ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಬರ್ಬರ ಅರ್ಥ ವ್ಯವಸ್ಥೆ ರಿಪೇರಿಗೆ ಆತ್ಮನಿರ್ಭರ

ಗ್ರಾಮ ಭಾರತದ ಕನಸಿಗೆ ಸಶಕ್ತಿಕರಣವೇ ಬುನಾದಿ
Last Updated 15 ಸೆಪ್ಟೆಂಬರ್ 2020, 16:00 IST
ಅಕ್ಷರ ಗಾತ್ರ
ADVERTISEMENT
""
""
""
""

ದೇಶದ ಆರ್ಥಿಕ ಮಹಲು ಜೀರ್ಣಾವಸ್ಥೆಯಲ್ಲಿ ಇರುವ ಹೊತ್ತಿನಲ್ಲಿಯೇ ಅದರ ಬುನಾದಿಗೆನೋಟು ರದ್ದತಿ ಎಂಬ ಗುದ್ದಲಿಯ ಬಲವಾದ ಏಟು ಅದರ ಜೀರ್ಣಸ್ಥಿತಿಯನ್ನುಮತ್ತಷ್ಟು ತೀವ್ರಗೊಳಿಸಿತು. ಅದರ ಉದ್ದೇಶ ಎಷ್ಟರ ಮಟ್ಟಿಗೆ ಸಾಕಾರ ಆಯಿತು ಎನ್ನುವುದು ಗೊತ್ತಿರುವ ವಿಚಾರ. ಅಂತಹ ಸ್ಥಿತಿಯಲ್ಲಿ ಕುಂಟುತ್ತ – ತೆವಳುತ್ತ ಸಾಗುತ್ತಿದ್ದ ಅವರೋಹಣ ಸ್ಥಿತಿಯ ಹಣದ ಬುಡಕ್ಕೆ ಬಿದ್ದ ಕೊರೊನಾ ಎಂಬ ಡೈನಮೈಟ್ ಇತಿಹಾಸದಲ್ಲಿ ಕಂಡರಿಯದ ತಲ್ಲಣವನ್ನೇ ಉಂಟುಮಾಡಿದೆ.

ಬರ್ಬರವಾದ ಅರ್ಥ ವ್ಯವಸ್ಥೆಯನ್ನು ಜಬರದಸ್ತಾಗಿ ನಿಲ್ಲಿಸಲು ‘ಆತ್ಮನಿರ್ಭರ’ ಎಂಬ ಯೋಜನೆಯ ಬಗ್ಗೆ ಪ್ರಧಾನಿ ಭರವಸೆ ನೀಡಿದ್ದಾರೆ. ಕೊರೊನೋತ್ತರ ಪರಿಣಾಮದಿಂದ ದೇಶಿ ಗುಡಿಕೈಗಾರಿಕೆಗಳೂ ಚೇತರಿಸಿಕೊಳ್ಳಲಾರದಷ್ಟು ಆರ್ಥಿಕ ಹೊಡೆತವನ್ನು ಅನುಭವಿಸಿವೆ. ಅದಕ್ಕೆ ‘ಚರಕ’ದಂತಹ ಕೈಮಗ್ಗ(ದೇಶಿ) ಉತ್ಪನ್ನ ಮುಗ್ಗರಿಸಿದ್ದೇ ಸಾಕ್ಷಿ. ಎರಡು ದಶಕಗಳ ಕಾಲ ಮಲೆನಾಡ ಹೆಣ್ಣುಮಕ್ಕಳು ಯಶಸ್ವಿಯಾಗಿ ನಡೆಸಿಕೊಂಡ ಸಂಸ್ಥೆ ಈಗ ದಯನೀಯ ಸ್ಥಿತಿ ತಲುಪಿದೆ. ಹೀಗಿರುವಾಗ ಗ್ರಾಮ ಭಾರತದ ಆರ್ಥಿಕ ಸ್ವಾವಲಂಬನೆಯ ಮೂಲಕವೇ ಈಗಿರುವ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳಬೇಕಿದೆ.ಕೃಷಿಕನ ಹೊಲದ ಅಂಗಳಕ್ಕೆ ಕೈಗಾರಿಕೆನ್ನು ತಲುಪಿಸಲು ಇನ್ನೂ ಸಾಧ್ಯವಾಗಲಿಲ್ಲ. ಪ್ರಾದೇಶಿಕ ವೈವಿಧ್ಯತೆಯ ಅನುಸಾರಕೃಷಿಕರು ಮತ್ತು ಕೃಷಿ ಕೂಲಿಕಾರ್ಮಿಕರು ಅವಲಂಬಿಸುವ ಉದ್ಯಮಗಳನ್ನು ಆತ್ಮನಿರ್ಭರಕ್ಕೆ ಹೊಂದಾಣಿಕೆ ಆಗುವಂತೆ ಅನುಷ್ಠಾನ ಮಾಡಿದರೆ ಅದಕ್ಕೊಂದು ಜೀವಸೆಲೆಯನ್ನು ತುಂಬಬಹುದು. ಅದು ಕಪ್ಪು ಹಣ, ಸ್ವಿಸ್‌ ಬ್ಯಾಂಕ್‌ ಹಣ ಹೊರ ತೆಗೆದ ವಿಚಾರದಂತೆ ಆಗಬಾರದಷ್ಟೇ. ಎಷ್ಟರ ಮಟ್ಟಿಗೆ ಯೋಜನಾಬದ್ಧವಾಗಿ ರೂಪಿಸುತ್ತೇವೆ ಎನ್ನುವುದರ ಮೇಲೆಸಮಗ್ರ ಸ್ವರಾಜ್ಯದ ಯಶಸ್ಸು ನಿಂತಿದೆ.

ಸಹಕಾರ ತತ್ವದ ನೆಲೆಯಲ್ಲಿ ಕೆಎಂಎಫ್‌ ಎಂಬ ಸ್ವಾಭಿಮಾನದ ಕಾಮಧೇನು ಯಶಸ್ಸಿನ ಔನತ್ಯ ಸಾಧಿಸಿರುವುದನ್ನು ಕಾಣುತ್ತಿದ್ದೇವೆ. ಕೆಎಂಎಫ್‌ ಇಲ್ಲದೆ ಇದ್ದರೆ ಇಂದು ನಮ್ಮ ಹಸುಗೂಸಿಗೂ ತೊಟ್ಟು ಹಾಲು ಸಿಗುತ್ತಿತ್ತೋ ಇಲ್ಲವೋ ಎನ್ನುವುದು ಕಲ್ಪನೆಗೆ ನಿಲುಕದ ಸಂಗತಿಯಂತೂ ಅಲ್ಲ. ಕೆಎಂಎಫ್‌ ಕಾರಣಕ್ಕೆ ಕನಿಷ್ಠ ಬೆಲೆಗೆ ಹೈನುತ್ಪನ್ನ ಎಲ್ಲರಿಗೂ ಸಿಗುತ್ತಿದೆ. ಮಾತ್ರವಲ್ಲ ಅದು ಸೃಷ್ಟಿಸಿರುವ ಉದ್ಯೋಗ ಕ್ರಾಂತಿ ಕಡಿಮೆ ಏನೂ ಅಲ್ಲ. ಕೇವಲ24 ಗಂಟೆಯಲ್ಲಿ ಹಾಳಾಗಬಹುದಾದ ಹಾಲನ್ನೇ ಸಂಸ್ಕರಿಸಿ ಉತ್ಪಾದಕರಿಗೂ ಬಳಕೆದಾರರಿಗೂ ಇಬ್ಬಗೆಯಲ್ಲಿ ಲಾಭವನ್ನು ಉಂಟುಮಾಡಲು ಸಾಧ್ಯ ಎನ್ನುವುದಾದರೆ ಒಂದು ವಾರ ಕೆಡದೆ ಇರುವ ತರಕಾರಿ, ಒಂದು ವರ್ಷದ ತನಕ ಹಾಳಾಗದೆ ಇರುವ ದವಸ– ದಾನ್ಯ, ಬೇಳೆ– ಕಾಳುಗಳಿಗೂ ಈ ರೀತಿಯ ಯೋಜನೆ ಏಕೆ ಸಾಧ್ಯ ಇಲ್ಲ.

ಬೆಲೆ ಅಂತರಕ್ಕೊಂದು ಚಿತ್ರಣ

ರೈತರ ಆರ್ಥಿಕತೆಯನ್ನು ಮಧ್ಯವರ್ತಿಗಳು ನಿಯಂತ್ರಿಸುತ್ತಿದ್ದಾರೆ. ಅದನ್ನು ತಪ್ಪಿಸಿದರೆ ಕೃಷಿ ಕೂಡ ಲಾಭದಾಯಕವಾಗುತ್ತದೆ. ಗ್ರಾಮಗಳು ಸಹಜವವಾಗಿ ಉದ್ಯೋಗ ಸೃಷ್ಟಿಯ ತಾಣಗಳಾಗುತ್ತವೆ. ಆರ್ಥಿಕ ವಹಿವಾಟಿನಲ್ಲಿ ಸ್ವಾಭಿಮಾನ ಸಾಧಿಸಿದರೆ ಗ್ರಾಮ ಭಾರತದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆಯೇ ಆಗುತ್ತದೆ. ಉದಾಹರಣೆ: ಭತ್ತ (ಉತ್ತಮ) ಕ್ವಿಂಟಲ್‌ಗೆ1835 ರೂಪಾಯಿ ಬೆಲೆ. ಅದೇ ಅಕ್ಕಿಯ ಬೆಲೆ ಕ್ವಿಂಟಲ್‌ಗೆ 3600– 5000 ರೂಪಾಯಿ ಇದೆ. ಅಕ್ಕಿಗೆ ಮಾದರಿ ಬೆಲೆ ತೆಗೆದುಕೊಂಡರೂ 100 ಕೆ.ಜಿಗೆ 4250 ರೂಪಾಯಿ (ವಿವರಕ್ಕೆ ಚಿತ್ರ ನೋಡಿ). ಭತ್ತ ಮತ್ತು ಅಕ್ಕಿ ಬೆಲೆಯ ನಡುವೆ ಹೆಚ್ಚಿನ ಅಂತರ ಎದ್ದುಕಾಣಿಸುತ್ತಿದೆ. 100 ಕೆ.ಜಿ ಭತ್ತವನ್ನು ಅಕ್ಕಿ ಮಾಡಿಸಿದರೆ 75ರಿಂದ 80 ಕೇಜಿ ಅಕ್ಕಿ, ಉಳಿದದ್ದು ತೌಡು, ಹೊಟ್ಟು, ನುಚ್ಚು ಸಿಗುತ್ತದೆ. ಎಲ್ಲದಕ್ಕೂ ನಿಗದಿತ ಮೌಲ್ಯ ಇದ್ದೇ ಇರುತ್ತದೆ. ಸರಾಸರಿ ಮೌಲ್ಯಮಾಪನ ಮಾಡಿದರೆ ಭತ್ತದ ಬೆಲೆ ಕೆ.ಜಿಗೆ 18 ರೂಪಾಯಿ. ಅಕ್ಕಿ ಬೆಲೆ 42 ರೂಪಾಯಿ ಆಯಿತು. (ಬಳಕೆದಾರನಿಗೆ ಅದೇ ಅಕ್ಕಿಯ ಬೆಲೆ ಕನಿಷ್ಠ 50ರೂಪಾಯಿ) ಏಕೆ ಈ ಅಜಗಜಾಂತರ? ಇದರ ಪರಿಹಾರಕ್ಕೆ ಯೋಚನೆ ಬೇಕಲ್ಲವೇ?

ಈಗಾಗಲೇ ಈ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು ಸ್ವತಃ ಕೃಷಿ ಆಸಕ್ತರೇ ಮಾಡುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನದ ಫಲದಿಂದ ಹುಟ್ಟಿರುವ ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ಕೃಷಿಕರ ಆರ್ಥಿಕ ಸಬಲೀಕರಣ ಸಾಧಿಸಲು ಅನೇಕರು ಅನೇಕ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಅದರಲ್ಲಿ ‘ಮಲ್ನಾಡ್‌ ಮಾರ್ಕೆಟ್‌’, ‘ಮಹಿಳಾ ಮಾರುಕಟ್ಟೆ’, ‘ಕೃಷಿಕ’, ‘ದಕ್ಷಿಣ ಕನ್ನಡ/ ಉಡುಪಿ ಸ್ವದೇಶಿ ಮಾರುಕಟ್ಟೆ’, ‘ಆತ್ಮನಿರ್ಭರ ಸ್ವದೇಶಿ’, ‘ಕೃಷಿ ಖುಷಿ’, ‘ಸ್ವದೇಶಿ ಜಾಗೃತಿ ಸಂವಾದ ವೇದಿಕೆ’, , ‘ಕೃಷಿ ವಿಚಾರ’ ಹೀಗೆ ಇನ್ನೂ ಅನೇಕ ಫೇಸ್‌ ಬುಕ್‌ ಪುಟಗಳು ಕೆಲಸ ಮಾಡುತ್ತಿವೆ. ಕೆಲವರು ಸ್ವಯಂ ಆ್ಯಪ್ ಕೂಡ‌ ಅಭಿವೃದ್ಧಿ ಮಾಡಿದ್ದಾರೆ.

‘ರೈತರಿಂದ ನೇರ ಗ್ರಾಹಕರಿಗೆ’ ಎಂಬ ಪೇಜ್‌ ಕೂಡ ಒಂದಿದೆ. ಈ ಪುಟವನ್ನು ರೇಖಾರಾಣಿ ನಿರ್ವಹಿಸುತ್ತಿದ್ದಾರೆ. ಇದುವರೆಗೆ ಅವರು60 ಸಾವಿರ ಪುಟ ಲೈಕ್‌ಗೆ ಅಪ್ರೂವಲ್‌ ಮಾಡಿದ್ದಾರಂತೆ. ಆದರೆ ಫೇಸ್‌ ಬುಕ್‌ ಪುಟದಲ್ಲಿ 14.5 ಸಾವಿರ ಸದಸ್ಯರನ್ನು ತೋರಿಸುತ್ತದೆ. ಈ ವೇದಿಕೆ ನಿರ್ಮಾಣಕ್ಕೆ ಮುಖ್ಯ ಪ್ರೇರಕ ಶಕ್ತಿ ಚುಕ್ಕಿ ನಂಜುಂಡಸ್ವಾಮಿ ಎಂದು ಅವರು ಹೇಳುತ್ತಾರೆ. ಕೃಷಿ ಉತ್ಪನ್ನಕ್ಕೆ ಯೋಗ್ಯ ಬೆಲೆಯನ್ನು ಕಲ್ಪಿಸುವ ಸಾಧ್ಯತೆಯನ್ನು ಯೋಚಿಸಲು ಈ ಪುಟ ತೆರೆದಿದ್ದೇವೆ. ಇದು ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾಗಿದೆ. ಇನ್ನಷ್ಟು ಪರಿಷ್ಕರಿಸಿ ರೈತ ಪ್ರಯೋಜನಕಾರಿಯಾಗಿ ಮಾಡಬೇಕು ಎನ್ನುವುದು ಅವರ ಅಭಿಪ್ರಾಯ.

ಈ ಪುಟದಿಂದ ಆಗಿರುವ ಉಪಯೋಗ ದುರುಪಯೋಗದ ಬಗ್ಗೆ ಕೇಳಿದ ಪ್ರಶ್ನೆಗೆ ರೇಖಾರಾಣಿಯವರು ಹೀಗೆ ಹೇಳುತ್ತಾರೆ. ‘ಬೆಲೆ ನಿಗದಿಗೆ ತಾರ್ಕಿಕ ಚರ್ಚೆಯನ್ನು ವೇದಿಕೆ ಕಲ್ಪಿಸಿದೆ. ರೈತರೇ ತಯಾರಿಸುವ ಅರಿಶಿಣ– ಕುಂಕುಮ, ಜೇನು ತುಪ್ಪ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ ಸೇರಿದಂತೆ ತರಾವರಿ ತಿನಿಸು ಇಲ್ಲಿ ಮಾರಾಟವಾಗುತ್ತದೆ.ಗ್ರಾಮ ಉದ್ಧಾರ ಆದರೆ ದೇಶ ಉದ್ಧಾರ ಆಗುತ್ತದೆ ಎನ್ನುವ ಸರಳ ತತ್ವವನ್ನು ಗಾಂಧೀಜಿ ಹೇಳಿದ್ದರು. ಅವರು ಗುಡಿಕೈಗಾರಿಕೆಗಳ ಉನ್ನತೀಕರಣದ ಬಗ್ಗೆ ಕನಸನ್ನು ಕಂಡಿದ್ದರು. ಇದನ್ನೇ ಪ್ರೊ. ನಂಜುಂಡಸ್ವಾಮಿ ಅವರು ಪ್ರತಿಪಾದಿಸಿದ್ದಾರೆ. ರೈತರೇ ತಮ್ಮ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಬರಬೇಕು ಎನ್ನುವುದು ಅವರ ಆಶಯ ಆಗಿತ್ತು. ರೈತರಿಗಾಗಿಯೇ ಈ ರೀತಿಯ ಪೇಜ್‌ಗಳು ಸಾಕಷ್ಟು ಇವೆ. ನಾವೂ ಈಮೂಲಕ ಜನರಿಗೆ ಹತ್ತಿರವಾಗಿದ್ದೇವೆ. ರೈತರೇ ಬಂದು ನೇರವಾಗಿ ಗ್ರಾಹಕರಿಗೆ ತಲುಪುತ್ತಾರೆ ಎಂದು ಯೋಚಿಸಿದ್ದೆವು. ಆದರೆ ಇಲ್ಲಿಯೂ ರೈತರಿಂದ ಖರೀದಿಸಿ ಗ್ರಾಹಕರನ್ನು ತಲುಪುವ ವ್ಯಾಪಾರಸ್ಥರೂ ಬಂದಿದ್ದಾರೆ. ಕಡಿಮೆ ಬೆಲೆಗೆ ಗ್ರಾಹಕನಿಗೆ ಸಿಗುತ್ತಿರುವುದು ಸಂತೋಷ. ಗ್ರಾಹಕ ಉತ್ಪನ್ನದ ಗುಣಮಟ್ಟ ಮತ್ತು ಬೆಲೆ ಬಗ್ಗೆ ವಿಮರ್ಶಿಸುವ ಹಕ್ಕನ್ನು ಹೊಂದಿರುತ್ತಾನೆ. ಬಹುತೇಕ ಬಳಕೆದಾರರು ತಮ್ಮ ಸಂತೃಪ್ತಿಯನ್ನು ತೋರಿಸಿದ್ದಾರೆ. ದುರುಪಯೋಗಪಡಿಸಿದ ಕೆಲವರನ್ನು ಬ್ಲಾಕ್‌ ಮಾಡಿದ್ದೇವೆ. ಒಬ್ಬರು ರಾಜಮುಡಿ ಅಕ್ಕಿಯನ್ನು ಮನೆ ಬಾಗಿಲಿಗೆ 38 ರೂಪಾಯಿಗೆ (ಪ್ರತಿ ಕೇಜಿಗೆ) ತಲುಪಿಸುತ್ತಿದ್ದಾರೆ. ಅಂತೆಯೇ ಅನೇಕ ಉತ್ಪಾದಕರು ಕೋರಿಯರ್–‌ ಪೋಸ್ಟ್‌ ಮೂಲಕ ತಮ್ಮ ಗ್ರಾಹಕರನ್ನು ತಲುಪುತ್ತಿದ್ದಾರೆ. ಆರ್ಥಿಕ ವಹಿವಾಟು ಪರಸ್ಪರರ ನಡುವೆಯೇ ನಡೆಯುತ್ತದೆ. ಇಲ್ಲಿ ಯಾರೂ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಗಮನಾರ್ಹ.

ತುಂಬ ರೈತರು ನಮ್ಮ ಪೇಜಿನಿಂದ ಲಾಭ ಪಡೆದಿದ್ದಾರೆ. ಅವರಿಗಿಂತ ಹೆಚ್ಚಿನ ಪಾಲು ರೈತರಿಗೆ ಮೊಬೈಲ್‌ ಕೂಡ ಇಲ್ಲ. ಎಲ್ಲ ರೈತರಿಗೂ ಇದರಿಂದ ನ್ಯಾಯ ಸಿಗುತ್ತದೆ ಎನ್ನಲು ಆಗುವುದಿಲ್ಲ. ಎಲ್ಲರಿಗೂ ನೇರವಾಗಿ ಲಾಭವಾಗುವುದು ಯಾವಾಗ ಎನ್ನುವ ಪ್ರಶ್ನೆ ನಮಗೂ ಇದೆ. ರೈತರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿಯೂ ಕಾರ್ಯ ರೂಪಿಸಬೇಕು. ಇದಕ್ಕೆ ಸೇವಾ ಮನೋಭಾವದಲ್ಲಿಯೇ ಕಡಿಮೆ ಲಾಭಾಂಶವನ್ನು ಪಡೆಯುವ ಸ್ವಯಂಸೇವಕರು ಬೇಕಾಗುತ್ತಾರೆ.ಪಚ್ಚೆ ನಂಜುಂಡ ಸ್ವಾಮಿ ಇಂತಹ ಕೆಲವು ಕನಸುಗಳನ್ನು ಹೊಂದಿದ್ದಾರೆ. ಈ ಪುಟ ತೆರೆದು ನಾಲ್ಕು ತಿಂಗಳಲ್ಲಿ ಒಂದಿಷ್ಟು ಅನುಭವ ಸಿಕ್ಕಿದೆ. ಮುಂದೆ ಇದಕ್ಕೆ ಬೇರೆ ಆಯಾಮವನ್ನು ನೀಡಬೇಕು’ ಎಂದು ಅವರು ಹೇಳುತ್ತಾರೆ.

ಸ್ಥಳೀಯ ಸಂಸ್ಥೆಗಳ ಮೌನ

ಇಂತಹ ಯೋಜನೆಯನ್ನು ಸರ್ಕಾರವೇ ರೂಪಿಸಿದರೆ ಅದರ ಪರಿಣಾಮ ಇನ್ನೂ ಫಲಪ್ರದವಾಗಿರುತ್ತದೆ. ಇನ್ನೂ ಹೆಚ್ಚಿನ ವಿಶ್ವಾಸಾರ್ಹತೆಯ ಜೊತೆಗೆ ಕಾನೂನಿನ ಭದ್ರತೆಯೂ ಸಿಗುತ್ತದೆ. ಸ್ಥಳೀಯವಾಗಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿ,ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳೂ ಇವೆ. ಇವು ಕೂಡ ತಮ್ಮ ಮಿತಿಯಲ್ಲಿ ಕೃಷಿಕರನ್ನು ಉತ್ತೇಜಿಸಲು ಅನುದಾನ ನೀಡುತ್ತವೆ. ಕೃಷಿ ಸಲಕರಣೆ ಯಂತ್ರೋಪಕರಣಗಳನ್ನು ಜಿಲ್ಲಾ ಪಂಚಾಯಿತಿ ನೀಡುತ್ತದೆ. ಅದು ಪ್ರವಾಸ– ತರಬೇತಿ– ಮೀನುಗಾರಿಕೆ– ಪಶುಸಂಗೋಪನೆ ಹೀಗೆ ನಾನಾ ರೀತಿಯಲ್ಲಿ ಕೃಷಿಕರಿಗೆ ಸಹಾಯ ಮಾಡುತ್ತಿದೆ. ಸರ್ಕಾರದ ಸಬ್ಸಿಡಿಯನ್ನು ಫಲಾನುಭವಿಗಳಿಗೆ ತಲುಪಿಸುತ್ತದೆ. ಇದಲ್ಲದೆ ಪ್ರತಿ ತಾಲ್ಲೂಕಿಗೆ ಸಹಾಯಕ ಕೃಷಿ ಅಧಿಕಾರಿ ಕಚೇರಿ ಇರುತ್ತದೆ. ಹೋಬಳಿಗೊಂದು ರೈತ ಸಂಪರ್ಕ ಕೇಂದ್ರ ಇರುತ್ತದೆ. ಅಂತೆಯೇ ತಾಲ್ಲೂಕು ಮತ್ತು ಹೋಬಳಿಗೆ ತೋಟಗಾರಿಕೆ ಇಲಾಖೆಯ ಶಾಖೆಯೂ ಇರುತ್ತದೆ. ಇಲ್ಲಿನ ಪರಿಣಿತ ಅಧಿಕಾರಿಗಳುಬೆಳೆ ಬಗ್ಗೆ ಮಾಹಿತಿ– ಸಲಹೆ ಮತ್ತು ಸರ್ಕಾರದ ಸೌಲಭ್ಯಗಳ ಪಡೆಯಲು ಸೇತುವೆಯಾಗಿ ಕೆಲಸ ಮಾಡುತ್ತಾರೆ. ರೈತರ ಆರ್ಥಿಕ ನೆರವಿಗೆ ವಾಣಿಜ್ಯ ಬ್ಯಾಂಕ್‌ಗಳನ್ನು ಹೊರತುಪಡಿಸಿ. ಹಳ್ಳಿ ಹಳ್ಳಿಯಲ್ಲೂ ‘ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ’ ಇಲ್ಲವೇ ‘ವ್ಯವಸಾಯ ಸೇವಾ ಸಹಕಾರ ಸಂಘ’ ಇವೆ. ಇವು ತಮ್ಮ ಸಂಘದ ಸದಸ್ಯರಿಗೆ ಅಲ್ಪಾವಧಿ ಸಾಲವನ್ನು ನೀಡುತ್ತವೆ. ಕೆಲವೆಡೆ ರಾಸಾಯನಿಕ ಗೊಬ್ಬರ ಮಾರಾಟವನ್ನೂ ಮಾಡುತ್ತವೆ. ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಇರುವ ‘ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್’ ಕೂಡ ರೈತರಿಗೆ ಆರ್ಥಿಕ ನೆರವನ್ನು ನೀಡುತ್ತವೆ. ಇಷ್ಟೆಲ್ಲಾ ಸಂಪನ್ಮೂಲಗಳು ಇದ್ದೂ ರೈತರ ಉತ್ಪನ್ನಗಳು ಸುಲಭವಾಗಿ ಗ್ರಾಹಕನನ್ನು ತಲುಪಿಸುವ ನಿಟ್ಟಿನಲ್ಲಿ ಯಾವ ಕಾರ್ಯ ಸೂಚಿಯೂ ಇವುಗಳ ಮುಂದೆ ಇಲ್ಲ. ಅವುಗಳಿಗೆ ಯೋಗ್ಯ ಬೆಲೆ ನಿಗದಿ ಮಾಡುವ ಕ್ರಮವೂ ಇಲ್ಲ. ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ’ ಕೆಲವೊಂದು ಉತ್ಪನ್ನಗಳಿಗೆ ಸೀಮಿತವಾಗಿವೆ. ‘ಹಾಪ್‌ಕಾಮ್ಸ್‌’ ತೋಟಗಾರಿಕೆ ಬೆಳೆಯನ್ನು ಕನಿಷ್ಠ ಪ್ರಮಾಣದಲ್ಲಿ ಮಾತ್ರ ಖರೀದಿಸುತ್ತದೆ. ಅದು ಹಳ್ಳಿಯನ್ನು ತಲುಪುವ ಸ್ಥಿತಿಯಲ್ಲೂ ಇಲ್ಲ. ಅಧಿಕಾರ ಕೇಂದ್ರದಿಂದ ಸೌಲಭ್ಯವನ್ನು ತಲುಪಿಸಿದಂತೆ, ಕೃಷಿಕನ ವರ್ಷದ ಬೆಳೆಗೆ ಯೋಗ್ಯ ಬೆಲೆ ಕಲ್ಪಿಸುವುದು ಯಾವಾಗ?

ಸರ್ಕಾರವೇ ತನ್ನ ನಿಯಂತ್ರಣದಲ್ಲಿ ಒಂದು ಮಂಡಳಿಯನ್ನು ಕೆಎಂಎಫ್‌ ರೀತಿಯಲ್ಲಿ ಕಟ್ಟಿದರೆ, ಖಂಡಿತ ಯಶಸ್ಸು ಸಾಧ್ಯವಿದೆ. ‘ಆತ್ಮನಿರ್ಭರ’ ಗ್ರಾಮ ಭಾರತದ ಆತ್ಮವಿಶ್ವಾಸವನ್ನು ಖಂಡಿತ ಹೆಚ್ಚಿಸುತ್ತದೆ.ಚಾಮರಾಜ ನಗರದ ಉತ್ಪನ್ನವೊಂದು ಬೀದರ್‌ಗೆ ಸುಲಭವಾಗಿ ತಲುಪುತ್ತದೆ. ಬೀದರ್‌– ಗುಲ್ಬರ್ಗದ ಬೆಳೆ ಚಾಮರಾಜನಗರಕ್ಕೆ ಅಷ್ಟೇ ಸರಳವಾಗಿ ತಲುಪುತ್ತದೆ. ಇದರಿಂದ ಲಕ್ಷಾಂತರ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT