ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget-2022 ವಿಶ್ಲೇಷಣೆ: ಗ್ರಾಮಭಾರತದ ಬಗ್ಗೆ ಕ್ರೂರ ಉದಾಸೀನದ ದಾಖಲೆ

Last Updated 1 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಮೊನ್ನೆ ಮೊನ್ನೆಯಷ್ಟೇ ನಿಲುಗಡೆಗೆ ಬಂದ ಚಾರಿತ್ರಿಕ ರೈತ ಚಳವಳಿಯ ಹಿನ್ನೆಲೆಯಲ್ಲಿ ಈ ಬಾರಿ ಮೋದಿ ಸರ್ಕಾರತನ್ನ ಬಜೆಟ್ಟಿನಲ್ಲಿ ರೈತರ ದೀರ್ಘ ಕಾಲೀನ ಬೇಡಿಕೆ, ಸಮಸ್ಯೆಗಳ ಬಗ್ಗೆ ಗಮನಹರಿಸೀತು ಎಂಬ ಭಾವನೆ ಎಲ್ಲರಿಗೂ ಇತ್ತು. ರೈತ ವಿರೋಧಿ ಕಾನೂನುಗಳೆಂದೇ ಪರಿಗಣಿಸಲ್ಪಟ್ಟ ಮೂರು ಕಾನೂನುಗಳನ್ನು ಮೋದಿಯವರು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಈ ನಿರೀಕ್ಷೆಗೊಂದು ರಾಜಕೀಯ ಆಯಾಮವೂ ಇತ್ತು.

ಆದರೆ ಈ ಬಜೆಟ್‌ ಇಡೀ ಗ್ರಾಮಭಾರತದ ಬಗ್ಗೆ ಕ್ರೂರ ಉದಾಸೀನ ತೋರಿದ ದಾಖಲೆಯಾಗಿ ಉಳಿಯಲಿದೆ. ಇಷ್ಟು ಸಂವೇದನಾರಹಿತ ನಿಲುವು ಹೇಗೆ ಸಾಧ್ಯ ಎಂಬುದೂ ಭವಿಷ್ಯದಲ್ಲಿ ರಾಜಕೀಯ ಪಂಡಿತರ ವಿಶ್ಲೇ಼ಷಣೆಗೂ ಈ ಬಜೆಟ್ ಯೋಗ್ಯ!

ಅಪಾರ ಸಂಕಷ್ಟದಲ್ಲಿರುವ ಭಾರತೀಯ ಕೃಷಿ ಲೋಕಕ್ಕೆ ಅನುಕೂಲವಾಗುವ ಉಪಕ್ರಮಗಳನ್ನು ಕೈಗೊಳ್ಳುವುದೆಂದರೆ ಬಹುತೇಕ ಗ್ರಾಮಭಾರತದ ಜೀವನ್ಮುಖಿ ಚಲನೆಯನ್ನು ಪೋಷಿಸುವುದೆಂದರ್ಥ. ಗ್ರಾಮ ಭಾರತಕ್ಕೆ ಪ್ರತ್ಯಕ್ಷ /ಪರೋಕ್ಷ ಸಂಬಂಧವಿರುವ ವಿವಿಧ ಕ್ಷೇತ್ರಗಳಿಗೆ ಈ ಬಜೆಟ್ಟಿನಲ್ಲಿ ನಿಗದಿ ಮಾಡಲಾಗಿರುವ ಅಂದಾಜು ಅನುದಾನಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ.

ಕೊರೊನಾ ಕಾರಣಕ್ಕೇ ಮರು ವಲಸೆ ಹೆಚ್ಚಿ ಕನಿಷ್ಠ ಆಹಾರ ಭದ್ರತೆಯ ಕಾರಣಕ್ಕೆ ನಿವ್ವಳ ಸಾಗುವಳಿ ಆದ ಪ್ರದೇಶ ಹೆಚ್ಚಾಗಿದ್ದನ್ನು ಸರ್ಕಾರ ಗಮನಿಸಿದೆ. ಹಾಗೇ ಉದ್ಯೋಗ ಖಾತರಿಯ ಕೆಲಸಕ್ಕೆ ಮತ್ತೆ ಮತ್ತೆ ಜನ ಮುಗಿ ಬೀಳುತ್ತಿರುವ ವಿವರಗಳೂ ಇವೆ. ಕೊರೊನಾ / ಓಮೈಕ್ರಾನ್‌ ಮುಂದಿನ ವರ್ಷವೂ ಕಾಡಬಹುದು ಎಂಬ ಆತಂಕ ಜನರಲ್ಲಿ ಹೇಗೆ ಮನೆ ಮಾಡಿದೆಯೆಂದರೆ ಜನರಲ್ಲಿ ಮಾನಸಿಕ ನೆಮ್ಮದಿ ಮೂಡಿಸುವ ಸುಧಾರಣಾ ಕ್ರಮವಾಗಿ ಆರೋಗ್ಯ ಕ್ಷೇತ್ರಕ್ಕೆ ಅನುದಾನ ಹೆಚ್ಚಳವಾಗಬೇಕಿತ್ತು.

ಇನ್ನೊಂದೆಡೆ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಕೃಷಿಯ ಹತ್ತು ಹಲವು ಕೆಲಸಗಳ ವೆಚ್ಚ ಏರಿರುವುದೂ ನಮೂದಾಗಿದೆ. ಆದ್ದರಿಂದಲೇ ಸರ್ಕಾರವೊಂದು ಹಲವು ಆಯಾಮಗಳಲ್ಲಿ ಅನುದಾನ ಹೆಚ್ಚಿಸಬೇಕಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಕೃಷಿಕ್ಷೇತ್ರದ ಪ್ರತಿಯೊಂದೂ ವಲಯದ ಅನುದಾನಕ್ಕೆ ಕತ್ತರಿ ಹಾಕಿರುವುದು ವಿಸ್ಮಯ /ವಿಷಾದ ಎರಡನ್ನೂ ಮೂಡಿಸಿದೆ.

ಗಮನಿಸಿ, ಉದ್ಯೋಗ ಖಾತರಿಯ ಅನುದಾನ ₹25 ಸಾವಿರ ಕೋಟಿ ಕಡಿತಗೊಳಿಸಿದರೆ ರಸಗೊಬ್ಬರದ ಸಬ್ಸಿಡಿಯಲ್ಲಿ ₹35 ಸಾವಿರ ಕೋಟಿ ಕಡಿತ ಮಾಡಲಾಗಿದೆ. ಆಹಾರ ಸಬ್ಸಿಡಿಯಲ್ಲಿ ₹80 ಸಾವಿರ ಕೋಟಿ ಕಡಿತವಾಗಿದ್ದರೆ, ಬೆಲೆ ಕುಸಿತದ ಆಟ ತಪ್ಪಿಸಲು ಸರ್ಕಾರ ಕೈಗೊಳ್ಳುವ ಮಾರುಕಟ್ಟೆ ಮಧ್ಯಪ್ರವೇಶದ ಉಪಕ್ರಮದ ಅನುದಾನವನ್ನು ಅರ್ಧಕ್ಕರ್ಧ ಇಳಿಸಲಾಗಿದೆ.

ಇದರರ್ಥ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಗೌರವಿಸುವುದಿರಲಿ, “ಸಂಕಷ್ಟದ ಮಾರಾಟ”ದ ಬಗ್ಗೆಯೂ ದಿವ್ಯ ನಿರ್ಲಕ್ಷ್ಯ ತೋರಿರುವುದು ಕಣ್ಣಿಗೆ ರಾಚುತ್ತದೆ. ಹಾಗೆಂದು ಕಳೆದ ಏಳು ವರ್ಷಗಳಲ್ಲಿ ಇದ್ದ ಬದ್ದ ಆದಾಯ ಪೂರ್ತಿ ಕೃಷಿಗೆ ಸುರಿದ ಪುರಾವೆ ಇದ್ದಿದ್ದರೆ ಏನೋ ಬಿಡಪ್ಪಾ ಎನ್ನಬಹುದಿತ್ತು!!

ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ₹51 ಲಕ್ಷ ಕೋಟಿ ಸಾಲ ಇತ್ತು. ಆರೇ ವರ್ಷಗಳಲ್ಲಿ ಅದು ₹105 ಲಕ್ಷ ಕೋಟಿಗಳಿಗೇರಿದೆ. ಕೋವಿಡ್‌ ನೆಪ ಹೇಳೋಣವೆಂದರೆ ಅದಕ್ಕೂ ಮೊದಲೇ ಈ ಸಾಲದ ಜ್ವರ ಏರಿದ ದಾಖಲೆ ಇದೆ. ಈ ವರ್ಷ ಮತ್ತೆ ₹ 40 ಲಕ್ಷ ಕೋಟಿ ವೆಚ್ಚ ತೋರಿಸಿದರೂ ಆದಾಯ ಕೇವಲ ₹22 ಲಕ್ಷ ಕೋಟಿ ಇದೆ. ಈ ಸಾಲಿನಲ್ಲಿ ಸಾಲದ ಬಡ್ಡಿ ಕಟ್ಟಲು ಸರ್ಕಾರಅಧಿಕೃತವಾಗಿ ₹10 ಲಕ್ಷ ಕೋಟಿ ಮೀಸಲಿರಿಸಿದೆ.

ಯಾಕಾಗಿ ಇಷ್ಟೆಲ್ಲಾ ಸಾಲ ಮಾಡಲಾಯಿತು? ಯಾವ ಕ್ಷೇತ್ರಕ್ಕೆ ಹಾಲು– ಜೇನು ಹರಿಸುವ ಅನುದಾನ ನೀಡಲಾಯಿತು ಎಂಬ ವಿವರ ಎಲ್ಲೂ ಸಿಕ್ಕುವುದಿಲ್ಲ.

ಚಟಕ್ಕೆ ಸಾಲ ಮಾಡಿ ಹೆಂಡಿರು ಮಕ್ಕಳಿಗೆ ರಾಗಿ ಹಿಟ್ಟೂ ತರಲಾರದವನ ಬಗ್ಗೆ ನಮಗೆ ಜಿಗುಪ್ಸೆ ಬರುತ್ತದೆ. ಸರ್ಕಾರವೊಂದು ಇದೇ ಹಾದಿ ತುಳಿದರೆ?

ಪ್ರಾಯಶಃ ರೈತ/ ಗ್ರಾಮೀಣ ಕ್ಷೇತ್ರವನ್ನು ಓಲೈಸಲು ಅನುದಾನ ವೆಚ್ಚ ಮಾಡುವುದು ಮೂರ್ಖತನ, ಜಾತಿ ಧರ್ಮದ ಮೂಲಕ ಅವರನ್ನು ಪ್ರತ್ಯೇಕವಾಗಿ ಒಗ್ಗೂಡಿಸಿ ಚುನಾವಣೇ ಗೆಲ್ಲಬಹುದು ಎಂಬ ಲೆಕ್ಕಾಚಾರವೂ ಇರಬಹುದು.

ಸರ್ವಾಧಿಕಾರಿಯೊಬ್ಬ ಜನರನ್ನು ದೈನೇಸಿ ಸ್ಥಿತಿಯಲ್ಲಿರಿಸಿದಷ್ಟೂ ಅವರು ಅಸಹಾಯಕತೆಯಿಂದ ದೇಹಿ ಎಂದು ಹಿಂಬಾಲಿಸುತ್ತಾರೆ ಎಂಬುದನ್ನು ತೋರಿಸಲು ಕೋಳಿಯೊಂದರ ರೆಕ್ಕೆ, ಪುಕ್ಕ ಕಿತ್ತು, ಹಿಡಿಕಾಳು ಒಡ್ಡಿದರೆ ನೆತ್ತರು ಸೋರುತ್ತಿದ್ದರೂ ಅದು ಅವನನ್ನು ಹಿಂಬಾಲಿಸಿ ಕಾಳು ತಿಂದಿತಂತೆ...

ಲೇಖಕ: ಕೃಷಿ, ಗ್ರಾಮೀಣಾಭಿವೃದ್ಧಿ ತಜ್ಞರು

ಇವನ್ನೂ ಓದಿ
*

*
*
*
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT