ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ನಂ.1 ಸಿರಿವಂತ ಪಟ್ಟ ಕಳೆದುಕೊಂಡ ಮುಕೇಶ್‌ ಅಂಬಾನಿ: ಮುಂಚೂಣಿಯಲ್ಲಿ ಜಾಕ್ ಮಾ

Last Updated 10 ಮಾರ್ಚ್ 2020, 7:19 IST
ಅಕ್ಷರ ಗಾತ್ರ

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆ ಹಾಗೂ ಷೇರು ಬೆಲೆ ಕುಸಿತದ ಪರಿಣಾಮ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಏಷ್ಯಾದ ಸಿರಿವಂತ ವ್ಯಕ್ತಿ ಸ್ಥಾನ ಕಳೆದು ಕೊಂಡಿದ್ದಾರೆ. ಚೀನಾದ ಅಲಿಬಾಬಾ ಗ್ರೂಪ್‌ನ ಸಂಸ್ಥಾಪಕ ಜಾಕ್‌ ಮಾ ಏಷ್ಯಾದ ಸಿರಿವಂತ ಸ್ಥಾನ ಪಡೆದಿದ್ದಾರೆ.

ಕೋವಿಡ್‌–19 ಭೀತಿಯಲ್ಲಿ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾದ ಕಾರಣ ಸೋಮವಾರ ರಿಲಯನ್ಸ್‌ ಸೇರಿದಂತೆ ಹಲವು ಬೃಹತ್‌ ಕಂಪನಿಗಳ ಷೇರುಗಳು ಕುಸಿತ ಕಂಡವು. ಒಂದೇ ದಿನದಲ್ಲಿ ಮುಕೇಶ್‌ ಅಂಬಾನಿ ಅವರ 5.8 ಬಿಲಿಯನ್‌ ಡಾಲರ್‌ (ಸುಮಾರು ₹42,855 ಕೋಟಿ) ಸಂಪತ್ತು ಕರಗಿದೆ. ಇದರಿಂದಾಗಿ ಅಂಬಾನಿ ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಇಳಿದಿರುವುದಾಗಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಏಷ್ಯಾದ ನಂ.1 ಸಿರಿವಂತ ಸ್ಥಾನದಿಂದ 2018ರಲ್ಲಿ ಕೆಳಗಿಳಿದಿದ್ದ ಅಲಿಬಾಬಾ ಗ್ರೂಪ್‌ ಹೋಲ್ಡಿಂಗ್‌ ಲಿಮಿಟೆಡ್‌ ಸಂಸ್ಥಾಪಕ ಜಾಕ್‌ ಮಾ, 44.5 ಬಿಲಿಯನ್‌ ಡಾಲರ್‌ (ಸುಮಾರು ₹3.29 ಲಕ್ಷ ಕೋಟಿ) ಸಂಪತ್ತಿನೊಂದಿಗೆ ಮತ್ತೆ ಮುಂಚೂಣಿ ತಲುಪಿದ್ದಾರೆ. ಅಂಬಾನಿ ಸಂಪತ್ತಿಗಿಂತ 2.6 ಬಿಲಿಯನ್‌ ಡಾಲರ್‌ ಅಧಿಕ ಸಂಪತ್ತು ಹೊಂದಿದ್ದಾರೆ.

ಸೌದಿ ಅರೇಬಿಯಾ ಮತ್ತು ರಷ್ಯಾ ನಡುವೆ ತೈಲ ದರ ಸಮರದಿಂದಾಗಿ 29 ವರ್ಷಗಳಲ್ಲೇ ಕಚ್ಚಾ ತೈಲ ದರ ಅತ್ಯಧಿಕ ಕುಸಿತ ಕಂಡಿದೆ. ಇದರೊಂದಿಗೆ ಕೋವಿಡ್‌–19 ಪರಿಣಾಮವಾಗಿ ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತೈಲ ಬೇಡಿಕೆ ಇಳಿಕೆಯಾಗಿದೆ. 2021ರ ವೇಳೆಗೆ ರಿಲಯನ್ಸ್ ಇಂಡಸ್ಟ್ರೀನ್‌ ಲಿಮಿಟೆಡ್‌ ಸಾಲದಿಂದ ಮುಕ್ತವಾಗುವ ಯೋಜನೆ ಸಾಧ್ಯವಾಗುವುದೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ರಿಲಯನ್ಸ್‌ ತನ್ನ ತೈಲ ಮತ್ತು ಪೆಟ್ರೋಕೆಮಿಕಲ್‌ ಉದ್ಯಮದ ಪಾಲುದಾರಿಕೆಯನ್ನು ಸೌದಿ ಅರೇಬಿಯನ್‌ ಆಯಿಲ್‌ ಕಂಪನಿಗೆ ಮಾರಾಟ ಮಾಡಲು ಈ ಹಿಂದೆಯೇ ಸಿದ್ಧತೆ ನಡೆಸಿದೆ.

ತಂತ್ರಜ್ಞಾನ ಆಧಾರಿತ ಸೇವೆಗಳನ್ನು ನೀಡುತ್ತಿರುವ ಅಲಿಬಾಬಾ ಉದ್ಯಮಕ್ಕೂ ಕೋವಿಡ್‌–19 ಪೆಟ್ಟು ನೀಡಿದೆ. ಆದರೆ, ಕ್ಲೌಡ್‌ ಕಂಪ್ಯೂಟಿಂಗ್ ಸೇವೆಗಳು ಹಾಗೂ ಮೊಬೈಲ್‌ ಆ್ಯಪ್‌ಗಳಿಗೆ ಬೇಡಿಕೆ ಹೆಚ್ಚಾದ ಕಾರಣ ನಷ್ಟದ ಪರಿಣಾಮ ಹೆಚ್ಚು ಬಾಧಿಸಿಲ್ಲ.

ಹಲವು ಉದ್ಯಮಗಳನ್ನು ಒಳಗೊಂಡಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಒಂದೇ ದಿನ ಸೋಮವಾರ ಶೇ 12ರಷ್ಟು ಕುಸಿದಿದೆ. ರಿಲಯನ್ಸ್‌ ಪಾಲಿಗೆ 2009ರಿಂದ ಅತಿ ದೊಡ್ಡ ಕುಸಿತವಾಗಿದೆ. 2020ರಲ್ಲಿ ರಿಲಯನ್ಸ್‌ ಷೇರು ಶೇ 26ರಷ್ಟು ಇಳಿಕೆಯಾದಂತಾಗಿದ್ದು, ಅಲಿಬಾಬಾ ಷೇರು ಈವರೆಗೆ ಶೇ 6.8ರಷ್ಟು ನಷ್ಟಕ್ಕೆ ಒಳಗಾಗಿದೆ.

ರಿಲಯನ್ಸ್‌ ಜಿಯೊ ಇನ್ಫೊಕಾಮ್‌ ಲಿಮಿಟೆಡ್‌ ಸ್ಥಾಪನೆಗಾಗಿ ಸುಮಾರು 50 ಬಿಲಿಯನ್‌ ಡಾಲರ್‌ ಖರ್ಚು ಮಾಡಿದೆ. 3 ವರ್ಷಗಳಲ್ಲಿ ಜಿಯೊ ದೇಶದ ನಂ.1 ವೈರ್‌ಲೆಸ್‌ ಕ್ಯಾರಿಯರ್‌ ಆಗಿ ಬೆಳವಣಿಗೆ ಕಂಡಿದೆ. ಮೊಬೈಲ್‌ ಉದ್ಯಮ ಉತ್ತಮಗೊಳುತ್ತಿದ್ದಂತೆ ಅಂಬಾನಿ ಇ–ಕಾಮರ್ಸ್‌ ಉದ್ಯಮ ಆರಂಭಿಸುವ ಯೋಜನೆ ಹೊರಹಾಕಿದ್ದರು.

ಅಮೆರಿಕದ ಡೌ ಜೋನ್ಸ್‌ ಇಂಡಸ್ಟ್ರಿಯಲ್‌ ಆವರೇಜ್‌ ಸಹ ಶೇ 7.5ರಷ್ಟು ಇಳಿಕೆಯಾಗಿದ್ದು, ಜಗತ್ತಿನ ಹಲವು ಕೋಟ್ಯಧಿಪತಿಗಳ ಸಂಪತ್ತು ಕರಗಿದೆ. ತೈಲ ಮತ್ತು ಅನಿಲ ಉದ್ಯಮ ಹೊಂದಿರುವ ಹರೋಲ್ಡ್‌ ಹ್ಯಾಮ್ಸ್‌ ಸಂಪತ್ತು ಅರ್ಧದಷ್ಟು ಕರಗುವ ಮೂಲಕ 2.4 ಬಿಲಿಯನ್‌ ಡಾಲರ್‌ಗೆ ಇಳಿದಿದೆ. ಇನ್ನೂ ಜೆಫ್‌ ಹೈಲ್ಡ್‌ಬ್ರ್ಯಾಂಡ್‌ 3 ಬಿಲಿಯನ್‌ ಡಾಲರ್‌ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT