ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕರ್ಫ್ಯೂ: ಹಣ್ಣು, ತರಕಾರಿ ದರ ವಿಪರೀತ ಏರಿಕೆ

ಚಿಲ್ಲರೆ–ಸಗಟು ದರಗಳಲ್ಲಿ ಅಜಗಜಾಂತರ
Last Updated 2 ಮೇ 2021, 20:19 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಕರ್ಫ್ಯೂ ಹೆಸರಿನಲ್ಲಿ ಕೆಲ ಚಿಲ್ಲರೆ ವ್ಯಾಪಾರಿಗಳು ಹಣ್ಣು ಹಾಗೂ ತರಕಾರಿ ದರಗಳನ್ನು ಮನಬಂದಂತೆ ಏರಿಸಿದ್ದಾರೆ.

ಇದರಿಂದ ದುಬಾರಿಯಾಗಿರುವ ಹಣ್ಣು,ತರಕಾರಿಯನ್ನು ಗ್ರಾಹಕರು ಅನಿವಾರ್ಯವಾಗಿ ಖರೀದಿಸುವ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಕರ್ಫ್ಯೂ ವೇಳೆ ಅಗತ್ಯ ಸೇವೆಯಡಿ ಹಣ್ಣು, ತರಕಾರಿ ಖರೀದಿಗೆ ಬೆಳಿಗ್ಗೆ 10 ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈಗ ತಳ್ಳುಗಾಡಿ ವ್ಯಾಪಾರಿಗಳು ಸಂಜೆ 6 ಗಂಟೆಯವರೆಗೆ ಹಣ್ಣು, ತರಕಾರಿ ಮಾರಾಟ ಮಾಡಲು ಅವಧಿ ವಿಸ್ತರಿಸಿದೆ.

‘ಹಣ್ಣು,ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಬಾರದು’ ಎಂದು ಸರ್ಕಾರಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದೆ. ಆದರೂ ಕೆಲವು ಚಿಲ್ಲರೆ ವ್ಯಾಪಾರಿಗಳು ಪರಿಸ್ಥಿತಿ ದುರ್ಲಾಭ ಪಡೆದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಹಣ್ಣು ಮತ್ತು ತರಕಾರಿಗಳ ಸಗಟು ದರಗಳು ಎಂದಿನಂತೆ ಸ್ಥಿರವಾಗಿವೆ. ಆದರೆ, ಚಿಲ್ಲರೆ ವ್ಯಾಪಾರಿಗಳು ಮಾತ್ರ ದುಬಾರಿ ದರಕ್ಕೇ ಹಣ್ಣು,ತರಕಾರಿಗಳನ್ನು ಮಾರುತ್ತಿದ್ದಾರೆ. ದಾಳಿಂಬೆ ಸಗಟು ದರ ಪ್ರತಿ ಕೆ.ಜಿಗೆ ₹150 ಇದ್ದರೆ, ಚಿಲ್ಲರೆ ಮಾರಾಟಗಾರರು ₹250ರವರೆಗೆ ಮಾರುತ್ತಿದ್ದಾರೆ. ಕಿತ್ತಳೆ ಹಾಗೂ ಮೂಸಂಬಿ ದರ ಸಾಮಾನ್ಯವಾಗಿ ₹70ರ ಗಡಿ ದಾಟುತ್ತಿರಲಿಲ್ಲ, ಈಗ ₹150ರವರೆಗೆ ಏರಿಕೆಯಾಗಿದೆ.

‘ಕೊರೊನಾ ಇರುವುದರಿಂದ ಮೊದಲಿನಂತೆ ನಮಗೆ ವ್ಯಾಪಾರ ನಡೆಯುತ್ತಿಲ್ಲ. ಕರ್ಫ್ಯೂ ಇರುವುದರಿಂದ ಗ್ರಾಹಕರು ನಿದಿತ ಅವಧಿಯಲ್ಲಿ ಮಾತ್ರ ಖರೀದಿಗೆ ಬರುತ್ತಾರೆ. ವಾಹನ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಹಣ್ಣು,ತರಕಾರಿ ಪೂರೈಕೆಗೂ ಹೆಚ್ಚು ಖರ್ಚಾಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಬೆಲೆಗೆ ಮಾರಿದರೆ ಮಾತ್ರ ನಾವು ಜೀವನ ನಡೆಸಲು ಸಾಧ್ಯ’ ಎಂದು ಚಿಲ್ಲರೆ ವ್ಯಾಪಾರಿಯೊಬ್ಬರು ಸಮರ್ಥಿಸಿಕೊಂಡರು.

‘ಸಗಟು ಮಾರುಕಟ್ಟೆಗೆ ನಿಗದಿಗಿಂತ ಹೆಚ್ಚು ಪ್ರಮಾಣದ ಹಣ್ಣುಗಳು ಆವಕವಾಗುತ್ತಿವೆ. ಸಗಟು ಬೆಲೆಗಳು ಏರಿಕೆ ಕಂಡಿಲ್ಲ. ಆದರೆ, ಕೊಳ್ಳುವವರು ಕಡಿಮೆ. ಈಗಿನ ನಿರ್ಬಂಧಗಳಿಂದ ಮಾರುಕಟ್ಟೆಯಲ್ಲೇ ಉತ್ಪನ್ನ ಉಳಿಯುತ್ತಿವೆ. ಹಾಗಾಗಿ, ಚಿಲ್ಲರೆ ವ್ಯಾಪಾರಿಗಳು ದರ ಏರಿಸಿರಬಹುದು’ ಎಂದು ರಾಜ್ಯ ಸಗಟು ಹಣ್ಣು ಮಾರಾಟಗಾರರ ಅಭಿವೃದ್ಧಿ ಸಂಘದ ಉಸ್ತುವಾರಿ ಸೈಯದ್ ಮೆಹಬೂಬ್‌ ತಿಳಿಸಿದರು.

‘ಬೇಸಿಗೆ ಹಾಗೂ ಆರೋಗ್ಯ ದೃಷ್ಟಿಯಿಂದ ಮನೆಯಲ್ಲಿ ಎಲ್ಲರೂ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದೇವೆ. ಕಳೆದ ವಾರ ಕಡಿಮೆ ಇದ್ದ ಹಣ್ಣಿನ ದರಗಳೆಲ್ಲ ಈಗ ದಿಢೀರ್ ಏರಿಕೆ ಕಂಡಿವೆ. ಇದನ್ನು ಪ್ರಶ್ನಿಸಿದಾಗ, ಕೊರೊನಾ ಇರುವುದರಿಂದ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ, ದರ ಏರಿದೆ, ಇಷ್ಟವಿದ್ದರೆ ಖರೀದಿಸಿ ಎಂದು ವ್ಯಾಪಾರಿಗಳು ದಬಾಯಿಸುತ್ತಾರೆ. ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನರಿಗೆ ಹೆಚ್ಚು ಸಮಸ್ಯೆಯಾಗಿದೆ’ ಎಂದು ಹೆಬ್ಬಾಳದ ನಿವಾಸಿ ರೋಜಾ ಹೇಳಿದರು.

ಒಂದು ನಿಂಬೆ ಹಣ್ಣಿಗೆ ₹10: ಕೊರೊನಾ ಕರ್ಫ್ಯೂ ಜಾರಿಯಾದ ಬಳಿಕ ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಒಂದು ನಿಂಬೆಹಣ್ಣನ್ನು ₹10ರಿಂದ ಗರಿಷ್ಠ ₹15ರಂತೆ ಮಾರಾಟವಾಗುತ್ತಿದೆ.

‘ಒಂದು ವಾರದಿಂದ ಅಂಗಡಿಗೆ ಬರುವ ಗ್ರಾಹಕರು ಹೆಚ್ಚಾಗಿ ನಿಂಬೆಹಣ್ಣು ಕೇಳುತ್ತಿದ್ದಾರೆ. ಮೊದಲು ₹10ಕ್ಕೆ ಐದರಿಂದ ಆರು ನಿಂಬೆ ಹಣ್ಣುಗಳನ್ನು ಮಾರುತ್ತಿದ್ದೆವು. ಈಗ ನಿಂಬೆಗೆ ಭಾರಿ ಬೇಡಿಕೆ ಇರುವುದರಿಂದ ಬೆಲೆಯೂ ಏರಿದೆ’ ಎಂದು ನಿಂಬೆಹಣ್ಣಿನ ವ್ಯಾಪಾರಿ ಕೃಷ್ಣಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT