ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ನಿಮಿಷದಲ್ಲೇ ಬ್ಯಾಟರಿ ಚಾರ್ಜ್; ವಿದ್ಯುತ್‌ ಚಾಲಿತ ವಾಹನಗಳದ್ದೇ ಕಾರುಬಾರು

ಹೊಸ ಸಂಶೋಧನೆ
Last Updated 4 ನವೆಂಬರ್ 2019, 11:03 IST
ಅಕ್ಷರ ಗಾತ್ರ

ದೆಹಲಿಯಲ್ಲಿ ಹೊಗೆಮಂಜು ಆವರಿಸಿಕೊಂಡು ಉಸಿರಾಡಲು ಒಳ್ಳೆಯ ಗಾಳಿಯೇ ಸಿಗದಂತೆ ಆಗಿದ್ದನ್ನು ಹೆಂಡತಿಗೆ ವಿವರಿಸಿ; 'ಬೆಂಗಳೂರಿಗೂ ಇದೇ ಸ್ಥಿತಿ ಬರದ ಹಾಗೇ ನಾವೇ ಜಾಗೃತರಾಗಬೇಕು.ಪೆಟ್ರೋಲ್‌ ಸ್ಕೂಟರ್‌, ಬೈಕ್‌ ಬಳಸೋದನ್ನ ನಿಲ್ಲಿಸಬೇಕು. ಒಂದು ಕೆಲಸ ಮಾಡೋಣ,ಈ ನಮ್ಮ ಬೈಕ್‌ಗಳನ್ನ ಮಾರಾಟ ಮಾಡಿ ಎಲೆಕ್ಟ್ರಿಕ್‌ ಸ್ಕೂಟರ್‌ ತಗೊಳೊಣ,..' ಇನ್ನೂ ಮಾತು ಮುಗಿದಿರಲಿಲ್ಲ ಅಷ್ಟರಲ್ಲೇ–

'ಯಾವಾಗಲೂ ಎಲೆಕ್ಟ್ರಿಕ್‌...ಎಲೆಕ್ಟ್ರಿಕ್‌ ಅಂತೀರಲ್ಲ ಕರೆಂಟ್‌ ಏನು ಸುಮ್ನೆ ಬರ್ತದ? 100 ರೂಪಾಯಿಗೆ ಚಾರ್ಚ್‌ ಹಾಕಪ‍್ಪ ಅಂದ್ರೆ; ಏನು ತಕ್ಷಣ ತುಂಬಿಸಿ ಕೊಟ್ಬಿಡ್ತಾರಾ? ನಾವಿರೋದು ಎರಡನೇ ಮಹಡಿಲಿ, ಇಲ್ಲಿಂದ ಅಲ್ಲಿಗೆ ಕರೆಂಟ್‌ ಎಳ್ಕೊತಿರಾ? ನಾನು ಆಚೆ ಹೋದಾಗ ದಿಢೀರ್‌ ಅಂತ ಬ್ಯಾಟರಿ ಚಾರ್ಚ್‌ ಖಾಲಿ ಆಗೋದರೆ ಏನ್ರೀ ಮಾಡೋದು? ಏನು ಬಾಟ್ಲಲ್ಲಿ ಚಾರ್ಚ್‌ ತುಂಬಿಸ್ಕೊಂಡು ಬರೋಕ್‌ ಆಗುತ್ತೇನ್ರೀ? ಮನೇಲಿ ಆದ್ರೆ ರಾತ್ರಿ ಎಲ್ಲ ಚಾರ್ಚ್‌ ಮಾಡ್ಬೇಕು, ರಾತ್ರಿ ಕರೆಂಟ್‌ ಹೋದ್ರೆ? ನಾನೇನು ಗಾಡಿನ ತಳ್ಕೊಂಡುಓಡಾಡಲಾ? ಅದೆಲ್ಲೋ ಚಾರ್ಚಿಂಗ್‌ ಮಾಡೋಕೆ ಸ್ಟೇಷನ್‌ ಇದೇ ಅಂತೀರಾ, ನಾನು ಓಡಾಡೋ ಎಲ್ಲ ಏರಿಯಾದಲ್ಲೂ ಇದ್ಯಾ? ಅರ್ಧ ಗಂಟೆ ಅಲ್ಲಿ ನಿಂತುಕೊಂಡ್ರೆ ಮನೆ ಕೆಲಸ ನೋಡೋರು ಯಾರು? ಒಂದು ಸಲಕ್ಕೆ ಬರೀ 50–60 ಕಿ.ಮೀ. ಮೈಲೇಜ್‌ ಕೊಟ್ಟರೆ ಹೇಗೆ, ಚಾರ್ಜ್‌ ಮಾಡ್ಸೋದು ಮರೆತು ಹೋದರೆ? ಮೊದಲೇ ಬಿಸಿಲು ಜಾಸ್ತಿ ಏನಾದ್ರೂ ಆದ್ರೆ? ಮಳೆಗಾಲ, ಚಳಿಗಾಲದಲ್ಲಿ ಬ್ಯಾಟರಿ ಸರಿಯಾಗಿ ಕೆಲಸ ಮಾಡುತ್ತಾ?,.. ಬ್ಯಾಡವೇ ಬೇಡ...ಯಾವ ಎಲೆಕ್ಟ್ರಿಕ್‌ ಗಾಡಿನೂ ಬೇಡಾ..' ಎಂದು ಮಾತಿನಪ್ರಸ್ತಾಪಕ್ಕೆ ಫುಲ್‌ ಸ್ಟಾಪ್‌ ಇಟ್ಟುಬಿಟ್ಟಳು.

ಇವು ನನ್ನಾಕೆಯ ಪ್ರಶ್ನೆಗಳು ಮಾತ್ರ ಅಲ್ಲ. ಪೆಟ್ರೋಲ್‌, ಡೀಸೆಲ್‌ ವಾಹನಗಳಿಗೆ ಪರ್ಯಾಯವಾಗಿ ಬಳಸಬಹುದಾದ ವಾಹನಗಳ ಬಗ್ಗೆ ಯಾರಲ್ಲಿಯೇ ಕೇಳಿದರೂ ಇಂಥ ಪ್ರಶ್ನೆಗಳು ಸಹಜ ಹಾಗೂ ವಾಸ್ತವ ಕೂಡ. ಬ್ಯಾಟರಿ ಒಳಗೊಂಡ ವಿದ್ಯುತ್‌ ಚಾಲಿತ ವಾಹನಗಳಿಗೆ ಚಾರ್ಚ್‌ ಮಾಡಲು ಹೆಚ್ಚು ಸಮಯ ಬೇಕು. ಒಮ್ಮೆ ಚಾರ್ಚ್‌ ಮಾಡಿದರೆ ಚಲಿಸುವ ದೂರವೂ ಸೀಮಿತ, ನಗರ ಪ್ರದೇಶದಲ್ಲೂ ಸಿಗುವುದು ಬೆರಳೆಣಿಕೆಯಷ್ಟು ಚಾರ್ಜಿಂಗ್‌ ಸ್ಟೇಷನ್‌ಗಳು ಮಾತ್ರ. ಅಧಿಕ ಸಾಮರ್ಥ್ಯದ ಎಲೆಕ್ಟ್ರಿಕ್‌ ವಾಹನಗಳ ಬೆಲೆಯೂ ಅಧಿಕ, ಹೀಗಿದ್ದರೂ ಪರಿಸರ ಕಾಳಜಿ ತೋರಲು ಮುಂದಾಗುವವರೂ ನಮ್ಮೊಂದಿಗಿದ್ದಾರೆ. ಹಲವು ವರ್ಷಗಳಿಂದ ವಿದ್ಯುತ್‌ ಚಾಲಿತ ವಾಹನಗಳನ್ನು ನಿತ್ಯ ಬಳಸುತ್ತಿರುವವರಿಗೆ ಇಲ್ಲೊಂದು ಸಂತಸ ಸುದ್ದಿಯಿದೆ. ಹತ್ತು ನಿಮಿಷಗಳಲ್ಲೇ ಬ್ಯಾಟರಿ ಪೂರ್ತಿ ಚಾರ್ಜ್‌ ಆಗುವ ತಂತ್ರಜ್ಞಾನವನ್ನು ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.

ಲಿಥಿಯಂ–ಐಯಾನ್‌ ಬ್ಯಾಟರಿ ಚಾರ್ಜ್‌ ಆಗಲು ತೆಗೆದುಕೊಳ್ಳುವ ಅವಧಿಯನ್ನು ಕಡಿಮೆ ಮಾಡುವ ತಂತ್ರಜ್ಞಾನವನ್ನುಅಮೆರಿಕದ ಪೆನ್‌ ಸ್ಟೇಟ್‌ ಯೂನಿವರ್ಸಿಟಿಯ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ. ಕ್ಸಿಯೊ–ಗಾಂಗ್‌ ಯಾಂಗ್‌ ಹಾಗೂ ಸಹ ಸಂಶೋಧಕರ ಸಂಶೋಧನಾ ವರದಿ ಜೌಲ್‌ ಜರ್ನಲ್‌ನಲ್ಲಿ ಪ್ರಕಟಗೊಂಡಿದ್ದು, ವಿದ್ಯುತ್‌ ಚಾಲಿತ ವಾಹನಗಳು ಮನೆಮನೆಯಲ್ಲೂ ಬಳಕೆಗೆ ಬರುವ ದಿನಗಳು ದೂರವಿಲ್ಲ ಎಂಬುದಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ.

ಇಡೀ ರಾತ್ರಿ ಚಾರ್ಜ್‌...

ಆಟೊಮೊಬೈಲ್‌ ಕಂಪನಿಗಳು ವಿದ್ಯುತ್‌ ಚಾಲಿತ ವಾಹನಗಳ ಮೈಲೇಜ್‌ ಹೆಚ್ಚಿಸಲು, ವೇಗವಾಗಿ ಚಾರ್ಜ್‌ ಮಾಡಬಹುದಾದ ಬ್ಯಾಟರಿ ಅಭಿವೃದ್ಧಿ ಪಡಿಸುವ ಪ್ರಯತ್ನಗಳನ್ನು ಮುಂದುವರಿಸಿವೆ. ಮನೆಗಳಲ್ಲಿ 120 ವೋಲ್ಟ್‌ ವಿದ್ಯುತ್‌ ಹೊರಹರಿವಿನಲ್ಲಿ ಒಂದು ಗಂಟೆ ಬ್ಯಾಟರಿ ಚಾರ್ಜ್‌ ಮಾಡಿದರೆ, 3-8 ಕಿ.ಮೀ. ವರೆಗೂ ಸಂಚಾರ ನಡೆಸಬಹುದು. 240 ವೋಲ್ಟ್‌ ವಿದ್ಯುತ್‌ ಹರಿವಿನಲ್ಲಿ ಒಂದು ಗಂಟೆ ಚಾರ್ಜ್ ಆಗುವ ಬ್ಯಾಟರಿ 15–25 ಕಿ.ಮೀ. ಚಾಲನೆ ನೀಡಬಲ್ಲದು. ಆದರೆ, ಫಾಸ್ಟ್‌ ಚಾರ್ಜಿಂಗ್‌ ಕೇಂದ್ರಗಳಲ್ಲಿ 20–30 ನಿಮಿಷ ಚಾರ್ಜ್ ಮಾಡಿದರೆ, 60–80 ಕಿ.ಮೀ. ಚಲಿಸಬಹುದು. ಫಾಸ್ಟ್‌ ಚಾರ್ಜಿಂಗ್‌ನಲ್ಲಿ ಲಿಥಿಯಂ ಪ್ಲೇಟಿಂಗ್‌ ಪ್ರಭಾವದಿಂದ ಬ್ಯಾಟರಿ ಬಾಳಿಕೆಗೆ ತೊಂದರೆ ಎಂಬ ಅಂಶಗಳಿಂದಾಗಿ ವೇಗದ ಚಾರ್ಜಿಂಗ್‌ ಬಳಕೆಗೆ ಅತಿ ಹೆಚ್ಚು ವಿಸ್ತರಿಸಿಕೊಂಡಿಲ್ಲ.

ಸಂಶೋಧನಾ ವರದಿ ಪ್ರಕಾರ, ಬ್ಯಾಟರಿಯನ್ನು ಬಹುಬೇಗ 60 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶಕ್ಕೆ ತರುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನಲಾಗಿದೆ. 30 ಸೆಕೆಂಡ್‌ಗಳಲ್ಲಿ ನಿಗದಿತ ಉಷ್ಣತೆಗೆ ತರುವುದು ಹಾಗೂ ಚಾರ್ಜಿಂಗ್‌ ಸಮಯದಲ್ಲಿ ಅದೇ ಉಷ್ಣಾಂಶವನ್ನು ಉಳಿಸಿಕೊಳ್ಳುವುದು; ದುಬಾರಿಯಲ್ಲದ ನಿಕಲ್‌ ಲೋಹದ ಹಾಳೆಗಳನ್ನು ಬ್ಯಾಟರಿಗಳಲ್ಲಿ ಬಳಸುವುದರಿಂದ ಇದನ್ನು ಸಾಧಿಸಬಹುದಾಗಿದೆ. ಹತ್ತು ನಿಮಿಷಗಳ ವರೆಗೂ ಉಷ್ಣಾಂಶ ಹೆಚ್ಚಿಸಿರುವ ಪ್ರಕ್ರಿಯೆಯಲ್ಲಿ ಲಿಥಿಯಮ್‌ ಲೇಪನ ಆಗುವುದನ್ನು ತಡೆಯಬಹುದಾಗಿದೆ. ಇದರಿಂದಾಗಿ ಹತ್ತು ನಿಮಿಷಗಳಲ್ಲೇ ಬ್ಯಾಟರಿ ಸಂಪೂರ್ಣ ಚಾರ್ಜ್‌ ಆಗುತ್ತದೆ.

ಸಂಶೋಧಕರು ಪ್ರಯೋಗಾಲಯದಲ್ಲಿ 2,500 ಬಾರಿ ಇಂಥ ಪ್ರಕ್ರಿಯೆಯನ್ನು ನಡೆಸಿ ಗಮನಿಸಿದ್ದಾರೆ. ಸಾವಿರಾರು ಬಾರಿ ಉಷ್ಣಾಂಶ ಹೆಚ್ಚಿಸಿ ಚಾರ್ಜ್‌ ಆದ ಬಳಿಕವೂ ಬ್ಯಾಟರಿ ಸಾಮರ್ಥ್ಯ ಶೇ 91.7ರಷ್ಟು ಉಳಿದಿದೆ. ಪರೀಕ್ಷಿತ ಚಾರ್ಜಿಂಗ್‌ ಅವಧಿ ಸುಮಾರು 8 ಲಕ್ಷ ಕಿ.ಮೀ. ದೂರದ ಚಾಲನೆಗೆ ಸಮನಾಗಿದೆ. ಆದರೆ, ಬ್ಯಾಟರಿ ಉಷ್ಣಾಂಶ ಹೆಚ್ಚಿಸುವುದು, ಮತ್ತೆ ಸಮಸ್ಥಿತಿಗೆ ತರುವುದು, ಸುತ್ತಲಿನ ವಾತಾವರಣದಲ್ಲಿನ ಉಷ್ಣಾಂಶದ ಪ್ರಭಾವ ನಿಯಂತ್ರಿಸುವುದು ಅಗತ್ಯವಾಗಿದೆ. ಬ್ಯಾಟರಿ ಉಷ್ಣಾಂಶ ಹೆಚ್ಚಿದರೆ ಸ್ಫೋಟಗೊಳ್ಳುವ ಸಾಧ್ಯತೆಗಳೂ ಹೆಚ್ಚು ಅಥವಾ ಸಾಮರ್ಥ್ಯ ಕಡಿಮೆಯಾಗಬಹುದು. ಈ ಎಲ್ಲ ಅಡೆತಡೆಗಳನ್ನು ಹೊರಬರುವ ತಂತ್ರಜ್ಞಾನ ಬೆಳವಣಿಗೆ ಆದಲ್ಲಿ ಜಗತ್ತಿನಾದ್ಯಂತ ಕಂಡಲೆಲ್ಲ ವಿದ್ಯುತ್‌ ಚಾಲಿತ ವಾಹನಗಳದ್ದೇ ಕಾರುಬಾರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT