ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಐ ಟ್ಯಾಗ್ ಪಡೆದ ಮೇಲೆ ಬೇಡಿಕೆ: ₹600 ಕೋಟಿ ಮೊತ್ತದ ‘ಶಿರಸಿ ಸುಪಾರಿ’ ರಫ್ತು

Last Updated 1 ಸೆಪ್ಟೆಂಬರ್ 2021, 21:53 IST
ಅಕ್ಷರ ಗಾತ್ರ

ಶಿರಸಿ: ಜಾಗತಿಕ ಸೂಚಿ (ಜಿಐ ಟ್ಯಾಗ್) ಪಡೆದ ಬಳಿಕ ‘ಶಿರಸಿ ಸುಪಾರಿ’ ಎರಡು ವರ್ಷಗಳಲ್ಲಿ ₹ 600 ಕೋಟಿ ಮೊತ್ತದ ರಫ್ತು ವಹಿವಾಟು ಕಂಡಿದೆ.

ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ಭಾಗದಲ್ಲಿ ಬೆಳೆಯಲಾಗುವ ಕೆಂಪಡಿಕೆ, ಚಾಲಿಗೆ ಇಲ್ಲಿನ ಟಿಎಸ್ಎಸ್ ಸಂಸ್ಥೆ 2019ರ ಮಾರ್ಚ್‍ನಲ್ಲಿ ಜಿಐ ಟ್ಯಾಗ್ ಪಡೆದುಕೊಂಡಿದೆ. ಈ ಟ್ಯಾಗ್ ಅಡಿಯಲ್ಲಿ ಸಂಸ್ಥೆ 2.04 ಲಕ್ಷ ಕ್ವಿಂಟಲ್ ಅಡಿಕೆ ವಹಿವಾಟು ನಡೆಸಿದೆ. ಇದು ದಾಖಲೆ ಪ್ರಮಾಣದ ವಹಿವಾಟು ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಜಿಐ ಟ್ಯಾಗ್ ಪಡೆಯುವುದಕ್ಕೂ ಮೊದಲಿನ ಆರ್ಥಿಕ ವಹಿವಾಟಿಗೆ ಹೋಲಿಕೆ ಮಾಡಿದರೆ ಎರಡು ವರ್ಷಗಳಲ್ಲಿ ವ್ಯಾಪಾರದ ಮೊತ್ತ ಶೇ 25ರಿಂದ 30ರಷ್ಟು ಏರಿಕೆ ಕಂಡಿದೆ ಎಂದು ಸಂಸ್ಥೆ ಹೇಳಿದೆ.

‘ಜಿಐ ಟ್ಯಾಗ್ ಪಡೆದುಕೊಂಡ ಬಳಿಕ ಉತ್ತರ ಭಾರತದ ಮಾರುಕಟ್ಟೆಯಲ್ಲಿ ಈ ಭಾಗದ ಅಡಿಕೆಗೆ ಬೇಡಿಕೆ ವೃದ್ಧಿಯಾಗಿದೆ. ದರವೂ ಹೆಚ್ಚಿದೆ’ ಎನ್ನುತ್ತಾರೆ ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ.

‘ರೈತರಿಂದ ಖರೀದಿಸಿದ ಅಡಿಕೆಯನ್ನು ಗುಣಮಟ್ಟ ಆಧರಿಸಿ ಪ್ರತ್ಯೇಕಿಸುತ್ತೇವೆ. ಬೆಟ್ಟೆ, ಕೆಂಪಡಿಕೆ, ಚಾಲಿಯ ಪ್ರತ್ಯೇಕ ಬ್ರ್ಯಾಂಡಿಂಗ್ ಗಳನ್ನು ಪ್ರಾದೇಶಿಕ ಬೇಡಿಕೆಗೆ ಅನುಗುಣವಾಗಿ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಕ್ಕೆ ಕಳುಹಿಸುತ್ತಿದ್ದೇವೆ. ರಾಜ್ಯದಲ್ಲೂ ಹಲವೆಡೆ ಬೇಡಿಕೆ ಇದೆ’ ಎನ್ನುತ್ತಾರೆ ಅವರು.

‘ಅಡಿಕೆ ಬೆಲೆ ಸ್ಥಿತ್ಯಂತರಗೊಳ್ಳುತ್ತಲೇ ಇತ್ತು. ಜಿಐ ಟ್ಯಾಗ್ ಪಡೆದ ಬಳಿಕ ‘ಶಿರಸಿ ಸುಪಾರಿ’ ಬ್ರ್ಯಾಂಡ್ ಅಡಿಯಲ್ಲಿ ರಫ್ತು ಚಟುವಟಿಕೆ ಕೈಗೊಂಡಿದ್ದು ವಹಿವಾಟು ಹೆಚ್ಚುವ ಜತೆಗೆ ಉತ್ತಮ ಬೆಲೆ ಸಿಗುವಂತೆ ಮಾಡಿದೆ’ ಎಂದು ಅಭಿಪ್ರಾಯಪಟ್ಟರು.

*
ಜಿಐ ಟ್ಯಾಗ್ ಪಡೆದ ಬಳಿಕ ಶಿರಸಿ ಸುಪಾರಿಯ ಗುಣಮಟ್ಟದ ಬಗ್ಗೆ ಉತ್ತರ ಭಾರತವೂ ಸೇರಿದಂತೆ ದೇಶದ ವಿವಿಧೆಡೆ ಗ್ರಾಹಕರಲ್ಲಿ ವಿಶ್ವಾಸ ಮೂಡಿದ್ದೆ ಉತ್ತಮ ಬೆಲೆ ದೊರೆಯಲು ಕಾರಣ.
-ರವೀಶ ಹೆಗಡೆ, ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT