ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಬ್ರೆಂಟ್‌ ಕಚ್ಚಾ ತೈಲ ದರ; ಪ್ರತಿ ಬ್ಯಾರಲ್‌ಗೆ 99 ಡಾಲರ್‌ಗಿಂತ ಕಡಿಮೆ

Last Updated 11 ಏಪ್ರಿಲ್ 2022, 13:28 IST
ಅಕ್ಷರ ಗಾತ್ರ

ಲಂಡನ್‌: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ಪ್ರತಿ ಬ್ಯಾರಲ್‌ಗೆ 4 ಡಾಲರ್‌ಗಳಷ್ಟು ಕಡಿಮೆಯಾಗಿದ್ದು, ಸೋಮವಾರ 100 ಡಾಲರ್‌ಗಿಂತ ಕಡಿಮೆ ದರದಲ್ಲಿ ವಹಿವಾಟು ನಡೆದಿದೆ. ಚೀನಾದಲ್ಲಿ ಕೋವಿಡ್‌–19 ಲಾಕ್‌ಡೌನ್‌ ಮುಂದುವರಿದಿರುವುದು ಮತ್ತು ತುರ್ತು ಬಳಕೆ ಸಂಗ್ರಹಗಾರಗಳಿಂದ ಕಚ್ಚಾ ತೈಲ ಮತ್ತು ತೈಲ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿರುವುದು ತೈಲ ದರದ ಮೇಲೆ ಪರಿಣಾಮ ಬೀರಿದೆ.

ಜೂನ್‌ ತಿಂಗಳಲ್ಲಿ ಪೂರೈಕೆಯಾಗಬೇಕಾದ ಬ್ರೆಂಟ್‌ ಕಚ್ಚಾ ತೈಲವು ಪ್ರತಿ ಬ್ಯಾರಲ್‌ಗೆ ಶೇಕಡ 3.8ರಷ್ಟು ಇಳಿಕೆಯಾಗಿ 98.85 ಡಾಲರ್‌ ತಲುಪಿದೆ. ಅಮೆರಿಕದ ವೆಸ್ಟ್‌ ಟೆಕ್ಸಸ್‌ ಇಂಟರ್‌ಮಿಡಿಯೇಟ್‌ (ಡಬ್ಲ್ಯುಟಿಎಸ್‌) ದರ್ಜೆಯ ಕಚ್ಚಾ ತೈಲ ದರವು ಪ್ರತಿ ಬ್ಯಾರಲ್‌ಗೆ ಶೇಕಡ 4.3ರಷ್ಟು ಕುಸಿದು, 94.07 ಡಾಲರ್‌ಗಳಲ್ಲಿ ವಹಿವಾಟು ನಡೆದಿದೆ.

2022–23ರಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಸರಾಸರಿ 102 ಡಾಲರ್‌ ಇರಲಿದೆ ಎಂದು ಬ್ಯಾಂಕ್‌ ಆಫ್‌ ಅಮೆರಿಕ ಅಂದಾಜಿಸಿದ್ದರೆ, ಸ್ವಿಸ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ ಯುಬಿಎಸ್‌ ಜೂನ್‌ನ ಬ್ರೆಂಟ್‌ ಕಚ್ಚಾ ತೈಲ ದರ ಪ್ರತಿ ಬ್ಯಾರಲ್‌ಗೆ 115 ಡಾಲರ್‌ ಅಂದಾಜಿಸಿದೆ.

ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಮುಂದಿನ ಆರು ತಿಂಗಳಲ್ಲಿ 6 ಕೋಟಿ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲ ಬಿಡುಗಡೆ ಮಾಡಲಿವೆ. ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಶುರು ಮಾಡಿದ ಬೆನ್ನಲ್ಲೇ ಹಲವು ರಾಷ್ಟ್ರಗಳು ರಷ್ಯಾ ವಿರುದ್ಧ ನಿರ್ಬಂಧ ವಿಧಿಸಿವೆ. ಅದರಿಂದಾಗಿ ರಷ್ಯಾದ ಕಚ್ಚಾ ತೈಲ ಪೂರೈಕೆಗೆ ಹೊಡೆತ ಬಿದ್ದಿದ್ದು, ಕೊರತೆ ಕಡಿಮೆ ಮಾಡುವ ನಿಟ್ಟಿನಲ್ಲಿ ತುರ್ತು ಬಳಕೆಗಾಗಿ ಸಂಗ್ರಹಿಸಲಾಗಿರುವ ಕಚ್ಚಾ ತೈಲವನ್ನು ಬಿಡುಗಡೆ ಮಾಡಲು ಹಲವು ರಾಷ್ಟ್ರಗಳು ನಿರ್ಧರಿಸಿವೆ.

ಚೀನಾದಲ್ಲಿ ಓಮೈಕ್ರಾನ್‌ ಕೊರೊನಾ ವೈರಸ್‌ ಸೋಂಕು ವ್ಯಾಪಿಸಿರುವುದರಿಂದ ಶಾಂಘೈನಲ್ಲಿ ಕಠಿಣ ಲಾಕ್‌ಡೌನ್‌ ಜಾರಿಯಲ್ಲಿದೆ. ನಾಗರಿಕರ ಓಡಾಟ ಮತ್ತು ಸಂಚಾರಕ್ಕೆ ನಿರ್ಬಂಧ ಇರುವುದರಿಂದ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿವೆ. ತೈಲ ಬಳಕೆ ತೀವ್ರವಾಗಿ ಕಡಿತಗೊಂಡಿದ್ದು, ಬೇಡಿಕೆ ಕುಸಿದಿದೆ. ಚೀನಾ ಜಗತ್ತಿನಲ್ಲೇ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ.

ಭಾರತದಲ್ಲಿ ಪೆಟ್ರೋಲ್‌ ಮಾರಾಟ ಮೂರು ವರ್ಷಗಳ ದಾಖಲೆಯ ಮಟ್ಟ ತಲುಪಿದ್ದು, ತೈಲ ಬೇಡಿಕೆ ಹೆಚ್ಚಳವಾಗಿದೆ. ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಪ್ರಯತ್ನವನ್ನು ದೇಶದ ರಿಫೈನರಿಗಳು ಮಾಡುತ್ತಿವೆ. ಈ ನಡುವೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಬಗ್ಗೆ ಅಮೆರಿಕ ತಕರಾರು ತೆಗೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT