ಭಾನುವಾರ, ಡಿಸೆಂಬರ್ 15, 2019
25 °C
2020ರ ಜನವರಿಯಲ್ಲಿ ಬಿಡುಗಡೆ

ಟಾಟಾದ ಹೊಸ ಹ್ಯಾಚ್‌ಬ್ಯಾಕ್ ಕಾರು 'ಆಲ್ಟ್ರೋಜ್‌'; ಗಮನ ಸೆಳೆಯುತ್ತಿದೆ ವಿನ್ಯಾಸ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಟಾಟಾ ಮೋಟಾರ್ಸ್‌ ಹೊಸ ಕಾರು 'ಆಲ್ಟ್ರೋಜ್‌'

ನವದೆಹಲಿ: ದೇಶದ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರು ಮಾರುಕಟ್ಟೆಗೆ ನೂತನ ವಿನ್ಯಾಸದ ಹೊಸ ಕಾರನ್ನು ಟಾಟಾ ಮೋಟಾರ್ಸ್‌ ಮಂಗಳವಾರ ಪರಿಚಯಿಸಿದೆ. 'ಆಲ್ಟ್ರೋಜ್‌' ಹೆಸರಿನ ಹೊಸ ಕಾರು 2020ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. 

ಆಲ್ಟ್ರೋಜ್‌ ಬಿಎಸ್‌–6 ಗುಣಮಟ್ಟದ ಪೆಟ್ರೋಲ್‌ ಮತ್ತು ಡೀಸೆಲ್‌ ಇಂಜಿನ್‌ ಮಾದರಿಗಳಲ್ಲಿ ಸಿಗಲಿದೆ. 86 ಪಿಎಸ್‌ ಮತ್ತು 113 ನ್ಯೂಟನ್ ಮೀಟರ್‌ ಶಕ್ತಿ ಹೊಮ್ಮಿಸುವ ಸಾಮರ್ಥ್ಯವಿರುವ 1.2 ಲೀಟರ್‌ ಪೆಟ್ರೋಲ್‌ ಇಂಜಿನ್‌ ಇರಲಿದೆ. 1.5 ಲೀಟರ್‌ ಡೀಸೆಲ್‌ ಇಂಜಿನ್ 90 ಪಿಎಸ್‌ ಮತ್ತು 200 ಎನ್‌ಎಂ ಶಕ್ತಿಯನ್ನು ಹೊಮ್ಮಿಸುತ್ತದೆ. 5 ಸ್ಪೀಡ್‌ ಮ್ಯಾನ್ಯುವಲ್‌ ಟ್ರಾನ್ಸ್‌ಮಿಷನ್‌ ಹೊಂದಿದೆ. 

ಕಾರಿನ ಮುಂಭಾಗದ ವಿಸ್ತಾರವಾದ ಹೆಡ್‌ಲ್ಯಾಂಪ್‌ ವಿನ್ಯಾಸ, ಅದರ ಕೆಳಗೆ ಅಳವಡಿಸಲಾಗಿರುವ ಫಾಗ್‌ಲ್ಯಾಂಪ್‌ ಗಮನ ಸೆಳೆಯುತ್ತದೆ. ಆರು ವರ್ಣಗಳಲ್ಲಿ ಆಲ್ಟ್ರೋಜ್‌ ಲಭ್ಯವಿರಲಿದೆ. ಹಿಂಬದಿ ಬಾಗಿಲ ಹಿಡಿಯನ್ನು ಸಿ–ಪಿಲ್ಲರ್‌(ಮೇಲ್ಭಾಗದಲ್ಲಿ ಅಡ್ಡವಾಗಿ)ನಲ್ಲಿ ನೀಡಲಾಗಿದೆ. 16 ಇಂಚು ಅಲಾಯ್ ವೀಲ್‌, ಇನ್ಫೋಟೈನ್ಮೆಂಟ್‌ಗಾಗಿ 7 ಇಂಚು ಟಿಎಫ್‌ಟಿ ಪರದೆ, ಹರ್ಮನ್‌ ಸ್ಪೀಕರ್‌ಗಳು, ಎರಡೂ ಬದಿಯಲ್ಲಿ ತೋಳುಗಳಿಗೆ ಆರಾಮ ನೀಡುವ ಆರ್ಮ್‌ರೆಸ್ಟ್‌, ಆ್ಯಂಬಿಯೆಂಟ್‌ ಲೈಟಿಂಗ್‌, ಲೆದರ್‌ ಹೊದಿಕೆ ಹೊಂದಿರುವ ಸ್ಟೀರಿಂಗ್‌ ವೀಲ್‌ ಮತ್ತು ಗೇರ್‌ ಲಿವರ್‌,..ಇನ್ನೂ ಹಲವು ಸವಲತ್ತುಗಳೊಂದಿಗೆ ಆಲ್ಟ್ರೋಜ್‌ ಬೆಸ್ಟ್‌ ಇನ್‌ ಕ್ಲಾಸ್‌ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ. 

ಎರಡು ಏರ್‌ಬ್ಯಾಗ್‌ಗಳು, ಎಬಿಎಸ್‌ ಜತೆಗೆ ಇಬಿಡಿ ಬ್ರೇಕಿಂಗ್‌ ವ್ಯವಸ್ಥೆ, ಹಿಂಬದಿಯ ಪಾರ್ಕಿಂಗ್‌ ಸೆನ್ಸರ್‌ಗಳು, ರೇನ್‌ ಸೆನ್ಸಿಂಗ್‌ ವೈಪರ್ ಒಳಗೊಂಡಿರಲಿದೆ. ಎಕ್ಸ್‌–ಷೋರೂಂನಲ್ಲಿ ಬೆಲೆ ₹5.5 ಲಕ್ಷದಿಂದ ₹9 ಲಕ್ಷ ಎಂದು ಅಂದಾಜಿಸಲಾಗಿದೆ. ಟಾಟಾ ಮೋಟಾರ್ಸ್‌ ಅಧಿಕೃತ ವೆಬ್‌ಸೈಟ್‌ನಿಂದ ₹21,000 ಮುಂಗಡ ಹಣ ಪಾವತಿಸಿ ಬುಕ್ಕಿಂಗ್‌ ಮಾಡಲು ಅವಕಾಶವಿದೆ. 

ಹುಂಡೈ ಐ20, ಮಾರುತಿ ಸುಜುಕಿ ಬಲೇನೊ ಹಾಗೂ ಹೋಂಡಾ ಜಾಝ್‌ ಮಾದರಿ ಕಾರುಗಳಿಗೆ ಟಾಟಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಆಲ್ಟ್ರೋಜ್‌ ಪೈಪೋಟಿ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆಲ್ಟ್ರೋಜ್‌ ಟಾಟಾದ ಮೊದಲ ಬಿಎಸ್‌–6 ಗುಣಮಟ್ಟದ ಇಂಜಿನ್‌ ಹೊಂದಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಮಾದರಿಯ ಕಾರು. 

ವಾಯ್ಸ್‌ಬಾಟ್‌: ಟಾಟಾ ಮೋಟಾರ್ಸ್ ಗೂಗಲ್‌ ಸಹಕಾರದೊಂದಿಗೆ 'ಟಾಟಾ ಆಲ್ಟ್ರೋಜ್‌ ವಾಯ್ಸ್‌ಬಾಟ್‌' ಬಿಡುಗಡೆ ಮಾಡಲಿದೆ. ಗೂಗಲ್‌ ಅಸಿಸ್ಟ್ ತಂತ್ರಜ್ಞಾನದೊಂದಿಗೆ ಆಲ್ಟ್ರೋಜ್‌ ಕಾರು ಬಳಕೆದಾರರಿಗೆ ಸಹಕಾರ ನೀಡಲಿದೆ. 'ಒಕೆ ಗೂಗಲ್‌, ಟಾಕ್‌ ಟು ಟಾಟಾ ಆಲ್ಟ್ರೋಜ್‌' ಎಂದು ಫೋನ್‌ನ ಗೂಗಲ್‌ ಅಸಿಸ್ಟಂಟ್‌ಗೆ ಹೇಳಿ, ಕಾರಿನ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು. ಗ್ರಾಹಕರು ಸಾಕಷ್ಟು ಹುಡುಕಾಟ, ಶೋಧನೆಯ ಬಳಿಕವೇ ಕಾರು ಖರೀದಿಗೆ ಮುಂದಾಗುತ್ತಿರುವುದನ್ನು ಗಮನಿಸಿರುವ ಕಂಪನಿ; ಅಂಥಹ ಗ್ರಾಹಕರಿಗೆ ಕಾರಿನ ಎಲ್ಲ ಮಾಹಿತಿ ನೀಡುವಂತಹ 'ಆಲ್ಟ್ರೋಜ್‌ ವಾಯ್ಸ್‌ಬಾಟ್‌' ಹೊರ ತರುತ್ತಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು