ಬುಧವಾರ, ಆಗಸ್ಟ್ 4, 2021
22 °C

₹28 ಸಾವಿರ ಕೋಟಿ ಬಂಡವಾಳ ಹೂಡಿಕೆ ಒಪ್ಪಂದಕ್ಕೆ ಕರ್ನಾಟಕ ಸರ್ಕಾರ ಸಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ 23 ಕಂಪನಿಗಳು ಸುಮಾರು ₹28 ಸಾವಿರ ಕೋಟಿ ಬಂಡವಾಳ ಹೂಡಲಿದ್ದು, ಈ ಕುರಿತ ಒಪ್ಪಂದಕ್ಕೆ ರಾಜ್ಯಸರ್ಕಾರ ಗುರುವಾರ ಸಹಿ ಹಾಕಿತು.

ಇನ್ವೆಸ್ಟ್‌ ಕರ್ನಾಟಕ ವೇದಿಕೆಯ ಸಹಯೋಗದೊಂದಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಕ್ಷಣೆ, ದತ್ತಾಂಶ ಕೇಂದ್ರ, ವೈಮಾನಿಕ ಕ್ಷೇತ್ರ ಹಾಗೂ ಎಲೆಕ್ಟ್ರಿಕ್ ವಾಹನಗಳ ಕಂಪನಿಗಳು ಸೇರಿದಂತೆ 23 ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿದವು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಕೋವಿಡ್‌ ಸಂಕಷ್ಟದ ನಡುವೆಯೂ ರಾಜ್ಯ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಿದೆ. ಅದರ ಫಲವಾಗಿಯೇ ವಿವಿಧ ಕಂಪನಿಗಳು ಬಂಡವಾಳ ಹೂಡಲು ಮುಂದೆ ಬಂದಿವೆ. ಇದರಿಂದ ಸ್ಥಳೀಯರಿಗೂ ಹೆಚ್ಚು ಉದ್ಯೋಗಾವಕಾಶಗಳು ಸಿಗಲಿವೆ. ಒಪ್ಪಂದದನ್ವಯ ಕಾಲಮಿತಿಯೊಳಗೆ ಯೋಜನೆಗಳನ್ನು ಜಾರಿಗೊಳಿಸಲಾಗುವುದು’ ಎಂದರು.

₹1 ಲಕ್ಷ ಕೋಟಿ ಹೂಡಿಕೆ:

‘ಕಳೆದ ವರ್ಷದ ಮಾರ್ಚ್‌ನಿಂದ ರಾಜ್ಯ ಸರ್ಕಾರವು ₹77,000 ಕೋಟಿ ಹೂಡಿಕೆಯ 520ಕ್ಕೂ ಹೆಚ್ಚು ಯೋಜನೆಗಳಿಗೆ ಅನುಮೋದನೆ ನೀಡಿದೆ. ಅಲ್ಲದೆ, ಹೆಚ್ಚುವರಿ ಪ್ರಸ್ತಾವಗಳ ಅಡಿ ₹23,000 ಕೋಟಿ ಮೊತ್ತದ ಒಪ್ಪಂದವೂ ಸೇರಿ ಒಟ್ಟು ₹1 ಲಕ್ಷ ಕೋಟಿ ಹೂಡಿಕೆ ಆಗಿದೆ’ ಎಂದು ಯಡಿಯೂರಪ್ಪ ಹೇಳಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್‌, ‘ರಾಜ್ಯವನ್ನು ಹೂಡಿಕೆದಾರರ ನೆಚ್ಚಿನ ತಾಣವನ್ನಾಗಿಸುವ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಬಂಡವಾಳ ಹೂಡಿಕೆ ಉತ್ತೇಜಿಸಲು ಹಲವು ಪೂರಕ ಕ್ರಮಗಳನ್ನು ಕೈಗೊಂಡಿದೆ. ನೂತನ ಕೈಗಾರಿಕಾ ನೀತಿ (2020-25) ಹಾಗೂ ಕೈಗಾರಿಕಾ ಸೌಲಭ್ಯಗಳ ಕಾಯ್ದೆಗೆ ತಂದಿರುವ ತಿದ್ದುಪಡಿಗಳಿಂದ ಕರ್ನಾಟಕವು ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದುಕೊಂಡಿದೆ’ ಎಂದರು.

‘ಮುಂದಿನ ವರ್ಷ ಫೆಬ್ರುವರಿ 9ರಿಂದ 11ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ’ ಎಂದರು.

‘ಉದ್ಯಮಗಳಿಗೆ ನುರಿತ ಕೆಲಸಗಾರರನ್ನು ಒದಗಿಸುವ ನಿಟ್ಟಿನಲ್ಲಿ ಕೌಶಲ ಅಭಿವೃದ್ಧಿಗೆ ಒತ್ತು ನೀಡಲಾಗುವುದು’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು