ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ | ಒಂಟಿ ನಕ್ಷತ್ರ ಗುಳೆಹೋದ ದಿವಸ

Last Updated 8 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

1
ಪಿಂಗಾಣಿ ಫುಲ್ ಚಿತ್ತಿನಲ್ಲಿ ಮನೆಗೆ ಬಂದಿದ್ದ. ತನ್ನ ಅಪ್ಪನದೇ ರೂಪು ತಳೆದು ಶನಿವಾರ ಹುಟ್ಟಿ ಹಟ್ಟಿ ತುಂಬೆಲ್ಲಾ ನಡೆದಾಡೋ ಶನಿದೇವರು ಎಂದೇ ಕರೆಸಿಕೊಳ್ಳುತ್ತಿದ್ದ ಪ್ರೀತಿಯ ಮಗನನ್ನು ಕರೆದ, ‘ಜಕ್ಕೂ... ಜಕ್ಕೂ... ಬಿರೀನಿ ಬಾರ್ಲಾ’

ಆ ದನಿ ಕೇಳಿದ್ದೇ ತಡ ಕಾವಿಲ್ಲದ ಗ್ವಾರೆಗೆ ಗೌಡರು ಬಳಸಿ ಬಿಸಾಕಿದ್ದ ಒಣಹಾರವನ್ನು ಕಟ್ಟಿ ದೇವರಾಟ ಆಡುತ್ತಿದ್ದ ಜಕ್ಕು ಓಡಿಬಂದು ಅಪ್ಪನ ಮುಂದೆ ನಿಂತ. ಆತನ ತಲೆಯ ಮೇಲೆ ಚರಂಡಿ ಬಳಿವ ಗ್ವಾರೆ ಒಣಹಾರದಿಂದ ಸಿಂಗಾರಗೊಂಡು ನಗುತ್ತಿತ್ತು. ಮೈಮೇಲೆ ದೇವರು ಬಂದಂತೆ ತೂಗುತ್ತಿದ್ದ ಜಕ್ಕೂ ‘ಹೇಳಪ್ಪಾ ಹೇಳು, ನಿನ್ನ ಕಷ್ಟ ಹೊಡಿಯೋಕಂತ ಬಂದೀನ್ವಿ ನಾನು’ ಆ ಜೀವ ಮಾತನಾಡಿತ್ತು. ಅದಕ್ಕೀಗ ನಾಲ್ಕೋ ಐದೋ ವರ್ಷ ಆಗಿರಬಹುದು. ಅವರಪ್ಪ, ಅವರಪ್ಪಾ ಇಬ್ಬರೂ ಊರ ಧಣಿಗಳ ಮುಂದೆ ಕೈಕಟ್ಟಿ ತಲೆಯಾಡಿಸಿ ಆಡದೇ ಉಳಿಸಿದ ಎಲ್ಲಾ ಮಾತುಗಳ ಸಾಲವನ್ನು ತೀರಿಸಲೆಂದು ಆ ದ್ಯಾವರೇ ಮಾತು ಕೊಟ್ಟು ಕಳಿಸಿದಂತೆ ಸದಾ ಬಡಕಳತಿತ್ತು.

‘ಏಳಪ್ಪಾ ಮಗನೇ ನಿನ್ನ ಕಷ್ಟವೇನೇಳು ನಿನಗೆ ಗೌಡರಂಥಾ ಮನೆ, ಗೌಡರಂಥಾ ಕಾರು, ಗೌಡರಷ್ಟು ಜಮೀನು, ಗೌಡರಷ್ಟು ಒಡವೆ, ಗೌಡತಿಯಂತಾ ಹೆಂಡತಿಯನ್ನು ಕೊಡಲೇ’ ಸಾವರಿಸಿಕೊಂಡ ಪಿಂಗಾಣಿ ಎರಡು ರೂಪಾಯಿಯ ಚಿಲ್ಲರೆ ಹಣವನ್ನು ಅವನ ಕೈಗಿಟ್ಟು, ‘ಹೋಗವ್ವಾ ಹೋಗು ಬಾಡಿನ ಜವುರನತ್ರ ಒಂದು ಸೇರು ಕೊರಬಾಡು ತಾಂಬ’ ಎಂದನು. ಬಾಡು ಎಂದದ್ದೇ ತಡ ಮಗುವಿನ ಮೈಮೇಲೆ ತೂಗುತ್ತಿದ್ದ ದೇವಿ ಬಿಟ್ಟು ಓಡಿದ್ದಳು. ಗ್ವಾರೆ ಕೆಳಕ್ಕೆ ಬಿದ್ದಿತ್ತು. ಕೊರಬಾಡಿನ ಸೇರ್ವಾದ ರುಚಿ ಮೈಯಲ್ಲಾ ಹರಿದು ಅದ್ಯಾವುದೋ ಶಕ್ತಿ ಬಂದಂತೆ ಮುಖ ಅರಳಿಸಿತ್ತು.
****
ಸುಮಾರು ವರುಷಗಳ ಹಿಂದೆ ಶಂಕರೇಗೌಡ ಎಂಬೋನು ಎಲ್ಲಿಂದಲೋ ಸಂಗಮನೂರಿಗೆ ಹೆಂಡತಿ-ಮಗುವಿನೊಂದಿಗೆ ದೀನನಾಗಿ ಓಡಿ ಬಂದಿದ್ದ. ಆತ ಬಂದಾಗ ಆತನ ಬಳಿ ಇದ್ದದ್ದು ತೊಟ್ಟ ಬಟ್ಟೆ ಸ್ವಲ್ಪ ಹಣವಷ್ಟೆ. ಇಲ್ಲೇ ನೆಲ, ಮನೆ ಮಾಡಿ ಮೂರು ಚುನಾವಣೆಲಿ ಗೆದ್ದು ಸುತ್ತಲಿನ ಗೋಮಾಳ, ಕೈಗೆಟಕುವಷ್ಟು ಕಾಡು, ಕೆರೆಯ ಮುಂದಿನ ಗದ್ದೆ, ಕೊರಕಲು ಬಾರೆ, ಇತ್ಯಾದಿಗಳನ್ನು ತನ್ನದಾಗಿಸಿಕೊಂಡು ಊರಿನ ಮೇಟಿ ಆಗಿದ್ದ. ಇವನ ಇಷ್ಟೂ ಜಾಗಗಳಲ್ಲಿ ತೆಂಗು, ಅಡಕೆ, ಬಾಳೆ ಇಟ್ಟು ಪೋಷಿಸಿ ಕಾಪಾಡಿದ್ದು, ಗೌಡನನ್ನು ಕೋಟಿ ಕುಳ ಮಾಡಿದ್ದು ಇದೇ ಪಿಂಗಾಣಿಯ ಅಪ್ಪ ಕೂರಜ್ಜನ ನಿಷ್ಠೆ ಮತ್ತು ಆ ಊರಿನ ತೋಟಿಯ ಜನರ ಬೆವರು. ಇದು ಶಂಕರೇಗೌಡರಿಗೆ ಚೆನ್ನಾಗಿ ತಿಳಿದಿತ್ತು. ಅದಕ್ಕೆಂದೇ ಅವನಿಗೆ ಆ ಜನರ ಬಗ್ಗೆ ಅಪಾರ ಪ್ರೀತಿ ಇತ್ತು. ಶಂಕರೇಗೌಡ ತಾನು ಮಾಡಿದ್ದ ಬಾರೆಯ ಭೂಮಿಯನ್ನು ತನಗಾಗಿ ದುಡಿದ ಕೂರಜ್ಜ ಮತ್ತು ಆತನ ನಾಲ್ಕು ಮನೆ ಅಣ್ಣ-ತಮ್ಮಂದಿರಿಗೆ ದಾನ ಮಾಡಿರುವ ಪತ್ರಗಳನ್ನೂ, ಆರು ನಾಟಿಕರುಗಳನ್ನು ತರಿಸಿ ಆ ಐದೂ ಜನಕ್ಕೆ ತಲಾ ಎರಡು ಎಕ್ಕರೆ ಭೂಮಿ ಪತ್ರವನ್ನೂ ಒಂದೊಂದು ನಾಟಿ ಕರುವನ್ನೂ ನೀಡಿದ. ಉಳಿದ ಒಂದು ಕರುವನ್ನು ಊರಿನ ದೇವಾಲಯಕ್ಕೆ ಬಸವನಾಗಿ ಬಿಟ್ಟು ಮುದುಕ ಕೂರಜ್ಜನ ಕಾಲಿಗೂ ಬಿದ್ದಿದ್ದ. ಇದು ಆತನ ಮಗ ಶಿವಯ್ಯನಿಗೆ ಚೂರೂ ಇಷ್ಟವಾಗಿರಲಿಲ್ಲ. ಅದಾದ ಎರಡೇ ತಿಂಗಳಿಗೆ ಶಂಕರೇಗೌಡನು ಮುಗಿದು ಹೋದನು. ಗೌಡರ ಮನೆಯವರ ದುಃಖ ಹೇಳತೀರದು, ಕೇಳಲಾಗದು.

ತಂದೆಯನ್ನು ಕಳೆದುಕೊಂಡವರಂತೆ ಕೂರಜ್ಜನ ಬಳಗವೂ ಗೊಳೋ ಎಂದು ಅತ್ತಿತು. ಗುಂಡಿ ತೋಡಿ ಶಂಕರೇಗೌಡನೇ ಕಟ್ಟಿದ್ದ ತಂಪು ತೋಟದಲ್ಲಿ ಮಗನ ಆಣತಿಯಂತೆ ಗೌಡನನ್ನು ಶಾಶ್ವತವಾಗಿ ಮಲಗಿಸಲಾಯಿತು. ಕೂರಜ್ಜ ಬಹುವಾಗಿ ರೋಧಿಸಿದ. ತನ್ನ ಕಣ್ಮುಂದಿನ ಹುಡುಗ ತನಗಿಂತ ವೇಗವಾಗಿ ಓಡಿದ್ದನ್ನು ಕಂಡು ಭ್ರಾಂತನಾಗಿದ್ದ. ಎಲ್ಲೂ ಸಾಲು ಮುರಿಯದ ಶಂಕ್ರು ಹೀಗೆ ಸರದಿ ಮುರಿದಿದ್ದನ್ನು ಅರಗಿಸಿಕೊಳ್ಳಲಾಗದೆ ನೊಂದ. ಕಣ್ಣೀರಿನಲ್ಲೇ ಕೊಟ್ಟಿಗೆಗೆ ಹೋದ ಕರು ಇವನನ್ನೇ ನೋಡಿತು. ಅದರ ಕೊರಳು ತಬ್ಬಿ ಅತ್ತ. ‘ಧಣಿನೇ ಹೋದ್ಮೇಲೆ ನೀನ್ಯಾಕೆ ಬಾ’ ಎಂದವನೇ ಗೊಂತಿನಿಂದ ಬಿಚ್ಚಿ ಕುನ್ನಾಲದ ಬುಡೇನನಿಗೆ ಕೊಟ್ಟ. ಎರಡು ತಿಂಗಳಿಂದ ಸಾಕಿದ್ದ ಕರುವನ್ನು ಅರೆಗಳಿಗೆಯಲ್ಲಿ ಪುಡಿಕಾಸಿಗೆ ಮಾರಿ ಬರುವಾಗ ಹೊಟ್ಟೆ ತುಂಬಾ ಸಾರಾಯಿ ತುಂಬಿಕೊಂಡು ಬಂದಿದ್ದ.

ಕೂರಜ್ಜನ ತಮ್ಮನೊಬ್ಬ ‘ಮೈಮೇಲೆ ಕೂತ ನೊಣಗಳನ್ನು ಬಾಲಯೆತ್ತಿ ಓಡುಸ್ಕಣಲ್ಲ ಅಂಥಾ ಮದ್ದಕರ ನನಗೆ ಕೊಟ್ಟವರೆ ಬ್ಯಾರೇರಿಗೆ ಚೂಟೀ ಕರ ಕೊಟ್ಟವರೆ’ ಎಂದು ಗೌಡರನ್ನು ಬೈಯುತ್ತಲೇ ತನ್ನ ಪಾಲಿಗೆ ಬಂದ ಕರುವನ್ನು ಕುಯ್ದು ಪಾಲಾಕಿದ್ದ. ಅದಾದ ಒಂದೇ ತಿಂಗಳಿಗೆ ಮತ್ತೊಬ್ಬ ರಾತ್ರೋರಾತ್ರಿ ಕರುವನ್ನ ಕುಯ್ದು ಗುಡ್ಡೆ ಹಾಕಿದ್ದ. ಬೆಳಿಗ್ಗೆ ಎದ್ದ ಜನ ‘ಯಾಕೆ ಕರಿಗೇ ಏನಾಗಿತ್ತು? ಸಂಜೆ ಚೆನ್ನಾಗೆ ಇತ್ತು’ ಎಂದು ಕೇಳಿದರೆ. ‘ಅಣ್ಣೋ ಅದೇನು ಕೇಳ್ತೀಯ ಬುಸ ಬುಸಾಂತ ಉಸುರುಯ್ಯದು, ಮುಸುರೇ ಕುಡೀವಾಗಂತೂ ಸತ್ತೇ ಹೋಯ್ತೇನೋ ಅನ್ನಂಗೆ ಉಸುರುಯ್ಯದು ಅದಕ್ಕೇ ಕುಯ್ದೆ’ ಅನ್ನುವನು. ಯಾರಾದರೂ ‘ಲೇ ಮಗನಾ ಎಲ್ಲಾ ಹಸಗಳೂ ಬುಸ ಬುಸಾಂತನೇ ಕಣೋ ಉಸುರುಯ್ಯದು’ ಅಂದ್ರೆ, ‘ಬಿಡಣ್ಣೋ ಎಳೇ ಬಾಡು ಬಾ ಒಂದು ಗುಡ್ಡೆ ತಕಾ’ ಎಂದು ನಗುತ್ತಾ ತಲೆಕೆರೆದುಕೊಂಡಿದ್ದ. ಹೀಗೇ ಅಳಿಯ ದೇವರು ಬಂದರೆಂದು, ಪಳೇಕಮ್ಮನ ಹಬ್ಬಕ್ಕೆಂದು, ಬಸರಿ ಮಗಳ ಬಯಕೆಗೆಂದು, ಕೈಗೆ ಕಾಸಿಲ್ಲವೆಂಬ ನಾನಾ ಕಾರಣಗಳಿಂದ ಗೌಡ ಕೊಟ್ಟಿದ್ದ ಕರುಗಳನ್ನು ಇಲ್ಲವಾಗಿಸಿದ್ದರು.

ಆದರೆ ಪಿಂಗಾಣಿ ಮಾತ್ರ ತನ್ನ ದೊಡ್ಡಪ್ಪನ ಪಾಲಿನ ಕರುವನ್ನು ಹಾಗೇ ಉಳಿಸಿಕೊಂಡಿದ್ದ. ಊರಿನ ಶನಿ ದೇವರ ದೇವಾಲಯದ ತಾವರೇ ಮರದ ಕೆಳಗೆ ಮೈ-ಕೈ ಮುರಿದುಕೊಂಡು ಅಪಘಾತಕ್ಕೆ ಒಳಗಾಗಿ, ಮನೆಯವರಿಗೆ ಬೇಡವಾಗಿ ನಿರಾಶ್ರಿತವಾಗಿ ಬಿದ್ದಿದ್ದ ದೇವಾನುದೇವತೆಗಳ ಫೋಟೋಗಳಲ್ಲಿ ಒಂದು ಬಸವನ ಚಿತ್ರವಿತ್ತು. ಅದರ ಮೈತುಂಬಾ ಇದ್ದ ನೂರಾರು ದೇವರುಗಳನ್ನು ಕಂಡಿದ್ದ ಪಿಂಗಾಣಿ ಅದರ ಪ್ರಕಾರವಾಗಿ ತನಗೆ ದಿನದಲ್ಲಿ ಏನಾದರೂ ಮೈ-ಕೈ ನೋವಾದರೆ ಅಶ್ವಿನಿ ದೇವತೆಗಳಿರುವ ಭಾಗಕ್ಕೂ, ಕುಡಿಯಲು-ದುಡಿಯಲು ಕೆಲಸ ಸಿಗದಿದ್ದರೆ ಲಕ್ಷ್ಮೀದೇವಿ ಇರುವ ಭಾಗಕ್ಕೂ ದೊಣ್ಣೆ ಸೇವೆ ಮಾಡಲು ಒಂದು ಕರುವನ್ನು ಉಳಿಸಿಕೊಂಡಿದ್ದ. ಆ ಚಿತ್ರದಲ್ಲಿರುವಂತೆ ಲಕ್ಷ್ಮೀದೇವಿ ಇರುವ ಕರುವಿನ ಹಿಂಬದಿಯ ಭಾಗಕ್ಕೆ ದಿನಾಲೂ ಕೈಮುಗಿಯುತ್ತಿದ್ದ ಫಲವಾಗಿ ಸಗಣಿ ಬಿಟ್ಟು ಬೇರೇನೂ ಸಿಗದಿದ್ದಾಗ ಬೇಸರವಾಗುತ್ತಿದ್ದ. ಒಮ್ಮೊಮ್ಮೆ ಸಗಣಿಯಲ್ಲಿ ಚಿನ್ನದ ಸರ ಬೀಳುವಂತೆ ಕನಸು ಕಂಡು ಹಗಲು ಹೊತ್ತು ಆ ಕರುವಿನ ಸಗಣಿಯನ್ನು ಕೆದರಿ ಪರೀಕ್ಷಿಸಿ ಅದು ಹುಸಿಯಾದಾಗ ಮಾತು ಕೊಟ್ಟ ದೇವರೇ ಕಿವಿ ಮುಚ್ಚಿಕೊಳ್ಳುವಂತೆ ಕರುವಿನ ಮುಂದೆ ನಿಂತು ಬೈಯುತ್ತಿದ್ದ.

ತೃಪ್ತಿಯಾಗಿ ಕುಡಿದ ದಿನಗಳಲ್ಲಿ ಅದರ ಮುಂದೆ ನಿಂತು ‘ನಂಗೆ ಒಂದು ಅಕ್ಷಯ ಪಾತ್ರೆ ಕೊಡವ್ವಾ. ಲೋಕದ ಹಸಿವೇನೇ ಕಳಿತೀನಿ, ಮನಸ-ಮನಸನಾ ನಡುವೆ ಇರಾ ಕೇಡೆಲ್ಲಾ ತೊಳೆಯೋ ಮಂತ್ರಶಕ್ತಿನರಾ ಕೊಡವ್ವಾ. ಎಲ್ರನ್ನೂ ಒಂದೇ ಸಮ ಮಾಡ್ತೀನಿ, ದೇಸ-ದೇಸದ ನಡುವೆ ಇರಾ ಅಂತರನಾ ಚಿಕ್ಕದ್ದು ಮಾಡೋ ವಿದ್ಯೆನರಾ ಕೊಡವ್ವೋ. ತಾತನ ಕಾಲದಾಗೆ ದೇಶಭಾಗ ಆಗಿ ಇನ್ನೊಂದು ದೇಸದಾಗೆ ಉಳಿದಿರೋ ನನ್ನ ಕಳ್ಳು-ಬಳ್ಳಿನರಾ ನೋಡಕಂಡು ಬತ್ತೀನಿ’ ಎನ್ನುವುದನ್ನು ಕಂಡ ಜನರೆಲ್ಲಾ ಇವು ಆತನ ಒಳಗಿರುವ ಪ್ಯಾಕೆಟ್ದೇವಿ ನುಡಿಸುತ್ತಿರುವ ಮಾತುಗಳೆಂದು ನಕ್ಕು ತಲೆದೂಗುವರು. ನಿತ್ಯ ಕರುವನ್ನು ಅಡ್ಡಾಡಿಸಿ ಮೇಯಿಸಿ ದೇವರುಗಳನ್ನು ಹೊರಗಿಡುವುದಕ್ಕಿಂತ ಅದನ್ನು ಅನ್ನವಾಗಿಸಿ ತಿಂದು ದೇವಾನುದೇವತೆಗಳನ್ನು ತನ್ನ ದೇಹದೊಳಕ್ಕೆ ಇಳಿಸಿಕೊಂಡು ತಾನೇ ದೇವರಾಗುವುದು ಉತ್ತಮವೆಂದು ಬಗೆದು ಹಾಗೇ ಮಾಡಿದನು. ಅಂಗಾಡಿ-ಇಂಗಾಡಿ ಉರುಳಿದ ಒಂದೆರಡು ವರ್ಷಗಳು ಕೂರಜ್ಜನನ್ನೂ ಕರೆದುಕೊಂಡು ಪಿಂಗಾಣಿಯನ್ನು ತಬ್ಬಲಿ ಮಾಡಿದವು.

ಇಂಗೆ ಒಂದಿನ ಊರಿಗೆ ರಸ್ತೆ ಬಂತು. ಅದು ರಸ್ತೆ ಬದಿಯ ಜಮೀನುಗಳಿಗೆ ಚಿನ್ನದ ಬೆಲೆಯನ್ನೂ ಹೊತ್ತು ತಂದಿತ್ತು. ಅದೇ ರಸ್ತೆ ಬದಿಯಲ್ಲೇ ಕೂರಜ್ಜನ ಬಳಗದ ಭೂಮಿಯೂ ಇದ್ದದ್ದು. ಶಂಕರೇಗೌಡನ ಮಗ ಶಿವಯ್ಯಗೌಡನಿಗೆ ಅಪ್ಪ ದಾನಕೊಟ್ಟ ಆ ಭೂಮಿಯ ಮೇಲೆ ಇದ್ದ ಆಸೆಗೆ ರೆಕ್ಕೆಗಳು ಮೂಡಿದವು. ಮೊದಲಿಂದಲೂ ಕುತಂತ್ರಕ್ಕೆ ಫೇಮಸ್ ಆಗಿದ್ದ ಶಿವಯ್ಯ ಅಪ್ಪನಿಂದ ಬೈಸಿಕೊಂಡು ಅನೇಕ ಸಲ ಊರ ಜನರಿಗೆ ಚೂರು ಒಳಿತು ಮಾಡು ಎಂಬ ಬುದ್ಧಿಯನ್ನೂ ಹೇಳಿಸಿಕೊಂಡಿದ್ದ.
****

ಶಂಕರೇಗೌಡ ಬಿಟ್ಟಿದ್ದ ಬಸವಣ್ಣ ಮೈ-ಕೈ ತುಂಬಿಕೊಂಡು ಎತ್ತರದ ಆಳಾಗಿ ಬೆಳೆದು ಎಲ್ಲರ ಕಣ್ಣು ತುಂಬಿದ್ದ. ಸಂಗಮನೂರಿನ ಜನರಿಗೆ ದನದ ಮಾಂಸವನ್ನು ತಂದು ಚೀಫ್-ರೇಟ್‌ಗೆ ಮಾರುತ್ತಿದ್ದ ಗಡ್ಡದಯ್ಯ ಊರಿನ ಟೀ ಅಂಗಡಿಗೆ ಬಂದಾಗಲೆಲ್ಲಾ ಬಸವಣ್ಣನ ಬಗ್ಗೆ ಮಾತಾಡುತ್ತಿದ್ದ. ಅದು ಅಲ್ಲೇ ಇದ್ದರೆ ಮೈ ತಡವಿ ಒಂದು ಬ್ರೆಡ್ಡು ತಿನ್ನಿಸಿ ‘ಅಬ್ಬಬ್ಬೋ ಇದುನ್ನ ಕೊಯ್ದು ಪಾಲಾಕಿರೆ ನಾನು ಹತ್ತು ಊರು ಯಾಪಾರ ಮಾಡ್ಬೋದು ಕಣಾ’ ಎನ್ನುತ್ತಿದ್ದ. ಜನರೆಲ್ಲಾ ಅವನ ಮಾತು ಕೇಳಿ ನಗುತ್ತಿದ್ದರು.
ಶಿವಯ್ಯನ ತೋಟದಲ್ಲಿ ದಿನವೂ ಮಲಗುತ್ತಿದ್ದ ಬಸವಣ್ಣ ಒಂದಿನ ಸಂಜೆ ಕಾಣಲಿಲ್ಲ. ಬೆಳಗಾದರೂ ಬಸವಣ್ಣ ಬರಲಿಲ್ಲ. ಶಿವಯ್ಯ ತನ್ನ ಆಳುಗಳಿಗೆ ಹೇಳಿ ಹುಡುಕಿಸಿದರೂ ಸಿಗಲಿಲ್ಲ. ಊರ ಹುಡುಗರು ಮೊನ್ನೆ ರಾತ್ರಿ ನಮ್ಮೂರಿಗೊಂದು ಟೆಂಪೋ ಬಂದಿತ್ತೆಂದೂ ಅದರೊಳಗೆ ಒಂದು ದನ ಅರಚುತ್ತಿತ್ತೆಂದೂ ಗೌಡನಿಗೆ ಒಪ್ಪಿಸಿದರು. ಊರಿನ ತುಂಬಾ ಇದೇ ಸುದ್ದಿ ಹಬ್ಬಿತು. ಎಲ್ಲರೂ ಬಸವಣ್ಣನನ್ನು ಹಿಡಿದುಕೊಂಡು ಹೋದವರಿಗೆ ಶಾಪದ ಬೈಗುಳ ಹಾಕುತ್ತಿದ್ದರು. ಗೌಡನಲ್ಲಿ ರೋಷ ಹುಟ್ಟುವಂತೆ ಕೆಲವು ಕೋಲಿಡಿದಿದ್ದ ಜನ ಮಾತನಾಡುತ್ತಿದ್ದರು. ‘ನಮ್ಮೂರ ಬಸವನ ಮುಟ್ಟಿದವರ ಕೈ ಕಡೀಬೇಕು’, ‘ಅವರನ್ನ ಅಡ್ಡಡ್ಡಾ ಕತ್ತರಿಸಬೇಕು’ ಎನ್ನುತ್ತಿದ್ದರು. ಬಸವನ ದೂರು ಠಾಣೆಗೂ ಹೋಯಿತು. ಹದಿನೈದು ದಿನ ಕಳೆದರೂ ಬಸವಣ್ಣನ ಪತ್ತೆಯಾಗಲಿಲ್ಲ.

ಅಂದು ಕತ್ತಲೆಯ ಚಿಟಿ ಮಳೆ, ಕಪ್ಪೆಗಳ ವಟರು ಶಬ್ದದ ನಡುವೆ ಯಾರೋ ಗಡ್ಡದಯ್ಯನ ಮನೆಗೆ ಬಂದರು. ಮಾಲು ತೋರಿಸಿದರು. ‘ವಾರದಿಂದ ಕಾಯಿಲೆ ಬಿದ್ದಿದೆ. ಈಗಲೇ ಕೊಯ್ಯಬೇಕು ಇಲ್ಲದಿದ್ದರೆ ಸಾಯುತ್ತೆ. ನಮಗೆ ಅಷ್ಟೋ-ಇಷ್ಟೋ ಕಾಸುಕೊಡು, ದನ ಮನೇಲೆ ಸಾಯೋದು ಬೇಡ ಅಂತ ಪಟ್ಟದಲ್ಲಿ ಹುಟ್ಟಿದೆ. ದೂರದಿಂದ ಬಂದ್ದಿದ್ದೇವೆ’ ಗೋಗರೆದರು. ಗಡ್ಡದಯ್ಯ ಚಿಮಣಿ ಬೆಳಕಲ್ಲಿ ದನವ ಮುಟ್ಟಿನೋಡಿದ ಜ್ವರದಿಂದ ಮೈ ಸುಡುತ್ತಿತ್ತು. ರೇಟು ಮಾತಾಡಿದ ಅಂದುಕೊಂಡದ್ದಕ್ಕಿಂತ ಕಡಿಮೆಗೇ ಕುದುರಿತು. ಗಡ್ಡದಯ್ಯ ಕೆಲಸ ಮುಗಿಸಿದ್ದ.

ಬೆಳ್ಳಂಬೆಳಗ್ಗೆ ಚೀಲಕ್ಕೆ ಬಾಡು ತುಂಬಿಕೊಂಡು ಹೊರಟ ಗಡ್ಡದಯ್ಯನಿಗೆ ಹಿಂದೆಂದೂ ಕಾಣದಂತಾ ವ್ಯಾಪಾರ ನಡೆದಿತ್ತು. ತನ್ನ ಕಾಯಂ ಗಿರಾಕಿಗಳ ಕಲ್ಲೂರಿಗೆ ಬಂದ ಗಡ್ಡದಯ್ಯ ಅಂದಿನ ವ್ಯಾಪಾರದಿಂದ ಸಂತುಷ್ಟನಾಗಿ ಗಿರಾಕಿಗಳಿಗೆ ‘ದುಡ್ಡು ನಿಧಾನವಾಗೇ ಕೊಡಿ, ಮಾಂಸ ಮಾತ್ರ ಭಲೇ ಐತೇ ನಿಮ್ಮೂರ ಬಸವನಂತಾ ಮರಿ’ ಎಂದ. ಊರಿನ ಜನ ಎಲ್ಲಾ ಮಕ-ಮಕಾ ನೋಡಿಕೊಂಡರು. ಬಸವಣ್ಣನ ಯಾರೋ ಕದ್ದುಕೊಂಡು ಹೋಗಿದ್ದಾರೆಂದೂ ಅದು ಕಳೆದುಹೋಗಿ ಹದಿನೈದು ದಿನವಾಯಿತೆಂದೂ ಸಪ್ಪಗೆ ಹೇಳಿದರು.

ಗಡ್ಡದಯ್ಯನಿಗೆ ಏನೇನೋ ನೆನಪಾಯಿತು. ಆ ಕತ್ತಲು, ಆ ಮಳೆ, ಕಡಿಮೆ ಬೆಲೆಗೆ ಕುದುರಿದ್ದು ಬಸವನೇ ಇರಬಹುದಾ ಅನ್ನಿಸಿ ಮೈ ಬಿಸಿಯೇರಿತ್ತು. ಗಡ್ಡದಯ್ಯ ಏನೋ ನೆನಪಾದವನಂತೆ ಗಾಡಿ ತಿರುಗಿಸಿದ ಮನೆಗೆ ಬಂದವನೇ ಆ ದನದ ಚರ್ಮವನ್ನು ಹರಡಿದ ಅದರ ಮೇಲೆ ಬಸವನ ಬಿಡುವಾಗ ಹಾಕಿದ್ದ ತ್ರಿಶೂಲದ ಅಸ್ಪಷ್ಟ ಬರೆ ಇತ್ತು!.

ಗಡ್ಡದಯ್ಯ ಊಹೆ ಸತ್ಯವಾಗಿತ್ತು. ಉಳಿದ ಅರ್ಧಚೀಲ ಮಾಂಸ ಮತ್ತು ಚರ್ಮವನ್ನು ಯಾರಿಗೂ ಕಾಣದಂತೆ ದೂರ ಬಿಸಾಡಲು ನಿರ್ಧರಿಸಿದ. ಗಾಡಿ ಚಾಲೂ ಆಯಿತು, ಊರಾಚೆಯ ಕೊರಕಲಿಗೆ ಮಾಂಸ ಮತ್ತು ಚರ್ಮವನ್ನು ಎಸೆಯುತ್ತಿರುವ ಹೊತ್ತಿಗೆ ಅತ್ತಲಿಂದ ಅದೇದಾರಿಯಲ್ಲಿ ಪಿಂಗಾಣಿ ಬರುತ್ತಿದ್ದ. ಪರಸ್ಪರರು ನೋಡಿದರು. ಪಿಂಗಾಣಿಯನ್ನು ನೋಡಿದ ಗಡ್ಡದಯ್ಯ ಭಯದಿಂದಲೇ ಮರೆಯಾದ. ಚೀಲ ಪಿಂಗಾಣಿಯನ್ನು ಕೈ ಬೀಸಿ ಕರೆದಿತ್ತು. ಚೀಲವನ್ನು ಬಿಚ್ಚಿದ. ‘ಬಾಡು’!
ಚರ್ಮವನ್ನು ಚೀಲದಿಂದ ಕೈಗೆತ್ತಿಕೊಂಡ ಪಿಂಗಾಣಿ ಬಾಡನ್ನು ಹೊತ್ತು ಅದ್ಯಾವುದೋ ಸಾಧನೆ ಮಾಡಿದವನಂತೆ ನಡೆದು ಬರುತ್ತಿದ್ದ. ಅತ್ತಲಿಂದ ಗೌಡರು ಬಸವಣ್ಣ ಕಳುವಾಗಿರುವ ಬಗ್ಗೆ ವಿಚಾರಣೆಗೆ ಬಂದಿದ್ದ ಪೊಲೀಸಪ್ಪನ ಜೊತೆಗೆ ಬರುವಾಗಲೇ ಈ ಅಪೂರ್ವ ಮೆರವಣಿಗೆಯೂ ಬಂತು. ಪರಸ್ಪರ ಎದುರಿಗೆ ನಿಂತರು. ಚರ್ಮದ ಮೇಲಿದ್ದ ಅಸ್ಪಷ್ಟ ಗುರುತುಗಳು ಇದು ಬಸವದೇ ಚರ್ಮ ಎಂದು ಕೂಗಿ ಹೇಳುವಂತೆ ಕಾಣುತ್ತಿದ್ದವು.

ಗೌಡನಿಗೆ ತಿಳಿದುಬಿಟ್ಟಿತು, ಸಿಟ್ಟುಕ್ಕಿತು. ಪಿಂಗಾಣಿಗೆ ರಪ್ಪನೆ ಹೊಡೆದು ಬೀಳಿಸಿದ್ದ. ಪೊಲೀಸರು ಮಾಲು ಸಮೇತ ಪಿಂಗಾಣಿಯ ಯಾವ ಮಾತನ್ನೂ ಲೆಕ್ಕಿಸದೆ ಠಾಣೆಯ ಬಾಗಿಲಿಗೆ ಎಳೆದು ತಂದು ನಿಲ್ಲಿಸಿದ್ದರು. ಪರಮಾತ್ಮನ ಜನ್ಮ ಸ್ಥಳದ ಬಾಗಿಲಿಗೆ ಶರಣು ಮಾಡಿಕೊಂಡೇ ಪಿಂಗಾಣಿ ಠಾಣೆಯೊಳಕ್ಕೆ ಬಲಗಾಲಿಟ್ಟಿದ್ದ. ತಾನು ಏನೂ ಮಾಡಿಲ್ಲವೆಂದರೂ ಅಲ್ಲಿ ಕೇಳುವವರಿರಲಿಲ್ಲ. ಪೊಲೀಸಪ್ಪನ ವಿಚಾರಣೆಯಲ್ಲಿ ‘ಇಂಗಿಂಗೇ’ ಎಂದು ಹೇಳಿದ ಪಿಂಗಾಣಿ. ಗಡ್ಡದಯ್ಯ ಎಸೆದು ಹೋದದ್ದೂ ತಿಳಿಸಿದ್ದ. ಗಡ್ಡದಯ್ಯನನ್ನು ಹುಡುಕಿಹೋದ ಪೊಲೀಸರಿಗೆ ಆತ ಸಂಸಾರ ಸಮೇತ ಊರು ಬಿಟ್ಟಿರುವುದು ತಿಳಿಯಿತು. ಆತ ಸಂಗಮನೂರಿನ ಬಸವನ ಹಿಡಿದು ತಂದು ಹಲಾಲ್ ಮಾಡಿದ್ದಾನೆಂದೂ ಅದು ಮಹಾಪಾಪವೆಂದು ಅಲ್ಲಿದ್ದವರೆಲ್ಲಾ ಮಾತನಾಡುತ್ತಿದ್ದರು. ಕೆಲವರಂತೂ ಗಡ್ಡದಯ್ಯನ ಮನೆ ಬಳಿಗೆ ನಾಮ ಬಳಿದುಕೊಂಡು, ಬಡಿಗೆ ಹಿಡಿದುಬಂದಿದ್ದರು. ಒಬ್ಬನ ತಪ್ಪಿಗೆ ಇಡೀ ಸಾಬರ ಕೇರಿಗೆ ಅನಾಹುತಗಳನ್ನು ನಡೆಸಬಾರದೆಂದು ಅಲ್ಲಿದ್ದ ಹಿರಿಯರು ಕೈಮುಗಿದು ಬೇಡಿದ್ದರು. ಹೆಂಗಸರು ಮತ್ತು ಮಕ್ಕಳು ಮನೆಯ ಚಿಲಕ ಹಾಕಿ ಅವಿತುಕೊಂಡಿದ್ದರು. ಪೊಲೀಸರಿಂದ ಅಹಿತಗಳು ಜರುಗದಂತೆ ಎರಡೂ ಕೋಮಿನ ಜನರಿಗೆ ಎಚ್ಚರಿಕೆ ಬಂದಿತ್ತು. ಇತ್ತ ಪಿಂಗಾಣಿಯಿಂದ ವಶ ಪಡಿಸಿಕೊಳ್ಳಲಾಗಿದ್ದ ಮಾಂಸ ಪ್ರಯೋಗಾಲಯವನ್ನೂ ಕಂಡಿತು. ಅತ್ತಲಿಂದ ಅದು ಆರರಿಂದ ಏಳು ವರ್ಷದ ದನದ ಮಾಂಸವೆಂದು ರಿಪೋರ್ಟು ಬಂದು ಕೇಸೂ ಬಿಗಿಯಾಯಿತು.

***
2
ಶಿವಯ್ಯಗೌಡ ತೋಟದ ಕೊನೆಯಲ್ಲಿದ್ದ ಹಳೆಬಾವಿಯ ಕಡೆಗೇ ಬಂದ ಅದೇನೋ ನಾಥ ಬರುತ್ತಿತ್ತು. ನೊಣಗಳು ಜುಮ್ಮೆನ್ನುತ್ತಿದ್ದವು. ಬಾವಿಯಲ್ಲಿ ಇಣುಕಿದ. ಅದಾಗಲೇ ಸತ್ತು ಬಹುದಿನಗಳೇ ಆಗಿರಬಹುದಾದ ದನ! ಹೌದು, ಅದು ಬಸವನೇ! ಶಿವಯ್ಯ ಬೆವೆತು ಹೋದ. ಪಿಂಗಾಣಿಯನ್ನು ಜೈಲಿನಲ್ಲಿರಿಸಿರುವುದು ಆತನಿಂದ ರಸ್ತೆ ಬದಿಯ ಚಿನ್ನದ ಭೂಮಿಯ ಪತ್ರ ಪಡೆದಿರುವುದು ಎಲ್ಲವೂ ಆತನನ್ನು ಅಲ್ಲಾಡಿಸಿದವು. ಸತ್ತು ಬಿದ್ದಿರುವ ಬಸವನಿಗಿಂತ ಭೂಮಿಯ ಸೆಳೆತ ಬಲವಾಯಿತು. ಮೋಟಾರು ರೂಮಿನಿಂದ ಸಲಿಕೆಯೊಂದನ್ನು ತಂದವನೇ ಬಾವಿಯ ದಿಂಡನ್ನು ಕಡಿದ ಒಂದೊಂದೇ ಸಲಿಕೆ ಮಣ್ಣು ಬಾವಿಗೆ ಬೀಳುತ್ತಾ, ಬಸವನ ಎತ್ತರಕ್ಕೆ ಮುಚ್ಚಿಕೊಳ್ಳುತ್ತಾ ಗೌಡನ ಭೂಮಿಗೆ ಬುನಾದಿಯಾಯಿತು. ಇದೆಲ್ಲವನ್ನೂ ಪಿಂಗಾಣಿಯ ಮಗ ಜಕ್ಕು ತುಸು ದೂರದ ಬೇಲಿಯ ಮರೆಯಲ್ಲಿ ಅವಿತು ನೋಡುತ್ತಿತ್ತು. ನೇರಳೆ ಹಣ್ಣಿಗೆಂದು ಬಂದು, ಗೌಡ ಬರುವ ಸ್ವಲ್ಪವೇ ಮುನ್ನ ಬಾವಿ-ಬಸವ ಎಲ್ಲವನ್ನು ಕಂಡಿದ್ದ ಜಕ್ಕು ಬಸವಣ್ಣ ಮೇಲೆ ಬಂದರೆ ನಮ್ಮಪ್ಪ ಊರಿಗೆ ಬರುತಾನೆಂದು ನಾಥದ ನಡುವೆಯೂ ಮಧುರ ಕನಸು ಕಾಣುವಾಗಲೇ ಗೌಡ ಅದರ ಕನಸಿಗೆ ಮಣ್ಣೆಳೆಯುತ್ತಿದ್ದ.

ಆಗಲೇ ಆರರ ಸಂಜೆ, ಅದು ಸೀದಾ ಓಡುತ್ತಾ ಮನೆಗೆ ಬಂತು. ಗೋಡೆಯಲ್ಲಿದ್ದ ಗಾಂಧೀಪಟದ ಹತ್ತಿರ ನಿಂತು ಅದನ್ನೇ ನೋಡುವಾಗ ಪಟ ಅಳುವಂತೆ ಕಂಡಿತು. ಪಿಂಗಾಣಿ ಕುಡಿದು ಬಂದಾಗಲೆಲ್ಲಾ ತಾನು ಶಾಲೆಯ ಮೇಷ್ಟ್ರು ಒಬ್ಬರ ಬಳಿ ಬೇಡಿ ತಂದಿದ್ದ ಹಳೆಯ ಗಾಂಧೀಪಟಕ್ಕೆ ಕೈಮುಗಿದು ಮಗನ ಕರೆದು ‘ನಮ್ಮಂಥಾ ಅನಾಥರಿಗೆ ನ್ಯಾಯ ಬೇಕು ಅಂದ್ರೆ ಈ ತಾತನ ಪಟನೂ ಹಿಡಕಂಡು ಕೇಳಬೇಕು. ನಮ್ಮನ್ನ ಹೋರಾಟ ಮಾಡಕೆ ಪಟ್ನಕ್ಕೆ ಕರಕಂಡು ಹೋದಾಗ ಇಂತದೇ ಪಟನೂ ಹಿಡಕಂಡಿದ್ರು ಜನ’ ಎನ್ನುವ ಮಾತುಗಳು ಅದರ ನೆನಪಿಗೆ ಬಂದವು. ಗಾಂಧೀಪಟವನ್ನೂ ಮೂಲೆಯಲ್ಲಿದ್ದ ಗುದ್ದಲಿಯನ್ನೂ ಕೈಗೆತ್ತಿಕೊಂಡಿತು. ಅಪ್ಪನ ಕೈ ಮಣ್ಣು ಮೆತ್ತಿದ್ದ ಗುದ್ದಲಿ ಹಿಡಿಯನ್ನು ಹಿಡಿದುಕೊಂಡಾಗ ಅದಕ್ಕೆ ಅಪ್ಪನ ಕೈ ಹಿಡಿದಂತೆಯೇ ಆಗಿ ಕಣ್ಣು ತುಂಬಿ ಬಂದು ಬಿಕ್ಕಳಿಸಿ ಅಳುತ್ತಲೇ ಗೌಡರ ತೋಟದ ಕೊನೆಯಲ್ಲಿರುವ ಬಾವಿಯ ಕಡೆಗೆ ಹೆಜ್ಜೆ ಹಾಕಿತ್ತು. ಬಾವಿಯೂ ಆ ಪುಟ್ಟ ಕಾಲುಗಳ ವೇಗಕ್ಕೆ ಶರಣಾಗಿ ಬೇಗನೆ ಬಂತು.
ಅಲ್ಲೇ ನೇರಳೆ ಮರದಲ್ಲಿ ವಾಸವಿದ್ದ ಗಿಳಿಯ ಉಯಿಲು ಕೇಳಿತು.

ತಲೆ ಎತ್ತಿದ ಜಕ್ಕು...
ಅದು ಇವನನ್ನು ನೋಡುತ್ತಾ ‘ಅದು ಮೂರಾಳು ಉದ್ದದ್ದ ಹಾಳುಬಾವಿ ಇದು ಮೂರು ಅಡಿಯ ಸಣಕಲು ಹುಡುಗ, ಎತ್ತಬೇಕಿರೋದು ಆನೆ ಗಾತ್ರದ ಬಸವನ ಹೆಣವನ್ನ ಅದೂ ಈ ನರಕನಾಥ ಕುಡಿಯುತ್ತಾ, ಇದಾಗದು ಇದಾಗದು’ ಅಂತು.

ಅಪ್ಪನ ನೆನಪು ಒತ್ತರಿಸಿ ಬಂತು ಬಾವಿಯಿಂದ ಬಸವನ ತೆಗೆದು ಪೊಲೀಸರಿಗೆ ಕೊಟ್ಟು ಅಪ್ಪನ ಕರೆತರುವ ಆಸೆ ಬಲವಾಯಿತು. ನನ್ನಪ್ಪನ್ನು ನನಗೆ ಮರಳಿ ಕೊಡುವ ದೇವರೇ ಬಾವಿಯಲ್ಲಿದ್ದಾನೆ. ಅಪ್ಪನಿಗೂ ನನಗೂ ಇರುವ ದೂರ ಬರೀ ಈ ಬಾವಿ ಅಷ್ಟೆ!. ಒಂದೇ ರಭಸದಲ್ಲಿ ಬಸವನನ್ನು ತೆಗೆದು ಮೇಲೆಸೆಯುವಂತೆ ಗುದ್ದಲಿ, ಗಾಂಧೀಪಟ ಸಮೇತ ಜಕ್ಕು ಬಾವಿಗೆ ಹಾರಿ ಬಿದ್ದ. ಇತ್ತಲಾಗೆ ಜಕ್ಕುವನ್ನು ಜನ ಹುಡುಕಲು ಶುರು ಮಾಡಿದ್ದರು.

ವಾರ ಕಳೆಯಿತು..
ಶಿವಯ್ಯಗೌಡ ಮತ್ಯಾಕೋ ಅಂಗೇ ಸುತ್ತಾಡುತ್ತಾ ಬಾವಿಯ ಹತ್ತಿರ ಬಂದ ನಾಥ ಮತ್ತೂ ಬರುತ್ತಿತ್ತು ಸರಿಯಾಗಿ ಮಣ್ಣಾಕಲಿಲ್ಲವೇನೋ ಎಂದು ಬೈದು ಕೊಳ್ಳುತ್ತಲೇ ಬಾವಿಗೆ ಇಣುಕಿದ. ಜಕ್ಕೂ! ಪಿಂಗಾಣಿಯ ಮಗ ಜಕ್ಕೂವನ್ನು ಆಸ್ಥಿತಿಯಲ್ಲಿ ಕಂಡು ಗೌಡನಿಗೆ ಆಘಾತವಾಯಿತು. ಜವಣಿಗೆಯೊಂದರಿಂದ ಜಕ್ಕೂವನ್ನು ತಿವಿದ ಜೀವ ಎಂದೋ, ಯಾವಾಗಲೋ ಹೋಗಿರಬಹುದು. ಗುಂಡಿಯೊಳಗೆ ಬಿದ್ದಿದ್ದ ಗಾಂಧೀಪಟ ಮಗನನ್ನು ಕಳೆದುಕೊಂಡ ತಾಯಿಯ ಸಂಕಟದಿಂದ ಉರಿಯುವಂತೆ ಕಂಡಿತು. ಗೌಡ ಪಟದ ಗಾಂಧಿಯ ನೋಟವನ್ನು ಎದುರಿಸಲಾರದಾದ. ಎದೆ ಬಡಿದ, ಉಸಿರಾಟ ಎರಡೂ ಜೋರಾಗಿ ಕೈ-ಕಾಲುಗಳು ನಡುಗಿದವು. ತಲೆಯ ಮೇಲೆ ಕೈಹೊತ್ತು ಕುಸಿದು ಬಿದ್ದ.

ನೇರಳೆ ಮರದ ಮೇಲಿಂದ ಮತ್ತೆ ಗಿಳಿಯ ಉಯಿಲು. ‘ಪಾಪಿ ಪಾಪಿ’ ಶಿವಯ್ಯ ಯೋಚಿಸಿದ, ‘ಹೌದು...
ಭೂಮಿಗಾಗಿ ಪಿಂಗಾಣಿಯನ್ನು ಜೈಲಿನಲ್ಲೇ ಉಳಿಯುವಂತೆ ಮಾಡಿದೆ, ಗಡ್ಡದಯ್ಯನ ಒಕ್ಕಲೆಬ್ಬಿಸಿದೆ, ಬಸವನ ಹೆಣವನ್ನು ಮುಚ್ಚಿಟ್ಟೆ, ಅಪ್ಪನ ಬಿಡಿಸಲೆಂದು ಮಗನೂ ಸತ್ತನು. ಇದೆಲ್ಲವೂ ತನ್ನಿಂದಲೇ ನಾನು ಪಾಪಿಯಲ್ಲದೆ ಮತ್ತೇನು?’

ಈಗೇನು ಮಾಡುವುದು ಜಕ್ಕೂವಿನ ಹೆಣವನ್ನು ಎತ್ತಿ ಊರ ಜನರ ಮುಂದಿಟ್ಟರೆ ಎಲ್ಲಿತ್ತು, ಹೇಗೆ ಸತ್ತ? ತನಿಖೆಯಾದರೆ, ಬಸವಣ್ಣನ ಶೋಧವಾಗಿ ಇದಕ್ಕೆಲ್ಲಾ ಕಾರಣವಾಗಿ ನನ್ನನ್ನೇ ಜೈಲಿಗೆ ಹಾಕಿದರೆ?, ಇತ್ತಲಾಗೆ ಸುತ್ತಾಡುತ್ತಾ ಬರುವ ಆಳುಗಳ್ಯಾರಾದರೂ ಈ ನಾಥ ಅರಸಿ ಬಂದು ಅವರು ಸುದ್ದಿಯನ್ನು ಊರ ತುಂಬಾ ಬೆಳಗಿದರೆ ನಾನು ಏನೂ ಅರಿಯದವನಂತೆ ನಟಿಸಿ ಅಪರಾಧದಿಂದ ತಪ್ಪಿಸಿಕೊಂಡು ಅವರೊಡನೆ ಸೇರಿ ಪಿಂಗಾಣಿಯನ್ನು ಬಿಡಿಸಬಹುದೇ?, ಪೊಲೀಸರೂ ಅವರ ಚುರುಕು ಬುದ್ಧಿಯ ನಾಯಿಗಳೂ ನನ್ನ ಹೆಜ್ಜೆ, ಬೆವರನ್ನು ಗುರುತಿಸಿದರೆ ನನ್ನ ಗತಿ? ಗೌಡ ತೀರ್ಮಾನಿಸಿದ ಬಾವಿಯನ್ನು ಮಚ್ಚುವುದು ಪೂರ್ಣವಾಗಿ ಮುಚ್ಚುವುದು. ಬಾವಿಯಿಂದ ಗಾಂಧೀಪಟವನ್ನು ಜವಣೆಗೆ ಕಡ್ಡಿಯಲ್ಲಿ ತೆಗೆದಿಟ್ಟುಕೊಂಡ. ಗುದ್ದಲಿ ಕೆಲಸ ಆರಂಭಿಸಿತು, ಕಲ್ಲು ಹೃದಯದ ಗೌಡನ ಕಣ್ಣೀರು, ಭಯ, ಪಾಪ ಪ್ರಜ್ಞೆಗಳೊಂದಿಗೆ ಬಾವಿ ನಿಧಾನವಾಗಿ ತುಂಬುತ್ತಿತ್ತು.

ಕೆಲಸ ಮುಗಿಸಿ ಗಾಂಧೀಪಟದೊಂದಿಗೆ ಮನೆಗೆ ಬಂದ ಗೌಡನ ನಿಸ್ತೇಜಮುಖ ನೋಡಿಯೇ ಏನೋ ಆಗಬಾರದ್ದು ಆಗಿರಬಹುದೆಂದು ಗೌಡತಿ ಊಹಿಸಿದಳು. ಗಂಡನನ್ನು ಸಮಾಧಾನಿಸಿ ಕೂರಿಸಿ ನೀರು ಕುಡಿಸುವಾಗಲೇ ಆತ ಹೆಂಡತಿಯನ್ನು ತಬ್ಬಿ ಬಿಕ್ಕಿ-ಬಿಕ್ಕಿ ಅತ್ತಿತ್ತ. ನಡೆದದೆಲ್ಲವನ್ನೂ ಹೇಳಿಕೊಳ್ಳುತ್ತಾ ಮತ್ತೂ ಅತ್ತ. ಪಿಂಗಾಣಿ ಜೈಲು ಪಾಲದದ್ದು, ಗಡ್ಡದಯ್ಯ ಮಕ್ಕಳ ಸಮೇತ ಊರು-ಮನೆ ಬಿಟ್ಟು ಹೋದದ್ದು, ಜಕ್ಕು ಅಪ್ಪನಿಗಾಗಿ ಹಂಬಲಿಸುತ್ತ ಸತ್ತು ಹೋದದ್ದು ಕೇಳಿ ಇವಳೆದೆಯೂ ಒಡೆದು ಹೋಗಿತ್ತು. ಮಕ್ಕಳಿಗಾಗಿ ಸುತ್ತಲ ಹುತ್ತಗಳನ್ನೂ ಬಿಡದೆ ಪೂಜೆ ಮಾಡಿ ಸೋತಿದ್ದ ಗೌಡತಿಗೆ ಹೊಸ ಕರ್ಮವೊಂದು ತೊಡರಿಕೊಂಡಿತ್ತು. ಗಂಡನ ಬುದ್ಧಿಗೆ ಅಸಹ್ಯ ಪಟ್ಟಳು, ‘ಈ ಕರ್ಮ ಬಿಟ್ಟಾದ ನಮ್ಮನೆಯ! ಅಯ್ಯೋ..’ ರೋದಿಸಿದಳು. ಗೌಡ ನಿಜಕ್ಕೂ ಶರಣಾಗಿ ಹೋಗಿದ್ದ. ಗಂಡ ತಂದ ಗಾಂಧೀಪಟವನ್ನು ಗೌಡತಿ ನಡುಮನೆಯ ದೇವರ ಸಾಲಿನ ಖಾಲಿ ಮೊಳೆಗೆ ನೇತುಹಾಕಿ ಅದನ್ನೇ ನೋಡುತ್ತಾ ‘ಪಿಂಗಾಣಿನಾದ್ರು ಬಿಡಿಸೋಣ. ಈ ಕರ್ಮ ವಸಿ ಕಮ್ಮೀ ಆಗ್ಬೋದು ಅವನ್ನ ಬಿಡಸದೆ ಇದ್ರೆ ನಾ ಈ ಮನೆಯಾಗೆ ಇರಲ್ಲ. ಒಬ್ಬನ್ನ ನುಂಗಿ ಬದುಕೋ ಬಾಳುವೆ ನಂಗೆ ಬೇಡ.’
ಸರಸರನೆ ಕೋಣೆಗೋಗಿ ಬಾಗಿಲು ಹಾಕಿಕೊಂಡಳು.

‘ಕರ್ಮ ಕಳೆದುಕೊಳ್ಳದಿದ್ದರೂ ಚಿಂತೆಯಿಲ್ಲ. ನನ್ನ ತಪ್ಪಿಗೆ ಆ ದೇವರು ಯಾವುದೇ ಶಿಕ್ಷೆ ಕೊಡಲಿ-ಬಿಡಲಿ ಪಿಂಗಾಣಿಯನ್ನು ಬಿಡಿಸುವುದೇ ಧರ್ಮ. ಇನ್ನೊಬ್ಬನ್ನ ನುಂಗಿ ಹೊಲ-ಮನೆ ಮಾಡಿ ಊರ ಗೌಡ ಆಗೋಕ್ಕಿಂಥಾ ಮೊದಲು ನಾ ಮನುಷಾ ಆಗಬೇಕು, ಮನುಷಾ ಆಗಬೇಕು, ಅವ್ವನಂತಾಗಬೇಕು’ ಗೌಡನೆದೆ ದಡಗುಡುತ್ತಾ ನುಡಿಯುತ್ತಿತ್ತು.

ಶಿವಯ್ಯಗೌಡ ಮೂರು ದಿನಗಳ ಕಾಲ ತನ್ನ ಬುದ್ಧಿ ಉಪಯೋಗಿಸಿ ಪಿಂಗಾಣಿಯನ್ನು ಬಿಡಿಸಿ ನೇರವಾಗಿ ಮನೆಗೇ ಕರೆತಂದ. ಆಗಲೇ ಏಳರ ಸಂಜೆ. ಗೌಡತಿ ಇಬ್ಬರಿಗೂ ಕೈ ಕಾಲಿಗೆ ನೀರು ಕೊಟ್ಟಳು. ಅವನು ಬೇಡ ಬೇಡವೆಂದರೂ ಗೌಡನೇ ಕೈಹಿಡಿದು ಮೊದಲ ಬಾರಿಗೆ ಪಿಂಗಾಣಿಯನ್ನು ನಡುಮನೆಗೆ ಕರೆದು ತಂದ ಹಾಸಿದ ಚಾಪೆಯ ಮೇಲೆ ಕೂರಿಸಿದ.

‘ಬುದ್ಧಿ ಬೇಡ ಕಣಿ, ಊರ ಬಸವನ ತಿಂದವನಿಗೆ ಇವೆಲ್ಲ ಮಾಡಬಾರದು ಕಣಿ, ನಂಗೊತ್ತಿತ್ತು ಬಿಡಿ, ನೀವು ನನ್ನ ಬಿಡಸೇ ಬಿಡಸತೀರ ಅಂತ, ಮಗಾ ನೋಡಬೇಕು ಬುದ್ಧಿ. ಅದೇನು ಉಂಡದೋ ಕಾಣಿ, ನಂಗೊತ್ತು ಬಿಡಿ ಇನ್ನೆಲ್ಲೋದತು ನನ್ನ ಎಳಕಂಡು ಹೋದಮ್ಯಾಕೆ ಈ ಮನೆಲ್ಲೇ ಅದರ ಅನ್ನ ನಡದಿರತದೆ. ನೀವ್ ಕೈಬಿಡಕಿಲ್ಲ ನೀವ್ ಕೈ ಬಿಡಕಿಲ್ಲ’ ಪಿಂಗಾಣಿ ಕಣ್ಣೀರು ಒರೆಸಿಕೊಳ್ಳುವನು.

ಗೌಡತಿ ಅವನಿಗೆ ಇಷ್ಟದ ಗಿಣ್ಣು ಮಾಡಿದ್ದಳು. ಬಡಿಸಿದ ಕೂಡಲೇ ತಡೀರಿ ಮಗನೂ ಕರಕಂಡು ಬರ್ತೀನಿ ಎಂದು ಮೇಲೆದ್ದ ಪಿಂಗಾಣಿಯನ್ನು ಗೌಡತಿ ‘ಮೊದಲು ನೀನ್ ತಿನ್ನಜ್ಜ. ಅವ ಇನ್ನೇನು ಬರತಾನ’. ‘ಇಲ್ಲವ್ವೋ ನೀ ಮಾಡೋ ಗಿಣ್ಣ ನಂಗೂ ಬಿಡದಂಗೆ ತಿನ್ನತೇತಿ ಅದು.’
ಬಾಗಿಲಿಗೆ ಬಂದು ಸುತ್ತ ನೋಡುತ್ತಾ ‘ಜಕ್ಕೂ ಜಕ್ಕೂ’ ಕೂಗುವನು. ‘ಎಲ್ಲಿ ಹಾಳಾಗೋತು, ನಾ ಬರೋ ಸುದ್ದಿ ಅದಕ ಗೊತ್ತೇನವ್ವೋ’ ಎಂದ. ಗೌಡತಿ ಇಲ್ಲವೆಂಬಂತೆ ತಲೆ ಅಲ್ಲಾಡಿಸಿದಳು.

‘ಬಾರಪ್ಪೋ ಬತ್ತದೆ ಗಿಣ್ಣು ತಿಂತಿರು’
‘ಇಲ್ಲಕಣವ ನಾ ಅವನ್ನ ಕರಕಂಡು ಬಂದು ತಿನ್ನತೀನಿ ತಡಿ ಅಲ್ಲೇ ಇರಲಿ’
‘ಪಿಂಗಾಣಿ, ನಿಲ್ಲೋ ಅವನ್ನ ಕರಕಂಡು ಬರತೀನಿ ನಡಿ ನೀ’
‘ಬುಡಿ ಗೌಡರೆ ಅದು ನನ್ನ ನೋಡಿದಾಗ ಎಂಗ ಕುಣಕಂಡು ಬರತದೆ ಅಂತ ನೋಡಬೇಕು. ನಾ ಬತ್ತೀನಿ ನೀವ ಒಳಗ ನಡಿರಿ.’
ಇನ್ನು ಗೌಡತಿಯೂ-ಗೌಡನೂ ತಡೆಯದಾದರು. ಗೌಡತಿ ಮನೆಯ ಮುಂದಿನ ಕಂಬ ಒರಗಿ ನಿಂತಳು. ಗೌಡನಿಗೆ ಪಿಂಗಾಣಿಯನ್ನು ಮತ್ತಷ್ಟು ನಿರಾಸೆ ಮಾಡಬಾರದು ಎನಿಸಿತು. ಹೋಗುತ್ತಿದ್ದ ಪಿಂಗಾಣಿಯ ಕಾಲುಗಳನ್ನು ಹಿಡಿದಿದ್ದ.
‘ಯವ್ವಾ, ತಗಿ ಬುದ್ಧಿ ಯಾಕಾ ಯಾಕಾ?’
‘ಒಳಗೆ ಬಾ ಹೇಳತೇನಿ.’
‘ಒಳಗೆ ಬಾ ಅನ್ನಾಕ ನೀವು ನಂಕಾಲು ಹಿಡಿಯಾದೆ ಬುಡ್ತು ಬಿಡಿ ಬುಡ್ತು’.

ಪಿಂಗಾಣಿ ಒಳಗೆ ಬಂದಾಗ ಗೌಡತಿಯ ಕಣ್ಣಲ್ಲಿ ನೀರು, ಗೌಡ ನಡೆದದೆಲ್ಲವ ಹೇಳಿ ಮಗನ ಜೊತೆ ಇದ್ದ ಗಾಂಧೀಪಟದ ಕಡೆಗೆ ಕೈ ತೋರಿಸಿ ಪಿಂಗಾಣಿಯ ಕಾಲ ಕೆಳಗೆ ಕಂಗಾಲಾಗಿ ಕುಸಿದ. ಗೌಡನ ಕಣ್ಣುಗಳು ತನ್ನನ್ನು ಶಿಕ್ಷಿಸುವಂತೆ ಬೇಡುತ್ತಿದ್ದವು.

ಪಿಂಗಾಣಿ ಮದುವೆ ಆಗಿ ಹನ್ನೆರಡು ವರ್ಷವಾದರೂ ಮಕ್ಕಳಾಗಿರಲಿಲ್ಲ. ಕಂಡ ಕಲ್ಲುಗಳಿಗೆಲ್ಲಾ ಹರಕೆ ಹೊರುತ್ತಿದ್ದ ತಿಮ್ಮಿಯ ಕೂಗು ಅದಾವ ದೇವರಿಗೆ ತಲುಪಿತ್ತೋ ಗರ್ಭವತಿಯಾದಳು. ದಿನ ತುಂಬಿ ಹೆರಿಗೆಯೂ ಆಗಿತ್ತು. ಮಗು ಸತ್ತು ಹುಟ್ಟಿತ್ತು. ಇದು ಮತ್ತೆ ಮತ್ತೆ ಪುನರಾವರ್ತಿತವಾಗಿ ಆರು ಮಕ್ಕಳು ಹೀಗೆ ಭೂಮಿಗೆ ಬರುವಾಗಲೇ ಸತ್ತು ಬರುತ್ತಿದ್ದವು. ಅದೇನೋ ಏಳನೇ ಬಾರಿಯ ಹೆರಿಗೆಯಲ್ಲಿ ತಿಮ್ಮಿ ಸತ್ತು ಮಗು ಉಳಿದಿತ್ತು. ಪಿಂಗಾಣಿಯ ಸಂಕಟ ಹೇಳತೀರದು. ಮಗುವಿಗೆ ಕಂಡವರಲ್ಲಿ ಹಾಲುಣಿಸಲು ಬೇಡಿದ್ದ, ಕುರಿ ಮೇಕೆಯ ಕೆಚ್ಚಲಿಗೆ ಬಾಯಿಡಿಸಿ ಅದರ ಹೊಟ್ಟೆ ತುಂಬಿಸಿದ್ದ. ತಾಯಿಯೂ-ತಂದೆಯೂ ಆಗಿ ಸಾಕಿದ್ದ ಮಗನೀಗ ಇಲ್ಲವೆಂಬ ಆಘಾತವನ್ನು ಪಿಂಗಾಣಿಗೆ ತಡೆಯಲಾಗಲಿಲ್ಲ. ಎದೆಯೊಡೆಯುವ ಸಂಕಟ. ಭ್ರಾಂತನಾದ. ಕತ್ತಲು ಮನೆಯನ್ನೂ ಮೂವರ ಮನವನ್ನೂ ತುಂಬುತ್ತಿತ್ತು.

3
ಬೆಳಗಾದಾಗ ಪಿಂಗಾಣಿಯೂ, ಗಾಂಧೀಪಟವೂ ಇರಲಿಲ್ಲ. ಪಿಂಗಾಣಿ ಎಲ್ಲೋ ಗಾಂಧೀಪಟ ಹಿಡಿದು ಅಲೆಯುತ್ತಿರಬಹುದು. ಗೌಡನೂ ಪಿಂಗಾಣಿಯನ್ನು ಹುಡುಕುತ್ತಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT