ಭಾನುವಾರ, ಸೆಪ್ಟೆಂಬರ್ 26, 2021
23 °C

ಕಥೆ: ದೇವರಿಗಾಗಿ ಹುಡುಕಾಟ

ಡಿ.ಎನ್.ಶ್ರೀನಾಥ್ Updated:

ಅಕ್ಷರ ಗಾತ್ರ : | |

Prajavani

ಈಶಾನಿ ಹಳ್ಳಿಯ ಅಂಚಿನಲ್ಲಿ ಕಜರೌಟಿ ನದಿ ಹರಿಯುತ್ತಿತ್ತು. ಮಳೆಗಾಲದಲ್ಲಿ ಇದು ದಡವನ್ನು ದಾಟುತ್ತಿರಲಿಲ್ಲ, ಅಣೆಕಟ್ಟನ್ನೂ ಒಡೆಯುತ್ತಿರಲಿಲ್ಲ. ಆ ನದಿಯನ್ನು ನೋಡಿದಾಗ ಅದು ‘ಓಂ’ ನಾದದಿಂದ ಮೈಮರೆತು ಮೃದು-ಮಧುರ ಭಾವದಿಂದ ಹರಿಯುತ್ತಿದೆ ಎಂದು ತೋರುತ್ತಿತ್ತು.

ಮಳೆಗಾಲದಲ್ಲಿ ಅದರ ವೇಗ ಸ್ವಲ್ಪ ತೀವ್ರಗತಿಯನ್ನು ಹಿಡಿಯುತ್ತದೆ. ಅದರ ಶರೀರ ಉಬ್ಬುತ್ತದೆ. ಕೆಲವು ದಿನಗಳ ನಂತರ ಕಜರೌಟಿ ನದಿಗೆ ಮತ್ತೆ ಅದರ ಹಿಂದಿನ ಸುಂದರ ರೂಪ ಮತ್ತು ಮಂದ ಗತಿ ಪ್ರಾಪ್ತವಾಗುತ್ತದೆ. ನದಿ ಎಂದೂ ಬತ್ತುತ್ತಿರಲಿಲ್ಲ. ಹೀಗಾಗಿ ಹಳ್ಳಿಯ ಮಕ್ಕಳು ನದಿಗೆ ಜಿಗಿಯುವುದು ಮತ್ತು ಹೊಸ-ಹೊಸ ವಿಧಾನವನ್ನು ಅನುಸರಿಸುವುದು ಇಡೀ ವರ್ಷ ನಡೆಯುತ್ತಲೇ ಇರುತ್ತದೆ. ಈ ವರ್ಷ ಅದ್ಭುತ ಘಟನೆಯೊಂದು ಘಟಿಸಿತು. ಕಜರೌಟಿ ನದಿಯ ಅಣೆಕಟ್ಟು ಎಲ್ಲೂ ಒಡೆದಿರಲಿಲ್ಲ, ಆದರೆ ನದಿಯಲ್ಲಿ ಪ್ರವಾಹದ ನೀರು ಅದೆಲ್ಲಿಂದ ಬಂದು ತುಂಬಿತೋ! ಅದು ತನ್ನಲ್ಲಿ ಅಷ್ಟು ಪ್ರವಾಹದ ನೀರನ್ನು ಸಂಭಾಳಿಸಲು ಸಾಧ್ಯವಾಗಲಿಲ್ಲ. ಪ್ರವಾಹ ಅಣೆಕಟ್ಟನ್ನು ದಾಟಿ ಹಳ್ಳಿಗೆ ನುಗ್ಗಿತು. ಅದನ್ನು ನೋಡಿದಾಗ, ಸಹಸ್ರಹೆಡೆಯ ನಾಗ ಅತಳಾತಳದಿಂದ ಹೊರ ಬಂದು ಫೂತ್ಕರಿಸುತ್ತಾ, ಅಣೆಕಟ್ಟಿನ ಮೇಲೆ ಹೆಡೆಯೆತ್ತಿ ಹಳ್ಳಿಯ ಕಡೆಗೆ ಮುಂದುವರೆದು ಬರುತ್ತಿದೆ ಎಂದು ಅನ್ನಿಸುತ್ತಿತ್ತು.

ಈಶಾನಿ ಹಳ್ಳಿಯ ಜನ ಪ್ರವಾಹದ ನೀರು ಹಳ್ಳಿಗೆ ನುಗ್ಗುತ್ತದೆ ಎಂಬ ಬಗ್ಗೆ ಲೇಶಮಾತ್ರವೂ ಎಚ್ಚರಿಕೆಯಿಂದಿರಲಿಲ್ಲ. ಕಳೆದ ಅರವತ್ತು-ಎಪ್ಪತ್ತು ವರ್ಷಗಳಲ್ಲಿ ಕಜರೌಟಿಯಂಥ ಶಾಂತ, ಸುಂದರ ಮತ್ತು ಲಯಬದ್ಧ ನದಿಯ ಭಯಾನಕ ರೂಪದ ಪರಿಚಯ ಯಾರಿಗೂ ಇರಲಿಲ್ಲ. ಆದರೆ ಎಂಭತ್ತು ವರ್ಷಕ್ಕೂ ಮೇಲ್ಪಟ್ಟು ಜೀವಂತವಾಗಿರುವವರು, ಒಮ್ಮೆ ಅವರ ಬಾಲ್ಯದಲ್ಲಿ ಇಂಥ ಪ್ರವಾಹದ ನೀರು ಹಳ್ಳಿಗೆ ನುಗ್ಗಿ ಬಂದದ್ದರ ಬಗ್ಗೆ ಅಲ್ಪ-ಸ್ವಲ್ಪ ನೆನಪಿಟ್ಟುಕೊಂಡಿದ್ದಾರೆ.

ಹೀಗಾಗಿ ಈ ಬಾರಿ ಪ್ರವಾಹ ಎಲ್ಲರಿಗೂ ಹೊಸ ಸಂಗತಿಯಾಗಿತ್ತು. ಆದರೆ ಹೆದರುವುದಕ್ಕೆ ವಿಶೇಷ ಕಾರಣವಿರಲಿಲ್ಲ. ಈ ನಡುವೆ ಹಳ್ಳಿಯಲ್ಲಿ ಅನೇಕ ಪಕ್ಕಾ ಮನೆಗಳು ನಿರ್ಮಾಣಗೊಂಡಿದ್ದವು, ನದಿಯ ಅಣೆಕಟ್ಟು ಸಹ ಬಲವಾಗಿತ್ತು. ಮನೆಗಳಲ್ಲಿ ಆಹಾರ ಸಾಮಗ್ರಿಗಳು ಸಹ ಇದ್ದವು. ಹಳ್ಳಿ ನಗರಕ್ಕೆ ಸಮೀಪದಲ್ಲಿತ್ತು, ಹೀಗಾಗಿ ಸರ್ಕಾರಿ ಸಹಾಯ ಸಹ ಸಮಯಕ್ಕೆ ತಲುಪುವ ಸಾಧ್ಯವಿತ್ತು.

ಇದೆಲ್ಲದರ ಹೊರತಾಗಿಯೂ ಅಣೆಕಟ್ಟನ್ನು ದಾಟಿ ಬರುವ ನೀರಿನ ಪ್ರಮಾಣ ಸಹ ಹೆಚ್ಚಿತ್ತು; ಇದು ಎಲ್ಲರಿಗೂ ಭಯವನ್ನುಂಟುಮಾಡಿತ್ತು. ಎಲ್ಲರೂ ತಮ್ಮ-ತಮ್ಮ ಮನೆಯಲ್ಲಿ, ನೆಲದ ಮೇಲಿದ್ದ ವಸ್ತುಗಳನ್ನು ಮೇಲ್ಭಾಗದಲ್ಲಿಡುವಲ್ಲಿ ಮಗ್ನರಾಗಿದ್ದರು. ಪ್ರತಾಪ್ ಬಾಬು ತಮ್ಮ ಎರಡಂತಸ್ತಿನ ಮನೆಯ ಕಿಟಕಿಯಿಂದ ನೋಡುತ್ತಿದ್ದರು. ಅವರು ದೇವಸ್ಥಾನದ ಸುತ್ತಮುತ್ತ ನೀರು ಆವರಿಸಿರುವುದನ್ನು ನೋಡಿದರು. ಜಗಲಿ ಮುಳುಗುವ ಸ್ಥಿತಿಯಲ್ಲಿತ್ತು. ಆದರೆ ದೇವಸ್ಥಾನದ ಪೂಜಾರಿ ನರಹರಿ ಪಂಡಾ ಜಗಲಿಯ ಮೇಲೆ ನಿಂತು ಅತ್ತ-ಇತ್ತ ಓಲಾಡುತ್ತಿದ್ದರು. ಗೋಪೀನಾಥ ದೇವಸ್ಥಾನ ಪ್ರತಾಪ್ ಬಾಬು ಅವರ ಮನೆತನಕ್ಕೆ ಸೇರಿತ್ತು. ಆದರೆ ಹಳ್ಳಿಯವರು ಅಲ್ಲಿ ಪೂಜೆ ಮಾಡುತ್ತಾರೆ. ಹನ್ನೆರಡು ತಿಂಗಳಲ್ಲಿ ಹದಿಮೂರು ಉತ್ಸವಗಳು ವಿಧಿವತ್ತಾಗಿ ಆಚರಿಸಲ್ಪಡುತ್ತವೆ. ಹಳ್ಳಿಯ ಜನ ಹಬ್ಬ-ಹರಿದಿನಗಳಿಗೆ ಅಲ್ಪ-ಸ್ವಲ್ಪ ಆರ್ಥಿಕ-ದಾನವನ್ನು ಸಹ ಕೊಡುತ್ತಾರೆ. ಆದರೆ ದೇವರ ಪೂಜೆ-ಪುನಸ್ಕಾರಗಳ ಜವಾಬ್ದಾರಿ ಪ್ರತಾಪ್ ಬಾಬು ಮತ್ತು ಅವರ ಕುಟುಂಬದವರಿಗೆ ಸೇರಿದೆ. ಅವರ ಪರಿವಾರದಲ್ಲಿ ಅನೇಕರು ನಗರಕ್ಕೆ ಹೋಗಿ ನೆಲೆಸಿದ್ದಾರೆ. ಆದರೂ ದೇವರ ಖರ್ಚು-ವೆಚ್ಚಕ್ಕೆ ಎಲ್ಲರೂ ತಮ್ಮ-ತಮ್ಮ ಶಕ್ತಿಯಾನುಸಾರ ಏನಾದರೂ ಕೊಡುತ್ತಿರುತ್ತಾರೆ.

ಆದರೆ ದೇವರಿಗೆ ನಿತ್ಯ ಮಧ್ಯಾಹ್ನ ಮತ್ತು ರಾತ್ರಿಯ ಪ್ರಸಾದಕ್ಕೆ ನಿಶ್ಚಿತ ಪ್ರಮಾಣದಲ್ಲಿ ಅಕ್ಕಿ, ಬೇಳೆ, ತರಕಾರಿಗಳು, ಹಾಲು-ತುಪ್ಪ, ಸಕ್ಕರೆ ಮುಂತಾದವುಗಳನ್ನು ಪ್ರತಾಪರ ಪರಿವಾರವೇ ವ್ಯವಸ್ಥೆ ಮಾಡುತ್ತಿತ್ತು. ಅವರು ಎಂಭತ್ತು ವರ್ಷಗಳನ್ನು ದಾಟಿದ್ದಾರೆ. ಅವರ ಏಕಮಾತ್ರ ಪುತ್ರ ನಗರದಲ್ಲಿ ನೌಕರಿ ಮಾಡುತ್ತಿದ್ದಾಗ್ಯೂ, ಅವರನ್ನು ತ್ಯಜಿಸಿ ಹೋಗಿಲ್ಲ. ಅವನು ತಂದೆಯವರನ್ನು ಒಂಟಿಯಾಗಿ ಬಿಟ್ಟು ಹೋಗಲಾರ, ಪ್ರತಾಪರು ಸಹ ದೇವರನ್ನು ಹಳ್ಳಿಯಲ್ಲಿ ಬಿಟ್ಟು ಹೋಗಲಾರರು. ಹೀಗಾಗಿ ಅವರ ಪರಿವಾರ ದೇವರನ್ನು ಸರ್ವವಿಧದಿಂದ ನೋಡಿಕೊಳ್ಳುತ್ತಿದೆ.

ಪ್ರತಾಪರು ಮಹಡಿಯಿಂದಲೇ ಕೂಗಿ ಹೇಳಿದರು, ‘ಪೂಜಾರಿಯವರೇ, ಈಗ ಅಲ್ಲೇನು ಮಾಡುತ್ತಿದ್ದೀರಿ? ನೀರು ಹೆಚ್ಚುತ್ತಿದೆ, ಬೇಗ ಮನೆಗೆ ಹೋಗಿ, ಆಮೇಲೆ ಮನೆಗೆ ಹೋಗುವುದಕ್ಕೆ ಆಗುವುದಿಲ್ಲ’. ಆದರೆ ನರಹರಿ ಪೂಜಾರಿಯವರಿಗೆ ಏನು ಮಾಡಬೇಕೆಂದು ತೋಚುತ್ತಿರಲಿಲ್ಲ.

‘ಏನು ವಿಷಯ?’ ಪ್ರತಾಪ್ ಬಾಬು ವಿಚಾರಿಸಿದರು.

‘ಅಂಥದ್ದೇನಿಲ್ಲ, ದೇವರನ್ನು ಒಂಟಿಯಾಗಿ ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ’.

‘ದೇವರು ಎಲ್ಲಿ ಒಂಟಿಯಾಗಿದ್ದಾನೆ? ಮೂವರು ಸಹೋದರ-ಸಹೋದರಿಯರು ಒಟ್ಟಿಗೆ ಇದ್ದಾರೆ. ನೀವು ಮನೆಗೆ ಹೋಗಿ. ಅಲ್ಲಿ ನಿಮ್ಮ ತಾಯಿ, ಹೆಂಡತಿ ಮತ್ತು ಮಕ್ಕಳು ಚಿಂತೆಯಲ್ಲಿರಬಹುದು. ಹಾಂ, ಪೂಜಾರಿಯವರೇ, ನೀವು ಹೋಗುವುದಕ್ಕೂ ಮೊದಲು ದೇವರ ಬಾಗಿಲನ್ನು ಸರಿಯಾಗಿ ಮುಚ್ಚಿ ಬೀಗ ಹಾಕಿ, ಇಲ್ಲದಿದ್ದರೆ ನೀರು ಹೆಚ್ಚಾದರೆ ಎಲ್ಲವೂ ಅತ್ತ-ಇತ್ತ ಹರಿದು ಹೋಗುತ್ತವೆ’. ಎಂದರು ಪ್ರತಾಪರು. 

‘ಬಾಬೂಜಿ, ಬಾಗಿಲ ಕೆಳಗಿನಿಂದ ನೀರು ಒಳಗೆ ನುಗ್ಗಿಯೇ ನುಗ್ಗುತ್ತೆ’.

‘ಅದೇನೋ ಸರಿ, ಆದರೆ ನಾವಾದರೂ ಏನು ಮಾಡಲು ಸಾಧ್ಯ? ಬಾಗಿಲು ಮುಚ್ಚಿದ್ದರೆ ದೇವರು ಕಡೇಪಕ್ಷ ಒಳಗೇ ಇರುತ್ತಾರೆ’.

ಎಂಟು ವರ್ಷದ ಮೊಮ್ಮಗ ಅಜ್ಜನ ಸಮೀಪದಲ್ಲಿ ನಿಂತು ಎಲ್ಲವನ್ನೂ ಕೇಳುತ್ತಿದ್ದ. ಅವನು ಇದ್ದಕ್ಕಿದ್ದಂತೆ ಚಪ್ಪಾಳೆ ತಟ್ಟುತ್ತಾ ಖುಷಿಯಿಂದ ಹೇಳಿದ, ‘ವಾಹ್! ದೇವರಿಗೆ ಎಷ್ಟು ಮಜವಾಗುವುದು! ಅವರು ಒಳಗೆ ಸ್ವಿಮಿಂಗ್ ಪೂಲಿನಲ್ಲಿ ಈಜುತ್ತಾರಲ್ವ, ಅಜ್ಜ?’

ಹಿಂದಿದ್ದ ಪ್ರತಾಪ್ ಬಾಬುರವರ ಹೆಂಡತಿ ನಿಶಾಮಣಿ ಮೊಮ್ಮಗನನ್ನು ಗದರಿಸಿದರು, ‘ಸುಮ್ನಿರು, ಅಯೋಗ್ಯ! ದೇವರ ಬಗ್ಗೆ ಹೀಗೆಲ್ಲಾ ಮಾತನಾಡ್ತಾರ?’ ಮೊಮ್ಮಗ ಹೆದರಿದ. ಆದರೆ ತಾನೇನು ತಪ್ಪು ಹೇಳಿದೆ ಎಂದು ಅವನಿಗೆ ಅರ್ಥವಾಗಲಿಲ್ಲ. ಅವನನ್ನು ಊಟಕ್ಕೆ ಕರೆಯಲು ಬಂದಿದ್ದ ನಿಶಾಮಣಿ ಅವನ ಕೈಹಿಡಿದು ಒಳಗೆ ಕರೆದೊಯ್ದರು. ಮಗ-ಸೊಸೆ ನಾಲ್ಕು ದಿನ ಹಳ್ಳಿಯಿಂದ ಹೊರಗೆ ಹೋಗಿದ್ದಾರೆ. ಪ್ರವಾಹದ ನೀರು ಆಕಸ್ಮಿಕವಾಗಿ ಹಳ್ಳಿಗೆ ನುಗ್ಗಿ ಬರುವುದು ಯಾರಿಗೆ ಗೊತ್ತಿತ್ತು? ಅವರು ಇನ್ನು ನೀರು ಇಳಿಯುವವರೆಗೆ ಹಳ್ಳಿಗೆ ಬರಲಾರರು. ಹೀಗಾಗಿ ಊಟ-ತಿಂಡಿಗೆ ಸಾಮಾನ್ಯವಾಗಿ ಸಮಸ್ಯೆ ಮಾಡುವ ಮೊಮ್ಮಗ ಬುಲೂವನ್ನು ಸಂಭಾಳಿಸಬೇಕು.

ಅಜ್ಜಿ ಮತ್ತು ಮೊಮ್ಮಗ ಒಳಗೆ ಹೋದರು. ಪ್ರತಾಪ್ ಬಾಬು ಹಾಗೆಯೇ ಕಿಟಕಿಯ ಬಳಿಯಲ್ಲಿ ನಿಂತು ಹೊರಗೆ ನೋಡುತ್ತಿದ್ದರು. ನರಹರಿ ಪೂಜಾರಿ ಕಚ್ಚೆ ಕಟ್ಟಿ, ದೇವರ ಜಗಲಿಯಿಂದ ನೀರಿಗಿಳಿದು ಜಗಲಿಯನ್ನು ಹಣೆಗೆ ಸ್ಪರ್ಶಿಸಿಕೊಂಡರು. ನಂತರ ಹೊಂಡವನ್ನು ತಡವರಿಸಿ ನೋಡುತ್ತಾ ತಮ್ಮ ಮನೆಯ ಕಡೆಗೆ ಹೊರಟರು.

ಪ್ರತಾಪರಿಗೆ ತಮ್ಮ ಬಾಲ್ಯದ ಘಟನೆಯೊಂದು ನೆನಪಾಯಿತು. ಈಗಿದ್ದ ಪಕ್ಕಾ ಮನೆಯ ಜಾಗದಲ್ಲಿ ಮಣ್ಣಿನ ಮನೆಯಿತ್ತು. ವಂಶ ಪಾರಂಪರ್ಯದಿಂದ ಅದೇ ಮನೆಯಲ್ಲಿ ರಾಧಾ-ಕೃಷ್ಣರ ಹಿತ್ತಾಳೆ ವಿಗ್ರಹವನ್ನು ಪೂಜಿಸಲಾಗುತ್ತಿತ್ತು. ಬಹುಶಃ ಅವರ ಅಜ್ಜ ಒಮ್ಮೆ ಪುರಿಗೆ ಹೋಗಿದ್ದರಂತೆ, ಅಲ್ಲಿಂದಲೇ ಅವರು ಜಗನ್ನಾಥ, ಬಲಭದ್ರ ಮತ್ತು ಸುಭದ್ರಾರ ಮೂರು ವಿಗ್ರಹಗಳನ್ನು ತಂದಿದ್ದರು. ದೇವರ ವಿಗ್ರಹಗಳನ್ನು ನೋಡಿ ಮನೆಯವರಿಗೆಲ್ಲ ಸಂತೋಷವಾಯಿತು. ಆದರೆ ಅಜ್ಜ ಪೂಜಾ-ಮನೆಯಲ್ಲಿ ಪೂಜಿಸುವ ರಾಧಾ-ಕೃಷ್ಣರ ವಿಗ್ರಹಗಳನ್ನು ಕೆಳಗಿನ ಗೂಡಿನಲ್ಲಿಟ್ಟು, ಅದರ ಮೇಲಿನ ಗೂಡಿನಲ್ಲಿ ಈ ಮೂರು ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು, ಆಗ ಮನೆಯವರು ರೇಗಿ, ‘ಇದು ಸರಿಯಲ್ಲ’ ಎಂದು ಒತ್ತಿ ಬಂದ ಕಂಠದಿಂದ ವಿರೋಧಿಸಿದರು.

ಬಹುಶಃ ಅಜ್ಜ, ‘ಅಲ್ಲ, ದೇವರು-ದೇವತೆಗಳ ನಡುವೆ ಚಿಕ್ಕವರು-ದೊಡ್ಡವರು ಎಂಬ ಪ್ರಶ್ನೆ ಎಲ್ಲಿ ಬರುವುದು? ಹಿತ್ತಾಳೆಯ ವಿಗ್ರಯ ಮುರಿಯುವುದಿಲ್ಲ, ಕೊಚ್ಚಿಕೊಂಡು ಹೋಗುವುದೂ ಇಲ್ಲ. ಮರದ ವಿಗ್ರಹಗಳು ಸ್ವಲ್ಪ ಮೇಲಿದ್ದರೆ ಸುರಕ್ಷಿತವಾಗಿರುತ್ತವೆ. ಈ ಮೂರು ದೇವಿ-ದೇವತೆಗಳು ರಾಧಾ-ಕೃಷ್ಣರಂತೆ ಯುಗಳ ಮೂರ್ತಿಗಳಲ್ಲ. ಮೂರೂ ಜನ ಸಹೋದರ-ಸಹೋದರಿಯರು ಬೇರೆ-ಬೇರೆಯಾಗಿ ಕೂತಿದ್ದಾರೆ. ಇವರಿಗೆ ಹೆಚ್ಚು ಜಾಗ ಬೇಕೋ, ಬೇಡವೋ!’ ಎಂದು ಹೇಳಿದ್ದರು.

ನಂತರ ಯಾರೇನು ಹೇಳಲು ಸಾಧ್ಯ! ಅದೇ ದಿನದಿಂದ ದೇವಿ-ದೇವತೆಗಳೆಲ್ಲರೂ ತಮ್ಮ-ತಮ್ಮ ಜಾಗದಲ್ಲಿ ಕೂತು ಯಥಾ ರೀತಿಯಲ್ಲಿ ಪೂಜಿಸಲ್ಪಡುತ್ತಿದ್ದರು. ಗೋಪಿನಾಥನ ಹೆಸರಿನಿಂದ ಪ್ರಸಿದ್ಧವಾದ ದೇವಸ್ಥಾನದಲ್ಲಿ ಉನ್ನತ ಆಸನದಲ್ಲಿ ಕೂತು ದೊಡ್ಡ-ದೊಡ್ಡ ಗೋಳಾಕಾರದ ಕಣ್ಣುಗಳಿಂದ ಎಲ್ಲರನ್ನೂ ನೋಡುವ ಕಪ್ಪು ದೇವತೆ ಕ್ರಮೇಣ ತನ್ನ ಪ್ರತಾಪವನ್ನು ತೋರಿಸಲಾರಂಭಿಸಿದ; ಇದರಿಂದಾಗಿ ಜನರು ಆ ದೇವಸ್ಥಾನವನ್ನು ಪತಿತ-ಪಾವನ ಮಂದಿರವೆಂದು ಹೇಳಲಾರಂಭಿಸಿದರು.

ನದಿಯ ಅಂಚಿನಲ್ಲಿದ್ದ ಹಳ್ಳಿಯಲ್ಲಿ ನೀರು ನುಗ್ಗುವುದು ಸ್ವಾಭಾವಿಕ. ಆದರೆ ಹಳ್ಳಿಯ ದಿಕ್ಕಿಗೆ ಮಣ್ಣಿನ ಅಣೆಕಟ್ಟು ಇದ್ದಾಗ್ಯೂ, ಅದು ಸಾಕಷ್ಟು ಬಲವಾಗಿದ್ದರಿಂದ ಅಣೆಕಟ್ಟು ಎಂದೂ ಒಡೆಯದು. ಪ್ರವಾಹದ ನೀರು ಅಲ್ಪ-ಸ್ವಲ್ಪ ನುಗ್ಗಿ ಬಂದರೂ, ಜನ ಸ್ವಲ್ಪ ಕಾಲ ಜಲ-ಬಂಧಿಯಾಗಿರುತ್ತಾರೆ. ಕ್ರಮೇಣ ಹಳ್ಳಿಯ ಜೀವನ ಸಹಜವಾಗಿ ಚಂಚಲಗೊಳ್ಳುತ್ತದೆ.

ಪ್ರತಾಪರಿಗೆ ಚೆನ್ನಾಗಿ ನೆನಪಿದೆ. ಆ ವರ್ಷ ದಡದ ಅಣೆಕಟ್ಟಿನ ಮೇಲ್ಭಾಗದಲ್ಲಿ ಎಲ್ಲೋ ಬಿರುಕು ಬಿಟ್ಟಿತು, ಹಳ್ಳಿಯ ಜನ ಆ ಬಗ್ಗೆ ತಿಳಿದುಕೊಳ್ಳುವುದಕ್ಕೂ ಮೊದಲೇ ಪ್ರವಾಹದ ನೀರು ಹಾಹಾಕಾರ ಮಾಡುತ್ತಾ ಹಳ್ಳಿಗೆ ನುಗ್ಗಿತು. ಎಲ್ಲೆಡೆಯಲ್ಲೂ ಕೋಲಾಹಲ ಹಬ್ಬಿತು. ಮನೆಯ ಜನರೊಂದಿಗೆ ದನ-ಕರುಗಳನ್ನು ಸಹ ಜನ ದಿಣ್ಣೆಯ ಮೇಲೆ ಕರೆದೊಯ್ದರು.

ಆಗ ತಮಗೆ ಹನ್ನೊಂದು ವರ್ಷವಾಗಿತ್ತು ಎಂಬುದು ಪ್ರತಾಪರಿಗೆ ನೆನಪಿದೆ. ಅವರು ಸಹ ತಮ್ಮ ತಂದೆ-ತಾಯಿ ಮತ್ತು ಇಬ್ಬರು ಸಹೋದರಿಯರೊಂದಿಗೆ ದಿಣ್ಣೆಯ ಮೇಲ್ಭಾಗಕ್ಕೆ ಹೋಗಿದ್ದರು. ಹಸಿವೆಯಿಂದಾಗಿ ಇಡೀ ಹಳ್ಳಿ ಕಂಗೆಟ್ಟಿತ್ತು. ಆದರೆ ಬೇರೆ ಉಪಾಯವಿರಲಿಲ್ಲ.

ಹೀಗಿರುವಾಗ ಹಳ್ಳಿಯ ದೇವರ ಬಗ್ಗೆ ಯಾರಿಗೆ ಯೋಚನೆಯಿತ್ತು! ಎರಡು ದಿನಗಳು ಕಳೆದಿದ್ದವು. ನೀರು ಇಳಿಯುತ್ತಿತ್ತು. ಜನ ದಿಣ್ಣೆಯಿಂದ ಇಳಿದು ಹಳ್ಳಿಗೆ ಹೊರಟರು. ಪ್ರವಾಹದ ನೀರು ದೇವಸ್ಥಾನದ ಜಗಲಿಯ ಸಮೀಪಕ್ಕೆ ಬಂದು, ಮರಳಿ ಹೋದದ್ದರಿಂದ ಮನೆಯ ಒಳಗೆ-ಹೊರಗೆ ಕೆಸರು ತುಂಬಿತ್ತು. ಮನೆಯೊಳಗೆ ಹೋಗಿ ಏನು ಮಾಡುವುದು, ಹೇಗೆ ಸ್ವಚ್ಛ ಮಾಡುವುದು ಎಂಬುದು ಯಾರಿಗೂ ತಿಳಿಯುತ್ತಿರಲಿಲ್ಲ; ಎಲ್ಲರೂ ಕಳವಳಗೊಂಡಿದ್ದರು.

ಡಬ್ಬದಲ್ಲಿದ್ದ ಉಂಡೆಯನ್ನು ತಿಂದು ತಾವು ಮನೆಯಿಂದ ಹೊರ ಹೋಗಿದ್ದು, ಹೊರಗೆ ಬಂದು ಮೊಣಕಾಲುವರೆಗಿನ ನೀರಿನಲ್ಲಿ ಈಜುವ ಮೀನುಗಳನ್ನು ಹಿಡಿಯಲು ತಮ್ಮ ಟವಲ್ಲನ್ನು ಕಳಚಿ ಅದನ್ನು ಬಲೆಯಂತೆ ಬೀಸುತ್ತಿದ್ದದ್ದು ಪ್ರತಾಪರಿಗೆ ನೆನಪಿದೆ. ಮೀನುಗಳು ಅವರ ಹಿಡಿತಕ್ಕೆ ಎಲ್ಲಿ ಸಿಗುತ್ತವೆ? ಅವುಗಳನ್ನು ಹಿಂಬಾಲಿಸಿ ಪ್ರತಾಪರು ದೇವಸ್ಥಾನದ ಜಗಲಿಯ ಸಮೀಪಕ್ಕೆ ಬಂದಿದ್ದರು. ಅವರ ದೃಷ್ಟಿ ದೇವಸ್ಥಾನದ ತೆರೆದ ಬಾಗಿಲ ಮೇಲೆ ಬಿತ್ತು. ಅವರು ಮೀನುಗಳನ್ನು ಹಿಡಿಯುವುದನ್ನು ಬಿಟ್ಟು ದೇವಸ್ಥಾನದ ಜಗಲಿಯನ್ನು ಹತ್ತಿ ಒಳಗೆ ಇಣಿಕಿ ನೋಡಿದರು; ನಂತರ ತತ್‌ಕ್ಷಣ ಕೂಗಿ ತಂದೆಯನ್ನು ಕರೆದರು.

ಅವರ ಕೂಗು ಕೇಳಿ, ಮನೆಯಲ್ಲಿ ಸಾಮಾನುಗಳನ್ನು ಜೋಡಿಸಿಡುತ್ತಿದ್ದ ಎಲ್ಲರೂ, ‘ಏನಾಯ್ತು, ಏನಾಯ್ತು?’ ಎಂದು ಹೊರಗೋಡಿ ಬಂದರು. ಅವರ ತಂದೆ ನಾರಾಯಣ ಮಹಾಪಾತ್ರರು ಕೆಸರಿನಲ್ಲಿ ಕಾಲು ಹಾಕುತ್ತಾ, ನೀರನ್ನು ಸೀಳುತ್ತಾ ಓಡಿ ಬಂದರು. ಮಗನಿಗೆ ಏನೋ ಕೆಟ್ಟದ್ದು ಸಂಭವಿಸಿದೆ ಎಂದು ಯೋಚಿಸಿದ ಅವರು ಅವನನ್ನು ಏನೆಂದು ಕೇಳಬೇಕೆಂದಿರುವಾಗ ಅವನೇ ದೇವಸ್ಥಾನದ ಕಡೆಗೆ ಸಂಜ್ಞೆ ಮಾಡಿದ. ತಂದೆಗೆ ಅರ್ಥವಾಗಲಿಲ್ಲ ಎಂಬುದನ್ನು ಗಮನಿಸದ ಪ್ರತಾಪರು ಗಟ್ಟಿ ಧ್ವನಿಯಲ್ಲಿ ಹೇಳಿದರು, ‘ಕಪ್ಪು ದೇವರು ತಮ್ಮ ಆಸನದಲ್ಲಿಲ್ಲ. ಅವರು ಕೊಚ್ಚಿ ಹೋದರೆ?’

ಅವರ ತಂದೆ ಒಂದೇ ನೆಗೆತಕ್ಕೆ ದೇವಸ್ಥಾನದ ಜಗಲಿಗೆ ಬಂದರು. ಒಳಗೆ ಇಣಿಕಿ ಏನೋ ಹುಡುಕಿದರು. ಒಳಗಿನ ಗಾಢ ಅಂಧಕಾರ ಮತ್ತು ಕಡಿಮೆ ಬೆಳಕಿನಲ್ಲಿ, ಬಿಳಿ ದೇವರು ಮತ್ತು ಅವರ ಹಳದಿ ಮುಖದ ಸಹೋದರಿ ಕೂತಲ್ಲಿಯೇ ಕೂತಿರುವುದನ್ನು ನೋಡಿದರು. ಕೆಳಗೆ ರಾಧಾ-ಕೃಷ್ಣರ ಹಿತ್ತಾಳೆ ವಿಗ್ರಹಗಳು ಸಹ ತಮ್ಮ ಜಾಗದಲ್ಲಿವೆ. ಕಪ್ಪು ದೇವರು ಮಾತ್ರವಿಲ್ಲ. ಅವರ ತಂದೆ ಆ ಚಿಕ್ಕ ದೇವಸ್ಥಾನದಲ್ಲಿ ನುಗ್ಗಿ ಎಲ್ಲಾ ಜಾಗಗಳಲ್ಲಿಯೂ ಹುಡುಕಿದರು. ಆದರೆ ಎಲ್ಲಿಗೆ ಹೋದರು ದೇವರು!

ಪ್ರತಾಪರ ತಂದೆ ಶಾಕ್ ಹೊಡೆದಂತೆ ಅಲ್ಲಿಯೇ ದಢಾರನೆ ಕೂತರು. ಅವರ ಬಾಯಿಯಿಂದ ಒಂದು ಶಬ್ದವೂ ಬರುತ್ತಿರಲಿಲ್ಲ. ಅಷ್ಟರಲ್ಲಿ ಪ್ರತಾಪರ ತಾಯಿ ಮತ್ತು ಇಬ್ಬರು ಸಹೋದರಿಯರು ಸಹ ಅಲ್ಲಿಗೆ ಬಂದಿದ್ದರು. ವಿಷಯ ತಿಳಿಯಲು ಹೆಚ್ಚು ಕಷ್ಟವಾಗಲಿಲ್ಲ. ದೇವರ ಮನೆಯ ಬಾಗಿಲು ಅವಶ್ಯವಾಗಿ ತೆರೆದಿತ್ತೇನೋ... ಪ್ರವಾಹದ ನೀರು ಹಳ್ಳಿಯೊಳಗೆ ನುಗ್ಗಿ ಬಂದಾಗ ಎಲ್ಲರೂ ತಮ್ಮ-ತಮ್ಮ ಹಣ ಮತ್ತು ಜೀವವನ್ನು ಉಳಿಸಿಕೊಳ್ಳಲು ದಿಣ್ಣೆಯನ್ನೇರಿದರು. ದೇವರುಗಳ ಬಗ್ಗೆ ಯೋಚಿಸಲು ಯಾರಿಗೆ ತಾನೇ ಬಿಡುವಿತ್ತು!

ನಾರಾಯಣ ಮಹಾಪಾತ್ರರ ಮನೆಯಲ್ಲಿನ ರೋದನವನ್ನು ಕೇಳಿ ಹಳ್ಳಿಯ ಕೆಲವರು ಕಾರಣ ಕೇಳಲು ಓಡೋಡಿ ಬಂದರು. ಅವರೆಲ್ಲಾ ವಿಷಯ ತಿಳಿದು ಕಳವಳಗೊಂಡರು. ದೇವಸ್ಥಾನ ಮಹಾಪಾತ್ರರ ವಂಶಕ್ಕೆ ಸೇರಿದ್ದಾಗ್ಯೂ, ದೇವರು ಇಡೀ ಹಳ್ಳಿಗೆ ಸೇರಿದ್ದರಲ್ಲ! ಆದರೆ ಅವರನ್ನು ಎಲ್ಲಿ ಹುಡುಕುವುದು? ಅದಕ್ಕೂ ಮೊದಲು ಮನೆ-ದ್ವಾರವನ್ನು ಸ್ವಚ್ಛ ಮಾಡಿದ ನಂತರ ಅವರನ್ನು ಹುಡುಕಬೇಕು; ಹೀಗೆಂದು ಅಲ್ಲಿಗೆ ಬಂದ ಮೂರ‍್ನಾಲ್ಕು ಜನ ತಮ್ಮ-ತಮ್ಮ ಮನೆಗೆ ಮರಳಿ ಹೋದರು.

ದೇವರು ಸಿಗದವರೆಗೆ ಪ್ರತಾಪರ ತಂದೆ ಮನೆಗೆ ಬರುವುದಿಲ್ಲವೆಂದು ಹೇಳಿ ಒಂದು ದೊಣ್ಣೆ ಹಿಡಿದು ನೀರು-ಕೆಸರಿನಲ್ಲಿ ಪಚ-ಪಚ ಎನ್ನುತ್ತಾ ನದಿಯ ಸಮೀಪಕ್ಕೆ ಹೋದರು. ಪ್ರತಾಪರು ಸಹ ತಂದೆಯನ್ನು ಹಿಂಬಾಲಿಸಿದರು. ಅಪ್ಪ-ಮಗ ಇಬ್ಬರು ಕೇದಿಗೆ ಪೊದೆ ಮತ್ತು ನೀರಿನಲ್ಲಿ ಹರಿದು ಬಂದ, ಅಲ್ಲಿ-ಇಲ್ಲಿ ಸಿಲುಕಿಕೊಂಡ ಗಿಡ-ಗಂಟಿಗಳನ್ನು ತಡವರಿಸಿ ಹುಡುಕಲಾರಂಭಿಸಿದರು.

ಅಂದು ಪ್ರತಾಪ್ ಓರ್ವ ವಿದ್ವಾಂಸರಂತೆ ಹೇಳಿದ್ದರು, ‘ಅಪ್ಪಾ, ಉಳಿದ ದೇವರುಗಳೆಲ್ಲರೂ ಅಲ್ಲಿಯೇ ಕೂತಿದ್ದಾರೆ, ಇವರು ಮಾತ್ರ ಎಲ್ಲಿಗೆ ಹೋಗಿಬಿಟ್ಟರು! ಒಂದು ವೇಳೆ ನೀರು ಕೊಚ್ಚಿಕೊಂಡು ಹೋಗಿದ್ದರೆ, ಮೂರು ದೇವತೆಗಳನ್ನೂ ಕೊಚ್ಚಿಕೊಂಡು ಹೋಗಬೇಕಿತ್ತಲ್ಲ! ಕಪ್ಪು ದೇವರಂತೂ ಎಲ್ಲಾ ದೇವರುಗಳಿಗಿಂತ ದೊಡ್ಡ ದೇವರಂತೆ ಕಾಣಿಸುತ್ತಿದ್ದರು, ಅವರನ್ನು ನೀರು ಹೇಗೆ ಕೊಚ್ಚಿಕೊಂಡು ಹೋಯಿತು?’ ಅವರ ತಂದೆ ಯಾವ ಉತ್ತರವನ್ನೂ ಕೊಡಲಿಲ್ಲ.

ಆಗಸದ ನಡುವೆ ಸೂರ್ಯ ಧೋ-ಧೋ ಎಂದು ಉರಿಯುತ್ತಿದ್ದ. ಬಿಸಿಲಿನಿಂದ ಶರೀರ ಸುಡುತ್ತಿತ್ತು. ಹಸಿವೆಯಿಂದ ಹೊಟ್ಟೆ ಉರಿಯುತ್ತಿತ್ತು. ಮೂರು ದಿನಗಳಿಂದ ಹಸಿದ ಶರೀರದಲ್ಲಿ ಜೀವವಿದೆಯೋ, ಇಲ್ಲವೋ ತಿಳಿಯುತ್ತಿರಲಿಲ್ಲ. ಆದರೂ ನಾರಾಯಣ ಮಹಾಪಾತ್ರರು ನೀರು-ಕೆಸರನ್ನು ದಾಟುತ್ತಾ ದೇವರನ್ನು ಹುಡುಕುತ್ತಾ ಮುಂದುವರೆದು ಹೋಗುತ್ತಿದ್ದರು.

ಪ್ರತಾಪರು, ದೇವರನ್ನು ಹುಡುಕುವ ಕೆಲಸವನ್ನು ತಡೆಯಲು ಮುಗುಳ್ನಗುತ್ತಾ ಹೇಳಿದರು, ‘ಅಪ್ಪಾ, ಬಹುಶಃ ದೇವರು ನೀರಿನಲ್ಲಿ ತೇಲುತ್ತಾ ತಾವೇ ಸ್ವತಃ ಎಲ್ಲೋ ಹೊರಟು ಹೋಗಿದ್ದಾರೆ. ನಡೀರಿ, ನಾವು ಮನೆಗೆ ಹೋಗೋಣ’.

ಇದಕ್ಕೆ ನಾರಾಯಣ ಮಹಾಪಾತ್ರರು ಉತ್ತರಿಸಲಿಲ್ಲ. ಆದರೆ ತಮ್ಮ ಸಣಕಲು ಶರೀರವನ್ನು ಎಳೆದುಕೊಳ್ಳುತ್ತಾ ಮನೆಗೆ ಮರಳಿ ಹೊರಟಾಗ ಪ್ರತಾಪರಿಗೆ ಸಂತಸವಾಯಿತು.

ಈಗ ಮಗ ಮುಂದಿದ್ದ, ತಂದೆ ಹಿಂದಿದ್ದರು. ಆದರೆ ಇಬ್ಬರ ಕಣ್ಣುಗಳು ಮರಳಿ ಬರುವಾಗಲೂ ದೇವರನ್ನು ಹುಡುಕುವುದನ್ನು ಬಿಟ್ಟಿರಲಿಲ್ಲ. ಅಕಸ್ಮಾತ್ ಪ್ರತಾಪರ ದೃಷ್ಟಿ ಸಮೀಪದ ಕಾಡು ಎಲಚಿ ಹಣ್ಣಿನ ಪೊದೆಗಳಲ್ಲಿ ಸಿಲುಕಿಕೊಂಡ, ಜರಿಯಿದ್ದ ಹಳದಿ ಬಟ್ಟೆಯ ಮೇಲೆ ಬಿತ್ತು.

‘ಅಪ್ಪಾ, ದೇವರ ಬಟ್ಟೆ ಇಲ್ಲಿ ಸಿಕ್ಕಿಕೊಂಡಿದೆ’ ಪ್ರತಾಪರು ಕಿರುಚಿದರು. ಸ್ವಲ್ಪ ಹಿಂದಿದ್ದ ನಾರಾಯಣ ಮಹಾಪಾತ್ರರು ಬೇಗ-ಬೇಗನೆ ಬರಲು ಪ್ರಯತ್ನಿಸುವುದನ್ನು ನೋಡಿ ಪ್ರತಾಪರು ಹೇಳಿದರು, ‘ಅಪ್ಪಾ, ದೇವರು ಇಲ್ಲಿಯೇ-ಎಲ್ಲೋ ಇರಬೇಕು. ಅವರ ಉಡುಪಿನಿಂದ ಒಂದು ಚೂರು ಬಟ್ಟೆ ಹರಿದು ಇಲ್ಲಿ ಸಿಕ್ಕಿಕೊಂಡಿದೆ. ಅವರು ಖಂಡಿತ ಇಲ್ಲಿಯೇ ಎಲ್ಲೋ ಪೊದೆ-ಗಂಟಿಗಳಲ್ಲಿ ಸಿಲುಕಿಕೊಂಡಿರಬೇಕು’

ನಾರಾಯಣರ ಶರೀರದಲ್ಲಿ ಅದೆಲ್ಲಿಂದ ಬಂತೋ ಅಪಾರ ಶಕ್ತಿ! ಈಗ ತಂದೆ-ಮಗ ಇಬ್ಬರೂ ಪರಮೋತ್ಸಾಹದಿಂದ ಮುಳ್ಳು ಪೊದೆಗಳನ್ನು ಸರಿಸಿ-ಸರಿಸಿ ದೇವರನ್ನು ಹುಡುಕಲಾರಂಭಿಸಿದರು.

ಇದ್ದಕ್ಕಿದ್ದಂತೆ ನಾರಾಯಣ ಮಹಾಪಾತ್ರರು ಕೂಗಿ ಹೇಳಿದರು, ‘ಪತೂ! ಬೇಗ ಬಾ, ಆ ಕೇದಿಗೆಯ ಪೊದೆಯಲ್ಲಿ ಅದೇನು ಕಾಣಿಸುತ್ತಿದೆ, ನೋಡು’

ಪ್ರತಾಪರು ಶೀಘ್ರವಾಗಿ ಅಲ್ಲಿಗೆ ಬಂದರು. ಕೋಲಿನಿಂದ ಎಲೆಗಳನ್ನು ಸರಿಸಿ ಖುಷಿಯಿಂದ ಕಿರುಚಿದರು, ‘ಅಪ್ಪಾ, ನೋಡಿ-ನೋಡಿ, ಕಪ್ಪು ದೇವರು ಕೈಯನ್ನು ಮುದುಡಿ, ನಡುಗುತ್ತಾ ಹೇಗೆ ಕೂತಿದ್ದಾರೆ ನೋಡಿ!’ ನಾರಾಯಣ ಮಹಾಪಾತ್ರರು ಗಿಡ-ಗಂಟಿಗಳನ್ನು ಲೆಕ್ಕಿಸದೆ ಆ ಕೇದಿಗೆಯ ಪೊದೆಯ ಸಮೀಪಕ್ಕೆ ಮುಂದುವರೆದು ಹೋದರು. ಎಲೆಗಳಿಂದ ಮುಚ್ಚಲ್ಪಟ್ಟಿದ್ದ ಬೆತ್ತಲೆ ದೇವರನ್ನು ಹೊರ ತೆಗೆದು ಮುದ್ದಾಡಿದ್ದರು.

ಪ್ರತಾಪರು ತಂದೆಯನ್ನು ಆಶ್ಚರ್ಯದಿಂದ ನೋಡುತ್ತಿದ್ದರು. ದೇವಸ್ಥಾನದೊಳಗೆ ಬ್ರಾಹ್ಮಣ ಪಂಡಾರನ್ನು ಹೊರತುಪಡಿಸಿ, ಬೇರಾರಿಗೂ ಪ್ರವೇಶವಿರದಂತೆ ನಾರಾಯಣ ಮಹಾಪಾತ್ರರು ಎಚ್ಚರ ವಹಿಸುತ್ತಿದ್ದರು, ಇನ್ನು ದೇವರನ್ನು ಸ್ಪರ್ಶಿಸುವುದಂತೂ ದೂರದ ಮಾತು. ಇಂದು ತಂದೆಯವರೇ ದೇವರನ್ನು ಮುದ್ದಾಡುತ್ತಿದ್ದಾರೆ, ರೋದಿಸುತ್ತಿದ್ದಾರೆ, ನಗುತ್ತಿದ್ದಾರೆ!

ಪ್ರತಾಪರಿಗೆ ಚೆನ್ನಾಗಿ ನೆನಪಿದೆ-

ಅವರ ತಂದೆ ಒದ್ದೆಯಾದ ಅಂಗವಸ್ತ್ರದಿಂದ ದೇವರನ್ನು ಒರೆಸುತ್ತಾ ಹೇಳುತ್ತಿದ್ದರು, ‘ನೀನೇಕೆ ಇಷ್ಟು ತುಂಟನಾದೆ? ನಿನ್ನಣ್ಣ ಎಲ್ಲಿ ಕೂರಬೇಕೋ, ಅಲ್ಲಿ ಕೂತಿದ್ದಾರೆ. ನೀನೇಕೆ ನೀರಿಗೆ ನೆಗೆದೆ? ಬಿಳಿ ಭಾಗದಲ್ಲಿದ್ದ ಚಿಕ್ಕ-ಚಿಕ್ಕ ಕಣ್ಣುಗಳು ಸಹ ಕಪ್ಪಗಾಗಿವೆ. ಶರೀರದಲ್ಲಿ ಒಂದು ಚೂರು ಬಟ್ಟೆ ಸಹ ಇಲ್ಲ. ಮುಳ್ಳುಗಳ ಮಧ್ಯೆ ಮೂರ‍್ನಾಲ್ಕು ದಿನಗಳಿಂದ ಕೂತಿದ್ದೀಯ, ನಡಿ-ನಡಿ!’

ನಂತರ ಅಪ್ಪ ದೇವರನ್ನು ಹೆಗಲ ಮೇಲೆ ಕೂರಿಸಿಕೊಂಡು ಭಜನೆ ಮಾಡುವ ಭಂಗಿಯಲ್ಲಿ ನರ್ತಿಸುತ್ತಾ ಸಾಗಿದ್ದರು. ಪ್ರತಾಪರು ಸಹ ಕೋಟೆ ಗೆದ್ದವರಂತೆ ಅವರನ್ನು ಹಿಂಬಾಲಿಸಿ ಹೋಗುತ್ತಿದ್ದರು.

ದೂರದಲ್ಲಿ ಅವರ ತಾಯಿ ಮತ್ತು ಇಬ್ಬರು ಸಹೋದರಿಯರು ಮನೆಯ ಜಗಲಿಯಲ್ಲಿ ನಿಂತು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಅವರ ತಂದೆ ದೇವಸ್ಥಾನದೊಳಗೆ ಹೋಗಿ ದೇವರನ್ನು ಅವರ ಆಸನದಲ್ಲಿ ಕೂರಿಸಿದರು. ನಂತರ ಬಿಳಿ ದೇವರನ್ನು [ಬಲಭದ್ರ] ದೂರುತ್ತಾ ಹೇಳಿದರು, ‘ನೀನೆಂಥ ಅಣ್ಣ? ಚಿಕ್ಕವನನ್ನು ನೋಡಿಕೊಳ್ಳಲು ಆಗುವುದಿಲ್ಲವೇ? ನೀನಿದ್ದಂತೆ ಇವನು ಯಾವಾಗ ಇಲ್ಲಿಂದ ತಪ್ಪಿಸಿಕೊಂಡು ಹೋದನೋ! ಮುಳ್ಳು ಪೊದೆಗಳಲ್ಲಿ ಸಿಲುಕಿಕೊಂಡು ಅದೆಷ್ಟು ಕಷ್ಟವನ್ನು ಸಹಿಸುತ್ತಿದ್ದನೋ, ನೀನು ನೋಡದೇ ಇದ್ದ ಮೇಲೆ ಇನ್ನೇನು ಅರ್ಥ ಮಾಡಿಕೊಳ್ಳುತ್ತೀಯ? ಈಗ ನೀನು ಇವನನ್ನು ಸಂಭಾಳಿಸಿಟ್ಟುಕೋ’.

ಅಪ್ಪ ದೇವಸ್ಥಾನದಿಂದ ಹೊರಟು ಹೊರ ಬಂದಾಗ, ಅಮ್ಮ ಮತ್ತು ಇಬ್ಬರು ಸಹೋದರಿಯರು ಸಹ ಅಲ್ಲಿಗೆ ಬಂದಿದ್ದರು. ಎಲ್ಲರೂ ಕಳೆದು ಹೋದ ಅಮೂಲ್ಯ ನಿಧಿ ಮತ್ತೆ ಸಿಕ್ಕಿದ್ದರಿಂದಾಗಿ ಸಂತೋಷದಿಂದ ಮೈಮರೆತಿದ್ದರು.

ಆದರೆ ಅಮ್ಮ ಕೆಂಡಕಾರುತ್ತಾ ಮನೆಯ ಚಪ್ಪರದಿಂದ ಒಂದು ಚಿಕ್ಕ ಹಗ್ಗವನ್ನು ಕತ್ತರಿಸಿ ತಂದಿದ್ದರು; ಅದನ್ನು ತಂದೆಯವರಿಗೆ ಕೊಡುತ್ತಾ ಹೇಳಿದರು, ‘ಆ ಕಪ್ಪನೆಯವನಿಗೆ [ಜಗನ್ನಾಥ ದೇವರು] ಅವನ ಜಾಗದಲ್ಲಿ ಕಟ್ಟಿ ಹಾಕಿ. ಎಲ್ಲರಿಗೂ ಸಾಕಷ್ಟು ಕಷ್ಟವನ್ನು ಕೊಟ್ಟಿದ್ದಾನೆ’.

ಅಪ್ಪ ಮುಗುಳ್ನಗುತ್ತಾ ಹೇಳಿದ್ದರು, ‘ನೋಡೇ, ಗೊತ್ತಾ ನಿನಗೆ? ಅವನನ್ನು ಮತ್ತೇನು ಕಟ್ಟಿಹಾಕುವುದು? ಅವನು ನಮ್ಮಿಂದ ಯಾವಾಗಲೋ ಕಟ್ಟಿಹಾಕಲ್ಪಟ್ಟಿದ್ದಾನೆ. ನೀರು ಅವನ ಸಮೀಪಕ್ಕೆ ಬಂದಾಗ ಅವನು ತನ್ನನ್ನು ತಾನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲವೇನೋ, ಅದಕ್ಕೇ ಹೊರಗೆ ಬಂದ. ಕಡೆಗೆ ನಮ್ಮ ನೆನಪಾಗಿ ಕೇದಿಗೆಯ ಪೊದೆಯಲ್ಲಿ ಸಿಲುಕಿ ನಿಂತ. ಇಲ್ಲದಿದ್ದಲ್ಲಿ ಪ್ರವಾಹದ ನೀರಿನ ವೇಗದಲ್ಲಿ ಎಲ್ಲಿಗೆ ಕೊಚ್ಚಿಕೊಂಡು ಹೋಗುತ್ತಿದ್ದನೋ...ಕಡೆಗೆ ಮರಳಿ ಬರಲು ರಸ್ತೆಯೇ ತಿಳಿಯುತ್ತಿರಲಿಲ್ಲ. ಆಗ ನಮ್ಮ ಪರಿಸ್ಥಿತಿ ಏನಾಗುತ್ತಿತ್ತೋ, ಸ್ವಲ್ಪ ಯೋಚಿಸು’

ಅಪ್ಪ ಗದ್ಗದಿತರಾಗಿದ್ದರು. ಎಲ್ಲರ ಕಣ್ಣುಗಳಲ್ಲಿ ಕಣ್ಣೀರಿನ ಧಾರೆ ಹರಿಯುತ್ತಿತ್ತು. ಅಪ್ಪ ತಮ್ಮನ್ನು ತಾವು ಸುಧಾರಿಸಿಕೊಳ್ಳುತ್ತಾ ಹೇಳಿದ್ದರು, ‘ನಡಿ, ಮೊದಲು ಇವರಿಗೆಲ್ಲಾ ಸ್ವಲ್ಪ ಬೆಲ್ಲ-ಅವಲಕ್ಕಿ ಕಲೆಸಿ ತಿನ್ನಿಸು. ನಂತರ ನಮ್ಮ ಊಟಕ್ಕೆ ವ್ಯವಸ್ಥೆ ಮಾಡು. ಹೊಟ್ಟೆ ತುಂಬಾ ಹಸಿದಿದೆ’.

ಅಂದು ಅವರು ಮನುಷ್ಯರ ಬಗ್ಗೆ ಮಾತನಾಡುತ್ತಿದ್ದಾರೋ ಅಥವಾ ದೇವರ ಬಗ್ಗೆ ಮಾತನಾಡುತ್ತಿದ್ದಾರೋ ಎಂಬ ಸಂಶಯ ಕಾಡಿತ್ತು ಎಂಬುದು ಪ್ರತಾಪರಿಗೆ ನೆನಪಿದೆ. ಆ ಘಟನೆಯ ನಂತರ ದೇವಸ್ಥಾನವನ್ನು ಇಟ್ಟಿಗೆ-ಸಿಮೆಂಟಿನಿಂದ ಮಜಬೂತು ಮಾಡಲಾಗಿತ್ತು. ನಾಲ್ಕೂ ಕಡೆಯಿಂದ ದೇವಸ್ಥಾನಕ್ಕೆ ಎತ್ತರೆತ್ತರ ಗೋಡೆಗಳನ್ನು ನಿರ್ಮಿಸಲಾಗಿತ್ತು.

ಈ ನಡುವೆ ಸುಮಾರು ಎಪ್ಪತ್ತು ವರ್ಷಗಳೇ ಸಂದಿವೆ. ಇಷ್ಟು ವರ್ಷಗಳಲ್ಲಿ ಅಂದಿನಂಥ ಪ್ರವಾಹವನ್ನು ಪ್ರತಾಪರು ಮತ್ತೆಂದೂ ನೋಡಿರಲಿಲ್ಲ. ಹಳ್ಳಿಯ ಮನೆಗಳೆಲ್ಲವೂ ಇಟ್ಟಿಗೆ-ಸಿಮೆಂಟಿನಿಂದ ನಿರ್ಮಾಣಗೊಂಡಿವೆ. ಅವರ ಮನೆಯೂ ಎರಡಂತಸ್ತಿನ ಮನೆಯಾಗಿದೆ. ಮನೆ-ಮನೆಯಲ್ಲಿ ಮೋಟಾರ್ ಸೈಕಲ್‌ಗಳಿವೆ. ಬೆಳಗಾಗುತ್ತಲೇ ನಗರದೆಡೆಗೆ ಬೈಕ್‌ಗಳ ಗುಂಪು ಹೊರಡುತ್ತವೆ. ಒಬ್ಬರು ನೌಕರಿಗೆ, ಇನ್ನೊಬ್ಬರು ವ್ಯಾಪಾರಕ್ಕೆ, ಮಗುದೊಬ್ಬರು ಕಾಲೇಜಿಗೆ ಹೋಗುತ್ತಾರೆ. ಸಾಕಷ್ಟು ಜನ ಅನೇಕ ಕೆಲಸಗಳಿಗೆ ನಗರಕ್ಕೆ ಹೋಗುತ್ತಾರೆ. ಮನೆಯಲ್ಲಿ ವಯಸ್ಸಾದವರು, ಹೆಂಗಸರು ಮತ್ತು ಮಕ್ಕಳು ಉಳಿಯುತ್ತಾರೆ. ಸಂಜೆ ಮತ್ತೆ ಎಲ್ಲರೂ ಹಳ್ಳಿಗೆ ಮರಳಿ ಬರುವುದು ಆರಂಭವಾಗುತ್ತದೆ.

ಪ್ರತಾಪರ ಮಗ ದಿಲೀಪ ನಗರದಲ್ಲಿ ಒಂದು ದೊಡ್ಡ ಅಂಗಡಿಯನ್ನು ತೆರೆದಿದ್ದಾನೆ. ಹಳ್ಳಿಯನ್ನು ತ್ಯಜಿಸಿ ನಗರಕ್ಕೆ ಹೋಗಬೇಕೆಂಬುದು ಅವನ ಹೆಂಡತಿಯ ಬಹು ಬಯಕೆಯಾಗಿದೆ. ದಿಲೀಪನೂ ಇದನ್ನೇ ಬಯಸುತ್ತಾನೆ ಎಂಬುದು ಅವಳಿಗೆ ಗೊತ್ತಿದೆ. ದಿಲೀಪನ ವೃದ್ಧ ತಂದೆ-ತಾಯಿ ತಮ್ಮ ಪ್ರಭು ಗೋಪಿನಾಥನನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂಬುದು ಅವಳಿಗೆ ತಿಳಿದಿದೆ. ಹೀಗಾಗಿ ಹಳ್ಳಿಯನ್ನು ತ್ಯಜಿಸಿ ಹೋಗುವುದು ನನಗೆ ಸಾಧ್ಯವಿಲ್ಲವೆಂದು ದಿಲೀಪ ತನ್ನ ಹೆಂಡತಿಗೆ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾನೆ. ಆದರೂ ಅವನ ಬಗ್ಗೆ ಅವರ ಮನೆಯಲ್ಲಿ ಯಾವುದೇ ತಕರಾರಿಲ್ಲ. ಹಳ್ಳಿಯ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಮಗನ ಅಡ್ಮಿಶನ್ ಮಾಡಿಸಿ ಸೊಸೆಯೂ ಖುಷಿಯಿಂದಿದ್ದಾಳೆ. ಮಗ ಸ್ವಲ್ಪ ದೊಡ್ಡವನಾದ ನಂತರ ನಗರದ ಒಂದು ಒಳ್ಳೆಯ ಇಂಗ್ಲಿಷ್ ಶಾಲೆಯ ಹಾಸ್ಟೆಲ್‌ಗೆ ಸೇರಿಸಿ ಅವನನ್ನು ಓದಿಸುತ್ತೇನೆ ಎಂದು ಅವಳು ಯೋಚಿಸುತ್ತಾಳೆ.

ಪ್ರತಾಪರ ಗಮನ ಮತ್ತೆ ಪ್ರವಾಹದ ನೀರಿನಿಂದ ಆವರಿಸಿದ ಹಳ್ಳಿಯ ಬಗ್ಗೆ ಹರಿಯಿತು. ಇದುವರೆಗೆ ಎಲ್ಲವೂ ಸರಿಯಾಗಿಯೇ ಸಾಗುತ್ತಿತ್ತು. ಆದರೆ ಈ ವರ್ಷ ನದಿಯಲ್ಲಿ ಇಷ್ಟು ನೀರು ಬರುವುದೆಂದು ಯಾರೂ ಯೋಚಿಸಿರಲಿಲ್ಲ. ಮಾರ್ಗದಲ್ಲಿ ರಸ್ತೆ ಕೊಚ್ಚಿಕೊಂಡು ಹೋದದ್ದರಿಂದಾಗಿ ದಿಲೀಪ ಮತ್ತು ಅವನ ಹೆಂಡತಿ ಹಳ್ಳಿಗೆ ಮರಳಿ ಬರಲು ಸಾಧ್ಯವಾಗುತ್ತಿಲ್ಲ. ಸೊಸೆಯ ತಾಯಿಯ ಆರೋಗ್ಯ ಹದಗೆಟ್ಟಿತ್ತು, ಹೀಗಾಗಿ ಅವರಿಬ್ಬರು ಭದ್ರಕಕ್ಕೆ ಹೋಗಿದ್ದರು.

ಈ ವೇಳೆಯಲ್ಲಿ ಹಳ್ಳಿಯ ಮನೆಯಲ್ಲಿ ಅಜ್ಜ-ಅಜ್ಜಿ ಮತ್ತು ಮೊಮ್ಮಗನಿದ್ದಾನೆ. ಮನೆಯ ವರಾಂಡದ ಮೇಲ್ಭಾಗದವರೆಗೆ ನೀರು ನಿಂತಿದೆ. ಮೂವರು ಸಹ ಮನೆಯ ಮೊದಲ ಅಂತಸ್ತಿಗೆ ಹೋಗಿದ್ದಾರೆ.

ರಾತ್ರಿ ತುಂಬಾ ಕಷ್ಟದಿಂದ ಕಳೆಯಿತು. ಪ್ರವಾಹದ ಎಷ್ಟು ನೀರು ನುಗ್ಗಿ ಬಂದಿದೆಯೋ...

ಬೆಳಿಗ್ಗೆಯೂ ಆಕಾಶದಲ್ಲಿ ಮೋಡ ಅವರಿಸಿತ್ತು, ವೇಳೆ ಎಷ್ಟಾಗಿದೆ ಎಂದು ಸಹ ತಿಳಿಯುತ್ತಿರಲಿಲ್ಲ. ನೀರು ಹೆಚ್ಚಿಲ್ಲ. ದೇವರ ಜಗಲಿ ಮುಳುಗಿದೆ, ಆದರೆ ದೇವಸ್ಥಾನಕ್ಕೆ ನೀರು ನುಗ್ಗಿಲ್ಲ.

ಪ್ರತಾಪ್ ಬಾಬು ನೆಮ್ಮದಿಯಿಂದ ಉಸಿರಾಡಿದರು. ಇನ್ನೊಂದು ಕೋಣೆಯಿಂದ ಅಜ್ಜಿ ಮತ್ತು ಮೊಮ್ಮಗನ ಧ್ವನಿ ಕೇಳಿ ಬರುತ್ತಿದೆ. ಅವಲಕ್ಕಿ ಅಥವಾ ತಂಬಿಟ್ಟನ್ನು ತಿನ್ನಲು ಬುಲೂ ಒಪ್ಪುತ್ತಿಲ್ಲ. ಆದರೆ ನಿಶಾಮಣಿಗೆ ಈಗ ವಯಸ್ಸಾಗುತ್ತಿದೆ. ಕಣ್ಣುಗಳಿಗೆ ಕಾಣಿಸುತ್ತಿಲ್ಲ. ಅಡುಗೆ ಮನೆ ಕೆಳಗಿದೆ. ಸ್ವಲ್ಪ ನೀರು ಒಳಗೆ ನುಗ್ಗಿ ಬಂದಿದೆ. ಅವರು ಗ್ಯಾಸ್ ಹೊತ್ತಿಸಿ ಅಡುಗೆ ಮಾಡಲು ಸಾಧ್ಯವೇ?

ಬುಲೂಗೆ ಅವನ ತಂದೆ ನಗರದಿಂದ ನಿತ್ಯ ಬಿಸ್ಕತ್ ಪ್ಯಾಕೇಟ್ ತರುತ್ತಿದ್ದರು. ಅದನ್ನು ಬಿಚ್ಚಿ ಅವನು ತುಂಬಾ ಖುಷಿಯಿಂದ ತಿನ್ನುತ್ತಿದ್ದ. ಇಂದು ಅವನನ್ನು ತಡೆಯಲು ಅವನ ಅಮ್ಮ ಮನೆಯಲ್ಲಿರಲಿಲ್ಲ. ಅಜ್ಜಿ ಗ್ಯಾಸ್ ಹೊತ್ತಿಸಿ ಯಾವ ತಿನಿಸನ್ನೂ ಮಾಡಲಾರರು ಎಂಬುದು ಅವನಿಗೆ ತಿಳಿದಿತ್ತು. ಅವನ ಅಮ್ಮ ಹಳ್ಳಿಯಲ್ಲಿ ಇಲ್ಲದಿದ್ದಾಗ ಎರಡು ಹೊತ್ತಿನ ಊಟದ ವ್ಯವಸ್ಥೆ, ಗೋಪಿನಾಥ ದೇವಸ್ಥಾನದ ಪ್ರಸಾದದಿಂದಲೇ ಮುಗಿದು ಹೋಗುತ್ತಿತ್ತು. ಆದರೆ ಇಂದೇನಾಗುವುದು! ಏನಿದೆಯೋ ಅದರಿಂದಲೇ ತೃಪ್ತಿಪಡಬೇಕಲ್ಲ!

ನಿಶಾಮಣಿ ಬಂದು ಪ್ರತಾಪರಿಗೆ ಹೇಳಿದಳು, ‘ಸ್ವಲ್ಪ ತಿನ್ನಬಾರದೇ? ಅವಲಕ್ಕಿ ಇದೆ, ತಂಬಿಟ್ಟಿದೆ. ಡಬ್ಬಿಯಲ್ಲಿ ತಿನ್ನುವ ವಸ್ತುಗಳು ಸಹ ಇವೆ. ತರಲೇ?’

ಪ್ರತಾಪರು ತಲೆಯಾಡಿಸಿ ಬೇಡವೆಂದರು. ಅವರು ದೇವತೆಗಳ ಬಗ್ಗೆ ಯೋಚಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ನರಹರಿ ಪೂಜಾರಿಯವರು ನೈವೇದ್ಯವನ್ನು ಅರ್ಪಿಸಿದ್ದರು, ಅಷ್ಟೆ. ಇಡೀ ದಿನ, ಇಡೀ ರಾತ್ರಿ ಕಳೆದು ಹೋಗಿದೆ, ದೇವರಿಗೆ ನೈವೇದ್ಯವನ್ನೇ ಮಾಡಿಲ್ಲ. ಅವರ ತಂದೆ ಬದುಕಿರುವವರೆಗೆ, ದೇವತೆಗಳಿಗೆ ಮೂರೂ ಹೊತ್ತು ನೈವೇದ್ಯವನ್ನು ಅರ್ಪಿಸುವಲ್ಲಿ ಬೇಜವಾಬ್ದಾರಿಯನ್ನು ತೋರಲಿಲ್ಲ. ಆದರೆ ಈ ಪರಿಸ್ಥಿತಿಯಲ್ಲಿ ಅವರೇನು ಮಾಡುವುದು?

ಒಂದು ಕಾಲದಲ್ಲಿ ಅವರು ತಂದೆಯೊಂದಿಗೆ ದೇವರನ್ನು ಹುಡುಕಲು ಏರು-ತಗ್ಗು, ಕೆಸರು-ಮಣ್ಣು, ಗಿಡ-ಗಂಟಿಗಳನ್ನು ದಾಟಿ ಅಲೆದಾಡಿದ್ದರು. ಇಂದು ದೇವರು ಸ್ವಲ್ಪವೇ ದೂರದಲ್ಲಿ ಕೂತಿದ್ದಾರೆ, ಆದರೆ ಅವರಿಂದ ದೇವರ ಸಮೀಪಕ್ಕೆ ಹೋಗಲಾಗುತ್ತಿಲ್ಲ.

ಮೊಬೈಲ್ ರಿಂಗಾಯಿತು, ಅವರ ಗಮನ ಚದುರಿತು. ಮಗ ದಿಲೀಪ ಫೋನ್ ಮಾಡಿದ್ದ. ಮೊಬೈಲ್ ಆನ್ ಮಾಡಿದ ನಂತರ ಅತ್ತ ಕಡೆಯಿಂದ ಕೇಳಿಸಿತು, ‘ಅಪ್ಪಾ, ನೀವೆಲ್ಲಾ ಹೇಗಿದ್ದೀರ? ಬುಲೂ ನೀರು ನೋಡಿ ಹೆದರುತ್ತಿರಬೇಕು. ನಾವಿಬ್ಬರು ಈಗ ಹಳ್ಳಿಯಲ್ಲಿಲ್ಲ, ಇದಕ್ಕೇ ಯೋಗ ಅನ್ನುವುದು’.

‘ನಾವು ಮೊದಲ ಅಂತಸ್ತಿನಲ್ಲಿದ್ದೇವೆ. ಕೆಳ ಭಾಗದಲ್ಲಿ ಏನಾಗಿದೆ ಎಂಬುದನ್ನು ನೀವು ಬಂದಾಗ ನೋಡಿ. ಬುಲೂ ಬಗ್ಗೆ ಯೋಚಿಸಬೇಡಿ. ಅವನು ನದಿ ತೀರದಲ್ಲಿರುವ ಮಗು. ಈ ಹಿಂದೆ ಪ್ರವಾಹವನ್ನು ನೋಡದಿದ್ದರೂ ಅವನು ನೀರಿಗೆ ಹೆದರುವುದಿಲ್ಲ. ಆದರೆ...’ ಎಂದರು ಪ್ರತಾಪ್.

ಅವರ ಧ್ವನಿ ಕಂಪಿಸಿತು. ಮಗ ಇನ್ನೊಂದು ಕಡೆಯಿಂದ ಕೇಳಿದ, ‘ಏನು ವಿಷಯ, ನೀವು ಸ್ವಲ್ಪ ಚಿಂತೆಯಲ್ಲಿರುವಂತಿದೆ?’

‘ಇಲ್ಲ ದಿಲೀಪ! ದೇವರು ನಿನ್ನೆಯಿಂದ ಉಪವಾಸ ಕೂತಿದ್ದಾರೆ’.

ಆ ಕಡೆಯಲ್ಲಿದ್ದ ದಿಲೀಪ ಸರಿಯಾಗಿ ಕೇಳದಾದ. ಈಗ ಅವನು ಗಟ್ಟೆಯಾಗಿ ಕೇಳಿದ, ‘ಏನಂದಿರಿ, ಯಾರು ಉಪವಾಸ ಕೂತಿದ್ದಾರೆ?’

‘ದೇವರು, ದೇವರು ಉಪವಾಸ ಕೂತಿದ್ದಾರೆ. ನನ್ನಿಂದ ಕೆಳಗಿಳಿಯಲು ಸಾಧ್ಯವಾಗುತ್ತಿಲ್ಲ. ಸೊಂಟದವರೆಗೆ ನೀರಿರಬೇಕು’.

ಆ ಕಡೆಯಿಂದ ದಿಲೀಪನ ನಗು ಕೇಳಿಸಿತು, ‘ಅಪ್ಪಾ, ಏನು ಹೇಳುತ್ತಿದ್ದೀರ! ಅಲ್ಲ, ದೇವರು ಎಲ್ಲಿಯಾದರೂ ಉಪವಾಸವಿರುವರೇ! ನೀವು ಕೆಳಗೆ ನೀರಿಗಿಳಿಯಬೇಡಿ. ನಿಮ್ಮ ಕಾಲುಗಳು ಸರಿಯಾಗಿ ಊರಲ್ಲ. ಒಂದು ವೇಳೆ ನೀವು ಹೋದರೆ, ನಿಮ್ಮ ಹಿಂದಿಂದೆ ಬುಲೂ ಸಹ ಬರುತ್ತಾನೆ. ಏನಾದರೂ ಆದರೆ ನಾನಿಲ್ಲಿಂದ ಸಹಾಯ ಮಾಡಲು ಆಗುವುದಿಲ್ಲ’.

ಮೊಬೈಲ್ ಕಟ್ಟಾಯಿತು. ಆದರೆ ದಿಲೀಪನ ಧ್ವನಿ ಕಠಿಣವಾಗಿರುವಂತೆ ತೋರಿತು. ಪ್ರತಾಪರು ನಿಜವೆಂದು ಯೋಚಿಸಿದರು. ಈ ಮೊಮ್ಮಗ ಅತ್ತ-ಇತ್ತ ಕುಣಿದಾಡುತ್ತಿದ್ದಾನೆ, ಕೆಳಗೆ ಹೋಗಿ ಕಾಗದದ ದೋಣಿ ಬಿಡಲು ಹಟ ಮಾಡುತ್ತಿದ್ದಾನೆ, ಇಂಥ ಪರಿಸ್ಥಿತಿಯಲ್ಲಿ ತಾವು ನೀರಿನಲ್ಲಿ ಇಳಿಯಲು ಪ್ರಯತ್ನಿಸಿದರೆ, ಅವನನ್ನು ಸಂಭಾಳಿಸುವುದು ಹೇಗೆ! ಮಗ ಬೇಡವೆಂದು ಹೇಳಿದ ನಂತರೂ ತಾವು ನೀರಿಗಿಳಿದು ದೇವಸ್ಥಾನಕ್ಕೆ ಹೋದರೆ, ಆಗ ಆಗಬಾರದ್ದು ಆದರೆ ಮಗ ತಮ್ಮನ್ನು ಕ್ಷಮಿಸುವುದಿಲ್ಲ.

ಪ್ರತಾಪರು ಮುಖವನ್ನು ಒಣಗಿಸಿಕೊಂಡು ಕೂತಿದ್ದರು. ಅವರ ದೈಹಿಕ ಅಸಮರ್ಥತೆ ಅವರನ್ನು ಅಸಹಾಯಕರನ್ನಾಗಿ ಮಾಡಿತ್ತು. ಮೊಮ್ಮಗ ಒಮ್ಮೆ ಈ ಕಿಟಕಿಯಿಂದ, ಇನ್ನೊಮ್ಮೆ ಆ ಕಿಟಕಿಯವರೆಗೆ ಕುಣಿಯುತ್ತಾ-ಹಾರುತ್ತಾ ಹೋಗುತ್ತಿದ್ದ. ನೀರಿನಲ್ಲಿ ಅಲ್ಲಲ್ಲಿ ಬಟ್ಟಲು, ಲೋಟ, ಹಂಡೆ, ಡಬರಿ ತೇಲುವುದನ್ನು ನೋಡಿ ಖುಷಿಯಿಂದ ಕೂಗುತ್ತಾ ತಲೆದೂಗುತ್ತಿದ್ದ. ನೆರೆಮನೆಯ ಅಂಗಳದಲ್ಲಿದ್ದ ಪಾರಿವಾಳಗಳ ಗೂಡಿನಲ್ಲಿ ನೀರು ತುಂಬಿದ್ದರಿಂದ, ಪಾರಿವಾಳಗಳು ಅವರ ಮನೆಯ ಛಾವಣಿಯಲ್ಲಿ ಕೂತಿರುವುದನ್ನು ನೋಡಿ, ಹಟಮಾಡಿ ಅಜ್ಜಿಯಿಂದ ಕಡಲೆ ಬೀಜ ಮತ್ತು ಅಕ್ಕಿಯನ್ನು ಪಡೆದು ಅವುಗಳೆಡೆಗೆ ಎಸೆಯುತ್ತಿದ್ದ.

ನಿಶಾಮಣಿಗೆ ತನ್ನ ಗಂಡನ ದುಃಖದ ಬಗ್ಗೆ ಕಾರಣ ಅರ್ಥವಾಗುತ್ತಿತ್ತು. ದೇವಸ್ಥಾನದವರೆಗೆ ಹೋಗಿ ಒಂದು ದೀಪವನ್ನು ಹೊತ್ತಿಸುವಷ್ಟು ಶಕ್ತಿ ಅವರಲ್ಲೂ ಇರಲಿಲ್ಲ. ಪ್ರತಾಪರಿಗೆ ಅಧಿಕ ರಕ್ತದೊತ್ತಡ ಇತ್ತು, ಏನಾದರೂ ಸ್ವಲ್ಪ ತಿಂದು ಔಷಧಿ ತೆಗೆದುಕೊಳ್ಳುವಂತೆ ಹೇಳಲು ಸಹ ಅವರಿಂದಾಗುತ್ತಿರಲಿಲ್ಲ. ಪೂರಿ ಹಿಟ್ಟನ್ನು ನಾದಿಡಲಾಗಿತ್ತು. ಪ್ರತಾಪರು ಎದ್ದು ತಮ್ಮ ಮಲಗುವ ಕೋಣೆಗೆ ಹೋದರು. ಪತಿ ಏನೂ ತಿನ್ನಲಿಲ್ಲ, ನಿಶಾಮಣಿ ಸಹ ಹೊಟ್ಟೆಗೆ ಏನೂ ಹಾಕಿಕೊಳ್ಳಲಿಲ್ಲ.

ಈ ನಡುವೆ ಸಮಯ ಕಳೆದಿದ್ದೇ ತಿಳಿಯಲಿಲ್ಲ. ಅಕಸ್ಮಾತ್ ದೇವಸ್ಥಾನದ ಘಂಟೆ ಹೊಡೆದ ಸದ್ದು ಕೇಳಿ ಪ್ರತಾಪರು ಏಳುತ್ತಾ-ಬೀಳುತ್ತಾ ತಮ್ಮ ಕೋಣೆಯಿಂದ ಹೊರಟು ಕಿಟಕಿಯ ಸಮೀಪಕ್ಕೆ ಬಂದರು. ನರಹರಿ ಪೂಜಾರಿ ಕೈಯಲ್ಲಿ ಬಾಳೆ ಎಲೆಯಲ್ಲಿ ಏನೋ ತೆಗೆದುಕೊಂಡು ದೇವಸ್ಥಾನದೊಳಗೆ ನುಗ್ಗಿ ಹೋಗುವುದನ್ನು ಪ್ರತಾಪರು ನೋಡಿದರು.

ಅವರು ಸಂತಸದಿಂದ ಕೂಗಿ ಹೇಳಿದರು, ‘ಪೂಜಾರಿಗಳೇ, ಇಷ್ಟು ನೀರಿನಲ್ಲಿ ಹೇಗೆ ಬಂದಿರಿ? ಅದೂ ಇಷ್ಟು ದೂರ?’

ನರಹರಿಯವರು ಹೊರಳಿ ಪ್ರತಾಪರಿದ್ದ ಕಿಟಕಿಯೆಡೆಗೆ ನೋಡುತ್ತಾ ಹೇಳಿದರು, ‘ಬಾಬೂ, ನಾನು ಬರದೆ ಇರಲು ಸಾಧ್ಯವಿತ್ತೆ? ದೇವತೆಗಳು ಹೀಗೆ ಉಪವಾಸ ಕೂರುವುದನ್ನು ನಮ್ಮಿಂದ ಸಹಿಸಿಕೊಳ್ಳಲು ಸಾಧ್ಯವೇ? ನಮ್ಮ ಗಂಟಲಿನಲ್ಲಿ ಅನ್ನ-ನೀರು ಇಳಿಯುವುದೇ? ನಿನ್ನೆ ಬೆಳಿಗ್ಗೆ ಸ್ವಲ್ಪ ನೈವೇದ್ಯ ಮಾಡಿದ್ದೆ, ಆಮೇಲೆ ಬೆಳಗಾಯಿತು. ಎರಡು ಸೇರು ಅನ್ನ, ಅರ್ಧ ಸೇರು ಬೇಳೆಗೆ ತರಕಾರಿ ಹಾಕಿ ಕಿಚಡಿ ಮತ್ತು ಪಾಯಸವನ್ನು ಎರಡೂ ಹೊತ್ತು ನೈವೇದ್ಯ ಮಾಡುತ್ತಿದ್ದದ್ದು, ಈಗ ನಿಂತಿದೆ. ಈಗ ಏನು ತಾನೇ ಮಾಡಲು ಸಾಧ್ಯ? ಹೀಗಾಗಿ ಪೂರಿ-ಬೆಲ್ಲದ ನೈವೇದ್ಯವನ್ನು ಬೆಳ್ಳಂಬೆಳಿಗ್ಗೆಯೇ ಮಾಡಿದರೆ, ಮನಸ್ಸಿಗೆ ನೆಮ್ಮದಿಯಾಗುತ್ತದೆ.

‘ಬಾಬೂಜಿ, ನೀವು ನಮ್ಮ ಮನೆಯನ್ನಂತೂ ನೋಡಿದ್ದೀರ. ಸ್ವಲ್ಪ ಎತ್ತರದಲ್ಲಿದ್ದಿದ್ದರಿಂದ ನೀರು ಅಲ್ಲಿಯವರೆಗೆ ಹೋಗಲಿಲ್ಲ. ಮನೆಯಲ್ಲಿ ಅಡುಗೆ ಸಹ ಮಾಡಬಹುದು. ಆದರೆ ನಾನು ಮಾಡಬೇಡವೆಂದು ಹೇಳಿದ್ದೇನೆ. ನಮ್ಮ ದೇವರು ಅನ್ನವನ್ನು ಸ್ವೀಕರಿಸುವವರೆಗೆ, ಮನೆಯಲ್ಲಿ ಒಲೆಯನ್ನು ಹೊತ್ತಿಸುವುದಿಲ್ಲ. ಪೂರಿ-ಬೆಲ್ಲ ತಿಂದು ದೇವರು ಎಷ್ಟು ದಿನ ಕಳೆಯುತ್ತಾರೋ, ನಾವೂ ಸಹ ಅದನ್ನೇ ತಿಂದು ದಿನಗಳನ್ನು ಕಳೆಯುತ್ತೇವೆ. ನನ್ನ ಹೆಂಡತಿಯ ಅಭಿಪ್ರಾಯವೂ ಇದೇ ಆಗಿದೆ. ಸರಿ ಬಾಬೂಜಿ, ದೇವರಿಗೆ ಸ್ವಲ್ಪ ನೈವೇದ್ಯೆ ಮಾಡುತ್ತೇನೆ’.

ನರಹರಿ ಪೂಜಾರಿಗಳು ದೇವಸ್ಥಾನದೊಳಗೆ ನುಗ್ಗಿದರು. ಘಂಟೆಯೊಂದಿಗೆ ಅವರ ಮಂತ್ರೋಚ್ಚಾರಣೆ ಮತ್ತು ಜಾಗಟೆಯ ಧ್ವನಿ ಪ್ರತಾಪರಿಗೆ ಕೇಳಿಸಿತು. ಅವರು ಕಿಟಕಿಯ ರೇಲಿಂಗ್ ಹಿಡಿದು ದೇವಸ್ಥಾನದ ದಿಕ್ಕಿನಲ್ಲಿ ಎವೆಯಿಕ್ಕದೆ ನೋಡುತ್ತಿದ್ದರು; ಅವರ ಕಿವಿಯಲ್ಲಿ ಒಂದೇ ಸಮನೆ ತಂದೆಯವರ ಧ್ವನಿಯೊಂದಿಗೆ, ಅತೀತದಲ್ಲಿ ನೀರು ನುಗ್ಗಿ ಕೆಸರಿನಲ್ಲಿ ಪಚ-ಪಚನೆ ನಡೆಯುತ್ತಾ ತುಂಟ ದೇವರನ್ನು ಕೇದಿಗೆಯ ಮುಳ್ಳು ಪೊದೆಗಳಿಂದ ಉದ್ಧರಿಸಿ, ಕುಣಿಯುತ್ತಾ ಮರಳಿ ಬಂದ ತಂದೆಯವರು ಚಿತ್ರ ಮೂಡಿತು.

ದೇವಸ್ಥಾನದ ಬಾಗಿಲು ಮುಚ್ಚಿದ ಶಬ್ದ ಕೇಳಿ ಅವರ ಗಮನ ಚದುರಿತು. ನರಹರಿ ಪೂಜಾರಿಗಳು ಮರಳಿ ಹೋಗುತ್ತಿದ್ದಾರೆ. ಅವರ ಮುಖದಲ್ಲಿ ಅಪೂರ್ವ ಪ್ರಸನ್ನತೆ ಆವರಿಸಿತ್ತು. ಪ್ರತಾಪರ ಮನಸ್ಸು ಸಹ ಸಮಾಧಾನಗೊಂಡಿತು. ಅವರು ತಮ್ಮ ತಂದೆಯವರ ನಂಬಿಕೆಯನ್ನು ನರಹರಿ ಪೂಜಾರಿಗಳಲ್ಲಿ ಕಾಣುತ್ತಿದ್ದರು; ಅದರೊಂದಿಗೆ ತಮ್ಮ ನಂಬಿಕೆ ಮತ್ತು ಶ್ರದ್ಧೆಯನ್ನು ಸಹ ಪರೀಕ್ಷಿಸುತ್ತಿದ್ದರು. ವಾಸ್ತವವಾಗಿಯೂ ಅವರಿಬ್ಬರಂತೆ ತಾವೂ ಸಹ ದೇವರ ಬಗ್ಗೆ ಗಾಢ ಆತ್ಮೀಯತೆಯ ಅನುಭವವನ್ನು ಪಡೆಯುತ್ತಿರುವರೋ ಅಥವಾ ಅಭ್ಯಾಸ ಬಲದಂತೆ ಅವರ ಬಗ್ಗೆ ಹೀಗೆ ವರ್ತಿಸುತ್ತಿರುವರೋ? ಈ ಪ್ರಶ್ನೆ ಅವರನ್ನು ವ್ಯಾಕುಲಗೊಳಿಸಿತು.

ಪ್ರತಾಪರು ತಮ್ಮೊಳಗೇ ಮುಳುಗಿ ಹೋದರು. ಅವರ ಮನಸ್ಸಿನಲ್ಲಿ ವಿಚಿತ್ರ ರೀತಿಯ ಪ್ರಶ್ನೆ-ಉತ್ತರಗಳು ಎದುರಾಗುತ್ತಿದ್ದವು. ದೇವರು ಪರಬ್ರಹ್ಮ, ಪರುಷೋತ್ತಮ ಮತ್ತು ಸರ್ವವ್ಯಾಪಿ, ಅವರು ಎಲ್ಲೆಡೆಯಲ್ಲೂ ಇದ್ದಾರೆ, ಇಡೀ ವಿಶ್ವದಲ್ಲಿ ಅವರು ಸೂಕ್ಷ್ಮ ರೂಪದಲ್ಲಿ, ಅದೃಶ್ಯರಾಗಿದ್ದಾರೆ, ಅವರನ್ನು ಒಂದು ರೂಪದಲ್ಲಿ ಹುಡುಕುವ ಆವಶ್ಯಕತೆಯಾದರೂ ಏನಿದೆ! ಅವರು ಒಬ್ಬ ವ್ಯಕ್ತಿ-ವಿಶೇಷಕ್ಕೆ ಮಾತ್ರವಿಲ್ಲ, ಎಲ್ಲರಿಗೂ ಸೇರಿದವರಾಗಿದ್ದಾರೆ ಎಂದು ಕೆಲವರು ಹೇಳುತ್ತಿದ್ದರು.

ಮತ್ತೊಬ್ಬರು ಅತಿ ಕೋಮಲ ಭಾವನೆಯಿಂದ ಹೇಳುತ್ತಿದ್ದರು, ‘ಅವರು ಎಲ್ಲರಿಗಾಗಿದ್ದರೂ, ಏನೀಗ? ಆದರೆ ಅವರು ನನ್ನವರು, ನನ್ನವರು ಮಾತ್ರ ಎಂಬುದು ನನಗೆ ಗೊತ್ತಿದೆ. ಅವರು ವಿಶ್ವರೂಪಿಗಳಾಗಿದ್ದರೂ, ನಾನು ಅವರನ್ನು ನನ್ನ ಚಿಕ್ಕ-ಚಿಕ್ಕ ಬಾಹುಗಳಲ್ಲಿ ಬಂಧಿಸಿಕೊಳ್ಳಬಲ್ಲೆ. ಅವರು ಸಹ ನನ್ನ ಬಾಹುಗಳಿಗೆ ಬರಲು ಕಾತುರರಾಗಿದ್ದಾರೆ ಎಂಬುದು ಸಹ ನನಗೆ ಗೊತ್ತಿದೆ. ಅವರು ನನ್ನೆರಡು ಭುಜಗಳನ್ನು ಹಿಡಿದು, ಅವರೇ ನನ್ನನ್ನು ತಮ್ಮ ಸಮೀಪದಲ್ಲಿ ಇಟ್ಟುಕೊಳ್ಳುತ್ತಾರೆ’.

ದೇವರಿಗೆ ಆಹಾರದ ಆವಶ್ಯಕತೆ ಏನಿದೆ ಎಂದು ಕೆಲವರು ಹೇಳಬಹುದು. ಆದರೆ ಅವರ ಗಮನ ನನ್ನ ಮುಷ್ಟಿಯಲ್ಲಿರುವ ಅನ್ನದ ಮೇಲೆಯೇ ಇರುತ್ತದೆ ಎಂಬುದು ನನಗೆ ಗೊತ್ತಿದೆ. ಕೆಲವರಿಗೆ, ಅವರ ಸ್ಥಳ ಮನುಷ್ಯನ ಹೃದಯ ಮಾತ್ರವಾಗಿರಬಹುದು, ಅವರನ್ನು ಹೊರಗೆ ಹುಡುಕುವುದು ಅಜ್ಞಾನವಲ್ಲದೆ ಬೇರೇನೂ ಅಲ್ಲ.

ಆದರೆ ಆಗಾಗ ದೇವರು ಮನುಷ್ಯನ ಹೆಗಲ ಮೇಲೆ ಕೂತು ಅವನನ್ನು ಎಷ್ಟು ಕಳವಳಕ್ಕೀಡು ಮಾಡುತ್ತಾರೆ ಎಂಬ ಬಗ್ಗೆ ಶಾಸ್ತ್ರ-ಪುರಾಣದಲ್ಲಿ ಲೇಖಕ ಹೇಳಿರುವನೇ! ಹೇಳುವುದಾದರೂ ಹೇಗೆ! ಯಾರು ದೇವರನ್ನು ಹೆಗಲ ಮೇಲೆ ಕೂರಿಸಿಕೊಂಡು ನೀರು-ಕೆಸರನ್ನು ದಾಟುತ್ತಾ, ಮುಳ್ಳು-ಕಂಟಿಯಲ್ಲಿ ರಕ್ತಮಯವಾಗಿ ಮೂರು ದಿನಗಳವರೆಗೆ ಹಸಿವೆಯಿಂದಿದ್ದೂ ಸಹ ಸಂತಸದಿಂದ ಹಾಡಿ ಕುಣಿದಿರುವರೋ, ಅವರು ಸಹ ಹೇಳಲಾರರು. ಆದರೆ ಇದನ್ನು ಹೇಳಲು ಅವರಿಗೆ ಬರುವ ಭಾಷೆ ಸಾಕೇ?

ಅಂದು ಅವರ ತಂದೆಯ ಮನಸ್ಸಿನಲ್ಲಿ ಕೆಲವು ಶಬ್ದಗಳು ತಮ್ಮಷ್ಟಕ್ಕೆ ತಾವೇ ಹೆಣೆದುಕೊಂಡು ಆನಂದ ಮತ್ತು ಕರುಣೆಯ ಮಿಶ್ರ-ರಾಗವಾಗಿ ಹರಿದಿದ್ದವು, ಇಂದು ಅಷ್ಟು ವರ್ಷಗಳ ನಂತರವೂ ಸಹ ಅವರ ಕೆಲವು ಮಾತುಗಳು ಒಮ್ಮೆಲೆ ಅವರ ಬೊಚ್ಚು ಬಾಯಿಯಿಂದ ಹೊರ ಬಂದವು-

ಹೇ! ನನ್ನ ಕಪ್ಪು ದೇವರೇ
ನೀನೇ ನನ್ನ ಜೀವನ
ನನ್ನ ಬಿಟ್ಟು ಹೋಗಬೇಡ ನೀನು
ಹೋಗಬೇಡ, ಹೋಗಬೇಡ, ಹೋಗಬೇಡ.

ಅದೆಷ್ಟೋ ಹೊತ್ತಿನಿಂದ ಕಿಟಕಿಯ ರೇಲಿಂಗ್‌ನಿಂದ ಹೊರಗೆ ನೋಡುತ್ತಿದ್ದ ಅಜ್ಜ, ಅಕಸ್ಮಾತ್ ಹಾಡುವುದನ್ನು ಕೇಳಿ, ಅವರ ಸಮೀಪದಲ್ಲಿ ಕೂತು ಆಡುತ್ತಿದ್ದ ಬುಲೂ ಆಶ್ಚರ್ಯದಿಂದ ಅವರನ್ನೇ ನೋಡುತ್ತಿದ್ದ. ಮರುಕ್ಷಣವೇ ಒಳಗೆ ಕೂತಿದ್ದ ಅಜ್ಜಿಯನ್ನು ಹೊರ ಬರಲು ಕರೆಯುತ್ತಾ ಹೇಳಿದ, ‘ನೋಡಜ್ಜಿ, ಅಜ್ಜ ಎಷ್ಟು ಚೆಂದವಾಗಿ ಹಾಡುತ್ತಿದ್ದಾರೆ, ಅದರೊಂದಿಗೆ ಅಳುತ್ತಲೂ ಇದ್ದಾರೆ’.

ಮೊಮ್ಮಗನ ಕರೆಯಿಂದಲೂ ಪ್ರತಾಪರ ಗಮನಕ್ಕೆ ಚ್ಯುತಿ ಬರಲಿಲ್ಲ. ಆ ಹಾಡಿನ ಅಪರಿಚಿತ ಸ್ವರದೊಂದಿಗೆ ಅವರ ಎಂಭತ್ತು ವರ್ಷದ ಒರಟು ಕಣ್ಣುಗಳಿಂದ, ಅಣೆಕಟ್ಟನ್ನು ಒಡೆಯುವ ನದಿಯ ಧಾರೆಯಂತೆ ಕಣ್ಣೀರಿನ ಧಾರೆ ಹರಿಯುತ್ತಿತ್ತು.

ಮೂಲ: ಅರ್ಚನಾ ನಾಯಕ್.  ಕನ್ನಡಕ್ಕೆ: ಡಿ.ಎನ್.ಶ್ರೀನಾಥ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.