ಶಿಸ್ತು-ಸಂಯಮದಿಂದ ಉತ್ತಮ ಪರಿಸರ

7

ಶಿಸ್ತು-ಸಂಯಮದಿಂದ ಉತ್ತಮ ಪರಿಸರ

Published:
Updated:

ಬೆಳಗಾವಿ: ಬದುಕಿನಲ್ಲಿ ಶಿಸ್ತು, ಸಂಯಮದಿಂದ ಉತ್ತಮ ಪರಿಸರ ನಿರ್ಮಿಸಲು ಸಾಧ್ಯ, ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಮನಸ್ಸಿದ್ದರೆ ಏನು ಬೇಕಾದರೂ ಮಾಡಬಹುದು. ನಾಗರಿಕರ ಉದ್ದೇಶ ಬರೀ ಹಣ ಸಂಪಾದನೆಯಾಗಬಾರದು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಶುಕ್ರವಾರ ಇಲ್ಲಿ ತಿಳಿಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇಂಧನ ಅಭಿವೃದ್ಧಿ ಹಾಗೂ ಸಂಶೋಧನಾ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಉತ್ಸವದಲ್ಲಿ ಸಾಧಕರಿಗೆ ಪರಿಸರ ಪ್ರಶಸ್ತಿ ವಿತರಿಸಿ ಅವರು ಮಾತನಾಡುತ್ತಿದ್ದರು.ಪರಿಸರ, ಸಾಮಾಜಿಕ ಸಮತೋಲನ ಸಾಧಿಸುವ ದಿಸೆಯಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಈ ನಾಡಿನಲ್ಲಿ ಸಾಧಿಸುವುದು ಅಸಾಧ್ಯ ಎಂಬ ಮಾತೇ ಇಲ್ಲ. ಸಾಧಿಸಿ ತೋರಿಸಿದ ಅನೇಕ ಮಹನೀಯರು ನಮ್ಮ ಮುಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ಮುನ್ನಡೆಯಬೇಕು ಎಂದು ಸಲಹೆ ಮಾಡಿದರು.ಮುಖ್ಯ ಅತಿಥಿಯಾಗಿದ್ದ ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರ ಗೌಡ ಅವರು, ಪರಿಸರ ಸಮತೋಲನ ಒಂದು ಅಂಶಕ್ಕೆ ಸೀಮಿತಗೊಂಡಿರಬಾರದು, ಎಲ್ಲ ದೃಷ್ಟಿಕೋನ ವನ್ನೂ ಒಳಗೊಂಡಿರಬೇಕು. ಪರಿಸರ ಎಂದರೆ ನಮ್ಮ ವೈಯಕ್ತಿಕ ಹಿತಾಸಕ್ತಿಯಲ್ಲ ಎಂಬುದನ್ನು ಎಲ್ಲರೂ ಮನಗೊಳ್ಳಬೇಕು. ಅದು ಇಡೀ ಸಮಾಜ, ನಾಡಿನ ಕಲ್ಪನೆ ಹೊಂದಿರಬೇಕು ಎಂದು ತಿಳಿಸಿದರು.ಸಮಾರಂಭದ ಮುಖ್ಯ ಭಾಷಣಕಾರರಾಗಿ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ.ಸತ್ಯಮೂರ್ತಿ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಎನ್.ಲಕ್ಷ್ಮಣರಾವ್ ಪೇಶ್ವೆ ಭಾಗವಹಿಸಿದ್ದರು. ವಿಟಿಯು ಕುಲಪತಿ ಡಾ. ಎಚ್.ಮಹೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಇಂಧನ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಿ.ಜಗನ್ನಾಥ, ವಿಟಿಯು ರಿಜಿಸ್ಟ್ರಾರ್ ಡಾ.ಎಸ್.ಎ. ಕೋರಿ ವೇದಿಕೆಯಲ್ಲಿದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry