ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ಡಿಜಿಟಲ್‌ ರೂಪಾಯಿ: ರೂಪ ಬೇರೆ, ಮೌಲ್ಯ ಒಂದೇ– ಪ್ರಧಾನಿ ಮೋದಿ

Last Updated 2 ಫೆಬ್ರುವರಿ 2022, 10:16 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೊರತರಲಿರುವ ಬ್ಲಾಕ್‌ಚೈನ್‌ ಆಧಾರಿತ ಡಿಜಿಟಲ್‌ ಕರೆನ್ಸಿಯು ದೇಶದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ರೂಪಾಯಿಯ ವರ್ಚುವಲ್‌ ರೂಪವೇ ಆಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವರಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ 'ಕೇಂದ್ರ ಬಜೆಟ್‌ 2022–23'ಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಬುಧವಾರ ಮಾತನಾಡಿದರು. ವಾರ್ಷಿಕ ಬಜೆಟ್‌ನ ಪ್ರಮುಖಾಂಶಗಳನ್ನು ಪ್ರಸ್ತಾಪಿಸುತ್ತ, 'ರೂಪಾಯಿಯ ನೋಟುಗಳ ರೂಪದ ಕರೆನ್ಸಿಯನ್ನು ನಿಯಂತ್ರಿಸುತ್ತಿರುವ ಆರ್‌ಬಿಐ, ಡಿಜಿಟಲ್‌ ಕರೆನ್ಸಿಯ ಮೇಲೂ ನಿಗಾ ವಹಿಸಲಿದೆ ಎಂದು ತಿಳಿಸಿದರು.

ಕ್ರಿಪ್ಟೊಕರೆನ್ಸಿಗಳು, ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಬಳಸುತ್ತಿರುವ ನಾನ್‌ ಫಂಜಿಬಲ್‌ ಟೋಕನ್‌ಗಳು (ಎನ್‌ಎಫ್‌ಟಿ) ಹಾಗೂ ಇತರೆ ಡಿಜಿಟಲ್‌ ಸ್ವತ್ತುಗಳ ವಹಿವಾಟ ಹೆಚ್ಚುವ ಮೂಲಕ ಹಣಕಾಸು ಸ್ಥಿತಿಯಲ್ಲಿ ಕ್ಷಿಪ್ರ ಬದಲಾವಣೆ ಎದುರಾಗಿರುವ ಬೆನ್ನಲ್ಲೇ ದೇಶವು ಡಿಜಿಟಲ್‌ ಕರೆನ್ಸಿ ಬಿಡುಗಡೆಗೆ ಮುಂದಾಗಿರುವುದಾಗಿ ಹೇಳಿದರು.

'ಆತ್ಮನಿರ್ಭರತೆ (ಸ್ವಾವಲಂಬನೆ) ಗುರಿಯೊಂದಿಗೆ ನಮ್ಮ ಆರ್ಥಿಕತೆಯನ್ನು ಸಮರ್ಥಗೊಳಿಸುವುದು ಮುಖ್ಯವಾಗಿದೆ. ಆಧುನಿಕತೆಯತ್ತ ದೇಶದ ಆರ್ಥಿಕತೆಯು ನಿರಂತರವಾಗಿ ವಿಸ್ತರಿಸಿಕೊಳ್ಳುತ್ತಿದೆ' ಎಂದು ಪ್ರಧಾನಿ ಮೋದಿ ಹೇಳಿದರು.

ಆರ್‌ಬಿಐ ಇದೇ ವರ್ಷ ಏಪ್ರಿಲ್‌ನಿಂದ ಡಿಜಿಟಲ್‌ ರೂಪಾಯಿ ಹೊರತರಲಿದೆ. ಆರ್‌ಬಿಐ, ಕೇಂದ್ರೀಯ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ (ಸಿಬಿಡಿಸಿ) ಬಿಡುಗಡೆಗಾಗಿ ಕಳೆದ ವರ್ಷ ಜುಲೈನಿಂದ ಕಾರ್ಯಾಚರಿಸುತ್ತಿದೆ.

ಡಿಜಿಟಲ್‌ ಕರೆನ್ಸಿ ಕುರಿತು ಪ್ರಧಾನಿ ಹಂಚಿಕೊಂಡ ಇನ್ನಷ್ಟು ವಿವರ ಇಲ್ಲಿದೆ:

* ನೋಟಿನ ರೂಪದಲ್ಲಿರುವ ರೂಪಾಯಿಗೂ ಆರ್‌ಬಿಐನ ಡಿಜಿಟಲ್‌ ಕರೆನ್ಸಿಗೂ ರೂಪದಲ್ಲಿ ಮಾತ್ರವೇ ವ್ಯತ್ಯಾಸವಿರುತ್ತದೆ. ಆದರೆ, ಮೌಲ್ಯದಲ್ಲಿ ಯಾವುದೇ ಬದಲಾವಣೆ ಅಥವಾ ವ್ಯತ್ಯಾಸ ಇರುವುದಿಲ್ಲ. ಡಿಜಿಟಲ್‌ ರೂಪಾಯಿಯನ್ನು ಭೌತಿಕ ನೋಟಿಗೆ ಬದಲಿಸಿಕೊಳ್ಳಬಹುದು. ಈ ಕರೆನ್ಸಿಯು ಡಿಜಿಟಲ್‌ ಆರ್ಥಿಕತೆಯನ್ನು ಬಲ ಪಡಿಸುವ ಜೊತೆಗೆ ಹಣಕಾಸು ತಂತ್ರಜ್ಞಾನ ವಲಯದ ವರ್ಧನೆಗೆ ಕಾರಣವಾಗಲಿದೆ.

* ಡಿಜಿಟಲ್‌ ಕರೆನ್ಸಿಯ ಮೇಲೆ ಆರ್‌ಬಿಐ ಸಂಪೂರ್ಣ ನಿಯಂತ್ರಣ ಹೊಂದಿರಲಿದೆ.

* ರೂಪಾಯಿ ನೋಟುಗಳನ್ನು ನಿಯಂತ್ರಿಸುವಂತೆಯೇ ಡಿಜಿಟಲ್‌ ರೂಪಾಯಿಯ ಪಾವತಿಯ ಮೇಲೂ ಆರ್‌ಬಿಐ ನಿಯಂತ್ರಣ ಇರಲಿದೆ. ಡಿಜಿಟಲ್‌ ಪಾವತಿಯು ಇನ್ನಷ್ಟು ಸುರಕ್ಷಿತ, ಸಮರ್ಥ ಹಾಗೂ ಜೋಪಾನ ಆಗಲಿದೆ. ಇದು ಜಾಗತಿಕ ಡಿಜಿಟಲ್‌ ಪಾವತಿ ಸೌಕರ್ಯಕ್ಕೂ ಮಾರ್ಗವಾಗಲಿದೆ.

* ಕೇಂದ್ರೀಯ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ (ಸಿಬಿಡಿಸಿ) ಅಥವಾ ಡಿಜಿಟಲ್‌ ರೂಪಾಯಿಯನ್ನು ಖಾಸಗಿ ವರ್ಚುವಲ್‌ ಕರೆನ್ಸಿ, ಕ್ರಿಪ್ಟೊಕರೆನ್ಸಿಗಳೊಂದಿಗೆ (ಬಿಟ್‌ಕಾಯಿನ್‌, ಎಥೆರಿಯಂ, ಡೋಜಿಕಾಯಿನ್‌,..) ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT