ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪ್ಯಾಕೇಜ್‌ 4: ಕಲ್ಲಿದ್ದಲು, ಬಾಹ್ಯಾಕಾಶ, ರಕ್ಷಣೆ ಸೇರಿ 8 ವಲಯಗಳ ಕಡೆ ಗಮನ

ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಲಾಕ್‌ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ದೇಶದ ಆರ್ಥಿಕತೆ ಚೇತರಿಕೆ ನೀಡುವ ಉದ್ದೇಶದಿಂದ ಸರ್ಕಾರ ₹20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಿಸಿದೆ. ಶನಿವಾರ ನಿರ್ಮಲಾ ಸೀತಾರಾಮನ್‌ ಅವರು ಪರಿಹಾರ ಪ್ಯಾಕೇಜ್‌ನ 4ನೇ ಹಂತದ ಉಪಕ್ರಮಗಳನ್ನು ಘೋಷಿಸಿದ್ದಾರೆ.

ಕಲ್ಲಿದ್ದಲು, ಖನಿಜ, ವಿಮಾನ ನಿಲ್ದಾಣಗಳು ಮತ್ತು ವಾಯುವಲಯ ನಿರ್ವಹಣೆ, ರಕ್ಷಣಾ ಉತ್ಪನ್ನಗಳತಯಾರಿಕೆ, ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್‌ವಿತರಣೆ, ಬಾಹ್ಯಾಕಾಶ ವಲಯ ಹಾಗೂ ಪರಮಾಣು ಇಂಧನಸೇರಿ ಎಂಟು ವಲಯಗಳಿಗೆ ನಾಲ್ಕನೇ ಹಂತದ ಪ್ಯಾಕೇಜ್‌ನಲ್ಲಿ ಉಪಕ್ರಮಗಳನ್ನು ಪ್ರಕಟಿಸಲಾಗಿದೆ.

* ವಿಶೇಷ ಆರ್ಥಿಕ ವಲಯ (ಎಸ್‌ಇಝಡ್‌), ಕೈಗಾರಿಕಾ ಪಾರ್ಕ್‌ಗಳು 5 ಲಕ್ಷ ಹೆಕ್ಟೇರ್‌ಗಳಲ್ಲಿ ವ್ಯಾಪಿಸಿದ್ದು, ಅವುಗಳನ್ನು ಗುರುತಿಸಲು ಸಾಧ್ಯವಾಗುವ ವ್ಯವಸ್ಥೆ ರೂಪಿಸುವ ಮೂಲಕ ಹೂಡಿಕೆದಾರರಿಗೆ ಸಮಸ್ಯೆ ಎದುರಾಗುವುದನ್ನು ತಪ್ಪಿಸಬಹುದಾಗಿದೆ.

* ಕಲ್ಲಿದ್ದಲು: ಸರ್ಕಾರದ ಸಂಸ್ಥೆಗಳಿಗೆ ಮಾತ್ರವೇ ಸೀಮಿತವಾಗಿರುವ ಕಲ್ಲಿದ್ದಲು ಗಣಿಗಾರಿಕೆಯನ್ನು ವಾಣಿಜ್ಯೀಕರಿಸಲಾಗುತ್ತದೆ. ವಾಣಿಜ್ಯೋದ್ದೇಶಿತ ಗಣಿಗಾರಿಕೆಗೆ ಆದಾಯ ಹಂಚಿಕೆ ಆಧಾರದ ಮೇಲೆ ಅವಕಾಶ ನೀಡಲಾಗುತ್ತದೆ. ನಿಗದಿತ ದಿನಕ್ಕಿಂತ ಮುಂಚಿತವಾಗಿಯೇ ಕಲ್ಲಿದ್ದಲು ಉತ್ಪಾದನೆಯಾದರೆ ಪ್ರೋತ್ಸಾಹ ನೀಡಲಾಗುತ್ತದೆ. ಭಾರತ ಜಗತ್ತಿನ ಮೂರನೇ ದೊಡ್ಡ ಪ್ರಮಾಣದ ಗಣಿಗಾರಿಕೆಯಾಗದ ಕಲ್ಲಿದ್ದಲು ಸಂಗ್ರಹ ಹೊಂದಿದೆ. ಹರಾಜು ಪ್ರಕ್ರಿಯೆಗಳ ಮೂಲಕ ಕೋಲ್‌ ಬೆಡ್‌ (ಕಲ್ಲಿದ್ದಲು ಸಂಗ್ರಹದ ಒಳಗಿನ ನೈಸರ್ಗಿ ಅನಿಲ) ಹೊರ ತೆರೆಯಲಾಗುತ್ತದೆ. ಹೊರ ತೆಗೆಯಲಾಗುವ ಕಲ್ಲಿದ್ದಲನ್ನು ಸ್ಥಳಾಂತರಿಸುವ ಮೂಲಸೌಕರ್ಯಕ್ಕಾಗಿ ₹50,000 ಕೋಟಿ ವೆಚ್ಚ ಮಾಡಲಾಗುತ್ತದೆ.

* ಅಲ್ಯೂಮಿನಿಯಂ ಉತ್ಪಾದನೆಯಲ್ಲಿ ಯಾರಿದಾಗರೂ ಬಾಕ್ಸೈಟ್‌ ಕಚ್ಚಾ ವಸ್ತುವಿನ ಅವಶ್ಯಕತೆ ಉಂಟಾದರೆ, ಅವರು ಪ್ರತ್ಯೇಕ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕಾಗುತ್ತದೆ. ಇಂಥ ಹೊಂದಾಣಿಕೆಯಿರದ ನಿಯಮಗಳಿಂದಾಗಿ ಬಹಳಷ್ಟು ಜನರು ದೇಶದಿಂದ ಹೊರ ನಡೆಸಿದ್ದಾರೆ. ಅಲ್ಯೂಮಿನಿಯಂ ಕೈಗಾರಿಕೆಗೆ ಅಗತ್ಯವಿರುವ ವಸ್ತುಗಳನ್ನು ಜೊತೆಯಾಗಿಯೇ ಒಂದೇ ಹರಾಜು ಪ್ರಕ್ರಿಯೆಯಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಅಲ್ಯುಮಿನಿಯಂ ಜೊತೆಯಲ್ಲಿಯೇ ಬಾಕ್ಸೈಟ್‌ ಅಥವಾ ಕಲ್ಲಿದ್ದಲನ್ನು ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.

* ಮೊದಲು ಯಾರೋ ಪರಿಶೋಧನೆ ಮಾಡುತ್ತಿದ್ದವರು, ಬಿಡ್‌ ಮಾಡುತ್ತಿದ್ದವರು ಮತ್ತೊಬ್ಬರು ಹಾಗೂ ಉತ್ಪಾದನೆ ಮಾಡುವವರು ಇನ್ನೊಬ್ಬರು ಆಗಿದ್ದರು. ಕ್ಯಾಪ್ಟೀವ್‌ ಮತ್ತು ನಾನ್‌–ಕ್ಯಾಪ್ಟೀವ್‌ ಗಣಿಗಾರಿಕೆಗಳ ನಡುವಿನ ವ್ಯತ್ಯಾಸವನ್ನು ತೆಗೆದು ಹಾಕಲು ನಿರ್ಧರಿಸಲಾಗಿದೆ. ಗಣಿಗಾರಿಕೆ ಸ್ಥಳದಿಂದ ಹೊರತೆಗೆಯಲಾದ ವಸ್ತುಗಳನ್ನು ಸಾಗಿಸಲು ಅನುಕೂಲ ಮಾಡಲು ಮೂಲಸೌಕರ್ಯ ವ್ಯವಸ್ಥೆ ಹಾಗೂ ಪರಿಸರ ಕಾಳಜಿ ತೋರಿದವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ₹18,000 ಕೋಟಿ ವಿನಿಯೋಗಿಸಲಾಗುತ್ತದೆ. 500 ಗಣಿಗಾರಿಕೆ ಘಟಕಗಳಲ್ಲಿ ಪಾರದರ್ಶಕ ವ್ಯವಸ್ಥೆ ಕಲ್ಪಿಸುವುದು. ಗಣಿಗಾರಿಕೆ ಗುತ್ತಿಯನ್ನು ವರ್ಗಾಯಿಸಲು ಅವಕಾಶ ನೀಡಲಾಗಿದೆ.

* ರಕ್ಷಣಾ ಸಾಮಗ್ರಿಗಳ ತಯಾರಿಕೆ: ಮೇಕ್‌ ಇನ್‌ ಇಂಡಿಯಾ ಮತ್ತು ಸ್ವಾವಲಂಭನೆಯನ್ನು ಒಂದಕ್ಕೊಂದು ಜೊತೆಗೂಡಿವೆ. ರಕ್ಷಣಾ ಪಡೆಗಳಿಗೆ ಅತ್ಯುತ್ತಮ ಸಾಧನಗಳು ಅಗತ್ಯವಾಗುತ್ತವೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಉಪಕರಣಗಳು, ಹೈ–ಟೆಕ್‌ ಸಾಧನಗಳು ಅವಶ್ಯಕವಾದರೆ ಆಮದು ಮಾಡಿಕೊಳ್ಳಬಹುದಾಗಿರುತ್ತದೆ. ಶಸ್ತ್ರಾಸ್ತ್ರ ಹಾಗೂ ತಯಾರಿಕಾ ವ್ಯವಸ್ಥೆಗಳನ್ನು ಪಟ್ಟಿ ಮಾಡಲಾಗುತ್ತದೆ. ಆ ಪಟ್ಟಿಯಲ್ಲಿರುವುದನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಪಟ್ಟಿಯನ್ನು ವಿಸ್ತರಿಸಿ ಆಮದು ನಿಷೇಧಿಸಲಾಗುತ್ತದೆ.

* ಆಮದು ಮಾಡಿಕೊಳ್ಳಲಾಗಿರುವ ವ್ಯವಸ್ಥೆಗಳಿಗೆ ಅಗತ್ಯ ಬಿಡಿ ಭಾಗಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿದೆ. ಸ್ಥಳೀಯ ತಯಾರಿಕೆಗೆ ಸಂಬಂಧಿಸಿದಂತೆ ಮಿಲಿಟರಿ ವ್ಯವಹಾರಗಳ ಇಲಾಖೆಯೊಂದಿಗೆ ಚರ್ಚಿಸಿ ಪ್ರತ್ಯೇಕ ಬಜೆಟ್‌ ಅವಕಾಶ ಕಲ್ಪಿಸಲಾಗುತ್ತದೆ.

* ಪ್ರತ್ಯೇಕ ವಾಣಿಜ್ಯ ಉದ್ದೇಶಿತ ಸಂಸ್ಥೆಯಾಗಿ ಶಸ್ತ್ರಾಸ್ತ್ರ ತಯಾರಿಕೆ ಸಂಸ್ಥೆಗಳಿಗೆ ಒತ್ತು ನೀಡಲಾಗುತ್ತದೆ. ಕಾರ್ಪೊರೇಟೈಸೇಷನ್‌ ಎಂಬುದು ಖಾಸಗೀಕರಣಗೊಳಿಸುವುದು ಅಲ್ಲ ಎಂದು ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ. ರಕ್ಷಣಾ ವಲಯದಲ್ಲಿ ತಯಾರಿಕೆಗೆ ವಿದೇಶಿ ನೇರ ಬಂಡವಾಳವನ್ನು ಶೇ 49ರಿಂದ ಶೇ 74ಕ್ಕೆ ಹೆಚ್ಚಿಸಲಾಗುತ್ತದೆ.

* ವಾಯುವಲಯ ನಿರ್ವಹಣೆ: ಈವರೆಗೂ ನಾವು ಬಳಸಿಕೊಂಡಿರುವ ವಾಯು ಮಾರ್ಗ ಹೆಚ್ಚು ದೂರದ್ದಾಗಿದೆ. ದೂರದ ಮಾರ್ಗಗಳ ಬಳಕೆಯಿಂದ ಸುತ್ತಾಡುವ ದೂರ ಹೆಚ್ಚುತ್ತದೆ, ಪ್ರಯಾಣಿಕರು ಹೆಚ್ಚು ಬೆಲೆ ತೆರುತ್ತಾರೆ, ಪೈಲಟ್‌ ಹೆಚ್ಚುವರಿ ಹಾರಾಟ ನಡೆಸಿದಂತಾಗುತ್ತದೆ. ಸಮೀಪದ ಮಾರ್ಗ ಬಳಸಿದರೆ, ಈ ಎಲ್ಲದಕ್ಕಿಂತಲೂ ಮುಖ್ಯವಾಗಿ ಸಮಯದ ಉಳಿತಾಯವಾಗುತ್ತದೆ. ಅತಿ ಕಡಿಮೆ ಸಮಯದಲ್ಲಿ ತಲುಪಬೇಕಾದ ಸ್ಥಳವನ್ನು ಮುಟ್ಟುತ್ತೇವೆ.

* ಆರು ವಿಮಾನ ನಿಲ್ದಾಣಗಳು ಹರಾಜಿಗಿವೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಏರ್‌ ಇಂಡಿಯಾ ಮುಂದುವರಿಸಲಿದೆ. ಖಾಸಗಿ ಸಂಸ್ಥೆಗಳಿಂದ 12 ವಿಮಾನ ನಿಲ್ದಾಣಗಳಿಗೆ ಹೆಚ್ಚುವರಿ ಹೂಡಿಕೆ ಅವಶ್ಯಕತೆ ಇದೆ. ವಿಮಾನ ನಿಲ್ದಾಣಗಳು ಇನ್ನಷ್ಟು ಉತ್ತಮಗೊಳ್ಳಲಿವೆ.

* ವಿಮಾನಗಳ ನಿರ್ವಹಣೆ, ರಿಪೇರಿ ಹಾಗೂ ಯಂತ್ರಗಳ ಪರೀಕ್ಷೆ, ಬದಲಾವಣೆಗಳಿಗಾಗಿ (ಎಂಆರ್‌ಒ) ವಿದೇಶಗಳಿಗೆ ಸಾಗುತ್ತಿವೆ. ಭಾರತಕ್ಕೆ ಸಾಮರ್ಥ್ಯ ಹಾಗೂ ಮಾನವ ಸಂಪನ್ಮೂಲದ ಬಲವಿದೆ. ನಾಗರಿಕ ವಿಮಾನಗಳ ಜೊತೆಗೆ ರಕ್ಷಣಾ ಪಡೆಗಳ ವಿಮಾನಗಳಿಗೂ ಇದರಿಂದ ಅನುಕೂಲವಾಗಲಿದೆ. ಎಲ್ಲ ವಿಮಾನಗಳ ನಿರ್ವಹಣಾ ವೆಚ್ಚವು ಇದರಿಂದ ಕಡಿಮೆಯಾಗಲಿದೆ.

* ವಿದ್ಯುತ್‌ ವಿತರಣಾ ಕಂಪನಿಗಳು: ವಿದ್ಯುತ್‌ ವಿತರಣೆ ವಲಯ ಖಾಸಗೀಕರಣಗೊಳ್ಳಲಿದೆ. ಸಾಮರ್ಥ್ಯ ಹೆಚ್ಚಳ ಹಾಗೂ ಆ ಮೂಲಕ ಸೇವೆಯ ಗುಣಮಟ್ಟ ಹೆಚ್ಚಿಸುವ ಗುರಿ ಹೊಂದಲಾಗಿದೆ.

* ಸಾಮಾಜಿಕ ಮೂಲಸೌಕರ್ಯ ಯೋಜನೆಗಳಿಗಾಗಿ ₹8,100 ಕೋಟಿ.

* ಬಾಹ್ಯಾಕಾಶ ವಲಯ: ಖಾಸಗಿ ವಲಯದಲ್ಲಿಯೂ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಹಲವು ಕಾರ್ಯಗಳು ನಡೆಯುತ್ತಿವೆ. ಹಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳು ತಂತ್ರಜ್ಞಾನ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಆದರೆ, ಅವರು ಇಸ್ರೊ ವ್ಯವಸ್ಥೆಯನ್ನು ಪರೀಕ್ಷಿಸುವ ಉದ್ದೇಶಗಳಿಗೂ ಬಳಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ, ನಿಯಮ ಹಾಗೂ ನಿಬಂಧನೆಗಳನ್ನು ಖಾಸಗಿಯವರಿಗಾಗಿ ರೂಪಿಸಲಾಗುತ್ತದೆ. ಅವರನ್ನು ನಮ್ಮೊಂದಿಗೆ ಕರೆದೊಯ್ಯುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

* ಪರಮಾಣು ಇಂಧನ: ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸಂಶೋಧನೆಗಾಗಿ ರಿಯಾಕ್ಟರ್‌ ಸ್ಥಾಪನೆ. ಮೆಡಿಕಲ್‌ ಐಸೊಟೋಪ್‌ಗಳಿಗಾಗಿ ಮಾತ್ರ ಬಳಕೆ. ಕ್ಯಾನ್ಸರ್‌ ಚಿಕಿತ್ಸೆಗಾಗಿಯೂ ಇದರಿಂದ ಉಪಯೋಗವಾಗಲಿದೆ. ಆಹಾರ ಸಂಸ್ಕರಣೆಗಾಗಿ ರೇಡಿಯೇಷನ್‌ ತಂತ್ರಜ್ಞಾನ ಬಳಕೆ. ಇದರಿಂದ ಕೃಷಿ ವಲಯಕ್ಕೆ ಸಹಕಾರಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT