೀವು ಸಿಗರೇಟ್ ಹಚ್ಚಲೇ ಇಲ್ಲ!’ ಕಣ್ಣಲ್ಲಿ ಹೂಬಾಣ ಬಿಟ್ಟಳು. ‘ಏನ್ಸಾರ್! ಡೈಲಾಗಿ ರೈಟರ್ ಆಗಿ ನೀವು ಮಾತೇ ಆಡೋಲ್ಲ’ ಮೈಗೆ ತಿವಿದು ತಮಾಷೆಗಿಳಿದಳು. ನನಗೂ ಏನೇನೋ ಆಸೆ. ಆಕಳಿಕೆಗಳು ಧಾಂಗುಡಿ. ರೋಮಾಂಟಿಕ್ ಆಗಿ ಬರೆವವನಿಗೆ ಮಾತನಾಡೋಕೇನು ಬರ. ಮನಸ್ಸು ಪೂರ್ತಿ ಮಾತನಾಡಬೇಕೆಂಬ ತಹತಹ. ಆದರೆ ಕಣ್ಣಲ್ಲಿ ಮಂಪರು. ‘ನಿಮ್ಮ ಬರಹಗಳೆಂದ್ರೆ ನಂಗೆ ಭಾಳ ಇಷ್ಟ ಗೋಪಿ ಸರ್’ ನಿಮೀಲನೇತ್ರೆಯಾದಳು. ‘ಅಷ್ಟೆನಾ?’ ನಾನೂ ಅವಳತ್ತ ಬಾಗಿದೆ. ಉಸಿರಿಗೆ ಉಸಿರು ತಾಗುತ್ತಿತ್ತು. ಉಸಿರಲ್ಲೂ ಮಲ್ಲಿಗೆಯ ಸ್ಮೆಲ್ ‘ನೀವೂ..... ನೀವೂ’ ಅಲೆಅಲೆಯಾಗಿ ನಕ್ಕಳು. ನಿಮ್ಮಂಥವರನ್ನು ಮದುವೆಯಾಗಲು ಪುಣ್ಯಮಾಡಿರಬೇಕು’ ಎಂದೂ ಪಿಸುಗಿದಳು. ವಿಂಡೋದಿಂದ ಬೆಳಕು ಹಾದು ಬಂದಾಗ ಬೆಳದಿಂಗಳಂತೆ ಕಂಡಳು. ‘ಸೆಖೆ ಆಗ್ತಿದೆ ವಿಂಡೋ ತೆಗೀರಿ ಪ್ಲೀಸ್’ ಅಂದೆ. ತಣ್ಣನೆ ತಂಗಾಳಿ ತೀಡಿತು. ನಿದ್ರೆ ಹೊತ್ತುಕೊಂಡು ಬರುವಾಗ ತಂಗಾಳಿಯ ಪ್ರಭಾವವೆನಿಸಿ ‘ಪ್ಲೀಸ್ ಮುಚ್ಚಿ’ ಬಡಬಡಿಸಿದೆ. ಹಾಳಾದ್ದು ಪ್ರೇಮ ಅರಳುವಾಗಲೇ ನಿದ್ರೆ ಅರಳಬೇಕೆ. ಥುತ್ ಕೋಪದಿಂದ ನಿದ್ರೆಗೆ ಉಗಿದೆ. ಬಸ್‌ನಿಂದ ಇಳಿಯುತ್ತಲೆ ಅವಳು ಬಿಂಕ ತೋರಿದರೂ ಬಿಡದೆ ಬಲವಂತವಾಗಿ ಆಟೋದಲ್ಲಿ ಎತ್ತಿಹಾಕ್ಕೊಂಡು ಮನೆಗೆ ಕರೆದೊಯ್ದು ತಾಯಿಯ ಎದುರು ನಿಲ್ಲಿಸಿದೆ. ಮನದ ಮಾತುಗಳನ್ನು ಹರವಿದೆ. ಭಗ್ನಪ್ರೇಮಿಯಾಗಿಯೇ ನಲವತ್ತರ ಹತ್ತಿರ ಬಂದಿದ್ದ ನನ್ನ ಮದುವೆಯಾದರೆ ಸಾಕೆಂದು ಪರಿತಪಿಸುತ್ತಿದ್ದ ಅಮ್ಮ, ಕುಲಗೋತ್ರ ವಿಚಾರಿಸದೆ ಮದುವೆಗೆ ಗ್ರೀನ್ ಸಿಗ್ನಲ್ ಇತ್ತಳು. ಆಮೇಲೆಲ್ಲಾ ಹೂವಿನ ಸರ ಎತ್ತಿದಷ್ಟು ಹಗುರ. ಸಿಂಪಲ್ ಆಗಿ ಮದುವೆಯಾಗುವ ತೀರ್ಮಾನಕ್ಕೆ ಅವಳ ಮನೆಯವರೂ ಒಪ್ಪಿದರು. ರಾಜರಾಜೇಶ್ವರಿ ದೇವಾಲಯದಲ್ಲಿ ಮದುವೆ. ಸಿನಿಮಾದವರೆಲ್ಲಾ ಬಂದಿದ್ದರಿಂದಾಗಿ ಕರೆಯದಿದ್ದರೂ ಜನವೋ ಜನ. ಕಾರುಗಳ ದಟ್ಟಣೆ. ನಾನು ಸಂಭಾಷಣೆ ಬರೆದ ಚಿತ್ರಗಳ ಹಿರೋಗಳು ಬಂದಾಗ ಸ್ವಾಗತಿಸಲು ವಧುವಾಗಿ ಕೂತಿದ್ದ ಇವಳೇ ತಟ್ಟನೆ ಹಸೆಮಣೆಯಿಂದ ಮೇಲೇಳಬೇಕೆ. ಮಾಂಗಲ್ಯಂ ತಂತು ನಾನೇನಾಂ’ ಹೇಳುತ್ತಿದ್ದ ಜೋಯಿಸರು, ‘ಕೂತ್ಕೋಳಮ್ಮ ನೀನು’ ಎಂದು ರೇಗಿ ‘ಗಟ್ಟಿಮೇಳ ಗಟ್ಟಿಮೇಳ ಎಂದಬ್ಬರಿಸಿದರು. ಡೋಲುಗಳು ದಬದಬನೆ ಬಡಿದವು.

***

ಮೈ ಮೇಲೆಯೇ ದಬದಬನೆ ಏಟುಗಳು ಬಿದ್ದಂತಾಯಿತು. ಬೆಚ್ಚಿ ನೋಡುತ್ತೇನೆ. ಕಂಡಕ್ಟರ್ ಎಳೆದಾಡಿ ಕೂಗಾಡಿ ಎಬ್ಬಿಸುತ್ತಿದ್ದಾನೆ. ಆಕಳಿಸುತ್ತಾ ಕಣ್ಣುಜ್ಜುತ್ತಾ ಎದ್ದೆ. ಮಂಕುಕವಿದಂತಾಯಿತು. ಪಕ್ಕದಲ್ಲಿ ಅವಳಿಲ್ಲದ್ದು ತೀವ್ರ ನಿರಾಸೆ. ‘ನನ್ನ ಪಕ್ಕದಲ್ಲಿದ್ದರಲ್ಲಾ ಲೇಡಿ ಎಲ್ಲಿ?’ ಕೇಳಿದೆ. ‘ಯಾರಿಗೆ ಗೊತ್ರಿ. ಮೊದ್ಲು ಇಳ್ಕೊಳ್ಳಿ ಬಸ್ ಗ್ಯಾರೇಜ್ಗೆ ಹೊಡಿಬೇಕು’ ಅಂದ. ಮೇಲೆದ್ದು ಲಗೇಜ್ ಇಡುವ ಜಾಗಕ್ಕೆ ಕೈಹಾಕಿದೆ. ಸೂಟ್‌ಕೇಸ್ ಕಾಣಲಿಲ್ಲ. ‘ಸಾರ್, ನನ್ನ ಸೂಟ್‌ಕೇಸ್ ಕಾಣ್ತಾಯಿಲ್ವೆ’ ಗಾಬರಿ ಬಿದ್ದು ಕನಲಿದೆ. ಅವನೂ ಗಾಬರಿ. ಬಸ್ಸಿನಲ್ಲಿದ್ದ ಎಲ್ಲರೂ ಆಗಲೇ ಇಳಿದು ಹೋಗಿ ಬಸ್ ಪೂರಾ ಖಾಲಿಖಾಲಿ. ಕಂಡಕ್ಟರ್ ಆಚೆ ನೂಕುವಂತೆ ನೋಡುವಾಗ ‘ಸಾರ್ ಇಲ್ಲಿದ್ಳಲ್ಲ ಲೇಡಿ?’ ಅಂತ ಮುಖ ಮುಖ ನೋಡಿದೆ. ‘ಆಕೆನಾ? ಹೊಸೂರು ದಾಟಿದ ಮೇಲೆ ಇಳಿದ್ಳಲ್ಲಾರೀ..... ಇಳ್ಕಳಿ ಸ್ವಾಮಿ’ ಅಂದ. ಕೆಳಗಿಳಿದೆ. ಸೂಟ್ ಕೇಸಲ್ಲಿ ಸ್ಕ್ರಿಪ್ಟ್‌ ಇತ್ತು. ಅದನ್ನು ಬೇಕಾದರೆ ಮತ್ತೆ ಚೆನ್ನೈನಿಂದ ತರಿಸಿಕೊಳ್ಳಬಹುದು. ಆದರೆ ಒಂದೂವರೆ ಲಕ್ಷ ಅಡ್ವಾನ್ಸ್ ಹಣ? ಮೂರು ತಿಂಗಳು ಮನೆ ಬಾಡಿಗೆ ಬಾಕಿ ಇದೆ. ಅಮ್ಮನ್ನ ಹೇಗೆ ಫೇಸ್ ಮಾಡೋದಪ್ಪಾ. ಅಲ್ಲೇ ಕಂಡ ಸಿಮೆಂಟ್ ಬೆಂಚಲ್ಲಿ ಕೂತೆ. ಬೆಳಗಿನ ಚಳಿ ಬೇರೆ. ದುಃಖ ಉಮ್ಮಳಿಸಿ ಬರುವ ಅಳು ತಡೆಯಲಾಗಲಿಲ್ಲ. ಯಾರಾದರೂ ನೋಡಿಯಾರೆಂದು ಕೈಗಳಿಂದ ಮುಖ ಮುಚ್ಚಿಕೊಂಡೆ. ಕೈಗಳಿಂದ ತಿರುಪತಿ ಲಡ್ಡುವಿನ ಘಮ ಘಮ! ಬೆಚ್ಚಿಬಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT