ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ವಿನಾಯ್ತಿ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಊಹಾಪೋಹಗಳಿಗೆ ತೆರೆ
Last Updated 30 ಅಕ್ಟೋಬರ್ 2019, 13:40 IST
ಅಕ್ಷರ ಗಾತ್ರ

ನವದೆಹಲಿ: ವೈಯಕ್ತಿಕ ಆದಾಯ ತೆರಿಗೆ ಕಡಿತಗೊಳಿಸುವ ಮತ್ತು ತೆರಿಗೆ ಹಂತಗಳಲ್ಲಿ ರಿಯಾಯ್ತಿಗಳನ್ನು ನೀಡುವ ಯಾವುದೇ ಪ್ರಸ್ತಾವ ಸದ್ಯಕ್ಕೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಆದಾಯ ತೆರಿಗೆ ದರ ಕಡಿತಗೊಳಿಸಲು ಸದ್ಯದ ಹಣಕಾಸು ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಇತರ ದೇಶಗಳಲ್ಲಿನ ತೆರಿಗೆ ದರಗಳು ಭಾರತಕ್ಕೆ ಹೋಲಿಸಿದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಇವೆ ಎನ್ನುವ ಕಾರಣ ನೀಡಲಾಗಿದೆ.

ಆರ್ಥಿಕತೆಗೆ ಉತ್ತೇಜನ ನೀಡುವ ಕ್ರಮಗಳ ಅಂಗವಾಗಿ, ಕಾರ್ಪೊರೇಟ್‌ ತೆರಿಗೆಯನ್ನು ಸೆಪ್ಟೆಂಬರ್‌ನಲ್ಲಿ ತಗ್ಗಿಸಲಾಗಿತ್ತು. ಹೀಗಾಗಿ ವೈಯಕ್ತಿಕ ಆದಾಯ ತೆರಿಗೆಯಲ್ಲಿಯೂ ಸರ್ಕಾರ ಕೆಲಮಟ್ಟಿಗೆ ರಿಯಾಯ್ತಿ ಪ್ರಕಟಿಸಿ, ಬೇಡಿಕೆ ಹೆಚ್ಚಿಸಲು ಉತ್ತೇಜನ ನೀಡುವ ಸಾಧ್ಯತೆ ಇದೆ ಎಂದು ಬಹುವಾಗಿ ನಿರೀಕ್ಷಿಸಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ ಅತಿ ಶ್ರೀಮಂತರ ಮೇಲಿನ ತೆರಿಗೆಯನ್ನು ಶೇ 42ರವರೆಗೆ ಹೆಚ್ಚಿಸಲಾಗಿತ್ತು.

ಆದಾಯ ತೆರಿಗೆಯಲ್ಲಿ ಈಗಾಗಲೇ ಹಲವಾರು ರಿಯಾಯ್ತಿಗಳನ್ನು ನೀಡಲಾಗಿದೆ. ಇದರಿಂದ ತೆರಿಗೆದಾರರ ಮೇಲಿನ ಹೊರೆ ಕಡಿಮೆಯಾಗಿದೆ. ಹೂಡಿಕೆಗಳ ಮೇಲಿನ ತೆರಿಗೆ ಪ್ರಯೋಜನಗಳು ಮತ್ತು ಇತರ ಕಡಿತಗಳಿಂದ ವೈಯಕ್ತಿಕ ಆದಾಯ ತೆರಿಗೆದಾರರು ₹ 6.5 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇಲ್ಲ ಎಂದು ಸರ್ಕಾರ ವಿವರಣೆ ನೀಡಿದೆ.

ಗರಿಷ್ಠ ಮಟ್ಟದ ತೆರಿಗೆ ದರ ಇರುವ ದೇಶಗಳಲ್ಲಿ ತೆರಿಗೆದಾರರಿಗೆ ಸಾರ್ವಜನಿಕ ಆರೋಗ್ಯ, ಶಿಕ್ಷಣ, ನಿರುದ್ಯೋಗ ಭತ್ಯೆ ಮತ್ತು ಪಿಂಚಣಿ ಸೌಲಭ್ಯಗಳು ಇವೆ ಎಂದು ದುಬಾರಿ ತೆರಿಗೆ ವಿರೋಧಿಸುವವರು ಟೀಕಿಸುತ್ತಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರ, ಗರಿಷ್ಠ ಮಟ್ಟದ ತೆರಿಗೆ ದರ ಇರುವ ದೇಶಗಳಲ್ಲಿಯೂ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಲು ತೆರಿಗೆದಾರರು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.

ಹೊಸ ನೇರ ತೆರಿಗೆ ಸಂಹಿತೆ (ಡಿಟಿಸಿ) ಸಿದ್ಧಪಡಿಸಲು ರಚಿಸಲಾಗಿದ್ದ ಅಖಿಲೇಶ್‌ ರಂಜನ್‌ ಸಂಚಾಲಕತ್ವದಲ್ಲಿನ ಕಾರ್ಯಪಡೆಯು, ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಗಮನಾರ್ಹವಾಗಿ ತಗ್ಗಿಸಲು ಶಿಫಾರಸು ಮಾಡಿದೆ. ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ತನ್ನ ವರದಿಯಲ್ಲಿ ಈ ಸಲಹೆಗಳನ್ನು ನೀಡಿದೆ. ಈ ವರದಿ ಬಗ್ಗೆ ಸರ್ಕಾರ ಇದುವರೆಗೂ ತನ್ನ ನಿಲುವು ಪ್ರಕಟಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT