ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2021: ಬಿಬಿಎಂಪಿಗೆ ಕೊಡುಗೆ, ಸುಸ್ಥಿರ ಮಾದರಿ ಅಲ್ಲ

Last Updated 8 ಮಾರ್ಚ್ 2021, 19:40 IST
ಅಕ್ಷರ ಗಾತ್ರ

ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ತೋರಿದ ಬದ್ಧತೆಯೇ ಈ ಬಜೆಟ್‌ನ ಅತ್ಯಂತ ಪ್ರಮುಖ ಅಂಶ ಎಂಬುದು ನನ್ನ ಅನಿಸಿಕೆ; ಉಪನಗರ ರೈಲು ಯೋಜನೆಗೆ ಗಣನೀಯ ಮೊತ್ತವನ್ನು ನಿಗದಿ ಮಾಡಲಾಗಿದ್ದು, ಯೋಜನೆಯು ಕೊನೆಗೂ ಹಳಿಗೆ ಬರುವ ಲಕ್ಷಣ ಕಾಣಿಸುತ್ತಿದೆ. ಯಶವಂತಪುರ–ಚನ್ನಸಂದ್ರ ಮತ್ತು ಬೈಯ್ಯಪ್ಪನಹಳ್ಳಿ–ಹೊಸೂರು ರೈಲು ಮಾರ್ಗದ ದ್ವಿಪಥ ಕಾಮಗಾರಿಗೂ ಹಣ ನೀಡಿ ಅದನ್ನು 2023ರೊಳಗೆ ಪೂರ್ಣಗೊಳಿಸಲು ಮುಂದಾಗಿರುವುದು ಸಂತಸದ ವಿಚಾರ. ಲಕ್ಷಾಂತರ ನೌಕರರುಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿ ನಿತ್ಯದ ಪ್ರಯಾಣಕ್ಕೆ ಸ್ವಂತ ವಾಹನಗಳನ್ನೇ ಬಳಸುತ್ತಿದ್ದಾರೆ. ಹಾಗಾಗಿ, ಉಪನಗರ ರೈಲು ಜಾಲವು ಬೆಂಗಳೂರಿನ ಮಟ್ಟಿಗೆ ಬಹುದೊಡ್ಡ ಕೊಡುಗೆ ಆಗಲಿದೆ. ಹೊಸ ಮೇಲ್ಸೇತುವೆ ಅಥವಾ ಎತ್ತರಿಸಿದ ಮಾರ್ಗದ ಯೋಜನೆಯನ್ನು ಘೋಷಿಸದೇ ಇರುವ ಮೂಲಕ ಸರ್ಕಾರವು ಸಂದೇಶವೊಂದನ್ನು ರವಾನಿಸಿದಂತೆ ಕಾಣಿಸುತ್ತಿದೆ. ಇದೇ ನೀತಿಗೆ ಅಂಟಿಕೊಂಡರೆ ಮುಂದಿನ ಕೆಲವು ವರ್ಷಗಳಲ್ಲಿ ನಗರದ ವಾಹನ ದಟ್ಟಣೆ ಇಳಿಕೆಯಾಗಿ ವಾಯು ಗುಣಮಟ್ಟ ಉತ್ತಮಗೊಳ್ಳಲಿದೆ.

2021-22ನೇ ಸಾಲಿಗೆ ಬೆಂಗಳೂರಿನ ನಗರದ ಸಮಗ್ರ ಅಭಿವೃದ್ಧಿಗೆ ₹7,795 ಕೋಟಿ ಅನುದಾನ ನಿಗದಿ ಮಾಡಲಾಗಿದೆ; ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು (ಬಿಬಿಎಂಪಿ) ತನ್ನ ಕಾರ್ಯಚಟುವಟಿಕೆಗಳಿಗೆ ರಾಜ್ಯ ಸರ್ಕಾರವನ್ನು ಯಾವ ರೀತಿ ಅವಲಂಬಿಸಿದೆ ಎಂಬುದನ್ನು ಈ ಮೊತ್ತವೇ ಬಿಚ್ಚಿಡುತ್ತದೆ. ಇದು ಆರೋಗ್ಯಕರವೂ ಅಲ್ಲ, ಸುಸ್ಥಿರವೂ ಅಲ್ಲ. ನಿಜಕ್ಕೂ ಇಲ್ಲಿಗೆ ಬೇಕಿರುವುದು ದಕ್ಷವಾದ ರಾಜ್ಯ ಹಣಕಾಸು ಆಯೋಗ– ಬೆಂಗಳೂರಿಗೆ ಮಾತ್ರವಲ್ಲ ರಾಜ್ಯದ ಎಲ್ಲ ನಗರಗಳಿಗೂ ವರಮಾನದ ನ್ಯಾಯಯುತ ಪಾಲು ದೊರಕಬೇಕು. ಕೇಂದ್ರ ಹಣಕಾಸು ಆಯೋಗದ ಮಾದರಿಯಲ್ಲಿಯೇ ವೈಜ್ಞಾನಿಕವಾದ ಸೂತ್ರ ಅನುಸರಿಸಿ ಈ ಹಂಚಿಕೆ ನಡೆಯಬೇಕು.

ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಸಂಸ್ಥೆಯೊಂದನ್ನು ಸ್ಥಾಪಿಸಿರುವುದು ದುರದೃಷ್ಟಕರ. ಸಾರ್ವಜನಿಕ ಉತ್ತರದಾಯಿತ್ವ ಇಲ್ಲದ ಇನ್ನೊಂದು ಸ‌ಂಸ್ಥೆ ಅಷ್ಟೇ ಆಗಿ ಇದು ಇರಬಹುದು.

ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಒತ್ತು ನೀಡಿರುವುದು ಸ್ವಾಗತಾರ್ಹ. ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಿಂದ ದೊಡ್ಡ ಪ್ರಮಾಣದಲ್ಲಿ ವರಮಾನ ಮತ್ತು ಜೀವನೋಪಾಯ ಸೃಷ್ಟಿಗೆ ಅವಕಾಶ ಇದೆ.

-ಜನಾಗ್ರಹ ಸಂಸ್ಥೆಯ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT