ಸೋಮವಾರ, ಮೇ 17, 2021
21 °C

ಪೀಣ್ಯ, ಆಡುಗೋಡಿಯಲ್ಲಿ ಅಪಘಾತ: ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಪೀಣ್ಯ ಮತ್ತು ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.ತುಮಕೂರು ರಸ್ತೆಯ ಪಿ.ಎಚ್.ಜಂಕ್ಷನ್ ಸಮೀಪ ಭಾನುವಾರ ಬೆಳಿಗ್ಗೆ ಬಿಎಂಟಿಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಎಚ್‌ರೂಪಾ (27) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಪೀಣ್ಯ ಬಳಿಯ ಟಿ.ದಾಸರಹಳ್ಳಿ ನಿವಾಸಿಯಾದ ರೂಪಾ ಅವರು ಖಾಸಗಿ ಕಂಪೆನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ಅವರು ದ್ವಿಚಕ್ರ ವಾಹನದಲ್ಲಿ ಯಶವಂತಪುರಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.ಬಸ್ ಚಾಲಕ, ರೂಪಾ ಅವರ ವಾಹನವನ್ನು ಹಿಂದಿಕ್ಕುವ ಯತ್ನದಲ್ಲಿ ಅವರಿಗೆ ವಾಹನ ಗುದ್ದಿಸಿದ. ಪರಿಣಾಮ ರಸ್ತೆಯ ಬಲ ಭಾಗಕ್ಕೆ ಬಿದ್ದ ಅವರ ತಲೆ ಮೇಲೆ ಬಸ್‌ನ ಹಿಂಬದಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.ಬಸ್ (ಮಾರ್ಗ ಸಂಖ್ಯೆ-265) ಪೀಣ್ಯ ಎರಡನೇ ಹಂತದಿಂದ ಮೆಜೆಸ್ಟಿಕ್‌ಗೆ ಹೋಗುತ್ತಿತ್ತು. ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೀಣ್ಯ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.ಮತ್ತೊಂದು ಪ್ರಕರಣ: ಆಡುಗೋಡಿ ನೂರು ಅಡಿ ರಸ್ತೆಯಲ್ಲಿ ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಖಾಸಗಿ ಕಂಪೆನಿ ವ್ಯವಸ್ಥಾಪಕರೊಬ್ಬರು ಮೃತಪಟ್ಟು ಮೂರು ಮಂದಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ. ಕೋರಮಂಗಲ ನಿವಾಸಿ ಗುರುನಾಥ್ (26) ಎಂಬುವರು ಸಾವನ್ನಪ್ಪಿದ್ದು, ಬಿಟಿಎಂ ಲೇಔಟ್‌ನ ಶುಭಾಂಗ್, ಅವರ ಸ್ನೇಹಿತೆ ಡಾಲ್ಸಿ ಹಾಗೂ ಕಾರು ಚಾಲಕ ಪ್ರಕಾಶ್ ಅವರು ಗಾಯಗೊಂಡಿದ್ದಾರೆ.ಮೇರು ಕ್ಯಾಬ್ಸ್ ಸಂಸ್ಥೆಯ ಕಾರು ಚಾಲಕರಾದ ಪ್ರಕಾಶ್, ಶುಭಾಂಗ್ ಮತ್ತು ಡಾಲ್ಸಿ ಅವರನ್ನು ಯಶವಂತಪುರ ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ನೂರು ಅಡಿ ರಸ್ತೆಯಲ್ಲಿ ಕಾರಿನಲ್ಲಿ ಬರುತ್ತಿದ್ದ ಗುರುನಾಥ್ ಅವರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ವಾಹನ ಗುದ್ದಿಸಿದರು.ಪರಿಣಾಮ ಅವರ ಕಾರು ಪಕ್ಕದ ರಸ್ತೆಗೆ ನುಗ್ಗಿ ಎದುರುಗಡೆಯಿಂದ ಬರುತ್ತಿದ್ದ ಪ್ರಕಾಶ್ ಅವರ ಕಾರಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿತು. ಗುರುನಾಥ್ ಅವರ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.ಗಾಯಾಳು ಪ್ರಕಾಶ್ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಡುಗೋಡಿ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.