ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳ ಮಾರುಕಟ್ಟೆ: ಯಾವುದಕ್ಕೆ ಯಾವ ಸಾಲ ಸೂಕ್ತ?

Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
ಅಕ್ಷರ ಗಾತ್ರ

ಸಾಲವನ್ನು ನಾವು ಸರಿಯಾಗಿ ಬಳಸಿಕೊಂಡರೆ ಅದಕ್ಕೆ ಸಂಪತ್ತು ಸೃಷ್ಟಿಸಿ ಕೊಡುವ ಶಕ್ತಿಯಿದೆ. ಆದರೆ, ಅರಿವು–ಅಂದಾಜು–ಲೆಕ್ಕಾಚಾರವಿಲ್ಲದೆ ಸಾಲ ಪಡೆದರೆ ಅದು ನಿಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ.

ತಂತ್ರಜ್ಞಾನದ ಈ ಕಾಲದಲ್ಲಿ ಕ್ಷಣ ಮಾತ್ರದಲ್ಲಿ ಸಾಲ ಕೊಡುವ ಹತ್ತಾರು ಹಣಕಾಸು ಸಂಸ್ಥೆಗಳಿದ್ದರೂ ಸರಿಯಾದ ಸಂಸ್ಥೆಯಿಂದ ಸರಿಯಾದ ಸಾಲ ಪಡೆಯದಿದ್ದರೆ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಯಾವುದಕ್ಕೆ ಯಾವ ಸಾಲ ಪಡೆಯಬೇಕು? ಬನ್ನಿ ವಿವರವಾಗಿ ಕಲಿಯೋಣ.

ಸಾಲದ ಎರಡು ಪ್ರಮುಖ ವಿಧಗಳು:

ಸಾಲದಲ್ಲಿ ಹತ್ತಾರು ಬಗೆಯ ಸಾಲಗಳಿವೆ. ಆದರೆ, ಸಾಲಗಳನ್ನು ಒಟ್ಟಾರೆಯಾಗಿ ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ಒಂದನೆಯದು ಅಡಮಾನ ಸಾಲ (ಸೆಕ್ಯೂರ್ಡ್ ಲೋನ್). ಎರಡನೆಯದು ಅಡಮಾನರಹಿತ ಸಾಲ (ಅನ್ ಸೆಕ್ಯೂರ್ಡ್ ಲೋನ್). ಬ್ಯಾಂಕ್‌ನಿಂದ ಸಾಲ ಪಡೆಯಲು ಬಂಗಾರ, ಆಸ್ತಿ, ವಾಹನ, ಷೇರುಗಳು, ಮನೆ ಇತ್ಯಾದಿ ಮೌಲ್ಯ ಹೊಂದಿರುವ ವಸ್ತುಗಳನ್ನು ಒತ್ತೆ ಇಟ್ಟರೆ ಅದು ಅಡಮಾನ ಸಾಲವಾಗುತ್ತದೆ.

ಉದಾಹರಣೆಗೆ ಗೃಹ ಸಾಲ ಅಡಮಾನ ಸಾಲವಾಗುತ್ತದೆ. ಬ್ಯಾಂಕ್‌ನಿಂದ ಸಾಲ ಪಡೆಯಲು ಯಾವುದೇ ಆಸ್ತಿಯನ್ನು ಒತ್ತೆ ಇಡದೆ ಇದ್ದರೆ ಅಂತಹ ಸಾಲ ಅಡಮಾನರಹಿತ ಸಾಲ ಎನಿಸಿಕೊಳ್ಳುತ್ತದೆ. ವೈಯಕ್ತಿಕ ಸಾಲ (ಪರ್ಸನಲ್ ಲೋನ್) ಅಡಮಾನರಹಿತ ಸಾಲಕ್ಕೆ ಉತ್ತಮ ಉದಾಹರಣೆ.

ಐದು ಪ್ರಮುಖ ಅಡಮಾನ ಸಾಲಗಳು:

* ಗೃಹ ಸಾಲ: ಮನೆ ಖರೀದಿಗೆ ಅಥವಾ ಮನೆ ನಿರ್ಮಾಣಕ್ಕಾಗಿ ಪಡೆಯುವ ದೊಡ್ಡ ಮೊತ್ತದ ಸಾಲವೇ ಗೃಹ ಸಾಲ. ಈ ಸಾಲದಲ್ಲಿ ಮನೆಯೇ ಬ್ಯಾಂಕ್ ಸಾಲಕ್ಕೆ ಆಧಾರವಾಗಿರುತ್ತದೆ.

ಸಾಮಾನ್ಯವಾಗಿ 10 ವರ್ಷ, 15 ವರ್ಷ, 20 ವರ್ಷ, 25 ವರ್ಷ ಹೀಗೆ ದೀರ್ಘಾವಧಿಗೆ ಗೃಹ ಸಾಲ ಪಡೆಯಲಾಗುತ್ತದೆ. ಬ್ಯಾಂಕ್‌ಗಳು ಮನೆ/ ಆಸ್ತಿಯ ಮೌಲ್ಯದ ಶೇ 80ರಷ್ಟು ಮೊತ್ತವನ್ನು ಸಾಲವಾಗಿ ಕೊಡುತ್ತವೆ. ಅಂದರೆ ಆಸ್ತಿಯ ಮೌಲ್ಯ ₹1 ಕೋಟಿ ಇದ್ದರೆ ಬ್ಯಾಂಕ್‌ಗಳು ₹80 ಲಕ್ಷದ ವರೆಗೆ ಸಾಲ ಒದಗಿಸುತ್ತವೆ. ಬೇರೆ ಸಾಲಗಳಿಗೆ ಹೋಲಿಕೆ ಮಾಡಿ ನೋಡಿದಾಗ ಗೃಹ ಸಾಲದ ಬಡ್ಡಿದರ ಕಡಿಮೆ ಇರುತ್ತದೆ. ಸದ್ಯದ ಗೃಹ ಸಾಲದ ಬಡ್ಡಿದರ ಶೇ 9ರ ಆಸುಪಾಸಿನಲ್ಲಿದೆ.

ಗೃಹ ಸಾಲ ಪಡೆದ ವ್ಯಕ್ತಿ ಮರುಪಾವತಿ ಮಾಡದಿದ್ದರೆ ಮನೆಯನ್ನು ಬ್ಯಾಂಕ್ ವಶಕ್ಕೆ ಪಡೆದು ಹರಾಜಿನಲ್ಲಿ ಮಾರಾಟ ಮಾಡುತ್ತದೆ.

* ವಾಹನ ಸಾಲ: ಹೊಸ ಅಥವಾ ಹಳೆಯ ಕಾರು, ಬೈಕ್ ಇನ್ಯಾವುದೇ ಮಾದರಿಯ ವಾಹನ ಖರೀದಿಸಲು ಪಡೆಯುವ ಸಾಲವೇ ವಾಹನ ಸಾಲ. ಇಲ್ಲಿ ವಾಹನವನ್ನೇ ಆಧಾರವಾಗಿಟ್ಟುಕೊಂಡು ಸಾಲ ಒದಗಿಸಲಾಗುತ್ತದೆ. ಸಾಮಾನ್ಯವಾಗಿ 3ರಿಂದ 7 ವರ್ಷದ ಅವಧಿಗೆ ವಾಹನ ಸಾಲ ಕೊಡಲಾಗುತ್ತದೆ. ಸಾಲ ಪಡೆದ ವ್ಯಕ್ತಿ ಅದರ ಮರುಪಾವತಿ ಮಾಡದಿದ್ದರೆ ವಾಹನವನ್ನು ಬ್ಯಾಂಕ್ ವಶಕ್ಕೆ ಪಡೆದುಕೊಳ್ಳುತ್ತದೆ. ಸದ್ಯದ ವಾಹನ ಸಾಲದ ಬಡ್ಡಿದರ ಶೇ 8.5ರಿಂದ ಶೇ 11ರ‌ ವರೆಗೂ ಇದೆ.

* ಚಿನ್ನದ ಸಾಲ: ಬ್ಯಾಂಕ್‌ಗೆ ಚಿನ್ನ ಅಡಮಾನ ಇಟ್ಟು ಪಡೆದುಕೊಳ್ಳುವ ಸಾಲಕ್ಕೆ ಚಿನ್ನದ ಸಾಲ ಎನ್ನಲಾಗುತ್ತದೆ. ಬಂಗಾರದ ಮೌಲ್ಯದ ಶೇ 90ರಷ್ಟು ಮೊತ್ತವನ್ನು ಬ್ಯಾಂಕ್‌ಗಳು ಸಾಲದ ರೂಪದಲ್ಲಿ ಕೊಡುತ್ತವೆ. ಸಾಮಾನ್ಯವಾಗಿ ಗರಿಷ್ಠ 5 ವರ್ಷದ ಅವಧಿಗೆ ಚಿನ್ನದ ಸಾಲ ಲಭಿಸುತ್ತದೆ. ಚಿನ್ನದ ಸಾಲ ಪಡೆದಾಗ ಬಡ್ಡಿಯನ್ನು ಮಾಸಿಕ ಕಂತಿನ ಲೆಕ್ಕಾಚಾರದಲ್ಲಿ (ಇಎಂಐ) ಪಾವತಿಸಲು ಅವಕಾಶವಿದ್ದು, ಸಾಲದ ಅವಧಿಯ ಕೊನೆಗೆ ಪೂರ್ತಿ ಅಸಲು ಕಟ್ಟಬಹುದಾಗಿದೆ. ಹಾಗಾಗಿ, ಬಂಗಾರದ ಸಾಲ ಜನಪ್ರಿಯವಾಗಿದೆ.

* ಆಸ್ತಿ ಮೇಲೆ ಸಾಲ: ಮನೆ ಅಥವಾ ವಾಣಿಜ್ಯ ಆಸ್ತಿಯನ್ನು ಒತ್ತೆ ಇಟ್ಟು ಪಡೆಯುವ ಸಾಲಕ್ಕೆ ಆಸ್ತಿ ಮೇಲಿನ ಸಾಲ ಎಂದು ಕರೆಯಬಹುದು. ಆಸ್ತಿ ಮೌಲ್ಯದ ಶೇ 65ರಿಂದ ಶೇ 70ರಷ್ಟು ಮೊತ್ತದ ಸಾಲ ನಿಮಗೆ ಸಿಗುತ್ತದೆ. 

* ಷೇರು/ ಬಾಂಡ್‌ಗಳ ಮೇಲೆ ಸಾಲ: ನೀವು ಯಾವುದಾದರು ಕಂಪನಿಯ ಷೇರುಗಳು, ಬಾಂಡ್‌ಗಳು, ಮ್ಯೂಚುಯಲ್ ಫಂಡ್‌ಗಳ ಮೇಲೆ ಹೂಡಿಕೆ ಮಾಡಿದ್ದರೆ, ಅದನ್ನು ಆಧಾರವಾಗಿಟ್ಟು ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದು. ಷೇರುಗಳ ಮೌಲ್ಯದ ಶೇ 50ರಷ್ಟು ಮೊತ್ತವನ್ನು ಹಣಕಾಸು ಸಂಸ್ಥೆಗಳು ಸಾಲವಾಗಿ ಕೊಡುತ್ತವೆ.

‌ಅಡಮಾನರಹಿತ ಸಾಲಗಳು:

* ವೈಯಕ್ತಿಕ ಸಾಲ: ವೈಯಕ್ತಿಕ ಸಾಲ ಪಡೆಯಲು ಬ್ಯಾಂಕ್‌ನಲ್ಲಿ ಯಾವುದೇ ಅಡಮಾನ ಇಡಬೇಕಾಗಿಲ್ಲ. ಈ ಸಾಲವನ್ನು ವೈದ್ಯಕೀಯ ತುರ್ತು, ಪ್ರವಾಸ ಹೀಗೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಬಹುದು. ವೈಯಕ್ತಿಕ ಸಾಲದ ಹಣವನ್ನು ಇಂಥದ್ದೇ ಉದ್ದೇಶಕ್ಕೆ ಬಳಸಬೇಕು ಎಂಬ ನಿಬಂಧನೆಯಿಲ್ಲ. ಇಲ್ಲಿ ಎಷ್ಟು ಮೊತ್ತದ ಸಾಲ ಸಿಗುತ್ತದೆ ಎನ್ನುವುದು ನಿಮ್ಮ ಆದಾಯ ಮತ್ತು ಕ್ರೆಡಿಟ್ ಸ್ಕೋರ್ ಮೇಲೆ ಅವಲಂಬಿಸಿರುತ್ತದೆ. 

ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲ ಎಂದರೆ ಬ್ಯಾಂಕ್ ನಿಮ್ಮ ವೈಯಕ್ತಿಕ ಸಾಲದ ಅರ್ಜಿಯನ್ನು ತಿರಸ್ಕರಿಸಬಹುದು. ಮದುವೆ ಸಾಲ, ಪ್ರವಾಸಕ್ಕಾಗಿ ಸಾಲ, ಮನೆ ನವೀಕರಣ ಸಾಲ, ಶಿಕ್ಷಣ ಸಾಲ, ಪಿಂಚಣಿ ಸಾಲಗಳೆಲ್ಲವೂ ವೈಯಕ್ತಿಕ ಸಾಲಗಳೇ.

* ತ್ವರಿತ ಸಾಲ (ಇನ್‌ಸ್ಟೆಂಟ್ ಲೋನ್): ಹಣಕಾಸಿನ ತುರ್ತು ಅಗತ್ಯ ಬಿದ್ದಾಗ ತಕ್ಷಣಕ್ಕೆ ಸಿಗುವ ಸಣ್ಣ ಮೊತ್ತದ ಸಾಲವನ್ನು ತ್ವರಿತ ಸಾಲ ಎಂದು ಪರಿಗಣಿಸಬಹುದು. ತ್ವರಿತ ಸಾಲ ಸಹ ಒಂದು ರೀತಿಯ ವೈಯಕ್ತಿಕ ಸಾಲವಾಗಿದೆ.

* ಅಲ್ಪಾವಧಿ ಬ್ಯುಸಿನೆಸ್ ಸಾಲ: ಉದ್ಯಮವೊಂದು ಹಣಕಾಸಿನ ಕೊರತೆ ಎದುರಿಸಿದಾಗ ಅಲ್ವಾವಧಿ ಬ್ಯುಸಿನೆಸ್ ಸಾಲದ ಮೊರೆ ಹೋಗಬಹುದು. ಈ ಸಾಲ ಪಡೆಯಲು ಬ್ಯಾಂಕ್‌ನ ಕೆಲ ನಿಬಂಧನೆಗಳನ್ನು ಪೂರೈಸಬೇಕಾಗುತ್ತದೆ.

* ಕ್ರೆಡಿಟ್ ಕಾರ್ಡ್: ತುರ್ತು ಅಗತ್ಯಗಳಿಗೆ ಕ್ರೆಡಿಟ್ ಕಾರ್ಡ್ ಸಾಲ ಬಳಸಿದರೆ ತಪ್ಪಿಲ್ಲ. ಆದರೆ, ಲೆಕ್ಕಾಚಾರವಿಲ್ಲದ ಖರ್ಚಿಗೆ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ಬಳಿಕ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡದಿದ್ದರೆ ದೊಡ್ಡಮಟ್ಟದ ಬಡ್ಡಿ ಹೊರೆ ಹೊರಬೇಕಾಗುತ್ತದೆ. ಹಾಗಾಗಿ, ಕ್ರೆಡಿಟ್ ಕಾರ್ಡ್ ಸಾಲವನ್ನು ಎಚ್ಚರಿಕೆಯಿಂದ ಬಳಸಿ.

ಕೊನೆಯ ಮಾತು: ಯಾವ ಸಾಲ ನಮಗೆ ಸಂಪತ್ತು ಸೃಷ್ಟಿಸಿಕೊಳ್ಳಲು ನೆರವಾಗುತ್ತದೋ ಅಂತಹ ಸಾಲ ಪಡೆದರೆ ಸಮಸ್ಯೆಯಿಲ್ಲ. ಉದಾಹರಣೆಗೆ ಗೃಹ ಸಾಲದಿಂದ ಆಸ್ತಿ ಗಳಿಕೆ ಸಾಧ್ಯವಾಗುತ್ತದೆ. ಆದರೆ, ಅನುತ್ಪಾದಕ ಸಾಲಗಳನ್ನು ಆದಷ್ಟು ಕಡಿಮೆ ಮಾಡಬೇಕು. ಉದಾಹರಣೆಗೆ ವೈಯಕ್ತಿಕ ಸಾಲ ಪಡೆದು ವಿದೇಶ ಪ್ರವಾಸಕ್ಕೆ ಹೋಗುವುದು ತಪ್ಪಾಗುತ್ತದೆ. ವೈಯಕ್ತಿಕ ಸಾಲವನ್ನು ತುರ್ತು ಅಗತ್ಯಗಳಿಗೆ ಮಾತ್ರ ಬಳಸಬೇಕು. ನೆನಪಿರಲಿ ನಿಮ್ಮ ಸಾಲಗಳ ಒಟ್ಟು ಕಂತು ನಿಮ್ಮ ತಿಂಗಳ ಆದಾಯದ ಶೇ 30ರಿಂದ 35ಕ್ಕಿಂತ ಹೆಚ್ಚಾಗಬಾರದು.

ಎರಡನೇ ವಾರವೂ ಜಿಗಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರವೂ ಗಳಿಕೆ ಕಂಡಿವೆ. 76922 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.39ರಷ್ಟು ಗಳಿಸಿಕೊಂಡಿದೆ. 23465 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.75ರಷ್ಟು ಜಿಗಿದಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವ ಬಗ್ಗೆ ಇದ್ದ ಅನಿಶ್ಚಿತತೆ ಬಗೆಹರಿದ ಬಳಿಕ ಷೇರು ಮಾರುಕಟ್ಟೆಗಳು ದೊಡ್ಡ ಪ್ರಮಾಣದಲ್ಲಿ ಚೇತರಿಸಿಕೊಂಡಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಐ.ಟಿ ಮತ್ತು ಎಫ್ಎಂಸಿಜಿ ಹೊರತುಪಡಿಸಿ ಉಳಿದ ಎಲ್ಲಾ ಸೂಚ್ಯಂಕಗಳು ಗಳಿಕೆ ಕಂಡಿವೆ. ರಿಯಲ್ ಎಸ್ಟೇಟ್ ಶೇ 5.57 ಮಾಧ್ಯಮ ಶೇ 4.42 ಅನಿಲ ಮತ್ತು ತೈಲ ಶೇ 3.41 ವಾಹನ ಉತ್ಪಾದನೆ ಶೇ 2.81 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.5 ಎನರ್ಜಿ ಸೂಚ್ಯಂಕ ಶೇ 1.88 ಫಾರ್ಮಾ ಶೇ 1.62ರಷ್ಟು ಗಳಿಸಿಕೊಂಡಿವೆ.

ನಿಫ್ಟಿ ಐ.ಟಿ ಸೂಚ್ಯಂಕ ಶೇ 1.62ರಷ್ಟು ಕುಸಿದಿದ್ದರೆ ಎಫ್‌ಎಂಸಿಜಿ ವಲಯ ಶೇ 1.26ರಷ್ಟು ತಗ್ಗಿದೆ. ಗಳಿಕೆ–ಇಳಿಕೆ: ನಿಫ್ಟಿಯಲ್ಲಿ ಶ್ರೀರಾಮ್ ಫೈನಾನ್ಸ್ ಶೇ 9.34 ಅಲ್ಟ್ರಾಟೆಕ್ ಸಿಮೆಂಟ್ ಶೇ 7.66 ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಶೇ 6.26 ಒಎನ್‌ಜಿಸಿ ಶೇ 5.68 ಸಿಪ್ಲಾ ಶೇ 4.55 ಬಿಪಿಸಿಎಲ್ ಶೇ 4.45 ಎಲ್ ಆ್ಯಂಡ್‌ ಟಿ ಶೇ 4.35 ಪವರ್ ಗ್ರಿಡ್ ಶೇ 4.02ರಷ್ಟು ಹೆಚ್ಚಳ ಕಂಡಿವೆ.

ಹಿಂದುಸ್ತಾನ್ ಯೂನಿಲಿವರ್ ಶೇ 3.78 ಇನ್ಫೊಸಿಸ್ ಶೇ 2.92 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 2.06 ಟಾಟಾ ಕನ್ಸ್ಯೂಮರ್ ಶೇ 2.02 ಐಟಿಸಿ ಶೇ 1.82 ಟಿಸಿಎಸ್ ಶೇ 1.57 ಮತ್ತು ಐಸಿಐಸಿಐ ಬ್ಯಾಂಕ್ ಶೇ 1.5ರಷ್ಟು ಕುಸಿದಿವೆ. ಮುನ್ನೋಟ: ಮಾರುಕಟ್ಟೆಯಲ್ಲಿ ಸದ್ಯದ ಸ್ಥಿತಿಯಲ್ಲಿ ಏರಿಳಿತದ ಹಾದಿ ಮುಂದುವರಿಯಲಿದೆ. ಸೂಚ್ಯಂಕಗಳು ಕುಸಿತ ಕಂಡಾಗ ಆಯ್ದ ಉತ್ತಮ ಕಂಪನಿಗಳ ಷೇರು ಖರೀಸುವುದನ್ನು ಪರಿಗಣಿಸಬಹುದು. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ. ಬಕ್ರೀದ್ ಹಬ್ಬದ ಪ್ರಯುಕ್ತ ಜೂನ್ 17ರಂದು ಷೇರುಪೇಟೆಗೆ ರಜೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT