ಸೂರತ್: ಜಾಗತಿಕ ಬಿಕ್ಕಟ್ಟಿನಿಂದಾಗಿ ಗುಜರಾತ್‌ನ ವಜ್ರ ಉದ್ಯಮವು ಅಡಕತ್ತರಿಗೆ ಸಿಲುಕಿದೆ ಎಂದು ಗುಜರಾತ್‌ನ ವಜ್ರ ಕಾರ್ಮಿಕರ ಒಕ್ಕೂಟ ಹೇಳಿದೆ.
ಉದ್ಯಮದ ಬೆಳವಣಿಗೆಯು ದಿನೇ ದಿನೇ ಕುಸಿಯುತ್ತಿದೆ. ವೆಚ್ಚ ಸರಿದೂಗಿರುವ ಭಾಗವಾಗಿ ಕಂಪನಿಗಳು ಸಂಬಳ ಕಡಿತ ಮಾಡುತ್ತಿವೆ. ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸುತ್ತಿವೆ. ಇದರಿಂದ ಅವರಿಗೆ ಕೌಟುಂಬಿಕ ನಿರ್ವಹಣೆಗೆ ಹಣವಿಲ್ಲದಂತಾಗಿದೆ. ಕಳೆದ 16 ತಿಂಗಳ ಅವಧಿಯಲ್ಲಿ 65 ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಭವೇಶ್ ಟ್ಯಾಂಕ್ ತಿಳಿಸಿದ್ದಾರೆ.
ಕಾರ್ಮಿಕರ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಒಕ್ಕೂಟದಿಂದ ಜುಲೈ 15ರಂದು ಸಹಾಯವಾಣಿ ತೆರೆಯಲಾಗಿದ್ದು, ಇಲ್ಲಿಯವರೆಗೆ 1,600 ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದ್ದಾರೆ.
ಗುಜರಾತ್‌ನ ಸೂರತ್ ಒರಟು ವಜ್ರಗಳ ಕಟ್ ಮತ್ತು ಪಾಲಿಶ್‌ಗೆ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಇಲ್ಲಿ 2,500ಕ್ಕೂ ಹೆಚ್ಚು ಘಟಕಗಳಿದ್ದು, 10 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಈ ಉದ್ಯಮದಲ್ಲಿದ್ದಾರೆ.
ಕುಸಿತಕ್ಕೆ ಕಾರಣ ಏನು?:
ಉಕ್ರೇನ್ ಮತ್ತು ರಷ್ಯಾ, ಇಸ್ರೇಲ್–ಗಾಜಾ ಬಿಕ್ಕಟ್ಟು ಜಾಗತಿಕ ಮಟ್ಟದಲ್ಲಿ ವಜ್ರ ಉದ್ಯಮದ ಮೇಲೆ ಪರಿಣಾಮ ಬೀರಿದೆ. ವಜ್ರದ ಪ್ರಮುಖ ಮಾರುಕಟ್ಟೆಯಾದ ಚೀನಾದಲ್ಲಿ ಬೇಡಿಕೆ ಕುಸಿದಿದೆ. ಜನವರಿಯಿಂದ ಇಲ್ಲಿಯವರೆಗೆ 50 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಒಕ್ಕೂಟ ಹೇಳಿದೆ.
ಸಂಬಳ ಕಡಿತದಿಂದಾಗಿ ಉದ್ಯಮದಲ್ಲಿರುವ ಶೇ 30ರಷ್ಟು ಕಾರ್ಮಿಕರಿಗೆ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸಮಸ್ಯೆಯಾಗಿದೆ. ಮನೆ ಬಾಡಿಗೆ, ಗೃಹ ಮತ್ತು ವಾಹನ ಸಾಲದ ಮಾಸಿಕ ಕಂತು ಪಾವತಿಗೆ ಪರದಾಡುತ್ತಿದ್ದಾರೆ ಎಂದು ತಿಳಿಸಿದೆ.
‘ಚೀನಾದ ವರ್ತಕರು ನೈಸರ್ಗಿಕ ವಜ್ರಗಳನ್ನು ಖರೀದಿಸುತ್ತಿಲ್ಲ. ಇದರಿಂದ ಈ ಉದ್ಯಮದ ಸ್ಥಿತಿ ತೀವ್ರ ಹದಗೆಟ್ಟಿದೆ’ ಎಂದು ಇಂಡಿಯನ್ ಡೈಮಂಡ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ದಿನೇಶ್ ನವಾಡಿಯಾ ಹೇಳುತ್ತಾರೆ.