ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದಲ್ಲೆ ತಯಾರಿಸಿ’: ಜಾಗತಿಕ ಸಂಸ್ಥೆಗಳಿಗೆ ಬಿಎಚ್‌ಇಎಲ್‌ ಆಹ್ವಾನ

Last Updated 4 ಮೇ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ತನ್ನ ತಯಾರಿಕಾ ಘಟಕಗಳನ್ನು ಬಳಸಿಕೊಂಡು ಭಾರತದಲ್ಲಿ ತಮ್ಮ ನೆಲೆ ವಿಸ್ತರಿಸಲು ಸರ್ಕಾರಿ ಸ್ವಾಮ್ಯದ ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ (ಬಿಎಚ್‌ಇಎಲ್‌) ಜಾಗತಿಕ ಮಟ್ಟದ ತಯಾರಿಕಾ ಕಂಪನಿಗಳಿಗೆ ಆಹ್ವಾನ ನೀಡಿದೆ.

ಚೀನಾದಲ್ಲಿನ ತಮ್ಮ ತಯಾರಿಕಾ ಘಟಕಗಳನ್ನು ಇತರ ದೇಶಗಳಿಗೆ ಸ್ಥಳಾಂತರಿಸಲು ತಯಾರಿಕಾ ಕ್ಷೇತ್ರದ ಜಾಗತಿಕ ದೈತ್ಯ ಸಂಸ್ಥೆಗಳು ಉದ್ದೇಶಿಸಿವೆ. ಈ ಅವಕಾಶ ಬಳಸಿಕೊಳ್ಳಲು ‘ಬಿಎಚ್‌ಇಎಲ್‌’ ಮುಂದಾಗಿದೆ. ಭಾರತದಲ್ಲಿ ತಮ್ಮ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಮುಂದೆ ಬರುವ ಕಂಪನಿಗಳು ತನ್ನ ಪಾಲುದಾರಿಕೆಯಡಿ ತಮ್ಮ ಉದ್ದೇಶವನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದಾಗಿದೆ ಎಂದು ಕೇಂದ್ರೋದ್ಯಮವು ವಿದೇಶಿ ಕಂಪನಿಗಳಿಗೆ ಸೂಚಿಸಿದೆ.

‘ಕೋವಿಡ್‌–19’ ಪಿಡುಗಿನ ಕಾರಣಕ್ಕೆ ವಿಶ್ವದಾದ್ಯಂತ ಆರ್ಥಿಕ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗಿದೆ. ತಯಾರಿಕಾ ಚಟುವಟಿಕೆಗಳು ಒಂದೆಡೆಯೇ ಕೇಂದ್ರೀಕೃತಗೊಂಡಿರುವುದರ ಅಪಾಯವು ಈಗ ಎಲ್ಲರ ಅನುಭವಕ್ಕೆ ಬರುತ್ತಿದೆ. ತಯಾರಿಕೆ ಚಟುವಟಿಕೆ ಮತ್ತು ಪೂರೈಕೆ ವ್ಯವಸ್ಥೆಯು ಒಂದೆಡೆಯೇ ಇರುವುದರ ಬದಲು ವಿಶ್ವದ ಬೇರೆ, ಬೇರೆ ದೇಶಗಳಲ್ಲಿ ಇರುವುದು ಜಾಗತಿಕ ಆರ್ಥಿಕತೆಗೆ ಹೆಚ್ಚು ಪ್ರಯೋಜನಕಾರಿ ಆಗಿರಲಿದೆ ಎನ್ನುವ ಅನಿಸಿಕೆ ಎಲ್ಲೆಡೆ ಕಂಡು ಬರುತ್ತಿದೆ.

ಚೀನಾದಿಂದ ಕಾಲ್ತೆಗೆಯುವ ಕಂಪನಿಗಳನ್ನುಆಹ್ವಾನಿಸುವುದಕ್ಕೆ ಭಾರತಕ್ಕೆ ವಿಪುಲ ಅವಕಾಶಗಳಿವೆ. ದೇಶದಾದ್ಯಂತ 16 ತಯಾರಿಕಾ ಘಟಕಗಳನ್ನು ಹೊಂದಿರುವ ಬಿಎಚ್‌ಇಎಲ್‌ ವಶದಲ್ಲಿ ಹೆಚ್ಚುವರಿ ಭೂಮಿಯೂ ಇದೆ. ಜತೆಗೆ ಕೈಗಾರಿಕೆ, ವಾಣಿಜ್ಯ ಮತ್ತು ವಸತಿ ಉದ್ದೇಶದ ಸ್ಥಳಾವಕಾಶವೂ ಸಾಕಷ್ಟಿದೆ. ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಪಳಗಿದ 9 ಸಾವಿರದಷ್ಟು ಎಂಜಿನಿಯರ್‌ ಪಡೆ ಇದೆ.

ನ್ಯಾನೊ ತಂತ್ರಜ್ಞಾನ, ಪವರ್‌ ಎಲೆಕ್ಟ್ರಾನಿಕ್ಸ್‌,ಸೇರಿದಂತೆ 16 ಕ್ಷೇತ್ರಗಳಲ್ಲಿ ‘ಬಿಎಚ್‌ಇಎಲ್‌‘ ಪರಿಣತಿ ಹೊಂದಿದೆ. ಮಾಲಿನ್ಯ ನಿಯಂತ್ರಣ ಒಳಗೊಂಡಂತೆ ಐದು ಸಂಶೋಧನಾ ಕೇಂದ್ರಗಳನ್ನೂ ಹೊಂದಿದೆ. ಜಾಗತಿಕ ತಯಾರಿಕಾ ಮತ್ತು ಎಂಜಿನಿಯರಿಂಗ್‌ ಕಂಪನಿಗಳ ಜತೆ ಪಾಲುದಾರಿಕೆ ಹೊಂದಿದೆ. ಈ ಎಲ್ಲ ಕಾರಣಗಳಿಂದ, ಜಾಗತಿಕ ಮಟ್ಟದ ಯಾವುದೇ ತಯಾರಿಕಾ ಕಂಪನಿಯು ಭಾರತದಲ್ಲಿ ನೆಲೆವೂರಲು ಅಗತ್ಯ ನೆರವು ಕಲ್ಪಿಸಲು ತನಗೆ ಸಾಧ್ಯವಿದೆ. ಈ ಮೂಲಕ ’ಭಾರತದಲ್ಲಿಯೇ ತಯಾರಿಸಿ‘ ಚಿಂತನೆಯನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT