ಭಾನುವಾರ, ಮಾರ್ಚ್ 7, 2021
29 °C
ಕಾಫಿ ಮಂಡಳಿ ಮಾಹಿತಿ

ಭಾರಿ ಮಳೆಗೆ 82 ಸಾವಿರ ಟನ್‌ ಕಾಫಿ ಬೆಳೆ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಈ ಬಾರಿ ಸುರಿದಿರುವ ಭಾರಿ ಮಳೆಯಿಂದಾಗಿ 82 ಸಾವಿರ ಟನ್‌ಗಳಷ್ಟು ಕಾಫಿ ಬೆಳೆ ನಷ್ಟವಾಗಿದೆ.

ಇದರಲ್ಲಿ ಅತಿ ಹೆಚ್ಚು ಬೆಳೆ ಹಾನಿಯಾಗಿರುವುದು ಕರ್ನಾಟಕದಲ್ಲಿಯೇ ಎಂದು ಕಾಫಿ ಮಂಡಳಿ ಮಾಹಿತಿ ನೀಡಿದೆ. ಬೆಳೆ ನಷ್ಟವಲ್ಲದೆ, ಕೊಡಗಿನಲ್ಲಿ ಆಗಿರುವ ಭೂಕುಸಿತದಿಂದಾಗಿ ಕಾಫಿ ಬೆಳೆಯುವ 1,500 ಹೆಕ್ಟೇರ್‌ ಪ್ರದೇಶವೂ ನಾಶವಾಗಿದೆ. 

ಮಂಡಳಿಯ ಸಂಶೋಧನಾ ತಂಡವು ಆಗಸ್ಟ್‌ 3ನೇ ವಾರದಲ್ಲಿ ನಡೆಸಿದ ಪ್ರಾಥಮಿಕ ಸಮೀಕ್ಷೆಯಲ್ಲಿ ಈ ಸಂಗತಿ ತಿಳಿದುಬಂದಿದೆ. ಈ ವರದಿಯನ್ನು ಕರ್ನಾಟಕ ಮತ್ತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಕಳುಹಿಸಲಾಗಿದೆ.

ಬೆಳೆಗಾರರಿಗೆ ಉತ್ತೇಜನ ನೀಡಲು ಕಾಫಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು, ಸಾಲ ಮರುಪಾವತಿ ಅವಧಿ ವಿಸ್ತರಣೆ ಹಾಗೂ ₹ 20 ಲಕ್ಷ ಸಾಲಕ್ಕೆ ಶೇ 3 ರಷ್ಟು, ₹ 25 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ಶೇ 6 ರಷ್ಟು ಬಡ್ಡಿದರ ನಿಗದಿ ಮಾಡುವಂತೆಯೂ ಕಾಫಿ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.

ವಿಶೇಷ ಪ್ಯಾಕೇಜ್‌: ವಿಪತ್ತು ಪರಿಹಾರ ನಿಧಿಯ ಮೂಲಕ ನೀಡಿರುವ ಪರಿಹಾರದಿಂದ ನಷ್ಟ ತುಂಬಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬೆಳೆಗಾರರ ಹಿತಕಾಯಲು ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್‌ ನೀಡುವಂತೆ ಕಾಫಿ ಮಂಡಳಿ ಮನವಿ ಮಾಡಿದೆ.

ಕಾಫಿ ಮಂಡಳಿಯ 100 ಸಿಬ್ಬಂದಿ ಬೆಳೆ ನಾಶದ ಪೂರ್ಣ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಪ್ರಾಥಮಿಕ ಹಂತದ ಪರಿಹಾರ ಕಾರ್ಯದಲ್ಲಿಯೂ ನಿರತವಾಗಿದೆ ಎಂದು ಮಂಡಳಿ ತಿಳಿಸಿದೆ.

ಬೆಳೆಗಾರರ ಸಭೆ: ಕಾಫಿ ಬೆಳೆಗಾರರಿಗೆ ಪರಿಹಾರ ಒದಗಿಸಲು ಹಾಗೂ ಇತರ ಸಮಸ್ಯೆಗಳನ್ನು ಬಗೆಹರಿಸಲು ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಬೆಳೆಗಾರರ ಸಭೆ ಕರೆಯಲಾಗುವುದು. ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್‌. ಬೋಜೆಗೌಡ ಅವರ ನೇತೃತ್ವದಲ್ಲಿ ಚರ್ಚೆ ನಡೆಸಲಾಗುವುದು. ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಪರಿಹಾರಕ್ಕಾಗಿ ಮನವಿ ಮಾಡಲಾಗುವುದು ಎಂದು ಮಂಡಳಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು